ಕಲ್ಪವೃಕ್ಷ
ಕುಮಾರವ್ಯಾಸ ಭಾರತ ಈ ಕೃತಿಯನ್ನು ಓದುತ್ತಿದ್ದಾಗ , ಕುಮಾರವ್ಯಾಸರು ಬರೆದ ಮಹಾಭಾರತದಲ್ಲಿ, ಕುಂತಿಮಾತೆಯು ಕಲ್ಪವೃಕ್ಷವನ್ನು ಹೇಗೆ ಪೂಜಿಸಿದಳು ಎಂಬುದರ ಬಗ್ಗೆ ಬರೆದ ಪದ್ಯವನ್ನು ಗಮನಿಸಿದೆ.
ಅಲಸದೆಲೆ ತಾ ಕಲ್ಪವೃಕ್ಷಕೆ
ಲಲನೆ ಮೈಯಿಕ್ಕಿದಳು ನೇತ್ರಾ
ವಳಿಗಳನು ಸುತ್ತಿದಳು ಕಾಣಿಕೆಗೊಟ್ಟು ಮೈಯಿಕ್ಕಿ
ಬಳಿಕ ಗಂಧಾಕ್ಷತೆಯ ಪುಷ್ಪಂ
ಗಳಲಿ ಧೂಪನಿವಾಳಿಯಿಂದವೆ
ನಳಿನಮುಖಿ ಸುರತರುವನೊಲಿದರ್ಜಿಸಿದಳಾ ಕುಂತಿ
ಅಂದರೆ ಮಹಾಭಾರತದ ಒಂದು ದೃಷ್ಟಾಂತದಲ್ಲಿ ಬರುವಂತೆ, ಐರಾವತ ಕಾಮಧೇನುವನ್ನು ಪೂಜಿಸಿದ ನಂತರ ದಣಿಯದೆ ಕುಂತಿಮಾತೆ ಕಲ್ಪವೃಕ್ಷವನ್ನು ಪೂಜಿಸಲು ಅಣಿಯಾದಳು. ಆ ಕಲ್ಪವೃಕ್ಷಕ್ಕೆ ನಮಸ್ಕರಿಸಿ, ತನ್ನೆರಡು ಕಣ್ಣುಗಳಿಂದ ಅದಕ್ಕೆ ಪ್ರದಕ್ಷಿಣೆ ಹಾಕಿ, ಉಡುಗೊರೆಯನ್ನು ಕೊಟ್ಟು ನಮಸ್ಕರಿಸಿ, ನಂತರ ಗಂಧ, ಅಕ್ಷತೆ, ಪುಷ್ಪ, ಧೂಪ, ದೀಪಗಳಿಂದ ಪೂಜಿಸಿ, ಇಳೆಯನು (ದೃಷ್ಟಿ ಯನು )ತಗೆದು, ಕಲ್ಪವೃಕ್ಷಕ್ಕೆ ತನ್ನ ಪೂಜೆಯನ್ನು ಸಮರ್ಪಿಸಿದಳು. ವೃಕ್ಷಗಳಲ್ಲಿ ಶ್ರೇಷ್ಠ ವೃಕ್ಷ ತೆಂಗಿನಮರ ಹೀಗಾಗಿ ಇದನ್ನು ಕಲ್ಪವೃಕ್ಷ ಎಂದು ಕರೆಯುವರು ಅಂದರೆ ಬೇಡಿದ್ದನ್ನು ಕೊಡುವ ಮರ .
