ಶನಿವಾರ, ಜೂನ್ 7, 2025

ಕಾಡು ಬೆಳಸಿ ನಾಡು ಉಳಿಸಿ...

ಕಾಡು ಬೆಳಸಿ ನಾಡು ಉಳಿಸಿ...

ಹಸಿರೇ ಉಸಿರು ಉಸಿರೇ ಹೆಸರು
ಮಳೆಯಿoದ ಬೆಳೆ, ಬೆಳೆಯಿoದ ಪೈರು
ಪ್ರಕೃತಿಯ ಮಡಿಲಲಿ ನಿತ್ಯ ಹಸಿರ ತೇರು
ಬಾನೆತ್ತರೆಕ್ಕೆ ಬೆಳೆಸಿ ಅಮೃತದ ಕಲ್ಪತರು 

ಸುಂದರ ಪ್ರಕೃತಿಯು ಮನಸನು ಸೆಳೆಯುವುದು
ಭಗವಂತ ನೀಡಿದ ನಿಸರ್ಗ ಧಾಮವಿದು
ಎಷ್ಟು ಇಂಪು ಮುಂಜಾನೆ ಕೋಗಿಲೆ ಕೂಗುವುದು 
ಮಯೂರಿಯ ನೃತ್ಯ ನೋಡಲು ಎರಡು ಕಣ್ಣು ಸಾಲದು

ಕಾಡು ಬೆಳಸಿ ನಾಡು ಉಳಿಸಿ 
ಮರ ಗಿಡ ಕಡಿಯುವ ಕ್ರೂರತನ ನಿಲ್ಲಿಸಿ 
ಕಾಡು ಪ್ರಾಣಿಯ ಬೇಟೆಯ ಅಳಿಸಿ
ಗುಡಿಸಲು ಕಟ್ಟಿ ಕಾಡಲ್ಲಿ ನೆಮ್ಮದಿ ಅನುಭವಿಸಿ

ಜೀವ ಉಳಿಸುವ ಪ್ರಾಣ ವಾಯುವಿದೆ 
ರೋಗಗಳಿಗೆ ರಾಮಬಾಣದ ಗ್ಯಾರಂಟಿ ಔಷಧವಿದೆ
ಕವಿ ಸಾಹಿತಿಗಳಿಗೆ ನೆಮ್ಮದಿಯ ತಾಣವಿದೆ
ಗಡ್ಡೆ ಗೆಣಸುಗಳ ಸಿಹಿಯಾದ ಫಲವಿದೆ

ಹಸಿರೇ ಉಸಿರಾಗಲಿ ಸದಾ ನಿತ್ಯ ನೂತನ
ಮರಗಳ ನೆಟ್ಟು ಪರಿಸರ ಉಳಿಸಿ ಬದುಕು ಪಾವನ
ಸಂರಕ್ಷಿಸಿ ಅನುದಿನ ಹಚ್ಚ ಹಸಿರಿನ ಪ್ರಕೃತಿಯನ 
ಪ್ರಕೃತಿ ಇರದಿದ್ದರೆ ನಮ್ಮ ಬದುಕೇ ಶೂನ್ಯ ಜೋಪಾನ 

ನಿಲ್ಲಿಸು ಮಾನವ ನಿನ್ನ ಕ್ರೂರತನ
ನಮ್ಮಂತೆ ಉಳಿಯಲಿ ಕಾಡು ಪ್ರಾಣಿಗಳ ಸಂತಾನ 
ತಿಳಿ ಸಾಲುಮರದ ತಿಮ್ಮಕ್ಕಳ ದಿಟ್ಟತನ
ಅಂದಾಗ ಪರಮಾತ್ಮನೂ ಕೂಡ ಮೆಚ್ಚುತ್ತಾನ...
ಶ್ರೀ ಮುತ್ತು ಯ.ವಡ್ಡರ 
 ಶಿಕ್ಷಕರು
9019565294

ನನ್ನ ಕವನ!

