ಬುಧವಾರ, ಜುಲೈ 24, 2024

ಪ್ರೀತಿ ಎಂದರೆ...


ಪ್ರೀತಿ ಎಂದರೆ...

ಕಣ್ ಮನಗಳ ನಡುವೆ
ಮೂಡುವ ಮೋಹ ಸೆಳೆತವಲ್ಲ,
ಪ್ರೀತಿ ಎಂದರೆ, ಭಾವ ಬೆರೆಸುವ
ಜಾತಿ ಮೀರುವ, ನಿತ್ಯ ಚಿಲುಮೆ...

ಅಂದ ಚೆಂದ, ಚಂದಮಾಮನ
ತಂದು ಕೊಡುವುದಲ್ಲ,
ಪ್ರೀತಿ ಎಂದರೆ, ನಾನೆ ನೀನು,
ನೀನೆ ನಾನು ಎನ್ನುವ ಒಲುಮೆ...

ಸಾಲೊಂದ ಗೀಚಿ ವರ್ಣಿಸಿ
ಚೆಲುವ ಬನ್ನಿಸುವುದಲ್ಲ,
ಪ್ರೀತಿ ಎಂದರೆ, ಪ್ರೀತಿ ಕವಿತೆಗೆ
ಭಾವ ಜೀವ ನೀಡುವ ಚಿಂತನೆ...

ಜಾತಿ ನೀತಿಯ ಜಗಕೆ
ಎದರಿ ಹಾರುವುದಲ್ಲ,
ಪ್ರೀತಿ ಎಂದರೆ, ಹೃದಯನಾದವ ಬೆರಸಿ,
ಜನ್ಮ ಜನ್ಮಕೂ ಜೊತೆ ಬಾಳುವ ಕಲ್ಪನೆ...

ಬಿ ಎಂ ಮಹಾಂತೇಶ್
SAVT ಕಾಲೇಜು ಕೂಡ್ಲಿಗಿ.
ವಿಜಯನಗರ ಜಿಲ್ಲಾ
9731418615

ಕಾರ್ಗಿಲ್ ಕಂಡ ಕದನ ಕಲಿಗಳಿಗೆ ಇಪ್ಪತ್ತೈದರ ಸಂಭ್ರಮ...!

ಭಾರತೀಯರು ಎಂದೂ ಮರೆಯದ ಅವಿಸ್ಮರಣೆಯ ದಿನಗಳಲ್ಲಿ ಜುಲೈ 26 ಕೂಡ ಹೌದು. ರಾಷ್ಟ್ರಕ್ಕಾಗಿ ರಣಾಂಗದಲ್ಲಿ ಹೋರಾಡಿ ಮಡಿದ ವೀರ ಯೋಧರು ಜಯಿಸಿದ ಕಾರ್ಗಿಲ್ ವಿಜಯದ ಕಥೆಯನ್ನು ನಾನೀಗ ಒಮ್ಮೆ ಮೆಲುಕು ಹಾಕಲು ಹೊರಟಿದ್ದೇನೆ.
    ಕಾರ್ಗಿಲ್ ಯುದ್ಧ ಪ್ರತಿಯೊಬ್ಬ ಭಾರತೀಯರ ಮನದಾಳದಲ್ಲಿ ಅಚ್ಚಳಿಯದೆ ಉಳಿದಿದೆ. ಈ ದೇಶದ ಪರಂಪರೆ, ಇತಿಹಾಸ, ಘನತೆ, ಶ್ರೇಷ್ಠತೆಗಳನ್ನು ಹಾಗೂ ಯುದ್ಧದಂತಹ ವೀರಗಾಥೆಗಳನ್ನು ಮರೆಯುವುದಾದರೂ ಹೇಗೆ...?

 ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಂ ಬಾತ್ರಾ, ಗ್ರೇನೇಡಿಯರ್  ಯೋಗೇಂದ್ರ ಸಿಂಗ್ ಯಾದವ್, ಕ್ಯಾಪ್ಟನ್ ಅಮೂಲ್ ಕಾಲಿಯಾ, ರಾಜೇಶ್ ಅಧಿಕಾರಿ, ಅಜಯ್ ಅಹುಜಾ, ಮೇಜರ್ ವಿವೇಕ್ ಗುಪ್ತ, ಕೆಂಗುರುಸೆ, ಲೆಫ್ಟಿನೆಂಟ್  ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಸಾವಿರಾರು ತರುಣ ಯೋಧರ ಸಾಹಸ, ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿ ತಾಯಿ ಭಾರತಮಾತೆಗೆ ವಿಜಯ ದೊರೆತ ಕಥೆ ಇದು.
     ಅದೊಂದು ಸಂದರ್ಭ ನಮ್ಮ ನಿತ್ಯ ಜೀವನದಲ್ಲಿ ಅಣ್ಣತಮ್ಮಂದಿರ ಕುರಿತು ಕೇಳುವ ಗಾದೆ ಮಾತಿದೆಯಲ್ಲ ಹುಟ್ಟುತ್ತ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬಂತೆ ಬೇರೆಯಾಗಿದ್ದ ಭಾರತ ಮತ್ತು ಪಾಕಿಸ್ತಾನ ಸೇರುವ ಸಮಯ ಬಂದಿತ್ತು.

      ಭಾರತ ಅಣ್ವಸ್ತ್ರ ಪ್ರಯೋಗ ನಡೆಸಿ 15 ದಿನಗಳಲ್ಲಿ ಪಾಕಿಸ್ತಾನ ಕೂಡ ಅಣು ಪರೀಕ್ಷೆ ನಡೆಸಿತ್ತು. ಪರಿಣಾಮ ಜಗತ್ತಿನ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದವು. ಭಾರತ ಹಿರಿಯಣ್ಣನಾಗಿ ಪಾಕಿಸ್ತಾನವನ್ನು ತಬ್ಬಿಕೊಳ್ಳಲು, ಸ್ನೇಹದ ಮಾತುಗಳನ್ನು ಆಡಲು ಕೈ ಚಾಚಿತು. ಅಂದಿನ ಭಾರತದ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ 1999ರ ಫೆಬ್ರವರಿ 20ರಂದು ಭಾರತದಿಂದ ಪಾಕಿಸ್ತಾನದತ್ತ ಬಸ್ಸಂದನ್ನು ಹೊರಡಿಸಿದರು. ಇತಿಹಾಸದ ಪುಟಕ್ಕೆ ಹೊಸ ದಾಖಲೆ ಸೇರಿಸುವ ಸಂತಸ. ಇನ್ನು ಮುಂದೆ ನಾವಿಬ್ಬರೂ ವೈರಿಗಳಲ್ಲ! ಬಸ್ಸು, ರೈಲುಗಳ ಮೂಲಕ ಸಂಬಂಧ ಬೆಸೆಯಲ್ಲಿರುವ ಹಳೆಯ ಗೆಳೆಯರು! ಅಖಂಡ ಭಾರತಮಾತೆಯ ಸುಪುತ್ರರು! ಸ್ವತಹ ವಾಜಪೇಯಿಯವರೇ ಎಲ್ಲಾ ಒತ್ತಡಗಳನ್ನು ಮೀರಿ ಪಾಕಿಸ್ತಾನಕ್ಕೆ ಹೊರಟರಷ್ಟೇ ಅಲ್ಲ, ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿ, ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗುವಂತೆ ಮತ್ತು ಜಮ್ಮು-ಕಾಶ್ಮೀರದ ಸಮಸ್ಯೆಗಳನ್ನು ತಮ್ಮೊಳಗೆ ಬಗೆಹರಿಸಿಕೊಳ್ಳುವಂತೆ ಭರವಸೆಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡರು.

