ಬುಧವಾರ, ಆಗಸ್ಟ್ 4, 2021

ಭೈರವಪುರದಲ್ಲೊಂದು ಪವಿತ್ರ ಧಾಮ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.

ಭೈರವಪುರದಲ್ಲೊಂದು ಪವಿತ್ರ ಧಾಮ

ತ್ರೇತಾಯುಗದ ರಾಮಾಯಣದ ಕಥಾವಸ್ತು ಯಾರಿಗೆ ಗೊತ್ತಿಲ್ಲ ಹೇಳಿ? ನಮ್ಮ ದೇಶದ ಆದರ್ಶ ಪುರುಷ, ಪುರುಷೋತ್ತಮ ಎಂದು ಪೂಜಿಸಲ್ಪಟ್ಟ ದೇವತಾಮಾನವ ಶ್ರೀರಾಮಚಂದ್ರನು ಜನಿಸಿದ ಪುಣ್ಯಭೂಮಿ ನಮ್ಮ ಭಾರತ .ಶ್ರೀ ರಾಮನವಮಿ ನಿಮಿತ್ತ ರಚಿಸಿದ ಸ್ವರಚಿತ ಭಕ್ತಿಗೀತೆಯ ಕವನವೂಂದು ನೆನಪಿನಂಗಳದಲ್ಲಿ ಸುಳಿದಾಡಿತು.
              *ಭಕ್ತಿಗೀತೆ*          
  ॥ಮರ್ಯಾದಾ ಪುರುಷೋತ್ತಮ॥ 

ಹೇ ರಾಮ ಶ್ರೀ ರಾಮ ಜಯ ಜಯರಾಮ ಹೇ ರಾಮ್ ಶ್ರೀರಾಮ್

೧)
ಇಕ್ಷ್ವಾಕು ವಂಶದ ರಘುಕುಲತಿಲಕ।
ಭರತ ಖಂಡದ ಜಗದೋದ್ಧಾರಕ। ಚೈತ್ರಶುಕ್ಲ ಪಕ್ಷದ ನವಮಿಯದಿನದಿ। ಕೌಶಲ್ಯೆ ಗರ್ಭದಿಂದ ಉದಯಿಸಿದ ದಾಶರಥಿ।
                             ॥ಹೇ ರಾಮ॥

೨)ಕೌಶಲ್ಯೆ ಸೌಮಿತ್ರಿ ಕೈಕೇಯ ಮಡಿಲಲ್ಲಾಡಿ।
ಬಾಲ್ಯವ ಕಳೆದು ಅಯೋಧ್ಯೆಯಲಿ ಒಡನಾಡಿ।
ಸಂಗೀತ ಸಾಹಿತ್ಯ ಕಾವ್ಯದಲ್ಲಿ ಸಂಪನ್ನ। 
ವಾತ್ಸಲ್ಯ ಪ್ರೀತಿಗೆ ರಾಮನೇ ಗುಣ ಸಂಪನ್ನ।
                   ॥ಹೇ ರಾಮ॥
೩)
ತಾಟಕಿ ಸಂಹಾರಕ ಅಹಲ್ಯೆಯ ಶಾಪವಿಮೋಚಕ। 
ಶಿವಧನಸ್ಸನ್ನು ಎತ್ತಿ ಜಾನಕಿಯ ವರಸಿದಾತ।  
ಪಿತೃವಾಕ್ಯಪಾಲನೆಗಾಗಿ ವನವಾಸ ಗೈದನೀತ। 
ರಾಜ್ಯವ ಅನುಜಗ ಬಿಟ್ಟ ವಚನಪಾಲಕನೀತ। 
                        ॥ಹೇ ರಾಮ॥  
೪)
ವೈದೇಹಿ ಲಕ್ಷ್ಮಣರೊಂದಿಗೆ ಪಂಚವಟಿಯಲ್ಲಿ।
ದಿನಗಳ ಕಳೆದನು ಅಸುರರ ಸಂಹರಿಸುತಲಿ।
ಮಾಯಾಮೃಗದ ವೇಷದಿ ಮಾರೀಚ ಬಂದನಿಲ್ಲಿ।
ಲಂಕೆಯ ರಾವಣನು ಸೀತೆಯ ಕರೆದೊಯ್ದನಿಲ್ಲಿ।
                      ॥ಹೇ ರಾಮ॥
೫)
ಹನುಮನ ರಾಮಭಕ್ತಿ ಅಳಿಲಿನ ಸೇವಾಶಕ್ತಿ। 
ಸಮುದ್ರದಿ ಸೇತುವೆ ಕಟ್ಟಿ ಲಂಕೆಗೆ ರಾಮನು ಬಂದ। 
ರಾವಣನ ಸಂಹರಿಸಿ ಸೀತೆಯನು ಕರೆತಂದ। 
ಅಯೋಧ್ಯೆಯಲ್ಲಿ ರಾಜ್ಯಾಭಿಷೇಕ ಗೊಂಡ।  
                       ॥ ಹೇ ರಾಮ||
      