ನನ್ನ ಕವನ!
ನನ್ನ ಪದಗಳೆಂಬ ಕಂಗಳು
ಪುಟ್ಟ ಕೈಗಳೆಂಬ ಸಾಲುಗಳು
ಬಿಮ್ಮನೆ ನಿಂತ ನಿಮ್ಮನ್ನಪ್ಪಲು
ಪಿಳಿಪಿಳಿ ನೋಡುತ ತೆರೆದ ತೋಳುಗಳ
ಮಗುವು ನನ್ನ ಕವನ

ಎಂದೂ ಬಾರದ ನಲ್ಲೆಗಾಗಿ
ಅಕ್ಷರೋದ್ಯಾನದಲಿ ವಿಹಾರಿಯಾಗಿ
ಪವಡಿಸಿ ಮಾಲಿಯೂ ಆಗಿ
ನಿತ್ಯ ಅರಳಿ ಬಾಡುತಿರುವ
ಹೂವು ನನ್ನ ಕವನ

ತುಂಬು ಜಾತ್ರೆಯ ನಡುವೆ
ಎಂದೋ ಕೈ ಬಿಟ್ಟು ಕಳೆದು ಹೋದ
ಮಗು, ನನ್ನವರು ಬರುತ್ತಾರೆಂದು
ತೇರು ಗಾಲಿಯ ಬಳಿ
ಧೂಳು ಮುಕ್ಕುತ್ತಾ ಕುಳಿತ
ಅನಾಥನು ನನ್ನ ಕವನ

ಗ್ರಂಥಾಲಯ ಸಂತೆಯ ನಡುವಲಿ
ಮೂಲೆ ಗಲ್ಲಿಯೊಂದರ ಬಳಿ
ಗುಡ್ಡೆಗುಡ್ಡೆ ಪದರಾಶಿಯ ಹೇರಿ
ಬಿಕರಿಯಾಗದೆ ಕುಳಿತ
ಮಾಲು ನನ್ನ ಕವನ

ಕಿರೀಟ ಪೋಷಾಕು 'ಸರ'ಮಾಲೆಗಳ
ಭರಾಟೆಯ ಮಧ್ಯೆ
ಚಪ್ಪಾಳೆ ತಟ್ಟುವ ಕೈಯಾಗಿ
ಅಭಿವಂದಿಸುವ ಮನವಾಗಿ
ಖಾಲಿಹೊಟ್ಟೆಯಲೆ ಸಂತೃಪ್ತಿಯ
ತೇಗು ತೆಗೆದ
ತಿರುಕನು ನನ್ನ ಕವನ

ಯಾರ ಕಾಲಿಗೂ ಭಾರವಾಗದೆ
ಮತ್ತಾರಿಗೂ ತೊಡರಾಗದೆ
ಊರ ಹೊರಗಿನ ಜೋಪಡಿಯಲಿ
ತನ್ನ ಪಾಡಿಗೆ ತಾನು
ತಣ್ಣಗೆ ಕೂತ
ಜೋಗಿಯು ನನ್ನ ಕವನ

~ ಅರಬಗಟ್ಟೆ ಅಣ್ಣಪ್ಪ

ಬುಧವಾರ, ಜೂನ್ 4, 2025

ಸುರಿಯುತಿರಲಿ ಹೀಗೆ...

ಸುರಿಯುತಿರಲಿ ಹೀಗೆ...

