ಬುಧವಾರ, ಜನವರಿ 4, 2023

ಹೊಸ ವರುಷ-ಹೊಸ ಹರುಷ (ಕವಿತೆ) - ಶಾಂತಾರಾಮ ಶಿರಸಿ.

ಹಳೇ ಬೇರು-ಹೊಸ ಚಿಗುರು,
ಹಳೆ ನೆನಪು-ಹೊಸ ವರುಷಕೆ ಹೊಸ ಬೆಳಕಿನ ಹೊಳಪು,
ಮನಸುಗಳಲಿ ಮಿಂಚಿನ ಸಂಚಲನದ ಹುರುಪು...

ದೂರವಾಗಲಿ ರೋಷ-ದ್ವೇಷ,
ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯಿರಿ-ಖುಷಿಯಿಂದ ಕಳೆಯಿರಿ ಪ್ರತೀ ನಿಮಿಷ,
ಹೊಸ ವರುಷ-ಹೊತ್ತು ತರಲಿ ಹೊಸ ಹರುಷ,...

೨೦೨೨ ನೇ ವರುಷಕೆ ಸವಿನೆನಪುಗಳ ಶುಭವಿದಾಯ ಸಲ್ಲಿಸುತ,
೨೦೨೩ ನೇ ವರುಷಕೆ ಆತ್ಮೀಯವಾಗಿ ಸ್ವಾಗತ ಬಯಸುತ,
ಸರ್ವರಿಗೂ ಶುಭವಾಗಲಿ ಕೈಗೆತ್ತಿಕೊಂಡ ಕಾರ್ಯ ಯಶಸ್ವಿಯಾಗಲಿ...
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ.
7676106237

ದಿಗ್ಬಂಧನ (ಸಣ್ಣ ಕತೆ) - ಸೌಜನ್ಯ ದಾಸನಕೊಡಿಗೆ.

ಮೂರುವರೆ ವರುಷದ ನನ್ನ ಪುಟ್ಟು ಹಾಸಿಗೆಯ ಮೇಲೆ ಕಾಲ್ಚಾಚಿ ಮಲಗಿದ್ದರೆ , ನಾನು ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕುಳಿತು  ಅವನನ್ನೇ ಎವೆಇಕ್ಕಿ ನೋಡುತ್ತಿರುತ್ತಿದ್ದೆ  . ನನಗೆ  ನನ್ನ ಪುಟ್ಟುವೆ ಸರ್ವಸ್ವ. ಹಸಿವು ಬಾಯಾರಿಕೆಗಳೆ ಕಾಡದಷ್ಟು ನಾನು ಪುಟ್ಟನಲ್ಲಿ ಬಂಧಿಯಾಗಿ ಬಿಟ್ಟಿದ್ದೇನೆ. ಮೊದಲೆಲ್ಲ ಎಲ್ಲೆಂದರಲ್ಲಿ ಪುಟ್ಟುವನ್ನು ಎತ್ತಿಕೊಂಡು ಓಡಾಡುತ್ತಿದ್ದೆ, ನಾನು ಪುಟ್ಟು ಆಟವಾಡುತ್ತಿದ್ದೆವು, ಆದರೆ ಈಗ ಹಾಗಾಗುತ್ತಿರಲಿಲ್ಲ . ಪುಟ್ಟನನ್ನು ಎತ್ತಿಕೊಂಡು ಆಡಿಸುವ ಬಲ ನನ್ನಲ್ಲಿಲ್ಲ . ನನ್ನ ಕೈಕಾಲುಗಳಲ್ಲಿ ತ್ರಾಣವಿಲ್ಲ.

 ಅವನಿರುವ ಈ ಕೋಣೆಯನ್ನು ಬಿಟ್ಟು ನಾನೊಬ್ಬಳೆ ಆಗಾಗ ಹೊರಹೋಗಿ ಬರುತ್ತಿದ್ದೆ ಆದರೆ ಮೊನ್ನೆ ಜಗುಲಿಯಲಿ ಅದೆಂತದೋ ಹೋಮವನ್ನು ಮಾಡಿಸಿ ಬಿಟ್ಟರು ಅಲ್ಲಿ ನಾನು ಹೋಗಬಾರದಂತೆ ನನಗೂ ಅಲ್ಲೆಲ್ಲ ಸುಳಿಯುವ ಮನಸ್ಸಿಲ್ಲ ಹಾಗಾಗಿ ನಾನತ್ತ ಹೋಗುತ್ತಲು ಇಲ್ಲ . ಆಗೆಲ್ಲ ಅಪರೂಪಕ್ಕೆ ದೇವರ ಕೋಣೆಯತ್ತ ಹೋಗುತ್ತಿದ್ದೆ ಈಗ ಕೆಲವು ತಿಂಗಳಿಂದೀಚೆಗೆ ಆ ದೇವರ ಕೋಣೆಯಲ್ಲಿರುವ ಕಾಳಿಯ ಕಣ್ಗಳು ನನ್ನನ್ನು ಇರಿದಂತೆ ಭಾಸವಾಗುತ್ತದೆ ಹಾಗಾಗಿ ಅವಳನ್ನು ನೋಡಲು ಸಹ ಭಯ ಆದ್ದರಿಂದ ಪುಟ್ಟನ ಕೋಣೆಯಷ್ಟೇ ನನ್ನ ಹಗಲು ಇರುಳುಗಳಾಗಿವೆ.

