ಬುಧವಾರ, ಜೂನ್ 25, 2025

ಪ್ರೊ.ನರಹರಿಯವರ ಬುದ್ಧಾವತಾರ ಕಲ್ಕ್ಯಾವತಾರವು ಒಂದು ಅವಲೋಕನ...

ಲೇಖನ

ಪ್ರೊ. ನರಹರಿಯವರ ಬುದ್ಧಾವತಾರ
 ಕಲ್ಕ್ಯಾವತಾರವು ಕಿರು ಅವಲೋಕನ...



 ಪ್ರೊ ವಿ ನರಹರಿಯವರು ರಚಿಸಿರುವ ದಶಾವತಾರ ಮಹಾಕಾವ್ಯದ ಸರಣಿಯಲ್ಲಿ ನಾಲ್ಕನೇ ಸಂಪುಟವಾಗಿ ಬುದ್ಧಾವತಾರ ಮತ್ತು ಕಲ್ಕ್ಯಾವತಾರವು ವಿದ್ವತ್ ವಲಯದಲ್ಲಿ ಜನಪ್ರಿಯವಾಗಿದೆ. ಭಾಮಿನಿ ಷಟ್ಪದಿಯಲ್ಲಿರುವ ಬುದ್ಧಾವತಾರದಲ್ಲಿ 1420 ಪದ್ಯಗಳಿವೆ. ಮೂಲ ಸಂಸ್ಕೃತದ ಅಶ್ವಘೋಷನ ಬುದ್ಧ ಚರಿತವನ್ನು ಆದರಿಸಿದ್ದು, ಅದಕ್ಕೆ ವಿದ್ವಾಂಸರಾದ ಡಾ. ಮಲ್ಲೇಪುರಂ ವೆಂಕಟೇಶ್ ರವರು 14 ಪುಟಗಳ ನಾಂದಿತೋರಣ ಮುನ್ನುಡಿ ಕಟ್ಟಿದ್ದಾರೆ. 

ಬುದ್ಧ ಚರಿತದ ಎಲ್ಲಾ 28 ಸರ್ಗಗಳನ್ನು ನರಹರಿಯವರು ಬುದ್ದಾವತಾರದಲ್ಲಿ ತಂದಿದ್ದಾರೆ. ಅದರಲ್ಲಿ ಇಲ್ಲದ ಕಿಸಾ ಗೌತಮಿಯ ಪರಿವರ್ತನೆಯನ್ನು ಹೊಸದಾಗಿ ಸಂಧಿಯಾಗಿ ಸೇರಿಸಿದ್ದಾರೆ. ಅರ್ಥ ಶ್ಲೋಕದಲ್ಲಿ ಮಾತ್ರ ಪ್ರಸ್ತಾಪಿತವಾಗಿದ್ದ ಅಂಗುಲಿಮಾಲನ ವಿಚಾರವನ್ನು ಒಂದು ಪೂರ್ಣ ಸಂಧಿಯಾಗಿಸಿದ್ದಾರೆ. ಬುದ್ಧ ಚರಿತದಲ್ಲಿ ಇಲ್ಲದ ಬುದ್ಧ ಧರ್ಮಾಚರಣೆಯ ವಿವರ ಎಂಬ ಕೊನೆಯ ಸಂಧಿಯಲ್ಲಿ ಬೌದ್ಧ ಧರ್ಮದ ಲಕ್ಷಣ, ಸಂಘಟನಾ ಕ್ರಮ ಆಚರಣೆಗಳನ್ನು ವಿವರಿಸಿ ಓದುಗರಿಗೆ ಉಪಕಾರ ಮಾಡಿದ್ದಾರೆ.

