ಶನಿವಾರ, ಡಿಸೆಂಬರ್ 11, 2021

ವಿವಾಹವೆಂಬ ಪವಿತ್ರ ಸಂಸ್ಕಾರದ ಸಂಭ್ರಮಾಚರಣೆ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಳಕಲ್.

ಸಂಸ್ಕಾರವೆಂದರೆ ಧರ್ಮಮಾರ್ಗದಲ್ಲಿ ನಡೆಯಲು ಅರ್ಹತೆ ಪಡೆಯುವುದಕ್ಕಾಗಿ ಒಬ್ಬ ವ್ಯಕ್ತಿಗೆ ಮಾಡುವ ಧಾರ್ಮಿಕ ಕ್ರಿಯೆಗಳು.ಬದಲಾಗುವ ಸ್ವೀಕೃತಿಯನ್ನು ಪಡೆಯುವ ಸರಿಯುವಿಕೆಯ ವಿಧಿಗಳು.ಇವು ಜೀವನದ ವಿವಿಧ ಘಟ್ಟಗಳನ್ನು ಗುರುತು ಮಾಡುತ್ತವೆ ಮತ್ತು ಉತ್ತಮ ನಡತೆ ಎಂಬ ಅರ್ಥದಲ್ಲಿ  ಬಳಸಲಾಗುತ್ತದೆ.ಪ್ರತಿಯೊಂದು  ಧರ್ಮಗಳಲ್ಲೂ ಸಂಸ್ಕಾರದ ಮೌಲ್ಯ ಅಡಕವಾಗಿರುತ್ತದೆ .ಇಲ್ಲಿ ನಾನು ಹಿಂದೂ ಧರ್ಮದಲ್ಲಿ ಅಡಗಿರುವ ಷೋಡಸ ಸಂಸ್ಕಾರಗಳಲ್ಲಿ ಒಂದಾದ 'ವಿವಾಹ'ವೆಂಬ ಪವಿತ್ರ ಸಂಸ್ಕಾರದ ಬಗ್ಗೆ ಬರೆಯಬೇಕೆಂದು ಬಯಸುತ್ತಿದ್ದೇನೆ.ಹಿಂದೂ ಧರ್ಮ ದಲ್ಲಿ ಹಲವಾರು ಪದ್ಧತಿಗಳಿವೆ. ಅಂತಹ ಪದ್ದತಿಗಳಲ್ಲಿ ಹದಿನಾರು ಸಂಸ್ಕಾರಗಳ ಆಚರಣೆ ಕೂಡ ಒಂದು.ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಹದಿನಾರು ಸಂಸ್ಕಾರಗಳನ್ನು ಪದ್ದತಿ ಪೂರ್ವಕವಾಗಿ ಮಾಡಿದರೆ, ಆತನ ಜನ್ಮ ಸಾರ್ಥಕ ಎಂದು ಹೇಳಲಾಗುತ್ತದೆ.ಗರ್ಭದಾನ ಸಂಸ್ಕಾರ,  ಸೀಮಂತ ಸಂಸ್ಕಾರ ,ಜಾತಕರ್ಮಸಂಸ್ಕಾರ, ನಾಮಕರಣ, ಚಾತೆ ಸಂಸ್ಕಾರ (ಮಗುವಿಗೆ 3ಅಥವಾ 4ತಿಂಗಳು ತುಂಬಿದಾಗ ಸೂರ್ಯ ಅಥವಾ ಚಂದ್ರನ ದರ್ಶನ ಮಾಡಿಸಿ ಪಂಚಭೂತಗಳಲ್ಲಿ ಉತ್ತಮ ಆರೋಗ್ಯಕ್ಕಾಗಿ ಮಗುವಿಗಾಗಿ ಪ್ರಾರ್ಥಿಸುವ ಪದ್ದತಿ.) ಅನ್ನಪ್ರಾಶನ, ಕೇಶಮುಂಡನ, ಕಿವಿ ಚುಚ್ಚುವ ಸಂಸ್ಕಾರ, ಉಪನಯನ, ವಿದ್ಯಾಸಂಸ್ಕಾರ ,ಕೇಶಾವತ೯ನ, ಸಮಾವರ್ತನ, ವಿವಾಹ ಸಂಸ್ಕಾರ,ಅಗ್ನಿಸಂಸ್ಕಾರ, ಅಂತ್ಯಸಂಸ್ಕಾರ 
             'ವಿವಾಹ'ವೆಂಬ ಪವಿತ್ರ ಸಂಸ್ಕಾರದ ಸಮಾರಂಭವನ್ನು ಸವ೯ ಧರ್ಮಗಳಲ್ಲಿಯೂ ಕಾಣುತ್ತೇವೆ. ಸರ್ವ ಧರ್ಮೀಯರು ಈ ಪವಿತ್ರ ಸಂಸ್ಕಾರದ ಸಮಾರಂಭದಿಂದ ಅಪರಿಮಿತವಾದ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಪ್ರತಿಯೊಂದು  ಸಂಸ್ಕೃತಿಯಲ್ಲೂ ಮದುವೆಯು ಅತ್ಯಂತ ವಿಶೇಷ ಸ್ಥಾನಮಾನಗಳಿಸಿದೆ.ಆದರೆ ಪ್ರತಿಯೊಂದು ಧರ್ಮೀಯರು ಈ ಸಂಸ್ಕಾರವನ್ನು ಅಳವಡಿಸಿಕೊಳ್ಳುವ ಆಚರಣೆಗಳು ವಿಭಿನ್ನ ಅಷ್ಟೆ. ಮದುವೆ ಅಥವಾ ವಿವಾಹ ಎನ್ನುವುದು ಒಂದು ಸಾಮಾಜಿಕ ಸಂಸ್ಥೆ .ಇದು ಕಾನೂನು ಮಾನ್ಯತೆಯನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ ಸಂಗಾತಿಗಳಿಗೆ ಪ್ರತಿ ದೇಶದ ನಾಗರಿಕ ಕಾನೂನಿನೊಳಗೆ ಸ್ಥಾಪಿಸಲಾದ ಪಿತೃಪ್ರಧಾನ ಮತ್ತು ದೇಶೀಯ ಸ್ವಭಾವದ ಕರ್ತವ್ಯಗಳು ಮತ್ತು ಹಕ್ಕುಗಳ ಸರಣಿಯನ್ನು ಸೂಚಿಸುತ್ತದೆ. ವಂಶಾಭಿವೃದ್ದಿಗಾಗಿ ಪುರುಷ ಮತ್ತು ಸ್ತ್ರೀಯರ ನಡುವೆ ಬಾಂಧವ್ಯ ಬೆಸೆಯಲು ಏರ್ಪಡಿಸುವ ಪವಿತ್ರ ಸಂಸ್ಕಾರವಾಗಿದೆ. ಮದುವೆಯ ಮೂಲ ಅರ್ಥ ಒಂದು ಕುಟುಂಬದ ಸಂವಿಧಾನ. ಆದ್ದರಿಂದ ಇದು ಒಕ್ಕೂಟದ ಸಮಯದಲ್ಲಿ ಸಂತಾನೋತ್ಪತ್ತಿ ಮಾಡಿದ ಅಥವಾ ದತ್ತು ಪಡೆದ ಮಕ್ಕಳಿಗೆ ನ್ಯಾಯಸಮ್ಮತತೆಯನ್ನು ನೀಡುತ್ತದೆ .ಹಿಂದೂ ಧರ್ಮದಲ್ಲಿ 8 ಬಗೆಯ ವಿವಾಹ ಪದ್ಧತಿಗಳ ಕುರಿತು ತಿಳಿಯುತ್ತೇವೆ.ಬ್ರಹ್ಮ ವಿವಾಹ, ದೈವ ವಿವಾಹ, ಆರ್ಷ ವಿವಾಹ ,ಪ್ರಜಾಪತ್ಯ ವಿವಾಹ, ಅಸುರ ವಿವಾಹ, ಗಾಂಧರ್ವ ವಿವಾಹ ,ರಾಕ್ಷಸ ವಿವಾಹ ಮತ್ತು ಪೈಶಾಚಿಕ ವಿವಾಹಗಳೆಂಬ ವಿಭಿನ್ನ ರೀತಿಯ ವೈವಾಹಿಕ ಆಚರಣೆಗಳು ಅಸ್ತಿತ್ವದಲ್ಲಿವೆ.
1)ಬ್ರಹ್ಮ ವಿವಾಹ :ಗಂಡು ಮತ್ತು ಹೆಣ್ಣಿನ ಪೋಷಕರು ಪರಸ್ಪರ ಒಪ್ಪಿ ವಧು ವರರಿಗೆ ವಿವಾಹ ಸಮಾರಂಭ ಏರ್ಪಡಿಸುವುದು. ಇಲ್ಲಿ  ಹುಡುಗಿಯ ತಂದೆ ತನ್ನ ಮಗಳನ್ನು ಮದುವೆಯಾಗಲು ಬಯಸುವ ಹುಡುಗನಿಗೆ ವೇದಗಳ ಜ್ಞಾನವಿದೆ ಎಂದು ಖಚಿತಪಡಿಸಿಕೊಂಡು ವಿವಾಹ ಸಮಾರಂಭ ಏರ್ಪಡಿಸುತ್ತಾರೆ .
2)ದೈವ ವಿವಾಹ:  ಹೆಣ್ಣು ಪ್ರಾಪ್ತ ವಯಸ್ಸಿಗೆ ಬರುವವರೆಗೂ ಕಾಯುತ್ತಾರೆ. ಅನಂತರ ಯಜ್ಞ  ಕರ್ಮ ಮಾಡುವ ವೇದಪಾರಂಗತನಾದವನಿಗೆ ಕಾಣಿಕೆಯ ರೂಪದಲ್ಲಿ ಹೆಣ್ಣನ್ನು ಧಾರೆ ಎರೆದು ಕೊಡಲಾಗುತ್ತದೆ .ಪ್ರಾಚೀನ ಕಾಲದಲ್ಲಿ ರಾಜ ಮನೆತನದವರು ಈ ರೀತಿಯ ವಿವಾಹ ಪದ್ಧತಿ ಅನುಸರಿಸುತ್ತಿದ್ದರು. 
3)ಆರ್ಷ ವಿವಾಹ :ಇಲ್ಲಿ ಹುಡುಗಿಯನ್ನು ಸಂತೋಷದಿಂದ  ಧಾರೆ ಎರೆದು ಕೊಡುವುದಿಲ್ಲ. ಕೆಲವು ಹಸುಗಳಿಗೆ ಬದಲಾಗಿ ವಧುವನ್ನು, ಹಸುಗಳನ್ನು ನೀಡುವ ವರನಿಗೆ ಕೊಡಲಾಗುತ್ತದೆ.    
