ಗುರುವಾರ, ಸೆಪ್ಟೆಂಬರ್ 16, 2021

ಸ್ವಾಭಿಮಾನದ ಜ್ಯೋತಿ ತಂದೆ ಪೆರಿಯಾರ್ ರಾಮಸ್ವಾಮಿ ನಾಯಕರ್ (ಲೇಖನ) - ಅಶ್ವಜೀತ ದಂಡಿನಯುವ ಬರಹಗಾರರು, ಬೀದರ.

ಸ್ವಾಭಿಮಾನದ ಜ್ಯೋತಿ ತಂದೆ ಪೆರಿಯಾರ್ ರಾಮಸ್ವಾಮಿ ನಾಯಕರ್

         ಈ ಭವ್ಯವಾದ ಬಹುಜನ ಭಾರತ ದೇಶದಲ್ಲಿ ,  ಕ್ರಿಸ್ತ ಪೂರ್ವ.185 ರಲ್ಲಿ ಸುಮತಿ ಭಾರ್ಗವನೆಂಬ ಒಬ್ಬ ಆರ್ಯ ಋಷಿ ಬರೆದ ಸಂವಿಧಾನವಾದ  'ಮನುಸ್ಮೃತಿ' ಯಿಂದ,  ಈ ದೇಶದ ಜನರನ್ನು ನಾಲ್ಕು ವರ್ಣಗಳನಾಗಿ ವಿಂಗಡಿಸಲಾಯಿತು.  ಈ ಮನುವಿನ ಪ್ರಕಾರ  ಬ್ರಾಹ್ಮಣರಿಗೆ ಶಿಕ್ಷಣ ಮತ್ತು ಪುರೋಹಿತ್ಯದ ಹಕ್ಕನ್ನು, ಕ್ಷತ್ರಿಯರಿಗೆ ಖಡ್ಗ ಹಿಡಿಯುವ-ಅಧಿಕಾರವೆರುವ  ಹಕ್ಕನ್ನು, ವೈಶ್ಯರಿಗೆ ಕೃಷಿ ಸಂಪತ್ತಿನ ಸಂರಕ್ಷಣೆ ಹಾಗೂ ವ್ಯಾಪಾರ ಮಾಡುವ ಹಕ್ಕನ್ನು  ಮತ್ತು ಈ ದೇಶದ ಬಹುಸಂಖ್ಯಾತರಾದ ಶೂದ್ರ ಜನಾಂಗದವರಿಗೆ ಈ ಮೇಲಿನ ಮೂರು ಜನಾಂಗದವರಿಗೆ  ಸೇವೆ ಮಾಡುವ ಹಕ್ಕನ್ನು ಮೀಸಲು ಗೊಳಿಸಲಾಯಿತು. 

         ಈ ಚಾತುರ್ವರ್ಣ ಪದ್ಧತಿಯನ್ನು ಒಪ್ಪದೇ ಇರುವ ಜನಾಂಗವನ್ನು ಅಸ್ಪೃಶ್ಯರೆಂದು ಜರಿದು , ಊರಿಂದ ಹೊರಗೆ ದೂಡಲ್ಪಟ್ಟರು .  ಈ ಅಸ್ಪೃಶ್ಯ ಜನಾಂಗದ ಮೇಲೆ ನಾನಾರೀತಿಯ ಕಿರುಕುಳಗಳು ಹಿಂಸೆಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಇವರನ್ನು ಮುಟ್ಟಿದರೆ ಅಶುಭವೆಂದು ಭಾವಿಸಲಾಗುತ್ತಿತ್ತು. ಇವರ  ನೆರಳು ತಾಕಿದರೆ  ಮೈಲಿಗೆ ಆಗುವುದೆಂದು  ನಂಬಲಾಗಿತ್ತು. ಇವರನ್ನು ಪಶು ಪಕ್ಷಿಗಳಿಗಿಂತ ಕಡೆಯಾಗಿ ಕಾಣಲಾಗುತ್ತಿತ್ತು.  
 
         ಇಂತಹ ಘೋರ ಅನ್ಯಾಯ, ದೇವರ ಹೆಸರಿನ ಮೇಲೆ ಜನರನ್ನು ಸುಲಿಯುವ ಡಾಂಭಿಕತೆಯನ್ನು, ವೈಚಾರಿಕತೆಯಿಂದ ಒಬ್ಬ ಬಾಲಕ ಚಿಕ್ಕ ವಯಸ್ಸಿನಿಂದಲೇ ದಿಟ್ಟತನದಿಂದ ಪ್ರಶ್ನಿಸುತ್ತ ಬೆಳೆಯುತ್ತಾನೆ. ಆತನ ವಿಚಾರಲಹರಿಯಿಂದ ಮುಂದೆ ಆತ ಏಷ್ಯಾದ ಸಾಕ್ರೆಟಿಸ್ ಎಂದೇ ಪ್ರಸಿದ್ಧಿ ಪಡೆಯುತ್ತಾನೆ. ಆತ ಬೇರೆ ಯಾರು ಅಲ್ಲ ಸ್ವಾಭಿಮಾನಿ ಚಳುವಳಿಯ ಹರಿಕಾರ ತಂದೆ ಪೆರಿಯಾರ್ ರಾಮಸ್ವಾಮಿ ನಾಯಕರ್.

