ಶುಕ್ರವಾರ, ಜುಲೈ 7, 2023

ಗುರುವಿನ ಮಹತ್ವ (ಲೇಖನ) - ಆಶಾ ಎಲ್ ಎಸ್, ಶಿವಮೊಗ್ಗ.

ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರವಾಣಿಯಂತೆ- ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿತಾಗ ಅದು ಸಿದ್ಧಿಸುತ್ತದೆ. ಮುಂದೆ ಗುರಿ ಹಿಂದೆ ಗುರು ಇರಬೇಕು. ಕೇವಲ ಶಾಲೆಯಲ್ಲಿ ಕಲಿಯುವ ಪಾಠಗಳು ಮಾತ್ರ ಪಾಠಗಳಲ್ಲ. ಅದು ಅಲ್ಪಮಟ್ಟಿಗೆ ವ್ಯವಹಾರ ಜ್ಞಾನವನ್ನು ನೀಡಬಹುದಷ್ಟೇ. ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಅನ್ನುವ ನುಡಿ ಕೇಳಿ ಬೆಳೆದವರು ಎಲ್ಲರೂ. ಹೆಜ್ಜೆ ಇಡಲು ಕಲಿಯುವುದು ಮನೆಯಿಂದಲೇ, ತಾಯಿಯ ಮುಂದೆಯೇ. ನಡೆಯುವಾಗ ಬಿದ್ದಾಗ ಎದ್ದು ನಿಲ್ಲಿಸುವಳು, ಮುಂದೆ ಹೋಗಲು ಸಹಕರಿಸುವವಳು ಜನನಿ. ಹಾಗೆಯೇ ಲೋಕಜ್ಞಾನ ಪಡೆಯಲು ಪಾಠಶಾಲೆ ಬೇಕಾಗುತ್ತದೆ. ಆದರೆ ಅದು ಕೇವಲ ಉರು ಹೊಡೆದು ನೀಡಿರುವ ಪಾಠಗಳ ಕುರಿತು ಪರೀಕ್ಷೆ ಬರೆದು ಅಂಕ ಗಳಿಸುವತ್ತಲೇ ಗಮನ ಹರಿಸಬೇಕಾಗುತ್ತದೆ. ಈಗಿನ ಒತ್ತಡದ ಜೀವನದಲ್ಲಿ ಅಂಕಗಳಿಕೆಯೇ ಮುಖ್ಯವಾಗಿರುವ ಹಿನ್ನೆಲೆಯಲ್ಲಿ, ಮಕ್ಕಳು ಮಾನಸಿಕವಾಗಿ ಕುಗ್ಗುವ, ಅನ್ಯ ದಾರಿ ಹಿಡಿಯುವುದನ್ನು ನಾವು ಕಾಣಬಹುದಾಗಿದೆ. ಶಾಲೆಯ ಪಠ್ಯಗಳು ಉತ್ತಮ ಜೀವನವನ್ನು ರೂಪಿಸುವಲ್ಲಿ, ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸುವಲ್ಲಿ ಅಸಾಧ್ಯ ಅಂತಲೇ ಹೇಳಬಹುದೇನೋ. ಅದೂ ಅಲ್ಲದೇ ಶಾಲೆಗೆ ಉತ್ತಮ ಅಂಕಗಳಿಕೆಯ ಹಿನ್ನೆಲೆಯಲ್ಲಿ ಶಿಕ್ಷಕರೂ ಸಹ ಅದರತ್ತಲೇ ಗಮನ ಹರಿಸಬೇಕಾಗಿರುವುದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನಿರೀಕ್ಷಿಸುವುದು ಕಷ್ಟಸಾಧ್ಯ. ಆದರೂ ಹಲವು ಶಿಕ್ಷಕರು ಈ ನಿಟ್ಟಿನಲ್ಲಿ ಹೆಚ್ಚಿನ ಪರಿಶ್ರಮವನ್ನು ಹಾಕುತ್ತಿರುವುದನ್ನು ಇತ್ತೀಚೆಗೆ ನಾವು ಕಾಣಬಹುದಾಗಿದೆ. ಹಿಂದಿನ ಗುರುಕುಲ ಸಂಸ್ಕೃತಿಯಲ್ಲಿ ಉತ್ತಮ ಸಂಸ್ಕಾರಯುಕ್ತ ವಿದ್ಯಾಭ್ಯಾಸ ಮಾಡುವ ಅವಕಾಶವಿದ್ದುದನ್ನು ಪುರಾಣಗಳಿಂದ, ಇತಿಹಾಸದಿಂದ ತಿಳಿಯಬಹುದಾಗಿದೆ. ಪ್ರಸ್ತುತ ದಿನಗಳಲ್ಲಿ ಸಂಸ್ಕಾರ, ಸಂಸ್ಕೃತಿಗಳ ಕಲಿಕೆ ಮನೆಯಿಂದಲೇ ಪ್ರಾರಂಭಿಸಬೇಕು.   ಮಕ್ಕಳು ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಸೂಕ್ತ ಮಾರ್ಗದರ್ಶಕರನ್ನು ಪಡೆದು ತಮ್ಮ ಗುರಿ ಸಾಧಿಸುವಲ್ಲಿ, ಯಶಸ್ಸು ಗಳಿಸುವಲ್ಲಿ ಹೆಜ್ಜೆ ಇಡಬೇಕು. ಸರ್ವಜ್ಞನ ವಚನದಂತೆ- ಮೊಸರ ಕಡೆಯಲು ಬೆಣ್ಣೆ, ಒಸೆದು ತೋರುವ ತೆರದಿ ಹಸನುಳ್ಳ ಗುರುವಿನುಪದೇಶ ದಿಂ ಮುಕ್ತಿ ವಶವಾಗದಿಹುದೇ- ಸರ್ವಜ್ಞ...ಎಷ್ಟು ಅರ್ಥಪೂರ್ಣವಲ್ಲವೇ.

ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ- ಮಡಕೆಯ ಮಡುವಡೆ ಮಣ್ಣೇ ಮೊದಲು, ತೊಡುಗೆಯ ಮಾಡುವಡೆ ಹೊನ್ನೆ ಮೊದಲು, ಶಿವಪಥವನರಿವಡೆ ಗುರುಪಥವೆ ಮ್ದಲು, ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು...ಶಿವಪಥದಲ್ಲಿ ಸಾಗಬೇಕೆನ್ನುವ ಭಕ್ತನಿಗೆ ಗುರುವಿನ ಮಾರ್ಗದರ್ಶನ ಬೇಕು. ಗುರುಶಿಷ್ಯರು ಎರಡು ಕಣ್ಣುಗಳಿದ್ದ ಹಾಗೆ. ಹಾಗೆ ಒಬ್ಬನೇ ವ್ಯಕ್ತಿ ಶಿಷ್ಯನೂ ಆಗಬಲ್ಲ, ಗುರುವೂ ಆಗಬಲ್ಲ. ಶಿಷ್ಯನಲ್ಲಿರು ಭ್ರಾಂತಿಯನ್ನು ಸರಿಯಾದ ಜ್ಞಾನದ ಮೂಲಕ ನಿವಾರಿಸುವ ಕಾರ್ಯವನ್ನು ಗುರುವು ಮಾಡಬೇಕು.

ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ ಎನ್ನುವ ಇನ್ನೊಂದು ವಚನದಂತೆ - ಶಿಷ್ಯನ ಅಹಂಕಾರ ಅಜ್ಞಾನಗಳನ್ನು ಗುರು ತೊಡೆಯಬೇಕು. ಇಲ್ಲವಾದರೆ ಆತ ಒಳ್ಳೆಯ ಗುರುವಾಗುವುದಿಲ್ಲ. ಒಳ್ಳೆಯ ಶಿಷ್ಯ ಸಿಕ್ಕರೆ ಗುರು ಗೆದ್ದಂತೆ ಎನ್ನುವುದು ಗುರುವಿನ ಗೆಲುವು ಆದರ್ಶ ಶಿಷ್ಯ ಸಿಕ್ಕಾಗ ಎನ್ಧುವುದು ಇದರಿಂದ ವ್ಯಕ್ತವಾಗುತ್ತದೆ. ಜ್ಞಾನದಿಂದಲಿ ಇಹವು, ಜ್ಞಾನದಿಂದಲಿ ಪರವು, ಜ್ಞಾನವಿಲ್ಲದಿರೆ ಸಕಲವೂ ತನಗಿದ್ದು ಹಾನಿ ಕಾಣಯ್ಯ ಸರ್ವಜ್ಞ- ಅರಿವೇ ಗುರು.

ಜ್ಯೋತಿಷ್ಯ ದಲ್ಲಿಯೂ ಸಹ ಗುರುಗ್ರಹ ಮುಖ್ಯವಾಗಿರುತ್ತದೆ. ಜೊತೆಗೆ ಮಿತ್ರಗ್ರಹಗಳಿದ್ದರೆ, ಶುಭ, ಶತ್ರು ಗ್ರಹಗಳಿದ್ದರೆ ಅಶುಭ .. ಮನೆನಿರ್ಮಾಣ ಕಾರ್ಯಕ್ಕೆ, ಮದುವೆ, ಉಪನಯನ, ಶುಭಕಾರ್ಯಗಳಿಗೆ ಗುರುಬಲ ನೋಡುವುದು ಸಾಮಾನ್ಯ. ಜ್ಯೋತಿಷಿಗಳು ಇದರ ಕುರಿತು ಹೇಳುತ್ತಾರೆ- ಪೂರ್ವದ ಕಡೆ ಜನನ, ಉತ್ತರದ ಕಡೆ ಒಳ್ಳೆಯ ಭೋಗಗಳು, ಪಶ್ಚಿಮದ ಕಡೆ ಸ್ವಲ್ಪ ರೋಗರುಜಿನ, ದಕ್ಷಿಣಜ ಕಡೆ ಪ್ರಯಾಣ ಅಂತೆ. ವಾಸ್ತುವಿನಲ್ಲಿಯೂ ಹಾಗೆಯೇ- ಅಗ್ನಿಯ ಅಡಿಗೆ, ಈಶಾನ್ಯದ ನಡಿಗೆ, ವಾಯುವ್ಯದ ಹೇಸಿಗೆ, ನೈರುತ್ಯದ ನಿದ್ದೆ ಎಂದು ಜ್ಯೋತಿಷ್ಯ, ವಾಸ್ತುವಿನಲ್ಲೂ ಸಹ ಗುದುಗ್ರಹದ ಕುರಿತು ಮಾಹಿತಿ ನೀಡುತ್ತಾರೆ.

ಗುರುಬ್ರಹ್ಮ ಗುರುರ್ವಿಷ್ಣೋ ಗುರುರ್ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂದು ಅಂದು ಶಾಲೆಗಳಲ್ಲಿ ಕೇಳಿಬರುತ್ತಿದ್ದ ತರಗತಿ ಪ್ರಾರಂಭದ ಪ್ರಾರ್ಥನೆ.  ಈಗ ಗುರುವೇ ನಮಃ ಎನ್ನುವಲ್ಲಿ ಗುರುವೇನ್ ಮಹಾ ಎನ್ನುವಂತಹ ಶಿಷ್ಯರೂ ಸಹ ಇದ್ದಾರೆ. ನಾನು ಹೇಳಿದ್ದನ್ನು ಮಾತ್ರ ಕೇಳಬೇಕು ಎಂದರೆ ಆತ ನಿಜವಾದ ಗುರುವೂ ಅಲ್ಲ, ಹಾಗೆ ಕೇಳಿದರೆ ಆತ ಶಿಷ್ಯನೂ ಅಲ್ಲ. ಶಿಷ್ಯ ಪ್ರಶ್ನೆಗಳನ್ನು ಕೇಳಬೇಕು, ಗುರು ತಾಳ್ಮೆಯಿಂದ ಉತ್ತರ ನೀಡಬೇಕು. ಗ ಗುರುಶಿಷ್ಯರ ಬಾಂಧವ್ಯಕ್ಕೆ, ಸಂಬಂಧಕ್ಕೆ ವಿಶೇಷ ಗೌರವ ಬರುವುದು. ಸಾವಿರಾರು ಸೂರ್ಯ ಚಂದ್ರರು ಹುಟ್ಟಿಬಂದರೂ ಹೃದಯದ ಒಳಗಿನ ಕತ್ತಲೆಯನ್ನು ಹೋಗಲಾಡಿಸಲು  ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ಸಾಧ್ಯವಾಗುವುದು

ಶಾಲೆಯ ಪಾಠಕ್ಕಿಂತ ಜೀವನ ಪಾಠ ದೊಡ್ಡದು. ಜೀವನದಲ್ಲಿ ಬರುವ ಪರಿಸ್ಥಿತಿಗಳೆಂಬ ಗುರುಗಳು ಹೇಗೆ ಬದುಕಬೇಕೆಂಬುದನ್ನು ಕಲಿಸಿಕೊಡುತ್ತವೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು, ಮೇಟಿ ವಿದ್ಯೆಯಿಂದ ರಾಟಿ ನಡೆದುದಲ್ಲದೇ ದೇಶ ದಾಟವೇ ಕೆಡಗು ಸರ್ವಜ್ಞ...
- ಆಶಾ ಎಲ್ ಎಸ್  ಶಿವಮೊಗ್ಗ.


ಮಳೆರಾಯ (ಕವಿತೆ) - ವಸಂತ ಪುಂಡಲೀಕ, ಬಾಗೇವಾಡಿ.

ಮೋಡ ಮುಸುಕಿರಲು ನಯನ ಸಂತಸದಿ ಬಾನು ನೋಡಿದೆ, ಬಿಸಿಲಿನ ಬೇಗೆಗೆ ಭೂಮಿ ಬೆಂದಿರಲು ಮೋಡ ನೋಡಿ ಸಂತಸವ ಪಟ್ಟಿದೆ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.

ವರ್ಷಧಾರೆಗೆ ಭೂಮಿ ಹಾತೋರೆದಿರಲು ನೀ ಬಂದು ಬಾಯಾರಿಕೆಯ ತನಿಸಬಾರದೆ, ಎಷ್ಟೋ ರೈತರ ಕನಸು ಮುರಿದಿರಲು ನೀ ಬಂದು ಅವರನ್ನೊಮ್ಮೆ ನಗಿಸಬಾರದೆ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.

ಪಶು ಪಕ್ಷಿ ಸಂಕುಲವು ದಾಹದಿ ಬೆಂದಿರಲು ನೀ ಬಂದು ಸಂತಸದಿ ನಕ್ಕು ನಗಿಸಬಾರದೆ, ಮಲೆನಾಡ ಮೈ ಬಣ್ಣ ಮಾಸಿ ಹೋಗಿರಲು ನೀ ಬಂದು ಬಣ್ಣವ ಬಳಿಯಬಾರದೆ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.