ಇನ್ನೊಂದು ವಿಚಾರವೆಂದರೆ ನನಗೀಗ ನನ್ನ ಬಟ್ಟೆ ಬರಿ ಬಂಗಾರಗಳ ಮೇಲೇನು ಆಗಿನಷ್ಟು ವ್ಯಾಮೋಹವಿಲ್ಲ. ಏಕೆoದರೆ ಅವುಗಳನ್ನು ನನ್ನಿಂದ ಧರಿಸಲು ಸಾಧ್ಯವಾಗುತ್ತಿಲ್ಲವಲ್ಲ.ಆದರೂ ಒಮ್ಮೊಮ್ಮೆ   ಬಟ್ಟೆ ಬಂಗಾರವನ್ನೂ  ನನ್ನ ಮೇಕಪ್ ಐಟೆಮ್ಗಳನ್ನು  ಬಾಚಿ ತಡವುತ್ತಿರುತ್ತೇನೆ  ಆಗೆಲ್ಲ ನಾನು ಆವೇಶದಲ್ಲೊ, ಆನಂದದಲ್ಲೋ, ಉನ್ಮಾದದಲ್ಲೋ ಮೈ ಮರೆತು ಬಿಟ್ಟಿರುತ್ತೇನೆಂದು ಕಾಣುತ್ತದೆ ಹಾಗಾಗಿ  ಜೋಡಿಸಿದ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದು ಬಿಡುತ್ತವೆ. ಮತ್ತೆ ಅವುಗಳನ್ನು ಮೊದಲಿನಂತೆ ಕೂಡಿಡಲು ನನ್ನ ಯಜಮಾನರೋ ಅಥವಾ ಅವರ ತಾಯಿ ಎಂದರೆ ನನ್ನ ಅತ್ತೆಯೋ ಕೋಣೆಗೆ ಬರಬೇಕು. ಪಾಪ ಅವರ್ಯಾರು ನನ್ನ ಈ ಎಡವಟ್ಟಿಗೆ ಸಿಟ್ಟಾಗುವುದಿಲ್ಲ, ದುರುಗುಡುತ್ತ ನನ್ನತ್ತ ನೋಡುವುದು ಇಲ್ಲ. ಆದರೆ ಅವರ ಮುಖಗಳಲ್ಲಿ ವ್ಯಥೆಯ, ದುಃಖ್ಖದ ಭಾವವೊಂದು ಆವರಿಸಿ ಬಿಟ್ಟಿರುತ್ತದೆ .ಅದು ನನ್ನಿಂದ ಸಹಿಸಲಸಾಧ್ಯ.

ಕನ್ನಡಿಯನ್ನು ನೋಡುವುದನ್ನoತು ಸಂಪೂರ್ಣವಾಗಿ ತೊರೆದು ಬಿಟ್ಟಿದ್ದೇನೆ. ಏಕೆನ್ನುತ್ತೀರಾ..? ನಾನೇ ಅದೊಂದು ದಿನ ಬಹಳ ಇಷ್ಟ ಪಟ್ಟು ಕೊಂಡು ತಂದ ಆ ಕನ್ನಡಿ ಆಗೆಲ್ಲ ಬಹಳ ಚೆನ್ನಾಗಿತ್ತು ಆದರೆ ಈಗೇಕೋ ಕನ್ನಡಿ  ಸರಿ ಇಲ್ಲ ಎನ್ನಿಸುತ್ತಿದೆ,ಸಂಪೂರ್ಣವಾಗಿ ಕದಡಿದ ಛಾಯೆ ಕಾಣುತ್ತದೆ. ನನ್ನ ಯಜಮಾನರು ಮಾತ್ರ ಆಗಾಗ  ಕನ್ನಡಿಯ ಎದುರು ಸಪ್ಪೆ ಮೊಗಮಾಡಿಕೊಂಡು ನಿಲ್ಲುತ್ತಾರೆ  ಅವರಿಗೆ ಹೇಗೆ ಈ ಕನ್ನಡಿ ಹಿಡಿಸಿದೆಯೊ ನಾಕಾಣೆ.
   ಅವರನ್ನು ಬಹಳ ಸಲ ಪ್ರಶ್ನಿಸಿದೆ, ಅವರೇನು ಉತ್ತರಿಸುವುದಿಲ್ಲ, ಸಪ್ಪೆ ಮೊಗದಲ್ಲಿ ಎದ್ದು ಹೊರನಡೆಯುತ್ತಾರೆ. ಹಾ ಹೇಳಬೇಕೆಂದರೆ ಅವರಿಗೆ ಈಗೀಗ ಅದೆಂತದೋ ಕಾಯಿಲೆ ಅಂಟಿದಂತೆ ತೋರುತ್ತದೆ ಏಕೆನ್ದರೆ ನಾನು ಮಾತನಾಡಿಸಿದಾಗ ಅವರು ಮಾತನಾಡುವುದಿಲ್ಲ, ಕೆಲವೊಮ್ಮೆ ಸುಮ್ಮ ಸುಮ್ಮನೆ "ಪಾವನೀ..."ಯೆಂದು  ನನ್ನ ಹೆಸರನ್ನು ಗಟ್ಟಿಯಾಗಿ  ಕರೆಯುತ್ತಾರೆ, ನಾನು ಓಗುಟ್ಟರೆ ಮುಂದೇನು ಮಾತನಾಡದೆ ಸುಮ್ಮನಿದ್ದು ಬಿಡುತ್ತಾರೆ. ಈ ರೀತಿಯ ವರ್ತನೆಯನ್ನು ಕಾಯಿಲೆ ಎನ್ನದೆ ಮತ್ತೇನೆಂದು ಕರೆಯಲಿ ಹೇಳಿ. ಈಗೀಗ ಬಹಳ ಸೊರಗಿ ಹೋಗಿದ್ದಾರೆ,ಒಮ್ಮೆ ಆಸ್ಪತ್ರೆಗೆ ಹೋಗಿ ಬರೋಣ ಎಂದರೆ ನನ್ನ ಮಾತೆಲ್ಲಿ ಕೇಳುತ್ತಾರೆ ಅವರು .?
ನನಗೆ ಅವರೆಂದರೆ ತುಂಬಾ ಪ್ರೀತಿ,ಗೌರವ ಸಲುಗೆಯು ಸಹ, ಮದುವೆಯಾದಲಿಂದ ಇಲ್ಲಿಯವರೆಗು ನನ್ನನ್ನು ಸಹ  ಪುಟ್ಟ ಮಗುವಂತೆಯೆ ಕಂಡಿದ್ದಾರೆ, ಪ್ರೀತಿಸಿದ್ದಾರೆ, ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರನ್ನು ತೊರೆದಿರಲು ನನಗೆ ಸಾಧ್ಯವೆ ಇಲ್ಲ ಬಿಡಿ.
  ಅವರ ಸೇವೆ ಮಾಡುವ ಆಸೆ ನನಗೆ,ಆದರೆ ನನಗೀಗ ಅವರ ಸೇವೆ ಇರಲಿ   ಅವರ ಕೂದಲನ್ನು ಅಂದಿನಂತೆ ಪ್ರೀತಿಯಿಂದ  ಬಾಚಲೂ ಸಹ ಆಗುವುದಿಲ್ಲ ಹೇಳಿದೆನಲ್ಲ ನನ್ನ ಕೈಗಳಲ್ಲಿ ಮುಂಚಿನಂತೆ ತ್ರಾಣವಿಲ್ಲವೆಂದು.