 ಮುಂಗಾರು ಮಳೆಯೆಂದರೆ ಸವಿ ನೆನಪಿನ ಮಾಲೆ
 ಕಣ್ಮುಂದೆ ಸುಳಿದಿದೆ ಇನಿಯನ ಪ್ರಥಮ ಪ್ರೇಮದೋಲೆ

 ಅಕ್ಕರೆಯಲಿ ಬರೆದ ಗೆಳೆಯನ ಒಲವಿನ ಅಕ್ಷರ 
ಬಾಳ ತುಂಬಿದೆ ಬುವಿಯ ಅಪ್ಪಿದಂತೆ ಹಸಿರ

ಇಳೆಯ ಮುದ್ದಿಸುವ ವರ್ಷ ರಾಜನಂದದಿ
 ಗೆಳೆಯನೊಲವಲಿ ತೋಯ್ದಿದೆ ಮನ ಮುದದಿ

 ಮುಗಿಲಿನಿಂದಿಳಿವ ಹನಿ ಹನಿಗೂ ಅದೇನೋ ಕಾತುರ
ಬುವಿಯ ಕೆನ್ನೆಗೆ ಮುತ್ತಿಡುವ ಕ್ಷಣವೇ ಮಧುರ 

ಮಳೆರಾಜನ ಒಲವ ಅಬ್ಬರಕೆ ಧರಣಿ ಶರಣಾದಂತೆ
 ನಿನ್ನೊಲವ ಮಳೆಗೆ ನಾನಾದೆ ಸ್ವಾತಿ ಮುತ್ತಂತೆ 

ತೇಲಿದೆ ನೆನಪು ಕೊಡೆ ಹಿಡಿದು ಜೊತೆ ನಡೆದ ಘಳಿಗೆಗೆ
 ಎಡೆ ಬಿಡದೆ ಸುರಿಯುತಿರಲಿ ಪ್ರೀತಿ ಮಳೆ ಬಾಳಿಗೆ
 ಮಧುಮಾಲತಿರುದ್ರೇಶ್ ಬೇಲೂರು

ಶುಕ್ರವಾರ, ಮೇ 9, 2025

ನಗೆಯ ಹಾಯಿದೋಣಿ...

""ನಗೆಯ ಹಾಯಿದೋಣಿ ""
ನಗು ನಗುತಾ ನಲಿ ನಲಿˌˌˌ ಬಾಳು ನಗೆಯಲೆಯಲಿ ತೇಲುತಿರಲಿ ˌˌˌˌ

 ನಗುವೊಂದು ಆ ದೈವ ತಂದ ವರದಾನˌˌˌˌˌ
 ನಗಲೇಕೆ ನಿನಗೆ ಬಿಗುಮಾನˌˌˌˌ

ನಗೆಯ ಬಗೆಗಳು ಹತ್ತು-ಹಲವು ˌˌˌˌˌ
ನಿನಗಿರಲಿ ನಗುವಿನ ಒಲವುˌˌˌˌ

 ಮಗುವಿನ ಮುಗ್ಧತೆ ಗೊಂದು ನಗುˌˌˌ
 ಪ್ರೇಮಿಯ ಸೆಳೆಯಲೆಂದು ಸಿಹಿ ನಗುˌ

 ನಗುವಿಲ್ಲದ "ನಗ"ವಿದ್ದರೇನು ಭಂಡಾರˌˌˌˌˌ
ನಗು ತುಂಬಿದ ಬಾಳೆಂಬುದು ಬಂಗಾರ

ಮುಖಕಮಲವರಳಿರಲಿ ನಗುವ ಸುರಿಸಿˌˌˌˌˌ
ಬಾಳು ನೀ ನಗುನಗುತ ಒಲವ ಹರಿಸಿ ˌˌˌˌˌˌ

ಬದುಕೊಂದು ಎಂದು ಮುಗಿಯದ ಸಂತೆˌˌˌˌˌ
ಅಕ್ಷಯವಾಗಲಿ ನಗುವ ಕಂತೆ ಕಂತೆ ˌˌˌˌˌ

ತೇಲುತ್ತಿರಲಿ ನಗುವ ಹಾಯಿದೋಣಿ ˌˌˌˌˌˌ
ನಗುವೇ ಸ್ವರ್ಗದೆಡೆಗಿನ ಮೊದಲ ಏಣಿˌˌ
 ಮಧುಮಾಲತಿರುದ್ರೇಶ್ ಬೇಲೂರು

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...