ಒಟ್ಟು 30 ಸಂಧಿಗಳ ಈ ಕೃತಿಯಲ್ಲಿ ಸಂಧಿಗಳ ಹೆಸರುಗಳೇ ಕುತೂಹಲಕಾರಿಯಾಗಿ ಅನ್ವರ್ಥವಾಗಿವೆ.
ಉದಾ: ಸಂವೇದನೋತ್ಪತ್ತಿಯ ಹೊರ ಪಯಣ ತಪೋವನ ಅನುಭವದ ಭ್ರಮ ನಿರಸನ, ಮಾರನ ಮಾಯಾಜಾಲ, ಧರ್ಮಚಕ್ರ ಪ್ರವರ್ತನ ಸೂತ್ರದ ಬುದ್ಧ ವಚನ, ಕಿಸಾ ಗೌತಮಿಗೆ ಸಾಸಿವೆ ಕಾಳಿನ ಪಾಠ ಇತ್ಯಾದಿ ಕಥಾನಕದ ಭಿತ್ತಿ ಅಶ್ವಘೋಷನದೇ ಆಗಿದ್ದರೂ, ಭಾವಂಶ ಕಲ್ಪನಾಂಶ ಮತ್ತು ರೂಪಾಂಶಗಳಲ್ಲಿ ಪ್ರೊ.ನರಹರಿಯವರು ಸ್ವಂತಿಕೆಯನ್ನು ಮೆರೆದಿದ್ದಾರೆ ಎಂದು ಡಾ.ಮಲ್ಲೇಪುರಂ ವೆಂಕಟೇಶ್ ರವರು 
ನಾಂದಿತೋರಣದಲ್ಲಿ ಸರಿಯಾಗಿಯೇ ಗ್ರಹಿಸಿದ್ದಾರೆ. 

ಇನ್ನು ಕೃತಿಯಲ್ಲಿ ಬಳಸಿದ ಪದ್ಯಗಳ ವೈಶಿಷ್ಟ್ಯಗಳು ಇಡೀ ಬುದ್ದಾವತಾರವನ್ನು ಸಾರ ಸಂಗ್ರಹವಾಗಿ ಅರ್ಧ ಷಟ್ಪದಿಯಲ್ಲಿ ನೀಡಿದ ರಚನೆ:

ನಿದ್ದೆಯಲಿರೆ ಲೋಕವೆದ್ದವ 
ಬದ್ಧ ತಪದಲಿ ದುಃಖಕಾರಣ 
ಗೆದ್ದು ಬೋದಿಸಲೆಂದೇ ಸಂದಿಹ ಬುದ್ಧನವತಾರ.

ಬುದ್ಧ ಶಿಶುವಿನ ವರ್ಣನೆ :

ಹೂವ ಚೆ೦ಡೋ ಬೆಳಕಿನಡೆಯೋ,
ಹಾವಹೆಡೆಯಲಿ ಹೊಳೆವ ರತ್ನವೋ 
ಕಾವಳದ ಮುಸಕನ್ನು ಕರಗಿಸಿ ಹೊಳೆವೆಳೆಯ ರವಿಯೋ, ತೇವವಾರಿದ ಬೆಣ್ಣೆಮುದ್ದೆಯೋ 
ಜೀವಜಾತರ ಭವದ ಸಂಕಟ ಕಳೆಯ ಬಂದವನೊ 

 ಗೌತಮನು ಕಾಡಿನಲ್ಲಿ ಬಿಟ್ಟು ಬಂದ ಚೆನ್ನನನ್ನು ರಾಜಧಾನಿಯ ಜನ. ಕೇಳಿದ ಪರಿ :

ಎಲ್ಲಿ ನಮ್ಮಯ ರಾಜನಂದನ 
ನೆಲ್ಲಿ ಗೌತಮನೆಲ್ಲಿ ಯುವ ದೊರೆ 
ಯೆಲ್ಲಿ ರಾಹುಲನ ಪಿತ-
ನೆಲ್ಲಿ ಯಶೋಧರೆಯ ಪತಿಯು 
ಎಲ್ಲಿ ಬಿಟ್ಟಿಹೆ ಬಂದೆಯೊಬ್ಬನೆ 
 ಚೆಲ್ಲಿ ಹಾಲನು ಬರಿಯ ಪಾತ್ರೆಯ
 ಸುಳ್ಳು ನೆಪದಲಿ ತಂದ ಹಾಗಿರೆ 
ಚೆನ್ನ ನಿಜ ಹೇಳು 

ಪೂರ್ಣ ಬುದ್ಧತ್ವ ಪ್ರಾಪ್ತಿಯಾದ
ಸಂದರ್ಭದ ಪದ್ಯ ಹೀಗಿದೆ:

ಪೂರ್ಣಿಮೆಯ ದಿನದಂದು ಹುಟ್ಟುತ, 
 ಪೂರ್ಣಿಮೆಯ ರಾತ್ರಿಯಲ್ಲಿ ತಾ.ಸಂ, 
 ಪೂರ್ಣ ದಿವ್ಯಜ್ಞಾನ ಸಿದ್ದಿಯ ಪಡೆದು ತಾನಾಗ
ಪೂರ್ಣ ಏನುಮಾನ ಪರಿಹಾರದಿ 
 ಪೂರ್ಣ ನವಮಾರ್ಗ ಪ್ರವರ್ತಕ 
 ಪೂರ್ಣ ಮಾನವ ಸತ್ವದಲ್ಲಿ ತಾನಾದ ಸಂಪೂರ್ಣ

ಇಂತಹ ರಸವತ್ತಾದ ಮನ ಕಲಕುವ ಅಲಂಕಾರಯುುಕ್ತವಾದ ಸರಳ ಕನ್ನಡದ ಷಟ್ಪದಿಯ ಪದ್ಯಗಳು ಇದರಲ್ಲಿ ಇವೆ. ಭಾಮಿನಿ ಷಟ್ಪದಿಯ ವಸ್ತುಕ ಛಂದಸ್ಸಿಗೆ ಸೇರಿದ್ದಲ್ಲ ಅದು ವರ್ಣಕಕ್ಕೆ ಸೇರಿದ್ದು. ಇವೆರಡನ್ನು ಒಟ್ಟಿಗೆ ಸೇರಿಸಿ ಕಾವ್ಯ ಕಟ್ಟುವುದು ಕಷ್ಟಸಾಧ್ಯ. ಪ್ರೊ.ವಿ.ನರಹರಿಯವರಿಗೆ ಋಷಿಕವಿ ನಮೋ ಎನ್ನದೆ ವಿಧಿಯಿಲ್ಲ ಎನ್ನುತ್ತಾರೆ ಡಾ.ಮಲ್ಲೇಪುರಂ ವೆಂಕಟೇಶ್.

ಜಗದ ಹಿತವನು ಬಯಸಿ ನಾಲಿಗೆ
ಸೊಗದಲಾಡಲು ಬಲ್ಲುದೆನ್ನಲು
ಮಗುವು ತಾನೇ ಬೋಧನೆಗೆ ಸಜ್ಜಾಗಿರುವ ಹಾಗೆ
ಮೊಗವನೆತ್ತುತ ನಾಲ್ಕು ದಿಸೆಗೂ
ನಗೆ ಸುಲಭವೆಂಬುದನು ತೋರಿದೆ ಶಿಶುತನವ

ಈ ಕೃತಿಯಲ್ಲಿ ಕಲ್ಕ್ಯಾವತಾರಕ್ಕೂ 700 ರಷ್ಟು ಪದ್ಯಗಳಿವೆ. ಇದುವರೆಗೂ ಕಲ್ಕ್ಯಾತಾರದ ಕುರಿತು ಕಾವ್ಯಗಳಲ್ಲಿ ಅಲ್ಲಲ್ಲಿ ಪ್ರಸ್ತಾಪವಿದ್ದರೂ ಅದು ಕಾವ್ಯ ರೂಪದಲ್ಲಿ ಕನ್ನಡದಲ್ಲಿ ಬಂದಿದ್ದು ಇದೇ ಮೊದಲು.

