ಸೋಮವಾರ, ಜುಲೈ 5, 2021

'ಹಿರಿತನದ ಮೌಲ್ಯಾಧಾರಿತ ಜೀವನದ ನುಡಿ ದರ್ಶನ ಕಿರಿತನದ ಭವ್ಯ ಜೀವನಕ್ಕೆ ಸವಿ ಹೂರಣ' (ಲೇಖನ) -ಶ್ರೀ ಬಾಗಳಿ ಮಹೇಶ್.

' ಹಿರಿತನದ ಮೌಲ್ಯಾಧಾರಿತ ಜೀವನದ ನುಡಿ ದರ್ಶನ 
ಕಿರಿತನದ ಭವ್ಯ ಜೀವನಕ್ಕೆ ಸವಿ ಹೂರಣ'

ಜೀವನ ಏಳು ಬೀಳಿನ ಪಯಣ
ಒಮ್ಮೊಮ್ಮೆ ಸುಖದ ರಸದೌತಣ 
ಮತ್ತೊಮ್ಮೆ ದುಃಖ ದುಗುಡಗಳ ಕಹಿಯಾನ 
ಇವೆರಡರ ಸಮ್ಮಿಲನದ ಸವಿ ಹೂರಣ 
ಹಿರಿತನದ ನುಡಿಕಂಪನದ ಮಾರ್ಗದರ್ಶನ 

' ದೀಪದಿಂದ ದೀಪವ ಹಚ್ಚುವಂತೆ , ತಾನು ಬದುಕಿ ಇತರರನ್ನು ಬದುಕಿಸಿ ಜೀವನಯಾನ ನಡೆಸುವುದೇ ಸಹ ಜೀವನ.  ಈ ನಿರಂತರವಾದ ಪಯಣದಲ್ಲಿ ಕೆಲವೊಂದು ಮಹತ್ತರ   ಬೆಳವಣಿಗಳು ಉಂಟಾಗುತ್ತದೆ. ಮತ್ತೊಮ್ಮೆ  ಹಿನ್ನಡೆಯು ಉಂಟಾಗುತ್ತದೆ. ಅಲ್ಲದೆ   ಸುಖ ದಃಖಗಳ ಸಮ್ಮಿಲನಗಳಿಂದ  ಜೀವನಯಾನ ನಡೆಯುತ್ತಿರುತ್ತದೆ. ಈ ನಿರಂತರವಾದ ಪಯಣ ' ಸಮುದ್ರದಲ್ಲಿ ನಾವಿಕರು ನಡೆಸುವ ಅವಿರತವಾದ ಜಲಮಾರ್ಗದ ಯಾನದಂತೆ ಇರುತ್ತದೆ. ಆದ್ದರಿಂದ ಸರಿಯಾದ ರೀತಿಯಲ್ಲಿ  ಮಾರ್ಗದರ್ಶನ ಅವಶ್ಯಕ.  ಜೀವ ಮತ್ತು ಜೀವನ ಒಂದು ನಾಣ್ಯದ ಎರಡು ಮುಖಗಳು.  ಎರಡಕ್ಕೂ ಅವಿನಾಭಾವ ಸಂಬಂಧವಿದೆ. ' ಜೀವ ನೀರಿನ ಮೇಲಿನ ಗುಳ್ಳೆಯಿದ್ಧಂತೆ' ಅದಕ್ಕೆ ಡಾ. ಹೆಚ್. ಎಸ್.  ಲಕ್ಷ್ಮೀನಾರಾಯಣ ಭಟ್ಟರು ಅವರು ' ನೀರ ಮೇಲಿನ  ಲೀಲೆ
ನಮ್ಮದೀ ಜೀವನ ಗಾಳಿ ನೂಕಿದ ತೀರ ತೇಲಿ ಪಯಣ ಪಾವನ' ಎನ್ನುತ್ತಾ  ಈ ಜೀವನದಲ್ಲಿ ನೂರುಗುಟ್ಟುಗಳು ಇವೆ . ಅದು ಧೀರರಿಗೆ ಮಾತ್ರ ತಿಳಿಯುತ್ತದೆ ಎಂದು  ಜೀವನದ ಆಗುಹೋಗುಗಳನ್ನು ಮೆಟ್ಟಿ ನಿಂತು ಮುನ್ನಡೆಯುವ ಸಾಧಕನ ಸಾಧನೆಯನ್ನು ವರ್ಣಿಸಿದ್ದಾರೆ.  ಅಂತೆಯೇ  ಈ ಜೀವನಕ್ಕೆ ಅನುಭವದ ಅನುಭಾವಿಗಳ ಒಡನಾಟ ಬಹಳ ಅತ್ಯಗತ್ಯ. ' ಬಲ್ಲವರ ಒಡನಾಟ ಬೆಲ್ಲವನ್ನು ಮೆದ್ದಂತೆ ' ಅಂದರೆ ಬಲ್ಲವರು ಎಂದರೆ ಅನುಭವಿಗಳು. ಇವರು ಈ ಜೀವನ  ಪಯಣಕ್ಕೆ ಇರುವ ಅತ್ಯಮೂಲ್ಯವಾದ   ಕನ್ನಡಿ. ಈ ಕನ್ನಡಿಯಲ್ಲಿ   ಭೂತದ ಏಳು ಬೀಳುಗಳ ಕಾರಣಗಳು , ವರ್ತಮಾನದಲ್ಲಿ ಸರಿಪಡಿಸಿಕೊಳ್ಳುವ ತಳಹದಿಗಳು, ಭವಿಷ್ಯದ ನಿರ್ಮಾಣದ ಹರಿಗೋಲುಗಳು ಪ್ರತಿಬಿಂಬಿಸುತ್ತದೆ. ಈ ದಿವ್ಯ ಪ್ರತಿಬಿಂಬದ ಪ್ರತಿರೂಪವೇ ಹಿರಿಯರು. ಕಿರಿತನದ ಮಾರ್ಗದರ್ಶಕರು. ಈ ಬಾಳಿನ ಪಯಣದಲ್ಲಿನ ಅನುಭವದ ಅನುಭಾವಿಗಳು. ಹಿರಿಯರೆಂದರೆ  ವಯಸ್ಸಿನಲ್ಲಿ ದೊಡ್ಡವರು. ಬರಿ ವಯಸ್ಸಿನಲ್ಲಿ ದೊಡ್ಡವರಾದ ಮಾತ್ರಕ್ಕೆ  ಅವರು ಹಿರಿಯರೆ.............
ಅಲ್ಲವೆ ಅಲ್ಲ  ಹಿರಿಯ ಎಂದರೆ ಅದು ವಿಶಾಲವಾದ ಊರಿನ ಮುಂಭಾಗದಲ್ಲಿರುವ ಅಶ್ವತ್ಥ್  ಮರ(ಅರಳಿ) ಏಕೆಂದರೆ ಇದು ಪರಿಸರಕ್ಕೆ ಶುದ್ಧಗಾಳಿಯನ್ನು   ನೀಡುವುದರ ಜೊತೆಗೆ , ಅನೇಕ ಜೀವ ಜಂತುಗಳಿಗೆ ಆಶ್ರಯತಾಣವಾಗಿದೆ. ಅಲ್ಲದೆ ಬಹಳ ವರುಷಗಳವರೆಗೆ ದೀರ್ಘವಾಗಿ ಬದುಕುವುದಾಗಿದೆ . ಅಂತೆಯೇ ಅರ್ಥವನ್ನು ವಯಸ್ಸಿನಲ್ಲಿ ದೊಡ್ಡವರಾಗದೆ, ಅನುಭವದಲ್ಲಿ ಹಿರಿತನ ಹೊಂದಿದ ಮಾರ್ಗದರ್ಶಕರನ್ನು ಹಿರಿಯರು ಎಂದು ಕರೆಯುತ್ತೇವೆ . ಈ ಹಿರಿತನದ ದೊಡ್ಡವರ ಕೊಡುಗೆ  ಕಿರಿತನಕ್ಕೆ  ಅಪಾರವಾದುದು. ತಮ್ಮ ಜೀವನದುದ್ದಕ್ಕೂ ಕಂಡುಂಡ ಅದೆಷ್ಟೋ ವಿವಿಧ ಮಜುಲುಗಳ ನರಕಯಾತನೆ, ಸೋಲು ಗೆಲುವು,  ಕಷ್ಟ ನಷ್ಟಗಳನ್ನು  ಅಮೃತಧಾರೆಯಾಗಿ ಕಿರಿತನಕ್ಕೆ ತಿಳಿಸಿ ಹೇಳಿ, ಅವರು ಬಾಳ ಪಯಣದಲ್ಲಿ ಸರಿಯಾದ ಮಾರ್ಗದಲ್ಲಿ ಕ್ರಮಿಸುವಂತೆ ಕಾರಣೀಭೂತರಾಗುತ್ತಾರೆ. ಆದ್ದರಿಂದಲೇ ಬಾಳ ಪಯಣದಲ್ಲಿ ಹಿರಿತನದ ತಾಯಿ ಕಿರಿತನದ ಮೊಳಕೆಗೆ  ಕಿರಿಯರನು ಹಿರಿಯರನು
ನೆರಗಡ್ಡದ ಮುದುಕರನ್ನು I ಕಂಡರೆ 
ತಲೆಬಾಗಿ ನಡೆಯೋ ನನ್ನ ಕಂದ 
 ಎಂದು ಹಾಡುತ್ತಾ  
  ಈ ಬಾಳು ಮೂರೆ ದಿನ 
ಬಹಳ ಜೋಪಾನ, ಬಹಳ ಮೆರೆಯ ಬೇಡ ಬೀಳುತ್ತೀಯ  ಎಂದು ಹೇಳಿದ ಜನಪದದ ಮೊದಲ ಹಿರಿತನದ ಅನುಭಾವಮೃತವನ್ನು ಇಂದು ಸ್ಮರಿಸಬೇಕಿದೆ. 
ಆದರೆ ಪ್ರಸ್ತುತ ದಿನಗಳಲ್ಲಿ ಸಮಾಜದ ಹಿರಿತನದಲ್ಲಿ ಕಿರಿತನಕ್ಕೆ ಇಂತಹ ಸವಿ ಹೂರಣ ದೊರಕುತ್ತಿದೀಯೇ...............?

' ಮಾತೆ ಮುತ್ತು ಮಾತೆ ಮೃತ್ಯು' ಮಾತೆಗೆ ಅದಮ್ಯ ಶಕ್ತಿಯಿದೆ . ಇಂತಹ ರಸವತ್ತಾದ , ಬಹಳ ಅರ್ಥಪೂರ್ಣವಾದ ಹಿರಿತನದ ಮಾತು ಇಂದು ಕಿರಿಯರಿಗೆ ದೊರಕುವಂತಾಗಬೇಕು.  ಆದರೆ ದೊಡ್ಡವರೆನಿಸಿ ಕೊಂಡವರು ದಡ್ಡರಂತೆ ಅರಿವಿನ ಪರಿಧಿಯನ್ನು ಮರೆತು ಮಾತನಾಡುವ ಪರಿಪಾಠ ಹೆಚ್ಚಾಗುತ್ತಿದೆ. ಆದ್ದರಿಂದ ಸಮಾಜದಲ್ಲಿ ಅಶಾಂತಿ,  ಧರ್ಮ ಧರ್ಮಗಳ ನಡುವೆ ವೈಮನಸ್ಸು ತೆಲೆದೊರುತ್ತಿದೆ. ಸ್ವಾರ್ಥ, ಅಹಂಕಾರ,  ಆಡಂಬರ ದ್ವಿಗುಣವಾಗುತ್ತಿದೆ. ಈ ಸುಂದರ ಸೃಷ್ಟಿಯಲ್ಲಿ ಹಿರಿಯರು ನಿರ್ಮಿಸಿದ ಭವ್ಯ ಕೊಡುಗೆಗಳು ಪ್ರಸ್ತುತ ವೈಜ್ಞಾನಿಕ  ಅವಿಷ್ಕಾರಗಳನ್ನು ಪ್ರಶ್ನಿಸುವಂತೆ ಹೇರಳವಾಗಿ ಇತಿಹಾಸ ಪುಟಗಳಲ್ಲಿ ಅನೇಕ ಪ್ರಕಾರಗಳಲ್ಲಿ  ನಿದರ್ಶನಗಳಾಗಿ ದೊರಕುತ್ತದೆ.   ಐತಿಹಾಸಿಕವಾಗಿ ಮಹಾಭಾರತದಲ್ಲಿ ಹಿರಿಯನೆಸಿದ ಶುಕುನಿಯ ಮಾತುಗಳು ದುರ್ಯೋಧನನ ಮೇಲೆ ಪ್ರಭಾವ ಬೀರಿ ಇಡಿ ಕೌರವರ ಪತನಕ್ಕೆ ನಾಂದಿ ಯಾಯಿತು. ಆದರೆ ಕೃಷ್ಣನ ಮಾತುಗಳು ಪಾಂಡವರು ಜೀವನದುದ್ದಕ್ಕೂ ಅನೇಕ ಕಷ್ಟಗಳನ್ನು ಹೆದುರಿಸಿ , ಗೆಲುವಿನ ಪಥವನ್ನು ಮುಟ್ಟಲು ನೆರವಾಯಿತು. ಅಲ್ಲದೆ ಕೃಷ್ಣನೆಂಬ ಹಿರಿತನದ ಬೆಳಕು ಪಾಂಡವರಿಗೆ  ದೊರಕಲು, ಹಿರಿಯನೆನಿಸಿದ  ಯುದಿಷ್ಠರನ ಮಾತುಗಳು ಸಹ ಇಲ್ಲಿ ಪ್ರಮುಖವಾದುದು.  ಇದರಿಂದ ಹಿರಿತನದ ಮಾತಿನಿಂದ ಉಂಟಾಗುವ ಸಾಧಕ ಬಾಧಕಗಳ ಪರಿಣಾಮವನ್ನು ತಿಳಿಯ ಬಹುದು. ಕಾರುಣ್ಯದ ಕಾಯಕ ಯೋಗಿ ಬದ್ಧನ ಹಿರಿತನದ ಮಾತು ಕಿರಿಯನೆನಿಸಿದ ಕ್ರೂರ ಅಂಗೂಲಿಮಾಲನನ್ನು , ಒಬ್ಬ ಸಾಧು ಸ್ವಭಾವದ ಮನುಷ್ಯನಾಗಿ ಬದಲಾಯಿಸಿತು. ಆದರೆ ಇತ್ತೀಚಿನ ದಿನಗಳಲ್ಲಿ ಕಿರಿಯರು ಬಹಳ ಬೇಗ ದುಷ್ಟಗುಣಗಳಿಗೆ ಬಲಿಯಾಗುತ್ತಿದ್ದಾರೆ ಕಾರಣ ಹಿರಿತನದ ಮಾರ್ಗದರ್ಶನ,  ಪ್ರಭಾವ ಸರಿಯಾಗಿ ದೊರಕದಿರುವುದು ಒಂದು ರೀತಿಯ ಕಾರಣವಾಗಿದೆ ಎಂದರೆ ತಪ್ಪಾಗಲಾರದು.  ಒಂದು ವೇಳೆ ದೊರಕಿದರು ಆ ಹಿರಿತನದಲ್ಲಿ ಮೌಲ್ಯಯುತವಾದ , ನೈಜ ಸತ್ಯ ದ ಸತ್ವ ಇಲ್ಲವಾಗಿರ ಬಹುದು. ಹನ್ನೆರಡನೆಯ ಶತಮಾನ ವಿಶ್ವ ಜ್ಯೋತಿಯನ್ನು ಬೆಳೆಗಿಸಿದ  ದಿವ್ಯಕಾಲವಾಗಿದೆ. ಇದಕ್ಕೆ ಕಾರಣ ಕಾಯಕ ಯೋಗಿ,ವಿಶ್ವ ಜ್ಯೋತಿ , ಭಕ್ತಭಂಡಾರಿ ಎಂಬೆಲ್ಲ ನುಡಿಗಳ ಜೊತೆಗೆ ಅಣ್ಣ ಅಣ್ಣ ಎಂದು ಕರೆಸಿಕೊಳ್ಳುವ ಹಿರಿತನದ  ಬಸವಣ್ಣನವರ ಕೊಡುಗೆ ಅಪಾರ. ಅನುಭವ ಮಂಟಪದ ಮೂಲಕ, ಜನರಾಡುವ ಆಡು ಭಾಷೆಯ ಮೂಲಕ ವಚನವನ್ನು ರಚಿಸಿ, ಅನೇಕ ಶರಣರು ತಮ್ಮ ಕಾಯಕವನ್ನು ಪ್ರಾಮಾಣಿಕತೆಯಿಂದ ನಡೆಸುವಂತೆ ಪ್ರೇರಣೆ ನೀಡಿ , ಲಕ್ಷಾಂತರ ವಚನಗಳ ರಚನೆ ಮಾಡಿ , ಮೌಢ್ಯಗಳನ್ನು ನಿರ್ಮೂಲನೆ ಮಾಡಲು ಕಾರಣವಾಯಿತು. ಅಲ್ಲದೆ ಅನೇಕ ಹಿರಿತನದ ಶರಣರ ಉದಯವಾಗಿ ಮುಗಿಲೆತ್ತರಕ್ಕೆ ಕಲ್ಯಾಣದ ಕ್ರಾಂತಿ ಪಸರಿಸಲು ಅನುವಾಯಿತು. ಇದೆಲ್ಲದರ ಹಿಂದೆ ಮಹಾಮನೆಯ ಬಸವಣ್ಣನವರ ಹಿರಿತನದ ಕಾಯಕ ಬಹಳ ಮಹತ್ವವಾದುದು. ಇಂದು ಪ್ರಜಾಪ್ರಭುತ್ವದ ಮಾದರಿಯಲ್ಲಿ ರಾಜಕೀಯ ಕ್ಷೇತ್ರ ಮುಂದುವರಿಯುತ್ತಿದೆ.   ಇಲ್ಲಿಯು ಹಿರಿತನದ ಸಮಾಗಮವಿದೆ. ಆದರೆ ಎಷ್ಟರ ಮಟ್ಟಿಗೆ ಕಿರಿತನಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ ಎಂಬುದನ್ನು ವಿಶ್ಲೇಷಣೆ ಮಾಡಬೇಕಿದೆ...........
'ಇಂದಿನ ಆಧುನಿಕ ಸಂಸತ್ತು, ಅಂದಿನ ಅನುಭವ ಮಂಟಪದ ವಿಶ್ವದ ಮೊದಲ ಸಂಸತ್ತಿಗೆ ಹೋಲಿಸಿದರೆ ಬರುವ ಫಲಿತಾಂಶವನ್ನು  ನೀವೆ ಯೋಚಿಸ ಬಹುದಲ್ಲವೆ? ..........  
ಈ ರೀತಿಯ ಹಿರಿತನದ ಸೇವೆಯಿಂದ ಉಂಟಾದ ಕಾಣಿಕೆಯನ್ನು  ನಾವು ಇತಿಹಾಸದಲ್ಲಿ ಸಾಹಿತ್ಯಾತ್ಮಕವಾಗಿ,  ಆಧ್ಯಾತ್ಮಿಕವಾಗಿ,  ರಾಜಕೀಯವಾಗಿ, ಆರ್ಥಿಕವಾಗಿ, ನೀಡಿರುವ ಅವಿರತ ಕೊಡುಗೆಯನ್ನು  ವಿಶ್ಲೇಷಣೆ ಮಾಡಿದರೆ , ಇದರ ಕಾಣಿಕೆಯನ್ನು  ಪದಗಳಲ್ಲಿ ಬಣ್ಣಿಸಲು ಅಸದಳ.