         ಪೆರಿಯಾರ್ ಅವರು,  ತಂದೆ ವೆಂಕಟಪ್ಪನಾಯಕ  ತಾಯಿ ಚಿನ್ನತಾಯಿ ಅಮ್ಮಾಳ್ ಅವರ ಪುಣ್ಯ ಉದ್ಧಾರದಲ್ಲಿ  ಕ್ರಿ.ಶ 1879 ಸೆಪ್ಟೆಂಬರ್ 17 ರಂದು ಅಂದಿನ ಮದ್ರಾಸ್ ಪ್ರಾಂತ್ಯದ ಕೊಯಮತ್ತೂರು ಜಿಲ್ಲೆಯ ಈರೋಡಿನಲ್ಲಿ ಜನಿಸಿದರು. 

         ವೆಂಕಟಪ್ಪನಾಯಕ ಅವರು ಮೂಲತಃ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯವರು . ಇವರು  ರಕ್ಕಸ ತಂಗಡಿ ಯುದ್ಧದ ನಂತರ ಬಳ್ಳಾರಿಯ ಮೂಲಕ ಕೋಲಾರ ಜಿಲ್ಲೆಗೆ ಬಂದು ನೆಲೆಸಿದರು. ಕೊನೆಗೆ ಕೋಲಾರದಿಂದ  ತಮಿಳುನಾಡಿನ ಈರೋಡಿಗೆ ಬಂದು ನೆಲೆಸಿದರು. ಇವರ ಮನೆಯ ಭಾಷೆ ಕನ್ನಡವಾಗಿತ್ತು.

         ಪೆರಿಯಾರ್ ಅವರ ತಂದೆ ತಾಯಿಗಳು ಸಂಪ್ರದಾಯಸ್ಥವಾದಿಗಳಾದ ಕಾರಣ ಆಗಾಗ ಅವರ ಮನೆಗೆ ಪುರೋಹಿತರು, ಸಾಧುಸಂತರು ಬರುತ್ತಿದ್ದರು. ತಂದೆ-ತಾಯಿಯರು ಪಾಲಿಸುತ್ತಿದ್ದ ಸಂಪ್ರದಾಯಗಳನ್ನು ಬಾಲಕ ಪೆರಿಯಾರ್ ಬಹು ಸಂದೇಹಾಶ್ವರ್ಯಗಳಿಂದ ಗಮನಿಸುತ್ತಿದ್ದ. ಪುರೋಹಿತರು ಆಚರಿಸುವ ಪೂಜೆ, ಪುರಾಣ, ಪುಣ್ಯ ಕಥೆ, ವೃತ , ಉಪವಾಸ ಎಷ್ಟರ ಮಟ್ಟಿಗೆ ಸರಿ..!? ಹುಟ್ಟಿನಿಂದ ಎಲ್ಲರೂ ಒಂದೇ ಎಂದ ಮೇಲೆ ಈ ಜಾತಿ ಮೇಲು-ಕೀಳು  ಸ್ವರ್ಗ-ನರಕ ಪಾಪ-ಪುಣ್ಯಗಳೆಂಬ ಕಾಲ್ಪನಿಕ ಆಚರಣೆಗಳು ಏಕೆ.? ದೇವರು ಇದ್ದರೆ ಅವನು ಈ ಮೇಲು-ಕೀಳು  ಸ್ವರ್ಗ-ನರಕ ಎಂಬ ಭೇದ-ಭಾವ ಏಕೆ ಮಾಡಿದ? ಎಂಬ ಹಲವಾರು ಪ್ರಶ್ನೆಗಳನ್ನು ಹಿರಿಯರಿಗೆ ಹಾಗೂ ಮನೆಗೆ ಬಂದ ಸಾಧು ಸಂತರಿಗೆ ಕೇಳಿ ಉತ್ತರ ದೊರಕದೆ ಇದ್ದಾಗ ನಿರಾಸೆಯಾಗಿ ಸುಮ್ಮನಾಗುತ್ತಿದ್ದ. ಚಿಕ್ಕಂದಿನಿಂದಲೇ ರಾಮಸ್ವಾಮಿ (ಪೆರಿಯಾರ್) ಅವರಲ್ಲಿ ಏಕೆ? ಏನು? ಹೇಗೆ? ಎಂದು ಪ್ರಶ್ನಿಸುವ ಮನೋಭಾವ ಬೆಳೆದು ಬಂದಿತು.

         ಬಾಲಕ ಪೇರಿಯರ್ ಅಸ್ಪೃಶ್ಯರ ಸಂಪರ್ಕ ಬೆಳೆಸಿದರು. ಅಸ್ಪೃಶ್ಯರ ಜೊತೆ ಆಡುವುದು, ಊಟ ಮಾಡುವುದು, ಅವರಲ್ಲಿಯೇ ಉಳಿದುಕೊಳ್ಳುವುದು, ಇಂತಹ ಚಟುವಟಿಕೆಗಳನ್ನು ಕಂಡು ಎಲ್ಲರೂ ದ್ವೇಷಿಸುತ್ತಿದ್ದರು.ಅವರ ಸ್ವಭಾವನ್ನರಿತ ತಂದೆ-ತಾಯಿ ಅಸ್ಪೃಶ್ಯರು ಹೀನ ಕುಲದವರು ಅವರನ್ನು ಮುಟ್ಟಿಸಿ ಕೊಳ್ಳಬಾರದು ಹಾಗೂ ಅವರೊಟ್ಟಿಗೆ ಆಟ ಆಡುವುದು, ಊಟಮಾಡುವುದು ಮಾಡಬಾರದೆಂದು ತಾಕಿತು ಮಾಡಿದರು. ಆದರೆ ನಾಯಕರಿಗೆ ಅಸ್ಪೃಶ್ಯರು ದೀನದಲಿತರು ಊರ ಹೊರಗಿರುವುದು ಸರಿ ಕಂಡುಬರಲಿಲ್ಲ.

