ಭಾನುವಾರ, ಜುಲೈ 18, 2021

ಆತ್ಮಧ್ಯಾನದ ನಾದಕ್ಕೊಂದು ನಲ್ನುಡಿ (ಪುಸ್ತಕ ವಿಮರ್ಶೆ) - ಶ್ರೀ ಸಿದ್ಧರಾಮ ಹೊನ್ಕಲ್.

ಆತ್ಮಧ್ಯಾನದ ನಾದಕ್ಕೊಂದು ನಲ್ನುಡಿ

      *ಹೈ.ತೋ*   ಎಂದು ನಾಡಿನಾದ್ಯಂತ ಪರಿಚಿತವಾಗಿ  ಹಲವಾರು ಸೃಜನಶೀಲ ಮನಸ್ಸಿನಲ್ಲಿ ನವಿರಾದ, ಅಷ್ಟೇ ಒಂದು ಗೌರವದ ಸ್ಥಾನ ಪಡೆದ ಅಬ್ದುಲ್ ಹೈ ತೋರಣಗಲ್ಲು ಅವರು *ಆತ್ಮಧ್ಯಾನದ ನಾದ* ಎಂಬ ಗಜಲ್ ಸಂಕಲನಕ್ಕೆ ನಾಲ್ಕು ಆಶಯದ ನುಡಿ ಬರೆದು ಕೊಡಿ ಎಂದು ಫೋನಾಯಿಸಿದಾಗ ಒಂದೇ ಮಾತಿನಲ್ಲಿ ಆಯಿತು ಹೈ.ತೋ ಜೀ ಎಂದೆ.ಇಡೀ ಗಜಲ್ ಲೋಕದ ಯುವ ಲೇಖಕ/ಲೇಖಕಿಯರಿಗೆಲ್ಲ ಸದಾ ಬೆನ್ನುತಟ್ಟಿ ಬರೆಯಿಸಿ ನೂರಾರು ಪ್ರತಿಭೆಗಳು ಅರಳಲು ಕಾರಣರಾದ‌ ನಿಮಗೆ ಬರೆಯದಿರಲುಂಟೆ !!? ಎಂದು ನಗುತ್ತಾ ಹೇಳಿದೆ.