'ಮೂಕನಾಗಿರ ಬೇಕು  ಈ ಜಗದೊಳು ಜೋಕ್ಯಾಗಿರ ಬೇಕು. ಗುಡಿಯ ನೋಡಿರಣ್ಣ ದೇಹದ ಗುಡಿಯು ಪೊಡವಿಗೆ ಒಡೆಯನು ಎಂಬೆಲ್ಲ ಜೀವನ ಪಾವನವಾಗಲು ಅನುವಾದ ಲೆಕ್ಕವಿಲ್ಲದ ತತ್ವಗಳನ್ನು ರಚಿಸಿ ಪದಕಟ್ಟಿ ಎಲ್ಲರಿಗೂ ಉಣ ಬಡಿಸಿದ ಕರ್ನಾಟಕ ಕಬೀರರೆಂದೇ ಪ್ರಸಿದ್ಧಿಯಾದ ಸಂತ ಶಿಶುನಾಳ ಶರೀಫರು ನೀಡಿದ ಕೊಡುಗೆ ಅಪಾರ . ಈ ಹಿರಿತನದ ಕೊಡುಗೆಯ ಹಿಂದೆ ಗುರು ಗೋವಿಂದ ಭಟ್ಟರೆಂಬ ಹಿರಿತನದ ಆಧ್ಯಾತ್ಮಿಕ    ಸಂಸ್ಕಾರದ   ಕೃಷಿಯ ಅಡಿಪಾಯ   ತುಂಬಾ ಆಳವಾದುದು. ಇಂತಹ ಆಳವಾದ ಆಧ್ಯಾತ್ಮಿಕ ತಳಹದಿ ಇಂದು ಆಧ್ಯಾತ್ಮಿಕವಾಗಿ ಕಿರಿತನಕ್ಕೆ ದೊರಕ ಬೇಕಿದೆ. 
' ಜೈ ಜವಾನ್ ಜೈ ಕಿಸಾನ್ ' ಎನ್ನುತ್ತಾ  ಈ ದೇಶದ ಸರಳ ಸಜ್ಜನಿಕೆಯ ಪ್ರಧಾನ ಮಂತ್ರಿಯೆಂದು ಖ್ಯಾತಿ ಪಡೆದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನದ ಹಿರಿತನದ ಕೊಡುಗೆ ಬಹಳ ಶ್ಲಾಘನೀಯವಾದುದು. ದೇಶ ಆರ್ಥಿಕ ಸಂಕಷ್ಟದಲ್ಲಿರುವಾಗ ತಾವು ತೆಗೆದು ಕೊಳ್ಳುತ್ತಿದ್ದ  ಸರಳ ಜೀವನದ ಸಂಬಳವನ್ನು ಮತ್ತಷ್ಟು ಕಡಿಮೆ ಮಾಡಿಕೊಂಡು ಪ್ರಧಾನಮಂತ್ರಿ ನಿಧಿಗೆ ಕಾಣಿಕೆ ನೀಡಿದ ಇವರು  ಮಹಾನ್ ರಾಜಕೀಯ ಚಿಂತಕರು. ಇವರು 1966 ರಲ್ಲಿ ರಷ್ಯಾದಲ್ಲಿ ನಡೆದ ತಾಷ್ಕೆಂಟ್ ಒಪ್ಪಂದಲ್ಲಿ ಮುಂದೆ ನಡೆಯುವ ಪಾಕಿಸ್ತಾನ ಮತ್ತು ಭಾರತದ ಘೋರ ಪರಿಣಾಮವನ್ನು ತಪ್ಪಿಸಿದ ಬುದ್ಧಿಜೀವಿ. ಇಂತಹ ರಾಜಕೀಯ ಚಿಂತಕರ ಮಾರ್ಗದರ್ಶನ ಪ್ರಸ್ತುತ ದಿನಗಳಲ್ಲಿ ಕಿರಿತನಕ್ಕೆ ಅತ್ಯವಶ್ಯಕ. ಆದರೆ ಕೊರೋನ ಮಹಾಮಾರಿಯ ಆರ್ಭಟದಲ್ಲಿ ತತ್ತರಿಸಿ ಹೋಗಿರುವ ಜನರಿಗೆ ಆಸರೆಯಾಗಿ ನಿಲ್ಲುವಲ್ಲಿ ಜನ ಪ್ರತಿನಿಧಿಗಳು ಅನುಸರಿಸಿದ 'ಮೊಸರಲ್ಲಿ ಕಲ್ಲನ್ನು ಹುಡುಕುವ ಪರಿ' ನಿಜಕ್ಕೂ  ಅಮಾನವೀಯ.
