ಕಲ್ಯಾಣ ಕರ್ನಾಟಕಕ್ಕಾಗಿ ಹೋರಾಡಿದ ಹೋರಾಟಗಾರರು
೧೯೪೭ ಆಗಸ್ಟ್ ೧೫ ರಂದು ಜಮ್ಮು ಕಾಶ್ಮೀರ, ಜುನಗಢ ಮತ್ತು ಹೈದ್ರಾಬಾದ್ ಸಂಸ್ಥಾನ ಹೊರತುಪಡಿಸಿ ಇಡೀ ದೇಶವೇ ಸಂಭ್ರಮ ಪಡುತ್ತಿದ್ದರೆ, ಆ ಸಂಭ್ರಮದಲ್ಲಿ ಭಾಗಿಯಾಗುವ ಅವಕಾಶ ಈ ಸಂಸ್ಥಾನದ ಪ್ರಜೆಗಳಿಗಿರಲಿಲ್ಲ. ಮುಖ್ಯವಾಗಿ ಇಂದಿನ ದಿನ ನಾವು ಪುಟ ತಿರುವಿ ಇತಿಹಾಸ ನೋಡಬೇಕಾದಂತಹ ಸಂದಿಗ್ಧ ದಿನ. ಕರ್ನಾಟಕದ ಕೆಲವೇ ಕೆಲವು ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳು ಕರ್ನಾಟಕದಲ್ಲಿದ್ದುಕೊಂಡು ಮಲತಾಯಿ ಧೋರಣೆಯನ್ನು ಅನುಭವಿಸಿದವು. ಆ ಮಲತಾಯಿ ಧೋರಣೆಗೆ ತಿಲಾಂಜಲಿಯಿಟ್ಟು ಮಾತೃ ಸವಿಯನ್ನು ಅನುಭವಿಸದ ಸುದಿನ ಸೆಪ್ಟೆಂಬರ್ ೧೭ .ಹೈದ್ರಾಬಾದ್ ಸಂಸ್ಥಾನ ಭಾರತದ ಒಕ್ಕೂಟಕ್ಕೆ ಸೇರಿದ ಸುದಿನ.
ಅದೊಂದು ಅಮೃತ ಘಳಿಗೆ, ೧೯೪೮ ಸೆಪ್ಟೆಂಬರ್ ೧೨ ರಂದು ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರುರವರು ಸಂಪುಟ ಸಭೆ ಕರೆದರು. ಸಭೆಯಲ್ಲಿ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್, ರಕ್ಷಣಾಮಂತ್ರಿ ಬಲದೇವ್ ಸಿಂಗ್, ಗೋಪಾಲಸ್ವಾಮಿ ಅಯ್ಯಂಗಾರ್, ಜನರಲ್ ಬುಕರ್, ಜನರಲ್ ಕಾರಿಯಪ್ಪ ಮತ್ತು ಏರ್ ಮಾರ್ಷಲ್ ಎಂ.ಎಲ್ . ಹರ್ಷಟ, ಉಪಸ್ಥಿತರಿದ್ದರು .ಸಭೆಯ ಉದ್ದೇಶ ಹೈದ್ರಾಬಾದ್ ಸಂಸ್ಥಾನದ ವಿಮೋಚನೆಗಾಗಿ ಸಶಸ್ತ್ರ ಕ್ರಮ ತೆಗೆದುಕೊಳ್ಳುವ ನಿರ್ಧಾರದ ಕುರಿತಾಗಿತ್ತು. ಜನರಲ್ ಬುಕರ್ ಸಶಸ್ತ್ರ ಕ್ರಮ ವಿರೋಧಿಸುವುದರ ಜೊತೆಗೆ ನಾನು ರಾಜೀನಾಮೆ ಕೊಡುವೆ ಎಂದಾಗ, ಸರ್ದಾರ್ ವಲ್ಲಭಭಾಯಿ ಪಟೇಲರು, ತಾವು ರಾಜೀನಾಮೆ ನೀಡಬಹುದು, ನಾಳೆ ಸಶಸ್ತ್ರ ಕ್ರಮ ಪ್ರಾರಂಭವಾಗುವುದು ಎಂಬ ದಿಟ್ಟ ಉತ್ತರ ನೀಡಿದರು. ಸೆಪ್ಟೆಂಬರ್ ೧೩ ಪೋಲೀಸ್ ಕಾರ್ಯಾಚರಣೆ ಆರಂಭ. ಭಾರತದ ಸೇನೆ ಹೈದರಾಬಾದ ಸಂಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಹೈದರಾಬಾದ್ ಸಂಸ್ಥಾನ ಸೆಪ್ಟೆಂಬರ್ ೧೭ ರಂದು ಭಾರತದ ಒಕ್ಕೂಟಕ್ಕೆ ಸೇರಿತ್ತು. ಸೆಪ್ಟೆಂಬರ್ ಹದಿನೆಂಟು ಭಾರತ ಸೇನೆಯ ಮುಖಂಡ ಜನರಲ್ ಚೌಧರಿಗೆ ಹೈದರಾಬಾದ ಸೇನೆಯ ಮುಖಂಡ ಎಲ್. ಎದ್ರೂಸ್ ಶರಣಾಗತನಾದ. ಹೈದ್ರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ ಹಾಗೂ ಅವನ ರಜಾಕಾರರ ದೌರ್ಜನ್ಯದಿಂದ ಜನತೆಗೆ ವಿಮೋಚನೆ ದೊರೆತ ಅಮೃತಘಳಿಗೆ. ಪ್ರಜೆಗಳ ಅಪೇಕ್ಷೆಯಂತೆ ಭಾರತದ ಒಕ್ಕೂಟಕ್ಕೆ ಹೈದ್ರಾಬಾದ್ ಸಂಸ್ಥಾನ ಸೇರ್ಪಡೆಯಾಗಿತ್ತು. ಆದ್ದರಿಂದ ಸೆಪ್ಟೆಂಬರ್ ಹದಿನೇಳು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸುತ್ತಿದ್ದರು.