' ಕನ್ನಡಕ್ಕೆ ಕನ್ನಡಿ ಹಿಡಿದು ದುಡಿಯುವ ಕಾಯಕ ಯೋಗಿಗಳಾಗಿ'
'ಹೊತ್ತ ನಾಡು, ಹೆತ್ತತಾಯಿ, ಮಾತು ಕೊಟ್ಟ ಭಾಷೆ ಸ್ವರ್ಗಕ್ಕೆ ಸಮಾನ' ಪ್ರತಿಯೊಬ್ಬರ ಜೀವನದಲ್ಲಿ ಈ ಮೇಲಿನ ಮೂರು ಅಮೂಲ್ಯ ರತ್ನಗಳೆಂಬ ಬೆಳಕು ಪ್ರಮುಖ ಮಹತ್ವದಾಗಿದೆ.ನೆಲವೆಂದರೆ ಬರಿಯ ಮಣ್ಣಲ್ಲ, ಅದೊಂದು ಪವಿತ್ರ ಭೂಮಿ. ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳ ಸದ್ಭಾವನೆಯ ತಪೋವಲಯ. ಸಿದ್ಧಪುರುಷರ, ವಿಚಾರವಂತರ , ಜ್ಞಾನಿಗಳ, ರಸಋಷಿಗಳ ಜ್ಞಾನೋದಯ ತಾಣ . ಸಮಸ್ತ ಜನರಿಗೆ ಅವಶ್ಯಕ ಜೀವನಾಂಶಗಳನ್ನು, ಪ್ರತಿಫಲಾಪೇಕ್ಷೆಯಿಲ್ಲದೆ ಪೂರೈಸುವ ಕಾಮಧೇನು. ಮಣ್ಣಿನಿಂದಲೇ ಎಲ್ಲ, ಮಣ್ಣಿನಿಂದಲೇ ಬೆಳೆದು ಮಣ್ಣಿಲ್ಲಿ ಮಣ್ಣಾಗಿ ಕೊನೆಯಾಗುವ ಸ್ವರ್ಗ ಭೂಮಿ . ಈ ಭೂಮಾತೆಯ ಕುವರಿಯೇ ಮಾತೆಯೆಂಬ ಜನನಿ. ಸಂಸ್ಕಾರ, ಸದ್ವಿಚಾರ,ಸದ್ಭಾವನೆಯ ಮೌಲ್ಯಾಧಾರಿತಗಳ ಮಣ್ಣಿನ ಪ್ರತೀಕವಾಗಿ ಜನನಿ ತನ್ನ ಮಕ್ಕಳನ್ನು ಹೊತ್ತು, ಬೆಳೆಸಿ ವಿಶ್ವ ಮಾನವನನ್ನಾಗಿಸುವ ಎರಡನೇ ಸ್ವರ್ಗದ ನಾವಿಕಳಾಗಿದ್ದಾಳೆ. ಈ ಪವಿತ್ರ ನೆಲ ಹಾಗು ಶ್ರೇಷ್ಠ ಮಾತೆಯ ನಡುವಿನ ಸಂಪರ್ಕ ಸೇತುವೆಯೇ.......... ನೆಲದ ಭಾಷೆ, ತಾಯಿ ಭಾಷೆಯಾದ ಮಾತೃಭಾಷೆಯೆಂಬ ಅಮೃತ. ಸಂಸ್ಕೃತ ಭಾಷೆಯ ಶ್ರೇಷ್ಠ ಕವಿ ದಂಡಿಕವಿ ತನ್ನ ಕಾವ್ಯದರ್ಶನ ಕೃತಿಯ ವಿಚಾರಧಾರೆಯ ಒಂದು ಕಡೆ' ಭಾಷೆಯೆಂಬ ದಿವ್ಯಸಾಧನ ಇಂದು ಇರಲಿಲ್ಲವೆಂದರೆ ಇಡೀ ಜಗತ್ತು ಅಂಧಕಾರವೆಂಬ ಕಗ್ಗತ್ತಲಲ್ಲಿ ಮುಳುಗಿರುತಿತ್ತು' ಎಂದು ಭಾಷೆಯ ಮಹತ್ವವನ್ನು ಅದಮ್ಯವಾಗಿ ಸಾರಿದ್ದಾರೆ. ಆದ್ದರಿಂದ ಭಾವಗಳನ್ನು ಬೆಸೆಯುವ , ಬಾಂಧವ್ಯವನ್ನು ವೃದ್ಧಿಸುವ, ವೈಚಾರಿಕ, ವೈಜ್ಞಾನಿಕ ತಳಹದಿಯನ್ನು ರೂಪಿಸುವ ಸಂಸ್ಕಾರದ ಬೀಡಾದ ನೆಲ ಮತ್ತು ದಿವ್ಯ ನೆಲದ ಭವ್ಯ ನಿರ್ಮಾತೃವಾದ ಜನನಿಯ ಒಡನಾಟದ ಮಾತೃಭಾಷೆ ಇಂದು ಪ್ರತಿಯೊಬ್ಬ ನಾಗರೀಕರಿಗೂ ಅತ್ಯವಶ್ಯವಾಗಿದೆ. ಇಂದು ' 'ಮನುಷ್ಯ ಹಕ್ಕಿಯಂತೆ ಹಾರಬಲ್ಲ, ಮೀನಿನಂತೆ ಈಜ ಬಲ್ಲ' ಇವೆಲ್ಲ ಅನ್ವೇಷಣೆಯ ಫಲಿತಾಂಶಕ್ಕೆ ಮಾತೃಭಾಷೆಯ ಕೊಡುಗೆ ಅಪಾರ. ಹಾಗಾಗಿ ಜೀವನದಲ್ಲಿ ಈ ತ್ರಿವಳಿ ರತ್ನಗಳು ' ಬೆಳೆಯುವ ಸಿರಿ ಮೊಳಕೆಗೆ' ಮಾತೆಯೆಂಬ ಸ್ವರ್ಗದ ದಿವ್ಯಜ್ಞಾನವಾಗಿವೆ. ಭಾಷೆ ಬಲ್ಲವ ಜಗತ್ತಿನ ಯಾವುದೇ ಮೂಲೆಯಲ್ಲಾದರೂ ನೆಲೆಯನ್ನು ಕಂಡುಕೊಳ್ಳು ಬಹುದು . ಈ ನೆಲೆಗೆ ಮೊದಲು ಸ್ಪಷ್ಟವಾದ , ಸ್ಥಿರವಾದ ತಳಹದಿ ಅವಶ್ಯಕ......
ಈ ಅಡಿಪಾಯವೇ ಮಾತೃಭಾಷೆ ಅಲ್ಲವೇ......?
ಸಂಘ ಜೀವನ, ಸಮುದಾಯದ ಜೀವನದಲ್ಲಿ ಎಲ್ಲರೊಂದಿಗೆ ಒಂದಾಗಿ ಬದುಕಲು, ಬೇಕು ಬೇಡಗಳನ್ನು ಪೂರೈಸಿಕೊಳ್ಳಲು ಅವಶ್ಯಕವಾದುದುದೇ ಸಂವಹನದ ಭಾಷೆ. ಆ ಭಾಷೆಯೇ ತಾಯಿಯಿಂದ, ತನ್ನ ಸುತ್ತಮುತ್ತಲಿನಲ್ಲಿ ಯಥೇಚ್ಚವಾಗಿ ಬಳಸುವ ಸಾಧನವೇ ಪ್ರಾದೇಶಿಕ ಮಾತೆಂಬ ಮಾತೃಭಾಷೆ. ಮನ ಮನಗಳನ್ನು ಬೆಸೆಯುವ ಹೃದಯದ ಬಂಧವೆ ಮನೆಯೆಂಬ ತಾಣ . ಇದು ಶಾಶ್ವತವಾಗಿ, ಸುದೀರ್ಘವಾಗಿ ನೆಲೆನಿಲ್ಲ ಬೇಕೆಂದರೆ ಅಡಿಪಾಯ ತುಂಬಾ ಅಗತ್ಯ. ಅಂತೆಯೇ ಗ್ರಾಮ,ನಗರ, ನಾಡು, ದೇಶ, ಪ್ರಪಂಚದ ಉತ್ತಮವಾದ ಬಾಂಧವ್ಯವನ್ನು ಬೆಸೆಯುವಲ್ಲಿ ಮನಷ್ಯನ ದೇಹದ ಹೃದಯ ಹಾಗೂ ಮೆದುಳಿನಂತೆ ಕಾಯಕ ಮಾಡುವ ಕರ್ಮಜೀವವೆ ಮಾತೃಭಾಷೆ. ಜೀವ ಜೀವದ ಆದಿಯ ಸಂಪರ್ಕ ಸೇತುವೆ ಭಾಷೆ ಅದು ಪ್ರಾದೇಶಿಕವಾಗಿ ಜನರಾಡುವ ಭಾಷೆ . ಇದು ತನ್ನ ಅಸ್ತಿತ್ವವನ್ನು ಕಳೆದು ಕೊಂಡರೆ , ಜೀವವಿದ್ದು ಸತ್ತಂತಿರುವ ದೇಹದಂತೆ, ಫಲವಿರದ ಕಲ್ಪವೃಕ್ಷದಂತೆ, ಆಶ್ರಯವಾಗದ ಜಾಲಿಮರದಂತೆ . ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ಉಪಖಂಡ. ಸನಾತನ ಶ್ರೇಷ್ಠ ಇತಿಹಾಸದ ರಚನೆ, ಆಚಾರ ವಿಚಾರ, ಧಾರ್ಮಿಕ, ಆರ್ಥಿಕ, ರಾಜಕೀಯ, ಸಾಮಾಜಿಕ, ಭೌಗೋಳಿಕ, ಸಾಂಸ್ಕೃತಿಕ ಸಿರಿವಂತಿಕೆಯ ಸಂಮಿಲನದ ಏಳಿಗೆಯ ಹಿಂದೆ ಪ್ರಾದೇಶಿಕ ಜನನಿಯಾದ ಮಾತೃಭಾಷೆಯ ಅಮೋಘವಾದ ಕಾಣಿಕೆ ಅಗಾಧ. ಆದ್ದರಿಂದಲೇ ಭಾರತ ಭಾಷಾವಾರು ಪ್ರಾಂತ್ಯಗಳ ರಚನೆಯಿಂದ ಕೂಡಿದೆ.
