ನಾವು ಕನ್ನಡಿಗರು
'ಕನ್ನಡ'ಈ ಪದವೇ ಆನಂದದ ಭಾವನೆಯನ್ನು ಹೊರಹೊಮ್ಮಿಸುವ ಮಧುರ ಭಾಷೆ.ನಮ್ಮ ಕನ್ನಡ ವರ್ಣಮಾಲೆಯ ೪೯ ಅಕ್ಷರಗಳಿಗೆ ಎಷ್ಟೊಂದು ಅದ್ಭುತ ಶಕ್ತಿ ಇದೆ ಎಂದರೆ ಶ್ರೀರಾಮಾಯಣದರ್ಶನಂ, ನಾಕುತಂತಿ, ಮೂಕಜ್ಜಿಯ ಕನಸುಗಳು, ಚಿಕ್ಕವೀರರಾಜೇಂದ್ರ, ಭಾರತ ಸಿಂಧುರಶ್ಮಿ ,ಸಮಗ್ರ ಸಾಹಿತ್ಯಗಳನ್ನೊಳಗೊಂಡ ೮ ಜ್ಞಾನಪೀಠ ಪ್ರಶಸ್ತಿಗಳನ್ನು ಬಾಚಿ ತಬ್ಬಿಕೊಂಡರುವ ಭಾಷೆ .ಅಂತಹ ಅದ್ಭುತ ಭಾಷೆಯನ್ನು ನುಡಿಯುವವರು ಎಲ್ಲರೂ ಕನ್ನಡಿಗರೇ. ಈ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ಅಥವಾ ಹೊಂದದಿದ್ದರೂ ಕರ್ನಾಟಕದಲ್ಲಿಯೆ ಹುಟ್ಟಿ ಬೆಳೆದವರು ಅಥವಾ ಬೇರೆ ಕಡೆಯಿಂದ ವಲಸೆ ಬಂದು ಶಾಶ್ವತವಾಗಿ ಇಲ್ಲಿಯೇ ಬೇರೂರಿ ಸ್ವಾಭಾವಿಕ ನಿವಾಸಿಗಳಾಗಿರುವ ಅವರೆಲ್ಲರೂ ಕನ್ನಡಿಗರೇ.ಲೇಖಕಿ, ರಾಜಕಾರಣಿ ,ಕಾನೂನುತಜ್ಞೆಯಾದ ಸರೋಜಿನಿ ಮಹಿಷಿಯವರು 'ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸಲ್ಲಿಸಿದ ವರದಿ' "ಸರೋಜಿನಿ ಮಹಿಷಿ ವರದಿ" ಎಂದೇ ಪ್ರಸಿದ್ಧವಾಗಿದೆ .ಈ ವರದಿಯಂತೆ ಹದಿನೈದು ವರ್ಷ ಕರ್ನಾಟಕದಲ್ಲಿ ನೆಲಸಿ, ಕನ್ನಡ ಭಾಷೆಯಲ್ಲಿ ವ್ಯವಹರಿಸಬಲ್ಲವರು ಕನ್ನಡಿಗರು.ಕನ್ನಡ ನಾಡು ನುಡಿಯನ್ನು ತನ್ನದೆಂದು ತಿಳಿದವರೆಲ್ಲರೂ ಕನ್ನಡಿಗರೇ.
ರಾಷ್ಟ್ರಕವಿ ಕುವೆಂಪು, ದರಾಬೇಂದ್ರೆ, ಶಿವರಾಮ ಕಾರಂತ' ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿಕೃಗೋಕಾಕ್, ಯು.ಆರ್ .ಅನಂತಮೂರ್ತಿ, ಗಿರೀಶ್ ಕಾರ್ನಾಡ್ ,ಚಂದ್ರಶೇಖರ ಕಂಬಾರ ,ಎಸ್.ಎಲ್.ಭೈರಪ್ಪ, ಇತ್ಯಾದಿಯಾಗಿ ಮಹಾನ್ ಮೇಧಾವಿ ಸಾಹಿತಿಗಳನ್ನು ಹೊಂದಿದ ನಾಡು ನಮ್ಮ ಕರುನಾಡು .ಆದಾಗ್ಯೂ೭೦% ರಷ್ಟು ಕನ್ನಡಿಗರು ಕರ್ನಾಟಕದಲ್ಲಿದ್ದಾರೆ. ಉಳಿದ ೩೦%ರಷ್ಟು ಕನ್ನಡಿಗರು ಗೋವಾ, ಮಹಾರಾಷ್ಟ್ರ' ಕೇರಳ' ತಮಿಳ್ನಾಡು' ಅಲ್ಲದೆ ಅಮೆರಿಕ ಮತ್ತು ಯುರೋಪ್ ಖಂಡದ ದೇಶಗಳಲ್ಲಿ ನೆಲೆಸಿದ್ದಾರೆ .೨೦೧೧ ರ ಜನಗಣತಿಯ ಪ್ರಕಾರ ೧,೯೧,೯೭೬ ಚ.ಕಿ.ಮಿ. ವ್ಯಾಪ್ತಿಯ ಕರ್ನಾಟಕ ರಾಜ್ಯದಲ್ಲಿ ೬೧,೧೩೦,೭೦೪ ನನ್ನ ಜನಸಂಖ್ಯೆಯನ್ನು ಹೊಂದಿದ್ದು ,೮ನೇ ದೊಡ್ಡ ರಾಜ್ಯ . ಧರ್ಮಗಳನೇಕವಾದರೂ ಆಡುವ ಭಾಷೆಯಲ್ಲಿ ಭಾವೈಕ್ಯತೆಯನ್ನು ಈ ಭಾಷೆಯು ಹೊಂದಿದೆ. ಹಿಂದೂ, ಜೈನ ,ಬೌದ್ಧ, ಕ್ರೈಸ್ತ ,ಇಸ್ಲಾಂ ,ಪಾಸಿ೯, ಧರ್ಮೀಯರನ್ನು ಹೊತ್ತ ಈ ನಾಡು ಕನ್ನಡವನ್ನೇ ಜೀವಾಳವಾಗಿರಿಸಿ ಕೊಂಡಿದೆ.ಇಂತಹ ಭಾಷಾ ಸೊಗಡನ್ನು ಉಸಿರಾಗಿಸಿಕೊಂಡವರು ಕನ್ನಡಿಗರು.ಕನ್ನಡಿಗರ ಈ ಅಸ್ತಿತ್ವ ಹೀಗೆ ನಿರಂತರವಾಗಿ ಉಳಿಯಬೇಕೆಂದರೆ ನಮ್ಮ ಕರ್ತವ್ಯಗಳೇನು? ಕನ್ನಡಿಗರಾಗಿ .....
...........ನಾವು ಪಾಲಿಸುತ್ತಿದ್ದೇವೆ .
೧)ಕರುಣೆ ,ಮಮತೆಗಳಿಂದ ಸರ್ವಧರ್ಮೀಯರಲ್ಲೂ ಭ್ರಾತೃತ್ವ ಭಾವನೆ ಬೆಳೆಸಿಕೊಳ್ಳುವವರಾಗಿದ್ದೇವೆ.
೨)ನಾಡಿನ ಜೀವಜಲ ಕಾವೇರಿಯಮ್ಮನ ಹಕ್ಕಿಗಾಗಿ ಪ್ರಾಣ ಕೊಟ್ಟವರು; ಪ್ರಾಣ ಕೊಡುವವರು .
೩)ತಮ್ಮ ಕುಟುಂಬದ ಒಳಿತಿಗಾಗಿ ಅಲ್ಲ ;ಕನ್ನಡ ನಾಡು ನುಡಿಗಾಗಿ ತನು ಮನ ಧನದಿಂದ ಹೋರಾಟ ಮಾಡುವವರು .
೪)ಕನ್ನಡ ಭಾಷೆಯನ್ನೇ ಉಸಿರಾಗಿಸಿಕೊಂಡು ಕನ್ನಡಕ್ಕಾಗಿಯೇ ತಮ್ಮ ಜೀವನದುದ್ದಕ್ಕೂ ಕಲಾಸೇವೆಗೈದ ಡಾ। ರಾಜಕುಮಾರ್ ನಂತಹ ನಟರನ್ನು ಹೊಂದಿದ ಹೆಮ್ಮೆ ಕನ್ನಡಿಗರದ್ದು .