4) ಪ್ರಜಾಪತ್ಯ ವಿವಾಹ :ಇಲ್ಲಿ ಹೆಣ್ಣಿನ ತಂದೆ ತನ್ನ ಮಗಳಿಗಾಗಿ ಗಂಡನ್ನು ಹುಡುಕಲು ಹೊರಡುತ್ತಾನೆ. ಗೌರವದಿಂದ ವಿವಾಹ ಸಮಾರಂಭದ ಕಾರ್ಯಕ್ರಮ ಏರ್ಪಡಿಸುತ್ತಾನೆ .
5)ಅಸುರ ವಿವಾಹ :ವರನು ವಧುವಿನ ತಂದೆ- ತಾಯಿ ಕೇಳಿದಷ್ಟು ಹಣ ನೀಡಿ ವಧುವನ್ನು  ಮದುವೆಯಾಗುತ್ತಾನೆ. ಹೆಣ್ಣನ್ನು ಬಲವಂತವಾಗಿ ವಿವಾಹವಾಗುವುದರಿಂದ ಇದು ಅಸುರ ವಿವಾಹ ಎನಿಸಿದೆ .
6)ಗಂಧರ್ವ ವಿವಾಹ: ಗಂಡು ಮತ್ತು ಹೆಣ್ಣಿನ ಕುಟುಂಬದ ಸದಸ್ಯರು ಒಪ್ಪಲಿ ಅಥವಾ ಬಿಡಲಿ ಪರಸ್ಪರ ತಮ್ಮ ಒಪ್ಪಿಗೆ ಸೂಚಿಸಿ ವಧು- ವರರು ರಹಸ್ಯವಾಗಿ ಮದುವೆಯಾಗುವ ವಿವಾಹ ಪದ್ದತಿ. ಉದಾಹರಣೆ ದುಷ್ಯಂತ ಮತ್ತು ಶಾಕುಂತಲೆಯರ  ಗಂಧರ್ವ ವಿವಾಹ .
7)ರಾಕ್ಷಸ ವಿವಾಹ: ವರನು ಹೆಣ್ಣಿನ ಕಡೆಯವರ ಜೊತೆ ಜಗಳ ಮಾಡಿ ಕನ್ನೆಯನ್ನು ಅಪಹರಿಸಿ ವಿವಾಹ ಮಾಡಿಕೊಳ್ಳುತ್ತಾನೆ.
8) ಪೈಶಾಚಿಕ ವಿವಾಹ: ವರನು, ವಧು ಮಲಗಿರುವಾಗ ಅಥವಾ ಮತ್ತಿನಲ್ಲಿರುವಾಗ ಅಥವಾ ವಿಕಲಚೇತನಳಾಗಿರುವಾಗ ಆಕೆಗೆ ತಿಳಿಯದೆ ವಿವಾಹ ಮಾಡಿಕೊಳ್ಳುವ ಪದ್ಧತಿ.ಇದು ಅತ್ಯಂತ ಹೀನ ಪದ್ಧತಿಯಾಗಿರುವುದರಿಂದ ಪೈಶಾಚಿಕ ವಿವಾಹ ಪದ್ಧತಿ ಎನ್ನುವರು . 
        'ವಿವಾಹ'ವೆಂಬ ಪವಿತ್ರ ಸಂಸ್ಕಾರ ವಧು-ವರರು ದಾಂಪತ್ಯ ಜೀವನ ಸ್ವೀಕರಿಸಿ, ಧರ್ಮ, (ಕರ್ತವ್ಯ ಅಥವಾ ಜವಾಬ್ದಾರಿ ),ಅರ್ಥ,(ಸಂಪತ್ತು ) ಕಾಮವನ್ನು ಅನುಸರಿಸಲು ಇರುವ ಮಾರ್ಗಪಥ.ಹಣೆಯಲ್ಲಿ ಕುಂಕುಮ, ಕುತ್ತಿಗೆಗೆ ಮಂಗಳಸೂತ್ರ, ಹಸಿರು ಬಣ್ಣದ ಗಾಜಿನ ಬಳೆಗಳು ,ಕಾಲ್ಬೆರಳ ಉಂಗುರಗಳು, ಹಾಲ್ಗಡಗ ಧರಿಸುವಿಕೆ, ಪ್ರತಿಯೊಂದು ಸಂಪ್ರದಾಯಬದ್ಧವಾಗಿ ನಡೆಯಬೇಕೆಂಬುದು ಕುಟುಂಬದವರು ಸಂಬಂಧಿಕರ ಹೆಬ್ಬಯಕೆ. ಆ ರೀತಿ ಅರ್ಥಪೂರ್ಣವಾಗಿ ನಡೆದಾಗ ಮಾತ್ರ ಅವರಿಗೆ ತೃಪ್ತಭಾವನೆ. ಅಂತಹ ವೈವಾಹಿಕ  ಸಂದರ್ಭಗಳು ದೇಶದೆಲ್ಲೆಡೆ ವಿಭಿನ್ನ ರೀತಿಯಲ್ಲಿ ಆಚರಿಸಲ್ಪಡುತ್ತವೆ. ಪ್ರತಿಯೊಂದು ರಾಜ್ಯದಲ್ಲೂ ಮದುವೆ ಸಂದರ್ಭದಲ್ಲಿ ಆಚರಿಸುವ ಆಚರಣೆಗಳು ವಿಭಿನ್ನ. ಅಂತಹ ಆಚರಣೆಗಳಲ್ಲಿ ಕರ್ನಾಟಕದಲ್ಲಿ ಸರ್ವೇಸಾಮಾನ್ಯವಾಗಿ ನಡೆಸುವಂಥ ವಿವಾಹದ ಆಚರಣೆಯ ಬಗ್ಗೆ ತಿಳಿಯಪಡಿಸಲು ಬಯಸುತ್ತಿದ್ದೇನೆ .
           ಯಾವುದೇ ಕುಟುಂಬವಿರಲಿ, ಮನೆಯಲ್ಲಿ ವಧು ಅಥವಾ ವರನಿಗೆ ಮದುವೆ ದಿನ ಗೊತ್ತಾಯಿತೆಂದರೆ ಸಾಕು ,ಎಲ್ಲಿಲ್ಲದ ಸಂಭ್ರಮ. ತಿಂಗಳು ಮೊದಲೇ ಮದುವೆ ತಯಾರಿ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಕೆಲವು ಕುಟುಂಬಗಳ ಸಂಪ್ರದಾಯದಂತೆ, ಸರ್ವ ವಿಘ್ನಗಳ ನಿವಾರಕ ವಿಘ್ನೇಶ್ವರನನ್ನು ಮೊದಲು ಆರಾಧಿಸಿ ಕರಿ ಲಕ್ಷ್ಮಿಯ ಪೂಜೆಯೊಂದಿಗೆ ಮದುವೆ ತಯಾರಿಗಳು ಆರಂಭಗೊಳ್ಳುತ್ತವೆ .
1) ಕರಿಲಕ್ಷ್ಮೀಪೂಜೆ : ಕಪ್ಪು ಬಣ್ಣದ ಸೀರೆಯನ್ನು ಗಳಿಗೆಮಾಡಿ, ಅದಕ್ಕೆ ಲಕ್ಷ್ಮೀದೇವಿಯ ದೈವತ್ವ ನೀಡಿ, ಪೂಜೆ ಮಾಡಿ ಹೂರಣದ ಹೋಳಿಗೆಯ ನೈವೇದ್ಯ ಸಮರ್ಪಣೆಯಾದ ನಂತರ ಭಕ್ತಿ ಪೂರ್ವಕವಾಗಿ ನಮಿಸಿ, ಮದುವೆ ಶುಭಾರಂಭದ ಕ್ಷಣಗಣನೆಗೆ ಎಲ್ಲರೂ ಸಿದ್ಧರಾಗುತ್ತಾರೆ.ಪೂಜೆಯ ನಂತರ ಮನೆ ಸಾರಿಸುವ ಕೆಲಸ ಆರಂಭಿಸುತ್ತಾರೆ. ಸುಣ್ಣದ ಮನೆಯಾಗಿದ್ದರೆ, ಮೊದಲೇ ಮುತ್ತೈದೆಯಾದ ಗೃಹಿಣಿ ಸುಣ್ಣವನ್ನು ಹಾಕಿ ಇಡುತ್ತಾಳೆ. ಅದರಿಂದ ಮನೆಯೆಲ್ಲ ಸುಣ್ಣ ಹಚ್ಚಿಸುವ ಕೆಲಸ ನಡೆಯುತ್ತದೆ .ಬಣ್ಣದ ಮನೆಯಾಗಿದ್ದರೆ, ಬಣ್ಣದಿಂದ ಮನೆಯನ್ನು ಶೃಂಗಾರಗೊಳಿಸುತ್ತಾರೆ .
2)ಕುಲದೇವತಾರಾಧನೆ: ಪ್ರತಿಯೊಂದು ಕುಟುಂಬಕ್ಕೂ ಒಂದು ಕುಲದೇವರು ಇರುತ್ತದೆ. ಆ ಕುಲದೇವತಾರಾಧನೆಯನ್ನು ಆ ದೈವೀಶಕ್ತಿಯ ವಾರದ ದಿನದಂದು ಮಾಡುತ್ತಾರೆ. ವಧು ವರರಿಗೆ ಕಲ್ಯಾಣವನ್ನುಂಟು ಮಾಡು ಎಂದು ಪ್ರಾರ್ಥಿಸುತ್ತಾರೆ .
3) ಹಿರಿಯರ ಪೂಜಾ ಸಮಾರಂಭ: ಕುಟುಂಬದ ಹಿರಿಯ ಚೇತನಗಳು ಗತಿಸಿದ ನಂತರ, ಪ್ರತಿ ವರ್ಷವೂ ಅವರನ್ನು ಸ್ಮರಿಸುವ ಪೂಜೆ ಮಾಡುತ್ತಾರೆ. ಅದೇ ರೀತಿ ಮದುವೆಯ ಸಂದರ್ಭದಲ್ಲಿ ಕುಟುಂಬದಲ್ಲಿ ಮರಣಹೊಂದಿದ ಹಿರಿಯರ ಆಶೀರ್ವಾದ ವಧು ವರರ ಮೇಲಿರಲಿ ಎಂಬ ಗೌರವಪೂರ್ವಕ ನಮನ ದೊಂದಿಗೆ, ಈ ಪೂಜಾ ಸಮಾರಂಭ ನಡೆಯುತ್ತದೆ.
4) ಜವಳಿ ಕಾರ್ಯ: ಮದುವೆಯಾಗುವ ವಧುವರರಿಗೆ, ಕುಟುಂಬಸ್ಥರಿಗೆ, ಆತ್ಮೀಯರೆಲ್ಲರಿಗೂ ಬಟ್ಟೆಯನ್ನು ಖರೀದಿಸುವಂತಹ ಶಾಸ್ತ್ರ ಮಾಡುತ್ತಾರೆ .