         ಅವರ ಈ ವರ್ತನೆಯನ್ನು ಕಂಡು ಇವರ ತಂದೆ ಇವರನ್ನು  ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಇವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉಪಾಧ್ಯಾಯರು ಉತ್ತರ ಕೊಡದೆ ಕಕ್ಕಾಬಿಕ್ಕಿಯಾಗುತ್ತಿದ್ದರು. ಬಾಲಕನ ಸಂಪ್ರದಾಯಸ್ಥ ವಿರೋಧಿ ಆಚರಣೆಗಳನ್ನು ಕಂಡು ಶಿಕ್ಷಿಸುವುದು ಕೋಳಿ ಕೂಡಿಸುವುದು ಮಾಡುತ್ತಿದ್ದರು. ಇದರಿಂದ ಬೇಸತ್ತ ರಾಮಸ್ವಾಮಿ ವಿಶಾಲವಾದ ಪ್ರಪಂಚವೇ ತನ್ನ ಶಾಲೆಯಂದು ಈ ಸಮಾಜವೇ ತನ್ನ ಪ್ರಯೋಗ ಶಾಲೆಯಂದು ತಿಳಿದು ನಾಲ್ಕನೇ ತರಗತಿಗೆ ತನ್ನ ವ್ಯಾಸಂಗವನ್ನು ಮುಕ್ತಾಯಗೊಳಿಸಿದರು.

         ಶಾಲೆ ಬಿಟ್ಟಮೇಲೆ ರಾಮಸ್ವಾಮಿಯವರು ಕ್ರಿಯಾಶೀಲರಾಗಿ ತಂದೆಯ ವ್ಯಾಪಾರದಲ್ಲಿ ಸಹಾಯಕರಾಗಿ ದುಡಿದು ವ್ಯವಹಾರ ಜ್ಞಾನವನ್ನು ಪಡೆದರು. ವಿರಾಮ ಸಿಕ್ಕಾಗಲೆಲ್ಲಾ ಅನೇಕ ಬಗೆಯ ಪುಸ್ತಕಗಳು ಓದುತ್ತಿದ್ದರು. ಮನೆಗೆ ಬರುತ್ತಿದ್ದ ಪಂಡಿತರೊಡನೆ ಧರ್ಮಗ್ರಂಥಗಳಲ್ಲಿನ ದೋಷಗಳು, ಮೌಢ್ಯತೆಗಳು, ಮೂಢನಂಬಿಕೆಗಳು, ಅನಾಚಾರಗಳು ನಿರ್ಭೀತಿಯಿಂದ ಟೀಕಿಸುತ್ತಿದ್ದರು. ಇವರ ಈ ಸಾಮರ್ಥ್ಯವನ್ನು ಕಂಡು ಎಲ್ಲರೂ ಬೆರಗಾಗುತ್ತಿದ್ದರು.

         ಕ್ರಿ.ಶ 1898 ರಲ್ಲಿ  ತನ್ನ 19ನೇ ವಯಸ್ಸಿನಲ್ಲಿ 13-14ನೇ ವಯಸ್ಸಿನ ನಾಗಮ್ಮಳ ಎಂಬ ವಧುವನ್ನು ಮದುವೆಯಾದರು.  ಸಂಪ್ರದಾಯಗಳಿಗೆ ವಿರೋಧವಾಗಿರುವ ಪತಿಯೊಡನೆ ಸಂಪ್ರದಾಯಸ್ಥರಾಗಿದ್ದ ನಾಗಮ್ಮಳ ಹೊಂದಿಕೊಂಡು ಬಾಳುವುದು ಕಷ್ಟವಾಯಿತು. ಹೆಂಡತಿ ತಂದೆ-ತಾಯಿಯರ ಮೌಡ್ಯದ ಸಂಪ್ರದಾಯಗಳಿಗೆ ಶರಣಾಗಿ ಅವರ ಆಸರೆಯಲ್ಲಿ ಇರುವುದಕ್ಕಿಂತ ವಿಶಾಲವಾದ ಜಗತ್ತಿನಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದೆಂದು ನಿರ್ಧರಿಸಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊರಬಂದರು.

