ಶುಕ್ರವಾರ, ಸೆಪ್ಟೆಂಬರ್ 17, 2021

ಬದುಕು ಸಂತೆ ಬಂಡಿ (ಪುಸ್ತಕ ವಿಮರ್ಶೆ) - ವಾಣಿ ಮಹೇಶ್, ಸಾಹಿತಿಗಳು - ಹಾಸನ.

ಬದುಕು ಸಂತೆ ಬಂಡಿ (ಪುಸ್ತಕ ವಿಮರ್ಶೆ)


     ಬದುಕು ಸಂತೆ ಬಂಡಿಯಲ್ಲಿ ನೇರವಾಗಿ ಕಥೆಗಾರ ತಮ್ಮ ಬದುಕಿನ ಚಿತ್ರಣವನ್ನೇ ಸ್ವ ಅನುಭವದಿಂದ ಚಿತ್ರಿಸಿದ್ದಾರೇನೋ ಎಂಬಂತಹ ಭಾವನೆಗಳು ಬರುವುದುಂಟು. ಹೌದು ಅವರದು ಸ್ವ ಅನುಭವದ ಕಥೆಯೇ. ಬದುಕು ಸಂತೆ ಬಂಡಿ ಅವರ ಸ್ವಂತ ಊರಾದ ಗೊರೂರಿನಲ್ಲಿ ಅಣೆಕಟ್ಟು ಕಟ್ಟುವುದನ್ನು ನೋಡುತ್ತಾ ಅಲ್ಲೇ ನಡೆಯುವ ಸಂತೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾ ಬೆಳೆದು ಬಂದವರು ನಮ್ಮ ಕಥೆಗಾರ ಗೊರೂರು ಅನಂತರಾಜು ಅವರು. 

     ಅವರ ಈ ಕಥೆಯಲ್ಲಿ ಬದುಕಿನ ವೃತ್ತಿಯನ್ನು ಆಧರಿಸಿ ಅನ್ವರ್ಥ ನಾಮದಿಂದ ಜನ ಯಾವ ಹೆಸರಿನಿಂದ ಕರೆಯುತ್ತಿದ್ದರು ಎಂಬುದನ್ನು ಒಂದು ಹಾಸ್ಯದಂತೆ ವಿವರಿಸುತ್ತಾರೆ. ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದ ತಂದೆಯವರನ್ನು ಮೆಣಸಿನಕಾಯಿ ಬಸವಣ್ಣ , ಬೆಲ್ಲದ ವ್ಯಾಪಾರ ಮಾಡುತ್ತಿದ್ದ ದೊಡ್ಡಪ್ಪನನ್ನು ಬೆಲ್ಲದ ರಾಮಣ್ಣ ಎಂದು ಜನ ಹೇಗೆ ಕರೆಯುತ್ತಿದ್ದರು ಜೊತೆಗೆ ಅಕ್ಕಿ ವ್ಯಾಪಾರಿಗೆ ಅಕ್ಕಿ ಪಾಪಣ್ಣ , ಪುರಿ ವ್ಯಾಪಾರಿಗೆ ಪುರಿ ಪರಮೇಶ ಹೀಗೆ ತಾವು ಕಂಡಂತಹ ಹೆಸರುಗಳನ್ನು ಇಲ್ಲಿ ಚಿತ್ರಿಸುತ್ತಾ ಹೋಗುತ್ತಾರೆ. ಕಥೆಗಾರನ ಬರಹಕ್ಕೆ ಇಂಥದ್ದೇ ವಸ್ತು ವಿಷಯವೆಂಬ ಪರಿಧಿ ಇಲ್ಲ. ಇಲ್ಲಿ ಇವರೂ ಸಹ ಹತ್ತು ಹಲವು ವಿಷಯಗಳನ್ನು ಒಳಗೊಂಡಂತೆ ಕಥೆಗಳನ್ನು ಹೆಣೆಯುತ್ತಾ ಹೋಗುತ್ತಾರೆ.

     ಈ ಕಥಾ ಹಂದರದಲ್ಲಿ ಒಂದು ನನಗೆ ಬಹಳ ಇಷ್ಟವಾದ ಕಥೆ ಎಂದರೆ ಕರಿಯಪ್ಪನ ಟೆಂಟ್ ಸಿನಿಮಾದ ರೀಲು ಪುರಾಣ . ಇದು ಪರಮಾತ್ಮ ಒಳಗೆ ಹೋದ್ರೆ ಎಂಥಾ ಮಜಾ. ಬಾರ್ನಲ್ಲಿ ಕುಳಿತು ಬೀರು ಕುಡಿಯುತ್ತಾ ಕರಿಯಪ್ಪ ಸ್ವರ್ಗಕ್ಕೆ ಏಣಿ ಹಾಕೋದನ್ನು ವಿವರಿಸುತ್ತಾರೆ. 

