ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭೌತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ||"
"ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ | ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||"
ಧರ್ಮವು ಅವನತಿ ಹೊಂದಿದಾಗ , ಅಧರ್ಮವು ಉತ್ತುಂಗಕ್ಕೇರಿದಾಗ , ನಾನು ನನ್ನನ್ನು ದೇಹವನ್ನಾಗಿ ಮಾಡಿಕೊಳ್ಳುತ್ತೇನೆ. ಸಜ್ಜನರ ರಕ್ಷಣೆಗಾಗಿ, ದುಷ್ಟರನ್ನು ನಿರ್ಮೂಲನೆ ಮಾಡಲು ಮತ್ತು ಧರ್ಮವನ್ನು ಸ್ಥಿರವಾಗಿ ಸ್ಥಾಪಿಸಲು, ನಾನು ಯುಗಯುಗಾಂತರಗಳಲ್ಲಿಯೂ ಪ್ರಕಟಗೊಳ್ಳುತ್ತೇನೆಂದು.
ಎಲ್ಲಿ ಮರೆಯಾಗಿರುವೆ ದೇವ ಧರೆಯು ಅಧರ್ಮದ ಅಟ್ಟಹಾಸಕ್ಕೆ ನಲುಗುತ್ತಿದೆ ನಿನಗೆ ಕೇಳದಾಗಿದೆಯೇ ? ಕಾಣಿಸದಾಗಿದೆಯೇ ?
ಸುಜನತೆಯ ಪಾಡು, ನರಕ ಸದೃಶ್ಯವಾಗಿದೆ ದುರ್ಮಾರ್ಗಿ, ದುರ್ಗುಣದ ದುರ್ಮುಖಿಗಳ ದುರ್ವಿಚಾರಗಳು,ಎಲ್ಲರನ್ನು ಆಪೋಶನ ತಗೆದುಕೊಳ್ಳುತ್ತಿವೆ. ಮೋಸ, ವಂಚನೆ, ಅನ್ಯಾಯ, ಅತ್ಯಾಚಾರ ವಿಜೃಂಭಿಸುತ್ತಿವೆ. ಭ್ರಷ್ಟ ರಾಜಕಾರಣಿಗಳ ಪ್ರಬಲ ಅಸ್ತ್ರವಾದ, ಜಾತಿ, ಮತದವೆಂಬ ವಿಷಾನಿಲವು
ಮನುಕುಲವನ್ನೇ ಸರ್ವನಾಶ ಮಾಡುವ ಹಂತಕ್ಕೆ ತಂದು ನಿಲ್ಲಿಸುತ್ತಿದೆ. ನಿನ್ನ ಆಗಮನದ ಹೊರತು ಅದ್ಯಾರಿಂದಲೂ ಈ ಜಗವನ್ನು ಸದ್ಧರ್ಮದೆಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ ದೇವ, ಶೀಘ್ರದಿ ಅವತರಿಸಿ ಆಗಮಿಸು, ಮತ್ತೆ ಭೂದೇವಿ ನಿನಗಾಗಿ ಕಾದಿಹಳು.
ದ್ವಾಪರ ಯುಗದಿ ಶ್ರೀಕೃಷ್ಣನ ಜನನ
ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಮುಂತಾದ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಶ್ರೀ ಕೃಷ್ಣನ ಜನನವನ್ನು ಆಚರಿಸುವ ಹಬ್ಬವು ಹಿಂದೂಗಳ ಪ್ರಮುಖ ಹಬ್ಬವಾಗಿದೆ. ಶ್ರಾವಣ ಮಾಸದ ನೂಲು ಹುಣ್ಣಿಮೆಯ ನಂತರ ಎಂಟನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.ಮೊದಲ ದಿನವನ್ನು ಕೃಷ್ಣಾಷ್ಟಮಿ ಕರೆದರೆ ಎರಡನೇ ದಿನವನ್ನು ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ. ಶ್ರೀಕೃಷ್ಣನನ್ನು ವಿಷ್ಣುವಿನ ಎಂಟನೇ ಅವತಾರ ಎಂದು ಪೂಜಿಸಲಾಗುತ್ತದೆ
ಪ್ರಪಂಚದಾದ್ಯಂತದ ಇರುವ ಎಲ್ಲಾ ಹಿಂದೂಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾಗಿ ಪೂಜಿಸಲ್ಪಡುವ ದೇವತೆಗಳಲ್ಲಿ ಶ್ರೀಕೃಷ್ಣ ಪ್ರಥಮನು.