    ಪುಟ್ಟನ ಚಾಕರಿಯನ್ನು ಅತ್ತೆಯವರೆ ಮಾಡುತ್ತಾರೆ. ಸ್ನಾನ ಮಾಡಿಸುವುದು, ಬಟ್ಟೆ ತೊಳೆಯುವುದು, ಊಟ, ತಿಂಡಿ ಎಲ್ಲವು ಅವರ ಮೇಲೆ ಹೇರಿಕೆಯಾಗಿದೆ.ಅವರು ಒಳ್ಳೆಯವರೇ ಆದರೆ  ಈಗೀಗ ಅತ್ತೆಯವರು ನನ್ನ ಕೋಪಕ್ಕೆ ಕಾರಣರಾಗುತ್ತಿದ್ದಾರೆ ಏಕೆಂದು ಕೇಳುತ್ತೀರಾ..? ನಾನು ಪುಟ್ಟನೊಂದಿಗೆ ಆಟವಾಡುತ್ತಲಿರುವಾಗಲೇ ನಮ್ಮ ಆಟವನ್ನು ನಿರ್ಲಕ್ಕ್ಷಿಸಿ ಅವನನ್ನು ಎತ್ತಿಕೊಂಡು ಹೊರ ಹೊರಟು ಬಿಡುತ್ತಾರೆ. ಪುಟ್ಟು ಅಳುವಾಗ ನಾನೊಂದು ಲಾಲಿಯನ್ನು ಹಾಡುತ್ತಾ ಅವನನ್ನು ಸಮಾಧಾನ ಪಡಿಸುತ್ತಿರುತ್ತೇನೆ ಅಷ್ಟರಲ್ಲಿ ಅವರು  ಇನ್ನೊಂದು ರಾಗ ಏರಿಸಿ ಬಿಡುತ್ತಾರೆ. ಪಾಪ ಪುಟ್ಟನಿಗೆ ಎರಡೆರಡು ರಾಗಗಳು ಕರ್ಕಶವೆನಿಸಿ ಮತ್ತೆ ಚೀಕರಿಸಿ ಅಳುತ್ತಾನೆ.
ಪುಟ್ಟನ ಬಳಿಯೆ ಕುಳಿತು ಅವನನ್ನು ಮುದ್ದಾಡುತ್ತ ಹೊತ್ತು ಕಳೆಯುವ ಆಸೆ ನನಗೆ ಆದರೆ ಒಮ್ಮೊಮ್ಮೆ ಅದೆಂತದೋ ಬಿಳಿಯ ವಿಭೂತಿಯಂತೆ ಅದನ್ನು ತಂದು ಪುಟ್ಟನಿಗೆ ಹಚ್ಚಿ ಬಿಡುತ್ತಾರೆ ನನಗದು ಆಗುವುದೇ ಇಲ್ಲ. ಅದು ಒಂದು ತೆರನಾದ ವಾಸನೆ, ನನ್ನನ್ನು ಉಸಿರುಗಟ್ಟಿಸಿದಂತಾಗುತ್ತದೆ, ಅಲ್ಲದೆ ಕಣ್ಗಳು ಉರಿ ಬರುತ್ತವೆ ಆ ವಿಭೂತಿಯ ಕಣಗಳು ನಾಟಿದರೆ.ಹಾಗಾಗಿ ನಾನು ಕೊಂಚ ದೂರಕ್ಕೆ ನಿಲ್ಲುವಂತಾಗುತ್ತದೆ. ಈ ಪುಟ್ಟನು ಸಹ ಹಾಗೆ ಮಾಡುತ್ತಾನೆ ನನ್ನ ಜೊತೆಗೆ ಆಡುತ್ತ ಆಡುತ್ತ ಒಮ್ಮೊಮ್ಮೆ ನಾನು ಮುದ್ದಿನಿಂದ ಅವನ ಕೆನ್ನೆ ಹಿಂಡಿದ ತಕ್ಷಣ  ಜೋರಾಗಿ ಅಳಲು ಪ್ರಾರಂಭಿಸುತ್ತಾನೆ. ತಕ್ಷಣ ನನ್ನ ಗಂಡನು ಅತ್ತೆಯು ಓಡಿ ಬಂದಾಯಿತು ವಿಭೂತಿಯ ಜೊತೆಗೆ.
ಇದೆಲ್ಲ ನನಗೇಕೋ ಹಿಡಿಸುತ್ತಿಲ್ಲ.ನನ್ನ ಕಂದನನ್ನು ನಾನು ಅಳಿಸುತ್ತೇನೆ ನಗಿಸುತ್ತೇನೆ ಮತ್ತೆ ಸಮಾಧಾನ ಮಾಡುತ್ತೇನೆ ಏನು ಮಾಡಬೇಕು ಮಾಡಬಾರದು ಯೆಂದು ನನಗೆ ತಿಳಿದಿಲ್ಲವೇ ಇವರ ವಿಭೂತಿ ಬೇಕೇ..?
ಬಿಡಿ ಇಂತಹ ಬಹಳ ತಾತ್ಸರಗಳು ಈಗೀಗ ನಡೆಯುತ್ತಿದೆ. ನಾನು ಯಾವುದನ್ನೂ ಪರಿಗಣಿಸುತ್ತಿಲ್ಲ ಅಷ್ಟೇ.
ಆದರೆ ಇಂದು ಅದ್ಯಾರೋ ನಾಲ್ಕರು ಜನ ಪಂಚೆ ಶಾಲನ್ನುಟ್ಟ  ಹಿರಿಯರು ಬಂದಿದ್ದರು ಅದೆಂತದೋ ಹೋಮ ಪೂಜೆಯಂತೆ. ಮಾಡುವವರಿಗೆ ಬೇರೆ ಕೆಲಸವಿಲ್ಲ ಮಾಡಿಸುವ ಇವರಿಗೆ ಬುದ್ದಿ ಇಲ್ಲ. ಏನಾದರೂ ಮಾಡಿಕೊಳ್ಳಲಿ ಆದರೆ ಆ ಹೋಮದ ಹೊಗೆಯನ್ನು ಮನೆಗೆಲ್ಲ ಹಾಯಿಸಿದರು,ಕೊನೆಗೆ ನಾನು ಪುಟ್ಟು ಇರುವ ಕೋಣೆಗೂ ತಂದು ಬಿಡುವುದೇ . ಅಯ್ಯೋ..!! ಅದೊಂದು ರೀತಿಯ ಕೆಟ್ಟ ಘಾಟು, ನನಗೆ ತಡೆಯಲು ಆಗಲೇ ಇಲ್ಲ ಅಯ್ಯೋ... ಹೊರಹೋಗಿ ಎಂದರೆ ಅವರು ನನ್ನ ಮಾತ ಆಲಿಸಲು ಇಲ್ಲ. ಮೈಯೆಲ್ಲಾ ಉರಿಯುತ್ತಿತ್ತು, ಕಿರುಚಿದೆ,ನನ್ನ ಗಂಡ ಹಾಗು ಅತ್ತೆಯು ಸಹ ಕಿವುಡರಂತೆ ಕೈಮುಗಿದುಕೊಂಡು ಅವರೊಡನೆ ನಿಂತು ಬಿಟ್ಟಿದ್ದರು.
   ನಾನು ಎದ್ದು ಹೊರ ಓಡಿದೆ, ಹೋರಾoಗಳದತ್ತ ಅಲ್ಲಿಯೂ ನನಗೆ ಸ್ವಲ್ಪ ಹಿಂಸೆ ಎಂದೆನಿಸಿತು, ಗೇಟ್ ನಿಂದಲೇ ಹೊರ ಓಡಿ ನಿಂತೆ . ಸ್ವಲ್ಪ ಹೊತ್ತು ಮನೆಯೊಳಗೆ ಹೋಗಲಿಲ್ಲ, ಅಲ್ಲಿ  ಅದೇನೋ ಮಂತ್ರ ಪೂಜೆ ಪುನಸ್ಕಾರ ಎಂದೆಲ್ಲ ನಡೆಯಿತು. ಕೊನೆಗೆ ಅವರೆಲ್ಲ ಕಾಣಿಕೆಯೊಂದಿಗೆ ಸಂಪ್ರೀತರಾಗಿ, "ಇನ್ನೇನು ತೊಂದರೆಯಿಲ್ಲ... ಹೆದರಬೇಡಿ. ಎಲ್ಲಾ ಸರಿಯಾಗುತ್ತೆ.ದಿಗ್ಬಂಧನ ಹಾಗಿದ್ದೇನೆ "ಯೆಂದು ಭರವಸೆ ನೀಡುವುದು ನನಗೆ ಕೇಳಿಸಿತು. ಅದೇನು ಸರಿ ಇರಲಿಲ್ಲವೋ... ಅದ್ಯಾರಿಗೆ ದಿಗ್ಬಂಧನ ಹಾಕಿದರೋ.. ನನಗಂತೂ ಒಂದೂ ತಿಳಿಯಲಿಲ್ಲ.