ಬಿರಿದುದೆಯ ಬೆಸೆಯುವ ಭಾವ ಬಂಧ
ತಾಯಿನಾಡಿನ ಶೃಂಗಾರದ ಮಧುರ ಬಂಧ
ಭಾರತ ಮಾತೆಯ ಸುತೆಯಾಗಿ ಝಳ ಝಳಸಿ ಬಂದ
ಕನ್ನಡ ಮಾತೆಯಂಬ ದಿವ್ಯ ಬಂಧ
ಕನ್ನಡ ಭಾಷೆಯು ಭಾರತದ ಪ್ರಾಚೀನ ಭಾಷೆಗಳಲ್ಲಿ , ದ್ರಾವಿಡ ಭಾಷೆಗಳಲ್ಲಿ ಮಹತ್ವವಾದ ಪ್ರಮುಖ ಭಾಷೆಯಾಗಿದೆ. 2011 ರ ಜನಗಣತಿಯ ಪ್ರಕಾರ ಸುಮಾರು ಐದು ಕೋಟಿಗೂ ಹೆಚ್ಚು ಮಂದಿ ಮಾತನಾಡುವ ಭಾಷೆಯಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಗಳೆಂಬ ನೆಲೆಯಲ್ಲಿ ಇಪ್ಪತ್ತೊಂಬತ್ತನೆಯ(29) ಸ್ಥಾನವನ್ನು ಪಡೆದಿದೆ. ಕನ್ನಡ ನಾಡಿನ ಆಡಳಿತ ಭಾಷೆಯಾಗಿ , ಸುಮಾರು ಎರಡು ಸಾವಿರ ವರ್ಷಗಳ ಪ್ರಾಚೀನ ಇತಿಹಾಸವನ್ನು ಹೊಂದಿದೆ. ತನ್ನದೆಯಾದ ಲಿಪಿಯನ್ನು ಹೊಂದಿರುವ ಈ ಭಾಷೆಯನ್ನು ' ಲಿಪಿಗಳ ರಾಣಿ' ಎಂದು ವಿನೋಬಾ ಭಾವೆಯವರು ಕರೆದಿದ್ದಾರೆ. ಕನ್ನಡ ನಾಡಿನ ಗಂಗ ,ಕದಂಬ,ರಾಷ್ಟ್ರಕೂಟ ಚಾಲುಕ್ಯ, ಹೊಯ್ಸಳ , ಕಾಲಚೂರಿ, ವಿಜಯನಗರ, ಕೆಳದಿ, ಕಿತ್ತೂರು, ಮೈಸೂರು ಒಡೆಯರು ಮುಂತಾದ ರಾಜ ಮನೆತನಗಳ ರಾಜಕೀಯ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಆಡಳಿತ ಅನೇಕ ಶ್ರೀಮಂತಿಕೆಯನ್ನು ಐತಿಹಾಸಿಕವಾಗಿ ತಂದು ಕೊಟ್ಟಿವೆ. ಹಲ್ಮಿಡಿ, ತಾಳಗುಂದ, ಶ್ರವಣ ಬೆಳಗೊಳ ಕಪ್ಪೆ ಆರ್ಯಭಟ್ಟ ಮುಂತಾದ ಶಾಸನಗಳು, ಕನ್ನಡ ಭಾಷೆಯ ಉತ್ಪತ್ತಿ , ಬಳಕೆಯ ನಿದರ್ಶನವಾಗಿ ಐತಿಹಾಸಿಕ ಭಾಷೆಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ.
ಕ್ರಿ ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಮೌಖಿಕ ಪರಂಪರೆಯಲ್ಲಿ ಕನ್ನಡ ಭಾಷೆ ಬಳಕೆಯಲ್ಲಿತ್ತೆಂದು ಇತಿಹಾಸ ತಜ್ಞ ಐರಾವತಂ ಮಹಾದೇವನ್ ಅವರು ತಮಿಳು ಭಾಷೆಯಲ್ಲಿ ಉಲ್ಲೇಖವಿರುವುದನ್ನು ತಿಳಿಸಿದ್ದಾರೆ. ಕನ್ನಡ ಸಾಹಿತ್ಯದ ತಾಯಿ ಬೇರಾದ ಜನಪದ ಸಾಹಿತ್ಯ ಬಹಳ ಪ್ರಾಚೀನವಾದ ಭಾಷೆ ಬಳಕೆಗೆ ಜ್ವಲಂತ ನಿದರ್ಶನವಾಗಿದೆ. ತಲೆಮಾರಿನಿಂದ ತಲೆ ಮಾರಿಗೆ ಕರಕುಶಲ ಕಲೆಗಳ ಜೊತೆ ಜೊತೆಗೆ ಭಾಷೆ ಬೆಳೆದು ಬಂದ ಪರಿಯನ್ನು ಸಾರುವುದಾಗಿದೆ. ಆದ್ದರಿಂದಲೇ ಶ್ರೀ ವಿಜಯ ಕನ್ನಡ ನಾಡು ಕಾವೇರಿಯಿಂದ ಗೋದಾವರಿ ನದಿಯವರೆಗೆ ಹಬ್ಬಿರುವ ನಾಡಗಿದೆ. ಇಲ್ಲಿನ ಜನಪದರು ನುಡಿದಂತೆ ನಡೆಯುವ ವ್ಯಕ್ತಿತ್ವದವರು, ಕುರಿತು ಓದದೆ ಕಾವ್ಯವನ್ನು ಕಟ್ಟುವ ಪ್ರವೀಣರು ಎಂದು ತನ್ನ ಕವಿರಾಜಮಾರ್ಗ ಕೃತಿಯಲ್ಲಿ ಉಲ್ಲೇಖ ಮಾಡಿದ್ದಾನೆ. ಇದು ಕನ್ನಡ ಭಾಷೆಯ ಸುದೀರ್ಘ ಇತಿಹಾಸಕ್ಕೆ ಪ್ರಮುಖವಾದ ಆಧಾರವಾಗಿದೆ. ಪಂಪನ ಆದಿಯಾಗಿ ಪ್ರಸ್ತುತದ ಆಧುನಿಕ ಕವಿಪುಂಗದವರ ವರೆಗೂ ವಿವಿಧ ಸಾಹಿತ್ಯ ಮಜುಲುಗಳಲ್ಲಿ ಅವಿರತವಾದ ಶ್ರೇಷ್ಠ ಕಾವ್ಯ, ಕೃತಿ, ವಚನ, ಕೀರ್ತನೆ, ತತ್ವಪದ, ನಾಟಕ, ಕಾದಂಬರಿ, ವಿಮರ್ಶೆ, ತೌಲನಿಕ ಅಧ್ಯಯನ, ಆತ್ಮ ಕಥನ, ಕಥೆ ಮುಂತಾದ ಪ್ರಕಾರಗಳಲ್ಲಿ ನಾಡು ನುಡಿ ಸಾಹಿತ್ಯ ರಥದ ಕೃಷಿಯಾನವನ್ನು ನಡೆಸಿ ಕನ್ನಡ ಭಾಷೆಗೆ ಅನರ್ಘ್ಯವಾದ ಕೊಡುಗೆ ಮತ್ತು ಮೆರುಗನ್ನು ತಂದು ಕೊಟ್ಟಿದೆ.