ಕಾವ್ಯಮನೆ ಪ್ರಕಾಶನ,ಕಾವ್ಯಮನೆ ವಾಟ್ಸಾಪ್ ಗ್ರೂಪ್, ಗಜಲ್ ನಾದಲೋಕ,ಗಜಲ್ ಸಂಭ್ರಮ,ಗಜಲ್ ತೊರೆ, ಒಲಿದಂತೆ ಹಾಡುವಾ... ಹೀಗೆ ಅನೇಕ ಗಜಲ್ ಗುಂಪುಗಳಲ್ಲಿ ಹೈ.ತೋ ರವರು ಇದ್ದಾರೆಂದರೆ ಅಲ್ಲೆಲ್ಲಾ ಇವರೇ ಕಲಿಕೆಯ ಹಾದಿಗೆ ಮೇಷ್ಟ್ರು.ಇಂದಿನ ಯುವ ತಲೆಮಾರಿನ ಅನೇಕ ಕವಿಗಳು ಗಜಲ್ ಪ್ರಕಾರದ ಕಡೆಗೆ ಹೊರಳಿದ್ದಾರೆಂದರೆ ಅವರಿಗೆಲ್ಲ ದಾರಿತೋರಿ, ಕೈ ಹಿಡಿದು ಎತ್ತಿ ನಿಲ್ಲಿಸಿ,ತಿದ್ದಿ ತೀಡಿ, ಬೆನ್ನುತಟ್ಟಿ  ಎಲ್ಲ ರೀತಿಯ ಮಾರ್ಗ ದರ್ಶನ ಮಾಡುತ್ತಿರುವ ಇವರು ಎಲ್ಲರ ಪಾಲಿಗೆ ಒಂದು ಗುರುವಲ್ಲದ ಗುರುವಾಗಿದ್ದಾರೆ.  *ಅಕ್ಷರ ಮಾತ್ರ ಕಲಿಸಿದಾತ ಗುರು* ಅನ್ನೋದಾದರೇ ಇವರು ನೂರಾರು ಗಜಲ್ ಲೇಖಕರ ಪಾಲಿಗೆ ನಿಜದ ಗುರುವಾಗಿರುವುದು ಅತಿಶಯೋಕ್ತಿಯಲ್ಲ. ಇದು ಖಂಡಿತವಾಗಿ ಉತ್ಪ್ರೇಕ್ಷೆಯಲ್ಲ. ಎಲ್ಲರೂ ಒಪ್ಪುವ ಮಾತು ಅಂದುಕೊಂಡಿದ್ದೇನೆ.ಇಂತಹ ಈ ಹೈ ತೋ ರವರು ನನಗೆ ಗುರುಗಳೇ ಅಂತ ಆಗಾಗ ಸಂಭೋದಿಸಿದಾಗ ಒಳಗೊಳಗೆ ಮುಜುಗರವಾಗುವುದು ದಿಟ. ಅಯ್ಯೋ ! ಹೈ.ತೋ ಜೀ...., ನಾನು ಕೂಡ ಯುವಕರಿಗೆ ಬೆನ್ನುತಟ್ಟೋ ಕೆಲಸ  ಮಾಡೋದುಂಟು. ಆದರೆ ನಿಮಗೆ ನೀವೇ ಸಾಟಿ ಅಂತ  ಹೈ.ತೋ ರವರಿಗೆ ಆಗಾಗ ಹೇಳುತ್ತಾ ಇದ್ದದ್ದು ಸತ್ಯ.ಅವರು ನನಗೆ ಕೋಡೋ ಗೌರವಕ್ಕೆ ನಾ ಸದಾ ಋಣಿ.ಇಷ್ಟು ಅವರ ಬಗ್ಗೆ ಹೇಳದೇ ಹೋದರೆ ನನಗೆ ಪಾಪಪ್ರಜ್ಞೆ ಕಾಡದೇ ಇರದು.

ಇಂತಹ ಇವರು ಕಾವ್ಯ,ಕಥೆ, ವಿಮರ್ಶೆ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡು ಒಂದಷ್ಟು ಮಹತ್ವದ ಕೃತಿಗಳನ್ನು ಹೊರ ತಂದಿದ್ದಾರೆ.ತಮ್ಮ ಅನೇಕ ವಿಚಾರಗಳನ್ನು ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಬರೆಯುವ ಮೂಲಕ ಜನಮಾನಸಕ್ಕೆ ತಲುಪಿದ್ದಾರೆ.ಹಲವು ಗೌರವಯುತ ಪುರಸ್ಕಾರಗಳು ಅವರ ಬರವಣಿಗೆಗೆ ಸಂದಿವೆಯೆಂದು ಹೇಳಲು ಖುಷಿಯಾಗುತ್ತದೆ..ತಮ್ಮ ಕೃತಿಗಳಿಗಿಂತ ಪ್ರತಿಭಾವಂತ ಯುವಕ - ಯುವತಿಯರ ಕೃತಿಗಳನ್ನು, ಹಾಗೂ ನಾಡಿನ ಹೆಸರಾಂತ  ಸಾಹಿತಿಗಳ ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿˌ ಸಾಹಿತ್ಯ ಕ್ಷೇತ್ರದಲ್ಲಿ *ಕಾವ್ಯಮನೆ* ಪ್ರಕಾಶನಕ್ಕೆ ಒಂದು ಘನತೆಯ ಸ್ಥಾನ ತಂದುಕೊಂಡಿದ್ದಾರೆ. ಇವರ ಮೂಲಕ ಪ್ರಕಟಗೊಂಡ ಅನೇಕರ ಕೃತಿಗಳು ಸಾಹಿತ್ಯ ಅಕಾಡೆಮಿ ಹಾಗೂ ಇತರ ಪ್ರತಿಷ್ಠಿತ ಪುರಸ್ಕಾರ ಪಡೆದಿರುವುದರ ಹಿಂದಿನ ಕಾಳಜಿ ಹಾಗೂ ಕ್ರೆಡಿಟ್ ಈ ಹೈ .ತೋ ರವರಿಗೆ,ಆ ಮೂಲಕ ಇವರ ಕಾವ್ಯಮನೆ ಪ್ರಕಾಶನ ತಂಡಕ್ಕೆ ಸಲ್ಲುತ್ತದೆ.

