ಮಾನವೀಯ ಮೌಲ್ಯಗಳಿದ್ದರೆ ಜೀವನಕ್ಕೆ ಸಾರ್ಥಕತೆ
ಬಹು ವಿಸ್ತಾರವಾದ ಈ ಲೋಕದಲ್ಲಿ ಜೀವನ ನಮ್ಮದು ಆದರೆ ಜೀವ ನಮ್ಮದಲ್ಲ. ಭೂಮಿ ಮೇಲಿನ ನಮ್ಮ ಸೃಷ್ಟಿಗೆ ಉದ್ದೇಶವಿದೆಯೇ ಹೊರತು ಸುಮ್ಮನೆ ಬಂದಿದ್ದಲ್ಲ. ಕೋಟ್ಯಾನುಕೋಟಿ ಜೀವರಾಶಿಗಳ ಸೃಷ್ಟಿಯಲ್ಲಿ ಮನುಜ ಮಾತ್ರ ಬುದ್ದಿವಂತ. ಮಾನವ ದಾನವನಾಗದೆ ಮಾನವನಾದರೆ ಸಾಕು ಅದು ಮಾನವೀಯತೆಗೆ ಸಂದ ಜಯ.
*"ವಸುದೈವ ಕುಟುಂಬಕಂ"* ಎನ್ನುವಂತೆ ನರನಾದಿಯಾಗಿ ಎಲ್ಲಾ ಸಕಲ ಪ್ರಾಣಿ ಪಕ್ಷಿಗಳಿಂದಿಡಿದು ಜೀವ ಜಂತುಗಳವರೆಗೆ ಮಾನವೀಯ ಮೌಲ್ಯಗಳು ಅತ್ಯಗತ್ಯ. ಸತ್ಯ, ನ್ಯಾಯ, ಒಳ್ಳೆಯತನ, ನಂಬಿಕೆ, ಅರಿವು, ದಾನ, ತ್ಯಾಗ ಮುಂತಾದ ಮಾನವೀಯ ಮೌಲ್ಯಗಳು ಬದುಕಿನುದ್ದಕ್ಕೂ ತುರ್ತು ನಿರ್ಧಾರ ಮತ್ತು ಬದುಕಿಗೆ ಅರ್ಥ ನೀಡುವ ಆಧಾರಗಳಾಗಿವೆ.
ಆದರೆ ಇತ್ತೀಚೆಗೆ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆಯೇನೋ ಎಂಬ ಆತಂಕ ಮೂಡಿದೆ. ಸ್ವಾಮಿ ವಿವೇಕಾನಂದರು ಹೇಳುವಂತೆ *" ಪಕ್ಕದ ಮನೆಯಲ್ಲಿ ಉಪವಾಸ ಇದ್ದಾಗ ಸಹಕಾರಕ್ಕೆ ಧಾವಿಸದೆ ಕಂಡು ಕಾಣದಂತಿರುವುದು ಮಾನವೀಯತೆ ಅಲ್ಲ"* ಎಂದಿದ್ದಾರೆ.
ವ್ಯಕ್ತಿಯೂ ರಸ್ತೆಯಲ್ಲಿ ತುರ್ತಾಗಿ ಅನಾಹುತವಾದಾಗ ಈಗಿನ ಸಮಾಜ ನೋಡುವ ದೃಷ್ಟಿಯೇ ಬೇರೆ. ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಜಗತ್ತಿಗೆ ಸಾರುವ ಜನ ಆ ವ್ಯಕ್ತಿಯ ಜೀವ ಉಳಿಸುವ ಗೋಜಿಗೆ ಯಾರೂ ಧಾವಿಸುವುದಿಲ್ಲ. ಇದು ದುರಾದೃಷ್ಟ.
ಕೋಟಿಗಟ್ಟಲೇ ಸಂಪಾದಿಸಿದರೂ ಕೂಡಾ ಅದರಿಂದ ನೆಮ್ಮದಿ ಸಿಗಲ್ಲ. ಅದರಲ್ಲಿ ಅಲ್ಪನಾದರೂ ದಾನ ಮಾಡಿದರೆ ಅದರ ತೃಪ್ತಿಯೇ ಬೇರೆ. ಅಲ್ಲದೆ ನೂರು ವರ್ಷ ಬದುಕಿದರೆ ಸಾರ್ಥಕವಿಲ್ಲ. ಬದಲಾಗಿ ಸತ್ತವರ ಮನೆಗೆ ಹೋಗಿ ಅತ್ತವರ ಕಣ್ಣೀರು ಒರೆಸಿ ಸಾಂತ್ವಾನ ಹೇಳುವುದೇ ಧರ್ಮ.