ಯಾಕೆ ಕಲ್ಪವೃಕ್ಷದ ಬಗ್ಗೆ ಬರೀತಾ ಇದೀನಿ ಅಂತ ಅನ್ನಿಸಿರಲೂಬಹುದು.ಸಾಮಾನ್ಯವಾಗಿ ಪ್ರತಿಯೊಂದು ಪೂಜಾ ಕಾರ್ಯಗಳಲ್ಲಿ ಹೂವು ,
ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡಾ ಭಿನ್ನತೆ ಇರುವಾಗ ಎಲ್ಲಾ ದೇವರಿಗೂ ಬಾಳೆಹಣ್ಣು ಹಾಗೂ ಟೆಂಗಿನಕಾಯಿಯನ್ನು ಬಳಸುವುದು ಸರ್ವೇಸಾಮಾನ್ಯ.ನವರಾತ್ರಿಯ ಸಂದರ್ಭ,ಶುಕ್ರವಾರದ ದಿನ ಬೆಳಿಗ್ಗೆ ನಮ್ಮ ಅಕ್ಕನವರು ತೋಟಕ್ಕೆ ಹೋಗಿ ಹೊಂಬಾಳೆ ಬಿಟ್ಟಿದೆ ಉಡಿತುಂಬಿ ಬನ್ನಿ ಎಂದು ಹೇಳಿದರು .ನನಗೆ ಸರಿಯಾಗಿ ಅದರ ಬಗ್ಗೆ ಮಾಹಿತಿ ಇರಲಿಲ್ಲ. ಸರ್ವೇಸಾಮಾನ್ಯವಾಗಿ ತೆಂಗಿನ ಮರದಲ್ಲಿ ಕಾಯಿ ಬಿಡುವುದನ್ನು ಗಮನಿಸುತ್ತ ಬೆಳೆದಿದ್ದ ನನಗೆ ಅದರ ಪೂಜಾ ವಿಧಿಗಳ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ.ನೂತನವಾಗಿ ತೋಟಗಾರಿಕೆ ಮಾಡುತ್ತಿದ್ದ ನಮ್ಮ ಸಹೋದರನ ತೋಟದಲ್ಲಿ ಸಾಕಷ್ಟು ತೆಂಗಿನ ಮರಗಳನ್ನು ನಾಟಿ ಮಾಡಿದ್ದರು. ಅವುಗಳಲ್ಲಿ ಒಂದು ತೆಂಗಿನ ಮರ ಹೊಂಬಾಳೆ ಬಿಟ್ಟಿತ್ತು . ಹೊಂಬಾಳೆ ಎಂದರೆ ತೆಂಗಿನ ಮರದಲ್ಲಿ ಬಿಡುವ ಹೂವಿನ ಗೊಂಚಲು ಎಂದರ್ಥ.
ಹೊಂಬಾಳೆ ಬಿಟ್ಟಿದೆಯೆಂದರೆ ತೆಂಗಿನಮರ ಗರ್ಭಕಟ್ಟಿದೆ ಎಂದರ್ಥವಂತೆ .ತೆಂಗಿನ ಮರದಲ್ಲಿ ಹೂ ಬಿಟ್ಟಿದೆ ಎಂದರೆ ಅದು ಫಲ ಬಿಡುವ ಸಂಕೇತವಂತೆ .ನೆಟ್ಟಿರುವ ಎಲ್ಲಾ ಸಸಿಗಳಲ್ಲಿ ಯಾವ ತೆಂಗಿನಮರದಲಿ ಮೊದಲು ಹೊಂಬಾಳೆ ಕಾಣಿಸುತ್ತದೆಯೋ ಅದಕ್ಕೆ ಪೂಜೆ ಸಲ್ಲಿಸುವುದು ವಾಡಿಕೆ.ಅದಕ್ಕೆ ಕಾರಣ ಕೇಳಿದಾಗ ನನ್ನಕ್ಕ ಹೇಳಿದರೂ ಅದು ಒಬ್ಬ ಸ್ತ್ರೀಗೆ ಸಮಾನ .ಹೊಂಬಾಳೆ ಬಿಟ್ಟಿದೆಯೆಂದರೆ ಅದು ತಾಯ್ತನದ ಸುಖವನ್ನು ಅನುಭವಿಸುತ್ತಿದೆಯೆಂದರ್ಥ. ಆ ಸಂದರ್ಭದಲ್ಲಿ ನಾವು ಒಬ್ಬ ಗರ್ಭಿಣಿ ಸ್ತ್ರೀಗೆ ಯಾವ ರೀತಿಯ ಸಂಭ್ರಮಾಚರಣೆಗಳನ್ನು ಮಾಡುತ್ತೇವೆಯೋ ಅದೇ ರೀತಿ ಈ ಕಲ್ಪವೃಕ್ಷಕ್ಕೂ ಮಾಡಿದಾಗ ಸಮೃದ್ಧವಾಗಿ ಫಸಲು ಕೊಡುವದು ಎಂದಳು. ಅದರಂತೆ ನಾವೆಲ್ಲರೂ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ತೋಟಕ್ಕೆ ಹೋದೆವು . ನಾವು ಹೋಗುವುದು ಕೆಲವು ದಿನಗಳ ಕಾಲ ತಡವಾಗಿ ಆ ಮರದಲ್ಲಿ ಆಗಲೇ ಕಾಯಿಕಟ್ಟುತ್ತಿತ್ತು. ಕೆಲವು ಕಡೆ ಹೊಂಬಾಳೆ ಹೊಸದಾಗಿ ಬಿಡುತ್ತಿತ್ತು, ಮಾಡುವ ವಿಧಿ ವಿಧಾನಗಳನ್ನು ನಿಯಮಬದ್ಧವಾಗಿ ಮಾಡಿದರೆ ಭೂತಾಯಿಗೂ ಹಾಗೂ ಕಲ್ಪವೃಕ್ಷಕ್ಕೂ ಶ್ರೇಯಸ್ಸು ಎಂದಳು ನಮ್ಮಕ.