ಕುಲ ಕೋಟಿ ಜೀವಗಳಿಗೆ ಆಸರೆಯಾಗಿರಲು ನೀ ಬಂದು ತನು ಮನವ ತನಿಸಬಾರದೆ, ಬಂದ ಹಾಗೆ ಮಾಡಿ ನೀ ಮರಳಿ ಹೋಗುತಿರಲು ಮನದಿ ಮೂಡಿದ ಸಂತಸ ಸಂಗಡ ವಾಗುವುದೇ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.
    
      
- ವಸಂತ ಪುಂಡಲೀಕ, ಬಾಗೇವಾಡಿ.

ಬಣ್ಣದ ಬದುಕು ಯಾಕೂಬ(ಕೃತಿ ಪರಿಚಯ) - ಕೆ. ಎನ್. ಚಿದಾನಂದ.

ಬದುಕು - ಅನುಭವಗಳ ಸಾಗರ. ಸಾರವೂ ಹೌದು. ಬದುಕಿನ ಒಂದೊಂದು ಅನುಭವವೂ ಅಮೂಲ್ಯವೇ ಆಗಿರುತ್ತದೆ. ಕೆಲವು ಅನುಭವಗಳು ವಿಭಿನ್ನವಾದರೆ, ಮತ್ತೆ ಕೆಲವು ಅನುಭವಗಳು ವಿಶಿಷ್ಟವಾಗಿರುತ್ತವೆ. ಕೆಲವೊಂದಷ್ಟು ವಿಚಿತ್ರವಾದ ಅನುಭವಗಳಾದರೆ ಮತ್ತೊಂದಷ್ಟು ವೈವಿಧ್ಯಮಯವಾಗಿರುತ್ತವೆ. ಜೀವನದ ಪ್ರತೀ ಕ್ಷಣವನ್ನು ನಾವು ಅನುಭವಗಳಿಂದಲೇ ತಿಳಿದುಕೊಳ್ಳುತ್ತೇವೆ ಮತ್ತು ಕಲಿತು ಕೊಳ್ಳುತ್ತೇವೆ. ಬದುಕಿನಲ್ಲಿ ನಾವೆಷ್ಟು ಕಷ್ಟ , ದುಃಖ, ನೋವು ಸಂಕಟಗಳನ್ನು ಅನುಭವಿಸಿದ್ದೇವೆ ಎನ್ನುವುದಕ್ಕಿಂತ ಅವುಗಳಿಂದ ಹೊರಬರಲು ನಾವೆಷ್ಟು ಶ್ರಮಿಸಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಮಿನುಗುತಾರೆಯಂತಿರುವ ಪ್ರತಿಭಾವಂತ ಸಾಹಿತಿಗಳಾದ ಗೊರೂರು ಅನಂತರಾಜು ರವರು ವಿಭಿನ್ನ ರೀತಿಯ ಸಾಹಿತ್ಯ ಕ್ಷೇತ್ರಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುತ್ತಾ ಬದುಕಿನ ಅನುಭವ ಕಂಡವರು. " ಬಣ್ಣದ ಬದುಕು ಯಾಕೂಬ " ಎಂಬ ಶಿರೋನಾಮೆಯಡಿಯಲ್ಲಿ ಹೊರಬರುತ್ತಿರುವ ಪುಸ್ತಕವು ಬಡ ಕಲಾವಿದನ ಜೀವನ ಯಾನವನ್ನು ಕಟ್ಟಿಕೊಡುತ್ತದೆ. ಗೊರೂರು ಅನಂತರಾಜು ರವರ ಆತ್ಮೀಯ ಬಾಲ್ಯದ ಗೆಳೆಯ ಯಾಕೂಬ ಕಲೆಯಲ್ಲಿ ಅರಳಿದ ಕುಸುಮವಾಗಿದ್ದು ನಗುಮೊಗದ ವ್ಯಕ್ತಿ. ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಮನೋಭಾವದವರು. ಬದುಕಿನ ಅದೇಷ್ಟೋ ಕಷ್ಟಗಳನ್ನು ಅನುಭವಿಸಿ ಹೊರಬಂದವರು. ಇವರ ಬದುಕನ್ನು ಬಣ್ಣ ಬಣ್ಣದ ಪದಗಳೆಂಬ ಚುಕ್ಕಗಳಿಂದಾದ ಸುಂದರವಾದ ರಂಗೋಲಿಯಂಥ ಲೇಖನವು ಈ ಪುಸ್ತಕಕ್ಕೆ ಒಪ್ಪುವಂತಹದ್ದಾಗಿದೆ. ಬಣ್ಣದ ಬದಕಿನಲ್ಲಿಯೇ ಬದುಕನ್ನು ಕಾಣುತ್ತಿರುವ ಯಾಕೂಬನಿಗೆ ಗೊರೂರು ಅನಂತರಾಜು ರವರಿಂದ ನೀಡಲ್ಪಟ್ಟ ಬಹುದೊಡ್ಡ ಕಾಣಿಕೆಯೇ ಈ ಹೊತ್ತಿಗೆಯಾಗಿದೆ. 

ಓರ್ವ ಸಾಹಿತಿಯಾಗಿ ರಂಗಭೂಮಿ ಕ್ಷೇತ್ರದಲ್ಲಿ ನ ನಾಟಕಗಳ ಕುರಿತಾದ ಆಸಕ್ತಿಕರ ವಿಷಯಗಳು ಮತ್ತು ಕಲಾವಿದರ ಬಣ್ಣದ ಬದುಕಿನ ನೈಜ ಚಿತ್ರಣಗಳನ್ನು ವೈಶಿಷ್ಟ್ಯಪೂರ್ಣವಾಗಿ ಓದುಗರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಿ ಬದುಕಿನ ನೈಜ ಚಿತ್ರಣ ದಿಂಡಗೂರು ತಂಡದ ಕೇರಿ ಹಾಡು ಲೇಖನದಲ್ಲಿ ಚಿತ್ರಿಸಿದಂತೆ ನಾಟಕದಲ್ಲಿ ಬರುವ 73 ವಯಸ್ಸಿನ  ತಿಮ್ಮಯ್ಯನವರು ಕೇರಿಯ ಹಿರಿಯ ವ್ಯಕ್ತಿಯಾಗಿದ್ದು, ನಾಟಕದಲ್ಲಿ ಹಾಡುತ್ತಾ ಕಥೆ ಕಟ್ಟುತ್ತಾ ಹಟ್ಟೆ ಜನರ ಮಾರ್ಗದರ್ಶಕರಾಗಿ ರಂಗದ ಮೇಲೆ ಬಂದು ಹೋಗುವ ಚಿಕ್ಕ ಚಿಕ್ಕ ಘಟನೆಗಳನ್ನು ನಿರ್ಲಕ್ಷಿಸದೇ ಪ್ರಸ್ತಾಪಿಸುವ ವೈಖರಿ ನಿಜಕ್ಕೂ ವಿಭಿನ್ನವಾಗಿದೆ. ಚಲಂ ಹಾಡ್ಲಹಳ್ಳಿಯವರು ಏರ್ಪಡಿಸಿದ ಸ್ತ್ರೀ ತನದ ಸಂವೇದನೆಗಳನ್ನು ಹೊರ ಹಾಕುವ ನವ್ಯ ಅಭಿವ್ಯಕ್ತಿ : ಲೀಕ್ ಔಟ್ ಎಂಟ ನಾಟಕದಲ್ಲಿ ಸ್ತ್ರೀಯೋರ್ವಳ ಅಂತರಾತ್ಮದ ಸಂವೇದನೆಗಳು ಹೇಗೆ ಲೀಕ್ ಔಟ್ ಆಗುತ್ತವೆ ಎಂಬುದನ್ನು ವಿಭಿನ್ನವಾಗಿ ಚಿತ್ರಿಸಿ ಬರೆದಿದ್ದಾರೆ. 