ಆದರೆ ಪ್ರಸ್ತುತ ದಿನಗಳಲ್ಲಿ ನಮ್ಮದಲ್ಲದ ಭಾಷೆಯ ಮೇಲಿನ ಅತಿಯಾದ ವ್ಯಾಮೋಹ ಇಂದು ಪ್ರಾದೇಶಿಕ ಭಾಷೆಗಳ ಮೇಲೆ ಚಿಂತಾಜನಕವಾದ ಗಣನೀಯ ಪ್ರಭಾವ ಬೀರಿದೆ. ಅದರಲ್ಲೂ ಕನ್ನಡ ಭಾಷೆಯ ಮೇಲಂತೂ ..................?
ಅವ್ವ, ಅಮ್ಮ ಎನ್ನುವ ಹೃದಯದ ಮಾತಿಗಿಂತ, ಮಮ್ಮಿ , ಡ್ಯಾಡಿ ಎನ್ನುವ ' ಸತ್ತವರ ದಿಬ್ಬದ' ಅರ್ಥ ನೀಡುವ ಭಾಷೆಯ ವ್ಯಾಮೋಹ ಹೆಚ್ಚುತ್ತಿರುವುದು ನಾಡು ನುಡಿ ಏಳಿಗೆ ಅರಿಯುವಲ್ಲಿ ಬಹಳ ಆತಂಕಕಾರಿ ಬೆಳವಣಿಗೆಯಾಗಿದೆ. ಹಾಗಂತ ಅನ್ಯಭಾಷೆಯನ್ನು ಕಲಿಯುವುದೇ.... ತಪ್ಪೇ........?
ಖಂಡಿತವಾಗಿಯೂ ತಪ್ಪಲ್ಲ ಆದರೆ ಮೊದಲು ಗ್ರಹಿಸುವ , ಸ್ಮರಿಸುವ, ಆಲಿಸುವ, ಅಭಿವ್ಯಕ್ತಿಸುವ, ಆಸ್ವಾದಿಸುವ, ಪ್ರಶಂಸೆ ಮಾಡುವ ಭಾಷಾಧಾರಿತ ಕಲಿಕೆ ಪ್ರತಿಯೊಬ್ಬರಿಗೂ ಅಗತ್ಯ. ಈ ಕೌಶಲ್ಯಗಳು ವಿಚಾರ ಮಾಡುವ , ವಿಶ್ಲೇಷಣೆ ಮಾಡುವ, ವಿಮರ್ಶೆಮಾಡುವ, ಚರ್ಚಿಸುವ, ಮೊದಲಾದ ಆರೋಗ್ಯದಾಯಕ ಬೌದ್ಧಿಕ ಬೆಳವಣಿಗೆಗೆ ವ್ಯವಸ್ಥಿತವಾದ ಸೋಪಾನವನ್ನು ನಿರ್ಮಿಸುವಲ್ಲಿ ನೆರವಾಗುತ್ತದೆ. ಅ ಮೂಲಕ ಜ್ಞಾನಾತ್ಮಕವಲಯವು ಸಮೃದ್ಧವಾಗಿ ಬೆಳೆದು ಸೃಜನಶೀಲತೆ, ಮೌಲ್ಯಾಧಾರಿತ, ಸಮಾನತೆ, ಸಹಕಾರ, ಸಹಬಾಳ್ವೆ, ಸದ್ವಿಚಾರ, ಮಾನವೀಯತೆಗಳ ನೆಲೆಯಾಗಿ ವಿಶ್ವಕ್ಕೆ ಮಾದರಿ ವ್ಯಕ್ತಿತ್ವದ ಅಪ್ರತಿಮ ವಿಶ್ವಮಾನವರ ಸೃಷ್ಟಿಗೆ ನೆರವಾಗುತ್ತದೆ.
ಪ್ರಸ್ತುತ ದಿನಗಳಲ್ಲಿ ಅದೆಷ್ಟೋ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುತ್ತಿರುವುದಕ್ಕೆ ಪ್ರಮುಖವಾದ ಕಾರಣ ಪ್ರಾರಂಭದಲ್ಲಿ ಮಾತೃಭಾಷೆಯ ಸಂವಹನ ಸರಿಯಾಗಿ ದೊರಕದಿರುವುದು. ಆಧುನಿಕತೆ, ಜಾಗತೀಕರಣದ ದುರಾಸೆಯ ಫಲವಾಗಿ ಇಂದು ಮಕ್ಕಳಿಗೆ ಮೌಲ್ಯಾಧಾರಿತ ಜೀವನದ ಶಿಕ್ಷಣ ದೊರಕದೆ ಕೇವಲ ಜಾಗತಿಕ ಮಟ್ಟದಲ್ಲಿ ಯಾಂತ್ರಿಕವಾಗಿ ದುಡಿಯುವ ಕಾರ್ಮಿಕ ವರ್ಗದ ಸೃಷ್ಟಿಯಾಗುತ್ತಿದೆ. ಕಾರಣ 'ಕಾಯಕವೇ ಕೈಲಾಸ ' ಕಾಯಕ ಪರಮ ಶ್ರೇಷ್ಠವಾದುದು, ಎಂಬ ದಿವ್ಯ ಸಂದೇಶ ಇಂದು ಮರೆಯಾಗಿದೆ. ಕೇವಲ ವೈಯಕ್ತಿಕ, ವೈಭೋಗದ ಜೀವನಕ್ಕೆ ಅತ್ಯವಶ್ಯಕವಾದ ಕಲಿಕವಾತವರಣದ ಹಿಂದೆ ಬೆನ್ನು ಮಾಡಿ ನೂಕು ನುಗ್ಗಲಿನಲ್ಲಿ ಭಾವಿಗೆ ಬಿದ್ದ ಮಂಡೂಕದಂತಾಗಿದೆ. ಇದಕ್ಕೆ ಕಾರಣ ಸ್ವ ಭಾಷೆ ವಿಷಯ ವಸ್ತುವಿನ ಕಲಿಕೆಗೆ ಆದ್ಯತೆ ನೀಡದಿರುವುದು. ಎಷ್ಟರ ಮಟ್ಟಿಗೆ ಎಂದರೆ ........