ಪುಟ್ಟು ಜೋರಾಗಿ ಕೋಣೆಯಲ್ಲಿ ಅಳುತ್ತಿದ್ದದ್ದು ಕೇಳಿತು, ಪಾಪ ಅವನಿಗೂ ಹೊಗೆ ಹಿಂಸೆ ಕೊಟ್ಟಿತ್ತೆನ್ನಿಸುತ್ತದೆ. ನನ್ನ ಕರಳು ಹಿಸುಕಿದಂತಾಯಿತು." ಬಂದೇ.. ಪುಟ್ಟು" ಯೆಂದು ಅವನತ್ತ ಹೊರಟೆ . ನಮ್ಮ ಮನೆಯ ಬಾಗಿಲ ಬಳಿ ಓಡಿದೆ, ಬಾಗಿಲು ತೆರೆದೆ ಇತ್ತು, ಆದರೂ ನನ್ನನ್ನು ತಡೆದು ತಳ್ಳಿದಂತಾಗಿ ಬಿದ್ದು ಬಿಟ್ಟೆ. ಕಿಟಕಿಯ ಬಳಿ ಹೋದೆ ಅಲ್ಲಿಯು ನನ್ನನ್ನು ಹೊರ ಮೈ ನೂಕಿದಂತಾಯಿತು. ಹಿಂದಿನ ಬಾಗಿಲು ಸಹ ನನ್ನನ್ನು ಒಳ ಬಿಡಲಿಲ್ಲ. ಪುಟ್ಟು ಕೂಗುವುದು ಕೇಳುತ್ತಲೇ ಇತ್ತು ನನಗೆ, ಆದರೆ ಒಳಹೋಗಲು ಮಾತ್ರ ನನ್ನಿಂದಾಗಲಿಲ್ಲ.
   ನನ್ನ ಮನೆಯವರನ್ನೆಲ್ಲ ಸಹಾಯಕ್ಕಾಗಿ ಕರೆದು ಕರೆದು ಸೋತೆ.
    ಈಗ ಅರ್ಥ ವಾಯಿತು ದಿಗ್ಬಂಧನ ಹಾಕಿರುವುದು ಯಾರಿಗಾಗಿ ಯೆಂದು ..
   ಕೆಲವು ತಿಂಗಳುಗಳ ಹಿಂದೆ ನಾನು ಸತ್ತು ಹೋಗಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ನನ್ನ ಪುಟ್ಟುವಿನಿಂದ ನನ್ನ ಗಂಡನಿಂದ ಕೊನೆಗೆ ನನ್ನ ಮನೆಯಿಂದ ಹೊರ ಇಟ್ಟು ದಿಗ್ಬಂಧನ ಹಾಕಿದ್ದಾರೆ.
ಹೇಳಿ.. ಸತ್ತೆನೆಂದ ಕಾರಣಕ್ಕೆ ನಾನು ಅವನಮ್ಮ ಅಲ್ಲವೇ..?ಪುಟ್ಟು ನನ್ನ ಕಂದನಲ್ಲವೇ...? ಅವನ ಕೂಗು ನನಗೆ ಕೇಳದಿರುವುದೆ...?.ದಿಗ್ಬಂಧನ ನಮ್ಮ ನಡುವಿನ ಬಂಧವನ್ನು ಬಿಡಿಸುವುದೇ..?
- ಸೌಜನ್ಯ ದಾಸನಕೊಡಿಗೆ.

