ತಾನುರಿದು ಜಗವ ಬೆಳಗುವ ಹಣತೆ
ನಿಸ್ವಾರ್ಥದಿ ತಮವ ಕಳೆವ ಪ್ರಣತೆ
ಓ ದಿವ್ಯಜ್ಯೋತಿ ಎನ್ನೆದೆಗೆ ಇಳಿದು ಬಾ
ಹೊಸ ನಾಳೆಗೆ ಕನಸ ತೋರಣವ ಹೊತ್ತು ಬಾ
ರಂಗೋಲಿ ಹಾಕುವೆ ಮನದಂಗಳವ ಗುಡಿಸಿ
ಚೈತನ್ಯವ ನೀಡು ಬಾ ಹೊಂಬೆಳಕ ಹೊದಿಸಿ
ಹಣತೆಯೇ ಸರಿಸು ನನ್ನೀ ಮೋಹದ ತೆರೆಯನು
ಬೆಳಗು ಮನದೊಳಗೆ ಪ್ರೀತಿ ಮಮಕಾರವನು
ನಾನೆಂಬ ಸ್ವಾರ್ಥದ ತಮವ ಓಡಿಸು
ನಿನ್ನೆದೆಯ ಕಾರುಣ್ಯವ ಎನ್ನೆಡೆಗೆ ಹರಿಸು
ಕತ್ತಲ ಹಾದಿಯಲಿ ಕನಿಕರಿಸಿ ನಡೆಸು ಮುಂದೆ
ಬಾಳ ತಿರುವಿನಲಿ ಕೈ ದೀವಿಗೆಯಾಗು ನೀ ತಂದೆ
ಸ್ವಾರ್ಥದ ಜಗದಿ ಕರುಣಾಳು ನೀ ದೀಪವೇ
ನಿನಗೆಲ್ಲಿಹುದು ಹೋಲಿಕೆ ನೀ ದೈವ ಸ್ವರೂಪವೇ
ಸಾವಿರ ಸೌದೆಗಳಿದ್ದರೂ ಒಲೆಯೊಳಗೆ
ಸಮವೆಲ್ಲಿಹುದು ಒಂದು ಹಣತೆಯ ಬೆಳಕಿಗೆ
ನಿನ್ನಂತೆ ದೀಪವಾಗಿಸು ಎನ್ನ ಮನವನು
ಎರೆವೆ ಪ್ರೀತಿ ವಾತ್ಸಲ್ಯದ ತೈಲವನು
ಬೆಳಗುವ ಹಣತೆಗೆ ಜಾತಿ ಭೇದವೆಲ್ಲಿಯದು
ತಾನೇ ತಾನುರಿದು ಸಮಾನತೆಯ ಸಾರುತಿಹುದು...
ಮಧುಮಾಲತಿರುದ್ರೇಶ್ ಬೇಲೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