ಭಾನುವಾರ, ಜೂನ್ 27, 2021

ಕಲಿತು ಮುಗಿಯದು (ಕರೋನಾ ಜಾಗೃತಿ ಕತೆ) - ಅಖಿಲಾ ಶೆಟ್ಟಿ ಪುತ್ತೂರು.

ಕಥೆ:-ಕಲಿತು ಮುಗಿಯದು

 ತಂದೆ-ತಾಯಿಯ ಮಮಕಾರ, ಸುಖದ ಸುಪ್ಪತ್ತಿಗೆಯಲ್ಲೇ ಮಿಂದೇಳುತ್ತಿದ್ದ   ರೇಣುಕಾಳು ಅತೀ ಅಹಂಕಾರಿ ಮನೋಭಾವದವಳು. ಶ್ರೀಮಂತಿಕೆಯ ಅಹಂಕಾರದಿಂದ ತನ್ನ ಭೋಗಭಾಗ್ಯಗಳೆದುರು ಎಲ್ಲರೂ ಹುಳು ಕಡ್ಡಿಗೆ  ಸಮಾನರೆಂಬ ಕೇವಲವಾದ ಮನಸ್ಥಿತಿ  ಆಕೆಯದ್ದು.ತಂದೆ ನಾರಾಯಣರಾಯರು ಹಾಗೂ ತಾಯಿ ವಾರಿಜಾಕ್ಷಿ ಇತರರ ಕಷ್ಟಕ್ಕೆ ಕಂಬನಿ ಮಿಡಿದಾಗ,ಕಷ್ಟಕ್ಕೆ ಹೆಗಲು ಕೊಟ್ಟಾಗ ರೇಣುಕಾಳು ಅತೀಯಾಗಿ ಸಿಡಿದೇಳುತ್ತಿದ್ದಳು.ಇಂಜಿನಿಯರಿಂಗ್ ಕಲಿಯಲಿಚ್ಛಿಸಿ ದೂರದ ಬೆಂಗಳೂರಿಗೆ ಪಯಣಿಸಿದ ನಂತರ  ಪೇಟೆ ತಿರುಗಾಟದಲ್ಲೇ ಸಮಯ ಕಳೆದ ರೇಣುಕಾ ಸ್ವಾರ್ಥ ಚಿಂತನೆ,ಸ್ವಾರ್ಥ ಜೀವನವನ್ನೇ ತನ್ನ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಳು.
         ಜಗತ್ತನ್ನೇ  ತಲ್ಲಣಗೊಳಿಸಿದ ಕೊರೊನಾವೆಂಬ ವೈರಸ್ ತನ್ನ ತಾಂಡವ ನರ್ತನವನ್ನು ಆರಂಭಿಸಿದೆ.ಹೆಮ್ಮಾರಿಯ ಹೊಡೆತಕ್ಕೆ ಸಿಕ್ಕಿ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಕೃತಕ ಆಮ್ಲಜನಕದ ಸಹಾಯ  ಪಡೆಯುವ ನೋವಿನ ಪರಿಸ್ಥಿತಿಗಳು ಒಂದೆಡೆಯಾದರೆ  ರೋಗಿಯ ಚಿಕಿತ್ಸೆಗಾಗಿ ಆಸ್ಪತ್ರೆಗಳ ಹುಡುಕಾಟದಲ್ಲಿ ಪರದಾಡುತ್ತಿರುವ
 ಕುಟುಂಬಗಳ ರೋಧನ ಹೇಳತೀರದ್ದು. ಇವೆಲ್ಲದರ ನಡುವೆ ಕೊರೊನಾದ ಅಟ್ಟಹಾಸವನ್ನು  ನಿಯಂತ್ರಿಸಲು ಘೋಷಿಸಿದ ಲಾಕ್ಡೌನ್  ಲಂಗು ಲಗಾಮಿಲ್ಲದೆ ಬೆಂಗಳೂರು ಪೇಟೆ ಸುತ್ತಾಡಲು  ಬಯಸುತ್ತಿದ್ದ ರೇಣುಕಾಳಿಗೆ ಶಿಕ್ಷೆಯಾಗಿ ಪರಿಣಮಿಸುತ್ತಿತ್ತು .ಹೆತ್ತವರ ಸಲಹೆ ಸೂಚನೆಗಳಿಗೆ ರೇಣುಕಾಳಲ್ಲಿ ಎದುರುತ್ತರವಲ್ಲದೇ ಗೌರವ ಭಾವನೆಯೇ ಇರಲಿಲ್ಲ.ತನ್ನ ಬಳಿ ಯಾವ ರೋಗವು ಬರಲಾರದೆಂಬ ಮೂಢನಂಬಿಕೆ  ಆಕೆಯದ್ದು.ತಮ್ಮ ಮಗಳ ಆಸಡ್ಡೆಯ ವರ್ತನೆಯಿಂದ ನಿತ್ಯವೂ ಭಯದ ವಾತಾವರಣದಲ್ಲೇ ಸಮಯ ಕಳೆಯುತ್ತಿದ್ದರು.