         ಮನೆ ಬಿಟ್ಟ ರಾಮಸ್ವಾಮಿಯವರು ಹಿಂದೂಗಳ ಪವಿತ್ರ ಸ್ಥಳವೆಂದು ನಂಬಲಾದ ಕಾಶಿಗೆ ಬಂದು ತಲುಪಿದರು. ರಾಮಸ್ವಾಮಿಯವರಿಗೆ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಬೇಸರ ತಂದವು. ಭಿಕ್ಷುಕರ ಕಾಟ, ಗಂಗಾ ನದಿಯಲ್ಲಿ ತೇಲಿ ಬರುತ್ತಿದ್ದ ಹೆಣಗಳ ರಾಶಿಯನ್ನು, ಚಿಂತೆಗಳನ್ನು ಕಂಡು ಬೇಸರಗೊಂಡರು. ಪಿತೃಗಳನ್ನು ಸ್ವರ್ಗಕ್ಕೆ ಕಳಿಸುತ್ತೇವೆಂದು ಹೇಳಿ ಹಣ ವಸೂಲಿ ಮಾಡುತ್ತಿದ್ದ ನಯವಂಚಕ ಬಂಡ ಬ್ರಾಹ್ಮಣರನ್ನು ಕಂಡು ದಿಗ್ಭ್ರಮೆಗೊಂಡರು. ಗಂಗಾನದಿಯಲ್ಲಿ ಮಡಿ-ಮೈಲಿಗೆ ನೆಪದಲ್ಲಿ  ಪುರೋಹಿತರು ಮಾಡುತ್ತಿದ್ದ ಮೋಸವನ್ನು ಹಾಗೂ ವಿಧವೆಯರ ಕೇಶಮುಂಡನದ ಸಮಯದಲ್ಲಿ ನಡೆಯುತ್ತಿದ್ದ ಅನಾಚಾರಗಳನ್ನು ಕಂಡು ಕೆಂಡಾಮಂಡಲವಾದರು.

         ಇದೇ ವೇಳೆ  ಕ್ರಿ.ಶ 1904ರಲ್ಲಿ ರಾಮಸ್ವಾಮಿಯವರ ಜೀವನದಲ್ಲಿ ಬದುಕನ್ನೇ  ಬದಲಿಸುವಂತ ಒಂದು ಮಹತ್ವದ ಘಟನೆ ನಡೆಯಿತು. ಕಾಶಿಯಲ್ಲಿನ ಛತ್ರಗಳಲ್ಲಿ ಕೇವಲ ಬ್ರಾಹ್ಮಣರಿಗೆ ಮಾತ್ರ ಉಚಿತವಾಗಿ ಊಟ ಹಾಕಲಾಗುತ್ತಿತ್ತು. ಹಸಿವೆಯಿಂದ ಕಂಗೆಟ್ಟಿದ್ದ ರಾಮಸ್ವಾಮಿ ಹೇಗಾದರೂ ಮಾಡಿ ಊಟಮಾಡಬೇಕೆಂದು ಜನಿವಾರ ಧರಿಸಿ, ಛತ್ರವೊಂದಕ್ಕೆ ಹೋದರು. ಆದರೆ ಮೀಸೆ ಬಿಟ್ಟಿದ್ದ ಇವರನ್ನು ಬ್ರಾಹ್ಮಣರಲ್ಲವೆಂದು ಗುರುತಿಸಿದ ಕಾವಲುಗಾರರು, ಅಪಮಾನಗೊಳಿಸಿ ಹೊರಗೆ ತಳ್ಳಿದರು. ನಂತರ ರಾಮಸ್ವಾಮಿಯವರಿಗೆ ಗೊತ್ತಾಯ್ತು, ಆ ಕಟ್ಟಡ ನಿರ್ಮಿಸಲು ಹಣ ನೀಡಿದ್ದ ವ್ಯಕ್ತಿ, ದಕ್ಷಿಣ ಭಾರತದ ದ್ರಾವಿಡ ಜನಾಂಗದ ಒಬ್ಬ ಶ್ರೀಮಂತ ವರ್ತಕನೆಂದು. ತಮ್ಮವರೇ ಕೊಟ್ಟ ಹಣದಿಂದ ನಿರ್ಮಿಸಿದ ಛತ್ರದಲ್ಲಿ ತಮಗೇ ಅನ್ನ ಹಾಕಲು ನಿರಾಕರಿಸಿದ್ದರ ಬಗ್ಗೆ ಚಿಂತಿಸಿದರು. ಕಾಶಿಯಲ್ಲಿ ನಡೆದ ಈ ಘಟನೆ ಮನಸ್ಸಿಗೆ ದೊಡ್ಡ ಗಾಯವುಂಟುಮಾಡಿತ್ತು, ಈ  ದೇವರು-ದೆವ್ವ,  ಸ್ವರ್ಗ-ನರಕ, ಪಾಪ-ಪುಣ್ಯಗಳು ಮುಗ್ಧ ಜನರನ್ನು ಸುಲಿಯಲು ಮಾಡಿದ ಮೋಸದ ಜಾಲವೆಂದು ತಿಳಿದು ಊರಿಗೆ ಹೊಸ ರಾಮಸ್ವಾಮಿಯಾಗಿ ಹಿಂತಿರುಗಿದರು.
         