5) ಲಕ್ಷ್ಮೀ ಪೂಜೆ ಮತ್ತು ಮುತ್ತೈದೆಯರ ಕಾರ್ಯಕ್ರಮ :ವಿವಾಹ ಸಮಾರಂಭಕ್ಕೂ ಮುನ್ನ ಲಕ್ಷ್ಮೀ  ಪೂಜೆಯನ್ನು ಮಂಗಳವಾರ ಅಥವಾ ಶುಕ್ರವಾರದ ದಿನದಂದು ಆಚರಿಸುತ್ತಾರೆ. ಅದಕ್ಕೂ ಪೂರ್ವದಲ್ಲಿ ಮುತ್ತೈದೆಯರನ್ನು ಮನೆಗೆ ಆಹ್ವಾನಿಸುವ ಸಮಾರಂಭ ನಡೆಯುತ್ತದೆ.ಮುತ್ತೈದೆಯರೆಂದರೆ ಬನಶಂಕರಿ ದೇವಿಯ ಸ್ವರೂಪ. ತಾಯಿ ಬನಶಂಕರಿಯ ರೂಪವಾದ ಮುತ್ತೈದೆಯರಿಗೆ ಅರಿಶಿನ, ಕುಂಕುಮ ನೀಡಿ ಕಳಸದಾರತಿಯೊಂದಿಗೆ, ಪ್ರತಿಯೊಬ್ಬರ ಮನೆಗೆ ವಾದ್ಯ ಮೇಳದೊಂದಿಗೆ ತೆರಳಿ, 5 ಜನ  ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ, ಪಾದಪೂಜೆ ಮಾಡಿ ಒಳಗೆ ಬರಮಾಡಿಕೊಂಡು,ಕಂಬಳಿಯ ಮೇಲೆ ಅವರನ್ನು ಕೂಡಿಸಿ, ಕೈಗಳಿಗೆ ಗಂಧ, ಅರಿಶಿಣ, ಕುಂಕುಮ ಹಚ್ಚಿ, ಹೂವಿನ ದಂಡೆ ಹಾಕಿ, ಉಡಿ ತುಂಬುವ ಮೂಲಕ ಮನೆಯ ಸದಸ್ಯರಲ್ಲ ಆರತಿ ಮಾಡಿ, ನಮಸ್ಕರಿಸಿ ಅವರಿಗೆ ಸಂತೃಪ್ತಿಯಿಂದ ಊಟ ಮಾಡಿಸಿ, ಪುನಃ ವಾದ್ಯದೊಂದಿಗೆ ಅವರನ್ನು ಮನೆಗೆ ಕಳುಹಿಸುವ ಕಾರ್ಯ ಪೂರ್ಣಗೊಳಿಸುತ್ತಾರೆ. ಅನಂತರ ಪುನಃ ರಾತ್ರಿ ಮತ್ತೊಮ್ಮೆ ಮನೆಯನ್ನು ಶುಚಿಗೊಳಿಸಿ, ಲಕ್ಷ್ಮೀ ಪೂಜೆಯ ತಯಾರಿಗಾಗಿ ಹೋಳಿಗೆ ಮಾಡಿ ಕುಟುಂಬದ ಸದಸ್ಯರು ಮಾತ್ರ ಲಕ್ಷ್ಮೀಪೂಜೆಯಲ್ಲಿ ಪಾಲ್ಗೊಳ್ಳುವುದು ಕೆಲವು ಕುಟುಂಬಗಳ ಪದ್ದತಿ. ಮನೆ ಮಗಳು ಮದುವೆಯಾಗಿ ಗಂಡನ ಮನೆಗೆ ತೆರಳಿದ್ದರೆ, ಅವರು ಈ ಪೂಜೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬುದು ವಾಡಿಕೆ.ತಮ್ಮ ಗೃಹದ ದ್ವಾರ ಬಾಗಿಲು ಹಾಕಿ ಆ ಕುಟುಂಬದ ವಂಶಾವಳಿಯವರು ಮಾತ್ರ ಪೂಜೆ ಸಲ್ಲಿಸುವುದು ವಿಶೇಷತೆ .
6) ಶಾಸಿಕಟ್ಟೆ ಅಥವಾ ಬಾಷಿಂಗ ಕಟ್ಟೆಯ ಚಿತ್ರ ಬರೆಸುವುದು: ಮದುವೆ ಒಂದು ವಾರವಿರುವಾಗ ವೇಳೆ ಶಾಶಿಕಟ್ಟೆ ಅಥವಾ ಬಾಷಿಂಗ ಕಟ್ಟೆಯ ಚಿತ್ರವನ್ನು ವಿವಾಹ ನಡೆಯುವ ಸ್ಥಳದ ಗೋಡೆಗೆ ಬರೆಸುವರು. ಆದರೆ ಈಗ ಬಟ್ಟೆಯಲ್ಲಿ ಚಿತ್ರ ಬಿಡಿಸಿ ಗೋಡೆಗೆ ಅಂಟಿಸುವ ಪ್ರಕ್ರಿಯೆ ಕಾಣುತ್ತಿರುವುದು ಸಾಮಾನ್ಯ .ಅದರ ಮುಂದೆಯೇ ನೆಲದ ಮೇಲೆ ಆಕಳ ಸಗಣಿ, ಗೋಮೂತ್ರ, ಮತ್ತು ಹುತ್ತಿನ ಮಣ್ಣನ್ನು ನೀರಿನಿಂದ ಕಲಸಿ, ಮನೆಯ ಹೆಣ್ಣು ಮಕ್ಕಳಿಂದ ಸಾರಣೆ ಮಾಡಿಸಿ, ವಧುವರರು ಕೂಡುವ ಸ್ಥಳದಲ್ಲಿ  ಸಿದ್ಧತೆ ಮಾಡುತ್ತಾರೆ ಚಿತ್ರಗಾರರಿಂದಲೇ ಪೂಜೆ ಮಾಡಿಸಿ ಶುಭ ಹಾರೈಕೆಗಾಗಿ ಕೋರುತ್ತಾರೆ .ಚಿತ್ರ ಬಿಡಿಸಿದ ಚಿತ್ರಗಾರನಿಗೆ "ಉಲುಪಿ"ಅನ್ನುವಂತಹ ಅಕ್ಕಿ, ಗೋಧಿ, ಬೆಲ್ಲ, ಗೋಧಿಹಿಟ್ಟಿನೊಂದಿಗೆ ಉಡಿ ಬಟ್ಲು, ದಕ್ಷಿಣೆ ಇಟ್ಟು ಅವರಿಗೆ ಗೌರವ ಸಲ್ಲಿಸುತ್ತಾರೆ.
 7) ಮೆಹಂದಿ ಶಾಸ್ತ್ರ :ಮದುವೆಯಾಗುವ ವರ/ವಧುವಿಗೆ ಮೆಹಂದಿ ಹಚ್ಚುವ ಮೂಲಕ ಮೆಹೆಂದಿ ಶಾಸ್ತ್ರ ಆರಂಭಿಸುತ್ತಾರೆ .ಅದರ ಜೊತೆಗೆ ಕುಟುಂಬದವರೆಲ್ಲರೂ ಮೆಹೆಂದಿ ಹಾಕಿಕೊಂಡು ಸಂಭ್ರಮಿಸುವ ಕ್ಷಣ ತುಂಬಾ ಸಂತೋಷದಾಯಕ. ವಧು ವರರು ತಮ್ಮ ಮದುವೆಯಾಗುವವರ ಹೆಸರನ್ನು ಕೈಗೆ ಹಾಕಿಸಿಕೊಂಡು ಸಂಭ್ರಮಪಡುವಂತಹ ಕ್ಷಣವು ಅವರ ಮನಸ್ಸಿಗೆ ಮುದ ನೀಡುತ್ತದೆ .
8) ಲಗ್ನಪತ್ರಿಕೆ ಕಟ್ಟಿಸುವುದು: ಮದುವೆ 5 ದಿನ ಅಥವಾ 3 ದಿನ ಇರುವ ಮೊದಲು ಈ ಕಾರ್ಯಕ್ರಮ ನೆರವೇರಿಸುತ್ತಾರೆ. ಆ ಶುಭದಿನದಂದು ಹಲವಾರು ಕಾರ್ಯಕ್ರಮಗಳನ್ನು ನಡೆಸುವರು .
*    ಅರಳಿಮರಕ್ಕೆ ಹೋಗಿ ಅಥವಾ ಯಾವುದಾದರೂ ದೇವಸ್ಥಾನದಲ್ಲಿ ಅರಳಿ ಮರದ ಕೊಂಬೆಯನ್ನು ಮೊದಲೇ ತಂದಿರಿಸಿ, ಅಲ್ಲಿ ಪೂಜೆ ಸಲ್ಲಿಸಿ ಆ ಮರ ಅಥವಾ ಕೊಂಬೆಗೆ  ಮನೆಯ ಅಳಿಯಂದಿರ ಜೊತೆ ಪೂಜೆ ಮಾಡಿಸುವುದು ವಾಡಿಕೆ.ಅಳಿಯನಾದ ವ್ಯಕ್ತಿ ಹೆಗಲಿಗೆ ಕಂಬಳಿ ಹಾಕಿಕೊಂಡು ಪೂಜೆ ಸಲ್ಲಿಸಿ ಅರಳಿ ಮರದ ಟೊಂಗೆಯನ್ನು ಹಿಡಿದುಕೊಂಡು ಬರುವಾಗ ಬೀಗರಾದವರು ಅವರಿಗೆ ತಮಾಷೆಗಾಗಿ ಬಣ್ಣವನ್ನು ಹಾಕುವರು. ಅದು ಒಂದು ರೀತಿಯ ಬಾಂಧವ್ಯದ ಬೆಸುಗೆ ಎಂದೇ ಹೇಳಬಹುದು. ಎಲ್ಲರೂ ಸಂತೋಷದಿಂದ ವಾದ್ಯಮೇಳದೊಂದಿಗೆ  ಹಾಲಗಂಬ ತಂದಂತಹ ವ್ಯಕ್ತಿಗೆ ನೀರು ಹಾಕಿ ಹೊಸ ಬಟ್ಟೆ ಕೊಟ್ಟು ಗೌರವಿಸುವರು .
*ಅನಂತರ ಹಸಿರು ತೆಂಗಿನ ಗರಿಗಳಿಂದ ಹಂದರ ಹಾಕಿ, ಹಾಲುಗಂಭದ ಪೂಜೆ ಮತ್ತು ಹಂದರದ ಪೂಜೆಯನ್ನು ಮಗಳು ಮತ್ತು ಅಳಿಯನಿಂದ ಮಾಡಿಸುವರು .