ಈಗ ಇದೇ ಪ್ರಕಾಶನದ ಮೂಲಕ ಹೊರಬರುತ್ತಿರುವ  *ಆತ್ಮಧ್ಮಾನದ ನಾದ* ಒಂದು ವಿಶಿಷ್ಟವಾದ ಗಜಲ್ ಕೃತಿಯಾಗಿದೆ.
 ಇದರಲ್ಲಿ ಹೈ.ತೋ ರವರ ೪೨  ಅರ್ಥಪೂರ್ಣ ವಾದ ಗಜಲ್ ಗಳು ಹಾಗೂ ಆ ಗಜಲ್ ಗೆ ಹೊಂದುವಂತಹ ಸುಂದರ ರೇಖಾ ಚಿತ್ರಗಳು ಕೃತಿಯ ಒಟ್ಟಂದವನ್ನು ಹೆಚ್ಚಿಸಿವೆ.ಇದೇ ಸಂದರ್ಭದಲ್ಲಿ ನನ್ನ *ಆತ್ಮಸಖಿಯ ಧ್ಯಾನದಲಿ* ಎಂಬ ಗಜಲ್ ಸಂಕಲನ ಸಹ ಹೊರಬರುತ್ತಿರುವುದು ಕಾಕತಾಳೀಯವಾಗಿದ್ದರೂ ಸಹ ಒಂದು ಸಂತೋಷವನ್ನು ಉಂಟು ಮಾಡಿದೆ ಎಂದು ಉಲ್ಲೇಖಿಸಲು ಇಚ್ಚಿಸುತ್ತೇನೆ.ಅದಕೆ ವಿಶೇಷ ಕಾರಣವೆಂದರೆ ಒಂದು ಸಮಾನ ಮನಸ್ಕ ಲೇಖಕರ ತುಡಿತ ಆ ಒಂದೇ ಕಾಲಮಾನದ ಸಂದರ್ಭದಲ್ಲಿ ಹೇಗೆ ಪರಸ್ಪರ ಮಿಡಿಯಬಲ್ಲವು ಎಂಬುದಕ್ಕೆ ಈ ಎರಡು ಸಂಕಲನಗಳು ಸಾಕ್ಷಿಯಾಗುವುದು ಅಲ್ಲದೇ ಆಸಕ್ತರರಿಗೆ ಒಂದು ಯೋಗ್ಯ ಅಧ್ಯಯನಕ್ಕೆ ಅವಕಾಶ ಒದಗಿಸಬಲ್ಲವು ಎಂಬುದನ್ನು ಹೇಳಬಯಸುತ್ತೇನೆ.

ಅವರದು *ಆತ್ಮಧ್ಯಾನದ ನಾದ.*  ನನ್ನದು *ಆತ್ಮಸಖಿಯ ಧ್ಯಾನದಲಿ...* ನಾನಿನ್ನೂ ಲೌಕಿಕ ಧ್ಯಾನದಲ್ಲಿದ್ದು ಅಲೌಕಿಕದೆಡೆಗೆ ಸಾಗುವ ಚಿಂತನೆಯ ಪ್ರಕ್ರಿಯೆಯಲ್ಲಿ ಇರುವಾಗಲೇ ಇವರು ಆ ಆತ್ಮ ನಾದದ ಜಾಡು ಹಿಡಿದು ಲೌಕಿಕ ಪ್ರೇಮˌ ಮೋಹˌ ವಿರಹಗಳನು ದಾಟಿ ಅಲೌಕಿಕದೆಡೆಗೆ ಸಾಗುವ ಹಂತದಲ್ಲಿ ಹೊರಟಿರುವುದು ಈ ಕೃತಿಯ ಮುಖಪುಟದ ಮೂಲಕ ಅರ್ಥೈಸಿಕೊಳ್ಳಬಹುದಾಗಿದೆ.ಅದನ್ನು ಇಲ್ಲಿ ಕಲಾವಿದ ಸುಂದರವಾಗಿ ಹಿಡಿದಿಟ್ಟಿದ್ದಾನೆ.