೫)ನಾಡಿನ ಜನಪದ ಸೊಗಡನ್ನು ತಮ್ಮ ಕಣ್ಣ ರೆಪ್ಪೆಗಳಂತೆ ಜೋಪಾನವಾಗಿ ಉಳಿಸಿ ಅದರ ಉಳಿವಿಗಾಗಿ ಹಗಲಿರುಳು ಕಂಕಣಬದ್ಧರಾಗಿದ್ದಾರೆ.
೬)ಅನ್ನದಾತ ಮತ್ತು ನೇಕಾರನ ಕಷ್ಟದಲ್ಲಿ ಅವರ ಜೊತೆಯಾಗಿ ನಿಲ್ಲುವರು.
೭)ನಾಡಿನ ಸಂಸ್ಕೃತಿ ಮತ್ತು ಉಳಿವಿಗಾಗಿ ಸ್ವಾರ್ಥತೆಯನ್ನು ಬದಿಗಿಟ್ಟು ದುಡಿಯುವವರು .
೮)ಭವ್ಯ ನಾಡು ಕರುನಾಡಿನಲ್ಲಿ ಕದಂಬ ,ಗಂಗರು ,ಹೊಯ್ಸಳರು, ಬದಾಮಿ ಚಾಲುಕ್ಯರು' ವಿಜಯನಗರ ಸಾಮ್ರಾಜ್ಯ ಇತ್ಯಾದಿ ಮನೆತನಗಳ ಅರಸರ ಕೊಡುಗೆಯನ್ನು ನೆನೆಯುವವರು .
೯) ನಾಡಿನ ಹಿರಿಮೆಗಾಗಿ, ರಾಜಮನೆತನದ ಕುರುಹಿಗಾಗಿ',ವಾಸ್ತುಶಿಲ್ಪದ ಕೊಡುಗೆ ನೀಡಿದ ಅಮರಶಿಲ್ಪಿ ಜಕಣಾಚಾರಿಯಂತಹ ಹೆಮ್ಮೆಯ ಶಿಲ್ಪಿಗಳನ್ನು ಸ್ಮರಿಸುವವರು .
೧೦)ಗತಕಾಲದ ಅದ್ಭುತ ವಾಸ್ತುಶಿಲ್ಪದ ಸಂಪತ್ತನ್ನು ಸಂರಕ್ಷಿಸಿ, ನಮ್ಮ ಮುಂದಿನ ಪೀಳಿಗೆಗಾಗಿ ಅವುಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವವರು .
೧೧)ಭವ್ಯ ಪರಂಪರೆ ನಾಶವಾಗದೆ ಶುಚಿತ್ವ ಕಾಪಾಡಿಕೊಂಡು ವಿದೇಶಿಗರನ್ನು ಆಕರ್ಷಿಸಲು, ನಾಡಿನ ಕೀರ್ತಿ ಪತಾಕೆಯನ್ನು ಜಗತ್ತಿಗೆ ಸಾರುವ ಉದಾತ್ತ ಗುಣ ಹೊಂದುವ ಮೂಲಕ ಕನ್ನಡಿಗರಾದವರು.
೧೨) ನಾಡ ಭಾಷೆಯ ಪ್ರೀತಿಸುವುದರ ಜೊತೆಗೆ ಅನ್ಯ ಭಾಷೆಗಳನ್ನು, ಅನ್ಯ ಸಂಸ್ಕೃತಿಯನ್ನು ಗೌರವಿಸುವವರು ಕನ್ನಡಿಗರು .
೧೩) ಆಡಳಿತ ಭಾಷೆಯೂ ನಾಡ ಭಾಷೆಯಲ್ಲಿಯೇ ನಡೆಯಲಿ ಎಂಬ ಭಾಷಾಭಿಮಾನ ಬೆಳೆಸಿಕೊಂಡವರು .
೧೪)ಸಾಹಿತ್ಯ ಪರಂಪರೆ ಪ್ರೀತಿಸಿ, ಸಾಹಿತಿಗಳಿಗೆ ಗೌರವ, ಪುರಸ್ಕರಿಸುವ, ಸಭ್ಯತೆ ಸಂಸ್ಕೃತಿ ಮೆರೆದವರು .
೧೫)ಜಗದ ಜನರನ್ನು ಕೈಬೀಸಿ ಕರೆಯುತ್ತಿರುವ ಮೈಸೂರು ದಸರಾ ಅರಮನೆಯ ವೈಭವಕ್ಕೆ ಮೆರಗು ನೀಡಿದವರು.