     ಪಾಕಿಸ್ತಾನ ನರಿ ಬುದ್ಧಿಯ ರಾಷ್ಟ್ರ. ಅಲ್ಲಿ ಈ ಕೊಟ್ಟ ಮಾತುಗಳಾಗಲಿ, ಇಟ್ಟ ಭರವಸೆಗಳಿಗಾಗಲಿ ಬೆಲೆ ಇಲ್ಲ. ಧರ್ಮಾಂಧತೆಯೇ ತುಂಬಿದ ಆ ದೇಶ ಎಂದೂ ತನ್ನ ಮೂಲ ಮನೋಧರ್ಮದ ಗುಣ ಬಿಡದು. ಹೀಗಾಗಿಯೇ ಇತ್ತ ಜಂಟಲ್ ಮನ್ ಒಪ್ಪಂದದ ಕರಾರುಗಳನ್ನು ಮರೆತು ಲಾಹೋರ್ ಘೋಷಣೆಗೆ ಅಂಕಿತ ಬಿದ್ದ ಐದೇ ವಾರಗಳಲ್ಲಿ ಅಂದರೆ 1999ರ ಮಾರ್ಚ್ 28ರ ವೇಳೆಗೆ ಕಾರ್ಗಿಲ್ ಬೆಟ್ಟಗಳತ್ತ ಪಾಕಿಸ್ತಾನಿ ಸೇನೆ ದಾಳಿಗೆಂದು ಕಾಲಿಟ್ಟಿತು. ಪಾಕಿಸ್ತಾನ ಭಾರತದೊಂದಿಗೆ 1948, 1965, 1971ರ ಮೂರು ನೇರ ಯುದ್ಧಗಳಲ್ಲಿ ಸೋಲುಂಡ ಮೇಲೆ ಈ ಬಾರಿ ಛದ್ಮ ಯುದ್ಧದ ಮಾರ್ಗ ಹಿಡಿಯಿತು. ಪಾಕಿ ಸೈನ್ಯ ಹಾಗೂ ಐ ಎಸ್ ಐ ಗಳು ಸಮರ್ಥ ಯೋಜನೆಗಳನ್ನು ರೂಪಿಸಿದ್ದವು. ಯೋಜನೆಯಂತೆ ಭಾರತದ ಸೇನೆಯ ದಿಕ್ಕು ತಪ್ಪಿಸಲು ಪಾಕ್ ಆಕ್ರಮಿತ ಜಿಲ್ಲೆಗಳಾದ ರಜೋರಿ, ಪುಂಚ್, ಗಂಧರ್ಬಾಲ್, ಅನಂತ್ ನಾಗ್ ಗಳಲ್ಲಿ ಭಯೋತ್ಪಾದಕ ಕೃತ್ಯ ಮಿತಿ ಮೀರಿತು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫರ್ವೇಜ್ ಮುಷರ್ರಫ್ ತಡಮಾಡಲಿಲ್ಲ ‘ಆಪರೇಷನ್ ಬಿದ್ರ್’ಗೆ ಚಾಲನೆ ನೀಡಿದರು. ಶತ್ರುಗಳಿಗೆ ತಿಳಿಯುವ ಮುನ್ನ ಎತ್ತರದ ಗುಡ್ಡಗಳನ್ನು ವಶಪಡಿಸಿಕೊಳ್ಳುವುದೇ ಈ ಯೋಜನೆಯ ಗುರಿಯಾಗಿತ್ತು. ಮೇ 8ರ ಹೊತ್ತಿಗೆ ಪಾಕೀಗಳು ಗುಡ್ಡಗಳನ್ನು ಆಕ್ರಮಿಸಿ ಬಂಕರುಗಳಲ್ಲಿ ಕುಳಿತುಬಿಟ್ಟರು. ಮರುದಿನ ಸೇನಾ ಠಾಣಕ್ಕೆ ದನಗಾಯಿಗಳು ಸುದ್ಧಿ ತಲುಪಿಸಿದರು.

ಮರುದುನವೇ ಸೇನೆ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಕಳುಹಿಸಿತು‌. 6 ಜನರ ತಂಡದೊಂದಿಗೆ ‘ಭಜರಂಗ್’ ಪೋಸ್ಟಿನತ್ತ ಹೊರಟರು, ಶತ್ರುಗಳಿರುವುದು ಖಾತ್ರಿಯಾಗಿ ತಂಡ ಕದನಕ್ಕಿಳಿಯಿತು. ಶತ್ರುಗಳ ಸಂಖ್ಯೆಯನ್ನು ಅಂದಾಜಿಸಲು ಎಡವಿದ್ದ ತಂಡ ಜಿಹಾದಿ ಸೈನಿಕರ ಬಂಧನದಲ್ಲಿ ಸೆರೆ ಸಿಕ್ಕಿ, ಚಿತ್ರವಿಚಿತ್ರವಾಗಿ ಅವರಿಂದ ಹಿಂಸಿಸೆಗೊಳಗಾಗಿ 22ದಿನಗಳ ಸೆರೆಯ ನಂತರ ಕೊಲ್ಲಲ್ಪಟ್ಟರು.

ಮೇ 24ರಂದು ಇದು ವ್ಯವಸ್ಥಿತ ದಾಳಿ ಎಂದರಿತ ಸೇನೆ ಪ್ರಧಾನಿ, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಐಬಿ, ರಾಗಳು ಮತ್ತು ಮೂರೂ ಸೇನೆಯ ಮುಖ್ಯಸ್ಥರುಗಳನ್ನು ಸೇರಿಸಿ ಮಹತ್ವದ ಸಭೆ ನಡೆಸಿತು. ಭಾರತ ಸೇನೆಯ ಜನರಲ್ ಮಲಿಕ್ “ಸೇನೆಯ ಮೂರೂ ವಿಭಾಗಗಳು ಜೊತೆಗೂಡಿ ದಾಳಿಗೈದರೆ ಮಾತ್ರ ಪರಿಹಾರ. ಅನುಮತಿ ಕೊಡಿ” ಎಂದು ಪ್ರಧಾನಿಗೆ ತಾಕೀತು ಮಾಡಿದರು. ಅನುಮತಿ ದೊರೆತ ನಂತರ ಕೊನೆಯಲ್ಲಿ ಎದ್ದುನಿಂತು ನಿಶ್ಚಿತ ಗೆಲುವಿನ ಭರವಸೆಯಿಂದ ಇಡೀಯ ಹೋರಾಟವನ್ನು ‘ಆಪರೇಷನ್ ವಿಜಯ್’ ಎಂದು ಕರೆದರು.

ಇದೀಗ ಮೂರು ಯಶಸ್ವಿ ಯುದ್ಧಗಳ ನಂತರ ಭಾರತಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿತ್ತು. ಸೌರಬ್ ಕಾಲಿಯಾಗೆ ಅನೇಕ ತನ್ನದೇ ಸೈನಿಕರ ಮಾರಣಹೋಮಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶ ಒದಗಿತ್ತು. ಯುದ್ಧ ಬಹಳ ಜೋರಾಗಿಯೇ ಶುರುವಾಯಿತು. ದಾಳಿ-ಪ್ರತಿದಾಳಿಗಳು ನಡೆದವು. ವಿಮಾನಗಳ ವೇಗದ ಹಾರಾಟ, ಹೆಲಿಕಾಪ್ಟರ್‌ಗಳ ಭರ್ಜರಿ ಸದ್ಧು, ಮದ್ದು-ಗುಂಡುಗಳ ಅಬ್ಬರದ ಸಿಡಿತ, ರಾಷ್ಟ್ರಕ್ಕಾಗಿ ಪ್ರಾಣಕೊಡುವ ಸೈನಿಕನ ತುಡಿತ ಎಲ್ಲವೂ ಜೋರಾಗಿಯೇ ಸಾಗಿತ್ತು. ಮೊದಮೊದಲು ಸ್ವಲ್ಪ ನಷ್ಟ ಅನುಭವಿಸಿದ ಭಾರತೀಯ ಸೇನೆ ಸಜ್ಜನರ ಸೋಗಿನ ವ್ಯಾಘ್ರ ಪಾಕಿಗಳನ್ನು ಬಗ್ಗುಬಡೆದು ತೋಲೋಲಿಂಗ್, ಟೈಗರ್ ಹಿಲ್ ಪಾಯಿಂಟ್ 5140, 4700, 5100, ಲೋನ್ ಹಿಲ್ ಮತ್ತು ಥ್ರೀ ಪಿಂಪಲ್ಸ್‌ಗಳನ್ನು ಸೇರಿದಂತೆ ಹಲವಾರು ಪ್ರದೇಶಗಳನ್ನು ಜುಲೈ 15ರ ಹೊತ್ತಿಗೆ ಅವರ ಕಪಿಮುಷ್ಠಿಯಿಂದ ವಶಪಡಿಸಿಕೊಂಡಿತು. ಸುಮಾರು 527 ಯೋಧರ ಬಲಿದಾನದ ಬಳಿಕ 1999ರ ಜುಲೈ 26ಕ್ಕೆ ಕಾರ್ಯಾಚರಣೆ ನಿಲ್ಲಿಸಿ “ಆಪರೇಷನ್ ವಿಜಯ್”ನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿತ್ತು. ಪಾಕಿಸ್ತಾನ ತೀವ್ರ ಮುಖಭಂಗಕ್ಕೆ ಒಳಗಾತಿತಲ್ಲದೆ ಬೆನ್ನಿಗೆ ಚೂರಿಹಾಕುವ ರಾಷ್ಟ್ರ ಎಂದು ಜಗತ್ತಿಗೆ ತಿಳಿಯಿತು.