        ಇವರು ವಾಪಸ್ ಮನೆಗೆ ಬಂದ ಮೇಲೆ ಸಾಮಾಜಿಕ ಚಳುವಳಿಯತ್ತ ಮುನ್ನಡೆದರು. ಈ ಸಮಾಜದೊಳಗೆ ಇರುವ ಮೂಢನಂಬಿಕೆಗಳನ್ನು ಅಲ್ಲಗೆಳೆದು ಜನರಲ್ಲಿ ಜಾಗೃತಿ ಮೂಡಿಸಿದರು. ಅದೇ ವೇಳೆಗೆ ಈರೋಡಿನಲ್ಲಿ ಅಂದಿನ ಮಹಾರೋಗವೆನಿಸಿಕೊಂಡಿದ್ದ ಪ್ಲೇಗು ಕಾಣಿಸಿಕೊಂಡು ನೂರಾರು ಮಂದಿ ಸತ್ತು ಸಾವಿರಾರು ಮಂದಿ ಊರು ತೊರೆದಿದ್ದರು, ಅದೊಂದು ಸಾಂಕ್ರಾಮಿಕ ರೋಗ ಎಂಬ ಕಾರಣಕ್ಕೆ ಬಂಧುಬಾಂಧವರೂ ಸಂಸ್ಕಾರಕ್ಕೆ ಹಿಂಜರಿಯುವಾಗ ಹಲವರ ಹೆಣಗಳನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಸಾಗಿಸಿದ ನಿಜದ ಮಹಾಮನುಷ್ಯ ತಂದೆ ಪೆರಿಯಾರ್ ರಾಮಸ್ವಾಮಿ ನಾಯಕರ್ … 

        ತಂದೆ ಪೆರಿಯಾರ್ ರಾಮಸ್ವಾಮಿ ಅವರು "ಸ್ತ್ರೀಯರ ಜಾಗೃತಿಯೇ  ಸಮಾಜದ ಆತ್ಮ, ಅವರ ಕಲ್ಯಾಣವೇ ಸಮಾಜದ ಕಲ್ಯಾಣ"ವೆಂದು ಹೇಳುತ್ತಿದ್ದರು.  ಕ್ರಿ.ಶ 1909 ರಲ್ಲಿ ಈ ಸಮಾಜದ ಗೊಡ್ಡು ಬೆದರಿಕೆಗಳಿಗೆ ಹೆದರದೆ, ಕೇವಲ 9ನೇ ವಯಸ್ಸಿನಲ್ಲಿ ಬಾಲ ವಿಧವೆಯಾಗಿದ್ದ ತಮ್ಮ ತಂಗಿಯ ಮಗಳಿಗೆ ಮರು ವಿವಾಹ ಮಾಡಿಸಿ ವಿಧವೆಯ ಬಾಳಿಗೆ ಬೆಳಕು ನೀಡಿದರು.
        
        ಕ್ರಿ.ಶ. 1931 ರಲ್ಲಿ  ವಿದುರು ಎನ್ನುವ ನಗರದಲ್ಲಿ ಒಂದು ದೊಡ್ಡ ಸ್ತ್ರೀ  ಸ್ವಾಭಿಮಾನ ಚಳುವಳಿಯ ಸಮ್ಮೇಳನದಲ್ಲಿ: ಸ್ತ್ರೀಯರಿಗೂ ವಿವಾಹ ವಿಚ್ಛೇದನ ಹಕ್ಕು ದೊರೆಯಬೇಕು, ವಿಧವಾವಿವಾಹ ಪ್ರೋತ್ಸಾಹಿಸಬೇಕು, ಮಹಿಳೆಯರಿಗೂ ಶಿಕ್ಷಣ ನೀಡಬೇಕು, ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು ದೊರಕಬೇಕು, ದೇವದಾಸಿ ಪದ್ಧತಿ ಸಾಮಾಜಿಕ ಕಳಂಕ ಅದನ್ನು ತಡೆಯಬೇಕು, 16 ವರ್ಷಕ್ಕಿಂತ ಮುಂಚಿತವಾಗಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಬಾರದು, ಕುಟುಂಬ ಯೋಜನೆ ಕಾರ್ಯಗತವಾಗಬೇಕು, ಮದುವೆ ಬಲತ್ಕಾರದಿಂದ ನಡೆಯಬಾರದು, ವರದಕ್ಷಿಣೆ ಕೊಡಬಾರದು;  ತೆಗೆದುಕೊಳ್ಳಬಾರದು. ಪುರುಷರಂತೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ  ಪ್ರಗತಿಪರರಾಗಬೇಕೆಂದು ಜಾಗೃತಿ ಮೂಡಿಸಿ, ಒತ್ತಾಯಿಸಿದರು.
 
       ಕ್ರಿ.ಶ.1918ರಲ್ಲಿ ಈರೋಡು ಮುನ್ಸಿಪಾಲಿಟಿಯ ಅಧ್ಯಕ್ಷರಾದರು, ಜನರ ಕಲ್ಯಾಣಕ್ಕಾಗಿ ಹಲವು ಯೋಜನೆ ಕೈಗೊಂಡರು. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟು ಮೆಚ್ಚುಗೆಗೆ ಪಾತ್ರರಾದರು.  ಕ್ರಿ.ಶ 1919ರಲ್ಲಿ  ಚಕ್ರವರ್ತಿ ರಾಜಗೋಪಾಲಾಚಾರಿಯವರ ಒತ್ತಾಸೆಯ ಮೇರೆಗೆ  ಕಾಂಗ್ರೆಸ್ ಪಕ್ಷ ಸೇರಿದರು. ಇದಕ್ಕಾಗಿ ಈರೋಡು ಪುರಸಭೆ ಅಧ್ಯಕ್ಷನ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಕ್ರಿ.ಶ 1920ರಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಸಕ್ರಿಯ ಪಾತ್ರವಹಿಸಿದರು. ಈರೋಡಿನಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೆಂಡ ಮಾರಾಟ ವಿರೋಧಿಸಿ ಬಂಧನಕ್ಕೊಳಗಾದರು.

       ಒಳ್ಳೆಯ ವಾಗ್ಮಿಗಳಾದ ರಾಮಸ್ವಾಮಿಯವರು ಕೆಲವೇ ದಿನಗಳಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾದರು. ಹೀಗಾಗಿ ಕ್ರಿ.ಶ 1922ರಲ್ಲಿ  ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕಗೊಂಡು ಪಾನನಿರೋಧ ಚಳುವಳಿಯ ನಾಯಕತ್ವ ವಹಿಸಿಕೊಂಡರು. ಆಗ ಅವರ ಬಳಿ ಸಾವಿರ ತೆಂಗಿನ ಮರಗಳಿದ್ದವು. ಅವುಗಳನ್ನು ಗುತ್ತಿಗೆ ಕೊಟ್ಟಿದ್ದರು ಅದರಿಂದ ನಿರಾ ತೆಗೆಯಲಾಗುತ್ತಿತ್ತು. ತಕ್ಷಣ ಅದರಿಂದ ಹೊರಬರಲು ನಿರ್ಧರಿಸಿ. ಹೆಂಡ ಕುಡಿಸುವುದು ಸಂವಿಧಾನ ಬಾಹಿರ ಮತ್ತು ಅನೈತಿಕತೆ ಎಂದು, ಮಕ್ಕಳಂತೆ ಸಾಕಿ ಬೆಳೆಸಿದ ಸಾವಿರ ತೆಂಗಿನಮರಗಳು ಕಡಿಸಿ ಹಾಕಿದರು.

       ತಿರುವಾಂಕೂರು ಸಂಸ್ಥಾನದಲ್ಲಿ ವೈಕಂ ಒಂದು ಚಿಕ್ಕ ಪಟ್ಟಣ "ವೈಕತಪ್ಪನ್"  ಅ ಊರಿನ ಅದಿ ದೈವ, ಅಸ್ಪೃಶ್ಯರು ದೇವಾಲಯಕ್ಕೆ ಹೊಗುವುದಿರಲ್ಲಿ, ಅದರ ಗಾಳಿಯಿಂದಲೂ ಸುಮಾರು ಎರಡು ಮೈಲಿ ದೂರ ಇರಬೇಕೆಂಬ ಕಟ್ಟಪ್ಪಣೆ ಇದ್ದ ಕಾಲ.
       
       ಕ್ರಿ.ಶ 1924ರಲ್ಲಿ ಈ ಅನ್ಯಾಯವನ್ನು ಪ್ರತಿಭಟಿಸಲು ರಾಮಸ್ವಾಮಿಯವರು ಸಿದ್ಧರಾದರು. ಚಂಡಮಾರುತದಂತೆ ಆ ಪ್ರದೇಶಗಳಲ್ಲಿ ಸುತ್ತಾಡಿ ಜನರನ್ನು ಸಂಘಟಿಸಿ ವೈಕಂ ಕಡೆಗೆ ನಡೆದೇಬಿಟ್ಟರು. ಆಗ ಬ್ರಿಟಿಷ್ ಸರ್ಕಾರ ನಾಯಕರನ್ನು ಬಂಧಿಸಿತು. ಇದರಿಂದ ಚಳುವಳಿಗಾರರು ರೊಚ್ಚಿಗೆದ್ದರು ಚಳುವಳಿ ಉಗ್ರ ರೂಪ ತಾಳಿತು. ಅದರೆ ಗಾಂಧೀಜಿ  "ಈ ಪ್ರಕರಣ ಕೇವಲ ಹಿಂದೂಗಳಿಗೆ ಸಂಬಂಧಿಸಿದ್ದು ಬೇರೆಯವರು ಇದಕ್ಕೆ ತಲೆಹಾಕಬಾರದು" ಎಂಬ ಜೀವವಿರೋಧಿ ದ್ರೋಹದ ಹೇಳಿಕೆಯನ್ನು ನೀಡಿದರು.

       ಇದನ್ನು ಕೇಳಿದ ಸಿಂಹದಮರಿ ನಾಯಕರು ಜೈಲಿನಲ್ಲಿದ್ದುಕೊಂಡೇ ಗಾಂಧಿಯ ವಿರುದ್ಧ ಕಿಡಿಕಾರಿದರು. ನಂತರ ಬ್ರಿಟಿಷರು ಸಂಧಾನಕ್ಕಾಗಿ ರಾಜಾಜಿ ಮತ್ತು ಗಾಂಧೀಜಿ ಅವರನ್ನು ಕರೆಸಿದರು. ಇವರಿಬ್ಬರ ಆಟವನ್ನು ಸಹಿಸದ ನಾಯಕರು " ಅದಿ ಜನರಿಗೆ ನಿಮ್ಮ ಕೆಟ್ಟ ಸಹನುಭೂತಿ ಬೇಡ. ದೇವಾಲಯದ ಪ್ರವೇಶ ಹೇಗೆ ಮಾಡಬೇಕೆಂದು ನನಗೆ ಗೊತ್ತು" ಎಂದು ತಮ್ಮ ಸ್ವಭಾವಕ್ಕೆ ತಕ್ಕಂತೆ ವಾದಿಸಿದರು. ಚಳುವಳಿಗಾರರು ಹೋರಾಟ ಇನ್ನು ತೀವ್ರಗೊಳಿಸಿದರು.  ಇದರಿಂದಾಗಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಯಿತು.
       