*ಜೋರು ಬಿಡುವುದು:ಒಂದು ಪಾತ್ರೆಯಲ್ಲಿ ಸುಣ್ಣದ ನೀರು, ಮತ್ತೊಂದು ಪಾತ್ರೆಯಲ್ಲಿ ಕೆಮ್ಮಣ್ಣಿನ ನೀರು, ಮಾಡಿಕೊಂಡು ಮಗಳು ಮತ್ತು ಅಳಿಯನ ಕೈಯಿಂದ ಮದುವೆ ಮನೆಯ ಸುತ್ತಲೂ ಗೋಡೆಗೆ ಮೇಲಿನಿಂದ ಕೆಳಗೆ ಸುಣ್ಣದ ಮತ್ತು ಕೆಮ್ಮಣ್ಣಿನ ನೀರನ್ನು ಜೊತೆಜೊತೆಯಾಗಿ ಸತಿಪತಿಗಳಿಬ್ಬರೂ ಬಿಡುವ ಮೂಲಕ ವಿವಾಹ ಸಮಾರಂಭ ಶುಭಕರವಾಗಿ ನಡೆಯಲಿ ಎಂದು ತಮ್ಮ ಬಲಗೈಯನ್ನು ಸುಣ್ಣ ಮತ್ತು ಕೆಮ್ಮಣ್ಣಿನ ನೀರಿನಲ್ಲಿ ಅದ್ದಿ ಗೋಡೆಗಳಿಗೆ ಹಸ್ತ ಮುದ್ರೆಗಳನ್ನು ಒತ್ತುತ್ತಾ ಶುಭ ಕೋರುವರು. ಈ ರೀತಿ ಮಾಡಿದ ನಂತರ ಬೀಗರು ಮಗಳು ಮತ್ತು ಅಳಿಯನ ಮೇಲೆ ಬಣ್ಣ ಎರಚುವ ಮೂಲಕ ಸಂಭ್ರಮಿಸುತ್ತಾರೆ.ಅನಂತರ ಹಂದರದಲ್ಲಿ ಅವರನ್ನು ಕೂರಿಸಿ ಅವರಿಗೆ ಎಲ್ಲರೂ ಸಂಭ್ರಮದಿಂದ ನೀರು ಹಾಕಿ ಹೊಸ ಬಟ್ಟೆ ಉಡುಗೊರೆ ಕೊಡುವುದು ವಾಡಿಕೆ .
*ಐರಾಣಿ ತರುವುದು : ಕುಂಬಾರರ ಮನೆಯಿಂದ 2 ದೊಡ್ಡದಾದ ಗಡಿಗೆಗಳು ಅಥವಾ ಬಿಂದಿಗೆ ಮತ್ತು 3ಅಥವಾ 5ಚಿಕ್ಕದಾದ ಗಡಿಗೆಗಳನ್ನು ಖರೀದಿಸಿ ಅವುಗಳಿಗೆ ಪೂಜೆ ಸಲ್ಲಿಸಿ, ಕುಂಬಾರರಿಗೆ ಕಾಣಿಕೆ ನೀಡಿ ಅವುಗಳನ್ನು ಮುತ್ತೈದೆಯರು ಹೊತ್ತು ತರುವುದು. ಆ ಬಿಂದಿಗೆಗಳಲ್ಲಿ ಜೋಳ ಅಥವಾ ಧಾನ್ಯ ಹಾಕಿ ಒಂದು ಜೋಳದ ದಂಟಿಗೆ ಎಲೆಯನ್ನು ಕಟ್ಟಿ ಅದರೊಳಗೆ ಇಟ್ಟುಕೊಂಡು ತರುವುದು ಶುಭ ಸಂಕೇತ .ಕುಂಬಾರರಿಗೆ ಉಲುಪಿಯನ್ನು ಸಲ್ಲಿಸಿ ವಾದ್ಯಮೇಳದೊಂದಿಗೆ ಐರೇಣಿಯನ್ನು ಹೊತ್ತುಕೊಂಡ ಮಹಿಳೆಯರನ್ನು ಆತ್ಮೀಯತೆಯಿಂದ ಮನೆಯೊಳಗೆ ಬರಮಾಡಿಕೊಳ್ಳುತ್ತಾರೆ. 
* ಲಗ್ನಪತ್ರಿಕೆ ಕಟ್ಟಿಸುವುದು :ಲಗ್ನಪತ್ರಿಕೆಯ ಪೂಜಾ ಕಾರ್ಯವು ಪುರೋಹಿತರಿಂದ ನಡೆಯುತ್ತದೆ. ನಂತರ ಲಗ್ನಪತ್ರಿಕೆ ಯಲ್ಲಿರುವ ವಿಷಯವನ್ನು ಪುರೋಹಿತರು ವಧು ಮತ್ತು ವರನ ಹಿರಿಯರ ಸಮ್ಮುಖದಲ್ಲಿ, ಸಮಾಜ ಬಾಂಧವರ ಸಮ್ಮುಖದಲ್ಲಿ, ಲಗ್ನಪತ್ರಿಕೆಯನ್ನು ಓದಿ ಪೂಜೆಯನ್ನು ಸಲ್ಲಿಸುತ್ತಾರೆ.
* ಲಗ್ನದ ಅಕ್ಕಿಯ ಗಂಟಿನ ಪೂಜಾ ಕಾರ್ಯ ನಡೆಸುವರು. ವಧುವನ್ನು ತವರಿನಿಂದ ವರನ ಮನೆಗೆ ಕರೆತರುವ ಮುನ್ನ ಪೂಜೆ ಮಾಡಿದ ಲಗ್ನ ಲಗ್ನದ ಅಕ್ಕಿಯ ಗಂಟನ್ನು ಕೊಟ್ಟು ವಧುವನ್ನು ಕರೆತರುವ ಪದ್ಧತಿಯ ಆಚರಣೆಯು ವಿಶಿಷ್ಟ *ಎಣ್ಣೆ ಬೀರುವುದು : ಊರಿನಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ವಾದ್ಯ ಸಮೇತ ಹೋಗಿ, ಕಳಸದೊಂದಿಗೆ ದೀಪ ಹಚ್ಚಿ ಬರುವ ವಿಶಿಷ್ಟ ಆಚರಣೆ. ಇದರ ಉದ್ದೇಶ ವಿವಾಹ ಸಮಾರಂಭದ ಶುಭಗಳಿಗೆಯಲ್ಲಿ ಯಾವುದೇ ರೀತಿಯ ಅಡೆತಡೆಗಳಾಗದಂತೆ ಸರ್ವ ರೀತಿಯ     ಸರ್ವ ರೀತಿಯಿಂದಲೂ ಅನುಕೂಲ ಕಲ್ಪಿಸುವಂತೆ ದೇವಾನುದೇವತೆಗಳಿಗೆ ಭಕ್ತಿಯಿಂದ ಕೇಳಿಕೊಂಡು ಪೂಜೆ ಸಲ್ಲಿಸುವ ವಿಶಿಷ್ಟ ಆಚರಣೆ .
*ಬಳೆ ಇಡಿಸುವ ಕಾರ್ಯಕ್ರಮದ ಶುಭಗಳಿಗೆ :
ತಮ್ಮ ಮಗ ಅಥವಾ ಮಗಳ ವಿವಾಹ ಮಾಡುತ್ತಿರುವ ಶುಭ ಸಂದರ್ಭದ ಶುಭಸಂಕೇತವಾಗಿ ವಧುವಿಗೆ ,ಕುಟುಂಬದ ಮಹಿಳೆಯರಿಗೆ, ಆಪ್ತರಿಗೆ ,ಸಂಬಂಧಿಕರಿಗೆ, ಹಸಿರುಗಾಜಿನ ಬಳೆಗಳನ್ನು ಹಿಡಿಸುವ ಮೂಲಕ ವಧುವರರಿಗೆ ಶುಭ ಕೋರುವ ವಿಶಿಷ್ಟ ಆಚರಣೆ. ಹಸಿರು ಗಾಜಿನ ಬಳೆಗಳೇ 
ಸ್ತ್ರೀಕುಲದ ಶುಭ ಕಳೆಗಳೇ
ಈ ಕೈಗಳಿಗೆ ಶೃಂಗಾರವೇ 
ಇದು ಝಲ್ಲೆಂದರೆ ಸಂಗೀತವೇ 
ನಿಲ್ಲದ ಗಾನ ನಿನ್ನದಮ್ಮ .......ಎನ್ನುವ ಹಾಡಿನ ಸೊಗಡು ಹೆಚ್ಚಿಸುವ ಹಸಿರು ಗಾಜಿನ ಬಳೆಗಳನ್ನು ಮದುಮಗಳಿಗೆ ಬಳೆಗಾರರಿಂದ ಹಾಕಿಸುವ ಮೂಲಕ, ಮದುಮಗಳ ಮೊಗದಲ್ಲಿ ಮಂದಹಾಸ ಹೆಚ್ಚಿಸುವ ಜೊತೆಗೆ ಬಂಧು ಬಾಂಧವರಲ್ಲಿ ಸಾಮರಸ್ಯ ಬೆಸೆಯುವ ಸಂಪ್ರದಾಯ ಇದಾಗಿದೆ . 
*ಬೀಸುವ ಕಲ್ಲು ಪೂಜೆ ಮತ್ತು ಒರಳುಕಲ್ಲು ಪೂಜೆ :ಮುತ್ತೈದೆಯರಿಗೆ ಉಡಿ ತುಂಬುವ ಶಾಸ್ತ್ರಮಾಡಿ ಅವರಿಂದ ಪಂಚಧಾನ್ಯಗಳನ್ನು ಸೇರಿಸಿ, ಆ ಧಾನ್ಯಗಳನ್ನು ಹಾಕಿ ಹಾಡು ಹಾಡುತ್ತಾ ಬೀಸುವ ಕಾರ್ಯವನ್ನು ಮಾಡಿ ಅನಂತರ ಆ ಬೀಸುವ ಕಲ್ಲಿಗೆ ಹೊಸ ಸೀರೆಯನ್ನು ಹೊದಿಸಿ ಪೂಜಾಕಾರ್ಯ ಮುಕ್ತಾಯ ಮಾಡುವರು. ಅದೇ ರೀತಿ ಒರಳುಕಲ್ಲು ಪೂಜೆ ಪಂಚಧಾನ್ಯಗಳನ್ನು ಒರಳಿನಲ್ಲಿ ಹಾಕಿ, ಐವರು ಮುತ್ತೈದೆಯರು ಒನಕೆ ಹಿಡಿದು ಹಾಡು ಹಾಡುತ್ತಾ , ಅದರೊಂದಿಗೆ ಪೂಜಾ ಕಾರ್ಯ ಮಾಡಿ ಒನಕೆಯ ಮೇಲೆ ಹೊಸ ಸೀರೆಯನ್ನು ಹೊದಿಸಿ ಪೂಜಾಕಾರ್ಯ ಮುಕ್ತಾಯಗೊಳಿಸುವರು. *ಶ್ಯಾವಿಗೆ ಮಣೆ ಪೂಜಾಕಾರ್ಯ :ಪಂಚ ಮುತ್ತೈದೆಯರಿಗೆ ಉಡಿ ತುಂಬಿ ಐದೂ ಜನ ಶ್ಯಾವಿಗೆ ಮಣೆ ಮೇಲೆ ಕುಳಿತುಕೊಳ್ಳುವಂತೆ ಮಾಡಿ ,ಅವರಿಂದ ಶ್ಯಾವಿಗೆ ಹೊಸೆಯುವ ಕಾರ್ಯಕ್ರಮ ಮಾಡುವರು. ಹಾಡು ಹಾಡುತ್ತಾ ಅವರು ಶ್ಯಾವಿಗೆ  ಹೊಸೆಯುವ ನೋಟ ಚಂದ .
