ಶನಿವಾರ, ಅಕ್ಟೋಬರ್ 16, 2021

ರಂಗಾಂತರಂಗಕ್ಕೊಂದು ಅಂತರಂಗದ ವಿಮರ್ಶೆಯ ಮಾತು (ಪುಸ್ತಕ ವಿಮರ್ಶೆ) - ಗಣಪತಿ ಗೋ ಚಲವಾದಿ (ಗಗೋಚ).

ರಂಗಾಂತರಂಗಕ್ಕೊಂದು ಅಂತರಂಗದ  ವಿಮರ್ಶೆಯ ಮಾತು
        ಗೋರೂರು ಅಂದಾಕ್ಷಣ ಎಲ್ಲರಿಗೂ ರಾಮಸ್ವಾಮಿ ಅಯ್ಯಂಗಾರವರು ನೆನಪಿಗೆ ಬರುತ್ತಾರೆ. ಆದರೆ ಈ  ವಿಮರ್ಶೆ ಬರಹ ಬರೆಯುವಾಗ ನನಗೆ  ಗೊರೂರಿನ ಇನ್ನೊಬ್ಬ ಮಹನಿಯರು ಪುನಃ ಪುನಃ ನೆನಪಿಗೆ ಬರುತ್ತಿದ್ದಾರೆ. ಏಕೆಂದರೆ ಇತ್ತೀಚಿಗೆ ಅವರ ಮಹತ್ವದ ಕೃತಿಯೊಂದನ್ನು ಓದುತ್ತ ಓದಿ ವಿಮರ್ಶ ಬರೆಯುವ ಆಳಕ್ಕೆ ಇಳಿದಂತೆ ಆ ಮಹನೀಯರು ಸಾಹಿತ್ಯವೂ ಸೇರಿದಂತೆ ನಾಟಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ  ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರನ್ನು ನೆನಪಿಸುವಂತೆ ಮಾಡಿದ್ದು ಅಂದರೆ ಅತಿಶಯೋಕ್ತಿ ಅಲ್ಲ. ಎಲೆ ಮರೆಯ ಕಾಯಿಯಂತೆ ಅದರಲ್ಲೂ ರಂಗಭೂಮಿಯ ಬಗ್ಗೆ  ಈ ಮಹನೀಯರು ಸಲ್ಲಿಸಿರುವ ಸೇವೆ ಅಮೋಘವಾದುದು. ಆ  ಕೃತಿಕಾರರು ಬೇರೆ ಯಾರು ಅಲ್ಲ..?   ಸಾಹಿತ್ಯ, ರಂಗಭೂಮಿಯಲ್ಲಿ ಚಿರಪರಿಚಿತರಾಗಿರುವ ಅವರೇ ಶ್ರೀಯುತ  ಗೊರೂರು ಅನಂತರಾಜೂರವರು.  ಹೌದೂ ಗೊರೂರು ಅನಂತರಾಜುರವರು 2016 ರಲ್ಲಿ ಬರೆದು ಪ್ರಕಟಿಸಿರುವ ನಾಟಕಗಳ ವಿಮರ್ಶೆನಾ ಸಂಕಲನವೇ ಈ " "ರಂಗಾಂತರಂಗ" ಕೃತಿಯಾಗಿದೆ. ಸುಮಾರು ೩೫ಕ್ಕಿಂತಲೂ ಹೆಚ್ಚು ನಾಟಕಗಳನ್ನು ಓದಿ, ಅದರಲ್ಲಿ ಕೆಲವನ್ನು ಆಡಿ, ಆಡಿಸಿ  ಅಷ್ಟಕ್ಕೂ ತೃಪ್ತಿ ಪಡದೇ ಕೊನೆಯಲ್ಲಿ ಆ ನಾಟಕಗಳ ವಿಮರ್ಶಯನ್ನು ತಮ್ಮದೇ ಆದ ಪ್ರತಿಭೆಯಿಂದ ಬರೆದು  ಕೃತಿಯೊಂದನ್ನು ಪ್ರಕಟಿಸುವ ಮೂಲಕ ತಮ್ಮ ಜೀವನದಲ್ಲಿ ತಾವು ನಾಟಕಗಳಿಗೆ, ರಂಗಭೂಮಿಗೆ ಕೊಟ್ಟ ಮಹತ್ವವನ್ನು  ಪ್ರಸ್ತುತಪಡಿಸಿದ್ದಾರೆ.  