ಬುಧವಾರ, ಸೆಪ್ಟೆಂಬರ್ 8, 2021

ಬನ್ನಿ ಮಕ್ಕಳೇ ಶಾಲೆಗೆ ಹೋಗಿ ರಿಪ್ರೇಶ್ ಆಗೋಣ (ಲೇಖನ) - ಶ್ರೀ ಖಂಡ್ಯಾನಾಯ್ಕ್. ಬಿ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಅನಪೂರು, ಯಾದಗಿರಿ.

ಬನ್ನಿ ಮಕ್ಕಳೇ ಶಾಲೆಗೆ ಹೋಗಿ ರಿಪ್ರೇಶ್ ಆಗೋಣ

ಕಳೆದ ಒಂದೂವರೆ ವರ್ಷದಿಂದ ದೇಶದ ಶಿಕ್ಷಣ ವ್ಯವಸ್ಥೆಗೆ ತುಂಬಲಾರದ ನಷ್ಟವಾಗಿದೆ. ಬಲಿಯಾದವರು ಮಕ್ಕಳೇ ತಾನೇ. ಆದರೆ ಮಕ್ಕಳನ್ನೇ ನಂಬಿದ ಕೆಲವು ಜೀವ - ನಿರ್ಜೀವ ವಸ್ತುಗಳಾದ ಕಪ್ಪು ಹಲಗೆಗಳು ಮೌನತಾಳಿ ನಿಂತಿವೆ. ದೇಶದ ಭವಿಷ್ಯವನ್ನು ಬರೆಯುವ  ಸೀಮೆಸುಣ್ಣವು ಡಬ್ಬದಲ್ಲಿ ಬೋರಲು ಮಲಗಿದೆ. ದುಷ್ಟ ಯೋಚನೆಗಳನ್ನು ಅಳಿಸಿ ಹಾಕುತ್ತಿದ್ದ ಡಸ್ಟರ್ ಗಳು ಕೆಲಸವಿಲ್ಲದೆ ಚೆಲ್ಲಾಪಿಲ್ಲಿಯಾಗಿ ಚಿಂದಿಯಾಗಿವೆ. ಮಾಸ್ತರರು ಆಡುವ ಮಾತುಗಳನ್ನು ದಿನನಿತ್ಯ ಕೇಳಿ ಸಂಭ್ರಮಿಸುತ್ತಿದ್ದ  ಕೊಠಡಿಗಳ ಗೋಡೆಗಳು ಬೆದರು ಬೊಂಬೆಗಳಂತೆ ನಿಂತು ಮತ್ತೇ ಮಾಸ್ತರರು ಯಾವಾಗ ಬರುವರೆಂದು ದಾರಿ ಕಾಯುತ್ತಿವೆ.  ಸುಜ್ಞಾನದ  ಸುಗಂಧದ ಗಾಳಿಗೆ ದಾರಿ ಮಾಡಿ ಕೊಡುತ್ತಿದ್ದ ಕಿಟಕಿ,ಬಾಗಿಲುಗಳಿಂದು ವಿಷ ಜಂತುಗಳಿಗೆ ಹೆದರಿ ಅಸಹಾಯಕತೆಯಿಂದ  ಕೈ ಕಟ್ಟಿ ನಿಂತಿವೆ.  ಭಾವೀ  ಪ್ರಜೆಗಳನ್ನು ಸದಾ ತಮ್ಮ ಹೆಗಲ ಮೇಲೆ ಹೊತ್ತು ನಿಂತಿರುತ್ತಿದ್ದ ಬೆಂಚುಗಳು (ಡೆಸ್ಕ) ಧೂಳಿನ ಕಣಗಳಿಂದಾವರಿಸಿ ಸೌಂದರ್ಯ ಕಳೆದುಕೊಂಡಿವೆ.  ದಿನಾಲು ನೂರಾರು ಮಕ್ಕಳಿಗೆ ಸಮಯದ ಸೂಚನೆಯನ್ನು ನೀಡುತ್ತಿದ್ದ ಗಡಿಯಾರಗಳು  ನಮ್ಮ  ಸಮಯವೇ ಸರಿಯಿಲ್ಲವೆಂದು ತಾವೇ ತೀರ್ಮಾನಿಸಿಕೊಂಡಂತಿವೆ.  ಶಿಕ್ಷಕರಿಗೆ ಹಾಗೂ ಮಕ್ಕಳಿಗೆ  ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ನೀಡುತ್ತಿದ್ದ ಢಣ - ಢಣ ಘಂಟೆಯ ನಿನಾದ  ಮುಗಿಲಿನ ಕಡೆ ಮುಖ ಮಾಡಿ ಸೇವಕನ ಬರುವಿಕೆಗಾಗಿ ಶಬರಿಯಂತೆ ಕಾಯುತ್ತಿದೆ.  "ಬಂದಿದ್ದೇನೆ ಗುರುಗಳೆ"  ಎಂದಾಕ್ಷಣ ಹಾಜರಿಯನ್ನು  ಖಾತ್ರಿ ಮಾಡಿಕೊಳ್ಳುತ್ತಿದ್ದ ಹಾಜರಿ ಪುಸ್ತಕಗಳು ನಿರುದ್ಯೋಗಿಗಳಾಗಿ ನಿದ್ರಿಸುತತ್ತಿವೆ. ಜ್ಞಾನದ ಹಸಿವನ್ನು ನೀಗಿಸುವ ಗ್ರಂಥ ಭಂಡಾರಗಳು ಅಲ್ಮಾರದಲ್ಲಿ ಆರಾಮವಾಗಿ ಅವಿತು ಕುಳಿತಿವೆ.  ಅಕ್ಷರದಾಸೋಹದ ಪಗಡೆ,ಪಾತ್ರೆ,ಗಂಗಳ,ಚೊಂಬು ಚಮಚಗಳು ಅಡುಗೆಯವರ ಧ್ವನಿ ಕೇಳಲು ಹಂಬಲಿಸುತ್ತಿವೆ.  