ಸುಮಾರು ನಾಲ್ಕು ಸಾವಿರದ ಚಿಲ್ಲರೆ ವರ್ಷಗಳ ಹಿಂದೆ ದ್ವಾಪರ ಯುಗದಿ ಜಗದ ತುಂಬೆಲ್ಲ ಅಂಧಕಾರ ಆವರಿಸಿದ ಸಮಯದಲ್ಲಿ, ಜನರು ಸಮಾಜ ವಿರೋಧಿ ಶಕ್ತಿಗಳು ಪ್ರತಿಪಾದಿಸುವ ದುಷ್ಟತನ, ನೋವು,, ಕ್ರೌರ್ಯ ಮತ್ತು ದುಃಖಗಳಿಂದ ಮುಕ್ತರಾಗುವಂತೆ ಸರ್ವಶಕ್ತನನ್ನು ಪ್ರಾರ್ಥಿಸಿದರು. ಪ್ರಾರ್ಥನೆಗಳು ಮತ್ತು ಪವಿತ್ರ ಚಟುವಟಿಕೆಗಳು ಭೂಮಿಯ ಮೇಲಿನ ದೈವಿಕ ಜೀವನದ ಅವತಾರಕ್ಕೆ ಕಾರಣವಾಯಿತು, ಅದು ಮಥುರಾದ ಜೈಲಿನಲ್ಲಿ ವಾಸುದೇವ -ದೇವಕಿ ದಂಪತಿಗೆ ಭಗವಾನ್ ಶ್ರೀ ಕೃಷ್ಣನು 'ರೋಹಿಣಿ' ನಕ್ಷತ್ರದ (ನಕ್ಷತ್ರ) ಬುಧವಾರ ದಂದು ಜನಿಸಿದನು. ದಂತಕಥೆಯ ಪ್ರಕಾರ, ಶ್ರೀ ಕೃಷ್ಣನು ತನ್ನ ಮಾವ ಕಂಸನ ಆಳ್ವಿಕೆ ಮತ್ತು ದೌರ್ಜನ್ಯಗಳನ್ನು ಕೊನೆಗೊಳಿಸಲು, ಜಗದ ಅಂಧಕಾರ ಅಳಿಸಲು ಕತ್ತಲೆಯ ತುಂಬಿದ ಬಿರುಗಾಳಿ ರಾತ್ರಿಯಲಿ ಜನಿಸಿದನು.ಹುಟ್ಟಿದ ದಿನವೇ, ಅವನು ತನ್ನ ಮಹಾಶಕ್ತಿಯನ್ನು ಬಳಸಿಕೊಂಡು ಜೈಲಿನ ಬಾಗಿಲುಗಳನ್ನು ತೆರೆದನು, ವಾಸುದೇವನನ್ನು (ಅವನ ತಂದೆ) ಜೈಲಿನಿಂದ ಹೊರಗೆ ಕರೆದೊಯ್ಯಲು ಪ್ರೋತ್ಸಾಹಿಸಿದನು, ಉಕ್ಕಿ ಹರಿಯುವ ಯಮುನಾ ನದಿಯನ್ನು ದಾಟಿ ಗೋಕುಲದಲ್ಲಿರುವ ನಂದಬಾಬಾ ಅವರ ಮನೆಗೆ ಸುರಕ್ಷಿತವಾಗಿ ತಲುಪಿದನು ಶಿಶುವಿದ್ದಾಗಲೇ, ಅನಂತ ಲೀಲೆಗಳನ್ನು ತೋರಿದನು ಜನರು ಪುಟ್ಟ ಕೃಷ್ಣನಿಗೆ ಯಶೋದಾನಂದನ್ ಗೋಪಾಲ,ಮುಕುಂದ, ಮುರಾರಿ, ಇತ್ಯಾದಿ ಪ್ರೀತಿಯ ಹೆಸರುಗಳನಿಟ್ಟು ಪ್ರೀತಿಯಿಂದ ಕರೆಯುತಿದ್ದರು. ಶ್ರೀಕೃಷ್ಣ ನು ತುಂಟಾಟವಾಡುತ್ತಲೇ ಹಲವಾರು ರಕ್ಕಸರನ್ನು ಸಂಹರಿಸಿದನು,ಬೆಣ್ಣೆ ಕದ್ದನು, ಗೋಪಿಕೆಯರ ಸೀರೆಯನ್ನು ಕದ್ದನು, ರಾಧೆಯ ಮನವನು ಗೆದ್ದನು, ಬೆಳೆದು ಮಾವ ಕಂಸನನ್ನೂ ಮರ್ದಿಸಿ ರಾಜ ಕೃಷ್ಣನಾದನು, ರುಕ್ಮಿಣಿಯು ಸೇರಿ ಅಷ್ಟ ಸತಿಯರ ಪತಿಯಾದನು, ಗೋಕುಲದಿಂದ ಮಥುರೆಗೆ ಸ್ಥಳಾಂತರಗೊಂಡನು.