ಶನಿವಾರ, ಸೆಪ್ಟೆಂಬರ್ 11, 2021

ಶಿಕ್ಷಕರ ದಿನಾಚರಣೆ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.

ಶಿಕ್ಷಕರ ದಿನಾಚರಣೆ

ಸೆಪ್ಟೆಂಬರ್ ೫ ರಂದು ಇಡೀ ರಾಷ್ಟ್ರಾದ್ಯಂತ ಎಲ್ಲರೂ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದೆವು .ಆ ಆಚರಣೆಗೆ  ಕಾರಣಿಭೂತರು ಡಾ। ಸರ್ವಪಲ್ಲಿ ರಾಧಾಕೃಷ್ಣನ್ ರವರು. 
ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರ, ತತ್ವಜ್ಞಾನ ಮತ್ತು ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ೧೯೧೮ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ, ೧೯೩೧ ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ,ಭಾರತದ ಉಪರಾಷ್ಟ್ರಪತಿಯಾಗಿ, ೧೯೬೨ ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ, ಆಯ್ಕೆಯಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸಪ್ಟೆಂಬರ್ ೫ ನ್ನು ಪ್ರತಿವರ್ಷ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ .

             ೧೮೮೮ ಸೆಪ್ಟಂಬರ್ ೫ ರಂದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಜನಿಸಿದ ಇವರ ಮಾತಾಪಿತೃ ಗಳೆಂದರೆ ಸೀತಮ್ಮ ಮತ್ತು ವೀರಸ್ವಾಮಿ. ಮಾತಾ ಪಿತೃಗಳ ಪ್ರೀತಿಯ ನಾಮಕರಣ ರಾಧಾಕೃಷ್ಣನ್. *ಸರ್ವಪಲ್ಲಿ* ಎಂಬ ಮನೆತನದ ಹೆಸರಿನಿಂದ ಗುರುತಿಸಿಕೊಂಡು ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲ ಹೊಂದಿದ್ದ ತಂದೆತಾಯಿಯರು ಮಗನ ವಿದ್ಯಾಭ್ಯಾಸದ ಹಂಬಲ ಕಂಡು ಪ್ರೋತ್ಸಾಹಿಸಿದರು.೧೬ ನೇ ವಯಸ್ಸಿಗೆ ಶಿವಕಾಮಮ್ಮ ಎಂಬ ವಧುವಿನೊಂದಿಗೆ ವಿವಾಹ ನೆರವೇರಿಸಿದರು. ತತ್ವಜ್ಞಾನದ ಮೇಲೆ ಬಿ.ಎ. ಮತ್ತು ಎಂ.ಎ. ಪದವಿ ಪಡೆದು ೧೯೦೯ ರಲ್ಲಿ ಮಡ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು.೧೯೧೮ ರಲ್ಲಿ "ದಿ ಫಿಲಾಸಫಿ ಆಫ್ ರವೀಂದ್ರನಾಥ್ ಟ್ಯಾಗೋರ್" ಎಂಬ ಮೊದಲ ಪುಸ್ತಕ  ಬರೆದರು.

