ಗುರುವಾರ, ಆಗಸ್ಟ್ 8, 2024

ಕವಿತೆ ಹುಟ್ಟುವುದಿಲ್ಲ...

ಕವಿತೆ ಹುಟ್ಟುವುದಿಲ್ಲ

ಯಾರನ್ನಾದರು ಪ್ರೀತಿಸದಿದ್ದರೆ.
ವಿರಹ ವೇದನೆಯಲ್ಲಿ ಬೇಯದಿದ್ದರೆ.
ಮೋಹ, ಕಾಮಗಳಲ್ಲಿ ತೊಳಲದಿದ್ದರೆ
ಕವಿತೆ ಹುಟ್ಟುವುದಿಲ್ಲ.

ರೂಢಿಗತ ಹಾದಿಬಿಟ್ಟು
ಹೊಸಹಾದಿ ಹುಡುಕದಿದ್ದರೆ.
ನಿರ್ಲಿಪ್ತತೆಯಿಂದ ಜಾರಿ
ಏರಿಳಿತಗಳಲ್ಲಿ ಹಾರದಿದ್ದರೆ
ಕವಿತೆ ಹುಟ್ಟುವುದಿಲ್ಲ

ವೇದಿಕೆಯ ಮುಂದಣ ರಸಗಳಿಗೆಯಲ್ಲಿ
ಪರದೆ ಹಿಂದಿನ ಬಿಕ್ಕ ಅರಿಯದಿದ್ದರೆ
ಮಾತಿನ ಗದ್ದಲದಲ್ಲಿ
ಮೌನದ ಕೂಗ ತಿಳಿಯದಿದ್ದರೆ
ಕವಿತೆ ಹುಟ್ಟುವುದಿಲ್ಲ.

ಹೂವಿನ ಪರಿಮಳ ಸವಿಯುವಾಗ
ಗೊಬ್ಬರದ ವಾಸನೆಗೆ ಮೂಗ ಮೀಸಲಿಡದಿದ್ದರೆ
ನಾಡೆಲ್ಲ ನಡಬಗ್ಗಿಸಿ ಪರಾಕುಪಂಪನೊತ್ತುವಾಗ
ಚೂರಾದರು ತಲೆ ಎತ್ತದಿದ್ದರೆ
ಕವಿತೆ ಹುಟ್ಟುವುದಿಲ್ಲ

ತಪ್ಪೋಳಗಿನ ಸರಿಯ
ಸರಿಯೋಳಗಿನ ತಪ್ಪ
ಕಾಣ್ವ ಕಣ್ಣ ಹೊಂದದಿದ್ದರೆ 
ರೇಗನ್ನು ರಾಗವಾಗಿಸುವ
ಅಂಟಿದ ಕಲೆಗಳನ್ನೆ ಕಲೆಯಾಗಿಸುವ
ಕಸುಬು ಬಾರದಿದ್ದರೆ
ಕವಿತೆ ಹುಟ್ಟುವುದಿಲ್ಲ...

~ ಗೌತಮ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮಗಾಗಿ ದುಡಿದ ನಾಯಕ ನಮ್ಮ ಜನಕ...

ನಮಗಾಗಿ ದುಡಿದ ನಾಯಕ ನಮ್ಮ ಜನಕ. ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಈ ಬದುಕು. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯವ...