*ಗಜಲ್*
ಕೇವಲ ಜ್ಞಾನಿಯಾಗಿ ಲೋಕಸಂಚಾರಿಯಾದೆ ನೀ ಗೌತಮ
ಕೇವಲ ಹೆಣ್ಣಾಗಿ ನಾನು ಅಂಥಪುರದಿ ನಿಶಾಚರಿಯಾದೆ ಗೌತಮ
ಬಾಳಿನೀ ನಡುಹಾದಿಯಲಿ
ನಡುರಾತ್ರಿಯೆ ಕೈ ಬಿಟ್ಟು ದೂರ ನಡೆದೆ
ಜಗದ ಜನರ ಕೈ ಹಿಡಿಯಲೆಂದು ಮಹಾತಪಸ್ವಿಯಾದೆ ನೀ ಗೌತಮ
ನನ್ನಾಸೆಯೇ ನೀನಾಗಿದ್ದೆ ನಿನ್ನದೆ ಧ್ಯಾನದಲಿ ಚಿರವಿರಹಿಯಾದೆ
ಆಸೆಯೆ ದುಃಖಕ್ಕೆ ಮೂಲವೆಂದ ಚಿರಂಜೀವಿಯಾದೆ ನೀ ಗೌತಮ
ನಟ್ಟಿರುಳು ಬಿಟ್ಟು ನಡೆಯಲೆನಿಸಿದರೂ ರಾಹುಲನ ತಾಯಾಗಿ ಉಳಿದೆ
ಜಗದೊದ್ದಾರಕೆ ಬದ್ಧನಾಗಿ ಮಹಾಪರಿತ್ಯಾಗಿಯಾದೆ ನೀ ಗೌತಮ
ನೀನಗಲಿದ ಗಳಿಗೆಯಿಂದ ಕಾಲ ನೀರಸವಾಗಿ ಸ್ತಬ್ಧವಾಗಿದೆ
ಯುಗವೇ ಕೊಂಡಾಡುವ ಧರ್ಮಚಕ್ರ ಪರಿವರ್ತನೆಯಾದೆ ನೀ ಗೌತಮ
ನೀನಗಲಿದ ಇರುಳು ಎಬ್ಬಿಸಿದ ಸುಖನಿದ್ರೆ ನಿನ್ನೊಂದಿಗೆ ಹೊರಟು ಹೋಗಿದೆ
ಲೋಕವನು ತಮಂಧದಿಂದ ಏಳಿಸಲು ದರ್ಶನಿಯಾದೆ ನೀ ಗೌತಮ
'ಆರಾಧ್ಯ' ಅಗಲಿದಂದು ಯಶೋದೆಯ ಹೃದಯದ ಸಹಗಮನವಾಗಿದೆ
ಸಮ್ಯಕ್ ಜ್ಞಾನದಿ ಲೋಕವನಪ್ಪಿದಾಗ ಮತ್ತೆ ಜೊತೆಯಾದೆ ನೀ ಗೌತಮ
*ಶ್ರೀಮತಿ ಗಿರಿಜಾ ಮಾಲಿ ಪಾಟೀಲ* ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