ಅದರಂತೆ ನಾವು ಆ ಟೆಂಗಿನ ಮರವನ್ನೆಲ್ಲಾ ಶುಚಿಗೊಳಿಸಿ, ಪೂಜೆ ಸಲ್ಲಿಸಿ ಅನಂತರ ಹಸಿರು ಸೀರೆಯನ್ನು ಉಡಿಸಿ ,ಒಬ್ಬ ಗರ್ಭವತಿ ಸ್ತ್ರೀಗೆ ಉಡಿ ತುಂಬುವಂತೆ,ಕೊಬರಿ ಬಟ್ಟಲಿನಲಿ ಅರಿಶಿಣ ಕೊಂಬು, ಬೆಟ್ಟಡಿಕೆ, ಉತ್ತತ್ತಿ ,ಅಕ್ಷತೆ, ಬೆಲ್ಲ, 1ರೂಪಾಯಿ ಹಾಕಿ, 2 ವೀಳ್ಯದೆಲೆಯ ಮೇಲೆ ಉಡಿ ಸಾಮಾನನ್ನು ಇಟ್ಟು ಅದನ್ನು ಒಂದು ಹಸಿರು ಬಟ್ಟೆಯಲ್ಲಿ ಕಟ್ಟಿ ಅದನ್ನು ಕಲ್ಪವೃಕ್ಷ ಗಿಡಕೆ ಕಟ್ಟಿ, ಹಸಿರು ಬಳೆ ತೊಡಿಸಿ, ಹೂಗಳಿಂದ ಶೃಂಗರಿಸಿ,ಬಾಳೆಹಣ್ಣು , ಕಾಯಿ, ಕರ್ಪೂರಾದಿಗಳನ್ನು ಬೆಳಗಿ, ಗರ್ಭಿಣಿ ಸ್ತ್ರೀಗೆ ತಾಯ್ತನದ ಸುಖ ಅನುಭವಿಸುವದಕ್ಕೋಸ್ಕರ ಹಾಡು ಹಾಡುವಂತೆ ಅಲ್ಲಿಯೂ ಒಂದು ಹಾಡನ್ನು ಹಾಡಿ, ಅನಂತರ ಭೂ ತಾಯಿಯ ಪೂಜೆ ಸಲ್ಲಿಸಿ, ಸಲ್ಲಿಸಿದ ನೈವೇದ್ಯದಲ್ಲಿ ಒಂದು ನೈವೇದ್ಯವನ್ನು ಭೂತಾಯಿಗೆ ಸಮರ್ಪಿಸಿದೆವು.ಇದರಿಂದ ಭೂತಾಯಿ ಸಂತೃಪ್ತಗೊಂಡು ತನ್ನ ಮಡಿಲಲ್ಲೇ ಬೆಳೆದ ಸಸ್ಯಗಳಿಗೆ ಸಮೃದ್ಧವಾದ ಫಸಲನ್ನ ನೀಡುವುದಕ್ಕೆ ಸಹಾಯಕಳಾಗಿರುತ್ತಾಳೆ ,ಅದಕ್ಕಾಗಿ ನಾವು ಭೂತಾಯಿಗೆ ನೈವೇದ್ಯವನ್ನು ಸಮರ್ಪಿಸಬೇಕು ಎಂಬ ನಂಬಿಕೆ.ಹಾಗೆ ಸಮರ್ಪಿಸಿದ ನೈವೇದ್ಯವೂ ಸಹ ಸಾಕಷ್ಟು ಸೂಕ್ಷ್ಮ ಜೀವಿಗಳಿಗೆ ಆಹಾರವಾಗಿ ಉಪಯುಕ್ತವಾಗುತ್ತದೆ. ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ಒಂದುರೀತಿಯ ಸಂತಸದ ಕ್ಷಣವಾಗಿತು. .