ಮಾರ್ಕೇಟಿಗೆ ಮಾಲಾಗಿ ಮೆರೆದ ಫಸಲುಗಳು ಹತ್ತಾರು!
ಹಸಿವಿಂಗಿಸಿದ ಹಿಂಗಾರಿನ ಬಿಳಿಜೋಳ ನನ್ನುಡಿ!!
ಬೃಹತ್ ವಿಶ್ವವಿದ್ಯಾಲಯಗಳಿವೆ ನೂರಾರು!
ಮಮತೆಯ ಮಡಿಲಾದ ಬಾಲವಾಡಿ ನನ್ನುಡಿ!!
ನದಿ ಸರೋವರ ಜಲರಾಶಿಗಳುಂಟು ಸಹಸ್ರ!
ದಾಹ ತಣಿಸಿದ ಹಿತ್ತಲಿನ ತೊರೆ ನನ್ನುಡಿ!!
ತರತರದ ಖಾದ್ಯ ತಿನಿಸುಗಳಿವೆ ಲಕ್ಷೋಪಲಕ್ಷ!
ರುಚಿಯೇ ತಿಳಿಯದ ಎದೆಹಾಲು ನನ್ನುಡಿ!!
ಕಂಚಿ ಕಾಶಿ ರಾಮೇಶ್ವರ ಗೋಪುರಗಳು ಹಲವು!
ಅಭಯವಿತ್ತ ನನ್ನೂರ ಹನುಮನ ಗುಡಿ ನನ್ನುಡಿ!!
ಪೋಷಾಕು ಧಿರಿಸು ವಸ್ತ್ರಗಳು ಅನೇಕ!
ಎನ್ನ ಮೈಗಂಟಿದ ಅಕ್ಷಯ ತೊಗಲು ನನ್ನುಡಿ!!
ಮಾರ್ಗ ಪಥ ವಾಹನಗಳು ಅನಂತ!
ಎಂದೆಂದಿಗು ಜೊತೆಯಾಗುವ ಹೆಜ್ಜೆ ನನ್ನುಡಿ!!
ಜಗಮಗಿಸುವ ವಿದ್ಯುತ್ತಿನ ಹಾವಳಿ ಜೋರುಜೋರು!
ಕಗ್ಗತ್ತಲ ನಡುರಾತ್ರಿಗೆ ಕಣ್ಣಾದ ಪ್ರಣತಿ ನನ್ನುಡಿ!!
ಜನಜಾತ್ರೆಯಲೊಬ್ಬಂಟಿಯಾದ ಜೀವಕೆ
ಅಮ್ಮನ ಬೆಚ್ಚನೆಯ ಸ್ಪರ್ಶ ನನ್ನುಡಿ!!
ಹಿರಿದು ಕಿರಿದೆಂಬುದಿಲ್ಲ ಜಗದಲಿ!
ಅವರವರ ತಾಯಿಯು, ಅನಂತವಾಗಿ ಕಾಯುವಳು!
ಅವರವರ ಅರಿವು, ಅನವರತ ಪೊರೆವುದು!
ಮಾಂಸಖಂಡ ಕಮರಿಯಾಳಕೆ ಬಿದ್ದ ದನಿ!
ಬೆಳಕಾಗಿ ಎದ್ದದು ನನ್ನುಡಿ!
ಎನ್ನುಡಿಯು ಕನ್ನಡ ; ಚೆನ್ನುಡಿಯದು ಕನ್ನಡ
ಸದಾ..........sss
ಉಸಿರಾಡಲು ತಾನು
ಹಸಿರಾಗುವಳು ತಾಯಿ!
ನಲಿದಾಡಲು ನಾನು
ನರ್ತಿಸುವಳು ನೋಡಿ!!
ಬದುಕಾಗಲು ನಾವು
ಬಾಳುವಳು ಕಾಣಿ!!!
ಹೋರಾಟದ ಕಿಚ್ಚಿನೊಂದು
ಕಿಡಿಯ ತಂದು ಬೆಳಗಿರಿ!
ಬಾಳಜ್ಯೋತಿ ಬೆಳಗಲಲ್ಲಿ
ಜೈ ಜೈ ಭುವನೇಶ್ವರಿ!!
~ ಅರಬಗಟ್ಟೆ ಅಣ್ಣಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