ಸಹ ಬಾಳ್ವೆಯ ಸಂದೇಶ ಸಾರುವ ಕೌಟುಂಬಿಕ ಕಥಾನಕ ಲೇಖದಲ್ಲಿ ನಿಂಗವ್ವನ ಪಾತ್ರ ಇಂದಿನ ಸಮಾಜದಲ್ಲಿನ ಸಂಕೇತದಂತಿದೆ. ಹಾಗೂ ಮುದುಕಪ್ಪನು ಹಲುಬುವ ತನ್ನ ಯಾತನೆಯ ಮಾತು " ಓ ದೇವರೇ ವಯಸ್ಸಾದ ನಮ್ಮನ್ನು ಈ ಭೂಮಿ ಮೇಲೆ ಏಕೆ ಉಳಿಸಿದ್ದೀಯ, ಬೇಗನೆ ಕರೆದು ಕೊಳ್ಳಬಾರದೇ " ಎಂಬುದು ಸಾರ್ವತ್ರಿಕವಾದ ಹೇಳಿಕೆಯಾಗಿದೆ. ಒಟ್ಟಾರೆ ನಾಟಕದ ಸಾರಾಂಶ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಓದಿನ ಮಹತ್ವ ಸಾರುವ ಶೈಕ್ಷಣಿಕ ಸಿನೆಮಾ ಅಂಗೈಲಿ ಅಕ್ಷರ ಲೇಖನವನ್ನು ಓದುಗರು ಒಮ್ಮೆ ಓದಿದರೆ ಸಿನೆಮಾವನ್ನು ತಾವೂ ಒಮ್ಮೆ ನೋಡಬೇಕೆನ್ನಿಸುವಷ್ಟರ ಮಟ್ಟಿಗೆ ಲೇಖನ ಬಿಂಬಿಸುತ್ತದೆ. ಜೋಕೆ ಬಾಳು ಬೆಳ್ಳಿಯ ಮಿಂಚು ಕಣ್ಣು ಕತ್ತಲ ಸಂಚು ಎಂಬ ಲೇಖನದಲ್ಲಿ ಪಾರ್ಕ್ ರೋಡ್ 100 ರೂಪಾಯಿ ಎಂಬ ಸಿನೆಮಾದಲ್ಲಿನ ಹಿಂಸೆಯನ್ನು ಅನಾವರಣ ಮಾಡುವ ಸನ್ನಿವೇಶಗಳು ಮತ್ತು ಹಿಂಸೆ ಎಷ್ಟು ಕೆಟ್ಟದ್ದು ಎಂದು ನಾವಂದುಕೊಳ್ಳು ತ್ತೇವೆಯೋ ಅದನ್ನು ನೋಡಲು ಮನಸ್ಸು ಹಾತೊರೆಯುವುದು ಈ ವಿಶ್ವದ ಆಶ್ಚರ್ಯವೇ ಸರಿ ! ಇದಕ್ಕೆ ಸಾಕ್ಷಿಯಾಗಿ ಅಣ್ಣಾವ್ರ ಜೇಡರ ಬಲೆ ಸಿನೆಮಾವನ್ನು ಹೆಸರಿಸುತ್ತಿ ಫೈಟಿಂಗ್ ಗಳು ಅಂದಿನಿಂದ ಇಂದಿನವರೆಗೂ ಮುಂದುವರಿದ ಭಾಗವಾಗಿ ಕಾಣಬರುತ್ತವೆ ಎನ್ನುತ್ತಾರೆ.

" ಸಿಂಹಧ್ವನಿ ಸಂಪಾದಕ ಬಿ.ಎಂ ನಂದೀಶ್ " ಎಂಬ ಲೇಖನವು ಶ್ರೀ ಬಿ.ಎಂ ನಂದೀಶ್ ರವರು 2022ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಿಕೋಧ್ಯಮ ವಿಭಾಗದಿಂದ ಆಯ್ಕೆಯಾದದ್ದು ಮತ್ತು ಮೂವತ್ತಕ್ಕೂ ಅಧಿಕ ವರ್ಷಗಳ ಕಾಲದ ಪತ್ರಿಕೋದ್ಯಮದ ನೋವು ನಲಿವುಗಳ ಅನುಭವವುಂಡವರು. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಮಹಾನಂದಿ ಪತ್ರಿಕೆಯಲ್ಲಿ ಪಡೆದ ವಿಭಿನ್ನ ರೀತಿಯ ಅನುಭವಗಳು , ನಂತರ ಮೈಸೂರು ಮಿತ್ರ ಪತ್ರಿಕಾ ವಿಭಾಗದಲ್ಲಿ ಪಡೆದ ಅನುಭವಗಳು, ನಂತರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿನ ಅನುಭವಗಳು, ನಂತರ 2019 ರಲ್ಲಿ ತಾವೇ ಸಂಪಾದಕರಾಗಿ ಸಿಂಹಧ್ವನಿ ಪತ್ರಿಕೆಯನ್ನು ಪ್ರಾರಂಭಿಸಿ 4ನೇ ವಸಂತವನ್ನು ಪೂರೈಸಿ ತಮ್ಮ 32 ವರ್ಷಗಳ ಸುದೀರ್ಘ ಪಯಣದ ಹಾದಿಯಲ್ಲಿ ಜಿಲ್ಲಾಡಳಿತ ಅವರನ್ನು ಗುರ್ತಿಸಿ ಸನ್ಮಾನಿಸಿದ ಪ್ರಸಂಗಗಳ ನೆನಪುಗಳನ್ನು ಗೊರೂರು ಅನಂತರಾಜುರವರು ವಿವರವಾಗಿ ಬರೆದಿದ್ದಾರೆ. 