 ತಮ್ಮ ದಶಾವತಾರ ಕಾವ್ಯದ ನಾಲ್ಕು ಸಂಪುಟಗಳಲ್ಲಿ ನರಹರಿಯವರು 18 ಸಾವಿರ ಪದ್ಯಗಳನ್ನು ಮಹಾಕಾವ್ಯದ ಬೃಹತ್ ಮತ್ತು ಮಹತ್ತನ್ನು ನಿಜಗೊಳಿಸಿದ್ದಾರೆ. ಸಂಪುಟ ಒಂದು ಮತ್ಸ್ಯಾವತಾರದಿಂದ ಪರಶುರಾಮಾವತರದವರೆಗೆ ಇದೆ. ಇದರ ಕುರಿತಾಗಿ ನಾನು ಹಿಂದೆಯೇ ಬರೆದಿರುವೆ. ಇನ್ನೂ ಈ ಸಂಪುಟ ಕನ್ನಡಕ್ಕೆ ದಕ್ಕಿದ ಸಾಹಿತ್ಯ ಭಾಗ್ಯ. ಇದರ ರಚನೆಗೆ ತೆಗೆದುಕೊಂಡ ಅವಧಿ 13 ವರ್ಷಗಳು. ದಶಾವತಾರವೆಂಬ ಒಂದೇ ವಸ್ತುವಿನ ತಳಹದಿಯಲ್ಲಿ ಇದುವರೆಗೂ ರಚಿತವಾದ ಉದ್ಗ್ರಂಥವಿದು. ಇದರೊಳಗೆ ರಾಮಾವತಾರ, ಕೃಷ್ಣಾವತಾರ ಮತ್ತು ಬುದ್ಧಾವವಾರಗಳು ಸ್ವತಂತ್ರವಾದ ಒಂದೊಂದು ಮಹಾ ಕಾವ್ಯಗಳೇ ಆಗಿದೆ. ಇದಕ್ಕೂ ಮೊದಲು ಇವರು ಭಾಮಿನಿ ಷಟ್ಪದಿಯಲ್ಲೇ ರಚಿಸಿದ ಮತ್ತೊಂದು ಮಹಾಕಾವ್ಯ ಎಂದರೆ ಯೇಸು ಜೀವನ ಚರಿತೆ. ಇದರಲ್ಲಿ 2000 ಮಿಕ್ಕಿ ಪದ್ಯಗಳಿವೆ. ವಿಶೇಷವೆಂದರೆ ನರಹರಿಯವರು ಮಹಾಕಾವ್ಯ ರಚನೆಗೆ ತೊಡಗಿದ್ದು 60 ವರ್ಷ ವಯಸ್ಸಾದ ಮೇಲೆಯೇ. 1943 ರಲ್ಲಿ ಜನಿಸಿದ ಇವರು ಹಾಸನದ ಹಾಸನಾಂಬ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ನಂತರ ಅದೇ ಸಂಸ್ಥೆಯ ಪ್ರಾಂಶುಪಾಲರಾಗಿ ನಿವೃತ್ತರಾಗಿ ಈಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅವರು ಹಾಸನದಲ್ಲಿದ್ದ ವೇಳೆ ಹಾಸನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇವರೊಂದಿಗೆ ನಾನು ಕಾರ್ಯದರ್ಶಿಯಾಗಿದ್ದೆ. ಉತ್ತಮ ವಾಗ್ಮಿ. ಇವರ 2ನೇ ಸ೦ಪುಟದ ರಾಮಾವತಾರದಲ್ಲಿ ಸಂಪೂರ್ಣ ವಾಲ್ಮೀಕಿ ರಾಮಾಯಣದ ಹರಹು ಇದೆ. ಬುದ್ಧ ಪೂರ್ಣಿಮೆ ದಿನದಂದು ಮಂಡ್ಯದ ಗಮಕಿ ಗಾಯಕರು ಸಿ.ಪಿ. ವಿದ್ಯಾಶಂಕರ್ ರವರು ಕೃತಿಯ ಒಂಬತ್ತು ಪದ್ಯಗಳನ್ನು ಸೊಗಸಾಗಿ ಹಾಡಿ ವಿಡಿಯೋ ಮಾಡಿ ಕಳಿಸಿದ್ದರು. ಅದರಲ್ಲಿ ಒಂದು:

ಮೋಡದೊಡಲನ್ನೊಡೆದು ಭಾಸ್ಕರ
ಮೂಡಿದಂತೆಯೇ, ತಾರೆಗಡಣಿಕೆ
ಕೋಡಿನಂತಿಹನುಡುಪ ಶೀತಕಿರಣನು ದಯಿಸಿದೊಲು |
ಗಾಢ ಕತ್ತಲೆ ನಡುವೆ ಧಟ್ಟನೆ
ಮಾಡಿ ನಿಂದಲಿ ಕೋಲ್ಪೆಳಕೊಡ
ಮೂಡಿದಂತೆಯೇ ತಾಯ ಬಸುರಿ0ದಲಿ ಶಿಶುವು ಜನಿಸೆ
  
ಗೊರೂರು ಅನಂತರಾಜು,
ಹಾಸನ
ಮೊ: 9449462879

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...