ಮರೆಯಾದ ಶತಮಾನದ ಸಂತ (ಲೇಖನ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ನಮ್ಮ ಭೂಮಾತೆಯ ಮಡಿಲಲ್ಲಿ  ತಮ್ಮ ಶುಭ್ರವಾದ ಛಾಯೆಯನ್ನು ಬಿಟ್ಟು ಹೋದ ಕೆಲವು ಪೂಣ್ಯಾತ್ಮರ ಬಗ್ಗೆ ಕೇಳಿದ್ದೆವೆ, ಓದಿದ್ದೆವೆ, ಕೆಲವರನ್ನು ಪ್ರತ್ಯಕ್ಷ ಕಂಡಿದ್ದೆವೆ. ಉಪಮಿಸಲಾಗದ ಉಪಮಾತೀತರನ್ನು ಆ ದೇವರು ಈ ಮನುಕುಲಕ್ಕೆ ಕೊಡುಗೆಯಾಗಿ ನೀಡಿದ್ದಾನೆ. ಶರಣ, ಸಂತ, ದಾಸ, ಜ್ಞಾನಿಗಳ, ವಿಜ್ಞಾನಿಗಳ ಪಧಗಳು ಒಂದೊಂದಾದರೆ ಇವೆಲ್ಲವುಗಳನ್ನು ಒಳಗೊಂಡ  ಶ್ರೇಷ್ಟ, ದಾರ್ಶನಿಕ, ಆಧ್ಯಾತ್ಮಿಕ, ಸರಳ ಸಜ್ಜನಿಕೆಯ ನಡೆಯುಳ್ಳ ಶುಭ್ರತೆಯ ಶುಭ್ರ ಬದುಕನ್ನು ಅಳವಡಿಸಿಕೊಂಡ ವಿಶೇಷ ವ್ಯಕ್ತಿತ್ವತೆಯ ಸಿದ್ಧೇಶ್ವರ ಸ್ವಾಮಿಗಳು ಒಂದು. ಇಂತಹ ಸಂತನನ್ನು ಹಿಂದೆಯೂ ನೋಡಿಲ್ಲ ಮುಂದೆಯೂ ನೋಡುವುದಿಲ್ಲ. ಅಂತಹವರ ಸನ್ನಿಧಿಯಲ್ಲಿ ಇದ್ದ ನಾವುಗಳೇ ಸೌಭಾಗ್ಯ ಶಾಲಿಗಳು. ನಾವು ಕಾಣದಂತಹ ಬಸವಣ್ಣನವರನ್ನು ಅವರಲ್ಲಿ ಕಾಣುತ್ತಿದ್ದೆವೆ. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅನುಸರಿಸಿಕೊಂಡು ಬದುಕಿದ ಶರಣರಿವರು. ಲಿಂಗತಾರತಮ್ಯ, ಜಾತಿ, ಧರ್ಮ,ಬಡವ ಶ್ರೀಮಂತರನ್ನದೆ ಎಲ್ಲರನ್ನು ಆದರಿಸಿ ಮಾತನಾಡುವ, ಪ್ರೀತಿಸುವ ಸ್ವಭಾವ ಅವರಲ್ಲಿ ಬೇರೂರಿತ್ತು. ನಿಸರ್ಗ ಪ್ರೇಮಿಗಳು, ಸಕಲ ಸಾಕಾರ ಮೂರ್ತಿ ಸಿದ್ಧೇಶ್ವರ ಸ್ವಾಮಿಗಳಾಗಿದ್ದರು.

 ಅವರ ಪ್ರವಚನಗಳು ಕೂಡ ಪ್ರಕೃತಿಯ ಪರಿಸರದಲ್ಲಿ ಕಂಡುಕೊಂಡ ಆನಂದಿಸುವ, ಮನಕೆ ಮುದ ನೀಡುವ ವಿಷಯಗಳಾಗಿದ್ದವು. ಜನಜಂಗುಳಿಯ ಗದ್ದಲವಿಲ್ಲದ ಪ್ರಶಾಂತತೆಯ ವಾತಾವರಣವನ್ನು ಬಹಳ ಇಷ್ಟಪಡುತ್ತಿದ್ದರು. ನಿಸರ್ಗದ ಜೊತೆಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ಜುಳುಜುಳು ಹರಿವ ನದಿ, ಬೆಲಿಯಿಲ್ಲದೆ ಸ್ವಚ್ಛಂದವಾದ ಜೀವನ ನಡೆಸುವ  ಪಶು ಪಕ್ಷಿಗಳು, ಕೊಗಿಲೆಗಳ ಸುಸ್ವರ ಗಾನ, ಪಕ್ಷಿಗಳ ಕಲರವ, ಭೃಂಗಗಳ ನಿನಾದ, ಪುಷ್ಪಗಳ ಸುಂಗಂಧದ ಪರಿಮಳ, ಹಸಿರು ವನಸಿರಿಯ ಮಧ್ಯೆ ಸೂರ್ಯ ಚಂದ್ರರ ಆಟ. ಇದೆಲ್ಲವು ನಿಸರ್ಗ ತನ್ನ ತಾನು ಬೆಳೆಸಿಕೊಂಡು ಉಳಿಸಿಕೊಂಡು ಮನುಕುಲಕ್ಕೆ ಉಡುಗೊರೆಯಾಗಿ ನೀಡಿದೆ. ನಾವೆಲ್ಲರೂ ಕೂಡ ಅದನ್ನು ಉಳಿಸಿಕೊಂಡು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಂದವಾಗಿ ಬೆಳೆಸಿ ಆನಂದಿಸಬಹುದೆಂಬುದು ಪ್ರವಚನಗಳಲ್ಲಿ ಬಿಂಬಿಸುವ ಪದಗಳಾಗಿದ್ದವು. ಸಿದ್ಧೇಶ್ವರ ಸ್ವಾಮಿಗಳು ದೊಡ್ಡ ಆಧ್ಯಾತ್ಮಿಕ ಚಿಂತಕರು. ಉತ್ತರ ಕರ್ನಾಟಕದ ಬಿಜ್ಜರಗಿಯ ಗ್ರಾಮದಲ್ಲಿ ಜನಿಸಿ ದೇವರು ತಮ್ಮ ನಾಲ್ಕನೆಯ ತರಗತಿಯ ಅಧ್ಯಯನ ನಂತರ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದು ನೆಲೆಸಿದರು.  ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಕೂಡ ಸಿದ್ಧೇಶ್ವರ ಸ್ವಾಮಿಜಿಯರನ್ನು ಅವರ ಬಾಲ್ಯದಲ್ಲಿಯೇ ಬೆಳೆಸಿ ಕೊಂಡ ಆಧ್ಯಾತ್ಮಿಕ ಚಿಂತನೆ ಮತ್ತು ಚಾಣಾಕ್ಷತೆಯನ್ನು ಕಂಡು ಹಿಡಿದಿದ್ದರು. ತಮ್ಮ ಜೊತೆ ಪ್ರವಚನೆ ಬೋಧನೆಗೆ ಕರೆದುಕೊಂಡು ಹೋಗುತ್ತಿದ್ದರು. ಸಿದ್ಧೇಶ್ವರ ಸ್ವಾಮಿಗಳು ಕೂಡ ತಮ್ಮ ಮುಂದಿನ ಅಧ್ಯಯನವನ್ನು ಜ್ಞಾನ ಯೋಗಾ ಶ್ರಮದಲ್ಲಿ ಮುಂದುವರೆಸಿಕೊಂಡು ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿಯೇ ತತ್ವ ಶಿರೋಮಣಿಯೆಂಬ ಪುಸ್ತಕವನ್ನು ಬರೆದರು.