ಬೀದಿ ನಾಟಕದ ಹಾದಿಯಲ್ಲಿ ಬಿ. ಟಿ. ಮಾನವ ಹಿಂತಿರುಗಿ ನೋಡಿದಾಗ , ಕನಕದಾಸರ ಜೀವನಾಧಾರಿತ " ಮಹಾತ್ಮಾ ಕನಕದಾಸ " ನಾಟಕ, ನೆನಪಿನ ಅಂಗಳದಲ್ಲಿ ನಾ ಓದಿನ ನಮ್ಮರ ಶಾಲೆ , ಟೀಚರ್ ಕೋಚಿಂಗ್ ಸ್ಟೂಡೆಂಟ್ ಲಾಫಿಂಗ್ , ಉತ್ತಮ ರಂಗಪ್ರಯೋಗ ಟಿಪ್ಪುವಿನ ನಿಜ ಕನಸುಗಳು, ರಂಜಿಸಿದ ರಂಗಾಯಣ ನಾಟಕವಿ ದ ಪೀಪಲ್ ಆಫ್ ಇಂಡಿಯಾ , ವಿಭಿನ್ನ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂ ದರೇ..! , ಸೋದರನೆ ಶಿವನು ಶಾಸ್ತ್ರಿಗಳ ಶಿವನಲ್ಲ , ಆಷಾಡದ ಮಳೆಯ ಅಬ್ಬರ ಕಲಾಕ್ಷೇತ್ರದಲ್ಲಿ ಕಲೆಯ ನರ್ತನ , ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಡುವ ಬೇತಾಳ ಹೇಳಿದ ಸುಳ್ಳು ಕಥೆ , ಗಂಡ ಹೆಂಡತಿ ಜಗಳಗಂಟಿ ಜೀವನದ ಯಥಾ ಪ್ರಕಾರ , ರಂಗದಿಂದ ಕಾಮಿಡಿ ಗ್ಯಾಂಗ್‌ವರೆಗೆ ಚಿತ್ರದುರ್ಗ ತಿಪ್ಪೇಸ್ವಾಮಿ , ಭರವಸೆಯ ನಟಿ ವೇದ ಎಂ.ವೈ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಕಲೆಯ ಹೊಳೆಯಲ್ಲಿ ಮಿಂದೆದ್ದವರು ಹೊಳೆನರಸೀಪುರ ಮಂಜುನಾಥ್, ರಂಜಿಸಿದ ಪೌರಾಣಿಕ ನಾಟಕಗಳು ರಂಗಗೀತೆಗಳೇ ಮೇಲುಗೈ , ತರಗೆಲೆಯ ಬದುಕಿನ ಮಹಾಭಾರತ ಪದ್ಮವ್ಯೂಹ ನಾಟಕ , ಗೊರೂರು ಅನಂತರಾಜು ಅವರ ಹಾಸ್ಯ ನಾಟಕಗಳು, ಪ್ರಹಸನಗಳು , ಕನ್ನಡ ರಂಗಭೂಮಿಯ ಆ ವೈಭವದ ದಿನಗಳು! , ಗೊರೂರು ಅನಂತರಾಜು ಅವರ ರಂಗಸಿರಿ ಕಥಾ ಐಸಿರಿ , ಸಾವಿನ ಸತ್ಯಕ್ಕೆ ಮೂರ್ತ ರೂಪ : ದಾರಿ ಯಾವುದಯ್ಯ ವೈಕುಂಟಕ್ಕೆ , ವಸಂತಕುಮಾರ್ ಪ್ರಕೃತಿ ಚಿತ್ರಣದಲ್ಲಿ ಹಾಸನದ ಮಹಾರಾಜ ಪಾರ್ಕ್‌, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕನ್ನಡಾಭಿಮಾನಿ ಬಿ.ಆರ್.ತೀರ್ಥಂಕರ, ರಸ್ತೆ ಬದಿಯಲ್ಲಿ ಜನರಗಮನ ಸೆಳೆದ ಸಮೂಹ ಚಿತ್ರಕಲಾ ಪ್ರದರ್ಶನ , ಸೃಜನಶೀಲ ಕಲಾ ನೈಪುಣ್ಯದ ಚಂದ್ರಕಾಂತ್ ನಾಯ‌ ಅವರ ಕಲಾಕೃತಿಗಳು , ಮೊದಲ ಪ್ರಯೋಗದಲ್ಲಿಯೇ ಜನಮನ ಗೆದ್ದ ಇವನಾರವ ನಾಟಕ , ರಂಗಾಯಣ ತಂಡದ ಭಾರತ ಸಂವಿಧಾನ ಆಶಯದ ಸೂತ್ರದಾರ ನಾಟಕ , ಆ ತರಹ ಕಿಲ ಕಿಲ ನಗುಬೇಡ ವಿಲನ್ ನಗು ಇರಲಿ..! ಕಿರು ಪ್ರಹಸನ , ಭರವಸೆಯ ಚಿತ್ರಕಲಾವಿದ ಬಿ.ಎಸ್.ನಂದನ , ದೇವಿಮಹಾತ್ರೆಯಿಂದ ನಾರದನ ಪಾತ್ರದವರೆಗೆ ಗೋವಿಂದೇಗೌಡರು , ದುರ್ಯೋಧನ ಪಾತ್ರಕ್ಕೆ ಪ್ರಶಸ್ತಿ ಪುರಸ್ಕೃತ ಜಗದೀಶ್ ರಾಮಘಟ್ಟ , ಸಾಹಿತ್ಯ ಸಮ್ಮೇಳನದಲ್ಲಿ ವರ್ಣಮಿಲನ ಚಿತ್ರಕಲಾ ಪ್ರದರ್ಶನ , ಮತ್ತೆ ಮತ್ತೆ ಬಣ್ಣ ಹಚ್ಚಬೇಕು ಕುಣಿಯಬೇಕು , ದೇಶಿ ಕಲಾಕೃತಿಗಳ ಏಕವ್ಯಕ್ತಿ ಚಿತ್ರ ಕಲಾಪ್ರದರ್ಶನ , ಪ್ರವೀಣ್ ಕುಂಚದಲ್ಲಿ ಕ.ಸಾ.ಪ.ಗೋಡೆ ಅಲಂಕರಿಸಿದ ಜಿಲ್ಲಾ ಸಾಹಿತಿಗಳು , ವ್ಯಂಗ್ಯ ಚಿತ್ರಕಾರ ಸು.ವಿ.ಮೂರ್ತಿ ಅವರ ಗೆರೆಬರೆ:ಪ್ರಶಸ್ತಿ ಸಾಧನೆ , ಚಿತ್ರಕಲೆಯ ಪ್ರತಿಭೆ ಎಲ್.ಜಿ.ಲತಾ , ದೇಶಿ ಕಲಾಕೃತಿಗಳ ಏಕವ್ಯಕ್ತಿ ಚಿತ್ರ ಕಲಾಪ್ರದರ್ಶನ, ಜನಪದ ಕಲೆಯ ಆರಾಧಕ ಗಾಯಕ ದೇವಾನಂದ ವರಪ್ರಸಾದ್ , ಸಾಹಿತ್ಯ ಪರಿಷತ್ ಒಡನಾಟದಲ್ಲಿ ಡಾ.ಉದಯರವಿ ಹೀಗೆ ವಿಭಿನ್ನ , ವಿಶಿಷ್ಠ ಹಾಗೂ ವೈವಿಧ್ಯಮಯ ಲೇಖನಗಳು ಸಾಮಾಜಿಕ , ಸಾಂಸ್ಕೃತಿಕ , ಕಲಾತ್ಮಕ , ಸಾಹಿತ್ಯಿಕ , ವ್ಯಕ್ತಿ ಚಿತ್ರಣ ಮುಂತಾದ ರೀತಿಯಲ್ಲಿ ಅನುಭವಗಳ ಸರಮಾಲೆಯನ್ನೇ ಬಣ್ಣದ ಬದುಕು ಯಾಕೂಬ ಎಂಬ ಪುಸ್ತಕವು ಹೊಂದಿದ್ದು ಗೊರೂರು ಅನಂತರಾಜುರವರು ತಮ್ಮ ಲೇಖನಗಳ ವಿನ್ಯಾಸಾತ್ಮಾಕ ವೈಖರಿಯನ್ನು ಮೆರೆದಿದ್ದಾರೆ. ಸೂಕ್ತ ಪದಗಳ ಪರಿಕಲ್ಪನೆಗಳನ್ನು ಓದುಗರಿಗೆ ನೀಡಿದ್ದಾರೆ. ನೈಜ ಅನುಭವಗಳನ್ನು ಓದುಗರು ಅನುಭವಿಸುವಂತೆ ಲೇಖನಗಳನ್ನು ಬರೆದಿದ್ದಾರೆ. ಈ ಪುಸ್ತಕವು ಗೊರೂರು ಅನಂತರಾಜುರವನ್ನು ಧ್ರುವತಾರೆಯಂತೆ ಸಾಹಿತ್ಯ ಲೋಕದಲ್ಲಿ ಮಿನುಗುವುದನ್ನು ನೋಡಲು ಸಾಹಿತ್ಯಾಸಕ್ತರ ಮನೋಭಿಲಾಷೆಗೆ ಕಾಣಿಕೆಯಾಗಿ ಹೊರ ಹೊಮ್ಮಲಿ ಎಂಬುದೇ ತುಂಬು ಹೃದಯದ ಆಶಯ.


