ನನ್ನ ಪದಗಳೆಂಬ ಕಂಗಳು
ಪುಟ್ಟ ಕೈಗಳೆಂಬ ಸಾಲುಗಳು
ಬಿಮ್ಮನೆ ನಿಂತ ನಿಮ್ಮನ್ನಪ್ಪಲು
ಪಿಳಿಪಿಳಿ ನೋಡುತ ತೆರೆದ ತೋಳುಗಳ
ಮಗುವು ನನ್ನ ಕವನ
ಎಂದೂ ಬಾರದ ನಲ್ಲೆಗಾಗಿ
ಅಕ್ಷರೋದ್ಯಾನದಲಿ ವಿಹಾರಿಯಾಗಿ
ಪವಡಿಸಿ ಮಾಲಿಯೂ ಆಗಿ
ನಿತ್ಯ ಅರಳಿ ಬಾಡುತಿರುವ
ಹೂವು ನನ್ನ ಕವನ
ತುಂಬು ಜಾತ್ರೆಯ ನಡುವೆ
ಎಂದೋ ಕೈ ಬಿಟ್ಟು ಕಳೆದು ಹೋದ
ಮಗು, ನನ್ನವರು ಬರುತ್ತಾರೆಂದು
ತೇರು ಗಾಲಿಯ ಬಳಿ
ಧೂಳು ಮುಕ್ಕುತ್ತಾ ಕುಳಿತ
ಅನಾಥನು ನನ್ನ ಕವನ
ಗ್ರಂಥಾಲಯ ಸಂತೆಯ ನಡುವಲಿ
ಮೂಲೆ ಗಲ್ಲಿಯೊಂದರ ಬಳಿ
ಗುಡ್ಡೆಗುಡ್ಡೆ ಪದರಾಶಿಯ ಹೇರಿ
ಬಿಕರಿಯಾಗದೆ ಕುಳಿತ
ಮಾಲು ನನ್ನ ಕವನ
ಕಿರೀಟ ಪೋಷಾಕು 'ಸರ'ಮಾಲೆಗಳ
ಭರಾಟೆಯ ಮಧ್ಯೆ
ಚಪ್ಪಾಳೆ ತಟ್ಟುವ ಕೈಯಾಗಿ
ಅಭಿವಂದಿಸುವ ಮನವಾಗಿ
ಖಾಲಿಹೊಟ್ಟೆಯಲೆ ಸಂತೃಪ್ತಿಯ
ತೇಗು ತೆಗೆದ
ತಿರುಕನು ನನ್ನ ಕವನ
ಯಾರ ಕಾಲಿಗೂ ಭಾರವಾಗದೆ
ಮತ್ತಾರಿಗೂ ತೊಡರಾಗದೆ
ಊರ ಹೊರಗಿನ ಜೋಪಡಿಯಲಿ
ತನ್ನ ಪಾಡಿಗೆ ತಾನು
ತಣ್ಣಗೆ ಕೂತ
ಜೋಗಿಯು ನನ್ನ ಕವನ
~ ಅರಬಗಟ್ಟೆ ಅಣ್ಣಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