ಪಂಚಭಾಷೆಗಳನ್ನು  ( ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಮತ್ತು ಇಂಗ್ಲಿಷ್) ಮಾತಾಡುವದು ಬರೆಯುವುದನ್ನು ಕಲಿತವರಾಗಿದ್ದರು. ಪರಿಸರವನ್ನು ಉಳಿಸಿ, ಪರಿಸರವನ್ನು ಬೆಳೆಸಿ, ಪರಿಸರವನ್ನು ಪ್ರೀತಿಸಿಯೆಂಬುವ ಮಂತ್ರ ಅವರದ್ದಾಗಿತ್ತು.

 ಜೀವನಕ್ಕೆ ಬೇಕಾಗುವ ಅಮೂಲ್ಯ ಶಕ್ತಿ ಈ ಪ್ರಕೃತಿಯ ಮಡಿಲಲ್ಲಿ ಅಡಗಿದೆ. ತಮಗೆ ಬೇಕಾಗಿರುವುದನ್ನು ಹುಡುಕಿ ಪಡೆಯುವ ಮನಸ್ಸು, ಧ್ಯೇಯ ನಮ್ಮದಾಗಿರಬೇಕು.  ಹಲವಾರು ಪುಸ್ತಕಗಳನ್ನು ಬರೆದು ಈ ಸಮಾಜಕ್ಕೆ ಕೊಟ್ಟಿದ್ದಾರೆ. ಅವರ ಪುಸ್ತಕಗಳ ಅಧ್ಯಯನದಿಂದ, ಪ್ರವಚನ ಕೇಳುವುದರಿಂದ ಸಾಕಷ್ಟು ಜನರು ತಮ್ಮ ಜೀವನದ ದಿಕ್ಸೂಚಿಯನ್ನೆ ಬದಲಿಸಿಕೊಂಡು ಶಾಂತಿ, ನೆಮ್ಮದಿ, ಸಂತಸವನ್ನು ಪಡೆದುಕೊಂಡಿದ್ದಾರೆ. ಸಿದ್ಧೇಶ್ವರ ಸ್ವಾಮಿಗಳಿಗೆ ಸಾಕಷ್ಟು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ನೀಡಲು ಬಂದಾಗ ಅವರು ಸ್ವೀಕರಿಸದೆ, ಇದರ ಅವಶ್ಯಕತೆ ನನಗಿಲ್ಲವೆಂದು ಅಂದವರು. ನಾನೊಬ್ಬ ಸಾಧಾರಣ ಮನುಷ್ಯ, ನಿಮ್ಮೆಲ್ಲರಲ್ಲಿಯೇ ನಾನೋಬ್ಬನೆಂದು ಎಲ್ಲ ಪ್ರಶಸ್ತಿಗಳನ್ನು ತಿರುಗಿ ಕಳುಹಿಸಿದವರು. ಈ ಆಧುನಿಕ ಯುಗದಲ್ಲಿ ಅಂತಹ ಶ್ರೇಷ್ಟ ವ್ಯಕ್ತಿಯನ್ನು ಕಾಣುವುದೇ ನಮ್ಮ ಸೌಭಾಗ್ಯವಲ್ಲವೇ. ಮುಂದಿನ ಮಕ್ಕಳಿಗೆ ಆ ಭಾಗ್ಯ ಲಭಿಸುವುದೋ ಇಲ್ಲೋ ಗೊತ್ತಿಲ್ಲ. ಸೂರ್ಯ ಬೆಳಕು ಚೆಲ್ಲುವಂತೆ ಜನರ ಮನಗಳಲ್ಲಿ ಒಳ್ಳೆಯ ಚಿಂತನೆಯ ವಿಚಾರಗಳನ್ನು ಬೆಳಗಿಸಿದರು ಸಿದ್ಧೇಶ್ವರ ಸ್ವಾಮಿಗಳು. ತಮ್ಮಲ್ಲಿ ಶಕ್ತಿ ಇರುವಷ್ಟು ದಿನ ಎಲ್ಲೆಡೆ ತಿರುಗಾಡಿ ಆಧ್ಯಾತ್ಮಿಕ ಚಿಂತನೆ ಮತ್ತು ಪ್ರವಚನ ಮೂಲಕ ಜ್ಞಾನ ಭೋದನೆಗಳನ್ನು ನೀಡುವ, ಹಂಚುವ ಉದ್ದೇಶ ಅವರು ಇಟ್ಟುಕೊಂಡವರು. ಅವರ ಉಡುಗೆ, ತೊಡುಗೆ, ನಡಿಗೆ, ಕೊಡುಗೆಗಳನ್ನು ನೋಡಿದರೆನೆ ಅವರದೆಂತಹ ವ್ಯಕ್ತಿತ್ವಯೆಂಬುದು ಗೊಚರಿಸುತ್ತಿತ್ತು. ಕಿಸೆಯಿಲ್ಲದ ಸ್ವಚ್ಛ ಶುಭ್ರ ಬಿಳಿಯ ಜುಬ್ಬ ಮತ್ತು ಬಿಳಿಯ ಪಾಯಜಾಮ್ ಅಲ್ಲದೇ ಹಣೆಯ ಮೇಲೆ ಮೂರು ಬಿಟ್ಟು ವಿಭೂತಿ, ಬಾಯಲ್ಲಿ ಜ್ಯಾನವನ್ನು ಬಿಂಬಿಸುವ ತತ್ವ ಸಿದ್ಧಾಂತಗಳ ವೈಖರಿ ಇವೆಲ್ಲವುಗಳು ಅವರ ಜೀವನ ಶೈಲಿಯನ್ನು ಎತ್ತಿ ತೊರಿಸುತ್ತಿದ್ದವು.  