ಹಸಿದವರಿಗೆ ಅನ್ನ, ನೊಂದವರಿಗೆ ಸಾಂತ್ವಾನ, ಅನುಕಂಪ, ನಂಬಿದವರಿಗೆ ನಂಬಿಕೆ, ಸತ್ಯ, ಬಡವರಿಗಾಗಿ ದಾನ, ಹಂಚಿ ತಿನ್ನುವ ವ್ಯಕ್ತಿತ್ವ ಇಂತಹ ಮಾನವೀಯ ಮೌಲ್ಯಗಳೇ ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸುತ್ತವೆ.
ಎಲ್ಲರೂ ಹೇಳ್ತಾರೆ *"ಕಾಲ ಬದಲಾಗಿದೆ"* ಅಂತ. ಆದರೆ ಕೂಲಂಕಷವಾಗಿ ಪರಾಮರ್ಶಿಸಿದಾಗ ಅರ್ಥವಾಗುವುದು ಬದಲಾಗಿರುವುದು ಕಾಲವಲ್ಲ, ಬದಲಾಗಿ ನಮ್ಮ ಮನಸ್ಥಿತಿ.
ನಾವು ಬದಲಾದರೆ ಜಗತ್ತೇ ಬದಲಾದಂತೆ. ಕಣ್ಣೆದುರಿಗೆ ಅನ್ಯಾಯ ನಡೆದಾಗ ಅದು ನಮ್ಮದಲ್ಲ ಎಂಬ ಭಾವನೆಯೊಂದಿಗೆ ಹೊರಡುವ ಹಾಗೂ ಪಕ್ಕದ ಮನೆಯಲ್ಲಿ ಜಗಳ ನಡೆದರೆ ನಮಗೇಕೆಂದು ಬಾಗಿಲು ಹಾಕಿಕೊಳ್ಳುವ ಈ ವಿದ್ಯಾಮಾನದಲ್ಲಿ ಮಾನವೀಯ ಮೌಲ್ಯಗಳ ಪಾಠ ಅಗತ್ಯವಾಗಿದೆ.
ಮಾನವೀಯ ಮೌಲ್ಯಗಳನ್ನು ಮೂಲತಃ ಮನೆಯಿಂದಲೇ ಆರಂಭಿಸಬೇಕು. ಅಂದರೆ ಮಕ್ಕಳಿಗೆ ಬಾಲ್ಯದಲ್ಲಿಯೇ ಕೆಲವೊಂದು ಮಹಾತ್ಮರ ಜೀವನದ ಕಥೆಗಳನ್ನು ಹೇಳಿ ಅವರು ಅನುಸರಿಸಿದ ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸಿ ಖಾಲಿ ಇರುವ ಮನಸಲ್ಲಿ ಮಾನವೀಯ ಮೌಲ್ಯಗಳ ಬೀಜ ಬಿತ್ತಬೇಕು. ಬರುಬರುತ್ತಾ ಬೀಜ ಮೊಳಕೆಯೊಡೆದು ಗಿಡವಾಗಿ ಮರವಾಗಿ ಬೆಳೆದು ಸಂಪೂರ್ಣ ಮಾನವೀಯ ಉಳ್ಳ ವ್ಯಕ್ತಿಯಾಗುತ್ತಾನೆ. ಉದಾಹರಣೆಗೆ ಶ್ರೀ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿಗಳ ಬಡ ವಿದ್ಯಾರ್ಥಗಳಿಗೆ ನೀಡಿದ ಅನ್ನ ದಾಸೋಹದ ಕಥೆ, ಶ್ರೀ ಪುಟ್ಟರಾಜ ಗವಾಯಿಗಳ ಅಂಧರ ಬೆಳಕಿಗಾಗಿ ನೀಡಿದ ಸಂಗೀತ ದಾಸೋಹದ ಕಥೆ, ಮಾನವೀಯ ಮೌಲ್ಯಗಳನ್ನೊಳಗೊಂಡ ಕೆಲವು ಪುರಾಣಗಳು ಹಾಗೂ ಹಳ್ಳಿಗಾಡಿನ ಜಾನಪದ ಕಥೆಗಳನ್ನು ಹೇಳುತ್ತಿರಬೇಕು.
