ಸ್ವತಂತ್ರ ಸಿಕ್ಕಿದ್ದಾದರೂ ಯಾರಿಗೆ ?.
ಹೆಣ್ಣು, ಇದೊಂದು ಗೌರವ ಪೂರ್ವಕ ಪದ ಬಳಕೆ ಅಷ್ಟೆ.., ಅಲ್ವಾ..!? ಆದರೆ ಪ್ರಸ್ತುತ ಸಮಾಜದಲ್ಲಿ ಹೆಣ್ಣು ಅನ್ನೋ ಪದಕ್ಕೆ ಅರ್ಥಾನೆ ಇಲ್ಲದಂತಾಗುತ್ತಿದೆ. ಈ ನಮ್ಮ ಸ್ವತಂತ್ರ ಭಾರತದಲ್ಲಿ ಇಷ್ಟಕ್ಕೂ ಸ್ವಾತಂತ್ರ್ಯ ಸಿಕ್ಕಿದ್ದಾದರೂ ಯಾರಿಗೆ..!? ಇಲ್ಲಿನ ಕೆಲ ಭ್ರಷ್ಟ ರಾಜಕಾರಣಿಗಳಿಗೆ, ಕಾಮುಕರಿಗೆ, ದೇಶ ದ್ರೋಹಿಗಳಿಗೆ, ಇಂತವರಿಗೆಲ್ಲಾ ಸ್ವಾತಂತ್ರ್ಯ ಕೊಡುತ್ತಾ ಬಂದಿದೆ ನಮ್ಮ ದೇಶ. ನಿಜಕ್ಕೂ ಒಮ್ಮೆ ಮೌನವಾಗಿ ಯೋಚಿಸಿ ನೋಡಿದರೆ ಸ್ವಾತಂತ್ರ್ಯ ಸಿಕ್ಕರೂ ಸಹ ಯಾರಿಗೆ ಸಿಕ್ಕಿದೆ..!? ಎಂಬ ಪ್ರಶ್ನೆ ಹುಟ್ಟುತ್ತದೆ. ಒಂದು ಹೆಣ್ಣು ತನ್ನಿಷ್ಟದಂತೆ ಸಂತೋಷಿಸುತ್ತಾ ಒಂಟಿಯಾಗಿ ಓಡಾಡುವ ಹಾಗಿಲ್ಲ, ಹೆಣ್ಣಿಗೆ ತನ್ನಿಷ್ಟದಂತೆ ಬದುಕಲು ಸಾಧ್ಯವಾಗುತ್ತಿಲ್ಲ. ಬರೀ ಹೆಸರಿಗಷ್ಟೇ ಹೆಣ್ಣು ಎಂದರೆ ದೇವತೆ ಎನ್ನುತ್ತಾ ಪೂಜಿಸುವಂತೆ ನಟಿಸುತ್ತಿದ್ದಾರೆ ಹೊರತೂ ಯಾರೂ ಕೂಡ ಮನಃಸ್ಪೂರ್ವಕವಾಗಿ ಹೆಣ್ಣಿಗೆ ಗೌರವ ಸಲ್ಲಿಸುವುದ ನಾನೆಲ್ಲಿಯೂ ಕಾಣಲಿಲ್ಲ. ದಿನ ಬೆಳಗಾದರೆ ಬರೀ ತನ್ನ ಕಣ್ಣೀರಿನಲ್ಲೇ ಜೀವನ ಸಾಗಿಸುತ್ತಿರುವ ಹೆಣ್ಣನ ಭಯಾನಕ ಕಷ್ಟದ ಸ್ಥಿತಿಯನ್ನೇ ನೋಡುವ ಹಾಳು (ದರಿದ್ರ) ಜೀವನ ನಮ್ಮದಾಗಿದೆ. ಸ್ವಾತಂತ್ರ್ಯ ಸಿಕ್ಕು ಸುಮಾರು ವರ್ಷಗಳು ಕಳೆದರೂ ಸಹಿತ ಹೆಣ್ಣಿಗೆ ಸೂಕ್ತವಾದ ನ್ಯಾಯ ಸಿಗುತ್ತಿಲ್ಲ. ಅದೆಷ್ಟೋ ಅತ್ಯಾಚಾರಗಳು ನಮ್ಮ ದೇಶದಲ್ಲಿ ಇಂದಿಗೂ ನಡೆಯುತ್ತಲೇ ಇವೆ, ಹಾಗಾದರೆ ಇದಕ್ಕೆ ಕಡಿವಾಣ ಹಾಕೋದು ಯಾವಾಗ..!? ಹೆಣ್ಣು ಕುಲ ಸಂಪೂರ್ಣ ನಾಶವಾದಗಲೋ..!? ನಿಜಕ್ಕೂ ಭಾವ ಎಂಬುದು ಕಣ್ಣೀರಾಗಿ ಬದಲಾಗಿದೆ. ವಿವಿಧ ವೇಶಗಳಿಗೆ ಹೋಲಿಸಿದರೆ 'ನಮ್ಮ ಭಾರತ ದೇಶ ಉತ್ಕೃಷ್ಟವಾದ ಸಾಂಪ್ರದಾಯ ಬದ್ದವಾದ ದೇಶ, ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನವಿದೆ' ಎಂದು ದೊಡ್ದೊಡ್ಡ ಅಧಿಕಾರಿಗಳು ಹಾಗೂ ರಾಜಕೀಯ ಪಂಡಿತರುಗಳು ಬರೀ ಭಾಷಣ ಮಾಡಿದ್ದೇ ಆಯ್ತು......, ಆದರೆ ಒಂದು ಹೆಣ್ಣಿನ ಮೇಲಿನ ಶೋಷಣೆ, ಅತ್ಯಾಚಾರ, ಇನ್ನೂ ಅಂತ್ಯವಾಗುತ್ತಿಲ್ಲ.
ಹಳ್ಳಿಗಳಲ್ಲಂತೂ ಹೆಣ್ಣಿಗೆ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಹಳ್ಳಿಯಲ್ಲಿನ ಪೋಷಕರು ಹೆಣ್ಣಿನ ಮನವನ್ನು ಅರ್ಥ ಮಾಡಿಕೊಳ್ಳದೆಯೇ.., ಅವರ ವಯಸ್ಸಿಗೂ ಮೀರಿದ ಜವಾಬ್ದಾರಿಗಳನ್ನು ನೀಡಲು ಮುಂದಾಗುತ್ತಿದ್ದಾರೆ. ಏನೂ ಅರಿಯದ ಹೆಣ್ಣು ಮಗುವಿಗೆ ಬೇಗನೆ ಮದುವೆ ಮಾಡಿ ತಲೆಯ ಭಾರ ಇಳಿಸಿಕೊಳ್ಳಬೇಕೆಂಬ ಭ್ರಮೆಯಲ್ಲಿಯೇ ಪ್ರತೀಯೊಂದು ಹೆಣ್ಣ್ಹಡೆದೆ ಜೀವಗಳು ಬದುಕುತ್ತಿವೆ. ಮಕ್ಕಳ ವಯಸ್ಸನ್ನೂ ಪರಿಗಣಿಸಿದೆ ಹದಿನಾಲ್ಕು ಹೈದಿನೈದರ ಪ್ರಾಯಕ್ಕೆ ಮದುವೆ ಮಾಡಿ ಆ ಮಗುವಿನ ಜೀವನವನ್ನು ಹಾಳು ಮಾಡುತ್ತಿದೆ ಈ ಸಮಾಜ. ರಾಮಾಯಣ ಮಹಾಭಾರತದಂತಹಾ ಕಾಲದಿಂದಲೂ ಇಲ್ಲಿಯವರೆಗೂ ಹೆಣ್ಣಿಗೆ ಕಷ್ಟ ತಪ್ಪಿದ್ದಲ್ಲ. ಹಾಗಾದರೆ 1947 ರ ಸ್ವಾತಂತ್ರ್ಯ ಸಿಕ್ಕಿದ್ದಾದರೂ ಯಾರಿಗೆ..!? ಸ್ವಲ್ಪ ಯೋಚಿಸಿ. ಈ ಭರತ ಖಂಡಕ್ಕೇ ಇಡಿ ವಿಶ್ವದಲ್ಲಿಯೇ ತನ್ನದೇ ಆದ ಗೌರವ ಹಾಗೂ ವಿಶೇಷ ಸ್ಥಾನಮಾನವಿದೆ. ಸ್ವಾಮಿ ವಿವೇಕಾನಂದರ ಆಶಯದಂತೆ ನಮ್ಮ ಭಾರತ ದೇಶ *ವಿಶ್ವಗುರು* ಆಗುತ್ತಾ..!? ಎಂಬುದರ ಬಗ್ಗೆ ಯುವ ಜನತೆ ಒಮ್ಮೆ ಹೃನ್ಮನದಿಂದ ಯೋಚಿಸಿಬೇಕಾಗಿದೆ. ಕಾಮುಕರ ಸಂಖ್ಯೆ ದಿನೇ ದಿನೇ ಎಚ್ಚಳವಾಗುತ್ತಿದ್ದದ್ದನ್ನು ಕಂಡಾಗ, ನಮ್ಮ ಭಾರತ ದೇಶ ಎಲ್ಲಿ ಇದ್ದ ಸ್ಥಾನವನ್ನೂ ಕಳೆದುಕೊಳ್ಳುವುದೋ..! ಎಂಬ ಭಯ ಕಾಡುತ್ತದೆ. ಹೆಣ್ಣಿಗೆ ಯಾಕಿಷ್ಟು ಕಷ್ಟ..!? ಅದೂನು ಒಂದು ಜೀವ ಅಲ್ಲವೇ..!? ನಿಜವಾಗಿಯೂ ಹೇಳುವುದಾದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ನೈಜ ಸ್ವಾತಂತ್ರ್ಯ ಈಗ ಸಿಗಬೇಕಾಗಿದೆ. ರಾಜಕೀಯ ಭ್ರಷ್ಟರಿಂದ ಸ್ವಾತಂತ್ರ್ಯ ಸಿಗಬೇಕಾಗಿದೆ, ಕೆಲ ಕಟುಕ ಪೋಷಕರಿಂದ ಹೆಣ್ಣಿಗೆ ಸ್ವಾತಂತ್ರ್ಯ ಸಿಗಬೇಕಾಗಿದೆ, ಕಾಮುಕ ವ್ಯಾಘ್ರರಿಂದ ಸ್ವಾತಂತ್ರ್ಯ ಸಿಗಬೇಕಾಗಿದೆ, ಇನ್ನೂ ಬರೀ ಸಿಗಬೇಕಾಗಿದೆ ಎನ್ನುತ್ತಾ ಕುಳಿತ್ತಿದ್ಧೇವೆ ನಾವೆಲ್ಲಾ.., ಹಾಗಾದರೆ ಈ ಮೊದಲು ಸ್ವಾತಂತ್ರ್ಯ ಸಿಕ್ಕಿದ್ದಾದರೂ ಯಾರಿಗೆ..!?
ಸಹೃದಯರೇ ನಿಜವಾಗಿಯೂ ನಮ್ಮ ದೇಶದ ಹೆಣ್ಣಿನ ಗೌರವ ಮಂದಗತಿಯಲ್ಲಿ ಕ್ಷೀಣಿಸುತ್ತಿದೆ. ಇದನ್ನು ಯುವ ಜನತೆ ನೋಡಿಯೂ ನೋಡಿಲ್ಲದಂತೆ ವರ್ತಿಸುತ್ತಿದೆ. ಕಾರಣ, ಇಲ್ಲಿ ಎಲ್ಲರೂ ಬರೀ ಸ್ವಾರ್ಥಿಗಳೇ.. ಕೆಲವರು ತಮ್ಮ ಸ್ವ- ಉದ್ದಾರ ಮತ್ತು ಸಂತೋಷಕ್ಕಾಗಿ ಎಂತ್ಹಾ ಕೃತ್ಯಗಳನ್ನು ಸಹ ಮಾಡಲು ಹೇಸದ ಜನ ಈ ಸಮಾಜದಲ್ಲಿದ್ದಾರೆ. ಇವರುಗಳ ನಡುವೆ ಪಾಪ ಆ ಹೆಣ್ಣು ಜೀವ ಬಲಿಪಶುವಾಗಿ ಒದ್ದಾಡುತ್ತಿದೆ.
