ನಾವು ಹುಟ್ಟಿದ್ದು ಯಾರನ್ನೋ ನೋಯಿಸಲಿಕ್ಕಾಗಲಿ ನೆಚ್ಚಿಸಲಿಕ್ಕಾಗಲಿ ಅಲ್ಲ ಬದುಕಿನ ನೈಸರ್ಗಿಕತೆಯಿಂದ ನಾವೆಲ್ಲರೂ ಈ ಧರೆಗೆ ಬಂದಿಳಿದಿದ್ದೇವೆ. ಆ ನೈಸರ್ಗಿಕತೆಯ ನೈಜತೆಯೊಳಗೆ ನಾವು ಬದುಕಬೇಕಿದೆ ಅಷ್ಟೇ. ನಾವು ಹುಟ್ಟುವಾಗ ಯಾರು ಎಷ್ಟು ಜನ ಜೊತೆಗಿದ್ದರೋ ನಾವು ಈ ಲೋಕವನ್ನು ಬಿಟ್ಟು ಹೋಗುವಾಗ ಎಷ್ಟು ಜನ ಜೊತೆಗಿದ್ದರೋ ಎಂಬುದು ಇಲ್ಲಿ ಮುಖ್ಯವಾಗಲ್ಲ ಈ ಎರೆಡು ಸನ್ನಿವೇಶಗಳ ಮಧ್ಯೆ ಒಂದು ಮುಖ್ಯವಾದ ಬಂಧವಿದೆ ಅದೇ ಸ್ನೇಹಾನುಬಂಧ, ಪ್ರೇಮಾನುಬಂಧ ಬದುಕಿನ ಅನುಭಂಧವೂ ಕೂಡ ಹೌದು. ಈ ಅನುಬಂಧನಗಳ ಗಟ್ಟಿತನ ಎಷ್ಟಿತ್ತೋ ಅಷ್ಟು ನಮ್ಮ ಬದುಕು ಗಟ್ಟಿತನದಿಂದ ಕೂಡಿರುತ್ತದೆ. ನಾವು ಯಾವುದೋ ಕಾರಣಕ್ಕೆ ಯಾರದೋ ಮಾತಿಗೆ ಮಂಕಾಗಿ ಅನಾವಶ್ಯಕವಾಗಿ ಯಾರ ಮೇಲೋ ಕ್ಷುಲ್ಲಕ ಕಾರಣಕ್ಕೆ ದ್ವೇಷ ಅಸೂಯೆ ಇಟ್ಟುಕೊಂಡು ಬದುಕನ್ನು ನಡೆಸಲು ಹೊರಟರೆ ಅದು ಬದುಕಾಗುವುದಿಲ್ಲ ಬದುಕಿನ ಲಕ್ಷಣವೂ ಅಲ್ಲ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅದೆಷ್ಟೋ ಅಪಾರ ಸಂಪತ್ತಿನ ಸಂಪನ್ಮೂಲಗಳು ನೆರೆದಿವೆ ಅಂತಹ ಸಂಪನ್ಮೂಲಗಳ ಸಾರವನ್ನು ಸೇವೆದು ಪರಿಸರ ಪ್ರೇಮಿ ನಿಸರ್ಗಪ್ರೇಮಿಯಾಗಿ ಯಾರ ನೆರೆಹೊರೆಯವರೊಂದಿಗೂ ಬೇರಾವುದೇ ಅನ್ಯ ವಿಷಯಕ್ಕೆ ಸಿಲುಕಿ ಮತ್ತೊಬ್ಬರ ಮನವನ್ನು ನೋಯಿಸುವಂತಹ ಕೆಲಸಕ್ಕೆ ನಾವು ಯಾವತ್ತೂ ಕೈಹಾಕಬಾರದು ಮತ್ತು ನಮಗೆ ಸಂಬಂಧಿಸದೇ ಇರುವ ವಿಷಯಗಳಿಗೆ ಗೋಜಿಗೆ ನಾವೆಂದೂ ಸುಳಿಯಬಾರದು. ನಮ್ಮ ಪ್ರತೀ ಹೆಜ್ಜೆ ಪ್ರತೀ ಮಾತು ನಡೆ ನುಡಿ ನಮ್ಮ ಹಿಡಿತದಲ್ಲೇ ಇರಬೇಕು ಯಾರನ್ನೋ ಅತೀಯಾಗಿ ನಂಬಿ ಯಾರ ಮೇಲೋ ಅತಿಯಾದ ಭರವಸೆ ಇಡೋದು ಅವರ ಮೇಲೆಯೇ ಅವಲಂಬಿತವಾಗುವುದು ಮಾಡದೇ ನಮ್ಮ ದಾರಿಯಲ್ಲೇ ನಾವು ಸರಿಯಾದ ಹೆಜ್ಜೆಗಳನ್ನು ಹಾಕಿದರೆ ಯಾವುದೇ ತೊಂದರೆ ನಮಗಾಗಲಿ ನಮ್ಮವರಿಗಾಗಲಿ ಹಾಗೂ ನಮ್ಮಿಂದ ಸಮಾಜಕ್ಕಾಗಲಿ ಆಗುವುದಿಲ್ಲ. ನಮ್ಮ ಬದುಕು ಮೂರೇ ಮೂರು ದಿನದ ಸಂತೆ ಆ ಸಂತೆಯ ಮೊದಲ ಘಟ್ಟ ಜನನ ಎರಡನೆಯ ಘಟ್ಟ ಜೀವನ ಮೂರನೇ ಘಟ್ಟ ಮರಣ ಈ ಮೂರು ಘಟ್ಟಗಳಲ್ಲಿ ಕೊನೆಯ ಮೂರನೇ ಘಟ್ಟಕ್ಕೆ ತೃಪ್ತಿ ಹಾಗೂ ಮುಕ್ತಿ ದೊರೆಯಬೇಕಾದರೆ ಮೊದಲ ಘಟ್ಟದಿಂದ ಎರಡನೇ ಘಟ್ಟ ಸರಿಯಾಗಿರಬೇಕು ಮತ್ತು ನಿಷ್ಠೆಯ ಬದುಕು ಬಲಿಷ್ಠವಾಗಿರಬೇಕು ಆಗಿದ್ದಾಗ ಮಾತ್ರ ಮರಣದ ಘಟ್ಟಕ್ಕೆ ಬೆಲೆ ಸಿಗುವುದು ಗೌರವ ಸಿಗುವುದು. ಈ ಮೂರು ಘಟ್ಟಗಳನ್ನು ದಾಟಿ ದಡ ಸೇರುವ ಹೊತ್ತಿಗೆ ಅದೆಷ್ಟೋ ಕಷ್ಟಗಳು ಎದುರಾಗುತ್ತವೆ. ಅಂತಹ ಹಲವಾರು ಕಷ್ಟಗಳನ್ನು ಸೂಕ್ಷ್ಮವಾಗಿ ದಾಟಿದಾಗಲೇ ನಮಗೆ ಸನ್ಮಾರ್ಗ ದೊರೆತು ಬದುಕಿನಲಿ ಸ್ವರ್ಗದ ಸಿರಿಯನು ಸವಿಯಲು ಸಾಧ್ಯವಾಗುತ್ತದೆ. ಸಮಯವಿದ್ದಾಗ ಸಾಧ್ಯವಾದರೇ ಮತ್ತೊಬ್ಬರಿಗೆ ಸಹಾಯ ಮಾಡೋಣ ಹಸಿದವರಿಗೆ ಹಿಡಿಯೊಳಗಿನ ಒಂದಿಷ್ಟು ಅನ್ನವನ್ನು ಕೊಟ್ಟು ಹಸಿವನ್ನು ನೀಗಿಸೋಣ ಕಷ್ಟ ಅಂತ ಬಂದೋರಿಗೆ ತಗುಲಿದ ಸಮಸ್ಯೆಗೆ ಪರಿಹಾರ ಸೂಚಿಸೋಣ ಮಾನವೀಯ ಬದುಕನ್ನು ನಮ್ಮ ಸುತ್ತಲಿನವರೊಂದಿಗೆ ಕಟ್ಟಿಕೊಳ್ಳೋಣ ಸ್ನೇಹ ಬಾಂಧವ್ಯದಿಂದ ಬದುಕೋಣ ಯಾವಾಗಲೂ ಯಾರು ಏನೇ ಅಂದರೂ ನಮ್ಮ ಬಗ್ಗೆ ಆಡಿಕೊಂಡರೂ ಚಾಡಿ ಚುಚ್ಚು ಮಾತನ್ನು ಆಡಿದರೂ ಯಾವುದನ್ನೂ ಲೆಕ್ಕಿಸದೇ ಯಾರೊಂದಿಗೂ ವೈರತ್ವ ದ್ವೇಷ ವಿರೋಧ ಇಟ್ಟುಕೊಳ್ಳದೇ ಯಾರೇ ನಿನ್ನನ್ನು ತಿರಸ್ಕರಿಸಿದರೂ ಕಿಂಚಿತ್ತೂ ಅವರ ಮೇಲೆ ಹಠಸಾಧಿಸದೇ ನಾವೆಲ್ಲಾ ಒಂದೇ ನಿಮ್ಮಲ್ಲಿ ನಾನೂ ಒಬ್ಬ ಎಂದು ಡಿವಿಜಿ ಯವರ ಮಾತಿನಂತೆ "ಎಲ್ಲರೊಳೊಂದಾಗು