ಹೇ ಸಖ
ಏನು ಹೇಳಲಿ ನಾನು ನನ್ನ ಮನದ ಸುಳಿಗಾಳಿ
ಎತ್ತ ಸಾಗಿದೆ ನೀನು ಎನ್ನುಸಿರ ಕದ್ದ ನಿಜ ಪ್ರೇಮಿ
ಈಗ ಬರುವೆನೆಂದು ಎಲ್ಲಿರುವೆ ನೀನು ಸಖ
ಶಬರಿಯಂತೆ ಕಾದೆ ನಿನ್ನೊಲವ ಪ್ರೀತಿಗೆ ಸಖ
ಕಾಣದೂರಿನಿಂದ ಕಣ್ಣಳತೆಯಲಿ ನಾಚಿದವಳು
ಇರುಳನೆಲ್ಲ ಹೊತ್ತು ತಂದು ಹೆರಳ ಮೇಲೆ ನಗು
ಮಲ್ಲಿಗೆಯ ಮುಡಿದು ದಾರಿ ಕಾಯುತಿರುವೆ
ದಿಗಂತದಲಿ ಹಗಲನಕ್ಷಿ ಬೇಸರಿಸಿ ಕೆಂಪಾದ ಸಖ
ಅಪ್ಪನಿಲ್ಲದಿದ್ದರೂ ತೆಪ್ಪಗಿದ್ದೆ ನೀನಿಲ್ಲದೆ ಹೇಗಿರಲಿ
ಒಮ್ಮೆ ಹೇಳಿ ಬಿಡು ನಿನ್ನೊಳು ನಾನಿರುವೆನೆಂದು
ಸಖ ಬರುವ ದಾರಿ ನೆನೆದು ಅತ್ತು ಬಿಟ್ಟೆ ಕಣ್ಣೀರು
ಮುತ್ತಾಗಿ ಕೆನ್ನೆ ಮೇಲೆ ಇಳಿದು ಹೃದಯ ತಾಕಿತು
ಏಕಿಂತು ಸಖ ನೀನು ಬರದೆ ನಾನು ಹೇಗೆ ಪೂರ್ಣ
ನಿನ್ನೊಲವ ಪ್ರೀತಿಗೆ ನನ್ನೊಲವ ಬೆರೆಸಿ ತಂಪೆರೆದೆ
ಎನ್ನ ಕಣ್ಣೊಳಗಿನ ಪ್ರೇಮಕೆ ಪ್ರೀತಿ ಕಾವ್ಯವಾದೆ
ಬರಹದೂರಿನಲಿ ಲೇಖನಿಯ ಮರವಾದೆ ಸಖ
ಪ್ರೇಮ ಪಲ್ಲಕ್ಕಿಯಲಿ ಕೂತು ಪ್ರೀತಿ ಚಾಮರ ಬೀಸಿ
ಕನಸುಗಳ ಚಾದರ ಹಾಸಿ ನನಸಿನ ದಿಂಬಿಗೆ ತಲೆ
ಇಟ್ಟು ನಿನ್ನ ಬಾಹು ಬಂಧನದೊಳ್ ಪ್ರೇಮ ಖೈದಿ
ಯಾಗಿ ಭಾವಲೋಕದಿ ದೂರ ತೀರ ಪಯಣಿಗಳು
ಹೇ ಸಖ ನಾನೇಕೆ ನಿನ್ನ ತೋಳಲಿ ಅವಿತೆ ಹೇಳು
ನನ್ನ ಬಾಳಿನ ನೋವನು ನೀನುಂಡು ನನಗೆ ಪ್ರೀತಿ
ಅಮೃತವ ಕುಡಿಸಿದ ನೀನು ನನ್ನೊಲವಿಗೆ ನೀನು
ವಾರಸುದಾರ ನೀನು ಈ ಹೃದಯ ನಿನಗಾಗಿ ಸಖ
ಕಾದಿರುವೆ ಕಾರಿರುಳ ಕತ್ತಲಲಿ ನಿನ್ನ ಬೆಳದಿಂಗಳ
ಹುಡುಕುವ ಚಂದಿರ ನಾನಾದೆ ಗೊತ್ತಿಲ್ಲ ನನಗೆ
ಬೆಳದಿಂಗಳ ನಾನೆಂದು ನಿನ್ನ ಪ್ರೀತಿಯ ಹುಡುಕಿದ
ಹೃದಯದ ಕಳ್ಳಿ ನಾನು ನೀನು ನನ್ನವನು ಸಖ
- ಶ್ರೀ ಇಂಗಳಗಿ ದಾವಲಮಲೀಕ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