ಈ ಕೃತಿಯ ಅವರ ಮೊದಲ ಗಜಲ್ ಇದು ನೋಡಿ,

*ನನಗಾಗಿ ಪ್ರಾರ್ಥಿಸುವ ಜೀವವೊಂದು ಆತ್ಮದ* *ಹಾಡಾದದ್ದು ಗೊತ್ತಾಗಲಿಲ್ಲ ...*
*ಪರಿತಪಿಸುವ ಮನಸ್ಸೊಂದು ಪರಮಾತ್ಮ*  *ರೂಪಿಯಾದದ್ದು ಗೊತ್ತಾಗಲಿಲ್ಲ...* 

ಹೀಗೆ ತಮ್ಮ ಗಜಲ್ ಮೂಲಕ ಆತ್ಮವು ಪರಮಾತ್ಮ ಆಗುವ  ನಾದಮಯ ಸನ್ನಿವೇಶವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇನ್ನೊಂದು ಗಜಲ್ ಶೇರ ಹೀಗಿದೆ.

@@

*ಇಷ್ಟವಾಗಬೇಕೆಂಬ ನಿರಂತರ ಧಾವಂತದಲ್ಲಿ ಎಡವಿದ್ದೆಲ್ಲಿ ಹೈ.ತೋ*
*ನಿಜದ ನನ್ನನ್ನು ನನ್ನೊಳಗೆ ಕಾಣುವುದನ್ನ ಹೇಳಿ ಕೊಡಬೇಕಿತ್ತು*

@@

*ಹಳದಿ ಕಣ್ಣುಗಳ ನೋಟವು ಈ ಜಗದ ದೋಷವೇ ಸರಿ*
*ಕನಿಕರಿಸದ ಹೃದಯ ಹೀನತೆಗೆ ನಾ ಕನಿಕರಿಸಿಬಿಡುತ್ತೇನೆ* 

@@

*ಸ್ವೀಕರಣೆ ನಿರಾಕರಣೆ ನಿನ್ನ ನಿರ್ಧಾರಕ್ಕೆ ಬಿಟ್ಟು ಬಿಟ್ಟಿರುವೆ* 
*ನನ್ನಯ ಅದಮ್ಯ ಪ್ರೀತಿಯನ್ನ ಅರಿಯದೇ ಮೆದ್ದು ಹೋದೆ*
@@

 *ಪ್ರತಿಜ್ಞೆಯೊಂದು ಮಧು ಬಟ್ಟಲನ್ನ ಚುಂಬಿಸಲು ಬಿಡುತ್ತಿಲ್ಲ*
*ಅಸ್ವಸ್ಥ ಸ್ವರದೊಳಗೆ ವ್ಯಸನದ ಹಾಡುಹಾಡಿ ಎದ್ದುಹೋದೆ*

@@

*ಸಾವನ್ನ ಸದಾ ಸಂಭ್ರಮಿಸುವವನಿಗೆ ಕ್ಷಮಿಸಿಬಿಡುತ್ತೇನೆ* 
*ಮರಣ ಮುಕ್ಕಲ್ಲವೆನ್ನುವವನಿಗೆ ಮಾಫಿಮಾಡಿಬಿಡುತ್ತೇನೆ*

@@ 

*ಹೊರಗೆ ನಗಿಸುತ್ತಾ ನಾನು ಏಕಾಂತದಲ್ಲಿ ಅಳುತ್ತಿದ್ದೆ*
*ಅಳುವನ್ನ ಅದುಮುತ್ತಾ ಲೋಕಾಂತದಲ್ಲಿ ನಗುತ್ತಿದ್ದೆ*