ಇತ್ತೀಚೆಗೆ "ಕಲ್ಯಾಣ ಕರ್ನಾಟಕ" ಎಂದು ಮರು ನಾಮಕರಣವನ್ನು ಮಾನ್ಯ ಮುಖ್ಯಮಂತ್ರಿಗಳಾಗಿದ್ದ , ಬಿ .ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಮಾಡಲಾಯಿತು. ಇನ್ನು ಮುಂದೆ ಪ್ರತಿ ವರ್ಷವೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಆಚರಿಸುತ್ತಾರೆ .
ಇಂದು ನಾವೆಲ್ಲರೂ ಅತ್ಯಂತ ಅದ್ಧೂರಿಯಿಂದ ಈ ಕಲ್ಯಾಣ ಕರ್ನಾಟಕದ ವಿಮೋಚನಾ ಉತ್ಸವವನ್ನು ಆಚರಿಸುತ್ತಿದ್ದೇವೆ ಎಂದರೆ ಉತ್ಸವಕ್ಕೆ ಕಾರಣರಾದವರ ಬಗ್ಗೆ ಒಮ್ಮೆಯಾದರೂ ಹಿಂತಿರುಗಿ ನೋಡುವುದು ಅವಶ್ಯಕವಲ್ಲವೇ ?.ಯಾಕೆ ಈ ಜಿಲ್ಲೆಗಳು ಮಲತಾಯಿ ಧೋರಣೆಯನ್ನು ಅನುಭವಿಸಿದವು ಎಂಬುದಕ್ಕೆ ಹಲವಾರು ದೇಶಭಕ್ತರ ಹೋರಾಟದ ಫಲದ ನೆತ್ತರು ಹಲವು ಕಥೆಗಳನ್ನು ಹೇಳುತ್ತವೆ .ಸ್ವಾತಂತ್ರ್ಯ ಪೂರ್ವಭಾರತದಲ್ಲಿ ೫೬೫ ಸಂಸ್ಥಾನಗಳಿದ್ದವು. ಅವುಗಳನ್ನು ರಾಜ ಮಹಾರಾಜರು ಮತ್ತು ಅವರ ಮಾಂಡಲಿಕ ಆಳುತ್ತಿದ್ದರು. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ 3ಅವಕಾಶಗಳನ್ನು ಭಾರತೀಯರಿಗೆ ಕಲ್ಪಿಸಿದರು. ೧)ಯಾವುದೇ ಸಂಸ್ಥಾನ ತಾವು ಇಚ್ಛೆಪಟ್ಟರೆ ಭಾರತದ ಒಕ್ಕೂಟಕ್ಕೆ ಸೇರಬಹುದು.೨) ಪಾಕಿಸ್ತಾನಕ್ಕೆ ಸೇರಬಹುದು .೩)ಇಲ್ಲದಿದ್ದರೆ ಪ್ರತ್ಯೇಕವಾಗಿ ಉಳಿಯಬಹುದು, ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ, ಅಧಿಕಾರದ ಆಸೆಯನ್ನು ದೇಶೀಯ ರಾಜರಲ್ಲಿ ಬಿತ್ತಿಹೋದರು. ಹಲವಾರು ಸಂಸ್ಥಾನಗಳು ಭಾರತದ ಒಕ್ಕೂಟಕ್ಕೆ ಸೇರಿದವು .ಆದರೆ ಬ್ರಿಟಿಷರ ಈ ಆಸೆಯೆಂಬ ಬೀಜ ಮೊಳಕೆಯೊಡೆಯುತ್ತಿದ್ದಂತೆ ,ಜಮ್ಮು ಕಾಶ್ಮೀರದ ರಾಜ ಹರಿಸಿಂಗ್, ಪಂಜಾಬ ಪ್ರಾಂತದ ಜುನಾಘಡ ಸಂಸ್ಥಾನದ ನವಾಬ ಮೊಹಮ್ಮದ್ ಮಹಬತ್ಖಾನ್ ಹಾಗೂ ಹೈದ್ರಾಬಾದ್ ಸಂಸ್ಥಾನದ ನಿಜಾಮರಾದ ಮೀರ್ ಉಸ್ಮಾನ್ ಅಲಿಖಾನ್ ಇವರುಗಳು ಆಗಸ್ಟ್ ೧೫ ೧೯೪೭ ರಂದು ಭಾರತದ ಒಕ್ಕೂಟ ಸೇರಲು ನಿರಾಕರಿಸಿ ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿದರು.