ಸಹೃದಯರೇ, ಈ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆ, ಅತ್ಯಾಚಾರಗಳನ್ನು ನೋಡುತ್ತಾ ಹಾಗೆಯೇ ದಿನಗಳನ್ನು ಕಳೆಯುತ್ತಿದ್ದೇವಲ್ಲಾ..! ಇದು ಸರಿಯೇ..!? ಇದರ ಕಡಿವಾಣಕ್ಕೆ ಸೂಕ್ತವಾದ ಮಾರ್ಗಗಳೇ ಇಲ್ವಾ..!? ಮನುಷ್ಯ ಯಾಕೆ ಇಷ್ಟು ಕಟುಕ ಮನಸ್ಥಿತಿಯವನಾಗಿದ್ದಾನೆ..!? ನಿಜಕ್ಕೂ ಇದು ಯೋಚಿಸುವ ಸಂಗತಿ. ಸ್ವಾರ್ಥಿಗಳಾಗುವುದು ಸಭ್ಯವಲ್ಲ, ಹೆಣ್ಣು ಎಲ್ಲರಿಗೂ ಹೆಣ್ಣೇ ಹೌದು! ಈ ಸಂದರ್ಭದಲ್ಲಿ ತಮ್ಮ ಮನೆಯ ಹೆಣ್ಣು ಮಕ್ಕಳನ್ನೊಮ್ಮೆ ನೆನೆದುಕೊಳ್ಳಿ, ಅವರಿಗೂ ಕಾಮುಕರು ಬೆನ್ನತ್ತಿದರೆ ನೀವು ಮೂಖರಂತೆ ಸುಮ್ಮನಿರುತ್ತಿದ್ದೀರಾ..!? ನಾನು ಹೇಳ ಬಯಸುತ್ತಿರುವ ಈ ವಿಚಾರ ನಿಮ್ಮನ್ನೆಲ್ಲಾ ಕೋಪಕ್ಕೆ ತಳ್ಳುತ್ತಿದೆ ಅಲ್ವಾ..!? ಹೀಗಾಗಿ, ಈ ದೇಶದ ಪ್ರತೀಯೊಂದು ಹೆಣ್ಣನ್ನೂ ಸಹ ತಮ್ಮ ಮನೆಯ ಹೆಣ್ಣೆಂದು ಭಾವಿಸಿ ನೋಡಿ..., ಖಂಡಿತವಾಗಿಯೂ ಈ ಕಾಮುಕರನ್ನು ಸೆದೆ ಬಡಿಯಬಹುದು, ಇನ್ನಾದರೂ ಎಚ್ಚೆತ್ತಿಕ್ಕೊಳ್ಳೋಣ. ಇದು ಕಲಿಯುಗ, ಕಾಮುಕರ ಯುಗವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ನಾವೆಲ್ಲರೂ ಹೆಣ್ಣಿಗೆ ಸೂಕ್ತ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗೋಣ. ಇಂದಿನಿಂದಾದರೂ ಹೆಣ್ಣಿಗೆ ನೈಜವಾದ ಸ್ವಾತಂತ್ರ್ಯ ದೊರೆಕಿಸಿಕೊಡಲು ಶ್ರಮಿಸೋಣ. ಕಾಮುಕ ವ್ಯಾಘ್ರರ ಅಟ್ಟಹಾಸ ಹೆಚ್ಚುತ್ತಿದ್ದರೆ ಹೆಣ್ಣು ಕುಲದ ಅಳಿವಿಗೆ ನಾಂದಿಯಾಗುತ್ತದೆ ಎಂದು ಭಯ ವಾಗುತ್ತಿಲ್ಲವೇ..!? ಇದು ನನ್ನ ಸ್ವತಂತ್ರ ದೇಶ, ನ್ಯಾಯಕ್ಕಗಿ ಪ್ರಶ್ನೆ ಮಾಡುವುದರಲ್ಲಿ ತಪ್ಪಿದ್ಯಾ..!? ಇದು ತಪ್ಪು ಅಂತಾದ್ರೆ, ಹಾಗಾದರೆ ನಮ್ಮ ಭಾರತ ದೇಶದಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದಾದರೂ ಯಾರಿಗೆ..!? ಯೋಚಿಸಿ.....
- ಯಸಾಚಿಂ ಯಾದಗಿರಿ
೬೩೬೪೨೭೪೭೮೮.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