ಪ್ರಾಚೀನ ಕಾಲದಿಂದಲೂ ಜಗತ್ತಿಗೆ ಅಗಾಧವಾದ ಜ್ಞಾನವನ್ನು ದಾರಿಯೆರೆಯುತ್ತಾ ಬಂದ ರಾಷ್ಟ್ರ ಭಾರತ. ನಳಂದ, ತಕ್ಷಶಿಲಾ, ವಿಕ್ರಮಶಿಲಾ, ಪುಷ್ಪಗಿರಿಯಂತಹ ಅನೇಕ ವಿಶ್ವವಿದ್ಯಾಲಯಗಳ ಮೂಲಕ ದೇಶ, ವಿದೇಶಗಳಿಂದ ಬಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿದ್ದು ಇದೆ ನಮ್ಮ ಭಾರತ. ಆ ವಿಶ್ವವಿದ್ಯಾಲಯಗಳ ಇತಿಹಾಸ ಇಂದಿಗೂ ಭಾರತೀಯರನ್ನು ಹೆಮ್ಮೆ ಪಡುವಂತೆ ಮಾಡುತ್ತದೆ. ಕಾಲಾಂತರದಲ್ಲಿ ಅನೇಕ ವಿಶ್ವವಿದ್ಯಾಲಯಗಳು ದಾಳಿಕೋರರ ಕೈಗೆ ಸಿಲುಕಿ ನಾಶವಾದವು. ಅವುಗಳಂತೆಯೇ, ನಮ್ಮ ಕರ್ನಾಟಕದಲ್ಲೂ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯವಾದ ಕರ್ನಾಟಕ ವಿಶ್ವವಿದ್ಯಾಲಯವು ಶಿಕ್ಷಣದಲ್ಲಿ ಅತ್ಯಂತ ಗೌರವವನ್ನು ಹೊಂದಿರುವ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡು ಬಂದಿದೆ. ರಾಜ್ಯಕ್ಕೆ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಅನೇಕ ಕೊಡುಗೆಗಳನ್ನು ನೀಡಿರುವುದು ನಮಗೆಲ್ಲರಿಗೂ ತಿಳಿದಿದೆ.
ಸಹಜವಾಗಿ ನಾವೆಲ್ಲರೂ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಪಠ್ಯಪುಸ್ತಕಗಳ ಬದಲಾವಣೆಗಳನ್ನು, ವಿವಾದವನ್ನು ನೋಡುತ್ತಾ ಕೇಳುತ್ತಲೇ ಬಂದಿದ್ದೇವೆ. ಒಂದು ಸರ್ಕಾರ ಅಧಿಕಾರಕ್ಕೆ ಬಂದೊಡನೆ ಒಂದೇ ಸಮುದಾಯವನ್ನು ತುಷ್ಟೀಕರಿಸುವುದು, ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮತ್ತೊಂದು ಸಮುದಾಯವನ್ನು ತುಷ್ಟೀಕರಿಸುವುದು, ಇವುಗಳ ಗೊಂದಲದಲ್ಲಿ ವಿದ್ಯಾರ್ಥಿಗಳು ಹೆಚ್ಚು ತಲೆಕೆಡಿಸಿಕೊಳ್ಳದೆ ಹೇಗೋ ಕಂಠಪಾಠ ಮಾಡಿ ಪಾಸಾಗಿ ಬಿಡುತ್ತಾರೆ. ಹೆಚ್ಚು ತಲೆ ಕೆಡಿಸಿಕೊಳ್ಳದೆ ಓದಿದ್ದೆ ಒಳ್ಳೆಯದಾಯಿತು, ಕಾರಣ ನಾವು ಕಲಿತಿದ್ದೆಲ್ಲವು ದಾಳಿಕೊರರ ಕುರಿತೆ.