            ಶಿಕ್ಷಕ ದಿನಾಚರಣೆಯ ಉದ್ದೇಶ ಗುರು ಎಂಬ ಪದಕ್ಕೆ ಇರುವ ಮೌಲ್ಯವನ್ನು ತಿಳಿಸುವುದು. ಗುರು ಎಂಬ ಪದಕ್ಕೆ ಸಂಸ್ಕೃತದಲ್ಲಿ' ಗು' ಎಂದರೆ ಅಂಧಕಾರ ಮತ್ತು 'ರು' ಎಂದರೆ ಬೆಳಕು. ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನಡೆಗೆ ಕರೆದೊಯ್ಯುವ ಶಕ್ತಿಯನ್ನು ಹೊಂದಿದ ವ್ಯಕ್ತಿಯೇ ಗುರು.'ಗು' ಕಾರೋಂಧಕಾರತಾವತ್ 'ರು' ಕಾರೋ ತನ್ನಿವಾರಕ:  ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಎಂದಾಗುತ್ತದೆ. ಅಂತಹ ಮಹಾನ್ ಚೇತನಗಳ ಸಾಲಿಗೆ ನಾವು ಶ್ರೀ ಆದಿಶಂಕರಾಚಾರ್ಯ ,ಶ್ರೀ ಚೈತನ್ಯಪ್ರಭು, ಶ್ರೀ ರಾಮಕೃಷ್ಣಪರಮಹಂಸ, ಶ್ರೀ ಅರಬಿಂದೋಘೋಷ್, ಶ್ರೀ ರಮಣ ಮಹರ್ಷಿ, ಸ್ವಾಮಿವಿವೇಕಾನಂದ ಇತ್ಯಾದಿಯಾಗಿ ಹೇಳಬಹುದು .ಅಂತಹ ಪೂಜನೀಯರ ಸಾಲಿಗೆ ಗೌರವ ಡಾಕ್ಟರೇಟ್, ಆರ್ಡರ್ ಆಫ್ ಮೈರಿನ,  ನೈಟ್ ಆಫ್ ದಿ ಆರ್ಮಿ, ಕೇಂದ್ರ ಸಾಹಿತ್ಯ ಅಕಾಡಮಿ, ಬ್ರಹ್ಮವಿದ್ಯಾ ಭಾಸ್ಕರ, ಇತ್ಯಾದಿಯಾಗಿ ಗೌರವಿಸಲ್ಪಟ್ಟು, ಪುರಸ್ಕಾರ ಪಡೆದ ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನು ಸೇರಿಸಬಹುದಾಗಿದೆ.

       ಇತರರಿಗೆ ಜ್ಞಾನ ಸಾಮರ್ಥ್ಯಗಳು ಅಥವಾ ಮೌಲ್ಯಗಳನ್ನು ಪಡೆಯಲು ಸಹಾಯ ಮಾಡುವ ವ್ಯಕ್ತಿಯನ್ನು ಶಿಕ್ಷಕ ಎನ್ನಬಹುದು. ಶಿಕ್ಷಕ ಎಂಬ ಪದದ ಇನ್ನೊಂದು ಅರ್ಥವೇ ಸೃಜನಶೀಲತೆ ಅಥವಾ ಕ್ರಿಯಾ ಶೀಲತೆ. ಇಂತಹ ಸೃಜನಶೀಲತೆಗೆ ಹೆಸರಾದವರ ಹೆಸರನ್ನು ಸದಾ ನೆನಪಿನಲ್ಲಿಟ್ಟು ಕೊಳ್ಳುವ ದಿನ ಸೆಪ್ಟಂಬರ್ ೫.

ಗುರು ಶಿಷ್ಯರ ಬಾಂಧವ್ಯಕ್ಕೆ ಉದಾಹರಣೆಯಾಗಿ ರಾಧಾಕೃಷ್ಣನ್ ರವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರ ವಿಭಾಗದ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನು ತಿಳಿದ ಕಾಲೇಜಿನ ವಿದ್ಯಾರ್ಥಿಗಳು ಅವರು ದೆಹಲಿಗೆ ಹೊರಡುವ ಸಂದರ್ಭದಲ್ಲಿ ಒಂದು ಸಾರೋಟನ್ನು ಅಲಂಕರಿಸಿ ಅದರಲ್ಲಿ ರಾಧಾಕೃಷ್ಣನ್ ಅವರನ್ನು ಕೂರಿಸಿ ಕುದುರೆಗಳ ಬದಲಿಗೆ ತಾವೇ ಕುದುರೆಗಳಂತೆ, ರೈಲ್ವೇ ನಿಲ್ದಾಣದವರೆಗೂ ಸಾರೋಟನ್ನು ಎಳೆದುಕೊಂಡು ಹೋಗಿ ಭಾವಪೂರ್ಣ ವಿದಾಯ ಹೇಳಿದ ರೀತಿ ಎಂಥವರಿಗೂ ಆನಂದಭಾಷ್ಪ ಹೊಮ್ಮಿಸುವ ಕ್ಷಣವೆಂದು ಹೇಳಬಹುದು .ಅಂತಹ ಗುರು ಶಿಷ್ಯರ ಸಂಬಂಧ ಇಂದು ವಿರಳವೆಂದರೂ ತಪ್ಪಲ್ಲ. ಅದಕ್ಕೆ ಬದಲಾಗುತ್ತಿರುವ ಆದರ್ಶ, ಶಿಕ್ಷಣದ ರೀತಿ -ನೀತಿ ,ಶಿಕ್ಷಕರ ಆದರ್ಶ ರಹಿತ ಜೀವನ ಶೈಲಿ ,ಏನಾದರೂ ಕಾರಣವಾಗಿರಬಹುದು.