ನಾವು ಮಾಡಿದ ಪೂಜಾಕಾರ್ಯಗಳಿಂದ, ಕಲ್ಪವೃಕ್ಷಮರ ಸಂತೃಪ್ತಿಯಿಂದ ವಿಶೇಷವಾಗಿ ಫಲವನ್ನು ನೀಡುತ್ತದೆ,ದಣಿದವರ ದಾಹವನ್ನು ನೀಗಿಸುವ ಪೌಷ್ಠಿಕಯುತವಾದಂತಹ ಅಮೃತಕ್ಕೆ ಸಮಾನವಾದಂತಹ ಹಾಲನ್ನು ಕೊಡುತ್ತದೆ ಎಂದು ಹೇಳಿದಾಗ, ವೃಕ್ಷ ಪೂಜೆಯ ಬಗ್ಗೆ ತಿಳಿಸಿದ ಅವರ ಜ್ಞಾನದ ಮುಂದೆ ನಾವು ಕಲಿತ ಜ್ಞಾನ ಶೂನ್ಯವೆನಿಸಿತ್ತು. ಎಷ್ಟೋ ಸಂದರ್ಭಗಳಲ್ಲಿ ಸಸ್ಯಗಳು ಭಾವನಾತ್ಮಕವಾಗಿ ನಮಗೆ ಸ್ಪಂದಿಸುತ್ತವೆ ಎನ್ನುವ ಅರಿವನ್ನು ಮೂಡಿಸಿದ ಸಂದರ್ಭ ಇದಾಗಿತ್ತು.ಸಸ್ಯಗಳಿಗೂ ಜೀವವಿದೆ ಎಂದು ಹೇಳಿದ ವಿಜ್ಞಾನಿಯಾದ ಜಗದೀಶ್ ಚಂದ್ರ ಬೋಸರ ನೆನಪಾಯಿತು .ನಾವುಪೂಜೆ ಸಲ್ಲಿಸಿದ ನಂತರ ಏನೋ ಒಂದು ರೀತಿಯ ಆನಂದ. ಆ ಟೆಂಗಿನ ಮರದ ಗರಿಯಿಂದ ಹೊರ ಹೊಮ್ಮಿದ ತಂಪಾದ ಗಾಳಿ ಮನಸ್ಸಿಗೆ ಹಿತವೆನಿಸಿತ್ತು.
ಎಪ್ಪತ್ತರಿಂದ ಎಂಬತ್ತು ವರ್ಷಗಳ ಕಾಲ ಬದುಕಿ ಫಲಕೊಡುವ ಒಂಟಿ ಕಾಂಡದ ವೃಕ್ಷವೆಂದರೆ ಅದುವೇ ಕಲ್ಪವೃಕ್ಷ ಅಥವಾ ತೆಂಗಿನ ಮರ. ಹೆಚ್ಚಾಗಿ ನಾವು ಒಂದು ಹಣ್ಣನ್ನು ತಿಂದು ಬೀಜವನ್ನು ಎಸೆದಾಗ, ಪಕ್ಷಿ ,ಮೃಗ ,ಗಾಳಿ, ಮಳೆಯ ಮೂಲಕ ಎಲ್ಲಿಯಾದರೂ ಬಿದ್ದಾಗ, ಅದು ಮೊಳಕೆಯೊಡೆದು ಗಿಡವಾಗುತ್ತದೆ. ದೇವರಿಗೆ ಸಮರ್ಪಿಸುವ ಶ್ರೇಷ್ಠ ವಸ್ತುಗಳಲ್ಲಿ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಬಳಸುವುದು ವಾಡಿಕೆ .ಬಾಳೆಹಣ್ಣನ್ನು ಸುಲಿದು ಅಥವಾ ಇಡಿಯಾಗಿ ಬಾಳೆಹಣ್ಣನ್ನು ಹಾಗೇ ಎಸೆದರೂ ಅದು ಮತ್ತೆ ಬೆಳೆಯುವುದಿಲ್ಲ ಒಂದು ಬಾಳೆಯ ಗಿಡ ಒಂದು ಸಾರಿ ಮಾತ್ರ ಫಲ ಬಿಡುವುದು. ಅದಕ್ಕೋಸ್ಕರ ಬಾಳೆಹಣ್ಣು ಪೂಜೆಗೆ ಶ್ರೇಷ್ಠವೆನ್ನುತ್ತಾರೆ .ಅಂದರೆ ಮರುಜನ್ಮವಿಲ್ಲದ ಮುಕ್ತಿಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಬಾಳೆಹಣ್ಣನ್ನು ನೈವೇದ್ಯದ ರೂಪದಲ್ಲಿ ಸಮರ್ಪಿಸುತ್ತಾರೆ.