ಕನ್ನಡ ಭಾಷೆಯೇ...... ಕನ್ನಡ ಉಪನ್ಯಾಸಕರೇ........ ಕನ್ನಡ ಶಿಕ್ಷಕರೇ........ ಕನ್ನಡ ವಿಷಯವೇ....... ಎಂಬೆಲ್ಲ ಉದಾಸೀನ ಮಾತುಗಳು, ವರ್ತನೆಗಳು ಇಂದು ಹೆಚ್ಚಾಗಿ
ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಸದಾಚಾರ ಮೌಲ್ಯಗಳು ಮರೆಯಾಗುವಂತೆ ಮಾಡಿದೆ.
'ಪ್ರಸ್ತುತ ದಿನಗಳಲ್ಲಿ ಅನ್ಯ ಭಾಷೆಯ ಮೇಲಿನ ಅತಿಯಾದ ವ್ಯಾಮೋಹ........ ಮಾತೃ ಭಾಷೆಯ ಮೇಲಿನ ವಾತ್ಸಲ್ಯವನ್ನು ಎಷ್ಟರ ಮಟ್ಟಿಗೆ ವೃದ್ಧಿಸಿದೆ.......? ನಿಜವಾಗಿಯೂ ಇಡೀ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಗಳ ಮಹತ್ವ ಅಪಾರವಾದುದು. ಸೂರ್ಯ ಮುಳುಗದ ನಾಡು ಇಂಗ್ಲೆಂಡ್
ಜಗತ್ತಿನಲ್ಲಿ ತಮ್ಮ ಮಾತೃಭಾಷೆ ಏಕೈಕ ಭಾಷೆಯಾಗಿ ಬೆಳೆಯ ಬೇಕೆಂಬ ಮಾತೃಪ್ರೇಮ, ಇಂದು ಜಗತ್ತಿನ ಅತ್ಯಂತ ವ್ಯವಹಾರಿಕ ಭಾಷೆಯಾಗಿ ಆಳವಾದ ಬೇರು ಬಿಡಲು ಕಾರಣೀಯವಾಗಿದೆ. ಇದಕ್ಕೆ ಕಾರಣ ಆ ನಾಡಿನ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಎಲ್ಲಾ ಕ್ಷೇತ್ರಗಳ ವಿಚಾರಗಳನ್ನು, ಸಾಹಿತಿಗಳು,ಕವಿಗಳು, ಆರ್ಥಿಕತಜ್ಞರು,ರಾಜಕೀಯ ಚಿಂತಕರು,ವಿಮರ್ಶಕರು, ತಮ್ಮ ಸಾಹಿತ್ಯದ ವಿವಿಧ ಮಜುಲುಗಳಲ್ಲಿ ತಮ್ಮ ಭಾಷೆಯ ಮೂಲಕವೇ ಕೊಡುಗೆಯನ್ನು ಕೊಟ್ಟು, ತಾವು ನಡೆಸಿದ ಕೃಷಿಯೇ ಮೇರು ಪರ್ವತವಾಗಿ ಗೋಚರಿಸುವಂತಾಗಿದೆ. ಇದು ಅವರಲ್ಲಿದ್ದ ಮಾತೃಪ್ರೇಮ. ಅಲ್ಲದೆ ಮಾತೃಭಾಷೆಯ ಕಲಿಕೆ ಅವರ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವಲ್ಲಿ, ಸಾಹಿತ್ಯಾತ್ಮಕವಾಗಿ, ಆಡಳಿತಾತ್ಮಕವಾಗಿ ಜಗತ್ತನ್ನು ಆಳುವಲ್ಲಿ ನೆರವಾಯಿತು.
