ಗುರುವಾರ, ಸೆಪ್ಟೆಂಬರ್ 16, 2021

ಹೆಸರಾಯಿತು 'ಕಲ್ಯಾಣ ಕರ್ನಾಟಕ' ಹಸನಾಗಲಿಲ್ಲ 'ಜನರ ಬದುಕ'! (ಲೇಖನ) - ಶ್ರೀ ಬಾಲಾಜಿ ಕುಂಬಾರ,

ಹೆಸರಾಯಿತು 'ಕಲ್ಯಾಣ ಕರ್ನಾಟಕ'  ಹಸನಾಗಲಿಲ್ಲ 'ಜನರ ಬದುಕ'!

'ಹೈದರಾಬಾದ್ ಕರ್ನಾಟಕ' ಭಾಗವನ್ನು "ಕಲ್ಯಾಣ ಕರ್ನಾಟಕ" ಎಂದು ಮರುನಾಮಕರಣವಾಗಿ ಇಂದಿಗೆ ಎರಡು ವರ್ಷ. ಬಸವಾದಿ ಶರಣರ, ಸೂಫಿ ಸಂತರ ನೆಲೆವೀಡು ಎಂದು ಈ ಪ್ರದೇಶದಲ್ಲಿ ಹೆಚ್ಚಾಗಿ ಭಾವೈಕ್ಯತೆ ಬೆಸೆಯುವ ಪರಂಪರೆ ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದೆ. 

'ಕಲ್ಯಾಣ' ಎಂದರೆ ಅದೊಂದು ಸ್ಥಳವಲ್ಲ, ನಿಗದಿತ ಪ್ರದೇಶದ ಹೆಸರೂ ಅಲ್ಲ. ಕಲ್ಯಾಣ ಎಂದರೆ ಒಳಿತು, ಸಮೃದ್ಧಿ, ಅಭ್ಯುದಯ, ಸರ್ವ ಸಮಾನತೆ ಸಮಾಜ, ಯಾವ ಕೊರತೆಗಳಿಲ್ಲದ ಒಂದು ಪ್ರದೇಶವನ್ನು ಕಲ್ಯಾಣ ನೆಲ ಎಂದು ಕರೆಯಬಹುದು. ಅಂಥ 'ಜನ ಕಲ್ಯಾಣ'ಕ್ಕಾಗಿಯೇ ಶರಣರು ಕಾಯಕ ಚಳವಳಿ ಮೂಲಕ ಸಮಾನತೆ ಕನಸು ಕಂಡಿದ್ದರು. 

ಒಂದು ಭಾಗದ ಜನರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಮಾನವ ಸಂಪನ್ಮೂಲ ಅಭಿವೃದ್ಧಿಯಾಗಿ "ಜನ ಕಲ್ಯಾಣ" ಹೊಂದಬೇಕು. ಅದನ್ನು ಸರ್ಕಾರಗಳು ಕಾರ್ಯಗತಗೊಳಿಸಿದಾಗ ಮಾತ್ರ 'ಕಲ್ಯಾಣ' ಎಂಬ ಪದಕ್ಕೆ ಸೂಕ್ತ ಅರ್ಥ ಬರುವುದು. ಸುಮ್ಮನೆ ಹೆಸರು ಬದಲಾವಣೆಯಿಂದ ಯಾವ 'ಕಲ್ಯಾಣ'ವೂ ಆಗುವುದಿಲ್ಲ. 

ಈ ಭಾಗದ ಜನರ ಬದುಕಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಸಣ್ಣ ಸಣ್ಣ ಮಕ್ಕಳಿಗೆ ಒಡಲಲ್ಲಿ ಇಟ್ಟುಕೊಂಡು ಬೇರೆ ರಾಜ್ಯಗಳಿಗೆ ಗುಳೆ ಹೋಗುವುದು ತಪ್ಪಿಲ್ಲ. ಉದ್ಯೋಗ ಹುಡುಕಿಕೊಂಡು ಹೋದ ಈ ಭಾಗದ ಯುವಕರಿಂದ ರಾಜಧಾನಿಗಳು ಮತ್ತಷ್ಟು ಅಭಿವೃದ್ಧಿಗೊಳ್ಳುತ್ತಿವೆ. ಆದರೆ ಇಲ್ಲಿರುವ ಜನರ ಜೀವನಮಟ್ಟ ಸುಧಾರಣೆಗಾಗಿ ಯಾವ ಅಭಿವೃದ್ಧಿ ಯೋಜನೆಗಳು ಅಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಲ್ಲ. 