- ಕೆ. ಎನ್. ಚಿದಾನಂದ, ಸಾಹಿತಿಗಳು,ಹಾಸನ.

ಪರಮಾತ್ಮ ಕಂಡ ಗಂಧದಗುಡಿ (ಸಿನಿಮಾ ವಿಮರ್ಶೆ) - ಪ್ರಾರ್ಥನಾ ಕೆ.ಎಂ ಕಲ್ವಮಂಜಲಿ.

ಮೊದಲನೆದಾಗಿ ಗಂಧದಗುಡಿ ಅಂತ ಕೇಳಿದಾಗ ನೆನಪಿಗೆ ಬರುವುದು ಡಾ.ರಾಜ್ ಕುಮಾರ್ ಅವರ ಗಂಧದಗುಡಿ ಇದರಲ್ಲಿ ಕಾಡನ್ನು ಉಳಿಸಿ ಎಂದು ಹೇಳುತ್ತಾರೆ .ಅಪ್ಪು ಈ ಗಂಧದಗುಡಿ ಸಿನಿಮಾ ಒಂದು ಸಾಕ್ಷ್ಯ ಚಿತ್ರವಾಗಿದ್ದು ಇದನ್ನು ಕಥಾಚಿತ್ರವಾಗಿ ಬದಲಾಯಿಸಿದರು.
ಈ ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ಕೊನೆಯ  ಸಿನಿಮಾ ಆಗಿತ್ತು. ಇದು ಯುವ ಜನರಿಗೆ ಗಿಡನೆಡಲು ಹಾಗೂ ಕಾಡನ್ನು ಸಂರಕ್ಷಣೆಯ ಅರಿವಿಗಾಗಿ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಾಡು ಹಾಗೂ ಅಲ್ಲಿನ ಪರಿಸರ ಪ್ರಾಣಿಗಳ ಬಗ್ಗೆ ಪರಿಚಯಿಸುತ್ತಾ ಹೋಗುತ್ತಾರೆ.
ಅಪ್ಪು ಅವರು ಕಾಡನ್ನು ಅನ್ವೇಷಣೆ ಮಾಡುತ್ತಾ ಹೋಗುತ್ತಾರೆ. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್
ಅವರು ಹುಟ್ಟಿದ ಊರು,ಬೆಳೆದ ಮನೆ,ಅವರು ವಿಶ್ರಾಂತಿ ತೆಗೆದು ಕೊಳ್ಳುತ್ತಿದ ದೊಡ್ಡ ಆಲದ ಮರ
ಎಲ್ಲಾವನ್ನು ಅಪ್ಪು ಅವರು ಮೆಲುಕು ಹಾಕುತ್ತಾರೆ. ಬರೀ ಕಾಡಿನ ಬಗ್ಗೆ ಅಲ್ಲದೆ ಸಮುದ್ರ ದಲ್ಲಿ ವಾಸ ಮಾಡುವ ಜೀವಿಗಳನ್ನು ಅನ್ವೇಷಿಸುತ್ತಾರೆ.ಈ ಸಿನಿಮಾವನ್ನು ನಿರ್ದೇಶಕರಾದ ಅಮೋಘ ಹರ್ಷ ಅವರು ಅವರಿಗೆ ಕಾಡಿನಲ್ಲಿ ಆದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅಮೋಘ ಹರ್ಷ ಹಾಗೂ ಅಪ್ಪು ಅವರು ಒಂದು ಒಳ್ಳೆಯ ಉತ್ತಮ ಸ್ನೇಹಿತ ರಂತೆ ಇದ್ದರು.ಅಪ್ಪು ಅವರಿಗೆ ಕಾಡನ್ನು ಜೀವ,ಜೀವನ,ಕುಟುಂಬ,ಅವರ ಸಿನಿಮಾಗಳ ಬಗ್ಗೆ ಎಷ್ಟು ಒಲವು ಹಾಗೂ ಕನಸಿತ್ತು ಎಂದು ಈ ಸಿನಿಮಾದ ಮೂಲಕ ತಿಳಿದು ಕೊಳ್ಳಬಹುದು.ಸಿನಿಮಾ ಕೊನೆಯಾಗುತ್ತಾ ಇದಂತೆ ಒಂದು ಮಾತು ಹೇಳುತ್ತಾರೆ
ಆ ಮಾತು ಎಲ್ಲಾರ ಕಣ್ಣಂಚಿನಲ್ಲೂ ನೀರು ಬರುತ್ತದೆ.ಆದರೂ ಕೊನೆಯ ಬಾರಿ ಪರಮಾತ್ಮ ನನ್ನು ತೆರೆಯ ಮೇಲೆ ನೋಡಿದ್ದು ನನಗೆ ಸಂತೋಷವಾಯಿತ್ತು.ಈ ಸಿನಿಮಾ ಯಾಕೆ ನೋಡ ಬೇಕು ಎಂದರೆ ಕಾಡನ್ನು ಹಾಗೂ ಅನೇಕ ಪ್ರಾಣಿಗಳ ಬಗ್ಗೆ ಹೇಳುತ್ತಾರೆ.ಅವರ ಅನುಭವಗಳನ್ನು ಅವರ ಮಾತುಗಳ ಮೂಲಕ ತಿಳುಸುತ್ತಾರೆ.ಯಾವುದೇ ಪೈಟ್ ಸಿನ್,ಹಾಡು,ಲವ್ ಸ್ಟೋರಿ ಇಲ್ಲದೆ ಕಾಡು,ಪರಿಸರ,ಜಲಪಾತಗಳ ಮಧ್ಯ ತೆಗೆದಿರುವ ಡಾಕ್ಯುಮೆಂಟರಿ ಸಿನಿಮಾ ಇದಾಗಿದೆ.

 - ಪ್ರಾರ್ಥನಾ ಕೆ.ಎಂ ಕಲ್ವಮಂಜಲಿ, ಕೋಲಾರ.

ಮಲ್ಲಿಯ ಮಲ್ಲಿಗೆ ಸಿಂಚನ ಒಂದು ಅವಲೋಕನ(ಕೃತಿ ಪರಿಚಯ) - ದಯಾನಂದ ಪಾಟೀಲ.