 ಹೀಗೆ ಈ ಬಾರಿ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿ 25 ವರ್ಷ ತುಂಬುತ್ತದೆ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶವು ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ.
- ಬ್ರಿಜೇಶ್ ಕುಮಾರ್ ಬಿ.ಟಿ.
 ವಿದ್ಯಾರ್ಥಿಗಳು ಹಾಗೂ ಯುವ ಚಿಂತಕರು.
ಚಿತ್ರದುರ್ಗ.

ಸೋಮವಾರ, ಮೇ 13, 2024

ಮತ್ತೆ, ತಿರಿಗಿ ಬರಲೇ ಇಲ್ಲ (ಕವಿತೆ) - ನಾಗು.

ದಿನದಿನವೂ ತೀವ್ರವಾಗುತ್ತಿರುವ ಬಯಕೆ..
ಬೆದೆಗೆ ಬಂದಿದೆ ದೇಹ,
ಮನಸ್ಸು, ಅತ್ಮ.
ನೂರಾರು ಕನಸು, ಸಾವಿರಾರು ಬಯಕೆ.
ಮಿಲನ, ಸಮ್ಮಿಲನಕ್ಕಾಗಿ ಹಾತೊರೆತ. 

ಬಾಯ್ ಪ್ರೆಂಡ್, ಗಂಡ, ಪಕ್ಕದ ಮನೆಯವನು.... ದೇಹ ಹೀರುವ ದುಂಬಿಗಳು. ಹಿಡಿದು, ಮುದ್ದಿಸಿ, ರಮಿಸಿ, ಸ್ಖಲಿಸಿ...
ಒರೆಸಿಕೊಂಡು ಎದ್ದು ಹೋಗಿ ಬಿಡುವವರೇ ಎಲ್ಲರೂ....

ದೇಹದ ಆಸೆ ತಣಿದರೂ... ಮನಸ್ಸು, ಆತ್ಮಗಳಿಗೆ ನಿತ್ಯ ಉಪವಾಸ.
ಯಾರಿಂದಲೂ ಇಲ್ಲ ತೃಪ್ತಿ.

ಕಾಯುತ್ತಲೇ ಇದ್ದೆ. 
ನನ್ನ ಮನವನ್ನು ಮುಟ್ಟಬಲ್ಲ, ಅತ್ಮವನ್ನು ತಣಿಸಬಲ್ಲ ಪುರುಷ ಸಿಂಹನಿಗಾಗಿ. 
ಕನಿಷ್ಟ, 
ಕೆಲಸ ಮುಗಿದ ಮೇಲೆ,
ಅಪ್ಪಿ, ಹಣೆಗೊಂದು ಮುತ್ತಿಟ್ಟು, ಮಾತಾಡಿ-ಮನಸ್ಸು ಮುಟ್ಟಬಲ್ಲವನಿಗಾಗಿ.