          ಪುಣ್ಯಭೂಮಿ ಭಾರತದಲ್ಲಿ ದೇಶದ ಉದ್ದಗಲಕ್ಕೂ , ರಾಮಾಯಣದ ಘಟನೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ಅನೇಕ ಪುಣ್ಯಕ್ಷೇತ್ರಗಳು ಇಂದಿಗೂ ನಿತ್ಯ ಪೂಜೆಗೊಳ್ಳುತ್ತಿವೆ .ಅನೇಕ ರಾಮಮಂದಿರಗಳು ಇದ್ದರೂ ರಾಮಪಾದಗಳಿರುವ ದೇವಾಲಯದ  ದರ್ಶನವಾಗುವುದಿಲ್ಲ.ಆದರೆ ಅಂತಹ ರಾಮಪಾದಗಳಿರುವ ದೇವಾಲಯವನ್ನು ನಮ್ಮ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದಿಂದ 3ಕಿಲೋ ಮೀಟರ್ ದೂರದಲ್ಲಿರುವ "ಭೈರವಪುರ" ಅಥವಾ 'ಬೈರಾಪುರ' ಎಂದು ಕರೆಯಲ್ಪಡುವ ಗ್ರಾಮದಲ್ಲಿ ಕಾಣುತ್ತೇವೆ.ಇಲ್ಲಿನ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಶಿಲೆಯಲ್ಲಿ ಮೂಡಿದ ಶ್ರೀರಾಮ ಪಾದಗಳಿವೆ .ರಾಕ್ಷಸಕುಲದ ನಾಶಕ್ಕಾಗಿ ಅವತರಿಸಿದ ಶ್ರೀ ರಾಮಚಂದ್ರನು ಪಿತೃವಾಕ್ಯ ಪರಿಪಾಲನೆಗಾಗಿ ಸೀತಾ ಲಕ್ಷ್ಮಣ ಸಮೇತನಾಗಿ, ವನವಾಸಕ್ಕೆ ಹೊರಡುತ್ತಾನೆ .ಪಂಚವಟಿಯ (ಈಗಿನ ಮಹಾರಾಷ್ಟ್ರ ರಾಜ್ಯದ ನಾಸಿಕ್)ಯಲ್ಲಿ ಮಾಯಾಜಿಂಕೆ ಪ್ರಕರಣದಲ್ಲಿ ರಾವಣನಿಂದ ಸೀತೆಯ ಅಪಹರಣವಾಗುತ್ತದೆ.ಸೀತಾದೇವಿಯನ್ನು ಹುಡುಕುತ್ತಾ ಶ್ರೀರಾಮಚಂದ್ರನು ದಕ್ಷಿಣ ದಿಕ್ಕಿಗೆ ಪ್ರಯಾಣ ಬೆಳಸಿ, ಮಾರ್ಗ ಮಧ್ಯದಲ್ಲಿ ಬರುವ ಭೈರವರುಷಿ ಆಶ್ರಮಕ್ಕೆ ಬರುತ್ತಾನೆ.,ಅಮವಾಸ್ಯೆ ನಿಮಿತ್ತ ಪಿತೃತರ್ಪಣಕ್ಕಾಗಿ ಪವಿತ್ರ ಜಲದ ಅವಶ್ಯಕತೆ ಉಂಟಾಗುತ್ತದೆ.