ಹೈದ್ರಾಬಾದ್ ನಿಜಾಮ ಪ್ರತ್ಯೇಕವಾಗಿ ಉಳಿಯುವ ಯೋಜನೆಯೊಂದಿಗೆ ಭಾರತ ಸರ್ಕಾರಕ್ಕೆ ಒಂದು ವರ್ಷದ ಕಾಲಾವಕಾಶವನ್ನೂ ಕೋರಿದ್ದರು. ಹೀಗಾಗಿ ಇಡೀ ದೇಶ ಸ್ವಾತಂತ್ರ್ಯದ ಸಂಭ್ರಮದ ಸವಿಯನ್ನು ಅನುಭವಿಸುತ್ತಿದ್ದರೆ, ಇಲ್ಲಿಯ ಪ್ರಜೆಗಳು ತಮಗಾದ ನೋವನ್ನು ನುಂಗಿಕೊಂಡು ಕುಳಿತರು. ನಿಜಾಮ ಮೀರ್ ಉಸ್ಮಾನ್ ಅಲಿಖಾನ್ "ಡೆಕ್ಕನ್ ರೇಡಿಯೋ" ಮೂಲಕ, ಹೈದ್ರಾಬಾದ್ ಸಂಸ್ಥಾನ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿದ. ಆದರೆ ಭಾರತದೊಡನೆ ವಿಲೀನಗೊಳಿಸುವ ಉದ್ದೇಶದಿಂದ ಹೈದ್ರಾಬಾದ್ ಸಂಸ್ಥಾನದ ಪ್ರಜೆಗಳು ಗಾಂಧಿ ಪ್ರೇರಿತ ಅಹಿಂಸಾತ್ಮಕ ಚಳುವಳಿ ಮತ್ತು ಆತ್ಮರಕ್ಷಣೆಗಾಗಿ ಪ್ರಜೆಗಳ ಸಂಘಟನೆಯ ಮುಖಾಂತರ ಹೋರಾಟಕ್ಕೆ ಇಳಿದರು .ಇವರ ನೇತೃತ್ವವನ್ನು ಕಾಂಗ್ರೆಸ್ ಮುಖಂಡರಾದ ಸ್ವಾಮಿ ರಮಾನಂದತೀರ್ಥರು ವಹಿಸಿದ್ದರು. ಚಳವಳಿ ಹತ್ತಿಕ್ಕಲು ನಿಜಾಮನು ಮಹಾರಾಷ್ಟ್ರದ ಲಾತೂರಿನಲ್ಲಿ ಒಬ್ಬ ಸಾಮಾನ್ಯ ವಕೀಲನಾಗಿದ್ದ ಕಾಶಿಂ ರಜವಿ ಎಂಬುವವನ ನೇತೃತ್ವದಲ್ಲಿ ರಜಾಕಾರರು( ರಜಾಕಾರರ ಇದು ಪರ್ಷಿಯನ್ ಪದ. ಇದರರ್ಥ ಸ್ವಯಂಸೇವಕ) ಎಂಬ ಅರೆಸೈನಿಕ ಪಡೆ ನೇಮಿಸಿ ನಿಸ್ಸಾಹಾಯಕ ಪ್ರಜೆಗಳ ಮೇಲೆ ದಾಳಿ ಮಾಡಿಸಿದ. ಹೈದ್ರಾಬಾದ್ ಸಂಸ್ಥಾನ ಸ್ವತಂತ್ರ ರಾಷ್ಟ್ರವೆಂದು ಒಪ್ಪದ ಸಾವಿರಾರು ಜನ ಅಮಾಯಕರ ಮೇಲೆ ರಜಾಕಾರರ ದೌರ್ಜನ್ಯ ನಿರಂತರವಾಗಿ ನಡೆಯಿತು .