*ಹಂದರದ ಸಂಡಿಗೆ ಪೂಜೆ: ಬಂದಿರುವ ಬೀಗರು ಸಂಬಂಧಿಕರಿಂದ ಸಂಭ್ರಮದಿ ಹಂದರದ ಕೆಳಗೆ ಸಂಡಿಗೆ ಇಡುವ ಸಂಪ್ರದಾಯ. ಜೊತೆಗೆ ಸಂಡಿಗೆ ಹಿಟ್ಟಿನಿಂದ ಬಸವಣ್ಣನ ಮೂರ್ತಿ ಮಾಡಿ ಅದಕ್ಕೆ ಬಂಗಾರದ ಆಭರಣ ಹಾಕಿ ಪೂಜೆ ಸಲ್ಲಿಸುವ ಪದ್ದತಿ ಪದ್ಧತಿಯಿಂದ ಸಂಭ್ರಮ ಪಡುತ್ತಾರೆ.
*ಮಾಂಗಲ್ಯ ಪೋಣಿಸುವ ಕಾರ್ಯಕ್ರಮ: ಹೆಣ್ಣಿನ ಮತ್ತು ಗಂಡಿನ ಕಡೆಯ ಮುತ್ತೈದೆಯರೆಲ್ಲ ಹಂದರದ ಕೆಳಗೆ ಕುಳಿತು ಬಂಗಾರದ ಮಾಂಗಲ್ಯಗಳನ್ನು ಹಾಕಿ, ಕರಿಮಣಿಯಿಂದ ಪೋಣಿಸುವರು.  ಶಿವ ಮತ್ತು ಪಾರ್ವತಿ ಸಂಕೇತವಾದ ಕರಿಮಣಿ ಮತ್ತು ಬಂಗಾರದ ಮಣಿಗಳು ಮಾಂಗಲ್ಯಕ್ಕೆ ಶೋಭೆ. ಜೊತೆಗೆ ಕರಿಮಣಿ ನಕಾರಾತ್ಮಕ ಶಕ್ತಿಯನ್ನು ಅಳಿಸಿ ಧನಾತ್ಮಕ ಶಕ್ತಿಯನ್ನು ವಧುವಿಗೆ ನೀಡುವುದರಿಂದ ಕರಿಮಣಿಯನ್ನು ಮಾಂಗಲ್ಯ ಧಾರಣೆಗೆ ಬಳಸುತ್ತಾರೆ ಎಂಬ ವಾಡಿಕೆ ಇದೆ. 2 ಮಾಂಗಲ್ಯಗಳಲ್ಲಿ 1ಮಾಂಗಲ್ಯ ಗಂಡಿನ ಕಡೆಯವರದ್ದಾದರೆ ಮತ್ತೊಂದು ಮಾಂಗಲ್ಯ ಹೆಣ್ಣಿನ ಕಡೆಯವರದಾಗಿರುತ್ತದೆ .
9)ಮದುಮಕ್ಕಳನ್ನು ಮಾಡುವುದುಅಥವಾ ಅರಿಶಿಣ ಶಾಸ್ತ್ರ: ಮದುವೆಯ ಹಿಂದಿನ ದಿನವೇ ವಧು ವರರಿಗೆ ಬಂಧು ಬಳಗದವರೆಲ್ಲಾ ಸೇರಿ ಅರಿಶಿನ ಹಚ್ಚುವ ಮೂಲಕ ಅರಿಶಿನ ಶಾಸ್ತ್ರದ ಕಾರ್ಯ ಮಾಡುತ್ತಾರೆ. ಜೊತೆಗೆ ಪರಸ್ಪರ ಬೀಗರು ಅರಿಶಿನ ಹಚ್ಚಿ ಸಂಭ್ರಮ ಪಡುವುದು ಸರ್ವೇಸಾಮಾನ್ಯ. ಅರಿಶಿನ ಶಾಸ್ತ್ರದ ನಂತರ ಮದುಮಕ್ಕಳನು ಮನೆಬಿಟ್ಟು ಹೊರಗಡೆ ಕಳಿಸುವಂತಿಲ್ಲ ಎನ್ನುವ ನಿಯಮ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಪಾಲಿಸುತ್ತಾರೆ .
11)ಹಂದರದ ಹರಿನೀರು ಕಾರ್ಯಕ್ರಮ: ಮಧು ಮಕ್ಕಳು ಮತ್ತು ಅವರ ಹಿಂದೆ ಅವರ ತಾಯಿ ಯರನ್ನು ಹಂದರದಲ್ಲಿ ಕೂರಿಸಿ, ನೀರು ಹಾಕುವುದರ ಮೂಲಕ ಮಧು ಮಕ್ಕಳನ್ನು ಮಾಂಗಲ್ಯಧಾರಣೆಯ  ಪವಿತ್ರ ಕಾರ್ಯಕ್ಕೆ ಅಣಿಗೊಳಿಸುತ್ತಾರೆ. ವಧುವಿಗೆ ಅರಿಶಿನದ ಸೀರೆ ಅಥವಾ ತಾಳಿಕಟ್ಟುವ ಸೀರೆಯೆಂದು ಹಳದಿ ಬಣ್ಣದ ಸೀರೆಯನ್ನು ಕೊಡುತ್ತಾರೆ. ಜೊತೆಗೆ ತವರಿನ ಸೀರೆ ಎಂದು ತವರು ಮನೆಯವರು ಸೀರೆಯನ್ನು ಹೆಗಲ ಮೇಲೆ ಹೊದಿಸುತ್ತಾರೆ . ವರನಿಗೆ  ಶುಭ್ರತೆಯ ಸಂಕೇತವಾದ ಬಿಳಿ ಬಣ್ಣದ ಉಡುಗೆಯನ್ನು  ಧರಿಸಲು ಕೊಡುತ್ತಾರೆ. ವಧು ವರರ ಸೋದರಮಾವ ದಂಪತಿಗಳಿಂದ ಬಾಸಿಂಗ ಕಟ್ಟಿಸುವರು. ಮುತ್ತಿನ ಬಾಸಿಂಗವನ್ನು ಕಟ್ಟಿಸಿಕೊಂಡ ಮೇಲಂತೂ ಮಧುಮಕ್ಕಳ ಮೊಗದಲ್ಲಿ ಮಂದಹಾಸ ಮತ್ತಷ್ಟು ಹೆಚ್ಚಾಗುತ್ತದೆ.  ಮುತ್ತೈದೆಯರಿಂದ ಆರತಿ, ಕೊನೆಗೆ ಮುತ್ತಿನ ಮೂಗುತಿಯಿಂದ ನೀರು ಹಾಕಿಸುವ ಶಾಸ್ತ್ರದ ನಂತರ  ದೃಷ್ಟಿಯ ನೀರನ್ನು  ಹಾಕುವ ಶಾಸ್ತ್ರ ಮುಗಿಸುತ್ತಾರೆ .
12) ಮಾಂಗಲ್ಯಧಾರಣೆ ಮತ್ತು ಅಕ್ಷತಾರೋಪಣ ಸಮಾರಂಭ: ಹಂದರದಲ್ಲಿ ಮಧುಮಕ್ಕಳಿಗೆ ಹರಿನೀರು ಹಾಕಿದ ನಂತರ ಮಾಂಗಲ್ಯಧಾರಣೆ ಮಾಡುವಂತಹ ಸ್ಥಳಕ್ಕೆ ಬಂದು ಕೂರಿಸುತ್ತಾರೆ. ಅವರಂತೆಯೇ ಅವರ ತಾಯಿಯರು ಕುಳಿತುಕೊಳ್ಳುತ್ತಾರೆ. ಪುರೋಹಿತರು ಹೋಮವನ್ನು ಮಾಡುವುದರ ಮೂಲಕ  ಶುಭ ಮುಹೂರ್ತದಲ್ಲಿ, ಶುಭ ಗಳಿಗೆಯಲ್ಲಿ, ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಮಾಂಗಲ್ಯಧಾರಣೆಯ ಕಾರ್ಯಕ್ರಮವನ್ನು ನಡೆಸುತ್ತಾರೆ.ವರನು ವಧುವಿನ ಕೊರಳಿಗೆ ಮಾಂಗಲ್ಯವನ್ನು ಕಟ್ಟುವಂತಹ ಆ ಪವಿತ್ರ ಕ್ಷಣದ ಶುಭಗಳಿಗೆಯ ಸಂದರ್ಭದಲ್ಲಿ ಎಲ್ಲರೂ ಅಕ್ಷತೆಯನ್ನು ಹಾಕುವ ಮೂಲಕ ನೂತನ ದಂಪತಿಗಳಿಗೆ ಶುಭ ಕೋರುತ್ತಾರೆ.    ಮಾಂಗಲ್ಯಧಾರಣೆಯ ನಂತರ ಪುರೋಹಿತರು ನೂತನ ದಂಪತಿಗಳಿಂದ ಹಲವಾರು ಪೂಜಾ ವಿಧಿಗಳನ್ನು ಮಾಡಿಸುತ್ತಾರೆ. ಅನಂತರ ಕನ್ಯಾದಾನ ಸಮಾರಂಭ ನಡೆಯುತ್ತದೆ .ವಧುವಿನ ತಂದೆ ತಾಯಿ ತಮ್ಮ ಮುದ್ದಿನ ಮಗಳನ್ನು ಧಾರೆಎರೆದು ಕೊಡುವಂತಹ ಒಂದು ಪವಿತ್ರ ಕಾರ್ಯ ಇಲ್ಲಿ ನಡೆಯುತ್ತದೆ.  ಕನ್ನೆಯ ಬಲಗೈ, ವರನ ಬಲಗೈ ಮತ್ತು ಕನ್ನೆಯ ತಂದೆಯ ಬಲಗೈಯನು ಒಬ್ಬರ ಮೇಲೊಬ್ಬರು ಇಟ್ಟು, ಕನ್ನೆಯ ತಾಯಿಯ ಕಡೆಯಿಂದ  ಹಾಲು ಮಿಶ್ರಿತ ನೀರನ್ನು ಕೈಗಳ ಮೇಲೆ  ಹಾಕಿಸುವ ಮೂಲಕ ಕನ್ಯಾದಾನದ ಪವಿತ್ರ ಕಾರ್ಯ ನಡೆಯುತ್ತದೆ.
*ಮಧುಮಗನಿಂದ ಮಧುಮಗಳಿಗೆ ಕಾಲುಂಗುರ ,ಹಾಲ್ಗಡಗ,ಸಿಂಧೂರ ಹಚ್ಚಿಸುವ ಕಾರ್ಯಕ್ರಮ .
