ಬದುಕೊಂದು ವ್ಯಾಕರಣದ ಪುಸ್ತಕ
ಬರೀಯ ಪ್ರಶ್ನಾರ್ಥಕಗಳೇ ಮನದ ಮಸ್ತಕ
ಆಯುಷ್ಯದ ಅಲ್ಪಪ್ರಾಣ ಒಂದಿದೆ ನುಸ್ತುಕ
ಉಸಿರ ಹಿಡಿದು ಕರುಳ ಬಸಿದು ಮಹಾಪ್ರಾಣವಾದ ಪರಿಚಾರಕ...!!
ಬದುಕು ಭಾರವಾಗಿ ನಿಂತಿದೆ
ಎಲ್ಲವೂ ಪ್ರಶ್ನೆಗಳ ಅವತರಣಿಕೆ ಎಂದಿದೆ
ಉತ್ತರ ದೊರಕದ ಭಾವಾಂತರಣಿಕೆ ಕಾದಿದೆ
ಎಲ್ಲದಕ್ಕೂ ಉದ್ಗಾರ ಒಂದೇ ನನ್ನೊಳಗೆ ಸಂದಿದೆ....!!
ಮಾತು ಮೌನಗಳೊಳಗೆ ಸ್ವರ- ವ್ಯಂಜನಗಳ ಸರಸ
ಪದಗಳ ಪೋಣಿಕೆಗೆ ವರ್ಣಮಾಲೆಗಳೇ ಅರಸ
ಸವಿಭಾವ ಬೆರೆಸಲು ನವರಸಗಳಲಿ ಸಂತಸ
ಒಲವ ಬೆಸೆದು ಜಗವ ಮರೆಸಲು ರಸಗಳಲಿ ವಿರಸ....!!
ಪ್ರೇಮನೌಕೆಯ ದಡ ಸೇರಿಸುವ ಸಂಚಾರಿ ಗುಣಿತಾಕ್ಷರ
ಭಾವನೆಗಳ ಬೆಸೆದ ಕೊಂಡಿಯ ಮಾತು ಸಂಯುಕ್ತಾಕ್ಷರ
ಮನದ ಮಾಯೆಯ ಮಮಕಾರ ವಚನಗಳ ವಿಚಾರ
ಅರಿತು ಬೆರೆಸುವದೇ ಸಂಧಿಗಳ ಚೆಲುವ ಸಹಕಾರ....!!
ನವ ನಾಮ ನವ ರೀತಿ ನಡೆದಂತೆ ಗೆಲುವು ಅದೇ ನಾಮಪ್ರಕೃತಿ
ಭಾವ ಬಂಧ ಹೊಸ ಅನುಬಂಧ ಅವ್ಯಯಗಳದೇ ಸುಕೃತಿ
ವೀಶೆಷ ಭಕ್ತಿ ವೀನೋದ ರೀತಿ ಕಾರಣ ವಿಭಕ್ತಿ
ನೀಡಿ ಪಡೆದ ಪ್ರಸಾದದ ಪರಿಮಳ ಅದರೊಳಗೆ ಅನುಕ್ತಿ....!!
ಸಂಧ್ಯಾರಾಗದಿ ಸಂಧಿಸಲು ಸಹಕಾರಿ ತದ್ಧಿತ ಪದ
ಕ್ರಿಯೆಗೆ ಪ್ರತಿಕ್ರಿಯಿಸಲು ಪ್ರತಿಪದಕ್ಕೂ ಬೇಕು ಕ್ರಿಯಾಪದ
ನುಡಿದಂತೆ ನಡೆ ನೀನು ತಪ್ಪಿಲ್ಲ ತತ್ಸಮಗಳಲಿ ತಕರಾರು
ಸವಿದಷ್ಟು ಸವಿ ನೀನು ಕಹಿಯಿಲ್ಲ ತದ್ಭವಗಳಲಿ ಮತ್ತಾರು....!!
ಬಾಳಿನ ಸಾಂಗತ್ಯದಲಿ ಸಮಾಸಗಳದೇ ಸಂಚಾರ
ಪ್ರತಿಕ್ಷಣಕ್ಕೂ ಕಾಲದಡಿಯಲಿ ಕಾಣದ ಭಾವೋದ್ಗಾರ
ಪ್ರತಿ ಹೆಜ್ಜೆಗೂ ಮಿಡಿದ ಮನದಲಿ ಅಧ್ಯಾಹಾರ
ಅವ್ಯಯಗಳ ಆಕರಣದಲಿ ಬಯಕೆಗಳ ನಿರಾಹಾರ....!!
ಬಾಳಿನ ಅಲಂಕಾರವ ಅಲಂಕರಿಸಲಿ ಹೇಗೆ
ಅಂದ ತುಂಬಿದ ಛಂದಸ್ಸಿನ ಮೋಡಿಯಲಿ ಹೀಗೆ
ಒಂದರ್ಥಕ್ಕೆ ನಾಲ್ಕುಸಾಲು ನವಿಲುಗರಿ ಬಿಚ್ಚಿದಂಗೆ
ನಾನಾರ್ಥಕ್ಕೆ ಸಾವಿರ ಪಾಲು ಕೈಬೀಸಿ ಕರೆದಂಗೆ....!!