ಕಲ್ಬುರ್ಗಿ ಜಿಲ್ಲೆಯ ೮೭ ಗ್ರಾಮಗಳು, ಬೀದರ್ ಜಿಲ್ಲೆಯ ೧೨೬ ಗ್ರಾಮಗಳು, ರಾಯಚೂರು ಜಿಲ್ಲೆಯ ೯೪ ಗ್ರಾಮಗಳು, ಬಳ್ಳಾರಿಯನ್ನು ಒಳಗೊಂಡಂತೆ ಕಾಸಿಮ್ ರಜ್ವಿ ರಜಾಕಾರರಿಗೆ ನೀಡಿದ ಆದೇಶ "ಕಾಟೋ ಲೂಟೋ ಔರ್ ಬಾಟೋ" ಈ ಆದೇಶದ ಮೇರೆಗೆ ರಜಾಕಾರರು ಹಿಂದೂ ಸಮುದಾಯದ ಮೇಲೆ ದಾಳಿ ಮಾಡಿದರು. ಜಮೀನುಗಳಲ್ಲಿ ಬೆಳೆ ನಾಶ, ಮನೆ ದೇವಸ್ಥಾನಗಳ ಲೂಟಿ, ಹೆಂಗಸರ ಮೇಲೆ ಅತ್ಯಾಚಾರ, ಮಕ್ಕಳು ಮುದುಕರೆನ್ನದೆ ಕಂಡವರನ್ನೆಲ್ಲಾ ಕತ್ತಿ, ಕೊಡಲಿ, ಬಂದೂಕುಗಳಿಂದ ಹಿಂಸಿಸಿ ಕೊಲ್ಲುವುದು. ರಾಷ್ಟ್ರೀಯ ವಿದ್ಯಾಲಯಗಳ ಮೇಲೆ ದಾಳಿ ಮಾಡುವುದು ಇತ್ಯಾದಿ ಕೃತ್ಯಗಳಿಂದ ಪ್ರಜಾ ಚಳವಳಿ ಹತ್ತಿಕ್ಕುವ ತಂತ್ರ ಬಳಸಿದ್ದರು. ರಜಾಕಾರರ ಉಪಟಳದೊಂದಿಗೆ ನಿಜಾಮ ಹೊರಡಿಸಿದ್ದ 'ಕೊಡಲಿ ಬರಾದ್ ಫರ್ಮಾನ್' ಮೇರೆಗೆ ಹಿಂದೂಗಳ ಬಳಿಯಿದ್ದ ನಿಯಮಬದ್ಧ ಬಂದೂಕುಗಳಲ್ಲದೆ ಕೊಡಲಿ, ಕುಡುಗೋಲು ಸಹ ಕಿತ್ತುಕೊಂಡು ರಜಾಕಾರರಿಗೆ ಹಂಚಿದರು. ೧೯೪೭ಅಗಸ್ಟ್ ತಿಂಗಳ ಮೊದಲವಾರದಲ್ಲಿ ನಿಜಾಮ್ ಸರಕಾರ ತ್ರಿವರ್ಣ ಧ್ವಜ ನಿಷೇಧಿಸಿತು. ಆ ಸಮಯದಲ್ಲಿ ಮಾಲಗಿತ್ತಿಯಲ್ಲಿ ನಡೆದ ಬಹಿರಂಗ ಮೆರವಣಿಗೆಯಲ್ಲಿ ಇದ್ದಕ್ಕಿದ್ದಂತೆ ಸೀತಮ್ಮ ಬಡಿಗೇರ ಎನ್ನುವ ೨೪ ವಯಸ್ಸಿನ ಹೆಣ್ಣುಮಗಳು ವೀರಗಚ್ಚೆ ಹಾಕಿಕೊಂಡು ಹಣೆತುಂಬ ಕುಂಕುಮ, ಕೆನ್ನೆಗೆ ಅರಿಷಿಣ ಹಚ್ಚಿಕೊಂಡು ಒಂದು ಕೈಯಲ್ಲಿ ತ್ರಿವರ್ಣ ಧ್ವಜ, ಮತ್ತೊಂದು ಕೈಯಲ್ಲಿ ಕುಡುಗೋಲು ಹಿಡಿದುಕೊಂಡು ,ಕಾಳಿಯಂತೆ ಕುಣಿಯುತ್ತ ವಂದೇ ಮಾತರಂ ಎಂಬ ಅವರ ಘೋಷಣೆ ಮುಗಿಲು ಮುಟ್ಟಿತ್ತು .