       ಹಾಗಂತ ಎಲ್ಲ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದವನ್ನು ದೂಷಿಸುವಂತಿಲ್ಲ. ಸಾವಿರಾರು ಶಿಕ್ಷಕರು ಆದರ್ಶ ಶಿಕ್ಷಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಹಾಗೆಯೇ ಆದರ್ಶ ವಿದ್ಯಾರ್ಥಿಗಳು ಇದ್ದಾರೆ .
          
         ಆದರ್ಶ ಶಿಕ್ಷಕರಲ್ಲಿ ಇರಬೇಕಾದ ಮುಖ್ಯ ಗುಣಗಳೆಂದರೆ ಸಮಯಪಾಲನೆ, ಶಿಸ್ತು, ಪ್ರತಿ ಪಾಠ ಭೋದನೆಯ ಪೂರ್ವತಯಾರಿ, ವಿದ್ಯಾರ್ಥಿಗಳಲ್ಲಿ ಪ್ರೀತಿ ,ಮಮತೆ, ನೈತಿಕ ಮೌಲ್ಯಗಳನ್ನು ಅಳವಡಿಸುವ ಶಿಸ್ತಿನ ಜೀವನ, ದುಶ್ಚಟಗಳಿಂದ ದೂರವಿದ್ದು ಆದರ್ಶ ಪಾಲನೆ, ಇತ್ಯಾದಿ ಗುಣಗಳಿಂದ ಆಕರ್ಷಿತನಾದ ಶಿಕ್ಷಕ ಎಲ್ಲಾ ವಿದ್ಯಾರ್ಥಿಗಳಿಗೂ ನೆಚ್ಚಿನ ಶಿಕ್ಷಕರಾಗಬಹುದು. ಪ್ರಸ್ತುತ ದಿನಮಾನದಲ್ಲಿ ಕೊರೊನಾ ವೈರಸ್ ನಂತಹ ಸೋಂಕಿನಿಂದ ರಕ್ಷಿಸಿಕೊಳ್ಳುವ ವಿಧಾನ ತಿಳಿಸಿದಂತೆ, ಮುಂಬರುವ ದಿನಮಾನಗಳಲ್ಲಿ ವಿಭಿನ್ನ ರೀತಿಯ ಸಾಂಕ್ರಾಮಿಕ ರೋಗಗಳು ಎದುರಾದರೆ ಅವುಗಳನ್ನು ಎದುರಿಸಲು ಸ್ವಚ್ಚತೆ ಮತ್ತು ಶಿಸ್ತಿನ ಜೀವನದ ಅವಶ್ಯಕತೆಯನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಜವಾಬ್ದಾರಿಯೂ ಶಿಕ್ಷಕನ ಮೇಲಿದೆ .