ಜಪಾನ್, ಅಮೇರಿಕಾ, ಚೀನಾ ಇವೆ ಮುಂತಾದ ಮುಂದುವರಿದ ರಾಷ್ಟ್ರಗಳು ಇಂದು ವಿಶ್ವದಲ್ಲಿ ವೈಜ್ಞಾನಿಕವಾಗಿ, ತಾಂತ್ರಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಅಗ್ರಗಣ್ಯ ರಾಷ್ಟ್ರಗಳಾಗಿವೆ. ಈ ಅನನ್ಯ ಸಾಧನೆಯ ಮೂಲ ಬೇರು, ಮಾತೃಭಾಷೆಯ ಆಧಾರಿತ ಕಲಿಕೆಯ ವೇದಿಕೆ. ಇದು ಅವರಲ್ಲಿ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುವುದರ ಜೊತೆಗೆ , ಅನೇಕ ಅವಿಷ್ಕಾರಗಳನ್ನು ನಡೆಸುವಲ್ಲಿ , ಬೌದ್ಧಿಕಮಟ್ಟವನ್ನು, ಸೃಜನಶೀಲತೆಯನ್ನು ಬೆಳೆಸುವಲ್ಲಿ ಶ್ರೇಷ್ಠವಾದ ಬೆಳಕಾಗಿದೆ ಎಂದರೆ ತಪ್ಪಾಗಲಾರದು. ಜಪಾನ್ ದೇಶವು ನೈಸರ್ಗಿಕವಾಗಿ ಪದೆ ಪದೇ ಭೂಕಂಪಕ್ಕೆ ಒಳಗಾಗುವ ಪ್ರದೇಶ. ಇಲ್ಲಿಯ ಜನರ ದೇಶಪ್ರೇಮ ಬಹಳ ಅಪಾರವಾದುದು. ಒಮ್ಮೆ ಸಂಬಂಧಿಕರು ಜಪಾನಿನಲ್ಲಿ ಕೆಲಸ ಮಾಡುತ್ತಿರುವ ಮಗನ ಮನೆಗೆ ಹೋಗಿದ್ದರು. ಅಲ್ಲಿ ಬಾಳೆಹಣ್ಣು ತರಲು ಮಾರುಕಟ್ಟೆಗೆ ಹೋದರು. ಆದರೆ ನಮ್ಮಲ್ಲಿಯ ರೀತಿ ಬಾಳೆಹಣ್ಣು ಎಲ್ಲೆಂದರಲ್ಲಿ ದೊರೆಯುವುದಿಲ್ಲ. ಈ ಹಣ್ಣನ್ನು ಹುಡುಕುವುದನ್ನು ಅರಿತ ಅಲ್ಲಿನ ಸ್ಥಳೀಯ, ತಾನೆ ಮಾರುಕಟ್ಟೆಗೆ ಕರೆದುಕೊಂಡು ಹೋಗಿ, ಹಣ್ಣನ್ನು ಕೊಡಿಸಿ ಆತಿಥ್ಯ ಮಾಡಿದನಂತೆ . ಇವರು ಹಣವನ್ನು ನೀಡಲು ಮುಂದಾದಾಗ ಅದನ್ನು ನಿರಾಕರಿಸಿ, ನಮ್ಮ ದೇಶದಲ್ಲಿ ಬಾಳೆಹಣ್ಣು ದೊರಕದು ಎಂಬ ಭಾವನೆ ನಿಮ್ಮಿಂದ ದೂರಾದರೆ ಸಾಕು ಎಂಬ ದೇಶಪ್ರೇಮದ ಮಾತೃನುಡಿಯನ್ನು ತಿಳಿಸಿದನಂತೆ. ಈ ಹೃದಯ ಶ್ರೀಮಂತಿಕೆಯನ್ನು ಅವರಲ್ಲಿ ಬೆಳೆಯುಲು ಕಾರಣೀಭೂತವಾಗಿರುವುದೇ ಅವರ ಮಾತೃಭಾಷೆ ಯಾಗಿದೆ.
ನಮ್ಮದಲ್ಲದವರಿಗೆ ಅರಿವಾದ ಕನ್ನಡ ಭಾಷೆಯ ಸಿರಿವಂತಿಕೆ ಇಂದು ಇಲ್ಲಿಯವರಿಗೆ ಅರಿವಾಗುತ್ತಿದೀಯೇ........
ಕನ್ನಡ ನಾಡಿನ ನುಡಿ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಇಂಗ್ಲೆಂಡ್ ದೇಶದ ' ವಾಲ್ಟರ್ ಎಲಿಯಟ್ ನ ಪಾತ್ರ ಸ್ಮರಣೀಯವಾದುದು.
ಬ್ರಿಟಿಷರ ಆಡಳಿತದ ಅಧಿಕಾರಿಯಾದ ಈತ ಸ್ವತಂತ್ರ ಪೂರ್ವದಲ್ಲಿ ಧಾರವಾಡದಲ್ಲಿ ಮೊದಲ ಕನ್ನಡ ಶಾಲೆಯನ್ನು ಪ್ರಾರಂಭಿಸಿದ,ಅಲ್ಲದೆ ಇಲ್ಲಿಯ ಜನರಿಗೆ ಆಡಳಿತ ಭಾಷೆ ಕನ್ನಡವೇ ಮಾಧ್ಯಮವಾಗ ಬೇಕೆಂದು ಸರ್ಕಾರದ ಮೇಲೆ ಒತ್ತಡ ತಂದು ಮುಂಬೈ ಪ್ರಾಂತ್ಯದ ಕನ್ನಡ ಜನರಿಗೆ ನೆರವಾದ, ಕೆಲವು ಕನ್ನಡ ಪುಸ್ತಕಗಳ ಪ್ರಕಟಣೆಗೆ ಉತ್ತೇಜನ ನೀಡಿದ್ದ. ಅಲ್ಲದೆ ಇಸೋಪನ ನೀತಿಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಉತ್ತಮ ಭಾಷಾಂತಾರಕಾರನಾಗಿ ಸಲ್ಲಿಸಿದ ಸೇವೆ ಇಂದಿನ ಕನ್ನಡಿಗರ ನಿವಾಸಿಗಳ ಕೊಡುಗೆಯನ್ನು ಪ್ರಶ್ನಿಸುವಂತಾಗಿದೆ.