ಕರುಳ ಸಂಕಟ ತಡೆಯಲಾರದೆ ವಾರಿಜಾಕ್ಷಿ ದಿನಕ್ಕೆ ಮೂರು ಸಲ ಕರೆ ಮಾಡುತಿದ್ದರು.ತಾಯಿಯ ಜಾಗರೂಕತೆಯ ಮಾತುಗಳು ರೇಣುಕಾಳಿಗೆ ಅತಿರೇಕವಾಗಿ ಕಂಡು ಕೆಲವೊಮ್ಮೆ ಕರೆಗಳನ್ನು ಸ್ವೀಕರಿಸದೆಯೇ ಕುಳಿತುಬಿಡುತ್ತಿದ್ದಳು.
       ಇತ್ತ ನಾರಾಯಣರಾಯರು ಹಾಗೂ ವಾರಿಜಾಕ್ಷಿ ಇಂತಹ ಸಂದಿಘ್ನ ಪರಿಸ್ಥಿತಿಯಲ್ಲಿ ಜನರ ಕಷ್ಟಕ್ಕೆ ಕೈಲಾಗುವ ಸಹಾಯಕ್ಕೆ ಎದುರು ನಿಂತರು.ಹಳ್ಳಿ ಜೀವನ ನಡೆಸುತ್ತಿರುವ ಅದೆಷ್ಟೋ ಬೆಚ್ಚನೆಯ ಸೂರಿನಡಿ ಕೂಲಿನಾಲಿಯಿಲ್ಲದೆ ಯಾತನೆಯನ್ನನುಭವಿಸುತ್ತಿರುವ ಮುಗ್ಧ ಜನರಿಗೆ  ಕೊರೊನಾ ವೈರಸ್ ಬಗ್ಗೆ ಮಾಹಿತಿ,ಮಾಸ್ಕ್ ,ಸ್ಯಾನಿಟೈಸರ್,ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಕಟ್ಟು ನಿಟ್ಟಿನ ಕ್ರಮದ ಬಗ್ಗೆ ತಿಳಿಯಪಡಿಸಿ  ಅವರ ನಿತ್ಯ ಜೀವನಕ್ಕೆ  ಬೇಕಾಗುವ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾ  ಹಳ್ಳಿಯಲ್ಲಿರುವ  ಯುವಕರನ್ನು ಒಗ್ಗೂಡಿಸಿ ಸರ್ಕಾರದಿಂದ ಮುಂಜಾಗೃತಾ ಕ್ರಮವಾಗಿ ದೊರಕುವ  ವ್ಯಾಕ್ಸಿನ್ ಬಗ್ಗೆ ಜನರಲ್ಲಿ  ಜಾಗೃತಿ ಮೂಡಿಸುವ  ಅಭಿಯಾನಕ್ಕೆ ಪ್ರೇರೇಪಿಸುತ್ತಿದ್ದರು. 
         ಒಂದು ಮಧ್ಯಾಹ್ನ ನಾರಾಯಣರಾಯರಿಗೆ ಮಗಳು ರೇಣುಕಾಳ ಕರೆ.ಯಾವಾಗಲೂ ಹೆತ್ತವರ ಕುಶಲೋಪರಿ ವಿಚಾರಿಸಲೂ ಕರೆ ಮಾಡದ ಮಗಳು ಇಂದೇಕೆ ಕರೆ ಮಾಡಿದಳೆಂಬ  ಕಳವಳ ಉಂಟಾಗಿ ವೇಗವಾಗಿ ಮೊಬೈಲನ್ನು ಕೈಗೆತ್ತಿಕೊಂಡರು.ಉದ್ವೇಗದಿಂದಲೇ ಮಾತನ್ನಾರಂಭಿಸಿದ ರೇಣುಕಾಳ ಮಾತಿನ ದಾಟಿ ನೋಡಿ ನಾರಾಯಣರಾಯರಿಗೆ  ಭಯವುಂಟಾಯಿತು.ಮಾಸ್ಕ್ ಧರಿಸದೆ  ಪೇಟೆ ತಿರುಗಲು ಹೊರಟಿದ್ದಕ್ಕೆ  ಪೊಲೀಸ್ ದಂಡ ವಿಧಿಸಿದ ಬಗ್ಗೆ ಸಿಟ್ಟು ನೆತ್ತಿಗೇರಿಸಿಕೊಂಡು ಆಕ್ರೋಶದ ಕೂಗನ್ನೇ ವ್ಯಕ್ತಪಡಿಸಿ ತಂದೆಯ ಮಾತಿಗೆ ಅವಕಾಶವೇ ಕೊಡಲಿಲ್ಲ.ಇವೆಲ್ಲವನ್ನು ಆಲಿಸಿದ ಆನಂದರಾಯರು "ಮಾಸ್ಕ್ ನಿನ್ನೊಬ್ಬಳ ಒಳಿತಿಗಷ್ಟೇ ಅಲ್ಲ. ಸಮಾಜದ ಒಳಿತಿಗೂ ನಮ್ಮ  ಪಾಲಿದೆ.