*ಅನಂತರ ಪುರೋಹಿತರು ಸಪ್ತಪದಿ ತುಳಿಸುವ ಕಾರ್ಯಕ್ರಮವನ್ನು ನೂತನ ದಂಪತಿಗಳಿಂದ ಮಾಡಿಸುತ್ತಾರೆ. ಹೋಮಕುಂಡದ ಸುತ್ತಲೂ  ಏಳು ಹೆಜ್ಜೆಗಳನ್ನ ಹಾಕಿಸುವ ಮೂಲಕ ಕಷ್ಟ ಸುಖಗಳಲ್ಲಿ ಸಹಭಾಗಿತ್ವ, ಪ್ರೀತಿ, ನೋವು ನಲಿವಿನ ಸಮಾನ ಹಂಚಿಕೆ, ತ್ಯಾಗ,ಪರಸ್ಪರ ನಂಬಿಕೆ ,  ಕೃತಜ್ಞತೆ ,ವಾಗ್ದಾನ  ಹೀಗೆ ಏಳು ಹೆಜ್ಜೆಗಳನ್ನು ಹಾಕಿಸುವ ಮೂಲಕ ಸಪ್ತಪದಿ ಕಾರ್ಯಕ್ರಮವನ್ನು ನೆರವೇರಿಸುತ್ತಾರೆ.ಅನಂತರ ಮಹಾಪತಿವ್ರತೆಯಾದ ಅರುಂಧತಿ ದೇವಿಯ ನಕ್ಷತ್ರವನ್ನು ವಧು ವರರಿಗೆ ಗಗನದಲಿ ತೋರಿಸಿ, ಮಹಾಪತಿವ್ರತೆ ಸಪ್ತರ್ಷಿಗಳಲ್ಲಿ ಒಬ್ಬರಾದ ವಶಿಷ್ಠರ ಧರ್ಮಪತ್ನಿ ಅರುಂಧತಿಯಂತೆ ಸುಖವಾಗಿ ಜೀವಿಸು ಎಂದು ಶುಭ ಕೋರುತ್ತಾರೆ. 
12)ದೈವತಾ ಅಕ್ಷತೆ: ಬೆಳಿಗ್ಗೆ ಹೋಮದ ಅಕ್ಷತೆ ಕಾರ್ಯಕ್ರಮದ ನಂತರ ದೈವತಾ ಅಕ್ಷತಾ ಕಾರ್ಯಕ್ರಮ ನೆರವೇರುತ್ತದೆ.ದೈವದ ಸಾಕ್ಷಿಯಾಗಿ, ಸಮಾಜ ಬಾಂಧವರ, ವಧು ವರರ ಬಂಧುಗಳ ಸಾಕ್ಷಿಯಾಗಿ ,ಆತ್ಮೀಯರ, ಗುರುಹಿರಿಯರ ಸಾಕ್ಷಿಯಾಗಿ, ದೈವದ ಎದುರಿಗೆ ಮತ್ತೊಮ್ಮೆ ಅಕ್ಷತಾ ಸಮಾರಂಭ ನೆರವೇರುತ್ತದೆ .ನೆರೆದಿರುವಂತಹ ಎಲ್ಲಾ ಜನಸ್ತೋಮ, ಬಂಧುಬಾಂಧವರು ನೂತನ ದಂಪತಿಗಳಿಗೆ ಶುಭ ಕೋರಿ ಆಶೀರ್ವದಿಸುತ್ತಾರೆ .
14) ಪ್ರೀತಿಪೂರ್ವಕ ಭೋಜನ: ನೆರೆದಿರುವ ಎಲ್ಲಾ ಬಂಧು ಬಾಂಧವರಿಗೆ, ಸಮಾಜದ ಗುರು ಹಿರಿಯರಿಗೆ, ಸರ್ವರಿಗೂ ವಿವಾಹ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದವರೆಲ್ಲರಿಗೂ ಪ್ರೀತಿಪೂರ್ವಕ ವಿವಿಧ ಭಕ್ಷ್ಯ ಭೋಜನವನ್ನು ಉಣಬಡಿಸುವುದರ ಮೂಲಕ ವಧು ವರನ ಕಡೆಯವರು ಸಂತೋಷವನ್ನು ವ್ಯಕ್ತಪಡಿಸುತ್ತಾರೆ .
15)ಉಡಿಯಕ್ಕಿ ಕಾರ್ಯಕ್ರಮ :ವಿವಾಹ ಸಮಾರಂಭದ ಕಾರ್ಯಕ್ರಮಗಳು ಮುಗಿದ ನಂತರ ಮದುಮಗಳನ್ನು ಗಂಡನ ಮನೆಗೆ ಕಳುಹಿಸುವಂತಹ ಉಡಿಯಕ್ಕಿ ಕಾರ್ಯಕ್ರಮದ ಸಂಭ್ರಮ ನಡೆಯುತ್ತದೆ.ಮೊದಲಿಗೆ ಹೆಣ್ಣಿನ ಮನೆಯಿಂದ ಮದುಮಗಳು ತವರಿನ ಉಡಿಯಕ್ಕಿ ಎಂದು ಗೋಧಿಯನ್ನು ಹುಡಿಯಲ್ಲಿ ತರುವ ಬರುವ ಪದ್ದತಿ .ಎರಡನೆಯದಾಗಿ ಗಂಡಿನ ಮನೆಗೆ ಬಂದ ಮದುಮಗಳು ಗಂಡನ ಮನೆಯಿಂದ ಮೊದಲ ಬಾರಿಗೆ ತವರಿಗೆ ಹೋಗಬೇಕಾದರೆ ಅಕ್ಕಿಯನ್ನು ಉಡಿಯಕ್ಕಿ ಹಾಕಿಸಿಕೊಂಡು ಹೋಗುತ್ತಾರೆ.ತವರಿನಿಂದ ಮತ್ತೊಮ್ಮೆ ಗಂಡನ ಮನೆಗೆ ಬರಬೇಕಾದರೆ ಅಕ್ಕಿಯನ್ನು ಉಡಿಯಕ್ಕಿ ಹಾಕಿಸಿಕೊಂಡು ಮದುಮಗಳ ಬರುತ್ತಾಳೆ. ಅನಂತರ ನಾಲ್ಕನೆಯದಾಗಿ ಗಂಡನ ಮನೆಯಿಂದ ಮತ್ತೊಮ್ಮೆ ತವರು ಮನೆಗೆ ಹೋಗಬೇಕಾದರೆ ಪುನಃ ಅಕ್ಕಿಯನ್ನು ಉಡಿಯಕ್ಕಿಯನ್ನು ಹಾಕಿಸಿಕೊಂಡು ಹೋಗುತ್ತಾಳೆ. ಈ ರೀತಿ ಮಾಡಿದಾಗ ಉಡಿಯಕ್ಕಿ ಕಾರ್ಯಕ್ರಮದ ಸಮಾರಂಭ ಮುಗಿಯುತ್ತದೆ .
*ಸೊಸೆಯನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ .ಮೊದಲ ಬಾರಿಗೆ ಮದುವೆಯಾದ ಮದುಮಗಳು ತನ್ನ ತವರುಮನೆಯಿಂದ ಉಡಿಯಕ್ಕಿಯನ್ನು ಹಾಕಿಸಿಕೊಂಡು ಗಂಡನ ಮನೆಗೆ ಬರುವಾಗ ಪ್ರೀತಿಪೂರ್ವಕವಾಗಿ ತಮ್ಮ ಸೊಸೆಯನ್ನು ಬರಮಾಡಿಕೊಳ್ಳುವ ಪದ್ಧತಿಯೂ ಸಹ ವಿಶಿಷ್ಟ ಪೂರ್ವಕ ವಾದದ್ದು .ಮನೆಯ  ಹೆಬ್ಬಾಗಿಲನ್ನು ಅಲಂಕರಿಸಿ ಹೊಸ್ತಿಲ ಮೇಲೆ  ಸೊಸೆಯ ಬಲಗಾಲನ್ನು ಇರಿಸುತ್ತಾರೆ ಹೆಬ್ಬೆರಳು ಮತ್ತು ತೋರ್ಬೆರಳಿನ ಮಧ್ಯಭಾಗದ ಹೊಸಲಿನ ಮೇಲೆ ಮೊಳೆಯನ್ನು ಮನೆಯ ಯಜಮಾನನ ಕಡೆಯಿಂದ ಬಡಿಸುತ್ತಾರೆ. ಇದರ ಉದ್ದೇಶ ನೂತನವಾಗಿ ಮನೆಗೆ ಆಗಮಿಸುವ ವಧು ಈ ಮನೆಗೆ ಬೆಳಕಾಗಿ ಶಾಶ್ವತವಾಗಿ ನೆಲೆಯೂರಲಿ ಎಂಬ ಸಂಪ್ರದಾಯ .ಅನಂತರ  ಹೊಸ ಸೇರಿನಲ್ಲಿ ಅಕ್ಕಿಯನ್ನು ತುಂಬಿಸಿ ಅದರ ಮೇಲೆ ಬೆಲ್ಲದ ಅಚ್ಚನ್ನು ಇಟ್ಟು ಆಸೇರನ್ನು  ಶೃಂಗಾರಗೊಳಿಸಿ, ಅಣಿಗೊಳಿಸಿರುತ್ತಾರೆ .ಮದುಮಗಳು ಆಸೇರನ್ನು ತನ್ನ ಬಲಗಾಲಿನಿಂದ ತಳ್ಳಿ ಒಳಗೆ ಬರುವಂತಹ ಕಾರ್ಯಕ್ರಮ. ಬಲಗಾಲಿನಿಂದ ತಳ್ಳಿದಾಗ ಮನೆಯ ಒಳಗಡೆ ಸೂರೆಗೊಳ್ಳುವ ಅಕ್ಕಿಯನ್ನು ಕಂಡು ಎಲ್ಲರೂ ಸಂಭ್ರಮಿಸುತ್ತಾರೆ. ನೂತನ ಸೊಸೆಯಿಂದ ನಮ್ಮ ಮನೆ ಸಂಪತ್ತು ಸಮೃದ್ಧವಾಗಿ ಹೊರಹೊಮ್ಮಲಿ  ತಮ್ಮ ಮನೆಯನ್ನು ಸದಾ ಸುಖ ಸಂತೋಷದಿಂದ ಇರುವಂತೆ ಮಾಡುವ   ಸೊಸೆ ನಮ್ಮ ಮನೆ ಮಗಳಾಗಿ ನಮ್ಮ ಮನೆಯ ವಂಶವನ್ನು ಬೆಳಗಿಸಲಿ ಎಂದು ಶುಭ ಕೋರುತ್ತಾರೆ.