ಇರಲಿ, ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ಸೆಮಿಸ್ಟರ್ ಕನ್ನಡ ಭಾಷೆಯ ಬೆಳಗು ಪಠ್ಯಪುಸ್ತಕದಲ್ಲಿ ಇಂತಹದ್ದೇ ರಾಷ್ಟ್ರ ವಿರೋಧಿ, ಸಂವಿಧಾನ ವಿರೋಧಿ ಮತ್ತು ಸಮಾಜವನ್ನು ವಿಘಟಿಸುವ ರೀತಿಯ ಪಠ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದನ್ನು ನೋಡಿದರೆ ಕರ್ನಾಟಕವನ್ನು ಏನು ಮಾಡಲು ಹೊರಟಿದ್ದಾರೆ ಎಂಬ ಭಯ ಕಾಡುತ್ತಿದೆ.
ಬೆಳಗು ಸಂಪಾದಕೀಯ ಕೃತಿಯ ಘಟಕ ಒಂದರಲ್ಲಿ ರಾಷ್ಟ್ರೀಯತೆ ಎಂಬ ಶೀರ್ಷಿಕೆಯಡಿ ರವೀಂದ್ರನಾಥ್ ಠಾಗೋರ್, ದೇವನೂರು ಮಹಾದೇವ, ರಘುನಾಥ ಚ.ಹ., ರಾಮಲಿಂಗಪ್ಪ ಟಿ.ಬೇಗೂರ ಲೇಖನಗಳಿವೆ. ನಮ್ಮ ಪೂರ್ವಜರ ಕಾಲದಿಂದಲೂ ನಾವು ಭಾರತ ಮಾತೆಯನ್ನು ಅತ್ಯಂತ ಪೂಜನೀಯ ಸ್ಥಾನದಲ್ಲಿಟ್ಟು ಆರಾಧಿಸುತ್ತಿದ್ದೇವೆ. ಎಂದಿಗೂ ಇದು ಧರ್ಮಾದಾರಿತವಾಗಿ ಗುರುತಿಸಿಕೊಂಡಿದ್ದಲ್ಲ. ಆದರೆ ಈ ಪುಸ್ತಕದ 4ನೇ ಅಧ್ಯಾಯದಲ್ಲಿ ರಾಷ್ಟ್ರೀಯತೆಯ ಆಚರಣೆಯ ಸುತ್ತ ಎಂಬ ಲೇಖನವನ್ನು ರಾಮಲಿಂಗಪ್ಪ ಟಿ.ಬೇಗೂರ ಬರೆದಿದ್ದಾರೆ. ಭಾರತಾಂಬೆಯ ಕಲ್ಪನೆ ಎಂಬ ಉಪ ಅಧ್ಯಾಯದಲ್ಲಿ (ಪುಟ 28, ಕಂಡಿಕೆ 2) ಭಾರತ ಮಾತೆಯ ಚಿತ್ರ ಹಿಂದೂ ಮಾತೆಯ ಚಿತ್ರವೇ ಆಗಿದೆ. ಆ ಚಿತ್ರವನ್ನು ನೋಡಿದರೆ ಅಲ್ಲಿ ಯಾವ ಮುಸ್ಲಿಂ, ಸಿಖ್, ಜೈನ, ಗೊಲ್ಲ, ಹೊಲೆಯಾದಿ ಮುಂತಾದ ಬೇರೆ ಧರ್ಮಗಳ ಕುರುಹುಗಳು ಕಾಣಿಸುವುದಿಲ್ಲ.ಈಕೆ ಖಂಡಿತ ಹಿಂದೂ ಎಂಬ ಕಲ್ಪಿತ ಮಾತೆ. ಒಂದು ವರ್ಗ ಸಮುದಾಯದ ಕಲ್ಪನೆಯನ್ನು ಇನ್ನಿತರರು ಒಪ್ಪುವಂತೆ ಒತ್ತಾಯಿಸುತ್ತದೆ ಎಂದು ವ್ಯಕ್ತಪಡಿಸಿದ್ದಾರೆ.
ಭಾರತ ಮಾತಾ ಕಿ ಜೈ ಎನ್ನುವ ಘೋಷಣೆ ಸ್ವತಂತ್ರ ಹೋರಾಟದ ಸಮಯದಿಂದ ಎಲ್ಲರನ್ನೂ ಒಗ್ಗೂಡಿಸುವಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಬಳಸಿದ ಧ್ಯೇಯ ಘೋಷ, ಆದರೆ ಭಾರತ ಮಾತಾ ಕಿ ಎಂದು ಯಾರಾದರೂ ಕೂಗಿದಾಗ ಜೈ ಎನ್ನುವುದೇ ಇನ್ನೊಬ್ಬರ ಸೋಲನ್ನು ನೆನಪಿಸುತ್ತದೆಯಂತೇ ಈ ಲೇಖಕರಿಗೆ.
ಸದಾ ಭಾರತವನ್ನು ವಿರೋಧಿಸುವ, ದ್ವೇಷಿಸುವ ಶತ್ರು ರಾಷ್ಟ್ರದ ಕುರಿತು, ದೇಶ ವಿಭಜನೆಯ ಹಿಂಸೆ ಘಟಿಸಿ 60 ವರ್ಷಗಳಾದರೂ ಭಾರತ ಹಿಂದೂಗಳ ಸ್ವತ್ತು, ಪಾಕಿಸ್ತಾನ ಮುಸ್ಲಿಮರ ಸ್ವತ್ತು ಎಂಬ ಭಾವನೆ ಗಾಢವಾಗಿರುವುದು ರಾಷ್ಟ್ರವನ್ನು ಧರ್ಮಗಳು ಆಳುವ ಪರಿಯಾಗಿವೆ ಎಂದು ಉಲ್ಲೇಖಿಸುತ್ತಾರೆ.(ಪುಟ 33, ಕಂಡಿಕೆ 1)
ರಾಷ್ಟ್ರೀಯತೆಯ ಪಿತ್ತ ನೆತ್ತಿಗೆ ಏರಿದರೆ ನಾವು ಸ್ವಾತಂತ್ರ್ಯವಾಗಿ ಅಣುಬಾಂಬು ತಯಾರಿಸುತ್ತೇವೆ. ಅದರಿಂದ ಪಾಕಿಸ್ತಾನವು ಭಯಪ್ರೇರಿತವಾಗಿ ನಾನೇನು ಕಡಿಮೆ ಎಂದು ಅದಕ್ಕಾಗಿ ತಾನು ಸಾವಿರಾರು ಕೋಟಿ ಖರ್ಚು ಮಾಡುತ್ತದೆ. ಸಾವಿರಾರು ಕೋಟಿ ರೂಪಾಯಿಗಳನ್ನು ಚಂದ್ರಯಾನಕ್ಕೆ ಖರ್ಚು ಮಾಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಕಟ್ಟಕಡೆಯ ಪ್ರಜೆಗೆ ಈ ಸಾವಿರಾರು ಕೋಟಿಗಳ ಪ್ರತಿಷ್ಠೆಯ ಖರ್ಚಿನಿಂದ ಏನು ಲಾಭವಾಯಿತು? ನಮ್ಮಲ್ಲಿನ ಬಡತನ, ಹಸಿವು, ನಿರುದ್ಯೋಗ, ಅನಕ್ಷರತೆ, ಪ್ರಾದೇಶಿಕ ಅಸಮಾನತೆ, ರೈತರ ಆತ್ಮಹತ್ಯೆ ಇಂಥ ಯಾವುದಾದರೂ ಸಮಸ್ಯೆ ಬಗೆಹರಿಯಿತೆ?(ಪುಟ 36, ಕಂಡಿಕೆ 2) ಎಂದು ಕರೆಯುವ ಮೂಲಕಾ ದೇಶದ ಸಾಧನೆಯನ್ನು ತುಚ್ಚವಾಗಿ ಕಂಡಿದ್ದಾರೆ.