ಕೇವಲ ನಾಟಕಗಳನ್ನ. ಮಾತ್ರವಲ್ಲದೆ ಆ ನಾಟಕಗಳ ರಚನೆಕರಾರು, ಕಲಾವಿದರೂ  ಸಾಧ್ಯವಾದಷ್ಟು ಎಲ್ಲವನ್ನು  ತಮ್ಮ ವಿಮರ್ಶೆಯಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡಿರುವುದು ಅವರ ಸೃಜನಶೀಲ ವ್ಯೆಕ್ತಿತ್ವಕ್ಕೆ ಸಾಕ್ಷಿ ಎಂದೇ  ಹೇಳಬಹುದಾಗಿದೆ. ಸಾಮಾನ್ಯವಾಗಿ ನಾಟಕ ಹಾಗೂ ರಂಗಭೂಮಿಯಲ್ಲಿ ತೊಡಗಿದವರು ಇನ್ನಿತರೇ ಕ್ಷೇತ್ರದತ್ತ ಒಲವು ಇರುವುದಿಲ್ಲ ಅಥವಾ ತೋರುವುದಿಲ್ಲ ಎಂಬ ಅಪವಾದವೂ ಅಲ್ಲಲ್ಲಿ ಆಗಾಗ ಕೇಳಿ ಬರುವುದು ಉಂಟು.  ಅಂತದರಲ್ಲಿ ಇಂತಹ ಅಪವಾದವನ್ನು ಸುಳ್ಳು ಮಾಡುವ ದೆಸೆಯಿಂದನೇ ತಾವು ರಂಗಭೂಮಿಯಲ್ಲಿ ಕಲಾವಿದರೂ, ನಿರ್ದೇಶಕರು ಆಗಿದ್ದುಕೊಂಡೆ  ಸಾಹಿತ್ಯ ಮತ್ತೂ ಇನ್ನಿತರೇ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಬಿಡುವಿಲ್ಲದಂತೆ ತೊಡಗಿಸಿಕೊಂಡಿದ್ದಾರೆ.  ಆದುದರಿಂದ ಈ ನಿಟ್ಟಿನಲ್ಲಿ ಶ್ರೀಯುತರ ಈ ಕೃತಿ ಮತ್ತೂ ಅವರು ವಿಮರ್ಶಯ ಎಲ್ಲಾ ಹಂತದಲ್ಲಿಯೂ ನೆನಪಾಗುತ್ತಾ ಹೋಗುತ್ತಾರೆ. ನನ್ನ ಈ ಮಾತಿನ ಸತ್ಯಾಸತ್ಯತೆ ತಿಳಿದುಕೊಳ್ಳುವ ಹಂಬಲ ನಿಮಗಾದರೆ ತಾವುಗಳು ಗೊರೂರು ಅನಂತರಾಜು ರವರ ಈ ಕೃತಿಗೆ ಮುನ್ನುಡಿ  ಮತ್ತೂ ಬೆನ್ನುಡಿ ಬರದಂತಹ ಬೆಳ್ವಾಡಿ ಅಶ್ವಥ್ ನಾರಾಯಣ್  ಹಾಗೂ ಎಚ್ ಎಸ್ ಪ್ರಭಾಕರ್ ( ಸಂಪಾದಕರು ಜನಹಿತ ಕನ್ನಡ ದಿನಪತ್ರಿಕೆ ಹಾಸನ) ವರ ವಿಚಾರಗಳನ್ನ ತಿಳಿದುಕೊಳ್ಳಬೇಕಾಗುತ್ತದೆ.