ಆಗ ತನ್ನ ಬಾಣವನ್ನು ಪ್ರಯೋಗಿಸಿ ಭೂಮಿಯನ್ನು ಸೀಳಿ ಗಂಗೆಯನ್ನು ಪಡೆದು ಪಿತೃತರ್ಪಣ ಕೊಡುತ್ತಾರೆ ಎಂಬ ರಾಮಾಯಣಕ್ಕೆ ಸಂಬಂಧಿಸಿದ ಕಥೆಗಳಿವೆ . ಈ ಘಟನೆಗೆ  ಸಾಕ್ಷಿಯಾಗಿ ಇಂದಿಗೂ ಈ ಪುಣ್ಯ ಕ್ಷೇತ್ರದಲ್ಲಿ ಶ್ರೀರಾಮಚಂದ್ರ ಗಂಗೆಯನ್ನು ಬರಮಾಡಿಕೊಂಡ ಸ್ಥಳ ರಾಮ ದೋಣಿ ಎಂದೇ ಪ್ರಸಿದ್ಧವಾದ ನೀರಿನ ಅರವಟಿಗೆ ಇದೆ. .ಆ ಸ್ಥಳದಲ್ಲಿ ಇಂದಿಗೂ ನೀರು ಬತ್ತಿಲ್ಲ.ಶ್ರೀರಾಮಚಂದ್ರನು ಈ ಸ್ಥಳಕ್ಕೆ ಬಂದ ಕುರುಹುವಾಗಿ ರಾಮಪಾದಗಳ ದರ್ಶನವಾಗುತ್ತದೆ.ರಾಮಡೋಣಿಯ  ರಾಮತೀರ್ಥವನ್ನು ಪ್ರೋಕ್ಷಣೆ ಮಾಡಿಕೊಂಡರೆ ಪಿತೃಗಳಿಗೆ ಮುಕ್ತಿಯನ್ನು ಮತ್ತು ನಮ್ಮ ಜನ್ಮಜನ್ಮಾಂತರಗಳ ಪಾಪಗಳನ್ನು ಕಳೆದುಕೊಳ್ಳುತ್ತೇವೆ ಎಂಬ ನಂಬಿಕೆಯಿದೆ . ಭೈರವಪುರದಿಂದ ಮುಂದೆ ಶ್ರೀರಾಮದೇವರು ಇಂದ್ರಕೀಲಪರ್ವತವನ್ನು (ಈಗಿನ ಕೊಪ್ಪಳ) ದಾಟಿ ಪಂಪಾಸರೋವರದ ಋಷಿಮುಖ ಪರ್ವತದತ್ತ (ಹಂಪೆ)ಹೊರಡುತ್ತಾರೆ .ಭೈರಾಪುರದ ಈ ಕ್ಷೇತ್ರವನ್ನು ವನವಾಸದ ದಾರಿಯಲ್ಲಿ ಇರುವ ಅನೇಕ ತೀರ್ಥಕ್ಷೇತ್ರಗಳ ಪಾವನ ಧೂಳಿಯಿಂದೊಡಗೂಡಿದ ಶ್ರೀರಾಮನ ಚರಣಾರವಿಂದದ, ಪೂಜೆ  ದರ್ಶನಗಳು ಜಗತ್ತಿನ ಎಲ್ಲ ತೀರ್ಥಕ್ಷೇತ್ರಗಳ ಪುಣ್ಯವನ್ನು ನೀಡುತ್ತವೆಂದು ಶಾಸ್ತ್ರಗಳು ಸಾರಿವೆ.
            ತುಂಬಾ ಶಿಥಿಲಗೊಂಡಿದ್ದ ಈ ಮಂದಿರ ನಿರ್ಮಾಣವನ್ನು ಪುನರುಜ್ಜೀವನಗೊಳಿಸಲಾಗಿದೆ.ಈ ಪುನರುಜ್ಜೀವನ ಕಾರ್ಯಕ್ಕಾಗಿ ಸಾಕಷ್ಟು ಮಹನೀಯರು ಶ್ರಮಿಸಿದ್ದಾರೆ.ಸರಕಾರದಿಂದಲೂ ಅನುದಾನ ದೊರೆತಿದೆ.ಪ್ರತಿವರ್ಷ ಯುಗಾದಿ ಅಮವಾಸ್ಯೆಯ ನಂತರ ೯ ದಿನಗಳ ಕಾಲ ಹೋಮ, ಹವನಾದಿಗಳು ವಿಜೃಂಭಣೆಯಿಂದ ನಡೆದು, ರಾಮ ನವಮಿಯ ದಿನ ವಿಶೇಷ ರಥೋತ್ಸವ ಕಾರ್ಯಕ್ರಮವು ನಡೆಯುತ್ತದೆ .ಬೇಡಿದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ನಿಸರ್ಗದ ಮಡಿಲಲ್ಲಿ ಭೈರವ ಪುರದಲ್ಲಿ ಪಾದಗಳ ರೂಪದಲ್ಲಿ ಶ್ರೀರಾಮಚಂದ್ರನ ದರ್ಶನ ಭಾಗ್ಯವೆಂದು ಜನಮಾನಸವಾಗಿದೆ.ಸುತ್ತಮುತ್ತಲಿನ ಸಾಕಷ್ಟು ಹಳ್ಳಿಗಳ ಜನರು ತಮ್ಮ ಮನೆಯ ಕಲ್ಯಾಣ ಕಾರ್ಯಗಳನ್ನು ಈ ದೇವಾಲಯದಲ್ಲಿ ನೆರವೇರಿಸಿಕೊಳ್ಳುತ್ತಾರೆ.ವಿವಾಹ ಸಮಾರಂಭಗಳನ್ನು ಸಹ ಈ ಪವಿತ್ರ ಸ್ಥಳದಲ್ಲಿ ನಡೆಸಲಾಗುತ್ತದೆ.ಈ ದೇವಸ್ಥಾನದ ಮತ್ತೊಂದು  ವಿಶೇಷತೆಯೆಂದರೆ ಈ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಸಾಕಷ್ಟು ನವಿಲುಗಳು ಓಡಾಡುವುದನ್ನ ಪ್ರವಾಸಿಗರು ನೋಡಿ ಆನಂದಿಸುತ್ತಾರೆ .ದೇವಸ್ಥಾನದ ಸುತ್ತಲೂ ಪ್ರಾಚೀನ ಕಲ್ಲಿನ ಮಂಟಪ ಆವರಿಸಿದ್ದು ಮಂಗಲ ಕಾರ್ಯಗಳಿಗೆ ಅನುಕೂಲ ಕಲ್ಪಿಸಿದೆ.ಉತ್ತರ ಭಾರತದ ಅಯೋಧ್ಯೆಯಿಂದ ವನವಾಸವನ್ನು ಆರಂಭಿಸಿದ ಶ್ರೀರಾಮಚಂದ್ರನು,  ದಕ್ಷಿಣ ಭಾರತದ ಹಲವು ರಾಜ್ಯಗಳ ಮುಖಾಂತರ ಕರ್ನಾಟಕ, ತಮಿಳುನಾಡು, ಮೂಲಕ ರಾಮೇಶ್ವರಕ್ಕೆ ಹೋಗಿ,ಅಲ್ಲಿಂದ ರಾಮಸೇತು ನಿರ್ಮಿಸಿ  ಲಂಕೆಯ  ರಾವಣನನ್ನು ಸಂಹರಿಸಿ ಸೀತಾಮಾತೆಯನ್ನು ಕರೆತಂದು ಅಯೋಧ್ಯೆಯಲ್ಲಿ ಪಟ್ಟಾಭಿಷೇಕಗೊಂಡ ಎನ್ನುವ ರಾಮಾಯಣದ ಘಟನಾಧಾರಿತ ಪವಿತ್ರ ಸ್ಥಳವಾದ ಭೈರವಪುರಕೊ ಮ್ಮೆ ಪ್ರತಿಯೊಬ್ಬರು ಬಂದು ಶ್ರೀರಾಮನ ಪಾದುಕೆಗಳ ದರ್ಶನ ಭಾಗ್ಯ ಪಡೆಯುವಂತಾಗಲಿಎಂದು ಆಶಿಸುತ್ತೇನೆ.


     -  ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659  ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...