೧೯೪೭ ಆಗಸ್ಟ್ ೧೫ರಂದು ಅಹಿಂಸಾತ್ಮಕ ಚಳುವಳಿಯ ನೇತಾರರಾದ ಸ್ವಾಮಿ ರಮಾನಂದತೀರ್ಥರು ಮುಂಜಾವು ೩ ಗಂಟೆಯ ಸಮಯಕ್ಕೆ ಸುಲ್ತಾನ್ ಬಜಾರ್ ಎನ್ನುವ ಸಾರ್ವಜನಿಕ ಸ್ಥಳದಲ್ಲಿ ತ್ರಿವರ್ಣ ಧ್ವಜ ಹಾರಿಸಿದರು .ರಾಯಚೂರಿನಲ್ಲಿ ಆಗಸ್ಟ್ ೧೪ ರ ಮಧ್ಯರಾತ್ರಿ ಮಟಮಾರಿ ನಾಗಪ್ಪ ,ಚಂದ್ರಯ್ಯ, ಶರಭಯ್ಯ, ಮತ್ತು ಬಸಣ್ಣ ಎನ್ನುವ ವಿದ್ಯಾರ್ಥಿಗಳು ಪೊಲೀಸ್ ಕಾವಲನ್ನು ಭೇದಿಸಿ ಜಿಲ್ಲಾ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದರು. ಕನಕಗಿರಿಯಲ್ಲಿ ಜಯತೀರ್ಥ ರಾಜಪುರೋಹಿತರು, ಆಳಂದದಲ್ಲಿ ಎ .ಬಿ. ಪಾಟೀಲರು, ಯಾದಗಿರಿಯಲ್ಲಿ ಬಸಪ್ಪಶೆಟ್ಟರು, ಕಾರಟಗಿಯಲ್ಲಿ ಬೆಣಕಲ್ ಭೀಮಸೇನರಾಯರು, ಎಲ್ಲೆಡೆ ತ್ರಿವರ್ಣ ಧ್ವಜ ಹಾರಿಸಿದರು .ಸ್ವಾಮಿ ರಮಾನಂದತೀರ್ಥರು ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ "Quit college act now" ಕರೆಯ ಮೇರೆಗೆ ಸಾವಿರಾರು ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ಚಳುವಳಿಯಲ್ಲಿ ಭಾಗವಹಿಸಿದರು .ವಂದೇ ಮಾತರಂ ಗೀತೆ ಹಾಡಿದ್ದಕ್ಕಾಗಿ, ರಜಾಕಾರರ ಲಾಠಿಗಳಿಂದ ತೀವ್ರ ಗಾಯಾಳುಗಳಾದರು. ಈ ಲಾಟಿಚಾರ್ಜನಲಿ ಬೆಣಕಲ್ ಭೀಮಸೇನರಾವ್ ಮರಣಹೊಂದಿದರು. ಆರ್ಯ ಸಮಾಜದ ಚಂದ್ರಶೇಖರ್ ಪಾಟೀಲರಿಗೆ ಔರಂಗಾಬಾದ್ ಜೈಲಿನಲ್ಲಿ ಶಿಕ್ಷೆಗೆ ಮುಂದಾದಾಗ, ಅಲ್ಲಿನ ಸೆರೆಯಾಳುಗಳು ಮಾನವ ಸರಪಳಿಯ ಮೂಲಕ ಅವರನ್ನು ರಕ್ಷಿಸಿದ್ದು ಅಭೂತಪೂರ್ವ ಘಟನೆ ಎನ್ನಬಹುದು. ನ್ಯಾಯಕ್ಕಾಗಿ ಹೋರಾಟ ವೆಂದರೆ ಇದೇ ಅಲ್ಲವೇ ? ೧೯೪೭ ಸೆಪ್ಟೆಂಬರ್ ೧೨ ರಂದು ಮಹದೇವಪ್ಪ ಹುಚ್ಚಪ್ಪ ದೊಡ್ಮನಿ, ತೇದಿ ಒಕ್ಕಲದ ಚನ್ನಪ್ಪ, ಅಡಿಗೆಮನೆ ಶಿವಲಿಂಗಪ್ಪ ,ವಂದೇ ಮಾತರಂ ಘೋಷಿಸಿದ್ದಕ್ಕೆ ಬಂಧಿತರಾದರು. ಮಹದೇವಪ್ಪನ ವಾಚನಾಲಯವನ್ನುಸುಟ್ಟು ಹಾಕಿದರು. ೧೯೪೮ ಫೆಬ್ರವರಿ ೧೫ ರಂದು ಮರಡಿ ಆಶ್ರಮದ ತಪಸ್ವಿ ಭೀಮಜ್ಜ ಅವರು ಸಾರ್ವಜನಿಕ ಸತ್ಯಾಗ್ರಹ ಪ್ರಾರಂಭಿಸಿದರು .ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಹೋರಾಟಗಾರರನ್ನೆಲ್ಲ ಒಯ್ದು ಕುಷ್ಟಗಿ ಜೇಲಿಗೆ ಸೇರಿಸಿದರು. ೧೯೪೮ ಮೇ ತಿಂಗಳ ಮೊದಲ ವಾರದಲ್ಲೇ ರಜಾಕಾರರು ಬೀದರ್ ಜಿಲ್ಲೆಯ ಗೋರ್ಟಾಎನ್ನುವ ಗ್ರಾಮದ ಮೇಲೆ ದಾಳಿ ಮಾಡಿ ಅಲ್ಲಿದ್ದ ಅಲ್ಲಿದ್ದ ಎರಡುನೂರು ಹಿಂದುಗಳನ್ನೆಲ್ಲಾ ಒಟ್ಟುಗೂಡಿಸಿ ಸುಟ್ಟುಹಾಕಿದರು.ದಕ್ಷಿಣ ಭಾರತದ ಜಲಿಯನ್ ವಾಲ್ಬಾಗ್ ದುರಂತವೆಂದು ಈ ಘಟನೆ ಕುಪ್ರಸಿದ್ಧವಾಯಿತು. ಭೀಮಣ್ಣ ಖಂಡ್ರೆ, ಶಿವ ಖಂಡ್ರೆ ಮೊದಲಾದವರು ರಜಾಕಾರರ ವಿರುದ್ಧ ಹೋರಾಟ ನಡೆಸಿದರು.ತುಮರಿಕೊಪ್ಪದಲ್ಲಿ ಶಾಂತವಾಗಿ ಸಭೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿ, ಹಿರೇಗೊಣ್ಣಾಗರ, ಪಿಂಜಾರ ಅಲಿಸಾಬ ಮತ್ತು ಕುಂದಾಪುರದ ಹನುಮಂತಪ್ಪ, ಎನ್ನುವವರನ್ನು ಬಲಿ ತೆಗೆದುಕೊಂಡಿತು.ಬಾಂದಿನಾಳದ ಮರ ಗವ್ವನನ್ನು ಹಾಡುಹಗಲೇ ಅತ್ಯಾಚಾರ ಮಾಡಿ ಸಾಯಿಸಿದ್ದರು.
