ಮಂಗಳವಾರ, ಅಕ್ಟೋಬರ್ 5, 2021

ತಾತ ನಿನ್ನ ನೆನೆದು (ಕವಿತೆ) - ಸುರೇಶ್ ಕಲಾಪ್ರಿಯಾ. ಗರಗದಹಳ್ಳಿ, ಗಂಗಾವತಿ.

ತಾತ ನಿನ್ನ ನೆನೆದು.... 

ನಿನ್ನ ನೆನಪಲ್ಲಿ ಆಚರಿಸುವ ಜಯಂತಿಯಂದು
ಭರಪೂರ ಜೈಕಾರ ಹಾಕುತ್ತೇವೆ
ನಿನ್ನ ಗುಣಗಾನವನೇ ಮಾಡುತ್ತಾ
ನಿನ್ನ ಸರಣಿ ಸಾಧನೆಗಳ ನೆನೆಯುತ್ತಾ

ಮುಗಿಯಿತೀಗ.... ಕೊಂಚ ವಿರಾಮ
ಶುರು ಡೊಂಬರಾಟ...ಕಿತ್ತಾಟ ಬಡಿದಾಟ
ಹೋರಾಟದ ಸಿಹಿಯ ಹೂರಣದ ಲೇಪನ
ಅಹಿಂಸೆಯ ಮುಖಕಿನ್ನು ಕಪ್ಪು ಮಸಿ

ಜೈಕಾರದ ಸಮಯವಿನ್ನು ಮೀರಿತು
ಈಗೇನಿದ್ದರೂ ಪ್ರತೀಕಾರ... ಅವಿವೇಕಿ ಮನ
ಶಾಂತವಾಗಿ ಸರ್ಕಲ್ ನಲ್ಲಿ ನಿಂತ ನಿನ್ನ ಮೇಲೂ
ಪ್ರಖರ ಪ್ರಹಾರ...  ಕೋಪದ ಸರಣಿ ಧಾಳಿ

ಅಹಿಂಸೆಯ ಮಂತ್ರವ ಅನುದಿನವೂ ಬೋಧಿಸಿದ
ಶಾಂತಿಯ ಪಾಠವ ಅನವರತ ಪಠಿಸಿದ
ನಿನ್ನ ಶಾಂತಿಗೇ  ಭಂಗ ತರುತ್ತಿದ್ದೇವೆ
ಪುನಃ ಸಂದೇಶ ಸಾರಲು ನೀನಂತೂ ಮರಳಲಾರೆ

ಇಂಗ್ರೇಜಿಗಳೆದೆಗೆ ನಡುಕ ತಂದ ನೀನೂ
ಒಮ್ಮೊಮ್ಮೆ ಅಳುಕುವ ಪರಿಸ್ಥಿತಿ ಬಂದುದ ನೆನೆದು
ಛೇ... ನಮಗಾಗಿ ನೀನೇಕೆ ಹೋರಾಡಿದೆ
ತ್ಯಾಗಿಯಾದ ನಿನ್ನ ಮರೆಯುವ ಮುನ್ನ ಚಿಂತಿಸಬೇಕಿದೆ. 

ನೀ ಉಸುರಿದ ಶಾಂತಿ ಮಂತ್ರವ
ಅಂಕೆಯಿರದ ಮನ ಅಶಾಂತಿಯ ಹೊದಿಸಿದೆ
ಸತ್ಯ ಅಹಿಂಸೆಗಳು ಪುಸ್ತಕದಲ್ಲಿಯೇ ಮಲಗಿವೆ
ಬೆಚ್ಚಗೆ... ಚಳಿಯ ಕಾಯಿಸುವುದ ಮರೆತು

ಮುಗುಳುನಗೆಯ ತೋರುವ ನಿನ್ನ ಬಳಸಿ
ಜಗ ವ್ಯವಹಾರ ಮಾಡುತ್ತಿದೆ....
ಕಪ್ಪು, ಬಿಳಿ ಎಲ್ಲವೂ ಅದರಾಳದಲ್ಲಿ ಅಡಗಿದೆ
ಸಜ್ಜನರೂ ಸುಮ್ಮನಾಗಿದ್ದಾರೆ ಮೌನತಾಳಿ

ಹೇ... ರಾಮ ಜಯ ರಾಮ ಎಂದುಲಿದ
ನಿನ್ನ ಕನಸಿನ ರಾಮರಾಜ್ಯದಲ್ಲಿಯೂ
ಆಚೀಚೆ ನೋಡಿ ರಾಮನಾಮವ ಪಠಿಸಬೇಕಿದೆ
ವಿಪರ್ಯಾಸದ ಕ್ಷಣಕ್ಕೆ ನೀನಂತೂ ಸಾಕ್ಷಿಯಾಗಲಾರೆ.

- ಸುರೇಶ್ ಕಲಾಪ್ರಿಯಾ, ಗರಗದಹಳ್ಳಿ, ಗಂಗಾವತಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

3 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...