ಅದೇ ರೀತಿ ದೇವರ ಸನ್ನಿಧಿಯಲ್ಲಿ ತೆಂಗಿನ ಕಾಯಿ ಒಡೆದರೆ ನಮ್ಮ ಪಾಪಕರ್ಮ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಈ ಕಾರಣದಿಂದಲೇ ಬಾಳೆಹಣ್ಣು ಮತ್ತು ತೆಂಗಿನ ಕಾಯಿಗಳು ನೈವೇದ್ಯ ರೂಪದಲ್ಲಿ ಶ್ರೇಷ್ಠ .ಬಾಳೆ ಮರದ ಕಂದೆ ಇನ್ನೊಂದು ಬಾಳೆ ಮರವಾಗುತ್ತದೆ. ಉಪಯೋಗಿಸದ ತೆಂಗು ಅಂದರೆ ಇಡೀ ಕಾಯಿಯಿಂದಲೇ ತೆಂಗಿನ ಸಸಿ ಬೆಳೆಯುತ್ತದೆ. ಬಾಳೆ ಮತ್ತು ತೆಂಗಿನ ಮರದ ಎಲ್ಲಾ ಭಾಗಗಳು ವ್ಯರ್ಥವಾಗದೆ ಉಪಯುಕ್ತವಾಗಿವೆ .ಆದ್ದರಿಂದಲೇ ಕಲ್ಪವೃಕ್ಷ ಎನ್ನುವ ಅರ್ಥವೇ ಕೇಳಿದ್ದನ್ನು ಕೊಡುವ ಮರ. ತೆಂಗಿನ ಮರದ ಗರಿ ,ಕಾಂಡ, ತೆಂಗಿನಕಾಯಿ ಪ್ರತಿಯೊಂದು ಉಪಯುಕ್ತ. ಗರಿಯಿಂದ ಹೊದಿಕೆ, ಮನೆಯ ಛಾವಣಿಗೆ ಚಾಪೆ, ಅಲಂಕಾರಿಕ ಸಾಮಗ್ರಿ ,ಮಕ್ಕಳು ಊದುವ ಪಿಪಿ, ಹಾವು, ಜಡೆಸರ ಇತ್ಯಾದಿ ಸಾಮಗ್ರಿಗಳನ್ನು ತಯಾರಿಸಲು ಉಪಯುಕ್ತವಾದರೆ, ಕಾಂಡವು ಮನೆಗೆ ಕಂಬ ಅಥವಾ ತೊಲೆಗಳಾಗಿ ಬಳಸುವುದರ ಜೊತೆಗೆ ಸೌದೆಯಾಗಿ, ಸಣ್ಣ ಕಾಲುವೆ ದಾಟಲು ನಾವೇ ಯಾಗಿಯೂ ಬಳಸಲ್ಪಡುತ್ತದೆ.