     ಶಿಕ್ಷಕರಲ್ಲಿ ಈಗಿನ ವಿದ್ಯಾರ್ಥಿಗಳಿಗೆ ಮೊದಲಿದ್ದ ಭಯ ಭಕ್ತಿ ಇರದೇ ಇರಬಹುದು. ಆದರೆ ವಿದ್ಯೆ ಕಲಿಸಿದ ಗುರುಗಳು ಎನ್ನುವ ಅಭಿಮಾನ ಮಾತ್ರ ಖಂಡಿತಾ ಇದೆ. ಅದಕ್ಕೆ ಉದಾಹರಣೆಯಂತೆ ೨೦೦೭ ರಿಂದ ೨೦೨೧ ರ ವರಗೆ  ಎ.ಸಿ.ಓ.ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ನನಗೆ, ನಾವು ಕಲಿಸಿದ ವಿದ್ಯಾರ್ಥಿಗಳ ಬಗ್ಗೆ ಅತ್ಯುತ್ತಮ ತೃಪ್ತ ಭಾವನೆ ವ್ಯಕ್ತಪಡಿಸುತ್ತೇನೆ. ಅವರಲ್ಲಿ ಹಲವಾರು ಮಕ್ಕಳು ವಿಭಿನ್ನ ಹವ್ಯಾಸಗಳಿಂದ ಕೂಡಿದ್ದು, ತಮ್ಮದೇ ಆದ ಗುರಿ ಆದರ್ಶಗಳ ಬಗ್ಗೆ ಚರ್ಚೆ ನಡೆಸುತ್ತಾ ಪ್ರತಿವರ್ಷವೂ ಬೀಳ್ಕೊಡುಗೆ ಸಮಾರಂಭದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡು, ನಮ್ಮಿಂದ ಬೀಳ್ಕೊಡುಗೆ ಪಡೆದು ಉನ್ನತ ವ್ಯಾಸಂಗದತ್ತ ಮುಖಮಾಡಿದಾಗ, ಶಾಲೆ ಬಿಟ್ಟ ನಂತರ ಈಗಿನ ಮಕ್ಕಳೆಲ್ಲ ನಮ್ಮನ್ನು ಮರೆಯುತ್ತಾರೆ ಎನ್ನುವ ಭಾವನೆಯಲ್ಲಿ ಪುನಃ ಯಥಾಪ್ರಕಾರ ಹೊಸ ವಿದ್ಯಾರ್ಥಿಗಳಿಗೆ ನಮ್ಮ ಪಾಠಬೋಧನೆ ನಡೆಯುತ್ತಿತ್ತು .೨೦೧೯ ರ ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ  ಎ.ಸಿ.ಓ.ಶಿಕ್ಷಕ ವೃಂದದಿಂದ  ಶಿಕ್ಷಣ ಪಡೆದ ೨೦೧೧-೧೨ನೇ ಸಾಲಿನ ವಿದ್ಯಾರ್ಥಿಗಳ ಗುಂಪೊಂದು ನಮ್ಮ ಮನೆಗೆ ಬಂದು ಒಂದು ಕಾರ್ಡ್ ಕೈಗಿತ್ತರು. ಆ ಕಾರ್ಡಿನ ಶೀರ್ಷಿಕೆ ಆರ್. ಕೆ .ಗ್ರೂಪ್ ಇಳಕಲ್ ಇವರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಾಗಿತ್ತು. ಅದರಲ್ಲಿ ಪ್ರಮುಖವಾಗಿ ೫ ಜನ ಮಹಿಳೆಯರಿಗೆ ಗೌರವಿಸುವ  ಉದ್ದೇಶವಿಟ್ಟುಕೊಂಡು ಕಾರ್ಯಕ್ರಮವನ್ನು ಇಳಕಲ್ಲಿನ ಜ್ಯೋತಿರ್ಭವನದಲ್ಲಿ ಆಯೋಜಿಸಿದ್ದರು .