ಕರ್ನಾಟಕದ ಅಲೆಮಾರಿ ಸಿಂಧೋಳು ಬುಡಕಟ್ಟು ಸಮುದಾಯದ ಮೇಲೆ ಮೊಟ್ಟ ಮೊದಲನೇ ಬಾರಿಗೆ ಸಂಶೋಧನೆ ಮಾಡಿದವರು ಡಾ. ದೊಡ್ಡಮನಿ ಲೋಕರಾಜ ಅವರು. ಇವರ ಸಂಶೋಧನಾ ಅಧ್ಯಯನದಿಂದ ಸಿಂದೋಳ ಸಮುದಾಯ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಇವರ ಪಾತ್ರ ದೊಡ್ಡದು. ಎಲೆಮರೆಯ ಕಾಯಿಯಂತೆ ಯಾವುದೇ ಪ್ರಚಾರವಿಲ್ಲದೆ ಬಸವಣ್ಣನವರ 'ಕಾಯಕವೇ ಕೈಲಾಸ' ದಂತೆ ಡಾ ಡಿ ಲೋಕರಾಜ ಅವರ ಸಂಶೋಧನೆ, ಅಧ್ಯಾಪನ , ಸಾಹಿತ್ಯ ಹಾಗೂ ಸಾಮಾಜಿಕ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿರುತ್ತಾರೆ . ಡಾ. ಡಿ. ಲೋಕರಾಜ ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದವರು. ತಂದೆ ದಿವಂಗತ ಜೆ.ಲಿಂಗಪ್ಪ, ತಾಯಿ ಬಿ. ಬಸಮ್ಮ. ತಂದೆ ಸರ್ಕಾರಿ ಪ್ರೌಢಶಾಲೆ ಗುಡೆಕೋಟೆಯಲ್ಲಿ ಜವಾನರ ವೃತ್ತಿಯಲ್ಲಿ ಇರುವಾಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿದರು. ಜವಾನರ ಮಗ ಉನ್ನತ ಶಿಕ್ಷಣ ಮತ್ತು ಹುದ್ದೆಯಲ್ಲಿ ಇರಬೇಕೆಂಬುವುದು ತಂದೆಯ ಮಹದಾಸೆ ಆಗಿದ್ದು , ತಂದೆ ಆಸೆಯಂತೆ ಡಾ. ಡಿ. ಲೋಕರಾಜ ಅವರು ಪದವಿ ಪೂರ್ವ ಶಿಕ್ಷಣ ಚಿಕ್ಕಜೋಗಿಹಳ್ಳಿಯಲ್ಲಿ, ಎಸ್ ಎ ವಿ ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೂಡ್ಲಿಗಿ ಪದವಿ ಶಿಕ್ಷಣ, ಗುಲ್ಬರ್ಗ ವಿಶ್ವವಿದ್ಯಾಲಯ, ಗುಲ್ಬರ್ಗ, ಸಮಾಜಶಾಸ್ತ್ರ ಸ್ನಾತಕೋತರ ಪದವಿ 2001ರಲ್ಲಿ ಪಡೆದುಕೊಂಡರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ. ಕೆ ಎಂ ಮೇತ್ರಿ ಅವರ ಮಾರ್ಗದರ್ಶನದಲ್ಲಿ ' ಬಳ್ಳಾರಿ ಜಿಲ್ಲೆಯ ದುರುಗ ಮುರುಗಿಯರು ಸಮಾಜಶಾಸ್ತ್ರೀಯ ಅಧ್ಯಯನ ' ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ 2002 ರಲ್ಲಿ ಮತ್ತು ಡಾ. ಕೆ ಎಂ ಮೇ ತ್ರಿ ಅವರ ಮಾರ್ಗದರ್ಶನದಲ್ಲಿ ' ಕರ್ನಾಟಕ ಸಿಂಧೂಳು ಸಮುದಾಯದ ಸಮಾಜಶಾಸ್ತ್ರೀಯ ಅಧ್ಯಯನ ' ಎಂಬ ವಿಷಯದಲ್ಲಿ ' ಡಾಕ್ಟರ್ ಆಫ್ ಫಿಲಾಸಫಿ ' ಪಿಎಚ್. ಡಿ ಪದವಿಯನ್ನು 2006ರಲ್ಲಿ ಪಡೆದುಕೊಂಡರು. ಅಂದು ಇವರ ತಂದೆ ಕಡಿಮೆ ಸಂಬಳದಲ್ಲಿ ಜೀವನ ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಅಂತಹ ಸಂದರ್ಭದಲ್ಲಿ ಗುಡೆಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದೊಳಗೆ ಗುಡಿಸಲು ಮನೆ ನಿರ್ಮಿಸಿಕೊಂಡಿದ್ದರು. ಈ ಹೈಸ್ಕೂಲಿನಲ್ಲಿ ಹಲವು ವರ್ಷಗಳ ಸೇವೆ ಪೂರೈಸಿಕೊಂಡು, ಚಿಕ್ಕ ಜೋಗಿಹಳ್ಳಿಗೆ ವರ್ಗಾವಣೆಯಾದರು. ತಮ್ಮ ಸ್ವಂತ ಊರು ಬಣವಿಕಲ್ಲು ಗ್ರಾಮದಲ್ಲಿ ಖಾಯಂ ವಾಸ ಮಾಡಿದರು. ಕಷ್ಟದ ಪರಿಸ್ಥಿತಿಯಲ್ಲಿ ಡಾ. ಡಿ ಲೋಕರಾಜ ಅವರು ಕೃಷಿ ಕೂಲಿ ಕೆಲಸ , ಕಟ್ಟಡ ಕೂಲಿ ಕೆಲಸ , ಇತರೆ ವೃತ್ತಿಗಳು ಮತ್ತು ಕೆಲವು ದಿನಗಳವರೆಗೆ ಬೆಂಗಳೂರಿಗೆ ದುಡಿಯುವುದಕ್ಕಾಗಿ ಹೋಗಿದ್ದರು. ಹೀಗೆ ಕೆಲಸಗಳನ್ನು ಮಾಡುತ್ತಾ ತಂದೆ - ತಾಯಿ ಅವರಿಗೆ ತಕ್ಕ ಮಗನಾಗಿದ್ದರು.
ಸಂಶೋಧನಾ ಅಧ್ಯಯನ ಹಿನ್ನೆಲೆ :
ಕರ್ನಾಟಕದಲ್ಲಿ ಅಲೆಮಾರಿ ಸಿಂದೊಳ್ಳು ಸಮುದಾಯದ ಪೋತರಾಜ ಇಲ್ಲವೇ ಪೂಜಾರಿ / ಆತನ ಹೆಂಡತಿ ದೇವರ ಪೆಟ್ಟಿಗೆ / ದೇವರ ಬುಟ್ಟಿ ಹೊತ್ತುಕೊಂಡು ಬಿಕ್ಷಾಟನೆಯನ್ನು ಮಾಡುವರು. ಜನರ ಮಧ್ಯೆ ಅಲಲಲ....ಹಾ.... ದುರಗಮ್ಮ.... ಎಂದು ಚಾವುಟಿನಿಂದ ಚಟ್... ಪಟಪಟನೆ ಮೈಗೆ ಹೊಡೆದುಕೊಳ್ಳುತ್ತಾ, ಉರುಮಿ ವಾದ್ಯ ಗತ್ತಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕೈಲಿ ಹಿಡಿದ ಚಾವಟಿಯನ್ನು ಎತ್ತಿ ತಿರುಗಿಸುತ್ತಾ , ಕೆಲವೊಮ್ಮೆ ಆ ಚಾವುಟಿ ಎರಡು ಕೈಯಿಂದ ಹಿಡಿದು ಸಂದರ್ಭನುಸಾರವಾಗಿ ನೃತ್ಯ ಮಾಡುವನು. ದೇವಿಯ ಗುಣಗಾನ ಮಾಡುವರು. ಹೀಗೆ ಪೋತರಾಜನು ಕೈಯಲ್ಲಿ ಹಿಡಿದ ತನ್ನ ಮೈಯಿಗೆ ಚಾವಟಿಯಿಂದ ಹೊಡೆದುಕೊಳ್ಳುತ್ತ, ಮುಂಗೈಯಲ್ಲಿ ಚಾಕುವಿನಿಂದ ರಕ್ತ ಸುರಿಸಿ ಕೊಳ್ಳುವನು. ಆತನ ಹೆಂಡತಿ ಉರುಮಿ ವಾದ್ಯ ಜಿರ್, ಬುರ..... ಶಬ್ದದೊಂದಿಗೆ ಬಾಲಬೇಲು..... ಎಂದು ರಾಗವಾಗಿ ಹಾಡುತ್ತಾಳೆ. ಅಲ್ಲಿನ ಜನರಿಂದ ಭಿಕ್ಷೆ ಪಡೆದುಕೊಳ್ಳುವರು. ಈ ಹಿಂದೆ ಸ್ಥಳೀಯರು ಸಿಂದೋಳ ಸಮುದಾಯವನ್ನು ದುರುಗಮುರುಗಿಯರು, ಬುರ್‌ಬುರ್ ಪೋಚಮ್ಮ, ಸುಂಕಲಮ್ಮನ ಆಡಿಸುವವರು. ಕೂಗಮ್ಮನ ಆಡಿಸುವವರು, ದುರ್ಗಮ್ಮನ ಆಡಿಸುವವರು, ಊರುಮಾರಿಯರು, ಬರ್‌ಮಾರಿಯರು, ಬೆಂಕಿ ಮಾರಿಯರು, ಪೂಜಾರಿ, ಪೋತರಾಜ ಹಾಗೂ ಇತ್ಯಾದಿ ಹೆಸರುಗಳಿಂದ ಕರೆಯಲಾಗಿತ್ತು. ಈ ಪದಗಳು ದೈವರಾದನೆ ಮತ್ತು ವೃತ್ತಿ ಸೂಚಕ ಪದಗಳಾಗಿವೆ. ಪಿಎಚ್.ಡಿ ಸಂಶೋಧನಾ ಅಧ್ಯಯನದಲ್ಲಿ ಸಂಶೋಧಕ ಡಾ. ದೊಡ್ಡಮನಿ ಲೋಕರಾಜ ಮತ್ತು ಡಾ. ಕೆ.ಎಂ. ಮೇತ್ರಿ ಅವರು ಮಾರ್ಗದರ್ಶನದಂತೆ ಸಿಂದೊಳ್ಳು ಸಮುದಾಯದ ಕುರಿತು ಕೆಲವೊಂದು ಅಂಶಗಳನ್ನು ಕಂಡುಹಿಡಿದರು. ಸಿಂದೊಳ್ಳು ಸಮುದಾಯ ಮೂಲತಃವಾಗಿ ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ. ಒಂದು ಕಾಲದಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಗಡಿ ಭಾಗಗಳ ಮೂಲಕ ಭಿಕ್ಷಾಟನೆ ಮಾಡುತ್ತಾ ಕರ್ನಾಟಕದಲ್ಲಿ ಖಾಯಂ ವಾಸ ಮಾಡತೊಡಗಿದರು. ಇವರ ಮಾತೃಭಾಷೆ ತೆಲುಗು ಆಗಿರುವುದರಿಂದ ಹೆಚ್ಚಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಈ ಸಮುದಾಯವನ್ನು “ಸಿಂದೊಳ್ಳರು" ಅಂತಲೂ ಕರೆಯಲಾಗುತ್ತದೆ. ಇವರ ಆಚರಣೆ ಪದ್ಧತಿಗಳು ಕರ್ನಾಟಕದಲ್ಲಿರುವ ಅಲೆಮಾರಿ ಸಿಂಧೋಳ್ಳು ಸಮುದಾಯದಲ್ಲಿ ಒಂದೇ ರೀತಿಯಲ್ಲಿ ಕಂಡು ಬಂದಿರುವುದರಿಂದ ಕರ್ನಾಟಕದಲ್ಲಿ "ಅಲೆಮಾರಿ ಸಿಂಧೋಳ್ಳು ಸಮುದಾಯ" ಎಂದು ಗುರುತಿಸಲಾಯಿತು. ಮುಂದೆ ಸಂಶೋಧನಾ ಅಧ್ಯಯನ ಬೆಳಕಿಗೆ ಬಂದಿತ್ತು. ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸಿಂದೊಳ್ಳು ಸಮುದಾಯವು ಪರಿಶಿಷ್ಟ ಜಾತಿಯ ಮೀಸಲಾತಿಯ ಪಟ್ಟಿಯಲ್ಲಿದೆ. ಸಂಶೋಧನಾ ಅಧ್ಯಯನದಿಂದ 2006ರಲ್ಲಿ ಬಳ್ಳಾರಿ ನಗರದ ಗುಡಾರ ನಗರದಲ್ಲಿ ಅಲೆಮಾರಿ ಸಿಂಧೋಳ್ಳು ಸಮುದಾಯ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು. ನಂತರ ಹಲವು ಜಿಲ್ಲೆಗಳಲ್ಲಿ ಪಡೆದುಕೊಂಡಿದ್ದಾರೆ.
