ಮುಂಗಾರು ಮಳೆಯೆಂದರೆ ಸವಿ ನೆನಪಿನ ಮಾಲೆ
ಕಣ್ಮುಂದೆ ಸುಳಿದಿದೆ ಇನಿಯನ ಪ್ರಥಮ ಪ್ರೇಮದೋಲೆ
ಅಕ್ಕರೆಯಲಿ ಬರೆದ ಗೆಳೆಯನ ಒಲವಿನ ಅಕ್ಷರ
ಬಾಳ ತುಂಬಿದೆ ಬುವಿಯ ಅಪ್ಪಿದಂತೆ ಹಸಿರ
ಇಳೆಯ ಮುದ್ದಿಸುವ ವರ್ಷ ರಾಜನಂದದಿ
ಗೆಳೆಯನೊಲವಲಿ ತೋಯ್ದಿದೆ ಮನ ಮುದದಿ
ಮುಗಿಲಿನಿಂದಿಳಿವ ಹನಿ ಹನಿಗೂ ಅದೇನೋ ಕಾತುರ
ಬುವಿಯ ಕೆನ್ನೆಗೆ ಮುತ್ತಿಡುವ ಕ್ಷಣವೇ ಮಧುರ
ಮಳೆರಾಜನ ಒಲವ ಅಬ್ಬರಕೆ ಧರಣಿ ಶರಣಾದಂತೆ
ನಿನ್ನೊಲವ ಮಳೆಗೆ ನಾನಾದೆ ಸ್ವಾತಿ ಮುತ್ತಂತೆ
ತೇಲಿದೆ ನೆನಪು ಕೊಡೆ ಹಿಡಿದು ಜೊತೆ ನಡೆದ ಘಳಿಗೆಗೆ
ಎಡೆ ಬಿಡದೆ ಸುರಿಯುತಿರಲಿ ಪ್ರೀತಿ ಮಳೆ ಬಾಳಿಗೆ
ಮಧುಮಾಲತಿರುದ್ರೇಶ್ ಬೇಲೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