ಮುಖ್ಯ ಅತಿಥಿಗಳ ಸ್ಥಾನದಲ್ಲಿ ವೈದ್ಯೆ ಡಾಕ್ಟರ್ ಶ್ರೀಮತಿ ಚೇತನಾ ಎನ್. ಶಾವಿ, ಪೊಲೀಸ್ ಇಲಾಖೆಯ ಮುಖ್ಯ ಪೇದೆ ಶ್ರೀಮತಿ ಶೋಭಾ ಬಿ. ಮೇಟಿ, ಕೆ.ಎಸ್. ಆರ್ .ಟಿ.ಸಿ ಯ ಕಿರಿಯ ಸಹಾಯಕರು ಶ್ರೀಮತಿ ತ್ರಿವೇಣಿ  ಶ. ಮಂಕಣಿ,ಎಸ್. ವಿ. ಎಂ. ಶಾಲೆಯ  ಹಿರಿಯ ಶಿಕ್ಷಕಿ ಶ್ರೀಮತಿ ಸಂಗಮ್ಮ ಬಿ. ಲಿಂಗಾರೆಡ್ಡಿಮತ್ತು ನನ್ನ ಹೆಸರುಗಳಿದ್ದವು. ಅತಿಥಿಗಳ ಸ್ಥಾನದಲ್ಲಿ ಕುಳಿತುಕೊಳ್ಳುವ ಅರ್ಹತೆ ನನಗಿದೆಯೇ ?ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತ, ಮಕ್ಕಳ ಮನಸಿಗೆ ನೋವಾಗಬಾರದೆಂದು ಒಪ್ಪಿಕೊಂಡೆ .ಸಾಯಂಕಾಲ 6ಗಂಟೆಯ ಸಮಯ ಮಕ್ಕಳೆಲ್ಲ ಸಂಭ್ರಮದಿಂದ ಬಂದು ನನ್ನನ್ನು ಕರೆದುಕೊಂಡು ಹೋದರು. ಆ ವಾತಾವರಣ ನೋಡಿ ಕ್ಷಣಕಾಲ ನಾನು ಭಾವುಕಳಾದೆ ಏಕೆಂದರೆ ಆರ್. ಕೆ. ಗ್ರೂಪ್ ಎಂದು ಗುರುತಿಸಿಕೊಂಡ ಆ ಮಕ್ಕಳಲ್ಲಿ ಅಮರೇಶ ಜಗತಿ, ಧನರಾಜ್ ಬಣ್ಣದ, ಮಂಜುನಾಥ ರೄಾವಣಕಿ ,ರಾಘವೇಂದ್ರ ಕೊಂಗಾರಿ, ಮಹಂತೇಶ್ ಗೌಡರ್ ,ಬುಡ್ಡಣ್ಣ ಪೂಲಪಾಟ್ಲಿ ,ಬಸವರಾಜ ಹಳದೂರ ಸಂಗಮೇಶ  ಬೆಳಕಲ್ಲ, ಶಿವರಾಜ ಗದ್ದಿ ಇನ್ನೂ ಅನೇಕ ವಿದ್ಯಾರ್ಥಿಗಳು ಅತ್ಯಂತ ಗೌರವಪೂರ್ವಕವಾಗಿ ಹೂವಿನ ಹಾಸಿಗೆಯ ಮೇಲೆ ನಮ್ಮನ್ನೆಲ್ಲಾ ನಡೆಸಿಕೊಂಡು ಪುಷ್ಪಗಳನ್ನು ನಮ್ಮ ಐವರು ಮಹಿಳೆಯರ ಮೇಲೆ ಹಾಕುವ ಮೂಲಕ, ನಮಗಾಗಿ ನಿಗದಿಪಡಿಸಿದ ಆಸನದಲ್ಲಿ ಕುಳಿತುಕೊಳ್ಳಲು ಹೇಳಿದಾಗ, ನಮಗೆ ತಿಳಿಯದಂತೆ ಆ ವಿದ್ಯಾರ್ಥಿಗಳ ಬಗ್ಗೆ ಅಭಿಮಾನ ಬೆಳೆಯಿತು ."ಭೂಮಿಗೆ ಬಿದ್ದ ಬೀಜ ಎದೆಗೆ ಬಿತ್ತಿದ ಅಕ್ಷರ "ಒಂದಲ್ಲ ಒಂದು ದಿನ ಫಲ ಕೊಡುತ್ತದೆ ಎನ್ನುವುದಕ್ಕೆ ಸಾಕ್ಷಿಯಂತಿತ್ತು ಆ ಕ್ಷಣ .