ಜನರ ಜೀವನಕ್ಕೆ ಆಸರೆಯಾಗಿ ನಿಲ್ಲುವ ಬದಲೂ, ವೈಯಕ್ತಿಕ ಹಿತಾಶಕ್ತಿಗೆ ಹೆಚ್ಚಿನ ಮನ್ನಣೆ ನೀಡಿ, ಆರೋಪ ಪ್ರತ್ಯಾರೋಪಗಳಲ್ಲಿ ಕಾಲ ಕಳೆದ ಪರಿ, ನಿಜಕ್ಕೂ ರಾಜಕೀಯ ಕ್ಷೇತ್ರದ ಮೌಢ್ಯವನ್ನು ಹಾಗೂ ಅಮಾನವೀಯತೆಯನ್ನು  ಸಾರುವುದಾಗಿದೆ. ಆಗಿನ ಕಾಲದಲ್ಲಿ ಉಂಟಾಗಿದ್ದ ಕಾಲರ, ಮಲೇರಿಯ , ಪ್ಲೇಗ್ ನಂತಹ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಹಿರಿಯರು ಅನುಸರಿಸಿದ ವಿಧಿ ವಿಧಾನ, ಪ್ರಸ್ತುತದ ಆಧುನಿಕ ಜನತೆಯು  ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.
ಹೀಗೆ ಪ್ರಸ್ತುತ ಸಮಾಜಕ್ಕೆ   ಮಹಾತ್ಮಾ ಗಾಂಧಿ, ಸರದಾರ್ ವಲ್ಲಭಾಯ್ ಪಟೇಲ್,  ಬಾಲಗಂಗಾಧರ ತಿಲಕ್, ನೇತಾಜಿ ಸುಭಾಷ್ ಚಂದ್ರ ಬೋಸ್, ಡಾ. ಬಿ ಆರ್ ಅಂಬೇಡ್ಕರ್,  ಮದರ್ ತೆರೆಸಾ, ಡಾ. ಅಬ್ದುಲ್ ಕಲಾಂ ಅಟಲ್ ಬಿಹಾರಿ ವಾಜಪೇಯಿ ಇನ್ನು ಮುಂತಾದ ಮಹಾನೀಯ ಹಿರಿಯರು ತಮ್ಮ ಜೀವನದ ಪ್ರತೀಕ್ಷಣದಲ್ಲೂ ಮೌಲ್ಯಯುತವಾದ ನುಡಿಯ ಹೂರಣವನ್ನು ಯುವಪಡೆಗೆ ಉಣಬಡಿಸಿದರು. ಈ ಸಾರ್ಥಕಯಾನದ ನುಡಿಯಲ್ಲಿ ಎಲ್ಲೂ ಕೂಡ  ಒಂದು ವರ್ಗವನ್ನು, ಸಮಾಜವನ್ನು,  ಓಲೈಸುವ ಕೆಲಸ ಮಾಡಲಿಲ್ಲ.  ಅಥವಾ  ಅವಹೇಳನಕಾರಿ ಹೇಳಿಕೆಯನ್ನು ನೀಡಿ ಕಪ್ಪುಮಸಿ ಬರುವಂತ ಸಂದರ್ಭವನ್ನು ತಂದುಕೊಳ್ಳಲಿಲ್ಲ.