ಕಂದಕಗಳೇ ಪಯಣದ ತುಂಬ ಪದ್ಯವಾಗುವವರೆಗೆ
ಅಂತ್ಯದಲಿ ಪ್ರಾಸವ ಕಂಡು ಆದಿ ಕೂಡ ಸೇರಿತು ಒರೆಗೆ
ಇನ್ನು ಮಧ್ಯದ ಭಾವಾರ್ಥಕ್ಕೆ ಜೀವ ಬಂದರೆ ಹಾಗೆ
ಗಿರಗಿಟ್ಟಲೆ ಹೊಡೆಸುವದು ಅಲ್ಪವಿರಾಮ ಆಗಾಗ್ಗೆ.....!!
ಕನಸಿನ ಕನವರಿಕೆಗೆ ಬೇಕು ಹೊಸ ರಾಗ ಭಾವಗಳು
ಹೊಸೆದು ಹೊನಲು ಹರಸಿವೆ ಉಪಮಾನ ಉಪಮೇಯಗಳು
ಹಳೆದು ಹೊಸತರಲ್ಲಿ ತುಂಬಿವೆ ಬರೀ ರಗಳೆಗಳು
ಎಲ್ಲವ ಸರಿಪಡಿಸುವ ರೂಪಧಾರಿ ಗುರು- ಲಘುಗಳು....!!
ಅಂಶಾಂಶಿ ಭಾವಗಳ ಸಮ್ಮೀಲನದ ಸಮ್ಮೋಹನ
ಯತಿಗಣಗಳ ಯಥೇಚ್ಛ ವ್ಯಾಕುಲತೆಯ ಮೋಹನ
ಪ್ರತ್ಯಯಗಳ ಪರಿಭಾವದ ಪರಿಚಯದಲಿ ಏನೋ ಆಕರ್ಷಣ
ಮಾತಿನ ಸರಪಳಿಗಳಲಿ ನೋವಿಗೂ ಒಂಥರ ಉತ್ಕರ್ಷಣ...!!
ನಾನಾ ರೀತಿ ನಾವು ನಡೆವ ದಾರಿ ಕಾರಣ ನಾಮಪ್ರಕೃತಿ
ಮನಸ್ಸೋ ಮೆಚ್ಚಿ ಕಾರಕಗಳ ಸೇರಿಸೋ ಶಕ್ತಿ ಸುಕೃತಿ
ಕೂಡಿ ಕಳೆದಾಗ ಬೇಕೆಂಬ ವಾಂಛೆಯಲಿ ನೆನಪಿನ ವಿಕೃತಿ
ನೀನು ನೀನಾದಾಗ ಹೊಸ ಬಾಳ ಪಲ್ಲವಿಯಲಿ ನಿರಾಕೃತಿ...!!
ಅನುರಾಗದ ಆಲಿಂಗನಕೆ ಅವಶ್ಯ ವಿವರಿಸೋ ಲಿಂಗಗಳು
ಒಂದೊಂದು ವಿವಿಧತೆಯಲಿ ಅರಳಿಸಿ ತಿಳಿಸೋ ಅಂಗಗಳು
ಮರೆವಿನ ಮಂಪರ ಹರಸಿದಾಗ ಅಕರ್ಮಕಗಳೇ ಧಾತುಗಳು
ಪ್ರಯೋಗಗಳ ಗಮಕದಲ್ಲಿ ಗಮನಿಸು ನೀ ಗಮ್ಯಕಗಳು....!!
ಎದೆಯೊಳಗಿನ ಅರಿಷಡ್ವರ್ಗಗಳ ಎಚ್ಚರಿಸೋ ಷಟ್ಪದಿಗಳಲಿ
ಗಣಗಳ ಗುಣ ಪರಿಚಯಿಸೋ ಪರಿಚಾರಕ ಪಂಜರಗಳಲಿ
ಕರ್ತರಿ- ಕರ್ಮಗಳ ಪರಿಣಿತ್ಯದ ಪಾವಿತ್ರ್ಯತೆಗಳಲಿ
ನಾಮ, ಹೋಮ, ಲಕ್ಷಣಗಳ ಜೋಡುಗಟ್ಟಿದ ನುಡಿಗಳಲಿ...!!
ದಾಟಿ ಬಂದ ಅಪರಿಹಾರಕದ ಜೀವ ಭಾವನಾಮ
ವೃತ್ತಗಳ ವೃತ್ತಾಂತ ಕವಿಕಾಣದ ಪರಿಣಾಮ
ಏಣಿಸಿ, ಗುಣಿಸಿ ಬದುಕ ನೆನೆದಾಗ ಅನುಲೋಮ- ವಿಲೋಮ
ಪ್ರಶ್ನಾರ್ಥಕಗಳೇ ಉತ್ತರಗಳಾದಾಗ ಬಾಳಿಗೆ ಒಂದು ಪೂರ್ಣ ವಿರಾಮ....!!
- ಅಶ್ವಿನಿ.ಭೀ ಬರಗಾಲಿ
" ಕ್ರಾಂತದರ್ಶಿ" ನಿಲಯ
ವೀವೆಕಾನಂದ ನಗರ
7 ನೇ ಅಡ್ಡರಸ್ತೆ
ಗೋಕಾಕ-591307.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Nice le ....felt happy
ಪ್ರತ್ಯುತ್ತರಅಳಿಸಿSuper mam
ಪ್ರತ್ಯುತ್ತರಅಳಿಸಿ