ಆ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ತಮ್ಮ ತಾಯಂದಿರು ಮತ್ತು ಅಕ್ಕ ತಂಗಿಯರನ್ನು ಕರೆದುಕೊಂಡು ಅವರಿಗೆ ವಿಶೇಷವಾದ ಹೊಸ ಪ್ರಪಂಚದ ಪರಿಚಯ ಮಾಡಿಕೊಡುವ ಮೂಲಕ, ತಮ್ಮ ತಾಯಂದಿರಿಂದ ನಮಗೆ ಗೌರವಿಸುವ ಕಾರ್ಯಕ್ರಮ ನೆರವೇರಿಸಿದರು. ಇಲ್ಲಿ ನಾನೇನು ಸಾಧಕಿಯಾಗಿರಲಿಲ್ಲ . ಆದರೆ ಗುರುಗಳನ್ನು ಗೌರವಿಸಬೇಕು ಅನ್ನುವ ಸಂಸ್ಕಾರ ಕಲಿತ ಮಕ್ಕಳ ಕಾರ್ಯಕ್ರಮ ಕಂಡು ಪುಳಕಿತಳಾದೆ. ಅದರೊಂದಿಗೆ ಔತಣದ ಸವಿಯನ್ನು ಉಣ ಬಡಿಸಿ ನಮಗೆ ಬೀಳ್ಕೊಡುಗೆ ನೀಡಿದ ಆ ಮಕ್ಕಳ ಆದರಾತಿಥ್ಯ ಕಂಡು ಕಣ್ಣಂಚಿನಲ್ಲಿ ಆನಂದಭಾಷ್ಪ ಹೊರಹೊಮ್ಮಿತು. ಎಲ್ಲ ವಿದ್ಯಾರ್ಥಿಗಳು ತಪ್ಪು ಹೆಜ್ಜೆ ಇಡುತ್ತಿಲ್ಲ ಎಲ್ಲೋ ಕೆಲವರು ದಾರಿ ತಪ್ಪುತ್ತಿದ್ದಾರೆ ಅಂದರೆ ಇಡೀ ವಿದ್ಯಾರ್ಥಿ ಸಮುದಾಯ ದೂಷಿಸುವುದು ತಪ್ಪು ಎಂಬ ಜಾಗೃತಿ ಮೂಡಿಸಲು ಇದೊಂದು ನಿದರ್ಶನವಾಗಿತ್ತು .ಇಲ್ಲಿ ಇರುವಂತಹ ಎಲ್ಲಾ ವಿದ್ಯಾರ್ಥಿಗಳು ಶ್ರೀಮಂತ ಕುಟುಂಬದವರಲ್ಲ, ಅವರಲ್ಲಿ ಬಡಕುಟುಂಬದಲ್ಲಿದವರು ಇದ್ದರು. ಆ ವಿದ್ಯಾರ್ಥಿಗಳೆಲ್ಲ ವಿಭಿನ್ನ ವೃತ್ತಿಗಳಲ್ಲಿ ತೊಡಗಿದ್ದರು. ಅವರಲ್ಲಿ ಒಬ್ಬ ವಿದ್ಯಾರ್ಥಿ 'ಹೂ'ವನ್ನು ಮಾರುವ ಕಾಯಕದಲ್ಲಿ ತೊಡಗಿದ್ದ. ತಾನು ಮಾಡುವ ವೃತ್ತಿ ಕನಿಷ್ಠ ಅಂದುಕೊಂಡು ತಾನು ಮಾಡುತ್ತಿರುವ ವೃತ್ತಿಯ ಬಗ್ಗೆ ಏನನ್ನೂ ಹೇಳದೆ ಸಂಕೋಚವನ್ನು ವ್ಯಕ್ತಪಡಿಸಿದ್ದ. ಆಗ ನಾನು ಹೇಳಿದ್ದೊಂದೇ ಮಾತು .ಯಾವ ವೃತ್ತಿಯೂ ಕನಿಷ್ಠವಲ್ಲ ಪ್ರತಿಯೊಂದು ವೃತ್ತಿ ಶ್ರೇಷ್ಠವೇ .ಅದು ನ್ಯಾಯ ಮತ್ತು ಧರ್ಮದಿಂದ ಕೂಡಿದ್ದರೆ ನೀವು ಮಾಡುವಂತಹ ವೃತ್ತಿಯಲ್ಲಿ ನಿಮಗೆ ಕೀಳರಿಮೆ ಬೇಡ. ಪ್ರತಿಯೊಬ್ಬ ವ್ಯಕ್ತಿಯೂ ಸಹ ಗೌರವಿಸಲ್ಪಡುವಂಥ ಒಂದು ವಸ್ತು ಹೂವು .ಅಂತಹ ಪವಿತ್ರ 'ಹೂ'ವನ್ನು ಮಾರುವಂತಹ ಕಾಯಕ ಕನಿಷ್ಟವೇನಲ್ಲ ಎಂದು ಆ ವಿದ್ಯಾರ್ಥಿಗೆ ತಿಳಿಹೇಳಿದೆ.