       ಕ್ರಿ.ಶ. 1925ರಲ್ಲಿ ಕಂಚಿಯಲ್ಲಿ ನಡೆದ ಪ್ರಾದೇಶಿಕ ಕಾಂಗ್ರೆಸ್ ಸಮಾವೇಶದಲ್ಲಿ: ಶಾಸನಸಭೆಯಲ್ಲಿ ಮತ್ತು ಸರಕಾರಿ ನೌಕರಿಗಳಲ್ಲಿ ಅಸ್ಪೃಶ್ಯರಿಗೆ ಮೀಸಲಾತಿ ನೀಡಬೇಕು. ದೇವಸ್ಥಾನಗಳನ್ನು ಪ್ರವೇಶಿಸಲು ಅಸ್ಪೃಶ್ಯರಿಗೆ ಅವಕಾಶ ನೀಡಬೇಕೆಂದು ಪ್ರತಿಪಾದಿಸಿದರು. ಆದರೆ ಕಾಂಗ್ರೆಸ್ ಪಕ್ಷದ ಬ್ರಾಹ್ಮಣ ಸದಸ್ಯರು ಇದನ್ನು ವಿರೋಧಿಸಿದರು. ಹಾಗಾಗಿ ಕಾಂಗ್ರೆಸ್ ಪಕ್ಷದಿಂದ ಯಾವುದೇ ಪ್ರಗತಿ ಸಾಧ್ಯವಿಲ್ಲವೆಂದು ತಿಳಿಯದು ಕಾಂಗ್ರೆಸ್ ಪಕ್ಷ ತೊರೆದರು.
       
       ಕ್ರಿ.ಶ.1929ರಲ್ಲಿ ಯಾವುದೇ ರೀತಿಯ ಆಡಂಬರವಿಲ್ಲದೆ ಪುರೋಹಿತರು ಮತ್ತು ಮಂತ್ರಗಳಿಲ್ಲದೆ, ಕೇವಲ ಹಾರ ಬದಲಾಯಿಸಿಕೊಂಡು, ಮಾತೃಭಾಷೆಯಲ್ಲಿ ವೈವಾಹಿಕ ಘೋಷಣೆ ಮಾಡುವ ಸ್ವಾಭಿಮಾನಿ ವಿವಾಹ ಪದ್ಧತಿ ಆರಂಭಿಸಿದರು. 
       
       ಕ್ರಿ.ಶ‌.1929ರಿಂದ 1932ರ ವರೆಗೆ ರಾಮಸ್ವಾಮಿಯವರು ಮಲೇಶಿಯಾ, ಈಜಿಪ್ಟ್, ಟರ್ಕಿ, ಗ್ರೀಸ್, ರಷ್ಯಾ, ಜರ್ಮನಿ, ಇಂಗ್ಲೆಂಡ್‌,ಸ್ಪೇನ್, ಫ್ರಾನ್ಸ್, ಪೋರ್ಚುಗಲ್ ಮತ್ತು ಶ್ರೀಲಂಕಾಕ್ಕೆ ಬೇಟಿ ನೀಡಿ. ಆ ದೇಶಗಳಲ್ಲಿನ ಸಾಮಾಜಿಕ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಿದರು.
       
       ಕ್ರಿ.ಶ.1916ರಲ್ಲಿ ಸ್ಥಾಪನೆಯಾಗಿದ್ದ ಸೌತ್ ಇಂಡಿಯನ್ ಲಿಬರೇಷನ್ ಪಕ್ಷ  ಕ್ರಿ.ಶ.1938ರಲ್ಲಿ ಜಸ್ಟೀಸ್ ಪಾರ್ಟಿ ಎಂದು ಹೆಸರು ಬದಲಾಯಿತು ಕ್ರಿ.ಶ.1938ರಿಂದ 1944ರ ವರೆಗೆ ಜಸ್ಟೀಸ್ ಪಾರ್ಟಿಯನ್ನು ರಾಮಸ್ವಾಮಿ ಮುನ್ನಡೆಸಿದರು. ಅನೇಕ ಏಳುಬೀಳುಗಳನ್ನು ಕಂಡ ಜಸ್ಟೀಸ್ ಪಾರ್ಟಿಯನ್ನು ಕ್ರಿ.ಶ 1944ರಲ್ಲಿ ಸೇಲಂನಲ್ಲಿ ನಡೆದ ಸಮ್ಮೇಳನದಲ್ಲಿ "ದ್ರಾವಿಡ ಕಳಗಂ" ಎಂದು ಪುನರ್ನಾಮಕರಣ ಗೊಳಿಸಿದರು.

       ಆತ್ಮಾನುಭವ, ಆತ್ಮಾಭಿಮಾನ ಮತ್ತು ವೈಜ್ಞಾನಿಕ ಮನೋಭವ ಮನೋಧರ್ಮವನ್ನು ಬೆಂಬಲಿಸುವ ಶಿಕ್ಷಣವೇ ಶ್ರೇಷ್ಠವಾದದ್ದುದೆಂದ ಪೆರಿಯಾರ್: ಕ್ರಿ.ಶ 1949 ರಲ್ಲಿ ತಿರುಚನಾಪಳ್ಳಿಯಲ್ಲಿ ಒಂದು ಪ್ರೌಢಶಾಲೆ ಮತ್ತು ಒಂದು ಶಿಕ್ಷಣ ತರಬೇತಿಯನ್ನು ತೆರೆದರು. ಅಲ್ಲಿ ಸ್ತ್ರೀಯರಿಗೆ, ಅಸ್ಪೃಶ್ಯರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣ ದೊರೆಯುವಂತೆ ಮಾಡಿದರು ಅದರಲ್ಲಿ  ವೈಜ್ಞಾನಿಕ ಜಾಗೃತಿಗೆ ಹೆಚ್ಚಿನ ವತ್ತು ನೀಡಿದರು. ಕ್ರಿ.ಶ. 1953 ರಲ್ಲಿ ಮದ್ರಾಸ್ ಅನ್ನು ತಮಿಳುನಾಡಿನ ರಾಜಧಾನಿಯಾಗಿ ಸಂರಕ್ಷಿಸಲು ಸಹಾಯ ಮಾಡಿದರು.