. *ಆತ್ಮರಕ್ಷಣೆಗಾಗಿ ಪ್ರಜೆಗಳ ಸಂಘಟನೆ *
ಹೈದರಾಬಾದ್ ಕಾಂಗ್ರೆಸ್ ನ ಅಧ್ಯಕ್ಷರಾದ ಸ್ವಾಮಿ ರಮಾನಂದತೀರ್ಥರ ಬಂಧನದ ನಂತರ ಹೈದರಾಬಾದಿನ ಪರಿಸ್ಥಿತಿ ಗಂಭೀರವಾಯಿತು. ಆಗ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮುಖಂಡರಾದ ಅನ್ನದಾನಯ್ಯ ಪುರಾಣಿಕ, ಪ್ರಭುರಾಜ ಪಾಟೀಲ್ ಮೊದಲಾದ ಯುವಕರು ಸ್ಥಳೀಯ ಗಣ್ಯರ ಸಹಾಯದಿಂದ ರಜಾಕಾರರ ಹಾವಳಿಗೆ ತುತ್ತಾದ ಹಿಂದೂ ಮುಸ್ಲಿಮರ ರಕ್ಷಣೆ ಮಾಡಿದರು. ತಮ್ಮ ವಿದ್ಯಾಭ್ಯಾಸ ತೊರೆದು ಮುಂಡರಗಿಗೆ ಬಂದ ಈ ಯುವಕರು ಹಳೆಯ ಅನ್ನದಾನೇಶ್ವರ ಮಠದಲ್ಲಿ ಪ್ರಪ್ರಥಮ ಶಿಬಿರ ಸ್ಥಾಪಿಸಿದರು. ಅಳವಂಡಿ ಶಿವಮೂರ್ತಿಸ್ವಾಮಿ ಡಾ।ಚರ್ಚಿಹಾಳಮಠ
ಮೊದಲಾದವರು ಶಿಬಿರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಗಜೇಂದ್ರಗಡದ ಶಿಬಿರಕ್ಕೆ ಪುಂಡಲೀಕಪ್ಪ ಜ್ಞಾನಮೋಠೆ ಶಿಬಿರಾಧಿಪತಿಯಾಗಿದ್ದರು. ಮುಂಡರಗಿ ಶಿಬಿರಕ್ಕೆ ಅಳವಂಡಿ ಶಿವಮೂರ್ತಿಸ್ವಾಮಿ ಶಿಬಿರಾಧಿಪತಿ. ಜನಸಾಮಾನ್ಯರು ರಜಾಕಾರರು ಮತ್ತು ನಿಜಾಮ್ ಪೋಲಿಸರು ಕುರಿತು ಮಾಹಿತಿಯನ್ನು ಮುಂಡರಗಿ ಶಿಬಿರಕ್ಕೆ ತಲುಪಿಸುವಂತಹ ಗುಪ್ತಚರ ವ್ಯವಸ್ಥೆಯನ್ನು ಅನ್ನದಾನಯ್ಯ ಪುರಾಣಿಕ್ ನಡೆಸುತ್ತಿದ್ದರು. ಸರ್ದಾರ್ ವಲ್ಲಭ ಭಾಯಿ ಪಟೇಲರು ಮುಂಡರಗಿ ಶಿಬಿರದ ಕಾರ್ಯಾಚರಣೆ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಅವರ ಸೂಚನೆ ಮೇರೆಗೆ ಕೇಂದ್ರ ಮಂತ್ರಿ ಗಾಡ್ಗೀಳ್ ಕಾಂಗ್ರೆಸ್ ಮುಖಂಡ ನಿಜಲಿಂಗಪ್ಪನವರು ಮೊದಲಾದವರು ರಹಸ್ಯವಾಗಿ ಬಂದು ಈ ಶಿಬಿರಕ್ಕೆ ಉತ್ತೇಜನ ನೀಡಿದ್ದರು .