ತೊಗರಿ ನಾಡು ಕಲಬುರ್ಗಿ ಜಿಲ್ಲೆಯ ಯುವ ಸಾಹಿತಿಗಳು ಹಾಗೂ ಓದುಗರ ಮನ ಗೆದ್ದ ಡಾ, ಮಲ್ಲಿನಾಥ ತಳವಾರ ಯವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಮೂಡಿಸಿದವರು, ನೂತನ ಮಹಾ  ವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕ ರಾಗಿ  ಸೇವೆ ಸಲ್ಲಿಸುತ್ತಿದ್ದಾರೆ ಗೀತಾ ನಾಗಭೂಷಣ ಚೆನ್ನಣ್ಣ ವಾಲೀಕಾರ ಯಂತಹ ಸಾಹಿತ್ಯ ಬ್ರಹ್ಮರಿಗೆ ಜನ್ಮ ನೀಡಿದ ಶರಣರು ಸೂಪಿ ಸಂತರು ನಡೆದಾಡುವ  ಪುಣ್ಯಭೂಮಿಯಲ್ಲಿ, ಕಲಬುರ್ಗಿ ಜಿಲ್ಲೆಯ ಡಾ, ಮಲ್ಲಿನಾಥ್ ತಳವಾರ ಯವರು ಗಜಲ್ ಯಾತ್ರೆಯಲ್ಲಿ ಸಾಗಿದ್ದಾರೆ ಮುಂದೆ ಮುಂದೆ ಒಂದೊಂದು ಅರ್ಥ ನೂರಾರು ಅರ್ಥಗಳಿಗೆ ಸಮ ತಮ್ಮ ಜೀವನದಲ್ಲಿ ನಡೆದ ಘಟನೆ ಹಾಗೂ ಭಾವನೆಗಳನ್ನು ಗಜಲ್ ರೂಪದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಹೃದಯ ತಟ್ಟುವ ಗಜಲ್ ಅಂದರೆ ತಪ್ಪಾಗಲಾರದು,,

ಅಸಹಾಯಕತೆಯನ್ನು  ಸದೆಬಡೆದು ನಿಂತವರು ನೀವು,
ಶೋಷಣೆವಿರುದ್ಧ ಸೆಟೆದು ನಿಂತವರು ನೀವು,
ಜೋಪಡಪಟ್ಟಿಯ ಕರಾಳತೆಯನ್ನು ನಗ್ನಗೊಳಿಸಿ ದಿರಿ,
ಲಿಂಗ ತಾರತಮ್ಯವನ್ನು ಜಡಿದು ನಿಂತವರು ನೀವು,

ನಾಡು ಕಂಡ ಅಪ್ರತಿಮ ಸಾಹಿತಿ ಬಂಡಾಯದ ಬೆಂಕಿ ಹಚ್ಚಿ ನಾಡಿಗೆ ಬೆಳಕು ನೀಡಿದ ಡಾ. ನಾಡೋಜ ಗೀತಾ ನಾಗಭೂಷಣ ಅವರು ಒಬ್ಬರು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ದೌರ್ಜನ್ಯ ಮೇಲು-ಕೀಳು ಬೇದ ಭಾವ ಗಳ ವಿರುದ್ಧ ಸಾಹಿತ್ಯದ ಮೂಲಕ ಜನರನ್ನು ಎಚ್ಚರಗೊಳಿಸಿದವರು ಬಡತನದ ರೇಖೆಯಲ್ಲಿ ನರಳುತ್ತಿರುವ ಮುಗ್ಧ ಜನರ ಪರವಾಗಿ ಹೋರಾಟ ಮಾಡಿದವರು ಹೆಣ್ಣು ಗಂಡು ನಡುವೆ ತಂದೆ ತಾಯಿಗಳ ಶೋಷಣೆಯನ್ನು ಎತ್ತಿ ತೋರಿಸಿದವರು ದೇಶಿಭಾಷೆಯಲ್ಲಿ ಸಾಹಿತ್ಯ ಮೂಲಕ ಮನ ತಟ್ಟಿದವರು ಬಡತನದಲ್ಲಿ ನರಳಿ ನರಳಿ ಸಾಯುವ ಮೂಕ ವೇದನೆಯನ್ನು ತಮ್ಮ ಹರಿತ ಲೇಖನಿಯಿಂದ ಬೆಳಕು ತಂದವರು,

ದೇವರ ಆಶೀರ್ವಾದದಿಂದ ಮಗು ಪಡೆದರು,
ದೇವಾಲಯದಲ್ಲಿ ಅನ್ನಕ್ಕಾಗಿ ಕುಂತರು

ಮಕ್ಕಳು ಅಂದರೆ ತಂದೆ ತಾಯಿಗೆ ತುಂಬಾ ಪ್ರೀತಿ ತಮ್ಮ ಜೀವನವನ್ನು ಮಕ್ಕಳಿಗೋಸ್ಕರ ಹಗಲು ಇರುಳು ಎನ್ನದೆ ತ್ಯಾಗ ಮಾಡಿದವರು ಶಿಕ್ಷಣ ಮದುವೆ ಮಾಡುವುದರಲ್ಲಿ ಅರ್ಧ ಆಯಸ್ಸು ಮುಗಿದು ಹೋಗುತ್ತದೆ, ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ  ಆಸೆಯಲ್ಲಿ ಇರುತ್ತಾರೆ ಈ ಸಂತೋಷದ ಸಮಯ ಬಹಳ ದಿವಸ ಇರುವುದಿಲ್ಲ ಹೆಂಡತಿ ಬಂದ ಮೇಲೆ ತಂದೆ ತಾಯಿಯ ಪರಿಸ್ಥಿತಿ ಹೇಳತೀರದು ಸರಿಯಾದ ಪ್ರೀತಿ ಮಮತೆ ತೋರದೆ ವೃದ್ದಾಶ್ರಮಕ್ಕೂ ಅಥವಾ ಬೀದಿಯಲ್ಲಿ ಭಿಕ್ಷೆ ಬೇಡಲು ಅಲೆಯುತ್ತಾರೆ  ಮಕ್ಕಳು ತನ್ನವರು ನಂಬಿಕೆ ಇಡುವ ತಂದೆ ತಾಯಿ ಭಿಕಾರಿ ಯಾಗಿ ಬೇರೆಯವರ ಮುಂದೆ ನಿಲ್ಲುತ್ತಾರೆ,

ನಮ್ಮ ಬದುಕು ನಂದನವನವಾಗಲು ಬೇಕು ನಮಗೆ
ಹಸಿರು,
ಮುಂಬರುವ ಪೀಳಿಗೆ ಉಸಿರಾಡಲು ಬೇಕು ನಮಗೆ ಹಸಿರು,
ಅನಾದಿ ಕಾಲದಿಂದ ಹಿರಿಯರು ಪರಿಸರವನ್ನು ಪ್ರೀತಿಸಿದವರು ಪರಿಸರದಲ್ಲಿ ತಮ್ಮ ಅವರ ಜೀವನ ಅಡಗಿತ್ತು, ಹೊಲದ ಬದುವಿನಲ್ಲಿ ಮನೆಯಂಗಳದಲ್ಲಿ ರಸ್ತೆಯ ಬದಿಯಲ್ಲಿ ಮರಗಳನ್ನು ಬೆಳೆಸಿ ಉತ್ತಮವಾದ ಹಾಗೂ ಶುದ್ಧವಾದ ವಾತಾವರಣ ಮಾಡಿದವರು ಯಾವುದೇ ರೋಗರುಜಿನ ಇಲ್ಲದೆ ಆರೋಗ್ಯವಂತರಾಗಿ ಜೀವನ ಮಾಡಿದವರು ಅದೇ ರೀತಿ ನಾವು ಕೂಡ ಪರಿಸರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡೋಣ,