       ಭಾರತದ ಗ್ರಾಮಗಳು ಪ್ರಗತಿ ಹೊಂದಿದರೆ ಮಾತ್ರ ಸಮಗ್ರ ಭಾರತ ಕಲ್ಯಾಣ ಸಾಧ್ಯವೆಂದು  ನಂಬಿದ ರಾಮಸ್ವಾಮಿಯವರು : ಅದಕ್ಕಾಗಿ ಹಳ್ಳಿಗಳಲ್ಲಿ ಬೇಸಾಯಕ್ಕೆ ಸಂಬಂಧಿಸಿದ ಯೋಜನೆಗಳು ಹಮ್ಮಿಕೊಳ್ಳಬೇಕು. ಉಳುಮೆ, ಬಿತ್ತನೆ ಕೊಯ್ಲು ಮತ್ತು ನೀರಾವರಿಗೆ ಆಧುನಿಕ ತಂತ್ರಜ್ಞಾನದ ಬಳಕೆಯಾಗಬೇಕು. ಕೃಷಿ ಭೂಮಿಯ ವಿಂಗಡನೆಯಾಗಬೇಕು. ಸಹಕಾರಿ ಸಂಘಗಳು ಸ್ಥಾಪಿಸಬೇಕು. ರೈತರು ಬೆಳೆದ ವಸ್ತುಗಳು ಪ್ರದರ್ಶನವಾಗಬೇಕು. ಸಣ್ಣ ಕೈಗಾರಿಕೆಗಳ ಸ್ಥಾಪನೆ ಆಗಬೇಕು. ಅಗತ್ಯ ವಸ್ತುಗಳ ತಯಾರಿಕೆಗಳನ್ನು ಸ್ಥಾಪಿಸಬೇಕು. ಸಣ್ಣ ಕೈಗಾರಿಕೆಗಳು ರಾಷ್ಟ್ರೀಕರಣ ಮಾಡಬೇಕು. ರೈತರು ಮತ್ತು ಬಳಕೆದಾರರ ನಡುವೆ ಮಧ್ಯವರ್ತಿಗಳು ಬರೆದಂತೆ ತಡೆಯಬೇಕು. ಸ್ಥಳೀಯ ಸಂಸ್ಥೆಗಳಿಗೂ ಅಧಿಕಾರ ನೀಡಬೇಕು. ಮತ್ತು  ರೈತರ ಸಾಲ ತೀರಿಸಲು ಸರಳ ನಿಯಮ ತರಬೇಕೆಂದು ಹೇಳುತ್ತಿದ್ದರು.

       ಭಾರತೀಯ ರೈತರು ಹಿಂದೆ ಬೀಳಲು ಪ್ರಮುಖ ಕಾರಣ ತನ್ನ ಕೃಷಿಯ ಜೊತೆ ಉಪಕಸುಬು ಮಾಡದಿರುವುದು ಎಂದು ಮನಗೊಂಡು. ಕೃಷಿಯ ಜೊತೆ ಕುರಿಕೋಳಿ, ಪಶು ಸಾಕಣೆ, ಕರಕುಶಲ ಕೈಗಾರಿಕೆಗೆ ಪ್ರೋತ್ಸಾಹ ನೀಡಿ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಯತ್ನಿಸಿದರು.

       ಶೂದ್ರಾತಿಶೂದ್ರರ ಏಳಿಗೆಗಾಗಿ ನಿರಂತರವಾಗಿ ಹಗಲಿರುಳು ದುಡಿದ ಸಾಮಾಜಿಕ ಹರಿಕಾರ ತಂದೆ ಪೆರಿಯಾರ್ ರಾಮಸ್ವಾಮಿಯವರ ಆರೋಗ್ಯ  ಅವರ 95ನೇ ವಯಸ್ಸಿನಲ್ಲಿ ಹದಗೆಟ್ಟಿತ್ತು. ವೆಲ್ಲೂರ ಆಸ್ಪತ್ರೆಯಲ್ಲಿ  ಕ್ರಿ.ಶ. 1973 ಡಿಸೆಂಬರ್ 24ರಂದು  ಇಹಲೋಕ ತ್ಯಜಿಸಿದರು.  ರಾಮಸ್ವಾಮಿಯವರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು ಸದಾ ನಮ್ಮೊಂದಿಗಿದ್ದು ಎಚ್ಚರ ನೀಡುತ್ತವೆ.
    ✍️ ಅಶ್ವಜೀತ ದಂಡಿನ
ಯುವ ಬರಹಗಾರರು, ಬೀದರ.
aswajeetdandin@gmail.com


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...