         ಇವರ ವಿಮರ್ಶಯ ದಿಕ್ಕು  ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ ದಿಂದ ಪ್ರಾರಂಭವಾಗಿ ಹಾಸ್ಯಪ್ರಧಾನ ವೀರಪ್ಪನ್ ಭೂತ ನಾಟಕ ಎಂಬ ೩೫ನೆಯ ಶೀರ್ಷಿಕೆಯವರೆಗೂ ನಿರರ್ಗಳವಾಗಿ ಮುಂದುವರೆದಿದೆ. ಇದನ್ನು ಓದಿಯೇ  ಅರಿತುಕೊಳ್ಳಲು ಸೂಕ್ತವಾದರೂ ಈ ಎಲ್ಲ ಶೀರ್ಷಿಕೆಯುಳ್ಳ ನಾಟಕ, ರಚನೆಗಾರರ ಸಂಪೂರ್ಣ ಮಾಹಿತಿಯನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವಲ್ಲಿ ಕೃತಿಕಾರರು ಹೆಚ್ಚು ಶ್ರಮವಹಿಸಿದಂತೂ ಮಿತ್ಯವಲ್ಲ. ಹೌದೂ ಈ ಕೃತಿಯಲ್ಲಿ ಕೃತಿಕಾರರು ವಿಮರ್ಶೆ ರೂಪದಲ್ಲಿ ಬರೆದಿರುವ  ಎಲ್ಲ  ಶೀರ್ಷಿಕೆಯ ಬರಹಗಳನ್ನು ವಿವರಣೆ ಪೂರ್ವಕವಾದ ವಿಮರ್ಶೆ ಬರೆಯುವ ಗೋಜಿಗೆ ಹೋದರೆ ನನ್ನದೂ ಒಂದು ದೀರ್ಘ  ವಿಮರ್ಶೆ ಗ್ರಂಥವೇ ಆಗಬಹುದು. ಹಾಗಾಗಿ ಕನ್ನಡ ವಿಲಾಸಿ ರಂಗಭೂಮಿಯ ಮೊದಲ ಆಡುಮಾತಿನ ನಾಟಕ ಎಂಬ ಮೊದಲ ಶೀರ್ಷಿಕೆಯಿಂದ ಪ್ರಾರಂಬಿಸಿ ಕೆಲವನ್ನು ಹೆಚ್ಚು ವಿಸ್ತರಿಸಿ ಹೋದಂತೆ ಇನ್ನೂ ಕೆಲವಕ್ಕೆ ಸಂಕ್ಷಿಪ್ತಗೊಳಿಸಿರುವದಕ್ಕೂ ಸಾಧ್ಯ ಮಾಡಿದ್ದೇನೆ.
     ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ ನಾಟಕ. ಕೃತಿ  ಅಂದಿನ ದಿನಮಾನಗಳಲ್ಲಿ  ಅಚ್ಚಾಗಿ ದೊರೆತ ಮೊದಲ ನಾಟಕ ವೆಂಬ ಮಾಹಿತಿ ನೀಡುತ್ತಾರಾದರೂ ಹತ್ತು ಹಲವು ಕಗ್ಗಂಟುಗಳನ್ನು ಒಳಗೊಂಡ ಈ ನಾಟಕ ಕೃತಿಯ ವಿಮರ್ಶೆಯ ಸಾಹಸಕ್ಕೆ ಕೈ ಹಾಕಿದ್ದು ಇವರ ಸಾಹಸವೇ ಸರಿ. ಕೃತಿಕಾರರು ಇದರ  ಬಗ್ಗೆ ಇನ್ನೂ  ಹತ್ತು ಹಲವು ನಿಗೂಢ ವಿಷಯ ಅರಿತುಕೊಳ್ಳುವ ಗೋಜಿಗೆ ಹೋಗದೇ  ಈ ನಾಟಕದ/ ಕೃತಿಯ ಸಾರಾಂಶ ಬರೆಯುತ್ತ ಹೋಗಿ ವಿಮರ್ಶೆಗೆ ಪೂರ್ಣ ವಿರಾಮ ನೀಡಿರುವುದು ಸುಕಾಂತವೇ ಸರಿ ಅನ್ನಿಸುವುದು. ಮುದುಕ ಇಗ್ಗಪ್ಪ ಹೆಗ್ಗಡೆ ಸಾಯುವ ವಯಸ್ಸಿನಲ್ಲಿಯೂ ಬಾಲಕಿಯನ್ನು ಮದುವೆಯಾಗಿ ಮುಂದಿನ ಅನರ್ಥಗಳಿಗೆ ಕಾರಣವಾಗುವ ವಿವರಣೆ ಕೊಡುತ್ತಾ, ಕಾಲಮಾನದ ದೃಷ್ಟಿಯಿಂದ ಈ ಕೃತಿಗಿರುವ ವಿಶೇಷತೆ ತಿಳಿಸುತ್ತಾ  ಮೊದಲ ಶೀರ್ಷಿಕೆಯುಳ್ಳ ಈ ನಾಟಕದ ಕೃತಿಯ ವಿಮರ್ಶೆಗೆ ಇತಿಶ್ರೀ ಹಾಡಿದ್ದಾರೆ. ಅದರಂತೆ  ಚೀನಾ ಸಾಹಿತಿಯೂ ರಿಕ್ಷಾಬಾಯ್ ಎಂಬ ಕಾದಂಬರಿಯ ಮೂಲಕ ಹೆಸರುವಾಸಿಯಾಗಿದ್ದ ಲಾಹೋಶೆಯ "ಟೀ ಹೌಸ್- ಚೈನಾ ಲೈಫ್ ಎಂಬ ನಾಟಕಕಾರರ  ಸುಪ್ರಸಿದ್ದ  ಈ ವ್ಯೆಕ್ತಿಯ ಬಗ್ಗೆ ವಿಮರ್ಶೆ ಕಾರ್ಯ ಸುರು ಹಚ್ಚಿಕೊಂಡಿದ್ದು  ನಾಟಕ ಹಾಗೂ ರಚನಾಕಾರರ ಬಗ್ಗೆ ವಿಮರ್ಶೆ ಬರೆಯುತ್ತ ಹೋಗುತ್ತಾರೆ.  ಓದುಗರಿಗೆ ಇಲ್ಲಿ ಆಸಕ್ತಿ ಕೂಡ ಉಂಟಾಗಬಹುದು. ಅರ್ಥ ಆಗದೇ ಹೋದರೆ ಅನಾಸಕ್ತಿ ಇದ್ದದ್ದೇ. ಅದೇನೆ ಇರಲಿ  ಇಲ್ಲಿ ಕೃತಿಕರಾರು ಇಲ್ಲಿ ಚೀನಾ ಹಾಗೂ ಚೀನಾದ ಈ ಪ್ರಸಿದ್ದ ಸಾಹಿತಿ   ೧೮೯೯ ರಿಂದ ೧೯೬೬ ವರೆಗೆ ಜೀವಿಸಿದ್ದೂ ಆತನ ಮೇಲೆ ೧೯೧೮ ರ ಮೇ ನಾಲ್ಕರ ಚಳುವಳಿ ಬೀರಿದ್ದ ಪ್ರಭಾವವನ್ನು  ಟೀ ಹೌಸ್ ಚೈನಾ ಲೈಫ್  ನಾಟಕದ ವಿಮರ್ಶೆ ಮಾಡುತ್ತಾರೆ. ಈ ನಾಟಕದ ವಿಮರ್ಶೆಯ ಕೊನೆಯಲ್ಲಿ ಕೃತಿಕಾರರು ಟೀ ಹೌಸ್ ಚೈನಾ ಲೈಫ್ ಕನ್ನಡಕ್ಕೆ ಅನುವಾದ ವಾಗಿದ್ದು ಅದಕ್ಕೆ ಕಾರಣರಾದವರ ಬಗ್ಗೆ ಹಾಗೂ ನಾಟಕ ನಿರ್ದೇಶಸಿ ಯಶಸ್ಸು ಪ್ರದರ್ಶನ ನಡೆಸಿದ ಬಗ್ಗೆಯೂ ವಿವರಣೆ ತೃಪ್ತಿ ನೀಡುವಂತದ್ದು. 
         ಹಿಂದಿ ಭಾಷೆಯ ಪ್ರಮುಖ ಸಾಹಿತಿ ಡಾ. ಅಸಗರ್ ವಜಾಹತ ರವರ ಪರಿಚಯ ಮಾಡಿಕೊಡುತ್ತ ರವಿ ನದಿಯ ದಂಡೆಯಲ್ಲಿ -ಗೋಡ್ಸೆ ಮತ್ತು ಗಾಂಧಿ. ಕಾಮ್ ಬಗ್ಗೆ ಮಾಹಿತಿ ನೀಡುತ್ತಾರೆ. ಇದರಲ್ಲಿ ಈ ಅನ್ಯ ಭಾಷೆಯಲ್ಲಿ ಇರುವ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ ಆರ್. ಪಿ ಹೆಗಡೆಯವರ ಬಗ್ಗೆ ನೆನಪು ಮಾಡಿಕೊಳ್ಳುತ್ತಾರೆ. ನಂತರ ಈ ನಾಟಕದಲ್ಲಿ ಬರುವ ಗಾಂಧಿ ಮತ್ತು ಗೋಡ್ಸೆ  ಸೇರಿದಂತೆ ಹಲವು ಪಾತ್ರಗಳ ಸಂಭಾಷಣೆಯ ತುಣುಕುಗಳನ್ನು ಪ್ರಸ್ತುತ ಪಡಿಸುವ ಮೂಲಕ ಓದುಗರಿಗೆ ಹೆಚ್ಚು ಓದುವ ಕುತೂಹಲ ಮೂಡುವಂತೆ ಮಾಡಿದ್ದಾರೆ ಅನ್ನಬಹುದು.