                ಹೀಗೆ ವಿವಾಹವೆಂಬ ಪವಿತ್ರ ಸಂಸ್ಕಾರ ಹಲವಾರು ರೀತಿಯ ಸಂಪ್ರದಾಯಗಳಿಂದ ಒಡಮೂಡಿದ್ದು ಕುಟುಂಬದ ಸರ್ವ ಸದಸ್ಯರ ಸಂತೋಷ ಸೌಹಾರ್ದತೆಗೆ ಶಕ್ತಿಯಾಗಿ ನಿಂತಿದೆ . ಮೊದಲೆಲ್ಲ ಒಂದು ವಾರದವರೆಗೆ ಮದುವೆಯ ಸಂಭ್ರಮದ ಕಾರ್ಯಕ್ರಮಗಳು ನಡೆಯುತ್ತಿದ್ದವು .ಆದರೆ ಆಧುನಿಕ ಪ್ರಪಂಚದಲ್ಲಿ ಎಲ್ಲರೂ ಕೆಲಸದ ಒತ್ತಡದಲ್ಲಿ ತಮ್ಮನ್ನು ತೊಡಗಿಸಿರುವುದರಿಂದ ಸಮಯಾವಕಾಶದ ಆಭಾವದಿಂದಾಗಿ 8 ದಿನಗಳವರೆಗೆ ನಡೆಯುವಂತಹ ವಿವಾಹ ಸಂಸ್ಕಾರವು ಒಂದೇ ದಿನದಲ್ಲಿ ನೆರವೇರುವಂತಹ ಘಟನೆಗಳನ್ನ ನಾವೀಗ ಕಾಣುತ್ತಿದ್ದೇವೆ .ನಿತ್ಯಜೀವನದ ಸಂಘರ್ಷದಲ್ಲೇ ಪ್ರತಿಯೊಬ್ಬರೂ ತಮ್ಮದೇ ಆದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವುದರಿಂದ ಇಂತಹ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ಸಾಹದಿಂದಿರುವ ಅಂತಹ ಕ್ಷಣಗಳನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸ .ಎರಡೇ ದಿನದಲ್ಲಿ ಮದುವೆ ಕಾರ್ಯಕ್ರಮದ ಎಲ್ಲಾ ಪೂಜಾ ಕಾರ್ಯಗಳನ್ನು ಮುಗಿಸುವ ಸ್ಥಿತಿ ಎಂದು ಅನಿವಾರ್ಯವಾಗಿದೆ ನಗರಪ್ರದೇಶಗಳಲ್ಲಂತೂ ಕಲ್ಯಾಣಮಂಟಪದಲ್ಲಿ ಕೆಲವೇ ಗಂಟೆಗಳ ಕಾಲಾವಧಿಯಲ್ಲಿ ವಿವಾಹ ಸಮಾರಂಭಗಳು ನಡೆಯುತ್ತಿವೆ .ನಿಗದಿತ ಅವಧಿಗಿಂತ ಹೆಚ್ಚು ಕಾಲ ಕಲ್ಯಾಣ ಮಂಟಪ ಗಳಲ್ಲಿಯೂ ಸಹ ಉಳಿದುಕೊಳ್ಳುವಂತಿಲ್ಲ . ಇಲ್ಲ ಏಕೆಂದರೆ ಮತ್ತೊಂದು ಕಾರ್ಯಕ್ರಮಕ್ಕೆ ಆ ಕಲ್ಯಾಣ ಮಂಟಪ ನಿಗದಿತವಾಗಿರುತದೆ.ಹೀಗಾಗಿ ಎಲ್ಲವೂ ಆತುರಾತುರದಲ್ಲಿ ನೆರವೇರುತ್ತವೆ .
              ಸರ್ವೇಸಾಮಾನ್ಯವಾಗಿ ಎಲ್ಲಾ ರೀತಿಯ ಶಾಸ್ತ್ರಬದ್ಧ ಕಾರ್ಯಕ್ರಮ ನಡೆಸಿಯೂ ವಿವಾಹವಾದ ಎಷ್ಟೋ ದಂಪತಿಗಳು ಸುಖಿ ಜೀವನ ನಡೆಸುತ್ತಿಲ್ಲ ಅವರೂ ಸಹ ವಿವಾಹ ವಿಚ್ಛೇದನದಂತಹ ಪ್ರಕ್ರಿಯೆಗೆ ಒಳಗಾಗಿದ್ದಾರೆ ಹಾಗಾದರೆ ಶಾಸ್ತ್ರಬದ್ಧ ಆ ವಿವಾಹ ಸಮಾರಂಭದ ಅರ್ಥವೇನು? ಎಂದು ಕೇಳುವವರು ಸಹ ಇದ್ದಾರೆ.ವಿವಾಹವೆಂಬುದು ಅವರವರ ದೃಷ್ಟಿಕೋನದಲ್ಲಿ ಅವರವರು ವಿಚಾರಿಸಿದಂತೆ ತೀರ್ಮಾನಕ್ಕೆ ಬರುತ್ತದೆ. ಹಿರಿಯರು ಮಾಡಿದಂತಹ ಸಂಸ್ಕಾರಗಳು ತಾವು ಜೀವನದಲ್ಲಿ ಅನುಭವಿಸಿದ ಅದರಿಂದ ಆಗುವಂತಹ ತಪ್ಪುಗಳನ್ನು ತಿದ್ದಿಕೊಂಡು ಈ ರೀತಿ ಮಾಡಿದರೆ ಉತ್ತಮ ಎನ್ನುವಂತಹ ನಿರ್ಧಾರಕ್ಕೆ ಬಂದ ಮೇಲೆ ಒಂದು ಸಂಸ್ಕಾರ ರೂಪಿತವಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ .ಆ ರೀತಿಯ ಸಂಪ್ರದಾಯ  ಅಳವಡಿಸಿಕೊಂಡು ವಿವಾಹ ಸಮಾರಂಭ ನೆರವೇರಿಸಿ ಸಾವಿನ ಅಂಚಿನವರೆಗೂ ಕೂಡಿ ಬಾಳಿದಂತಹ ಸಾಕಷ್ಟು ಉದಾಹರಣೆಗಳನ್ನು ನಾವು ಕಾಣಬಹುದು .ಎಲ್ಲೋ ಕೆಲವು ವಿವಾಹ ವಿಚ್ಛೇದನಕ್ಕೆ ಒಳಗಾಗಿವೆ ಎಂದಮಾತ್ರಕ್ಕೆ ಶಾಸ್ತ್ರಬದ್ಧವಾಗಿ ಆದಂತಹ ಎಲ್ಲಾ ವಿವಾಹಗಳು ಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬಾರದು. 
 ಆದರೆ ವಾಸ್ತವ ಸ್ಥಿತಿ ಹೇಗಿದೆಯೆಂದರೆ ಈಗಿನ ಆಧುನಿಕ ಪ್ರಪಂಚದಲ್ಲಿ ಹಿರಿಯರು ನೋಡಿದ ವಿವಾಹ ಸಮಾರಂಭಗಳಾಗುವುದೇ ಕಡಿಮೆ. ಪ್ರೇಮವಿವಾಹಗಳೇ ಹೆಚ್ಚಾಗಿ ನಡೆಯುತ್ತಿರುವುದರಿಂದ ವಧುವಿನ ಕಡೆಗಾಗಲೀ ವರನ ಕಡೆಗಾಗಲೀ ಯಾವುದೇ ರೀತಿಯ ಬಾಂಧವ್ಯಗಳ ಬೆಸುಗೆ ಇರುವುದಿಲ್ಲ. ಊರಿನ ಹಿರಿಯರ ಪ್ರಮುಖರ ಪರಿಚಯವಿರುವುದಿಲ್ಲ .ಜೀವನದಲ್ಲಿ ಏನೇ ಸಮಸ್ಯೆಗಳು ಎದುರಾದರೂ ಎರಡೂ ಕಡೆಯ ಸಂಬಂಧಿಕರು ಅದನ್ನು ಎದುರಿಸಲು ಸಿದ್ಧರಿರುವುದಿಲ್ಲ. ಬದಲಾಗಿ ಮದುವೆಯಾದ ವಧು ವರರಿಗೆ ಪ್ರೋತ್ಸಾಹವು ಸಿಗದೆ ಮಾನಸಿಕ ತೊಳಲಾಟದಿಂದ ಅವರು ಜೀವನದ ಪ್ರತಿ ಕ್ಷಣವನ್ನು ಕಳೆಯಬೇಕಾದಂತಹ ಸ್ಥಿತಿ ಅನಿವಾರ್ಯವಾಗಿರುತಿತ್ತು.ಆದರೆ ಕಾಲ ಬದಲಾದಂತೆ ಹಿರಿಯರೇ ಕಿರಿಯರ ಮನೋಸ್ಥಿತಿಗೆ ಹೊಂದಿಕೊಳ್ಳುವಂತಹ ನಿರ್ಧಾರಕ್ಕೆ ಬಂದಿರುವುದು ಸಹಜವಾಗಿದೆ. ಏಕೆಂದರೆ ಮೊದಲೆಲ್ಲ ದಂಪತಿಗಳು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವಂತಹ ಮನಸ್ಥಿತಿಯನ್ನು ಹೊಂದಿರುತ್ತಿದ್ದರು .ಸುಮಾರು 14 ರಿಂದ 15ಮಕ್ಕಳನ್ನು ಪಡೆದಂತಹ ಉದಾಹರಣೆಗಳು ಸಾಕಷ್ಟಿವೆ .ಹಾಗಂತ ಅವರು ಸಾಂಸಾರಿಕ ಭೋಗ ಜೀವನ ಇಷ್ಟಪಡುತ್ತಿದ್ದರು ಎಂದರ್ಥವಲ್ಲ. 