ರಜಾಕಾರರ ಪ್ರಬಲ್ಯವಿದ್ದ ಕುಕುನೂರಿನಲ್ಲಿದ್ದ ಪ್ರಮುಖ ಪೋಲಿಸ್ ಠಾಣೆಯ ಮೇಲೆ ದಾಳಿ ನೆಡೆಸಲು ಪ್ರಭುರಾಜ ಪಾಟೀಲ್, ಮುರುಗೇಂದ್ರಯ್ಯ ಹಿರೇಮಠ ಮೊದಲಾಗಿ ಸುಮಾರು ಅರವತ್ತು ಯುವಕರನ್ನು ಮುಂಡರಗಿಯ ಶಿಬಿರದಿಂದ ಬಸರಿಗಿಡ ವೀರಣ್ಣನವರ ಬಸ್ಸಿನಲ್ಲಿ ಅನ್ನದಾನಯ್ಯ ಪುರಾಣಿಕ ಕರೋಲ್ ಕಳುಹಿಸಿದರು. ಯೋಜನೆಯಂತೆ ದಾಳಿಯಲ್ಲಿ ಮುಂಡರಗಿ ಶಿಬಿರದ ಯುವಕರು ವಿಜಯ ಸಾಧಿಸಿ ಅಪಾರ ಪ್ರಮಾಣದ ಬಂದೂಕು ಮತ್ತು ಮದ್ದುಗುಂಡು ವಶ ಪಡಿಸಿಕೊಂಡರು .ನಿಜಾಮ್ ಪೋಲಿಸರು ಮತ್ತು ರಜಾಕಾರರ ವಿರುದ್ಧ ಪ್ರಥಮ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರರು ಜಯಗಳಿಸಿದ್ದರು .ಸೋಲಿನಿಂದ ಕುಪಿತನಾದ ಹೈದ್ರಾಬಾದ್ ನಿಜಾಮ ಅಳವಂಡಿ ಶಿವಮೂರ್ತಿಸ್ವಾಮಿ ಮತ್ತು ಅನ್ನದಾನಯ್ಯ ಪುರಾಣಿಕರನ್ನು ಬಂಧಿಸಿ ಕರೆತರಲು ಆದೇಶಿಸಿದ್ದರು. ಆದರೆ ಆ ವೇಳೆಗಾಗಲೇ ಪೋಲೀಸ್ ಕಾರ್ಯಾಚರಣೆ ಪ್ರಾರಂಭವಾಗಿದ್ದರಿಂದ ಅಳವಂಡಿ ಶಿವಮೂರ್ತಿಸ್ವಾಮಿ ಸುರಕ್ಷಿತವಾಗಿದ್ದರು. ಗೌರಾಪುರದಲ್ಲಿ ಜನಸಂಘಟನೆಗಾಗಿ ತೆರಳಿದ್ದ ಜಯತೀರ್ಥ ರಾಜಪುರೋಹಿತ ರನ್ನು ಪೊಲೀಸರು ಬೆನ್ನಟ್ಟಿ ಬಂದಾಗ ಈ ತರುಣ ಕ್ರಾಂತಿಕಾರಿಗೆ ಆಶ್ರಯವಿತ್ತವರು ಉಪ್ಪಾಲದಿನ್ನೆಯ ಮಡಿವಾಳಪ್ಪ ಎಂಬ ರೈತ .ಪೊಲೀಸರು ಮಡಿವಾಳಪ್ಪನ ಮನೆಗೆ ಶೋಧನೆಗೆ ಬಂದಾಗ ರಾಜಪುರೋಹಿತರು ಅಲ್ಲಿಂದ ಹೊರಬರಲು ಉದ್ಯುಕ್ತರಾದರು. ಈ ಸಂದರ್ಭದಲ್ಲಿ ರೈತ ಮಡಿವಾಳಪ್ಪ ಹೇಳಿದ ಮಾತು ಹೈದರಾಬಾದ್ ಪ್ರಜೆಗಳ ಹೃದಯ ತೆರೆದು ತೋರಿಸುವಂತಹ ಮಾತಾಗಿದೆ ."ಅಲ್ಲೇ ನನ್ಹೆಂಡ್ತಿ ಹಂತೇಕ ಹೋಗಿ ಕೌದಿ ಹೊತ್ಕೊಂಡು ಮಲಕೋರಿ, ನನ್ಮಗ ಮಲಗ್ಯಾನ ಅಂತ ಹೇಳ್ತೀನಿ" ಎನ್ನುವ ಮಾತುಗಳು ಎಂತಹ ಭಾರತೀಯನ ಎದೆಗೂ ರೋಮಾಂಚನ ಮೂಡಿಸುವಂತಹದ್ದು. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಒಬ್ಬ ದೇಶಭಕ್ತನನ್ನು ಮತ್ತೊಬ್ಬ ದೇಶಭಕ್ತ ರಕ್ಷಿಸಿದ ಪರಿಯಿದು.ದೇಶಭಕ್ತನ ರಕ್ಷಣೆಗಾಗಿ ಮಡದಿಯನ್ನು ತಾಯಿಯ ಸ್ಥಾನದಲ್ಲಿ ನಿಲ್ಲಿಸಿದ ರೈತನ ಹೃದಯ ವೈಶಾಲ್ಯತೆ ರೋಮಾಂಚನವನ್ನುಂಟು ಮಾಡುತ್ತದೆ .
