ಏನಿದ್ದರೇನು
ಜಗವ ಬೆಳಗುವ ತಾರೆಗಳು ಸಹಸ್ರಾರು ಇದ್ದರೇನು
ಧರೆಯ ಪೋಷಿಸುವ ಸೂರ್ಯನ ಮುಂದೆ.||
ಹಳ್ಳಿ ನಗರಗಳು ಎಷ್ಟಿದ್ದರೇನು ವಿಶ್ವದಲ್ಲಿ
ಜನ್ಮಕೆ ನೆಲೆಕೊಟ್ಟ ಹುಟ್ಟೂರಿನ ಮುಂದೆ.||
ಮೆತ್ತನೆಯ ಸುಪ್ಪತ್ತಿಗೆಗಳು ವಿಧವಿಧವಿದ್ದರೇನು
ತಾಯ ಮಡಿಲ ನೆಮ್ಮದಿಯ ಮುಂದೆ.||
ಖಗಗಳ ಕೂಗ ಇಂಪು ಕೇಳುತ ಸಾಗಿದರೇನು
ಕೋಗಿಲೆಯ ನಿನಾದ ತುಂಬಿದ ಧನಿಯ ಮುಂದೆ.||
ಬಾಯಿ ಹಂಬಲ ತಿನಿಸುಗಳು ರುಚಿಯಿದ್ದರೇನು
ಜಟ್ಟಿ ಮಾಡುವ ಮುದ್ದೆಯ ತಿನ್ನುವ ಮುಂದೆ.||
ಸಂಬಂಧಗಳು ಇಳೆಯಲಿ ಲೆಕ್ಕವಿಲ್ಲದಷ್ಟಿದ್ದರೇನು
ಪ್ರತಿಫಲ ಬಯಸದ ಸ್ನೇಹದ ಮುಂದೆ.||
ತಂತ್ರಜ್ಞಾನ ಜ್ಞಾನಕೆ ಮಿಗಿಲಾಗಿ ಬೆಳೆದರೇನು
ಮನೆಯಾಂಗಳದಿ ಹಿರಿಯರ ಸಲಹೆಯ ಮುಂದೆ.||
ಮಾತೆಯ ಮಡಿಲಲಿ ಭಾಷೆಗಳು ಸಾವಿರವಿದ್ದರೇನು
ನಾಲಿಗೆಯಲಿ ನರ್ತಿಸುವ ಸವಿನುಡಿ ಕನ್ನಡದ ಮುಂದೆ.||
ದಾರಿ ತೋರುವ ನಕ್ಷೆಗಳು ಅಗಣಿತವಾದರೇನು
ಮಾರ್ಗ ತೋರಿಸುವ ಗುರುವಿನ ಮುಂದೆ.||
ಸಂಪತ್ತಿನ ಸಿರಿಯು ತುಂಬಿ ತುಳಿಕಿದರೇನು
ಹಗುರವಾದ ಹೃದಯದ ಮುಂದೆ.||
ಮನುಜನ ಕಣ್ಣೋಟಗಳು ಭಿನ್ನವಿದ್ದರೇನು
ಮಮತೆ ವಾತ್ಸಲ್ಯ ತುಂಬಿದ ನೋಟದ ಮುಂದೆ.`||
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ.೯೬೩೨೨೯೬೮೦೯.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