ಗುರುವಾರ, ಸೆಪ್ಟೆಂಬರ್ 16, 2021

ಹಸಿವು ಕಲಿಸುವ ಪಾಠ (ಕಿರು ಕತೆ) - ಭವ್ಯ ಟಿ. ಎಸ್. ಶಿಕ್ಷಕರು. ಹೊಸನಗರ - ಶಿವಮೊಗ್ಗ.

ಹಸಿವು ಕಲಿಸುವ ಪಾಠ (ಕಿರು ಕತೆ)

ದಿವ್ಯ ಮತ್ತು ದೀಕ್ಷಿತ್ ಕೊರೋನಾದಿಂದ ತಂದೆ
ತಾಯಿಯರನ್ನು ಕಳೆದುಕೊಂಡು ಅನಾಥರಾದ
ಮಕ್ಕಳು. ಕಟ್ಟಡ ಕಾರ್ಮಿಕರಾಗಿ ಅಲೆಮಾರಿ 
ಜೀವನ ನಡೆಸುತ್ತಿದ್ದ ಶೇಖರ್ ಮತ್ತು ಲಕ್ಷ್ಮೀ
ದಂಪತಿಗಳು ತಿಂಗಳ ಹಿಂದೆ ತೀವ್ರ ಉಸಿರಾಟದ
ಸಮಸ್ಯೆಗೆ ತುತ್ತಾಗಿ ಸೂಕ್ತ ಸಮಯದಲ್ಲಿ ಆಕ್ಸಿಜನ್
ಸಿಗದೆ ಆಸ್ಪತ್ರೆಯಲ್ಲಿ ಮರಣ ಹೊಂದಿದರು.ದಿನ
ಬರುತ್ತಿದ್ದ ಕೂಲಿಯಲ್ಲಿ ತಮ್ಮ ಮಕ್ಕಳ ಓದು ಊಟದ
ಖರ್ಚು ನಿರ್ವಹಿಸುತ್ತಿದ್ದರು.ಆದರೆ ಈಗ ಆ ಮಕ್ಕಳಿಗೆ
ಶಾಲೆಯೂ ಮುಚ್ಚಿರುವುದರಿಂದ ಅಲ್ಲಿ ಸಿಗುತ್ತಿದ್ದ
ಮಧ್ಯಾಹ್ನದ ಊಟವೂ ಇಲ್ಲವಾಗಿದೆ. ಒಂದು
ಹೊತ್ತಿನ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಆ
ಅನಾಥ ಮಕ್ಕಳದ್ದು.ದೀಕ್ಷಿತ್ ತನ್ನ ತಂಗಿಯ ಹಸಿವೆ
ನೋಡಲಾರದೆ ಕೂಲಿ ಕೆಲಸಕ್ಕೆ ಸೇರಿಕೊಂಡ.ದಿನಕ್ಕೆ
ಬರುತ್ತಿದ್ದ ಇಪ್ಪತ್ತು ರೂಪಾಯಿಗಳಲ್ಲಿ ತನ್ನ ಮತ್ತು
ತಂಗಿಯ ಹೊಟ್ಟೆ ತುಂಬಿಸಿಕೊಳ್ಳಬೇಕಿತ್ತು.
ಒಂದು ದಿನ ದೀಕ್ಷಿತ್ ಹೋಟೆಲ್ ಗೆ ಹೋದನು.
ಎಲ್ಲರೂ ಕುಳಿತುಕೊಳ್ಳುವ ಕುರ್ಚಿಯಲ್ಲಿ ಕುಳಿತನು.
ಆದರೆ ಅವನ ಹಳೆಯದಾದ ಬಟ್ಟೆ, ಕೃಶಕಾಯ ನೋಡಿ
ಅಲ್ಲಿನ ವೇಟರ್ ಅವನನ್ನು ಅಲ್ಲಿಂದ ಎಬ್ಬಿಸಿ, ಬೇರೆ
ಗ್ರಾಹಕರನ್ನು ಸತ್ಕರಿಸುತ್ತಿದ್ದನು.ದೀಕ್ಷಿತ್ ಅಲ್ಲೇ ಪಕ್ಕದ
ಟೇಬಲ್ ನಲ್ಲಿ ಯುವತಿ ಒಬ್ಬಳ ಪಕ್ಕದಲ್ಲಿ ಕುಳಿತನು‌.
ಆಕೆಯೂ ಅವನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ
ಏಳಲು ಮುಂದಾದಾಗ ಸಿಟ್ಟಿನಿಂದ ವೇಟರ್ ಅವನಿಗೆ
ಹೊಡೆದು ಎಳೆದಾಡಿದನು.ಆಹಾರ ಪಡೆಯಲು ಬಂದ
ದೀಕ್ಷಿತ್ ಮುಖಕ್ಕೆ ಯಾರೋ ತಿಂದಿಟ್ಟು ಹೋಗಿದ್ದ
ತಟ್ಟೆಯ ಅನ್ನ ಮೆತ್ತಿಕೊಳ್ಳುತ್ತದೆ.ಹಸಿವಿನೊಂದಿಗೆ
ಈ ಅಪಮಾನವೂ ಸೇರಿ ದೀಕ್ಷಿತ್ ಕಂಗಳಲ್ಲಿ ನೀರು
ತುಂಬಿಕೊಳ್ಳುತ್ತದೆ.ಆದರೂ ಅಲ್ಲಿಂದ ಹೊರಟು
ಹೋಗದೆ ನಿಂತಿದ್ದ ಅವನನ್ನು ವೇಟರ್ ಎಳೆತಂದು
