ಅನ್ನ ನೀರು ಅರಿಯದೆ
ಗಾಳಿ ಬೆಳಕು ಗುರುತಿಸದೆ
ತಾಯಿಗರ್ಭದ ಕತ್ತಲಿಗೆ
ಅಂಜದೇ,ಅಳುಕದೇ
ಕಂದಮ್ಮನಾಗಿ ಕಣ್ತೆರೆದು
ಜಗವ ಕಂಡ ನಮಗೆ
ಬದುಕೆಂದರೆ ಭಯವೇಕೆ?
ಹಾಲುಣಿಸಿದವಳನು
ಮ್ಮಾ... ಮ್ಮಾ... ಎನುತಾ
ಗತ್ತಿನದನಿಯಲಿ ಮುದ್ದಿಸುವಗೆ
ಪ್ಪಾ... ಪ್ಪಾ..... ಎನುತಾ
ಕೊಂಡಾಡುವ ಅಜ್ಜಿಯ
ಪ್ರೀತಿಯಲಿ ತೇಲಿದ ನಮಗೆ
ಬದುಕೆಂದರೆ ಭಯವೇಕೆ?
ಅಂಬೆಗಾಲನಿಡುತಾ
ಎಡವಿ ಬಿದ್ದರು ಬಿಡದೆ
ನಡೆವುದ ಕಲಿತೆವು!
ಜೊಲ್ಲನು ಸುರಿಸುತಾ
ತೊದಲಿ ಬಿಕ್ಕಳಿಸಿದರು
ಮಾತನು ಕಲಿತ ನಮಗೆ
ಬದುಕೆಂದರೆ ಭಯವೇಕೆ?
ಬೆತ್ತವನಿಡಿದ ಗುರುಗಳು
ಹೇಳಿದ ವಿದ್ಯೆಯ ಕಲಿತೆವು
ಜಾತಿ,ಧರ್ಮ ಭೇದವ ಮೀರಿ
ಎಲ್ಲರೊಳೊಂದಾಗಿಹೆವು!
ಕೂಡಿ ಆಡಿ ಸ್ನೇಹಿತರಾಗಿ
ಬಾಲ್ಯವ ಕಳೆದ ನಮಗೆ
ಬದುಕೆಂದರೆ ಭಯವೇಕೆ?
ಹಸಿದಾಗ ಸಿಕ್ಕಿದ್ದೆಲ್ಲವನು
ಮೃಷ್ಠಾನ್ನದಂತೆ ಸವಿದೆವು!
ಬಯಸಿದ್ದೆಲ್ಲಾ ಸಿಗದಿದ್ದರು
ಧೃತಿಗೆಡದೇ ಬದುಕಿಹೆವು!
ಬಡತನದ ದಿನಗಳನು
ಕೊರಗದೆ ಕಳೆದ ನಮಗೆ
ಬದುಕೆಂದರೆ ಭಯವೇಕೆ?
ಅಪ್ಪನದು ಒಂದೂರು,
ಅಮ್ಮನದು ಮತ್ತೊಂದೂರು!
ನಮಗಾಗಿ ಇಬ್ಬರೊಂದಾಗಿ ಕಷ್ಟಗಳನು ಸಹಿಸಿರುವುದನು
ಕಣ್ಣಾರೆ ಕಂಡ ನಮಗೆ
ಬದುಕೆಂದರೆ ಭಯವಿಲ್ಲ!
ಭರವಸೆ,ಭರವಸೆ,ಭರವಸೆ.
✍️ ಡಿ.ಶಬ್ರಿನಾ ಮಹಮದ್ ಅಲಿ
ಶಿಕ್ಷಕಿ, ಚಳ್ಳಕೆರೆ
ಚಿತ್ರದುರ್ಗ ಜಿಲ್ಲೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಈ ಕವಿತೆ ಯ ಮೊದಲ ಹಾಗೂ ಕೊನೆಯ ನಾಲ್ಕು ಸಾಲುಗಳು ಬಹಳ ಅದ್ಭುತ ವಾಗಿ ಮೂಡಿ ಬಂದಿದೆ. ಒಟ್ಟಾರೆ ಈ ಬಹಳ ಚನ್ನಾಗಿದೆ... 🙏
ಪ್ರತ್ಯುತ್ತರಅಳಿಸಿ