ಹೀಗೆ ಈ ಸಂಕಲನದ ಉದ್ದಕ್ಕೂ ಹೊರಗೆ ನಗಿಸುತ್ತಾ, ಒಳಗೊಳಗೆ ಲೋಕದ ಮನುಜರ ಕಂಡು ಒಳಗೊಳಗೆ ನೋವು ಪಡುತ್ತಾ,ಅದಕ್ಕೆ ಮುಲಾಮು ಸವರುತ್ತಾ,ಜಗದ ಮುಂದುಗಡೆ ನಗುವ ನಾಟಕ ಮಾಡುತ್ತಾ ಹೋಗುವುದು ಯಾವುದೇ ಸಾಮಾಜಿಕ ಜವಾಬ್ದಾರಿಯ ಲೇಖಕನ ಮನೋಧರ್ಮವಾಗಿರುತ್ತದೆ. ಆಗಬೇಕು ಕೂಡಾ.ಕವಿ ಈಶ್ವರ ಸಣಕಲ್ ಅವರ *"ಜಗವೆಲ್ಲ ನಗುತಿರಲಿ,ಜಗದಳವು ನನಗಿರಲಿ* ಎನ್ನುವದಾಗಲಿ, ಅಥವಾ ಕವಿ ನಿಸಾರ್ ಅಹಮ್ಮದ್ ಅವರ *"ನಿಮ್ಮೊಡನಿದ್ದು ನಿಮ್ಮಂತಾಗದೇ...* ಎಂಬ ಕವನದ ಸಾಲುಗಳೇಕೋ ಈಗ ನೆನಪಾದವು.ಇರಲಿ.

ನಮ್ಮ ಹೈ.ತೋ ರವರು ಈ ಸಂಕಲನದ ಮೂಲಕ ಒಂದು ಖಚಿತವಾದ ಹೆಜ್ಜೆಯನ್ನು ಗಜಲ್ ಲೋಕದಲ್ಲಿ ಇಟ್ಟಿದ್ದಾರೆ.ಅವರು ಬರೆಯುವುದಕ್ಕಿಂತ ಬರೆಯಿಸುವುದರಲ್ಲಿ ಖುಷಿ ಪಡುವ ಜೀವವದು.ಅವರ ಈ ಸಂಕಲನಕ್ಕೆ ಒಂದೆರಡು ಪುಟದ ಆಶಯ ನುಡಿ ಬರೆಯಲು ಹೇಳಿದ್ದರು.ಅದು ಈಗಾಗಲೇ ದಾಟಿದೆ.ಹಿಂದೆ ನಮ್ಮ ಜನಪದರು ಜೋಳ ಬೀಸುವಾಗ ಹಾಡು ಹಾಡುತ್ತಾ ಮೈ ಮರೆಯುತ್ತಿದ್ದರಂತೆ. ಜೋಳ ಮುಗಿದರೂ ಹಾಡು ಮುಗಿಯುತ್ತಿರಲಿಲ್ಲವಂತೆ. ಈ ಹೈ.ತೋ ರವರ ಬಗ್ಗೆ ಬರೆಯಲು ಹೊರಟರೆ ಪೇಜೆಂಬ ಅಕ್ಷರದ ಜೋಳದ ಕಾಳಿಗೆ ವಿರಾಮವೇ ಸಿಗುವುದಿಲ್ಲ. ಹೀಗೆ ಬರೆಯುತ್ತಾ ಸಾಗಿದರೆ ಮನದ ಮಾತುಗಳು ಮುಗಿಯಲಾರವು.ಹಾಗಾಗಿ ಅವರ ಈ ಸಂಕಲನಕ್ಕೆ ಶುಭ ನುಡಿದು ಶುಭ ಹಾರೈಸಿ ಮುಗಿಸುವೆ.ನಮಸ್ಕಾರ.
_______________________

- ಶ್ರೀ  ಸಿದ್ಧರಾಮ ಹೊನ್ಕಲ್.







(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...