ಕನ್ನಡ ಭಾಷೆಯನ್ನು ಮೊಟ್ಟ ಮೊದಲು ಹೊರ ಜಗತ್ತಿಗೆ ಪರಿಚಯಿಸಿದ ಕೀರ್ತಿ ಜರ್ಮನ್ ದೇಶದ ರೆವರೆಂಡ್ ಜಾರ್ಜ್ ಫರ್ಡಿನೆಂಡ್ ಕಿಟಲ್ ಅವರಿಗೆ ಸಲ್ಲುತ್ತದೆ. ಮಿಷನರಿ ಶಾಲೆಯ ಮೂಲಕ ಬ್ರಿಟೀಷ್ ಆಡಳಿತ ಕಾಲದಲ್ಲಿ ಕರ್ನಾಟಕಕ್ಕೆ ಬಂದ ಈತ ಕನ್ನಡ ಭಾಷೆ , ಸಂಸ್ಕೃತಿ, ಆಚಾರ ವಿಚಾರ ಇವರನ್ನು ಕನ್ನಡ ಕಲಿಯುವಂತೆ ಪ್ರೇರಣೆ ನೀಡಿತು. ಕನ್ನಡ ಭಾಷೆಯನ್ನು ಕಲಿತು ನಾಡಿನ ವಿವಿಧ ಪ್ರದೇಶಗಳಲ್ಲಿ ಸಂಚಾರ ಮಾಡಿ, ಪ್ರಾದೇಶಿಕ ಮಾತಿನ ವೈವಿಧ್ಯಮಯ ಪದಗಳನ್ನು ಸಂಗ್ರಹಿಸಿ 'ಮೊಟ್ಟ ಮೊದಲ ಕನ್ನಡ ಇಂಗ್ಲಿಷ್ ನಿಘಂಟನ್ನು' ಕೊಡುಗೆಯಾಗಿ ನೀಡಿದರು. ಇವರ ಕನ್ನಡ ನುಡಿ ಸಂವರ್ದನೆ, ಅನುಭೂತಿ, ಪ್ರೀತಿಯನ್ನು ಅರಿತ ವರಕವಿ ದ ರಾ ಬೇಂದ್ರೆ ಅವರು ' ಕನ್ನಡಕ್ಕೆ ಕನ್ನಡಿಯ ಹಿಡಿದು ದುಡಿದವ ನೀನು' ಎಂದು ಹೊಗಳಿದ್ದಾರೆ. ಅಷ್ಟೆಯಲ್ಲ ಇವರು ಜರ್ಮನಿಯಲ್ಲಿ ಇದ್ದಾಗ ಕನ್ನಡದವರು ಇವರನ್ನು ಕಾಣಲು ಹೋಗಿ , ಆಂಗ್ಲ ಭಾಷೆಯಲ್ಲಿ ಸಂವಹನ ಪ್ರಾರಂಭಿಸಿದಾಗ , ಅವರನ್ನು ನಾನು ಕನ್ನಡದವನೆ ಕನ್ನಡದಲ್ಲೇ ಮಾತನಾಡಿ ಎಂದು ಕನ್ನಡ ಪ್ರೇಮವನ್ನು ಮೆರೆದ ಕನ್ನಡಿಗರೆನಿಸಿದ್ದಾರೆ.
ಹೀಗೆ ವಿದೇಶಿ ಮಹನೀಯರುಗಳಿಗೆ ಕನ್ನಡ ನುಡಿಯ ಬಗ್ಗೆ ಅದಮ್ಯವಾದ ಶ್ರದ್ಧೆ, ಗೌರವವಿತ್ತೆಂದರೆ ,ಈ ನಾಡಿನ ನುಡಿಯ ಉಸಿರಿನಿಂದ ಜೀವಿಸುವವರು........ ಅಳವಡಿಸಿಕೊಳ್ಳೇ ಬೇಕಾದ ಮಾತೃಪ್ರೇಮದ ವಿಚಾರಧಾರೆ ಬಹಳಷ್ಟಿದೆಯಲ್ಲವೆ..........?
' ಅವಶ್ಯಕತೆಯೇ ಅನ್ವೇಷಣೆಯ ತಾಯಿ' ಈ ಅನ್ವೇಷಣೆಯನ್ನು ತೀವ್ರವಾಗಿ ವೃದ್ಧಿಸುವುದೇ ಶಿಕ್ಷಣ. ಇದು ವಿಷಯ ವಸ್ತುವನ್ನು ತುಂಬುವ ಕಣಜವಾಗುವುದರ ಜೊತೆಗೆ, ಸಂಸ್ಕೃತಿ, ಸುವಿಚಾರಗಳನ್ನು ಬೆಳೆಸುವ ಆಶ್ರಯ ತಾಣವಾಗ ಬೇಕು. ಆಗ ಮಾತ್ರ ವಿಶ್ಲೇಷಣೆ, ವಿಮರ್ಶೆ, ವಿವರಣೆಯುತ ವಿಚಾರಧಾರೆಗಳ ಚಿಂತನೆಗೆ ವೇದಿಕೆಯನ್ನು ನಿರ್ಮಿಸುತ್ತದೆ. ಇದೆಲ್ಲವು ಸರಾಗವಾಗಿ ವಿದ್ಯಾವಂತರಿಗೆ ದೊರೆಯ ಬೇಕೆಂದರೆ ವಿಷಯಾಧಾರಿತ ವಿಷಯಗಳ ಜೊತೆ, ಮಾತೃಭಾಷೆಯ ವಿಷಯಕ್ಕೂ ಅಷ್ಟೇ ಆದ್ಯತೆ ನೀಡ ಬೇಕು. ಪ್ರಾಥಮಿಕ , ಪ್ರೌಢ ಶಾಲೆಯ ಕಲಿಕೆ ಅವಧಿಯಲ್ಲಿ ಭಾಷೆ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದರು , ಪರಿಣಾಮಕಾರಿಯಾಗಿ ಕಲಿಯುವಲ್ಲಿ ಯಶಸ್ವಿಯಾಗಿಲ್ಲವೇನೋ.......
ಇನ್ನು ಪದವಿ ಪೂರ್ವ, ಪದವಿ ವ್ಯಾಸಂಗಕ್ಕೆ ಹೋದರಂತು ಕನ್ನಡ ಭಾಷೆಯ ಪದ್ಯ ಪಾಠಗಳ ಕಲಿಕೆ, ಕೇವಲ ಉತ್ತೀರ್ಣವಾಗುವ ಅಂಕಗಳನ್ನು ತೆಗೆದು ಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿರುವುದು ದುರಾದೃಷ್ಟವಾಗಿದೆ. ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯ ಕೊಟ್ಟ ಕೊಡುಗೆಯಾಗಲಿ, ಭಕ್ತಿಧಾರೆಯನ್ನು ಮೂಡಿಸಿದ ದಾಸ ಸಾಹಿತ್ಯದ ವಿಚಾರವಾಗಲಿ, ಕೇವಲ ಪಠ್ಯಪುಸ್ತಕದ ಪದ್ಯ ಪಾಠಗಳಲ್ಲಿ ಮಾತ್ರ ರಾರಾಜಿಸುತ್ತವೆ. ಆದರೆ ವಿದ್ಯಾರ್ಥಿಗಳ ಆಲೋಚನೆ, ಗ್ರಹಿಕೆ, ವಿಮರ್ಶೆಗೆ ನಿಲುಕುವುದೇ............