ಮಾಸ್ಕ್ ಧರಿಸುವುದರಿಂದ ಕಳೆದುಕೊಳ್ಳುವುದೇನಿಲ್ಲ. ಮಾಸ್ಕ್ ಧರಿಸದೆ  ಪಯಣಿಸುವುದರಿಂದ ಕಳೆದುಕೊಳ್ಳುವ ವಿಷಯ ಅನೇಕ  ಮಗಾ..ಮಡದಿ ಮಕ್ಕಳ ಕುಶಲೋಪರಿ ವಿಚಾರಿಸಲೂ ಸಮಯವಿಲ್ಲದೆ ಕರ್ತವ್ಯದ ಕರೆಗೆ ಹಾಜರಾಗಿ  ಸಮಾಜದ ಹಿತರಕ್ಷಣೆಗಾಗಿ ಜೀವನ ಸವೆಸುವ ಕೊರೊನಾ ವಾರಿಯರ್ಸ್ ಬಗ್ಗೆ ಒಂದೊಮ್ಮೆ ಯೋಚಿಸಿ ನೋಡು ಮಗಾ "ಎಂದರು. ಅಪ್ಪನ ಮಾತುಗಳನ್ನು ಕೇಳುತ್ತಾ ರೇಣುಕಾಳಿಗೆ ಆವರಿಸಿದ್ದ ಅಹಂಕಾರದ ಪರದೆ ಕಳಚಿ ಬಿತ್ತು.ಕೊರೊನಾ ವಾರಿಯರ್ಸ್ ಬಗ್ಗೆ  ನೆನೆದು ಕಂಬನಿ ಮಿಡಿದಳು.
        ನಂತರದ ಏಳು ದಿನಗಳಲ್ಲಿ ರೇಣುಕಾಳಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡು ಪರೀಕ್ಷೆಗೆ ಒಳಗಾದಾಗ ಕೊರೊನಾ ಪಾಸಿಟಿವ್ ಬಂತು.ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪಡೆಯುತ್ತಿದ್ದ ರೇಣುಕಾಳು ದಿನ ಕಳೆದಂತೆ ಚೇತರಿಸಿಕೊಂಡಳು.ತನ್ನ  ಸಿರಿವಂತಿಕೆ ಏನಿದ್ದರೂ ದೇವರ ಆಟದೆದುರು  ಶೂನ್ಯ,ಬದುಕಿರುವಷ್ಟು ದಿನ ನಾವು ಮಾಡುವ ಕೆಲಸ ಕಾರ್ಯಗಳಷ್ಟೇ ಶಾಶ್ವತವೆಂದು ಅರ್ಥೈಸಿಕೊಂಡು  ತಾನು ಪರಿಸ್ಥಿತಿಗಳ ಎದುರು ನಡೆದುಕೊಂಡ ವರ್ತನೆಯನ್ನು ಸ್ಮರಿಸಿಕೊಂಡು ಮನನೊಂದಳು.ವೈದ್ಯರುಗಳ ಅವಿರತ ಶ್ರಮದಿಂದ ಕೊನೆಗೂ ಕೊರೊನಾದ ವಿರುದ್ಧ ಗೆದ್ದ ರೇಣುಕಾಳು ನಂತರದ ದಿನಗಳಲ್ಲಿ ಸಮಾಜಕ್ಕೆ  ಮುನ್ನೆಚ್ಚರಿಕೆ  ಕ್ರಮಗಳನ್ನು ತಿಳಿಸಿ, ಹೆತ್ತವರೊಂದಿಗೆ ಕೈಜೋಡಿಸಿ ಶ್ರೀಸಾಮಾನ್ಯರ  ಅವಶ್ಯಕತೆಗಳನ್ನು ಪೂರೈಸುತ್ತಾ ಹಾಗೂ ಕೊರೊನಾ ಬಾಧಿಸಿದ ಜನರಿಗೆ  ತನ್ನ ಅನುಭವಗಳನ್ನು ಹಂಚಿ ಧೈರ್ಯ ತುಂಬುವ ಕೆಲಸಕ್ಕೆ ಮುಂದಾದಳು.


✍️ ಅಖಿಲಾ ಶೆಟ್ಟಿ
ಪುತ್ತೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ )

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...