ಅದೇನು ನಿನ್ನ ಮಹಿಮೆ !
ನೀನಿರದೆ ಯಾರಿಗಿಲ್ಲ ಹಿರಿಮೆ
ಎಲ್ಲೆಡೆಯೂ ನಿನದೇ ಪ್ರಭಾವ
ನೀನಿರದೆ ದೊರೆಯದು ಗೌರವ
ಹಣಸಂಪಾದನೆಯೇ ಗುರಿ ವಿದ್ಯೆಗು
ನೀನಿರದಿರೆ ಬೆಲೆಯೆಲ್ಲಿ ವಿದ್ಯೆಗೆ
ನೀನಿರದೆ ವಿದ್ಯೆಯನೂ ಕಲಿಯಲಸಾಧ್ಯ
ನಿನ್ನ ಕಬಂಧಬಾಹು ಎಲ್ಲೆಡೆ ವ್ಯಾಪಿಸಿದೆ
ದೇಗುಲದಲೂ ನಿನದೇ ಆರ್ಭಟ
ಹಣ ತೆತ್ತರೆ ಮಾತ್ರ ವಿಶೇಷದರ್ಶನ
ಮಠಮಾನ್ಯಗಳಲೂ ನಿನದೆ ದರ್ಬಾರು
ಸಂಭಾವನೆ ನೀಡಿದರೆ ಕೃಪಾಕಟಾಕ್ಷ
ಇಲಾಖೆಗಳಲೂ ಲಂಚವಿತ್ತರೆ
ಮಾತ್ರ ಅಧಿಕಾರಿಗಳ ದರ್ಶನ
ಕೋರ್ಟು ಕಛೇರಿ ಸರ್ಕಾರಗಳನೂ
ಬಿಡದೆ ಚಾಚಿದೆ ನಿನ್ನ ವ್ಯಾಪ್ತಿ
ಅದೆನಿತು ಹೆಸರುಗಳು ನಿನಗೆ!
ಲಂಚ ಒಂದೆಡೆ ದೇಣಿಗೆ ಒಂದೆಡೆ
ಶುಲ್ಕ ಒಂದೆಡೆ ತೆರಿಗೆ ಮತ್ತೊಂದೆಡೆ
ಕಾಣಿಕೆ ಎನಿಸುವೆ ಕಂದಾಯವೊಂದೆಡೆ
ದೇವನೊಬ್ಬ ನಾಮ ಹಲವು ಎಂಬಂತೆ
ದೇವನಷ್ಟೇ ನಾಮಗಳು ನಿನಗಿಲ್ಲವೇ
ಹುಟ್ಟಿನಿಂದ ಮೊದಲಾಗಿ ಸಾವಿನವರೆಗೂ
ನಿನ್ನದೇ ಋಣದಲಿರಬೇಕು ನಾವು
ನೀನಿರುವೆಡೆ ಅಸಾಧ್ಯವೂ ಸಾಧ್ಯವೇ
ಮೇಜಿನ ಕೆಳಗೆ ಜೇಬಿನ ಒಳಗೆ
ಎಲ್ಲೆಲ್ಲೂ ನಿನ್ನ ಹರಿದಾಟ ಓಡಾಟ
ಸರ್ವಶಕ್ತನೂ ನೀನೆ ಸರ್ವವ್ಯಾಪಿಯೂ ನೀನೆ.
- ಮಾಲತಿ ಮೇಲ್ಕೋಟಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