ಹೋಗಲಿ ಕೇವಲ ಭಾರತ ಮಾತೆಯ ಮೇಲೆ ಮಾತ್ರ ಈ ದ್ವೇಷ ಎಂದುಕೊಂಡು ಮುಂದೆ ಓದಿದರೆ ಹೀಗಿದೆ, ಸ್ವಾತಂತ್ರ್ಯಕ್ಕೆ ಮುಂಚೆ ಇದ್ದ ಒಬ್ಬಳೆ ಮಾತೆಯ ಜೊತೆಗೆ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ನಂತರ ರಾಜ್ಯವಾರು ಮಾತೆಯರು ಸೇರಿಕೊಂಡಿದ್ದಾರೆ. ಕನ್ನಡ ರಾಷ್ಟ್ರೀಯತೆಯ ಕುರುಹಾದ ಭುವನೇಶ್ವರಿ ಕೂಡ ಕೋಮುವಾದಿ ಮಾತೆಯೆ. ಎಲ್ಲ ವರ್ಗ, ಜಾತಿಗಳನ್ನು ಈಕೆ ಪ್ರತಿನಿಧಿಸುವುದಿಲ್ಲ (ಪುಟ 29, ಕಂಡಿಕೆ 3) ಎಂದು ಉಲ್ಲೇಖಿಸುವ ಮೂಲಕ ರಾಷ್ಟ್ರಕವಿ ಕುವೆಂಪುರವರ ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂಬ ಸಾಲುಗಳನ್ನು ಸಹ ಇಲ್ಲಿ ವ್ಯಂಗ್ಯವಾಗಿ ಬರೆದಿರುವುದು (ಪುಟ 30, ಕಂಡಿಕೆ 1) ಜನರ ಭಾವನೆಗೆ ಧಕ್ಕೆ ತರುವ ವಿಚಾರವಾಗಿದೆ.
ಇಷ್ಟೇ ಅಲ್ಲ ಮುಂದೆ ಪ್ರಭು ಶ್ರೀರಾಮನು ದೋಷಿಯಾಗಿದ್ದಾನೆ, ಮುಸ್ಲಿಮರಿಗೆ ಒಂದು ಪವಿತ್ರ ಯಾತ್ರಾ ಕೇಂದ್ರ ಮೆಕ್ಕಾ ಇರುವಂತೆ ಎಲ್ಲಾ ಹಿಂದುಗಳಿಗೆ ಒಂದೇ ಪವಿತ್ರ ಯಾತ್ರಾ ಸ್ಥಳ ಅಯೋಧ್ಯ ಇರಬೇಕೆಂದು ಕೆಲಪರಿವಾರದವರು ಒತ್ತಾಯಿಸುತ್ತಾ ಬಂದಿದ್ದಾರೆ. (ಪುಟ 34, ಕಂಡಿಕೆ 1)
ಸ್ಥಳೀಯ ಪರಕೀಯವಾದ ಮಂಡಿಸುತ್ತಿರುವ ಪರಿವಾರದವರು ಸೋನಿಯಾ ಪರಕೀಯಳು ಎಂಬ ಕಾರಣಕ್ಕೆ ಇಲ್ಲಿ ಪ್ರಧಾನಿ ಆಗಕೂಡದೆಂದು ವಾದಿಸುತ್ತಾರೆ. ರಾಮ ಜನ್ಮಭೂಮಿ, ಬಾಬ್ರಿ ಮಸೀದಿ ಅಗೆಯುತ್ತಾ ಹೋದರೆ ಇತಿಹಾಸದಲ್ಲಿ ಅದು ಯಾರಿಗೆ ಸೇರಿದ್ದೆಂದು ಶೋಧಿಸಲು ಸಾಧ್ಯವೇ?(ಪುಟ 34, ಕಂಡಿಕೆ 2) ಎಂದು ಉಲ್ಲೇಖಿಸುವ ಮೂಲಕ ರಾಮಮಂದಿರದ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನೇ ಸಂಶಿಸಿ, ಸಂವಿಧಾನ ಮತ್ತು ನ್ಯಾಯಾಲಯದ ಕುರಿತು ವಿದ್ಯಾರ್ಥಿಗಳಲ್ಲಿ ಅಗೌರವ ಭಾವನೆಯನ್ನು ಮೂಡಿಸುವಂತೆ ಬರೆದಿದ್ದಾರೆ.