              ಗುರುಮಾತೆಯರಿಗೆ ಮಾತೃ ಸ್ಥಾನವನ್ನು  ನೀಡಿದ ಮತ್ತೊಬ್ಬ   ವಿದ್ಯಾರ್ಥಿಯನ್ನು ಈ ದಿನ ನಾನು ನೆನೆಯಲೇ ಬೇಕು .ಎ.ಸಿ.ಓ. ಶಿಕ್ಷಣ ಸಂಸ್ಥೆಯಲ್ಲಿ ಗುರುಮಾತೆಯರಾಗಿ  ಕಾರ್ಯನಿರ್ವಹಿಸಿದ ಹಲವಾರು ಶಿಕ್ಷಕಿಯರಲಿ ಅನುರಾಧಾ ಅರಳಿಕಟ್ಟಿ ಹಾಗೂ ನಾನು ಸಹ.ಸಾಗರ್ ಕುಂಬಾರ ಎಂಬ ವಿದ್ಯಾರ್ಥಿಯೊಬ್ಬ ಕಳೆದ ೭ ವರ್ಷಗಳಿಂದ ತನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಮರೆಯದೆ ಪ್ರತಿ ವರ್ಷವೂ ಶಿಕ್ಷಕರ ದಿನಾಚರಣೆಯಂದು  ನಮ್ಮಿಬ್ಬರಿಗೆ ಮಾತೃ ಸ್ಥಾನ ನೀಡಿ ,ಸೀರೆಯನ್ನು ಉಡುಗೊರೆಯಾಗಿ ಕೊಡುತ್ತಿರುವುದು ವಿಶೇಷ.ಈ ರೀತಿಯ ಉಡುಗೊರೆಗಳನ್ನು ಕೊಡುವುದು ತಪ್ಪು ಎಂದು ಎಷ್ಟು ಹೇಳಿದರೂ ಆ ವಿದ್ಯಾರ್ಥಿಯ ಅಚಲ ನಿರ್ಧಾರ ,ನಿಮ್ಮ ಹಿತನುಡಿಗಳಿಂದ ನನಗೆ ಜೀವನದಲ್ಲಿ ಒಳ್ಳೆಯದಾಗಿದೆ. ನನಗೆ ಸಾಧ್ಯವಿರುವಷ್ಟು ಕಾಲ ನಾನು ನಿಮಗೆ ಉಡುಗೊರೆಗಳನ್ನು ನೀಡುತ್ತೇನೆ ಅನ್ಯಥಾ ಭಾವಿಸಬೇಡಿ ಎಂದು ಪ್ರತಿವರ್ಷವೂ ಮರೆಯದೆ, ಶಿಕ್ಷಕರ ದಿನಾಚರಣೆಯ  ದಿನದಂದು ಉಡುಗೊರೆ ನೀಡುತ್ತಿರುವ ಆ ವಿದ್ಯಾರ್ಥಿಯ ನಿಷ್ಕಲ್ಮಶ ಮನಸ್ಸಿಗೆ ಯಾವ ರೀತಿ ತಿಳಿಹೇಳಬೇಕು ತಿಳಿಯದೆ ನಾನು  ಅವರ ತಂದೆಯವರೊಂದಿಗೆ ಮಾತನಾಡಿದಾಗ, ಅವರ ತಂದೆಯವರೂ ಸಹ ತಮ್ಮಿಬ್ಬರ ಹಿತನುಡಿಗಳಿಂದ  ನನ್ನ ಮಗನು   ಒಳ್ಳೆಯ ಮಾರ್ಗದಲ್ಲಿ  ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.ಅವನು ಪ್ರತಿ ವರ್ಷವೂ ನಮಗೆ ತಿಳಿಸಿಯೇ ಉಡುಗೊರೆಗಳನ್ನು ನೀಡುತ್ತಿದ್ದಾನೆ ತಾವು ತಪ್ಪಾಗಿ ಭಾವಿಸದೆ ಗೌರವ ಪೂರ್ವಕವಾಗಿ ಸ್ವೀಕರಿಸಿ ಎಂದು ಹೇಳಿದಾಗ ನಾವು ಮರುತ್ತರ ನೀಡದೆ ಉಡುಗೊರೆಗಳನ್ನು ಸ್ವೀಕರಿಸಿದೆವು.ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಂತೆ ಆ ವಿದ್ಯಾರ್ಥಿಗೂ ಪಾಠಬೋಧನೆ ಮಾಡಿದ್ದೇವೆ .