ಪ್ರಕಟಿತ ಕೃತಿಗಳು ಮತ್ತು ಇತರೆ
ಡಾ. ಡಿ. ಲೋಕರಾಜ ಅವರು ರಚಿಸಿರುವ ಕೃತಿಗಳಲ್ಲಿ ಅಲೆಮಾರಿ ಸಮುದಾಯಗಳ ಅಧ್ಯಯನ ಮಾಲೆಯ "ಸಿಂಧೋಳು" ಎಂಬ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಪ್ರಕಟಿಸಿದೆ, ಸಿಂಧೋಳು ಸಮುದಾಯ ಸಮಾಜಶಾಸ್ತ್ರೀಯ ಅಧ್ಯಯನ ( ಆ ಪ್ರಕಟಿತ ಪಿಎಚ್. ಡಿ ಮಹಾಪ್ರಬಂಧ) ಬಣವಿ ಕಲ್ಲು ಮರಿಯಪ್ಪ ಜೀವನ ಕಥನ ( ಲೇಖಕರ ಅಜ್ಜನವರ ಕುರಿತು ) ಜಗಳೂರು ಸಿರಿ ವಾರ್ಷಿಕ ಸಂಚಿಕೆ (ಸಂಪಾದಕತ್ವ ) ಟೆಂಟು ಹಾಡಿತು ಲಾಲಿ ಹಾಡು ಎಂಬ ಕವನ ಸಂಕಲನ. ರಚಿಸಿದ್ದಾರೆ. ದಲಿತ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಲೇಖನಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಣೆಗೊಂಡಿವೆ. 2017 ಮತ್ತು 18ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ' ಕರ್ನಾಟಕ ತೊಗಲು ಗೊಂಬೆಗಳ ರಚನೆ ಮತ್ತು ಗೊಂಬೆಗಳ ವೈವಿಧ್ಯತೆ ' ಕುರಿತು ಸಂಶೋಧನಾ ಫೆಲೋಶಿಪ್ ಮಾಡಿರುವರು. ಬಿಡುವಿನ ವೇಳೆಯಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವರು. ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ , ಅಭಿವೃದ್ಧಿ ಅಧ್ಯಯನ ವಿಭಾಗ ಇವರ ಬಾಹ್ಯ ಪಿ ಎಚ್. ಡಿ ಮಾರ್ಗದರ್ಶನದಲ್ಲಿ 3 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್. ಡಿ ಪದವಿ ಪಡೆದುಕೊಂಡಿದ್ದಾರೆ. ಇನ್ನು ಸಮಾಜಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ನಿಕಾಯದಲ್ಲಿ ನಡೆಯುವ 70ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
ಸಂಘಟನೆ ಮತ್ತು ಸಮಾಜ ಸೇವೆ :
ಎಂ.ಫಿಲ್ ಮತ್ತು ಪಿಎಚ್. ಡಿ ಸಂಶೋಧನಾ ಅಧ್ಯಯನದಲ್ಲಿ ಡಾ ಡಿ. ಲೋಕರಾಜ ಅವರು " ಬಳ್ಳಾರಿ ಜಿಲ್ಲೆ ಗುಡಾರ- ಗುಡಿಸಲು ನಿವಾಸಿಗಳ ಕಲ್ಯಾಣ ಸಂಘ, ಕರ್ನಾಟಕ ಅಲೆಮಾರಿ, ಅರೆ-ಅಲೆಮಾರಿ ಗಳ ಒಕ್ಕೂಟ ಮತ್ತು ಸಿಂಧೂಳು ಸಮಾಜ ಕಲ್ಯಾಣ ಸಂಘ ರಚನೆಯಲ್ಲಿ ಇವರ ಮಹತ್ತರ ಪಾತ್ರವನ್ನು ಹೊಂದಿದೆ. ಇದರಲ್ಲಿ ಡಾ ಕೆ ಎಂ ಮೇತ್ರಿ ಅವರ ಮಾರ್ಗದರ್ಶನದಲ್ಲಿ ಶ್ರೀ ಜಿ ಮಾಧವರಾವ್, ದಿ. ಭಾಸ್ಕರ್ ದಾಸ್ ಎಕ್ಕಾರು, ಎಚ್ ಪಿ. ಶಿಕಾರಿ ರಾಮು, ಡಾ. ಡಿ ಲೋಕರಾಜ, ರಾಹುಲ್ ನಾಗಪ್ಪ ಮತ್ತು ಇತರೆ ಅಲೆಮಾರಿ ಸಮುದಾಯಗಳ ಮುಖಂಡರು ವಿವಿಧ ಸಂಘಟನೆಗಳ ರಚನೆಯಲ್ಲಿ ಭಾಗವಹಿಸಿದ್ದರು . ಬಳ್ಳಾರಿ ಜಿಲ್ಲೆಯ ಅಲೆಮಾರಿ ಸಮುದಾಯಗಳಿಗೆ ಸೂರು ಸಿಗಲು ಸರ್ಕಾರಕ್ಕೆ ಅನೇಕ ಮನವಿ ಪತ್ರಗಳನ್ನು ನೀಡಿದ್ದಾರೆ. ಡಾ ಡಿ ಲೋಕರಾಜ ಅವರು ಅಲೆಮಾರಿ ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳು, ಸಭೆ- ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ನಿವೇಶನ ಮತ್ತು ಆಶ್ರಯ ಮನೆ ಸೌಲಭ್ಯಕ್ಕಾಗಿ ಕೆಲವೊಮ್ಮೆ ಜಾತಾ ಮೂಲಕ ಮನವಿ ಪತ್ರ ನೀಡಿರುವರು. 