ಸಿದ್ಧೇಶ್ವರ ಸ್ವಾಮಿಗಳು ಸಮಯಕ್ಕೆ ಬಹಳ ಬೆಲೆ ಕೊಡುತ್ತಿದ್ದರು. ಅವರು ಪ್ರವಚನ ಹೇಳಲು ಬರುತ್ತಾರೆಂದರೆ ಸಾಕು, ಎಲ್ಲ ಧರ್ಮದವರು ಒಗ್ಗಟ್ಟಾಗಿ ಕೇಳಲು ಬರುವ ಸುತ್ತಮುತ್ತಲಿನ ಭಕ್ತಾದಿಗಳಿಗೆ ವಾಹನಗಳ ಅನಕೂಲ, ಪ್ರಸಾದದ ವ್ಯವಸ್ಥೆ ಮಾಡಲು ಅಣಿಯಾಗುತ್ತಿದ್ದರು. ಪ್ರತಿದಿನ ಒಂದು ತಾಸಿನ ಶಾಂತ ಪ್ರಸನ್ನತೆಯ ಜನಜಾತ್ರೆ  ದೊಡ್ಡ ಪ್ರಮಾಣದಲ್ಲಿ ಸೇರಿಕೊಳ್ಳುತ್ತಿತ್ತು. ಅಲ್ಲಿ ಒಂದು ಸೂಜಿ ಬಿದ್ದರು ಅದರ ಸಪ್ಪಳ ಎಲ್ಲರಿಗೂ ಕೇಳಿಸುವಂತಿರುತ್ತಿತ್ತು. ಅವರ ನುಡಿಗಳೇ ಅಮೃತ ಸವಿದಂತಿರುತ್ತಿತ್ತು. ನಮ್ಮ ದೇಶಕ್ಕೆ ಅಂತಹ ವ್ಯಕ್ತಿಗಳ ಅವಶ್ಯಕತೆ ಬಹಳವಿದೆ. ಇಂದು ನಾವುಗಳು ಅವರನ್ನು ಕಳೆದುಕೊಂಡು ಅನಾಧರಾಗಿದ್ದೆವೆ. ಅವರ ಅಂತರಾತ್ಮ ಶುಭ್ರತೆಯ ಬೆಳಕಿದ್ದಂತೆ. ಎಂದಿಗೂ ಯಾರಿಂದಲೂ ಯಾವುದನ್ನು ಅಪೆಕ್ಷೇ ಮಾಡದೆ ಸಮಾಜದ ಹಿತಗೋಸ್ಕರ ಮತ್ತು  ಬಡವರ, ಅನಾಧರ, ಅನಾನಕೂಲತೆಗಳು ಇದ್ದವರ ಶ್ರೇಯಸ್ಸಿಗಾಗಿ ಜ್ಞಾನ ದಾಸೋಹ, ಅನ್ನ ದಾಸೋಹ ನಡೆಸಿಕೊಂಡು ಬಂದವರು. ಆಶ್ರಮಕ್ಕೆ ಬಂದ ಭಕ್ತಾದಿಗಳಿಗೆ ತಾವೇ ಸ್ವತಹನಿಂತು ಊಟ ಬಡಿಸುವವರು.

ಅವರು ಜೀವನದಲ್ಲಿ ಅಲೋಪತಿ ಔಷದಗಳನ್ನು ಸ್ವಿಕರಿಸಿದವರೆ ಅಲ್ಲ. ಯಾವಾಗಲೂ ಆಯುರ್ವೇದ ಹೋಮಿಯೋಪತಿಗೆ ಬೆಲೆ ಕೊಟ್ಟವರು. ತಮ್ಮ ಜೀವನದ ಕೊನೆಯ ದಿನವನ್ನು ಸಮೀಪಿಸುತ್ತಿದ್ದಂತೆ ಆಹಾರವನ್ನು ತ್ಯಜಿಸಿ ಇಚ್ಛಾಮರಣವನ್ನು ಸ್ವೀಕಾರ ಮಾಡಿದರು. ನಾನೆಂಬುವುದನ್ನು ಮರೆತು ಈ ಬಯಲೋಳಗೆ ಹುಟ್ಟಿದ ಧ್ಯೇಯ ಪ್ರಕೃತಿಯ ಮಡಿಲಿನ ಬಯಲಲ್ಲಿ ಬಯಲಾಗಿ ಹೋಗುವಂತೆ ಬದುಕಿರೆಂದು ಹೇಳುತ್ತಿದ್ದರು. ಸಿದ್ಧೇಶ್ವರ ಸ್ವಾಮಿಗಳು ಮೂರ್ತಿ ಪೂಜೆಗೆ ನಿಶಿದ್ಧರು. ಪ್ರಕೃತಿಯೇ ದೇವರೆಂದವರು. ಅವರ ಸಂದೇಶಗಳು ಯಾವ ಆಶಾಪಾಶಗಳಿಗೆ ಸಿಲುಕದೆ ಗುರಿಯಾಗಿದೆ  ನಿಮ್ಮ ಪರಿಸರವನ್ನು ಉಳಿಸಿ, ಬೆಳೆಸಿ , ಅದರಿಂದ ಆನಂದ ಅನುಭವಿಸಿರಿ. ಉಳಿದವರಿಗೆ ಅದರ ಬಗ್ಗೆ ಜ್ಞಾನವನ್ನು ಹಂಚಿರೆನ್ನುವುದಾಗಿತ್ತು. ಅವರು ನುಡಿದಂತೆ ನಡೆದ ದೇವರು. ಈ ಪವಿತ್ರ ಭೂಮಿಯಲ್ಲಿ ಸಿದ್ಧೇಶ್ವರ ಸ್ವಾಮಿಗಳಂತಹ ಶರಣರು ಮತ್ತೆ ಮರಳಿ ಜನ್ಮತಾಳಿ ಬರಲಿ. ಈ ಭೂಮಾತೆಯ ಸೇವೆಯನ್ನು ಎಲ್ಲರೂ ಸೇರಿಕೊಂಡು ಮಾಡುವಂತಹ ಪ್ರವೃತ್ತಿ ಬೆಳೆಸಿಕೊಳ್ಳುವರಾಗಲಿ ಅಂದಾಗ ಸಿದ್ಧೇಶ್ವರ ಸ್ವಾಮಿಗಳ ಭಕ್ತರಾಗಲು ನಾವು ಸಾರ್ಥಕವಾದಂತೆ.