ಈ ರೀತಿಯಾಗಿ ಇತಿಹಾಸದ ಪುಟಗಳಲ್ಲಿನ ಹಲವಾರು ಘಟನೆಗಳ ನಂತರ ೧೯೪೮ ಸೆಪ್ಟೆಂಬರ್ ೧೩ರಂದು ಪೊಲೀಸ್ ಕಾರ್ಯಾಚರಣೆ ನಿರ್ಧಾರ ಕೈಗೊಂಡು, ಹೈದ್ರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ಸೆಪ್ಟಂಬರ್ ೧೭ ರಂದು ಸೇರಿಸಲಾಯಿತು. ಮೊದಲ ಕೆಲ ದಿನಗಳ ಮಟ್ಟಿಗೆ ಜನರಲ್ ಚೌಧುರಿಯವರು ಆಡಳಿತಗಾರರಾಗಿದ್ದರು. ಅನಂತರ ಕೆ. ಎಂ. ಮುನ್ಶಿ ಅವರು ರಾಜ್ಯಪಾಲರೆಂದು ನೇಮಿಸಲ್ಪಟ್ಟರು. ಹೈದ್ರಾಬಾದ್ ಸಂಸ್ಥಾನದ ವಿಲೀನಕ್ಕಾಗಿ ಹೋರಾಟ ಮಾಡಿದ್ದ ಹೋರಾಟಗಾರರ ಕಣ್ಣಂಚಿನಲ್ಲಿ ಸ್ವಾತಂತ್ರ್ಯ ಪಡೆದ ಸಂಭ್ರಮ ಎಲ್ಲರ ಮನದಲ್ಲಿ ತುಂಬಿ ತುಳುಕುತ್ತಿತ್ತು. ಅಖಂಡ ಭಾರತದ ಕಲ್ಪನೆ ಕನಸು ನನಸಾಗುತ್ತಿತ್ತು. ಕನ್ನಡನಾಡಿಗೆ ವರ್ಷದಲ್ಲಿ ೨ ಸಾರಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅವಕಾಶ. ಅಗಸ್ಟ್ ೧೫ ನಾಡಿನೆಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸಿದರೆ, ಸೆಪ್ಟಂಬರ್ ೧೭ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ಬಳ್ಳಾರಿ, ಕೊಪ್ಪಳ ,ರಾಯಚೂರು ಗಳಲ್ಲಿ ಸ್ವಾತಂತ್ರ್ಯದ ಸಂಭ್ರಮ. ಅದುವೇ ಇಂದಿನ ಕಲ್ಯಾಣ ಕರ್ನಾಟಕದ ಉತ್ಸವ .ಹೇಗೆ ಆಗಸ್ಟ್ ೧೫ ರಂದು ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತೇವೆಯೋ, ಅದೇ ರೀತಿ ಇಂದು ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವಂತಹ ಸದಾವಕಾಶವೊಂದು ನಮಗೆಲ್ಲರಿಗೂ ದೊರೆತಿರುವುದು ಪುಣ್ಯದ ಸಂದರ್ಭವೂ ಹೌದು .ಅಂತಹ ಸ್ವಾತಂತ್ರ್ಯ ಹೋರಾಟಗಾರರು ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಬಲಿದಾನ ಮಾಡಿದರೆಂಬ ನೋವಿನ ಸಂಗತಿಯೊಂದಿಗೆ ಅಂತಹ ವೀರ ಹೋರಾಟಗಾರರು ಮತ್ತೊಮ್ಮೆ ಈ ಪುಣ್ಯಭೂಮಿಯಲ್ಲಿ ಜನಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತ, ಈ ಕಲ್ಯಾಣ ಕರ್ನಾಟಕದ ಉತ್ಸವ ಕೇವಲ ಉತ್ಸವವಾಗದೆ ವೀರ ಮರಣವನ್ನಪ್ಪಿದ ವೀರ ಹೋರಾಟಗಾರರ ನೆನಪಿನ ಹಂದರವಾಗಲಿ ಎಂದು ಬಯಸುತ್ತೇನೆ.ಅಂತರ್ಜಾಲದ ಸಹಾಯವನ್ನು ಅಳವಡಿಸಿಕೊಂಡು ನನಗೆ ತಿಳಿದಿರುವಷ್ಟು ವಿಷಯವನ್ನ ನಿವೇದನೆ ಮಾಡಿದ್ದೇನೆ .ಧನ್ಯವಾದಗಳೊಂದಿಗೆ .....
- ಶ್ರೀಮತಿ ಸುಮಂಗಲಾ ಕೃಷ್ಣಾ ಕೊಪ್ಪರದ ಶಿಕ್ಷಕಿ ಇಲಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