2011 ರಿಂದ ಪ್ರಸ್ತುತ ವರೆಗೆ ಅಲೆಮಾರಿ ಸಿಂದೋಳು, ದಲಿತ ಹಾಗೂ ಇತರೆ ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಸೌಲಭ್ಯಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೂರಾರು ಮನವಿ ಪತ್ರಗಳನ್ನು ನೀಡಿದ್ದಾರೆ.
ಡಾ. ಡಿ ಲೋಕರಾಜ ಅವರು ಸಮಾಜಶಾಸ್ತ್ರದ ಅರೆಕಾಲಿಕ ಮತ್ತು ಅತಿಥಿ ಉಪನ್ಯಾಸಕರಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಸೇವೆ ಆರಂಭಿಸಿದರು. ಬಾಗಲಕೋಟೆ ಜಿಲ್ಲೆ ಹುನಗುಂದ ವಿ ಎಮ್ ಎಸ್ ಆರ್ ವಸ್ತ್ರದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಗಳೂರಿನ ಸಹಾಯಕ / ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮರಿಯಮ್ಮನಹಳ್ಳಿ ಯಲ್ಲಿ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವೆ ಮಾಡಿದ ಕಾಲೇಜುಗಳಲ್ಲಿ ಅಚ್ಚುಮೆಚ್ಚಿನ ' ಅಧ್ಯಾಪಕರು ' ಸದಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಬದುಕಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರು ಸೇವೆ ಮಾಡಿರುವ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ ಹಾಗೂ ವಿವಿಧ ಸಮಿತಿಗಳಿಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳ ಸಂಘಟಕರಾಗಿ ಕಾರ್ಯನಿರ್ವಹಣೆ ಮಾಡಿರುವುದು ವಿಶೇಷ. ಇವರ ಅಧ್ಯಯನ, ಸಂಶೋಧನೆ, ಸಾಹಿತ್ಯ ಮತ್ತು ಸಾಮಾಜಿಕ ಸೇವೆ ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ ಅಭಿನಂದನಾ ಪ್ರಶಸ್ತಿ, ತಾಲೂಕು ಮಟ್ಟದ ಡಾ. ಬಿ ಆರ್ ಅಂಬೇಡ್ಕರ್ ಪ್ರಶಸ್ತಿ ( ಕೂಡ್ಲಿಗಿ ಮತ್ತು ಮೊಳಕಾಲ್ಮೂರು ) ಅಲೆಮಾರಿ ಸಿರಿ, ಸಿಂಧೂಳ ಸಿರಿ, ಕರುನಾಡ ಕಣ್ಮಣಿ, ಕವಿರತ್ನ, ಸಿದ್ದಗಂಗಾ ಸೇವ ರತ್ನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹೀಗೆ ಅನೇಕ ಸಂಘ- ಸಂಸ್ಥೆಗಳು ಕೂಡ ಶ್ರೀಯುತರಿಗೆ ಪುರಸ್ಕರಿಸಿ ಸನ್ಮಾನಿಸಿರುವರು.
ಮಾಹಿತಿ ಸಂಗ್ರಹ ಮತ್ತು ರಚನೆ:
ಸಾಹಿತಿಗಳು ಹಾಗೂ ಕಾದಂಬರಿಕಾರರು , ಸಂಸ್ಥಾಪಕರು,
ತನುಶ್ರೀ ಪ್ರಕಾಶನ ಸೂಲೇನಹಳ್ಳಿ
ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ (ರಿ) ಚಿತ್ರದುರ್ಗ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