ಯಾವ ಜನ್ಮದ ಋಣಾನುಬಂಧವೋ ತಿಳಿಯದು ಆ ವಿದ್ಯಾರ್ಥಿ ನಮ್ಮಿಬ್ಬರನ್ನು ಮಾತೃಸ್ಥಾನದಲ್ಲಿ ಗೌರವಿಸುತ್ತಿರುವುದನ್ನು ಕಂಡರೆ ಹೆಮ್ಮೆ ಎನಿಸುತ್ತದೆ .ಗುರುವೃಂದವನ್ನು ,ಹಿರಿಯರನ್ನು ಗೌರವಿಸಬೇಕೆಂಬ ಒಂದು ಸಂಸ್ಕಾರವನ್ನು ನಮ್ಮಿಂದ ಕಲಿತ ಎನ್ನುವ ಸಂತೃಪ್ತ ಭಾವನೆ ನಮಗಿದೆ. ಅಹಂಕಾರವಿಲ್ಲದ, ಸೌಮ್ಯ ಸ್ವಭಾವದ ಸಾಗರ ಕುಂಬಾರ್ ಭವಿಷ್ಯದಲ್ಲಿ   ಅತ್ಯುತ್ತಮವಾದದ್ದನ್ನು ಸಾಧಿಸಲಿ, ಅವನಿಂದ  ಹಲವಾರು ಜನರಿಗೆ ಒಳಿತಾಗಲಿ ಎಂದು ಶಿಕ್ಷಕಿಯಾಗಿ ,ಆ ವಿದ್ಯಾರ್ಥಿಯ  ಮಾತೃಸ್ಥಾನದಲ್ಲಿದ್ದು ಶುಭಕೋರುತ್ತೇನೆ.    

      ಅತ್ಯಂತ ಗೌರವಪೂರ್ಣವಾದ ವೃತ್ತಿ ಶಿಕ್ಷಕ ವೃತ್ತಿ .ನನ್ನ ವೃತ್ತಿಜೀವನದುದ್ದಕ್ಕೂ ಸಂತೃಪ್ತಿಯಿಂದ ನಾನು ಶಿಕ್ಷಕಿ ವೃತ್ತಿಯನ್ನು ನಿಭಾಯಿಸಿದ್ದೇನೆ ಎನ್ನುವ ಆತ್ಮತೃಪ್ತಿ ನನಗೆ ಇದೆ. ನನ್ನೊಂದಿಗೆ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಲ್ಲಾ ಗುರುವೃಂದವನ್ನು, ಗುರುಮಾತೆಯರನ್ನು ಈ ಶಿಕ್ಷಕ ದಿನಾಚರಣೆಯ ದಿನ ಸ್ಮರಿಸುತ್ತಾ,  ನನ್ನ ಮುದ್ದು ವಿದ್ಯಾರ್ಥಿ/ವಿದ್ಯಾರ್ಥಿನಿಯರೆಲ್ಲಾ  ಉನ್ನತ ಹುದ್ದೆಗಳಲ್ಲಿರಬಹುದು .ಅವರೆಲ್ಲರಿಗೂ ಹೇಳೋದೊಂದೇ ನೀವೆಲ್ಲೇ ಇದ್ದರೂ ಸಮಾಜಕ್ಕೆ ಪೂರಕವಾದ ಒಳ್ಳೆಯ ಕೆಲಸಗಳಿಂದ ,ತಾಯ್ನಾಡಿಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳಿತನ್ನು ಬಯಸಿ ಕೀರ್ತಿಶಾಲಿಗಳಾಗಿರೆಂದು ಶುಭಕೋರುತ್ತಾ ಸರ್ವಪಲ್ಲಿ ರಾಧಾಕೃಷ್ಣನ್ ರವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ಶಿಕ್ಷಕರ ದಿನಾಚರಣೆಯ ಮಹತ್ವ ಸಾರೋಣ .
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...