 ನೀರಿಗಿಂತಲೂ ರಕ್ತ ಗಟ್ಟಿ ಎನ್ನುವರು,
ರಕ್ತ ಹೊಳೆಯಾಗಿ ಹರಿಯುತ್ತಿದೆ ದುಡ್ಡಿಗಾಗಿ,

ನೀರು ಒಬ್ಬನ ಜೀವ ಉಳಿಸಿದರೆ ಹಣಕ್ಕಾಗಿ ಜೀವ ತೆಗೆಯುತ್ತಾರೆ ಸಣ್ಣಪುಟ್ಟ  ಕಾರಣಕ್ಕಾಗಿ ನಾನಾ ರೀತಿಯಲ್ಲಿ ಜೀವ ತೆಗೆದು ರಕ್ತದ ಹೊಳೆಯಾಗಿ ಹರಿಯುತ್ತಿದೆ ಮಾನವನಲ್ಲಿ ಇರಬೇಕಾದ ಪ್ರೀತಿ ವಿಶ್ವಾಸ ದಯೆ ಕರುಣೆ ಸೌಹಾರ್ದತೆ ಮಾನವೀಯತೆ ಮಾಯವಾಗಿ ಮೋಸ ವಂಚನೆ ನಂಬಿಕೆದ್ರೋಹ ತುಂಬಿಕೊಂಡಿವೆ ಯಾವ ರೀತಿಯಾದರೂ ನಡೆಯುತ್ತಿವೆ,
ಹಗಲಿರುಳು ಒಂದೇ ಆಗುತ್ತಿದೆ ದುಡ್ಡಿಗಾಗಿ,
ಶಾಂತಿ ನೆಮ್ಮದಿ ಹರಾಜಾಗುತ್ತಿದೆ ದುಡ್ಡಿಗಾಗಿ,

ಜೀವನ ಬರೀ ಹಣದ ಮೇಲೆ ನಿಂತಿದೆ ಪ್ರತಿಯೊಂದಕ್ಕೂ ಹಣ ಮೇಲೆ ಪ್ರತಿಯೊಬ್ಬನ ಮೇಲೆ ನಿಂತಿದೆ ಹಗಲು ರಾತ್ರಿಯಲ್ಲಿ ದುಡಿದು ಹಣ ಹಣ ಗಳಿಸಬೇಕು ಕೋಟ್ಯಾಧಿಪತಿಯಾಗಬೇಕು ಅಶೆ ಮನದಲ್ಲಿ ಕಾಡುತ್ತದೆ ಹಣ ಇದ್ದರೆ ಇದ್ದರೆ ನೆಮ್ಮದಿ ಶಾಂತಿ ಇರುವುದಿಲ್ಲ ನಾಳೆ ಏನು? ಮಾಡಬೇಕು ಅದೇ ಗುಂಗು ಬೇರೆ ವಿಚಾರವಿಲ್ಲ ಮಾತು ಇಲ್ಲ ಕಥೆ ಇಲ್ಲ ತಮ್ಮ ದಿಮಾಕಿನಲ್ಲಿ ತಾವು ಇರುತ್ತಾರೆ ನೆಮ್ಮದಿ ಕಳೆದುಕೊಂಡು ನಿರಾಶೆಯಲ್ಲಿ ಇರುತ್ತಾರೆ ಹಣ ಬೇಕು ಆದರೆ ಹಣಕ್ಕಾಗಿ ಜೀವನ ಅಲ್ಲ,

ಕಾಲು ಎಳೆಯುವರು ಕಾಲ ಕೆಳಗೆ ಇರುವರು ದೋಸ್ತ್
ಮನದಲ್ಲಿಯೂ ಕನಸುಗಳು ಗೋಚರಿಸುತ್ತಿವೆ ಗಲೀಬ್,

ಸಾಧನೆ ಮಾಡುವ ಸಾಧಕರಿಗೆ ಪ್ರೋತ್ಸಾಹ ಬೆಂಬಲ ಸಹಕಾರ ನೀಡದೆ ಹೀಯಾಳಿಸಿ ಮಾನಸಿಕ ವೇದನೆ ನೀಡುತ್ತಾರೆ ಹಾದಿ ಬೀದಿಯಲ್ಲಿ ಚುಚ್ಚಿ ಚುಚ್ಚಿ ಮಾತನಾಡುತ್ತಾರೆ ಇಂತವರನ್ನು ಕಾಲ ಕೆಳಗೆ ಇಡಬೇಕು ಸಾಧನೆ ನಮ್ಮ ತಾಕತ್ತು ಇಡೀ ಸಮಾಜಕ್ಕೆ ತೋರಿಸಬೇಕು ಏಕೆಂದರೆ ಶರಣರು ಹೇಳಿದ್ದಾರೆ ಕಾಲು ಎಳೆಯುವರನ್ನು ಮೆಟ್ಟಲುಗಳಾಗಿ ಮಾಡಿದರೆ ನಮ್ಮ ಜೀವನ ಸಾರ್ಥಕ ಅಂದಾಗ ಮಾತ್ರ ನಮ್ಮ ವಿಚಾರದಲ್ಲಿ ಸಾಧನೆಯ ಹಾದಿ ಕಾಣುತ್ತದೆ,
ಡಾ, ಮಲ್ಲಿನಾಥ ತಳವಾರ ಯವರು ಗಜಲ್ ಉತ್ತಮ ರೀತಿಯಲ್ಲಿ ನಿರೂಪಿಸಿದ್ದಾರೆ ಪ್ರತಿಯೊಂದು ಸಾಲು ಓದುಗರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ ಇವರ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲಿ ಸಾಹಿತ್ಯ ಕ್ಷೇತ್ರದಲ್ಲಿ ಅವರ ಹೆಸರು ಅಜರಾಮರಾಗಿ ಬೆಳಗಲಿ ಸುವರ್ಣ ಅಕ್ಷರದಲ್ಲಿ ಶುಭವಾಗಲಿ ಸರ್,

-  ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ,

ಮಂದ ಹಾಡು (ಕವಿತೆ) - ಸೌಜನ್ಯ ದಾಸನಕೊಡಿಗೆ.

ಅಂದು ಕೇಳಿದ ಮಂದ ಹಾಡದು 
ನೊಂದ ಮನವ ಮರು ಅರಳಿಸಿತ್ತು,
ಬಂಧ ಬೆಸೆಯುವ ರಾಗದೆಳೆಯೊಳು 
ಗಂಧ ಅರೆದಿಹ ಗಮದ ಮತ್ತು...

ಮತ್ತೆ ನೆನೆದೆನಾ ಮರೆತ ರಾಗವ
ಚಿತ್ತದೊಳಗೆ ಮರು ಗುನುಗುತಾ...
ಹುತ್ತದಂತೆ ಹೊರೆದ ದುಗುಡವ
ಕೆತ್ತಿ ಕೆಡವಿತಾ ನಾದ ಮಿಡಿಯುತಾ...

ಕಂದಯೆನ್ನನು ಆಲಿಸೆನುತ
ಚೆಂದದಿಂದಲಿ ನಿನಾದ ಹೊರಳಿ 
ಕೊಂದು ಬಿಟ್ಟಿತು ಕುಹಕ ತರಂಗವ
ತಂದಿತೆನಗೆ ತಂಪೆರೆವ ನೆರಳ ಮರಳಿ...

ಅನುಬಂಧ ಬಿಗಿದಿದೆ ದನಿಯ ಬಲದಲಿ 
ಮನವು ನಲಿಯುವ ಒಲವಿದೆ...
ದನವ ಕಾಯುವಾ ಗೊಲ್ಲನಾ ಉಲಿ
ಹೂಬನದ ತೆರದೀ ಮರು ಸೆಳೆದಿದೆ...

ಮಕರಂದಕಿಂತಲು ಮುದವಾ ಇಂಚರ
ಅಕ್ಕರೆಯ ಸಖನಾ ಸವಿಮೋಹದಂತೆ...
ಹೊಕ್ಕುವುದು ಹದವಾಗಿ ಹಿತವಾಗಿ ಹೃದಯದೊಳು 
ಸರಿಸುತಲಿ ಸುಕ್ಕುಗಳ ಬಿತ್ತುವುದು ಸುಮಧುರಾ ಕಂತೆ...

- ಸೌಜನ್ಯ ದಾಸನಕೊಡಿಗೆ.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...