ಆದರೆ ದುರುಳ ಜರಾಸಂಧನ ನಿರಂತರ ಉಪಟಳಕ್ಕೆ ಬೇಸತ್ತು ಜನಹಿತಕ್ಕಾಗಿ ದ್ವಾರಕೆಗೆ ಸ್ಥಳಾಂತರಗೊಂಡನು ದ್ವಾರಕಾ ನಗರವು ಚಿನ್ನದಿಂದ ನಿರ್ಮಿಸಲ್ಪಟ್ಟ ನಗರವಾಗಿದ್ದು, ಕೃಷ್ಣನು ಸ್ವರ್ಗೀಯ ನಿವಾಸಕ್ಕೆ ತೆರಳಿದ ನಂತರ ವರ್ಷಗಳಲ್ಲಿ ಸಮುದ್ರದ ಕೆಳಗೆ ಮುಳುಗಿಹೋಯಿತು ಎಂದು ಹೇಳಲಾಗುತ್ತದೆ. ಶ್ರೀಕೃಷ್ಣನ ಹುಟ್ಟಿನಿಂದ ಮರಣದವರೆಗಿನ ಪ್ರಯಾಣವು 100 ವರ್ಷಗಳಿಗಿಂತ ಸ್ವಲ್ಪ ಹೆಚ್ಚು ಕಾಲ ನಡೆಯುತ್ತದೆ. ಕೌರವರ ವಿರುದ್ಧದ ಪ್ರಸಿದ್ಧ ಮಹಾಭಾರತ ಯುದ್ಧದಲ್ಲಿ ಅವರು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದನು ಆದ್ರೆ ಒಬ್ಬ ದುಷ್ಟ ಮಗನಿಂದ (ಸಾಂಬ ) ಶ್ರೀ ಕೃಷ್ಣ ಹತಾಶೆಗೊಳಗಾದನು ಧರ್ಮ ಸಂಸ್ಥಾಪಕನೆ ಅನೇಕ ಅಧರ್ಮಗಳನ್ನ ಕಣ್ಣಾರೆ ನೋಡಬೇಕಾದ ಪರಸ್ಥಿತಿ ಸಿಲುಕಿದನು. ಅದಕ್ಕೆ ಹೇಳುವದಲ್ಲವೇ ವಿಧಿಯಾಟದ ಮುಂದೆ ಯಾರ ಆಟವು ನಡೆಯುವದಿಲ್ಲವೆಂದು ಅದು ದೈವವಾದ್ರೂ ಸರಿ, ಮನುಜನಾದ್ರು ಸರಿ ವಿಧಿಯಾಟಕ್ಕೆ ತಲೆಬಾಗಲೇ ಬೇಕು ದುಷ್ಟ ಸಾಂಬನ ಬಗ್ಗೆ ಹೇಳಲು ಈ ಲೇಖನ ಯಾವಕಡೆಗು ಸಾಲುವದಿಲ್ಲ, ಅವನ ಬಗ್ಗೆ ಬೃಹತ್ ಗ್ರಂಥವೇ ಬರೆಯಬಹುದು, ಆದ್ರೆ ಒಂದು ಮಾತಂತೂ ಸತ್ಯ, ಸಾಂಬನಂತ ಮಗ ಹುಟ್ಟಿದರೆ ವಿನಾಶ ಕಟ್ಟಿಟ್ಟ ಬತ್ತಿ. ಯದುಕುಲದ ಸರ್ವನಾಶಕ್ಕೆ ಕಾರಣನಾದ,
ಇಂತಾ ಮಗ ಯಾರಿಗೂ ಹುಟ್ಟದಿರಲಿ. ಕೃಷ್ಣವತಾರದ ಅಂತ್ಯದಿ ಮತ್ತೆ ಆರಂಭವಾದ ಅಧರ್ಮದ ಉತ್ಪತ್ತಿ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಧರೆಯಲ್ಲಿ ಮತ್ತೆ ಸದ್ಧರ್ಮ ಸ್ಥಾಪಿಸಲು ಶ್ರೀ ನಾರಾಯಣ ಅವತಾರವಾಗಲೇ ಬೇಕಿದೆ ಅಲ್ಲವೇ.
ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ.
ಮೊ 9740499814
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