ಮಂಕುತಿಮ್ಮಾ" ಎಂಬಂತೆ ನನ್ನೊಳಗೆ ಎಲ್ಲಾರು ಎನ್ನುವುದಕ್ಕಿಂದ ಎಲ್ಲರೋಳು ನಾನೊಬ್ಬ ಎಂದು ನಮ್ಮ ಸುಂದರ ಲೋಕದಲ್ಲಿ ನಾವು ನಗುನಗುತ್ತಾ ಬಾಳಿ ಬದುಕಿ ನಮ್ಮ ಮೂರು ದಿನದ ಸಂತಿಯ ಪಯಣವನ್ನು ಮುಗಿಸಿದಾಗಲೇ ನಮಗೆ ನಮ್ಮ ವ್ಯಕ್ತಿತ್ವಕ್ಕೆ ಘನತೆ ಗೌರವ ಹೆಚ್ಚಾಗಿ ಮೂರು ದಿನದ ಸಂತೆಯ ಸ್ವಾದ ನೂರಾರು ವರ್ಷಗಳು ಉರುಳಿದರೂ ಶಾಶ್ವತವಾಗಿ ಜನಮನದಲ್ಲಿ ಅಜರಾಮರವಾಗಿ ಉಳಿಯುತ್ತದೆ ಹೀಗೆ ನಾವು ಪ್ರತಿಯೊಬ್ಬರೊಂದಿಗೆ ಯಾವತ್ತೂ ಗುದ್ದಾಟ ತಿಕ್ಕಾಟ ಜಗಳ ಮುಂತಾದ ವಿಚಾರಗಳಿಗೆ ಮಾರುಹೋಗದೆ ಒಳ್ಳೆಯ ಸ್ನೇಹ ಸಂಬಂಧದ ಗುಣಲಕ್ಷಣಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೇ ನಮ್ಮ ಜೀವನ ಸಾರ್ಥಕವಾಗುವುದು ಬೇರಾವ ಆಮಿಷಗಳಿಗೆ ಬಲಿಯಾಗಿ ಬಂಗಾರದ ಬದುಕನ್ನು ಬರೀ ಅನಾವಶ್ಯಕ ವಿಚಾರಗಳಿಗೆ ಬಲಿಕೊಡುವುದು ಒಳಿತಲ್ಲ ಇರುವಷ್ಟು ದಿನ ಅಷ್ಟೇ ಅಲ್ಲ ಇಂತಹ ಗುಣಗಳು ನಮ್ಮಲ್ಲಿದ್ದರೆ ನಮ್ಮ ಆಯಸ್ಸು ಮತ್ತಷ್ಟು ಹೆಚ್ಚಾಗಬಹುದು ವಿನಾ ಕಾರಣಗಲೇ ನಮ್ಮನ್ನು ಮತ್ತು ನಮ್ಮ ಬದುಕಿನ ಕೆಲ ಕ್ಷಣಗಳನ್ನು ಸಂತೋಷದಿಂದ ನಗುನಗುತಾ ಅನುಭವಿಸಲು ಅನುವುಮಾಡಿಕೊಡುವುದಿಲ್ಲ ಜೀವನದ ಮಟ್ಟವನ್ನು ಗೊತ್ತಿಲ್ಲದೇ ಕುಗ್ಗಿಸಿ ಆಯಸ್ಸನ್ನು ಕೂಡ ಕಡಿಮೆಗೊಳಿಸಲು ಕಾರಣವಾಗಿರುತ್ತವೆ ಹೀಗಾಗಿ "ಸರ್ವ ಜನಾಂಗದ ಶಾಂತಿಯ ತೋಟ"ದಲ್ಲಿ ಸರ್ವ ಜನಮನಗಳೊಂದಿಗೆ ಬೆರೆತು ಅರಿತು ಬದುಕೋಣ, ಪ್ರೀತಿ ಪ್ರೇಮದೊಂದಿಗೆ ಬೆರೆತು ಜಾತಿ-ವರ್ಣ ಧರ್ಮದ ಭೀತಿಯನ್ನು ತೊರೆಯೋಣ ಮಾನವ ನೀತಿಯನ್ನು ಅಳವಡಿಸಿಕೊಳ್ಳೋಣ.
- ಹನುಮಂತ ದಾಸರ ಹೊಗರನಾಳ.
ತುಂಬಾ ಧನ್ಯವಾದಗಳು ವಿಚಾರ ಮಂಟಪ ಸಾಹಿತ್ಯ ಪತ್ರಿಕಾ ಸಂಪಾದಕರಿಗೆ 🤝🎂🙏🙏
ಪ್ರತ್ಯುತ್ತರಅಳಿಸಿ