ತದನಂತರದಲ್ಲಿ ಶಾಲೆಗಳಲ್ಲಿ ಶಿಕ್ಷಕರು ಕೇವಲ ಪಠ್ಯಧಾರಿತ ಪಾಠಗಳನ್ನಲ್ಲದೇ ಮಾನವೀಯ ಮೌಲ್ಯಗಳ ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಿ ಅರಿವು ಮೂಡಿಸಬೇಕು. ಎಳೆಯ ಮನಸಿರುವ ಮಕ್ಕಳು ಬಹುಬೇಗ ಮಾನವೀಯ ಮೌಲ್ಯಗಳನ್ನು ಅನುಕರಿಸುತ್ತಾರೆ. ಉದಾಹರಣೆಗೆ ಮಹಾತ್ಮ ಗಾಂಧೀಜಿಯವರು ಅನುಸರಿಸಿದ ಸತ್ಯ ಮತ್ತು ಅಹಿಂಸೆ, ಭಗತ್ ಸಿಂಗ್ ಅವರ ದೇಶಪ್ರೇಮ ಈ ರೀತಿಯ ಮೌಲ್ಯಗಳ ಬಗ್ಗೆ ತಿಳಿಸಬೇಕು.
ಮಾನವೀಯತೆ ಎಂದರೆ ಬರೀ ಮನುಷ್ಯ ಮನುಷ್ಯನ ಮೇಲೆ ತೋರುವುದು ಮಾತ್ರವಲ್ಲ. ಸಕಲ ಜೀವರಾಶಿಗಳ ಮೇಲೂ ತೋರಬೇಕು.
ಅದೇನೆ ಇರಲಿ ಪರಿಪೂರ್ಣ ಮನುಷ್ಯನಾಗಬೇಕಾದರೆ ಅವನು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಭೂಮಿಯಲ್ಲಿ ಜೀವ ಪಡೆದು ಜೀವಿಸಿದ್ದಕ್ಕೆ ಸಾರ್ಥಕತೆ ಬರುತ್ತದೆ.
- ಬಿ.ಕುಬೇರಪ್ಪ(ಮುತ್ತುಕಂದ),
ಕೆ.ಸೂಗೂರು, ಜಿ-ಬಳ್ಳಾರಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Tumba Artha Purnavagi Heliddire
ಪ್ರತ್ಯುತ್ತರಅಳಿಸಿಹೌದು ಸಹೋದರ ನೀನು ಹೇಳಿದಂತೆ ಮಾನವೀಯ ಮೌಲ್ಯಗಳು ಕಳೆದುಹೋಗುತ್ತಿವೆ ಮೊಬೈಲು ಉಪಯೋಗಕಿಂತ ದುರುಪಯೋಗ ಜಾಸ್ತಿಯಾಗಿದೆ ಹಾಗೆ ಮೊಬೈಲ್ ಇಲ್ದೆ ಯಾರು ಇರೋಕೆ ಆಗಲ್ಲ
ಪ್ರತ್ಯುತ್ತರಅಳಿಸಿ👍👍👍 ತುಂಬಾ ಚೆನ್ನಾಗಿದೆ ಸಾರ್.
ಪ್ರತ್ಯುತ್ತರಅಳಿಸಿತುಂಬಾ ಅತ್ಯುತ್ತಮವಾದ, ಅರ್ಥಪೂರ್ಣವಾದ ಹಾಗೂ ಅಚ್ಚುಕಟ್ಟಾದ ಬರಹ. ನಿಮ್ಮ ಭಾಷಾ ನೈಪುಣ್ಯತೆ ಎದ್ದು ಕಾಣುತ್ತಿದೆ.
ಪ್ರತ್ಯುತ್ತರಅಳಿಸಿಮಾನವಿಯ ಮೌಲ್ಯಗಳು ಎಷ್ಟು ಮುಖ್ಯ ಎಂಬುದು ತಿಳಿಯ ಪಡಿಸಿ ಮತ್ತು ಹೇಗೆ ಎಲ್ಲಿಂದ ಅಳವಡಿಸಿಕ್ಕೊಳ್ಳ ಬೇಕು ಎಂಬುದು ತಿಳಿಸಿದ್ದಕ್ಕೆ Thanks sir
ಪ್ರತ್ಯುತ್ತರಅಳಿಸಿಮಿತ್ರ, ನಿನ್ನ ಲೇಖನ ಓದಿ ಬಹಳ ಮನಮಿಡಿದು ತಿಳಿಸುವುದೇನೆಂದರೆ ಅಭಿಪ್ರಾಯ ಸತ್ಯ, ಕಾಲಘಟ್ಟದಲ್ಲಿ ನೆಡೆದಿರುವ, ನೆಡುತ್ತಿರುರುವ ವಿಷಯವಾಗಿದೆ ಬರವಣಿಗೆ ಉತ್ತಮವಾದ ವಿಷಯವಾಗಿದೆ ನನ್ನ ಅಭಿನಂದನೆಗಳು ಹೀಗೆ ಇನ್ನು ಹಲವಾರು ಸಂಗ್ರಹಣೆ ಬರಲಿ, ನಿರಂಜನ್
ಪ್ರತ್ಯುತ್ತರಅಳಿಸಿChannagide guru
ಪ್ರತ್ಯುತ್ತರಅಳಿಸಿ