ಸರ್ಕಾರ ವರ್ಷಕ್ಕೆ ಒಂದುವರೆ ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಈ ಭಾಗದ ಜನಪ್ರತಿನಿಧಿಗಳು ಅದನ್ನು ಹೇಗೆ ಸದುಪಯೋಗ ಪಡೆದುಕೊಳ್ಳಲು ಉತ್ಸುಕತೆ ತೋರುತ್ತಿಲ್ಲ. ಬಜೆಟ್ ಅಭಿವೃದ್ಧಿಗಾಗಿ ಎಷ್ಟು ಬಳಕೆಯಾಗುವುದೋ ಅಷ್ಟೇ ದುಡ್ಡು ಖಜಾನೆಯಲ್ಲಿ ಹಾಗೇ ಉಳಿದು ವಾಪಸ್ ಹೋಗುತ್ತದೆ. 

ಈ ಭಾಗದ ಕೆಲವು ಜಿಲ್ಲೆಗಳಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲ, ನೂರಾರು ಜನರಿಗೆ ಉದ್ಯೋಗ ನೀಡುವ ಒಂದು ಕಂಪನಿ ಇಲ್ಲ. ಬೇಸಿಗೆ ಬಂದರೆ ಹನಿ ನೀರಿಗಾಗಿ ಹಾಹಾಕಾರ ಪಡುವ ಈ ಭಾಗದ ಬಹುತೇಕ ಹಳ್ಳಿಗಳಿಗೆ ರಸ್ತೆ, ಬಸ್ ಸಂಚಾರ ಇನ್ನೂ ಕನಸಾಗಿಯೇ ಉಳಿದಿದೆ. ಟ್ರೈನ್ ಓಡಿತು, ವಿಮಾನ ಹಾರಿದ ಮಾತ್ರಕ್ಕೆ ಅಭಿವೃದ್ಧಿ ಅಂತ ಹೇಳಬೇಕೇ? ಅದಕ್ಕೆ ಬಿಟ್ಟು ಇನ್ನೂ ತಾಪತ್ರಯಗಳು ಈ ಭಾಗಕ್ಕೆ ಅಂದಿನಿಂದ ಇಂದಿನವರೆಗೂ ಎದುರಿಸುಕೊಂಡು ಬರ್ತಿದ್ದಾರೆ. ಆದರೂ ಈ ಭಾಗದ ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದು ಕುರುಡರಂತೆ  'ನಾವು ಹಿಂದುಳಿದಿಲ್ಲ' ಎಂದು ನಂಬಿಸಿ ಜನ್ರಿಗೆ 'ಅಚ್ಚೆ ದಿನ' ಎಂದು ಭ್ರಮೆಯಲ್ಲಿ ಮುಳುಗಿಸುತ್ತಾರೆ.

ಈಗಲಾದರೂ ಜನಪ್ರತಿನಿಧಿಗಳು ಇಚ್ಚಾಶಕ್ತಿ ತೋರಿಸಿ ವಿಭಿನ್ನ ಯೋಜನೆ ರೂಪಿಸಿ ಅವುಗಳನ್ನು ಜಾರಿಗೆ ತಂದರೆ ಮಾತ್ರ ಈ ಭಾಗದ ಪ್ರಗತಿ ಸಾಧ್ಯ. ಇಲ್ಲದಿದ್ದರೆ ಕನ್ನಡಿಯೊಳಗಿನ ಗುಟ್ಟಾಗಿಯೇ ಉಳಿಯಲಿದೆ.
- ಬಾಲಾಜಿ ಕುಂಬಾರ,



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...