ಅಂತಹ ವಾತಾವರಣ ಪೋಷಕರಿಂದಲೂ, ಸಮಾಜದಿಂದಲೂ ನಿರ್ಮಾಣವಾಗಿದೆ.
ಪ್ರಸ್ತುತ ಪದವಿ ತರಗತಿಯನ್ನು ಮೂರು ವರ್ಷದಿಂದ, ನಾಲ್ಕು ವರ್ಷಕ್ಕೆ ವಿಸ್ತರಿಸುವ ಪ್ರಸ್ತಾಪನೆ ಉತ್ತಮವಾದುದು. ಆದರೆ ಭಾಷೆಯ ವಿಷಯಗಳನ್ನು ಕೇವಲ ಎರಡು ಸೆಮಿಸ್ಟರ್ ಗೆ ಸೀಮಿತವಾಗಿ ಮಾಡುವುದು ಖಂಡನೀಯ. ಅದರಲ್ಲೂ ಈ ಕ್ರಮ ಸನಾತನವಾದ ಸುದೀರ್ಘ ಇತಿಹಾಸ ಹೊಂದಿರುವ, ವೈಜ್ಞಾನಿಕವಾದ ಭಾಷಾ ಚೌಕಟ್ಟನ್ನು ಒಳಗೊಂಡಿರುವ , ಸಂಸ್ಕೃತಿ, ಆಚಾರ ವಿಚಾರಗಳ ಆಗರವಾಗಿರುವ, ಕನ್ನಡ ಭಾಷೆಯ ಬೆಳವಣಿಗೆಗೆ ಲೋಪವಾಗ ಬಹುದು. ಒಂದು ವರ್ಷದ ಅಧ್ಯಯನಕ್ಕೆ ಬದಲಾಗಿ, ಮೂರುವರ್ಷದ ಅಧ್ಯಯನಕ್ಕೆ ಅವಕಾಶ ನೀಡಿದರೆ, ಉತ್ತಮ ವ್ಯಕ್ತಿತ್ವದ ಸಾಮರ್ಥ್ಯವನ್ನು ರೂಪಿಸಿಕೊಳ್ಳಲು ಅನುವಾಗುತ್ತದೆ.
ಮಾತೃಭಾಷೆಯು ಸಂಸ್ಕೃತಿಯ ಪ್ರತೀಕ. ಭಾವುಕತೆಗೆ ಸಂಬಂಧಿಸಿದ ವಿಷಯವಾಗಿದೆ.' ಮಾತೃಭಾಷೆಗೆ ಹಿನ್ನಡೆಯಾದರೆ ಸಂಸ್ಕೃತಿಗೆ ಹಿನ್ನಡೆಯಾದಂತೆ' ಇದಕ್ಕೆ ಹೆಚ್ಚಿನ ಮಹತ್ವವಿದೆ. ಅಲ್ಲದೆ ನಮ್ಮ ಅಮೂರ್ತ ಪರಂಪರೆಯನ್ನು ಸಂರಕ್ಷಣೆ ಮಾಡುವ, ಅಭಿವೃದ್ಧಿಪಡಿಸುವ, ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಇಂದು ಜಗತ್ತಿನಲ್ಲಿ ಏಳು ಸಾವಿರ ಭಾಷೆಗಳು ಅವನತಿಯ ಸಾಲಿನಲ್ಲಿ ಇವೆ. ಈ ಸಾಲಿಗೆ ವಿಶ್ವ ಸಾಹಿತ್ಯ ಪರಂಪರೆಗೆ ಅವಿರತ ಕೊಡುಗೆ ನೀಡಿರುವ ಶ್ರೀಮಂತಿಕೆಯನ್ನು ಹೊಂದಿರುವ ಕನ್ನಡ ಭಾಷೆಯನ್ನು ಸೇರುವುದನ್ನು ತಪ್ಪಿಸಿ , ಕನ್ನಡ ನಾಡು ನುಡಿ ಸೇವೆಯ ತೇರನ್ನು ಶತ ಶತಮಾನಗಳಿಂದಾಚೆಗೂ ಶ್ರೀಮಂತಿಕೆಯಿಂದ ಪಸರಿಸುವಂತೆ ಮಾಡುವುದು ಕನ್ನಡಿಗರಾದ ನಮ್ಮ ಪಾಲಿನ ಆದ್ಯ ಕರ್ತವ್ಯವಾಗಿದೆ.
" ಅರಿವಿರದ ಭಾಷೆಗಿಂತ ಅರಿವಿನ ಭಾಷೆ ಅವಿರತ ಸೇವೆಯನ್ನು ಬೆಳೆಸುವುದರ ಜೊತೆಗೆ ಜಗವ ಬೆಳಗುವ ಜ್ಯೋತಿಗಳನ್ನು ಸೃಷ್ಟಿಸುತ್ತದೆ".
- ಬಾಗಳಿ ಮಹೇಶ್
ಶಿಕ್ಷಕರು, ಹವ್ಯಾಸಿ ಬರಹಗಾರರು ಪತ್ರಿಕೆ ಕಾರ್ಯದರ್ಶಿ
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ
ಮೈಸೂರು
9980989368
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