     ಆ ಸಮಯದಲ್ಲಿ ಚಪಲಾನಂದ ಸ್ವಾಮಿಗಳು ಸಿಕ್ಕಿ ಏನ್ ಕರಿಯಪ್ಪ ಎಲ್ಲಿಗ್ಹೊರಟೆ? ಎಂದು ಕೇಳಿದಾಗ ಕರಿಯಪ್ಪ ತನ್ನ ವಯಸ್ಸಿನ ಪ್ರಭಾವದಿಂದ ಉದುರಿ ಹೋದ ಹಲ್ಲುಗಳನ್ನು ನೆನೆದು ಕಟ ಕಟನೆ ಕಡಿಯಲಾರದೆ , ಸಿಟ್ಟು ತೋರಲಾರದೆ ಅವಸ್ಥೆ ಪಡುತ್ತಾರೆ. ಈ ಸನ್ನಿವೇಶ ಬಹಳ ಹಾಸ್ಯದಿಂದ ಕೂಡಿದೆ. 

     ಇವೆಲ್ಲವೂ ಕೂಡ ಎಲ್ಲರ ಜೀವನದಲ್ಲೂ ಸಾಮಾನ್ಯವಾಗಿ ನಡೆಯುವ , ನಡೆಯುತ್ತಿರುವ ವಿಷಯಗಳಾದರೂ ಅದನ್ನು ಹಾಸ್ಯವಾಗಿ ಯಾವ ರೀತಿ ತೆಗೆದುಕೊಂಡು ಹೋಗಬೇಕೆಂಬುದು ಕಥೆಗಾರನ ಕಲೆಯಾಗಿರುತ್ತದೆ. ಈ ವಿಷಯದಲ್ಲಿ ಗೊರೂರು ಅನಂತರಾಜು ಅವರನ್ನು ಮೆಚ್ಚಲೇಬೇಕು. ಕಲೆ ಅವರ ಬೆನ್ನು ಹತ್ತಿದೆ. ಕೂತರೂ ಕೂರಗೊಡದೆ , ನಿಂತರೂ ನಿಲಗೊಡದೆ ಸತತವಾಗಿ ಬರೆಯಿಸುತ್ತಲೇ ಇರುತ್ತದೆ.

    ಮನೆಗೆ ಯಾರಾದರೂ ಇದ್ದಕ್ಕಿದ್ದಂತೆ ಬಂದಾಗ ಅನಿಸುವುದು ಒಂದು ನಡೆಯುವುದು ಇನ್ನೊಂದು. ಅದು ಅಚ್ಚರಿ ಸಂಗತಿ. ಕೆಲವೊಮ್ಮೆ ನೋವಿನ ಸಂಗತಿ ಕೂಡ ಹೌದು. ತಲೆ ತಗ್ಗಿಸುವಂತಹ ವಿಚಾರ ಕೂಡ ನಡೆಯುವುದುಂಟು. ಅದರಲ್ಲಿ ಕಾಡು ಕರೆದಿದೆ ಊರಿಗೆ ಬಾ ಎಂಬ ಕಥೆಯಲ್ಲಿ ಬಸವನ ಹಳ್ಳಿಯಿಂದ ಬಂದ ರಾಮಣ್ಣನನ್ನು ಕಂಡು ಇದ್ದಕ್ಕಿದ್ದಂತೆ ಬಂದಿದ್ದಾರೆ. ಎಲ್ಲೋ ಸಾಲ ಕೇಳಲು ಬಂದಿರಬಹುದು ಎಂದು ಅನುಮಾನಿಸಿದ ಅವರಿಗೆ ದೊಡ್ಡಮ್ಮನ ಅಂತಿಮ ಘಳಿಗೆಯ ವಿಷಯ ತಿಳಿದು ದುಃಖವಾಗುತ್ತದೆ. ಅವರನ್ನು ಬಂದು ಒಮ್ಮೆ ನೋಡಿ ಹೋಗಲು ಹೇಳಿದ ರಾಮಣ್ಣನನ್ನು ಅನುಮಾನಿಸಿದೆನಲ್ಲಾ ಎಂದು ಖೇದವಾಗುತ್ತದೆ. ಈ ಕಥೆಯಲ್ಲಿ ತಾನು ದೊಡ್ಡಮ್ಮನನ್ನು ನೋಡಲು ಹೋದಾಗ ಅಲ್ಲಿ ನಡೆದ ಸಂಗತಿಗಳು , ಇದ್ದಕ್ಕಿದ್ದಂತೆ ಚೇತರಿಸಿಕೊಂಡ ದೊಡ್ಡಮ್ಮ ನಂತರ ಒಂದು ವಾರದಲ್ಲಿಯೇ ತಮ್ಮನ್ನೆಲ್ಲಾ ಅಗಲಿದ ಆಕೆಯನ್ನು ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ. 

     ಕಥೆಯನ್ನು ಹೆಣೆಯುವ ರೀತಿ ಇಲ್ಲಿ ಎಲ್ಲರೂ ಮೆಚ್ಚುವಂಥದ್ದು. ಬಹಳ ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆಗಳಾಗಿವೆ. ಇದರಲ್ಲಿ ಹೆಚ್ಚು ಕಥೆಗಳು ಮಡದಿ, ಕುಟುಂಬ ಇಂತಹವೇ ವಸ್ತು ವಿಷಯಗಳನ್ನು ಹೊಂದಿ ಓದುಗರಿಗೆ ಮನ ಮುಟ್ಟುವಂತಿದೆ.

- ವಾಣಿ ಮಹೇಶ್, ಸಾಹಿತಿಗಳು - ಹಾಸನ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...