ಯಾಕೆ ಮೂಕನಾದೆಯೋ ಗುರುವೇ ನೀ
ಯಾಕೆ ಮೂಕನಾದಿ ಲೋಕಪಾಲಕಯೆನ್ನ 
ಸಾಕುವವರಾರಯ್ಯ ನೀ ನಿರದ ಲೋಕವ

ತಮ್ಮ ಕೊನೆಯ ಪಯಣದಲ್ಲೂ ಸರಳ ಸೂತ್ರಗಳಲ್ಲೂ ತಿಳಿಸಿದವರು. ತಮ್ಮ ಯಾವುದೇ ಮೂರ್ತಿ ಸ್ಥಾಪನೆಯಾಗಬಾರದು. ನಾನು ನನ್ನ  ಭಕ್ತರ ಮನದಲ್ಲಿ ಸ್ಥಾಪಿತನಿರಬೇಕು. ನನ್ನ ದೇಹದ ಬೂದಿ ನದಿ ಸಮುದ್ರದಲ್ಲಿ ಹರಿಯಲು ಬಿಡಿ. ಯಾವುದೇ ಬಾಹ್ಯ ಆಡಂಬರ ಬೇಕಾಗಿಲ್ಲವೆಂದು ತಿಳಿಸಿದವರು. ಇಂತಹ ವ್ಯಕ್ತಿ ನಮಗೆ ದೊರಕಿರುವುದೆ ಅಪರೂಪ. ಭೂಮಾತೆಯ ಮಡಿಲಿಗೆ ಆ ದೇವರು ಶಾಂತಚಿತ್ತದಿಂದ ಸುಂದರವಾಗಿ ಕೆತ್ತಿದ ವರ್ಜವನ್ನು ನಮಗೆ ಅರ್ಪಿಸಿದ್ದಾನೆ. ಹೌದಲ್ಲವೇ.

-  ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಭಕ್ತಿಯ ಕಣ್ಣು ರಾಯರು (ಕವಿತೆ) - ಶ್ರೀ ವೆಂಕಟೇಶ್ ಬಡಿಗೇರ್.

ಕಲಿಯುಗದ ಸ್ವರ್ಗ  ರಾಯರ ಪುಣ್ಯಸ್ಥಳವಿದು
ಇದೇ  ನೋಡು ಬೃಂದಾವನ ಇಚ್ಛಾ ಶಕ್ತಿಯ ಮಠವಿದು
ಗುರು ರಾಘವೇಂದ್ರ ಎಂದರೆ ಭಕ್ತಿಯ ಕಣ್ಣ ತೆರೆಯುವುದು
ಕಲಿಯುಗದ ಕಾಮಧೇನು ಮಹಾಮಹಿಮರ ನಾಡಿದು॥
  

ರಾಯರ ಮಹಿಮೆ ಅಪಾರ
ಅಮೃತ ಸಿಂಚನರು. 
ಭಕ್ತರ ದುರಿತ ನಿವಾರಕ ಭಾವ ಪರವಶರು
ದೈವತ್ವದ ಭಕ್ತ ಗಣಂಗಳು ವೈಕುಂಠವೇ ಧರೆಗೆ ತಂದರು॥


ಕೃಷ್ಣನ ಕೊಳಲನಾದ ಪವನಸುತ ಸಂಪ್ರೀತ
ರಾಮನ ನೋಟದಿ ಕರುಣೆ ತುಂಬಿ
ರಾಯರ ಮಠದ  ದಿವ್ಯಜ್ಯೋತಿ
ಸುಬುಧೇಂದ್ರ ತೀರ್ಥರು
ನಮ್ಮೊಳು ಭಕ್ತಿಯ ಕಣ್ಣು ತೆರೆಸಿದರು॥

ಭಕ್ತರ ಕಣ್ಣಲ್ಲಿ ರಾಯರ ಬಿಂಬ
ಮನದಲ್ಲಿ ದೈವ ಜ್ಯೋತಿ 
ಅಗೋ ಗುರುಸಾರ್ವಭೌಮರ
ಪುಣ್ಯ ಜ್ಯೋತಿ
ಕಣ್ಣ ಬೆಳಕಲ್ಲೆ ವೈಕುಂಠ ವೈಭವ ಸ್ಫೂರ್ತಿ ॥

ಭಕ್ತಿಯ ಲೋಕದ ಸಿಂಧೂರ
ಭೀಮ ಹನುಮ ಮಧ್ವ ಸ್ವರೂಪಿ ತೀರ್ಥರ ದ್ಜಿಜ
ದ್ವೈತ ಕೀರ್ತಿ ಪತಾಕೆಯು ರಾಯ ರೂವಾರಿರಿವರು ॥

 - ಶ್ರೀ ವೆಂಕಟೇಶ್ ಬಡಿಗೇರ್,  
ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರು. ಜಿಲ್ಲಾಧ್ಯಕ್ಷರು
 ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ.

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...