ಆಗಿನ ಕಾಲದಲ್ಲಿ ಕಾಲರಾ, ಪ್ಲೇಗ್ ನಂತಹ ಮಹಾಮಾರಿ ರೋಗಗಳು ತಲೆದೋರಿದಾಗ ಅವುಗಳಿಗೆ ಯಾವುದೇ ರೀತಿಯ ಔಷಧಿಯಿಲ್ಲದೆ ಸಾಕಷ್ಟು ಮಕ್ಕಳು ಮಾರಣಾಂತಿಕ ಕಾಯಿಲೆಗೆ ಒಳಗಾಗಿ ಸಾವನ್ನಪ್ಪುತ್ತಿದ್ದರು. ಹೀಗಾಗಿ ಒಂದು ಮಗು ಕಳೆದುಕೊಂಡರೆ ಮತ್ತೊಂದು ಮಗುವಿನಿಂದ ಸುಖವಿದೆ ಎನ್ನುವಂತಹ ಉದ್ದೇಶದಿಂದ ,ಅವರು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಬಯಸುತ್ತಿದ್ದರೆ  ವಿನಃ ಮತ್ತಾವುದೇ ಸ್ವೇಚ್ಛಾಚಾರದ ಜೀವನಕ್ಕಲ್ಲ .ಆದರೆ ಕಾಲ ಬದಲಾದಂತೆ ಸಾಕಷ್ಟು ಔಷಧಿಯ ಲಭ್ಯತೆ ಪ್ರತಿಯೊಂದು ರೋಗಕ್ಕೂ ದೊರಕಿರುವುದರಿಂದ ಮಕ್ಕಳ ಸಾವಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಆಧುನಿಕ ಜೀವನದ ಜಂಜಾಟದಲ್ಲಿ ಬಹಳಷ್ಟು ಮಕ್ಕಳಿದ್ದರೆ ಸುಖಮಯವಾದ ಜೀವನ ನಡೆಸಲು ಅಸಾಧ್ಯ ಎಂಬ ಅರಿವಿನಿಂದಾಗಿ ನಾಗರಿಕ ಸಮಾಜ 1ಅಥವಾ 2 ಮಕ್ಕಳನ್ನು ಹೊಂದಲು ಮಾತ್ರ ಬಯಸುತ್ತಾರೆ. ಅಲ್ಲದೆ ಇಡೀ ಜಗತ್ತಿನಲ್ಲಿ ನಮ್ಮ ದೇಶ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಅದರಿಂದ ಒಬ್ಬ ನಾಗರಿಕರಾಗಿ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಬೇಕು ಎಂಬ ಅರಿವಿನಿಂದಲೂ ಸಹ ಮಕ್ಕಳ ಸಂಖ್ಯೆಯಲ್ಲಿ ಮಿತಿಯನ್ನು ಕಾಣುತ್ತಿದ್ದೇವೆ .ಆದಾಗ್ಯೂ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಜನಸಾಮಾನ್ಯರು 'ಹುಟ್ಟಿಸಿದ ದೇವರು ನಮಗೇನು ಹುಲ್ಲು ಮೆಯಿಸುವನೇ?  ಎಂದು ಈಗಲೂ ಒಂದಕ್ಕಿಂತ ಹೆಚ್ಚು ಮಕ್ಕಳನ್ನು  ಪಡೆಯುವವರನ್ನು ಕಾಣುತ್ತಿದ್ದೇವೆ .ಇದು ಅವರವರ ವೈಯಕ್ತಿಕ ವಿಚಾರವಾಗಿರುವುದರಿಂದ ತಿಳುವಳಿಕೆಯ ಅರಿವನ್ನು ಮೂಡಿಸುವುದು ಮಾತ್ರವೇ ಸರ್ಕಾರದಿಂದ ಸಾಧ್ಯ .
       ನಮ್ಮ ದೇಶದಾದ್ಯಂತ ವೈವಾಹಿಕ ಜೀವನದಲ್ಲಿ  ಏಕಪತ್ನಿ ವಿವಾಹ, ಬಹುಪತ್ನಿತ್ವ ವಿವಾಹ, ಬಹುಪತಿತ್ವ ವಿವಾಹವನ್ನೂ ಸಹ ನಾವು ಕಾಣುತ್ತೇವೆ. ಆದರೆ ವಾಸ್ತವದಲ್ಲಿ ಹಿಂದೂ ಧರ್ಮದಲ್ಲಿ ಏಕಪತ್ನಿ ವೈವಾಹಿಕ ಜೀವನಕ್ಕೆ ಮಾತ್ರ ಮಾನ್ಯತೆ ಇದೆ.ಪ್ರಾಚೀನ ಸಮಾಜದಲ್ಲಿ ಬಹುಪತ್ನಿತ್ವ ವ್ಯವಸ್ಥೆ ಅಸ್ತಿತ್ವದಲ್ಲಿ ಇರಲು ಕಾರಣ ಸಾಕಷ್ಟು ಮಾರಣಾಂತಿಕ ಕಾಯಿಲೆಗಳಿಂದ ಪುರುಷರ ಸಂಖ್ಯೆಯಲ್ಲಿ ಕಡಿಮೆಯಿದ್ದಂತಹ ಸಂದರ್ಭದಲ್ಲಿ ,ಒಂದು ಕುಟುಂಬದಲ್ಲಿ ಮೊದಲ ಪತ್ನಿ ಮರಣಹೊಂದಿದ ನಂತರ ಚಿಕ್ಕ ಮಕ್ಕಳ ಲಾಲನೆ ಪಾಲನೆಗೋಸ್ಕರ ಮತ್ತೊಂದು ವಿವಾಹವಾಗುವ ಅನಿವಾರ್ಯತೆ ಎದುರಾದಾಗ ,ಮೊದಲ ಪತ್ನಿಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕಾಗಿ ಮತ್ತೊಂದು ವಿವಾಹ ವಾಗುವ ಸ್ಥಿತಿ ಹೀಗೆ ಬಹುಪತ್ನಿತ್ವ ವ್ಯವಸ್ಥೆ ಹಲವಾರು ಕಾರಣಗಳಿಂದಾಗಿ ಅಸ್ತಿತ್ವದಲ್ಲಿತ್ತು.ಅದೇ ರೀತಿ ಬಹುಪತಿತ್ವ ವ್ಯವಸ್ಥೆಯು ಅಸ್ತಿತ್ವದಲ್ಲಿತ್ತು .ಉದಾಹರಣೆಗಾಗಿ ಮಹಾಭಾರತದಲ್ಲಿ ಪಾಂಡವರನ್ನು ವಿವಾಹವಾದ ದ್ರೌಪದಿ .ಅಲ್ಲದೆ ಯುದ್ಧದಂತಹ ಸಂದರ್ಭದಲ್ಲಿ ಪತಿ ಮರಣ ಹೊಂದಿದಾಗ ಅಬಲೆಯಾದ ಹೆಣ್ಣು ಮತ್ತೊಬ್ಬ ಪುರುಷನನ್ನು ವಿವಾಹವಾಗುವಂತಹ ಅನಿವಾರ್ಯ ಸ್ಥಿತಿ ಎದುರಾದಾಗ ಮಾತ್ರ ಬಹುಪತಿತ್ವ ವಿವಾಹದ ಸ್ಥಿತಿಯನ್ನು ಕಾಣುತ್ತೇವೆ . ಆದರೆ ಆಧುನಿಕ ಸಮಾಜದಲ್ಲಿ ಬಹುಪತ್ನಿತ್ವ ಮತ್ತು ಬಹುಪತ್ನಿತ್ವ ವಿವಾಹಕ್ಕೆ  ಹಲವಾರು ರೀತಿಯ ಕಾನೂನಿನ ಚೌಕಟ್ಟಿನ ನಿಬಂಧನೆಗಳಿವೆ.ಇತ್ತೀಚಿನ ಸಂದರ್ಭದಲ್ಲಿ ಸಾಕಷ್ಟು ಸುಧಾರಿತ ನಾಗರಿಕ ಸಮುದಾಯ ಬಹುಪತ್ನಿತ್ವಕ್ಕಿಂತಲೂ ಏಕಪತ್ನಿತ್ವ ವೈವಾಹಿಕ ಜೀವನವನ್ನೇ ಇಷ್ಟಪಡುತ್ತಿದೆ.ಅದಕ್ಕೆ ರಾಮಾಯಣದ ಶ್ರೀರಾಮಚಂದ್ರನ ಆದರ್ಶದ ಜೀವನ ಮೌಲ್ಯಗಳು ಕಾರಣವಾಗಿರಬಹುದು.ಅಲ್ಲದೆ ಈಗಿನ ಜನರ  ಜೀವನ ಶೈಲಿಯ ವಿಧಿವಿಧಾನಗಳು  ವಿಭಿನ್ನವಾಗಿವೆ . ಮಾನವನಾಗಿ ಜನಿಸಿದ ಮೇಲೆ ಏನನ್ನಾದರೂ ಸಾಧಿಸಬೇಕೆಂಬ ಛಲ, ಉತ್ಕಟ ಇಚ್ಛೆ ಯನ್ನು ಇಂದಿನ ಕೆಲ ಯುವ ಪೀಳಿಗೆಯಲ್ಲಿ ಕಾಣುತ್ತಿದ್ದೇವೆ. ಇನ್ನೂ ಕೆಲ ಯುವ ಪೀಳಿಗೆ ಸ್ವೇಚ್ಛಾಚಾರವೇ ಜೀವನವೆಂದು ಬದುಕುತ್ತಿರುವುದನ್ನು ಕಾಣುತ್ತಿದ್ದೇವೆ.ಇದರಿಂದಾಗಿ ವಿವಾಹವೆಂಬ ಪವಿತ್ರ ಸಂಸ್ಕಾರ ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ .ಒಟ್ಟಾರೆಯಾಗಿ ವಿವಾಹವೆಂಬ ಪವಿತ್ರ ಸಂಸ್ಕಾರದಿಂದ ಮಾತ್ರ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಬಹುದು .ಹಾಗಂತ ಅವಿವಾಹಿತರು ಸುಖಿಗಳಲ್ಲ ಎಂಬರ್ಥವಲ್ಲ .ಕೆಲವು ಸಾಧಕರು ವೈವಾಹಿಕ ಜೀವನಕ್ಕಿಂತ ತಮ್ಮ ಸಾಧನೆಯಿಂದಲೇ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತಾರೆ .ತಮ್ಮ ಸಾಧನೆಯಲ್ಲಿ ಅವರು ಸುಖ ಸಂತೋಷವನ್ನು ಕಾಣುತ್ತಾರೆ. ವಿವಾಹವೆಂಬುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ವಿಚಾರ .ಗರ್ಭದಾನ ಸಂಸ್ಕಾರದಂಥ ಪವಿತ್ರ ಕಾರ್ಯವು ಈ ವಿವಾಹ ಸಂಸ್ಕಾರದ ಮೂಲಕವೇ ನಡೆದರೆ ಸಮಾಜದಲಿ ಉತ್ತಮ ವಾತಾವರಣ ನಿರ್ಮಾಣಗೊಳ್ಳುತ್ತದೆ. ಇಲ್ಲದಿದ್ದರೆ ಸ್ವೇಚ್ಛಾಚಾರ ಅತಿಯಾಗಿ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ನಮ್ಮ ಪೂರ್ವಜರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟ ನಷ್ಟಗಳನ್ನು ಮುಂದಿನ ಪೀಳಿಗೆ ಅನುಭವಿಸಬಾರದು ಎಂಬ ಸದುದ್ದೇಶದಿಂದ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಈ ಹದಿನಾರು ಸಂಸ್ಕಾರಗಳನು ಮಕ್ಕಳಿಗೆ  ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕಾಗಿ  ದಾರಿ ದೀಪವಾಗಿದ್ದಾರೆ ಎಂದರೂ ತಪ್ಪಿಲ್ಲ. ವಿವಾಹವೆಂಬ ಸಂಸ್ಕಾರದ ಬಗ್ಗೆ ನನ್ನ ಅರಿವಿಗೆ ತಿಳಿದಂತೆ ನಾನು ಬರೆದಿರುವೆ.
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಳಕಲ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...