      ಡಾ. ಗೋ ರು ರಾಮಸ್ವಾಮಿ ಅಯ್ಯಂಗಾರವರ ರಂಗಾಭಿನಯದ ಮೂರು ಪಾತ್ರಗಳು ಎಂಬ ಶೀರ್ಷಿಕೆಯಡಿ ಡಾ. ಗೊರೂರವರ ಬಗ್ಗೆ ಸಾಮಾನ್ಯ ಓದುಗನಿಗೂ ಆಸಕ್ತಿ ಬರುವಂತೆ  ಶ್ರೀಯುತರು ಡಾ. ಗೊರೂರುವರ ಬಗ್ಗೆ ವಿಶೇಷ, ವಿನೋದ್, ವಿವರಣಾತ್ಮಕವಾಗಿ ಮಾಹಿತಿ ತಿಳಿಸುತ್ತಾ ಹೋಗುತ್ತಾರೆ.  ಮತ್ತೊಂದು ಶೀರ್ಷಿಕೆಯಡಿ ಹೆಸರಾಂತ ನಟಿ  ಓ. ಪಂಡರಿಬಾಯಿಯವರ ಕಲೆ, ನಟನೆ, ತಾಯಿಯ ಪಾತ್ರ, ನೈಜ ಜೀವನದ ಕೆಲವು ಘಟನೆಗಳನ್ನು  ಅಮೂಲ್ಯವಾಗಿ ವಿವರಿಸಿದ್ದು ಓದುಗಪ್ರಭು ಅರ್ಥ ಮಾಡಿಕೊಂಡರೆ ಬರವಣಿಗೆ ಸಾರ್ಥಕ.
ಅಭಿನಯದಲ್ಲೇ ಬದುಕಿನ ದಾರಿ ಸವೆಸಿದ ರಾಜಾನಂದ  ಎಂಬ ವಿಮರ್ಶಾ ಲೇಖನದಲ್ಲಿ ಶ್ರೀಯುತರು ತಾಲೂಕಿನ ಹಾರನಹಳ್ಳಿಯ ರಾಜಾನಂದರ ಬಗ್ಗೆ ಬರೆಯುತ್ತ ನಟನೆ ಮತ್ತಿತರರ ಸಾಧನೆಗೆ ಬಡತನ, ಅನಾಥ ಪರಿಸ್ಥಿತಿ ಇವಾವೂ ಅಡ್ಡಿಯಾಗಲಾರವು ಆದರೆ ಸಾದಿಸುತ್ತೇನೆ ಎಂಬ ಛಲ ನಿರಂತರ ಪರಿಶ್ರಮ ಇರಬೇಕಾಗುತ್ತದೆ ಎಂಬುದನ್ನು ಓದುಗರು ತಿಳಿದುಕೊಳ್ಳಬಹುದು. ಅದೇ ರೀತಿ ಇಂದಿನ ದಿನ ಮಾನಗಳಲ್ಲಿ  ಚಲನಚಿತ್ರ ರಂಗದಲ್ಲಿ ತಮ್ಮ ಅಭಿನಯದ ಮೂಲಕ ವೈಯಕ್ತಿಕ ಎಲ್ಲಾ ಸಮಸ್ಯಗಳನ್ನು ಮೆಟ್ಟಿ ನಿಂತು ಹಾಸ್ಯ,ಪೋಷಕ, ಅಜ್ಜಿಯ ಯಾವುದೇ ವಿಧದ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸಿ ಸೈ ಅನ್ನಿಸಿಕೊಳ್ಳುವ ಮೂಲಕ ರಾಜಕೀಯ ರಂಗದಲ್ಲೂ ದುಮುಖಿ  ಕನ್ನಡ ಮತ್ತು ಸಂಸ್ಕೃತ ಸಚಿವೆಯಾಗಿದ್ದವರು ಉಮಾಶ್ರೀಯವರು. ನಾಟಕದಿಂದ ಸಿನೆಮಾವರೆಗೂ ಎಂಬ ಶೀರ್ಷಿಕೆಯ ಈ ವಿಮರ್ಶಾ ಲೇಖನದಲ್ಲಿ ಉಮಾಶ್ರೀ ಯವರ ಸಂಪೂರ್ಣ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ. 