ನೆಲದ ಮೇಲೆ ಯಾರಿಗೂ ಕಾಣದ ಸ್ಥಳದಲ್ಲಿ 
ಕೂರಿಸುತ್ತಾನೆ.ಮತ್ತೆ ತನ್ನ ಶ್ರೀಮಂತ ಗ್ರಾಹಕರ
ಉಪಚಾರದಲ್ಲಿ ತೊಡಗುತ್ತಾನೆ. ಅವರು ವೇಟರ್ 
ನನ್ನು ಮೆಚ್ಚಿ ಬಿಲ್ ಜೊತೆ ಟಿಪ್ಸ್ ಹಣ ಕೊಡುತ್ತಾರೆ.
ಸಂತಸಗೊಂಡ ವೇಟರ್ ಅದನ್ನು ಬಿಲ್ ಬುಕ್ ನಲ್ಲಿ
ಇರಿಸುತ್ತಾನೆ.ಮತ್ತೆ ದೀಕ್ಷಿತ್ ಬಳಿ ಬಂದು ಏನು
ಬೇಕೆಂದು ಕೇಳುತ್ತಾನೆ."ಎರಡು ಬ್ರೆಡ್ ಗಳು ಬೇಕು"
ಎನ್ನುತ್ತಾನೆ ಹಸಿದ ಹುಡುಗ. ವೇಟರ್ ಪ್ಲೇಟ್ ನಲ್ಲಿ
ಬ್ರೆಡ್ ಗಳನ್ನು ತಂದಿರಿಸಿದಾಗ,ಒಂದನ್ನು ಬೇಗನೇ
ತನ್ನ ಚಡ್ಡಿಯ ಜೇಬಿನಲ್ಲಿ ಇರಿಸಿಕೊಂಡು, ಒಂದು
ಬ್ರೆಡ್ ನ್ನು ಗಬಗಬನೇ ತಿನ್ನುತ್ತಾನೆ.ವೇಟರ್ 
ಅವನ ಬಳಿ ಬಿಲ್ ಪುಸ್ತಕ ತಂದಿಟ್ಟು ಹೋಗುತ್ತಾನೆ.
ದೀಕ್ಷಿತ್ ಅದನ್ನು ನೋಡಿ ಇಪ್ಪತ್ತು ರೂಪಾಯಿಗಳನ್ನು
ಅದರೊಳಗಿರಿಸಿ,ಹೊರಟು ಹೋಗುತ್ತಾನೆ.ಅಲ್ಲಿಗೆ
ಬಂದ ವೇಟರ್ ಬಿಲ್ ಪುಸ್ತಕದಲ್ಲಿ ಹುಡುಗ ಇಟ್ಟಿದ್ದ
ಹಣ ನೋಡುತ್ತಾನೆ.ಜೊತೆಗೆ ತಾನು ಅಲ್ಲಿರಿಸಿದ್ದ
ಟಿಪ್ಸ್ ಹಣ ಕೂಡ ಹಾಗೆಯೇ ಇರುವುದನ್ನು ಗಮನಿಸಿ
ದೀಕ್ಷಿತ್ ಬಡತನದಲ್ಲಿದ್ದರೂ ಅವನಲ್ಲಿ ಕದಿಯುವ
ಪ್ರವೃತ್ತಿ ಇಲ್ಲವೆಂದು ಅರಿತುಕೊಳ್ಳುತ್ತಾನೆ.ಜೊತೆಗೆ
ತಾನು ಅವನೊಡನೆ ವರ್ತಿಸಿದ ನಡತೆ ಬಗ್ಗೆ ತಾನೇ
ಪಶ್ಚಾತ್ತಾಪ ಪಟ್ಟು ಅಳುತ್ತಾ, ಅವನ ಹುಡುಕಿಕೊಂಡು
ಹೋಟೆಲ್ ನಿಂದ ಹೊರ ಓಡಿಬಂದು ನೋಡುತ್ತಾನೆ.
ದೀಕ್ಷಿತ್ ಎಲ್ಲೂ ಕಾಣಿಸುವುದಿಲ್ಲ. ಮೌನವಾಗಿ 
ಯೋಚಿಸುತ್ತಾ ನಿಲ್ಲುತ್ತಾನೆ. ಇತ್ತ ಹೋಟೆಲ್ ನಿಂದ
ಹೊರಬಂದ ದೀಕ್ಷಿತ್ ಅಲ್ಲೇ ಪಕ್ಕದ ಸ್ಥಳದಲ್ಲಿ ತಾನು
ತಂದ ಬ್ರೆಡ್ ನ್ನು ಹಸಿದ ತನ್ನ ತಂಗಿಗೆ ಕೊಟ್ಟು ತಿನ್ನಲು
ಹೇಳುತ್ತಾನೆ.ಅವಳು ತಿನ್ನುವುದು ನೋಡಿ ಸಂತೋಷ
ಪಡುತ್ತಿರುತ್ತಾನೆ.
ಹಸಿವು ಮನುಷ್ಯನಿಗೆ ಅವಮಾನವನ್ನೂ ಸಹಿಸಿ
ಕೊಳ್ಳುವ ತಾಳ್ಮೆ ಕಲಿಸುತ್ತದೆ. ಹಂಚಿತಿನ್ನುವ ಪ್ರೀತಿ
ಬಡತನದ ನೋವನ್ನು ಮರೆಸುತ್ತದೆ.ಬಡವರನ್ನು
ಸಹಾನುಭೂತಿಯಿಂದ ಕಾಣುವುದರಿಂದ ನಮ್ಮ
ಗೌರವ ಹೆಚ್ಚುತ್ತದೆ.

- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...