ಒಟ್ಟಾರೆ ಈ ಲೇಖನದಲ್ಲಿ ಬೇರೆ ರಾಷ್ಟ್ರಗಳ ಭಯೋತ್ಪಾದಕ ಕೃತ್ಯಗಳ ಬಗ್ಗೆ ಲೇಖಕರಿಗೆ ಇರುವ ಪ್ರೀತಿ, ಓದುವ ವಿದ್ಯಾರ್ಥಿಗಳಲ್ಲಿ ದೇಶ ಮತ್ತು ನಾಡಿನ ಬಗ್ಗೆ ಇರಬೇಕಾದ ಗೌರವದ ಭಾವನೆಯನ್ನು ಕುಗ್ಗಿಸುವ ನಿಟ್ಟಿನಲ್ಲಿ ವ್ಯಕ್ತವಾಗಿದೆ.
ಆದರೆ ಈ ರೀತಿಯ ಲೇಖನವನ್ನು ಸೇರಿಸಿದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಒಂದಿಷ್ಟು ನನ್ನ ಪ್ರಶ್ನೆಗಳು...
• ಈ ರೀತಿಯ ಲೇಖನವನ್ನು ಪಠ್ಯಪುಸ್ತಕಕ್ಕೆ ಸೇರಿಸುವ ಮುನ್ನ ಪರಿಶೀಲಿಸುವುದಿಲ್ಲವೇ?
• ಒಂದು ವೇಳೆ ಪರಿಶೀಲನೆ ಮಾಡಿದ್ದೆ ಆದರೆ ಈ ರೀತಿಯ ರಾಷ್ಟ್ರವಿರೋಧಿ ಅಧ್ಯಾಯ ಇಟ್ಟಿದ್ಯಾರು?
• ವಿದ್ಯಾರ್ಥಿಗಳಿಗೆ ರಾಷ್ಟ್ರ ವಿರೋಧಿ ಅಧ್ಯಾಯವನ್ನು ಓದಿಸಿ ಏನು ಮಾಡಲು ಹೊರಟಿದ್ದೀರಿ?
• ಯಾರನ್ನು ಮೆಚ್ಚಿಸಲು ಈ ರೀತಿಯ ಲೇಖನಗಳು?
• ಪಠ್ಯ ಪರಿಷ್ಕರಣ ಸಮಿತಿ ತಪ್ಪಿಗೆ ಯಾರಿಗೆ ಶಿಕ್ಷೆ?
• ಇನ್ನು ಮುಂದಾದರೂ ಈ ರೀತಿಯ ಎಡವಟ್ಟುಗಳನ್ನು ಮಾಡದೆ ವಿಶ್ವವಿದ್ಯಾಲಯದ ಗೌರವವನ್ನು ಕಾಪಾಡಿಕೊಳ್ಳಬಲ್ಲಿರಾ...?
ಈ ರೀತಿಯ ರಾಷ್ಟ್ರವಿರೋಧಿ, ಸಂವಿಧಾನ ವಿರೋಧಿ ಹಾಗೂ ಸಮಾಜವನ್ನು ವಿಘಟಿಸುವಂತಹ ಲೇಖನಗಳ ಮೂಲಕ ಹೆಚ್ಚು ಚರ್ಚೆಗೆ ಬರಲೋ, ಯಾವುದೋ ಸರ್ಕಾರವನ್ನು ಮೆಚ್ಚಿಸುವುದಕ್ಕೋ, ಪ್ರಶಸ್ತಿ ಆಸೆಗೋ ಅಷ್ಟಕ್ಕಾಗಿಯೇ ಹೊರತು ಸಮಾಜಕ್ಕೆ ಸಂದೇಶ ನೀಡುವುದಕ್ಕಾಗಿ ಅಥವಾ ಸುಜ್ಞಾನವನ್ನು ಪಸರಿಸುವುದಕ್ಕಾಗಿ ಅಲ್ಲ. ಹಾಗಾಗಿ ಈಗಿನ ಯುವಜನತೆ ಇಂತಹ ಲೇಖಕರಿಂದ ದೂರವಿರುವುದೇ ಒಳಿತು.
ಬ್ರಿಜೇಶ್ ಕುಮಾರ್. ಬಿ. ಟಿ.
ಯುವ ಚಿಂತಕರು
ಚಿತ್ರದುರ್ಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