ನೆನಪುಗಳು ಹಾಗೆ, ಮತ್ತೆ ಮತ್ತೆ
ಕಾಡುತ್ತಾ ಕೆಣಕುತ್ತಾ ತಿವಿಯುತ್ತ
ಸರಿದ ಕಾಲವನ್ನು ಹಿಂಬಾಲಿಸಿ
ಹೊಸ ಬದುಕಿಗೆ ಮುನ್ನುಡಿ ಬರೆಯುತ್ತವೆ.
ಹಳೆಯ ನೆನಪುಗಳ ಬೆನ್ನುಡಿ
ಹೊಸ ಬದುಕಿಗೆ ಮುನ್ನುಡಿಯಾಗಿ
ಕೆಲವೊಮ್ಮೆ ತಿದ್ದಲಾಗದ ಬರಹವಾಗಿ
ಮನದ ಯಾವುದೋ ದಿಕ್ಕಿನಲ್ಲಿ
ದಿಕ್ಕಾಪಾಲಾಗಿ ಚದುರಿ ಕಾಡುತ್ತವೆ.
ಒಂದಿಷ್ಟು ನೋವು ಒಂದಿಷ್ಟು ನಲಿವು
ಕೆಲವೊಮ್ಮೆ ಅಪರೂಪದ ಗೆಲುವು
ಬಹುಪಾಲು ಸೋಲು ಹೀಗೆ
ದ್ರೌಪದಿಯ ಸೀರೆಯಂತೆ
ಸೆಳದಷ್ಟು ಮತ್ತಷ್ಟು ಸೇರಿಕೊಂಡ
ನೆನಪಿನ ನೂಲುಗಳು.
ಹೊತ್ತು ಗೊತ್ತಿಲ್ಲದೇ ಮನವನಾವರಿಸಿ
ಬಿಟ್ಟು ಬಿಡದಂತೆ ಕಾಡುವ
ನೆನಪುಗಳ ಪುಟಗಳನ್ನೆಲ್ಲ
ಹಳೆ ಪುಸ್ತಕಗಳಂತೆ
ಮಾರುವ ಹಾಗೂ ಇಲ್ಲ.
ಏಕೆಂದರೆ ರದ್ದಿಯವ ಪುಸ್ತಕಗಳ
ಕಟ್ಟನ್ನು ತೂಗಿಯಾನು
ನೆನಪಿನ ಪುಟಗಳ ತೂಗಲಾರ
ಹಾಗೇನಾದರೂ ತೂಗಿದನೆನ್ನಿ
ತೂಗಿ ತೂಗಿ ದನಿವಾಗಿ
ನಿಮ್ಮ ರದ್ದಿಗೆ ನಾ ಬೆಲೆ ಕಟ್ಟಲಾರೆ
ಎಂದು ಹೇಳಿ ಮಾಯವಾದನು.
ಅನಿಸುತ್ತದೆ ಒಮ್ಮೊಮ್ಮೆ
ನೆನಪುಗಳನ್ನೆಲ್ಲ ಹರಿದು ಹಂಚಿ ಬಿಡಲೇ
ಆಗದು.... ಆಗದು.
ನನ್ನ ಬದುಕು ನಿಂತಿರುವುದೇ
ದಿನ, ವಾರ, ತಿಂಗಳು, ವರ್ಷಗಳ
ನೆನಪುಗಳ ಗಂಟಿನಲ್ಲಿ
ನನ್ನ ಧೀರ್ಘ ನಿಟ್ಟುಸಿರಿನಲ್ಲಿ
ನಿನ್ನೆಗಳ ನಾಳೆಗಳ ನಡುವೆ.
ಇಂದಿನ ಸೇತುವೆಯಲ್ಲಿ
ಹಳೆ ನೆನಪುಗಳ ಬೆನ್ನುಡಿ
ಹೊಸ ಬದುಕಿನ ಮುನ್ನುಡಿಯಲ್ಲಿ
- ಕು. ಜ್ಯೋತಿ ಆನಂದ ಚಂದುಕರ,
ಬಾಗಲಕೋಟ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