ಕೊನೆಗೂ ಒಬ್ಬ ಬಂದ. ಮನ್ಮಥ ರೂಪ. ದೇಹ, ಮನಸ್ಸನ್ನು ಮುಟ್ಟಿತ್ತು ಅವನ ಪ್ರೀತಿ, ಪ್ರತಾಪ!
ಅಪ್ಪಿ, ಮುತ್ತಿಟ್ಟು, ಹಣೆಸವರಿ, ಮತ್ತೆ ಬರುವೆ ಎಂದ. 
ಪ್ಯಾಂಟ್ ಏರಿಸಿ, ಜಿಪ್ ಎಳೆದು, ಕಣ್ ಹೊಡೆದು, ಆಸೆ ಚಿಗುರಿಸಿ ಹೋದ.

ಮತ್ತೆ ಬರುತ್ತಾನೆಂದು ಕಾದು ಕಾದು, ಕಾದು ಕನ್ಯೆಯಾಗಿಯೇ ಉಳಿದೆ..... 
ದೇಹ ಮುಟ್ಟಿದ ನೂರರಲ್ಲಿ... ಒಬ್ಬನೂ ಮುಟ್ಟಲಾಗಲಿಲ್ಲ ನನ್ನ  ಆತ್ಮವನ್ನು. 

ಮತ್ತೆ, ತಿರಿಗಿ ಬರಲೇ ಇಲ್ಲ.
ಮನಸ್ಸು
ಮುಟ್ಟುವ, ದಾಹ ತೀರಿಸುವ ಅಸೆ ಚಿಗುರಿಸಿದ ಅವನು.

- ನಾಗು. 

ನನ್ನವ್ವ (ಕವಿತೆ) - ಕುರುಬರ ಗಾದಿಲಿಂಗಪ್ಪ, ಪಟ್ಟಣಸೆರಗು.

ನನ್ನವ್ವ ಮಗುವಿನಂತವಳು.
ನಮ್ಮಂತೆ ಹುಟ್ಟಿದರು, ಸುಖವಾಗಿ ಬೆಳೆದವಳಲ್ಲ;
ಬಂಧುಗಳ, ನೆರೆಹೊರೆಯವರ ಜೊತೆಗೆ 
ಆಟಪಾಠಗಳೆಂದು ಕುಣಿದು, ನಲಿದು ಖುಷಿ ಪಟ್ಟವಳಲ್ಲ ನನ್ನವ್ವ.

ತಾಯ ಮಡಿಲಿಂದ ಭುವಿಗೆ ಬಂದ್ದದೆ ತಡ ದುಡಿತದ ಯಂತ್ರವಾದವಳು
ಮಕ್ಕಳ ಜೊತೆ ಆಟವಾಡುವ ವಯಸ್ಸಿನಲ್ಲಿ 
ಅಕ್ಕನ ಮಕ್ಕಳ ತಾಯಂತೆ ಪೊರೆದವಳು. ತೊಳೆಯುತ್ತ, ಬಳಿಯುತ್ತ, ಅಡಿಗೆ ಮಾಡುತ್ತ ಪಾತ್ರೆ ಕಸಬರಿಗೆಯೊಟ್ಟಿಗೆ ಆಟವಾಡುತ್ತ ದೊಡ್ಡವಳಾದಳು ನನ್ನವ್ವ.

ನನ್ನವ್ವ ದೊಡ್ಡವಳಾದ್ದದೇ ತಡ ಮೂರುಗಂಟಿಗೆ ಕೊರಳೊಡ್ಡಿ ನಿಂತು ಹಿರಿದಾದ ಮನೆಯ ಹಿರಿಸೊಸೆಯಾದವಳು.
ಹದಿಹರೆಯದ ಗರತಿ
ಮೂರುಗಂಟಿಗೆ ಪ್ರತಿಯಾಗಿ ಮೂರೊತ್ತು ಮನೆ-ಹೊಲ, ಗಂಡ-ಮಕ್ಕಳು ಎಂದು ದುಡಿದವಳು ನನ್ನವ್ವ. 

ತಾಯಿತಂದೆಯಿಲ್ಲದ ತವರು ಕರುಣೆಗೆ ಬೀಡಾದರೆ, ಗಂಡನ ಮನೆಯ ಬಗೆಗೆ ಹೇಳಬೇಕೆ?
ಅತ್ತೆ ಮಾವ, ನಾದಿನಿ-ಮೈದುನರಿರುವ ಗೂಡಿನ
ಹಿರಿಸೊಸೆಯಲ್ಲವೇ ನನ್ನವ್ವ
ಒಲವಿಲ್ಲ, ನಲಿವಿಲ್ಲ, ಮಾತಿಲ್ಲ.
ದುಡಿತದ ಗರತಿಯಾದಳು ನನ್ನವ್ವ.