ಉದ್ಯಾನವನದಲ್ಲಿರುವ ಗಿಡ - ಮರ - ಬಳ್ಳಿಗಳು  ದಿನಾಲು  ನೀರುಣಿಸುವ ಮಕ್ಕಳಿಲ್ಲದೆ  ಅನಾಥ ಮಕ್ಕಳಂತೆ ಅಳುತ್ತಿವೆ. ಮಕ್ಕಳ ಪಾದ ಸ್ಪರ್ಶಿಸಿಕೊಂಡು  ಪಾವನವಾಗುತ್ತಿದ್ದ  ಶಾಲಾ ಮೈದಾನ  ಕಳೆಯಿಲ್ಲದೆ ಕಳೆ ತುಂಬಿ  ಸೌಂದರ್ಯವ ಕಳೆದುಕೊಂಡು ಗಹಗಹಿಸಿ  ನಗುತ್ತಿವೆ.   ಹಸಿವು ತೃಷೆ ನೀಗಿಸುವ ಅರವಟ್ಟಿಗೆಗಳು ಅವಕಾಶವಿಲ್ಲದೆ ಪರಿತಪಿಸುತ್ತಿವೆ.  ಆಧುನಿಕತೆಗೆ ಮಕ್ಕಳನ್ನು ತಯಾರಿಸಲು ಸಜ್ಜಾಗಿ ನಿಂತಿದ್ದ ಗಣಕಯಂತ್ರಗಳು  ಜೇಡರ ವಾಸದ ಆಗರಗಳಾಗಿವೆ.  ಆರೋಗ್ಯವನ್ನು ಸದೃಢ  ಮಾಡಲು  ಹಾತೊರೆಯುವ ಆಟದ ಪರಿಕರಗಳು ದೈಹಿಕ ಶಿಕ್ಷಕರ ಕೊಠಡಿಯಲ್ಲಿ ಕಾರ್ಯವಿಲ್ಲದೆ ಕಂಗಾಲಾಗಿವೆ.

ಈ ದೃಶ್ಯಗಳು ಕರೊನಾ ಕಾಲದ ಸಾಕ್ಷಿಯ ಸಂಕೇತಗಳು.  ಆದರೆ  ಕಾಲ ಎಲ್ಲರಿಗೂ ಎಲ್ಲಾ ಸಮಯಕ್ಕೂ ಉತ್ತರಿಸುತ್ತದೆ.  ಈಗ ಶಾಲೆಗಳು ಪ್ರಾರಂಭವಾಗಲು ಸಜ್ಜಾಗಿ ನಿಂತಿವೆ. ತಳಿರು- ತೋರಣಗಳನ್ನು ಕಟ್ಟಿಸಿಕೊಂಡು ಶಾಲೆಯ ಮುಖ್ಯದ್ವಾರ ಸ್ವಾಗತಿಸುತ್ತಿವೆ.  ಜಡ್ಡುಗಟ್ಟಿದ ಮೆದುಳಿಗೆ ಸ್ಥೈರ್ಯ ತುಂಬಲು ಶಿಕ್ಷಕರು ಕಾತುರರಾಗಿದ್ದಾರೆ. ಮಕ್ಕಳ ಮೊಗದಲ್ಲಿ  ನಗೆ ಮೂಡಿಸಿ ಕಲಿಕೆಯ ಹಕ್ಕನ್ನು ಮರುಕಳಿಸಲು  ಸಜ್ಜಾಗಿದ್ದಾರೆ.  ಬನ್ನಿ ಮಕ್ಕಳೇ...... ಶಾಲೆಗೆ ಹೋಗಿ ಅವುಗಳಿಗೆ ಜೀವ ತುಂಬುತ್ತಾ  ನಾವು ಜೀವನದ ಪಾಠವನ್ನು ಕಲಿಯೋಣ......!!!!!
- ಖಂಡ್ಯಾನಾಯ್ಕ್. ಬಿ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಅನಪೂರು, ಯಾದಗಿರಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...