೧೬)ಕೋಮುಗಲಭೆ ಸಂಘರ್ಷಗಳು ನಡೆದಾಗ ತಾಳ್ಮೆಯಿಂದ ತಿಳಿಹೇಳುವ ಸಹನಾಶೀಲರು ಕನ್ನಡಿಗರು .
೧೭)ನಾಡಹಬ್ಬವಾದ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯನ್ನು ನವೆಂಬರ್ ೧ ರಂದು ವಿಜೃಂಬಣೆಯಿಂದ ಆಚರಿಸಿ, ನಾಡಪ್ರೀತಿ ಯನ್ನು ಮೆರೆದವರು.
೧೮)ಬಾಲ್ಯದಲ್ಲಿಯೇ ಮಕ್ಕಳಿಗೆ ನಾಡ ಪ್ರೀತಿಯನ್ನು ಬೆಳೆಸಲು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ನಾಡ ಧ್ವಜದ ಧ್ವಜಾರೋಹಣವನ್ನು ಗೌರವದಿಂದ ನೆರವೇರಿಸುವರು.
೧೯)ನಾಡಿಗಾಗಿ, ನಾಡಿನ ಪರಂಪರೆಗಾಗಿ ದುಡಿದವರ, ಮಡಿದವರ ಹೆಸರನ್ನು ಸ್ಮರಿಸಿ ಗೌರವಪೂರ್ವಕ ನಮನ ಸಲ್ಲಿಸುವವರು.
೨೦) ರಾಜ್ಯದ ಪ್ರಜೆಗಳ ಹಿತದೃಷ್ಟಿಯಿಂದ ಜಾರಿಗೆ ತಂದ ಶಾಸನಗಳಿಗೆ ಅನುಗುಣವಾಗಿ ಸರಕಾರದ ಜತೆ ಕೈಜೋಡಿಸಿ ನಡೆಯುವವರು ಕನ್ನಡಿಗರು.
೨೧) ನಾಡಿನ ಕೀರ್ತಿಯನ್ನು ಬೆಳಗಿಸುವಂತಹ ಕ್ರೀಡಾಪಟುಗಳನ್ನುಪ್ರೋತ್ಸಾಹಿಸುವ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ಜನ್ಮಭೂಮಿ.
ಹೀಗೆ ಕನ್ನಡಿಗರ ಬಗ್ಗೆ ಹೇಳುತ್ತಾ ಹೋದರೆ ಅವಿನಾಭಾವ ಸಂಬಂಧ ಅಭಿಮಾನ ಬೆಳೆಯುವುದು. ಶ್ರೇಷ್ಠ ಕವಿ ಜಿ .ಪಿ. ರಾಜರತ್ನಂ ಹೇಳಿದಂತೆ .........
ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ।
ಎಂದು ಕನ್ನಡ ಭಾಷೆಯ ಬಗ್ಗೆ ಅಭಿಮಾನದಿಂದ ಹೇಳುವ ನಾಡು ಕನ್ನಡಿಗರಿಗದ್ದು.
"ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ
ವಿಧಿ ದಡಸೇರಿಸುವ ಬಂಡಿ"ಎನ್ನುವ ಅಜರಾಮರ ಸಾಹಿತ್ಯವನ್ನು ಸುಮಧುರವಾಗಿ ಹಾಡಿದ ಶ್ರೇಷ್ಠ ಗಾಯಕ ಗಾಯಕಿಯರನ್ನು , ಸಾಕಷ್ಟು ಕನ್ನಡ ಸಾಹಿತ್ಯ ಸಂಪತ್ತನ್ನು ಹೊಂದಿದ ನಾಡು .
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಉತ್ತಮವಾದ ಕನ್ನಡ ನಾಡ ನುಡಿಯ ಬಗ್ಗೆ ಅತ್ಯಂತ ಸುಂದರವಾದ ಅಂಕಣ ಮೇಡಂ ಓದಿ ತುಂಬಾ ಖುಷಿಯಾಯಿತು...ಧನ್ಯವಾದಗಳು ಜಿ.ಮೇಡಂ
ಪ್ರತ್ಯುತ್ತರಅಳಿಸಿತುಂಬು ಹೃದಯದ ಧನ್ಯವಾದಗಳು ಸಾರ್
ಅಳಿಸಿ