ನನ್ನವ್ವ ತಾಯಿಯಾದಳು, ಅತ್ತೆಯಾದಳು, ಅಜ್ಜಿಯೂ ಆದಳು 
ಆದರೂ, ಸುಖವು ಹುಣ್ಣಿಮೆಯ ತಂಗಾಳಿಯಂತೆ...
ಅವಳ ಆಸೆಗಳ ಕೇಳಿದವರಿಲ್ಲ
ಅವಳ ಬೈಯುತ್ತ ನೀ ಸುಮ್ಮನಿರು, ನಿನಗೇನು ಗೊತ್ತು, ನೀ ಮಾತನಾಡಬೇಡ ಎಂದು
ಸುಮ್ಮನಿರಿಸಿದ್ದೇ ಆಯಿತು.
ಆಕೆಯ ದುಡಿತದ ತುತ್ತಿಗರೆ ಎಲ್ಲ.

ಈಗ ೪೫ರ ಹರೆಯದ ಹೆಂಗಸು ನನ್ನವ್ವ ಆದರೂ, ೬೫ರ ಇಳಿಯ ವಯಸ್ಸಿನ ಅಜ್ಜಿಯಂತಾಗಿಹಳು.
ತನಗಾಗಿ ಅಲ್ಲ, ಮನೆ-ಹೊಲ, ಗಂಡ-ಮಕ್ಕಳು ಕುಟುಂಬ ಎಂದು
ಹಗಲಿರುಳು ದುಡಿದುದರ ಫಲವಾಗಿ. ಎತ್ತಿನ ಬಾಲದ ಹೊಡೆತದಿಂದ ಕಣ್ಣು ಮಸುಕಾಗಿಸಿಕೊಂಡಿಹಳು,
ಎತ್ತಿನ ಅಂಕಣದ ಸಗಣಿಯ ದಿನನಿತ್ಯ ಎತ್ತುತಿದ್ದರ ಫಲವಾಗಿ. 
ಸಾಲದಕ್ಕೆ
ಜಾರಿಬಿದ್ದು ಹಲ್ಲು ಕಳೆದುಕೊಂಡು ನೋವು ತಿನ್ನುತಿಹಳು.  

ಆಗಾಗ ಕಣ್ಣಿನಿಂದ ನೀರು ಸೋರುತ್ತಿರುತ್ತದೆ
ಅದು ಕಣ್ಣನೋವಿನ ನೀರೋ, ಮನದ ನೋವಿನ ನೀರೋ
ಅವಳ ಹೊರತು ಕಂಡವರು ಅರಿಯರು ಆ ಬಿಸಿನೀರ ಕಥೆಯ ವ್ಯಥೆಯ. 

ಏನಾದರೂ, ನನ್ನವ್ವ ಮಗುವಿನಂತವಳು ಬಿದ್ದು ಗಾಯಮಾಡಿಕೊಂಡು ಎದ್ದೊಡುವ ಮಗುವಿನಂತೆ,
ಬೈಸಿಕೊಂಡರು, ಬಡಿಸಿಕೊಂಡರು ಮೈಕೊಡವಿ ಮುನ್ನಡೆಯುವ ಮಗುವಿನಂತೆ ನನ್ನವ್ವ.

ಅವ್ವ, ನಿನಗೆ ನಾ ಏನ ಕೊಡಲಿ? ಪ್ರೀತಿಯ ಹೊರತು.
ಅವ್ವ, ನಾ ಏನ ಬೇಡಲಿ? ಕ್ಷಮೆಯ ಹೊರತು.


 - ಕುರಬರ ಗಾದಿಲಿಂಗಪ್ಪ, ಪಟ್ಟಣಸೆರಗು. ಬಳ್ಳಾರಿ ಜಿಲ್ಲೆ.

 (ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9113036287 ವಾಟ್ಸಪ್‌ ಮಾತ್ರ)

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...