ವಾರದ ಸಂತೆ
ನೋಡು ಇಂದು ಬಂದಿತಂತೆ ಸಂತೆಯ ದಿನ
ದುಡಿದ ಹಣ ಕೈ ಸೇರಿತು ಎಲ್ಲ ಅಮ್ಮನ
ಕಾಡಿ ಕಾಡಿ ಬೇಡಿದೆವು ತಿಂಡಿ ತಾರೆನೆ
ಹಿಡಿಕೆಯಷ್ಟು ಬರದು ಅಲ್ಲಿ ತರುವುದೇನನೆ
ಪೇಟೆಗೋಗೊ ಬಸ್ಸು ಹತ್ತಿ ಅಮ್ಮ ಹೊರಟಳು
ಸೀಟು ಇರದೆ ನಿಂತು ಸಾಗಿ ಸಂತೆ ಮುಟ್ಟಲು
ರೇಟು ಕೇಳಿ ಹೌಹಾರಿ ಕೆಲವೆ ಕೊಂಡಳು
ಏಟು ತುಟ್ಟಿ ಬಡವ ಬದುಕ ಎಂದು ನೊಂದಳು
ತುಂಬುತಿತ್ತು ಕೈಚೀಲ ಅಂದು ದುಡ್ಡಿಗೆ
ನಂಬದಂತ ಕಾಲವೀಗ ಕೊಳೆವುದಂದಿಗೆ
ತುಂಬ ಆಸೆಗಣ್ಣಿನಿಂದ ನಾವು ಕಾಯುತಿದ್ದೆವು
ಅಮ್ಮ ಬರಲು ತಡವಾದರೆ ಹೆದರುತಿದ್ದೆವು
ತನ್ನ ಕುಡಿಯ ತಿಂಡಿಗೆಂದೆ ಮಿತದಿ ಕೊಂಡಳು
ಇನ್ನೇಳು ದಿನವು ಬೇಗ ಮುಗಿಯಲೆಂದಳು
ಸಣ್ಣದಾಗಿ ತಿಂಡಿ ಕೊಂಡು ಗಂಟಲಿಟ್ಟಳು
ಕಣ್ಣೀರನು ಸೆರಗಿಗೊರಸಿ ಗಂಟು ಹೊತ್ತಳು
ಮನಸಾರೆ ಕೊಂಡು ತಿನುವ ದಿನವು ಬರುವದೆ
ಕನಸೇಕೆ ನನಸಾಗದು ಕೂಗು ಕೇಳದೆ
ಸಂತೆ ಮುಗಿದ ಮೇಲೆ ಅಲ್ಲೆ ಹೋಗಬೇಕಿದೆ
ಚಿಂತೆಯಿರದ ಬಿಡುಗಡೆಯು ನಮಗೆ ಸಿಗುವುದೆ
- ಶ್ರೀ ತುಳಸಿದಾಸ ಬಿ ಎಸ್ ಶಿಕ್ಷಕರು ಗೊರೇಬಾಳ ಕ್ಯಾಂಪ್ ಸಿಂಧನೂರು, ರಾಯಚೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