ಟೆಂಗಿನಕಾಯಿ ಪ್ರತಿಯೊಂದು ದೇವತಾಕಾರ್ಯದಲ್ಲಿ ಬಳಸಲ್ಪಡುವಂತಹ ಶ್ರೇಷ್ಠ ಫಲವಾಗಿದೆ. ಲಕ್ಷ್ಮೀ ಯ ಪೂಜಾ ಕಾರ್ಯದಲ್ಲಿ ತೆಂಗಿನಕಾಯಿ ಇಲ್ಲದೆ ಪೂಜೆ ನಡೆಯುವುದಿಲ್ಲ.ಕಳಶದ ಪ್ರತೀಕವಾಗಿ ಬಳಸುವರು. ತೆಂಗಿನಕಾಯಿಯ ಮೇಲ್ಭಾಗದ ತೆಂಗಿನ ನಾರು ಹಗ್ಗ ,ಕಾಲು ಚಾಪೆ, ಆಟಿಕೆ ಸಾಮಾನುಗಳ ತಯಾರಿಕೆಗೆ ಬಳಸಲ್ಪಡುತ್ತದೆ .ತೆಂಗಿನ ಹಾಲು ಆರೋಗ್ಯಕ್ಕೆ ಶ್ರೇಷ್ಠ .ಜೊತೆಗೆ ತೆಂಗಿನಕಾಯಿಯ ಕೊಬ್ಬರಿಯು ಅಡಿಗೆಗೆ ಮತ್ತು ಕೊಬ್ಬರಿ ಎಣ್ಣೆ ತಯಾರಿಕೆಗೆ ಉಪಯುಕ್ತ. ಸರ್ವ ರೀತಿಯಿಂದಲೂ ಉಪಯುಕ್ತವಾದ ತೆಂಗಿನ ಮರ ಮತ್ತು ಬಾಳೆ ಗಿಡದಂತೆ ಮಾನವ ಜನ್ಮವು ಸಹ ಪರೋಪಕಾರಿ ಜೀವನವನ್ನು ನಡಸಬೇಕೆಂಬುದು ಇದರ ತಾತ್ಪರ್ಯ. ಹೀಗಾಗಿ ಇವುಗಳು ನೈವೇದ್ಯಕ್ಕೆ ಶ್ರೇಷ್ಠವಾದವುಗಳು .
ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ
ವಿಷವೇರಿತ್ತಯ್ಯ ಅಪಾದಮಸ್ತಕಕ್ಕೆ
ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ
ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ ।
ಎನ್ನುವ ದೇವರ ದಾಸಿಮಯ್ಯನವರ ವಚನ ಇಲ್ಲಿ ಸ್ಮರಿಸಬೇಕಾಗಿದೆ . ಅಂದರೆ ಹಸಿವೆಂಬ ಹೆಬ್ಬಾವು ಹೊಟ್ಟೆಯನ್ನು ಆವರಿಸಿದಾಗ , ಆ ಹಸಿವೆಂಬ ನಂಜು ಇಡೀ ದೇಹವನ್ನು ವ್ಯಾಪಿಸುತ್ತದೆ .ಅಂತಹ ಹಸಿದವನಿಗೆ ಅನ್ನ ವನ್ನು ಕೊಟ್ಟು ಯಾರು ಹಸಿವೆಯಂಬ ನಂಜನ್ನುಇಳಿಸುತ್ತಾರೋ ಅವರೇ ಈ ಭೂಮಿಯಲ್ಲಿ ಗಾರುಡಿಗನಿಗೆ ಸಮಾನ ಅಂದರೆ ದೇವರಿಗೆ ಸಮಾನ ಎಂದರ್ಥ. ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳಲು ಬೇಕಾದ ಆಹಾರ ದೊರೆಯದೆ ದಿನನಿತ್ಯ ಹಸಿವಿನ ಬೇಗೆಯಲ್ಲಿ ಬೇಯುತ್ತಿರುವ ಕೋಟಿ ಕೋಟಿ ಜನರ ಹಸಿವನ್ನು, ಸಂಕಟವನ್ನು ನೀಗಿಸುವ ಕೆಲಸವನ್ನು ಪರೋಕ್ಷವಾಗಿ ಇಲ್ಲಿ ಕಲ್ಪವೃಕ್ಷಗಳು ಮಾಡುತ್ತಿವೆ ಎಂಬುದು ಹೆಮ್ಮೆಯ ಸಂಗತಿ .ಅಂತಹ ಹಸಿವನ್ನು ನೀಗಿಸುವ ಕಲ್ಪವೃಕ್ಷ ದೇವತೆಗೆ ನನ್ನದೊಂದು ನಮನ .
- ಶ್ರೀಮತಿ ಸುಮಂಗಲಾ ಕೃಷ್ಣ, ಕೊಪ್ಪರದ ಶಿಕ್ಷಕಿ ಇಲಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