ಹಿರಿಯರ ನಡೆ ನುಡಿ ರಚನಾತ್ಮಕವಾಗಿ ಇರಬೇಕು. ಹಾಗಿದ್ದಲ್ಲಿ ಮಾತ್ರ ಆರೋಗ್ಯಕರ ವಾತಾವರಣ ಮೌಲ್ಯವನ್ನು ಕಿರಿಯರು ಸದ್ಬಳಕೆ ಮಾಡಿಕೊಳ್ಳುವರು.ಹಿರಿಯರ ಸ್ವಾರ್ಥ,ಅಹಂ ಧೋರಣೆ ಕಿರಿಯರಲ್ಲಿ ಪ್ರತಿಬಿಂಬಿಸುವ ಸಾಧ್ಯತೆ ಅತಿ ಹೆಚ್ಚು."ಬಿತ್ತಿದಂತೆ ಬೆಳೆ ".ಈ ವಾಸ್ತವ ಸ್ಥಿತಿ ಗೆ ಹಿರಿಯರೇ ಕಾರಣೀಭೂತರಲ್ಲವೆ? 
 ಹಿರಿಯರಲ್ಲಿದ್ದಲ್ಲಿ ಸಮಾಜಕ್ಕೆ ಕಿರಿಯರು ಹೊರೆಯಾಗಲಾರರು.

ಆದರೆ ಪ್ರಸ್ತುತ ದಿನಗಳಲ್ಲಿ ಹಿರಿತನದ ಜೀವಿಗಳು ವಯಸ್ಸಿನಲ್ಲಿ ಹಿರಿಯರೆನಿಸಿ ,ಕಿರಿತನದಲ್ಲೂ ಕೂಡ ಅಪಾರ ಪ್ರತಿಭೆಯನ್ನು ಹೊಂದಿರುವ ಕಾಯಕ ಜೀವಿಗಳನ್ನು  ಸಹಿಸಿಕೊಳ್ಳದೆ, ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಬದಲು ಕಾರ್ಯವಿಘ್ನಮಾಡುವ ಪರಿಯು ಇಂದು ಹೆಚ್ಚಾಗುತ್ತಿರುವುದು ತುಂಬಾ ಕಳವಳಕಾರಿಯಾಗಿದೆ.  ಕೇವಲ ಕೆಲವರ ಓಲೈಕೆಗಾಗಿ ' ಕಿರಿತನದ ಮುಂದಿನ ಹಿರಿತನದ ಜೀವನ ಪಯಣಕ್ಕೆ ಮುಳುವಾಗುವುದು ಎಷ್ಟರ ಮಟ್ಟಿಗೆ ಸರಿ..........?
ವಯಸ್ಸಿನಲ್ಲಿ ದೊಡ್ಡವರು ಎನಿಸಿಕೊಂಡವರು    ತಮ್ಮ ವೈಯಕ್ತಿಕ ಏಳಿಗೆಗೆ , ಈ ನೆಲದ ಮೂಲ ಸಾರವನ್ನು ಬಿಟ್ಟು,  ಮನಸ್ಸಿಗೆ ಬಂದ ದಡ್ಡರಂತೆ ವರ್ತಿಸುವುದನ್ನು ಬಿಡ ಬೇಕು.  ಬದಲಿಗೆ   ಸಮಾಜದ ಓರೆ ಕೋರೆಯನ್ನು ತಿದ್ದಿ, ಗುರುತರವಾದ ಜೀವನವನ್ನು ನಡೆಸುವಂತಾದರೆ , ಆಗ ಮಾತ್ರ 'ಕಿರಿತನದ ಭವ್ಯ ಜೀವನಕ್ಕೆ  ಸವಿಯ ಹೂರಣವನ್ನು   
ಹಿರಿತನದ ಮೌಲ್ಯಾಧಾರಿತ ನುಡಿ ನೀಡಿದಂತಾಗುವುದು.




ಬಾಗಳಿ ಮಹೇಶ್ 
ಶಿಕ್ಷಕರು, ಹವ್ಯಾಸಿ ಬರಹಗಾರರು  ಮೈಸೂರು 
ಪತ್ರಿಕೆ ಕಾರ್ಯದರ್ಶಿ 
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ   
ರಾಜ್ಯ ಘಟಕ 
9980989368.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...