ಅದೇ ರೀತಿಯಾಗಿ ಮತ್ತೊಂದು ಶೀರ್ಷಿಕೆ ಕೊಟ್ಟು ಇದೇ ರೀತಿಯ ನಟರೊಬ್ಬರನ್ನು ಪರಿಚಯಿಸುತ್ತಾರೆ. ಅವರೇ ಡಿಂಗ್ರಿ ನಾಗರಾಜ್. ರಂಗಭೂಮಿಯಿಂದ ಚಿತ್ರರಂಗ- ಡಿಂಗ್ರಿನಾಗರಾಜ್  ದಲ್ಲಿ ಡಿಂಗ್ರಿಯವರ ಕಲಾ ಹಾಗೂ ನಟನಾ ಸಾಧನೆಯ ಮಾಹಿತಿ ಓದುಗರಿಗೆ ತಿಳಿಸಿ ಕೊಡುವ ಪ್ರಯತ್ನ ಮಾಡಿದ್ದಾರೆ.
      ಮುಂದುವರೆದು ಬೀದಿ ನಾಟಕಗಳು ಕೂಡ  ಅನೇಕ ಮಹತ್ವದ ಪಾತ್ರವಹಿಸುತ್ತದೆ ಎಂಬುದನ್ನು ಮನಗಂಡ ವಿಮರ್ಶಕರು ಬೀದಿನಾಟಕ ಸಾರಾಯಿ ಸಂಕಟ ಎಂಬ ಶೀರ್ಷಿಕೆಯಲ್ಲಿ ಬೀದಿನಾಟಕಗಳ ಮಹತ್ವ ಹಾಗೂ ಬೀದಿ ನಾಟಕಗಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವವರ ಬಗ್ಗೆ ವಿಮರ್ಶೆ ಮಾಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬೀದಿನಾಟಕ ಡಾ. ಎಚ್ ಆರ್ ಸ್ವಾಮಿ  ಎಂಬವರ ವಿಮರ್ಶೆ ಲೇಖನ ಸಾಕ್ಷಿಯಾಗಿದೆ. ಅದೇ ರೀತಿಯಾಗಿ ಸ್ತ್ರೀಪಾತ್ರ ಗಳಲ್ಲಿ ಹೆಸರು ಮಾಡಿರುವ ಈಶ್ವರಚಂದ್ರ ಎಸ್ ಬೆಟಿಗೇರಿ ಇವರ ಬಗ್ಗೆ ಬರೆಯುತ್ತಾ ಪಾತ್ರಧಾರಿಯ ಮಹತ್ವದ ಬಗ್ಗೆ, ಕಲೆಯ ಬಗ್ಗೆ, ಸಂಭಾವನೆ ಮತ್ತಿತರ ಬಗ್ಗೆ ಮಾಹಿತಿ ನೀಡುತ್ತಾರೆ. 
      ಗೊರುರ್ ಅನಂತರಾಜ್ ಅವರು ಕೇವಲ ನಾಟಕಕಾರರು ರಂಗಭೂಮಿ ಕಲಾವಿದರನ್ನು ಮಾತ್ರ ಪರಿಚಯಿಸದೇ ಅವರೊಂದಿಗೆ ಕೃತಿಕಾರರನ್ನು, ಇನ್ನಿತರೆ ಕಲಾವಿದರ ಬಗ್ಗೆ ಪರಿಚಯಿಸುವ ಮನಸ್ಸು ಮಾಡಿದ್ದಾರೆ.  ಈ ನಿಟ್ಟಿನಲ್ಲಿ ಬೆಳ್ಳಿಕೆರೆ ಹಳ್ಳಿ ಥಿಯೇಟರ್ ಕೃತಿಯ ಲೇಖಕರಾದ ಪ್ರಸಾದ ರಕ್ಷತಿ ಅವರನ್ನು ತಮ್ಮ ವಿಮರ್ಶೆಯ ಭಾಷೆಯಲ್ಲಿ ಪರಿಚಯಿಸುತ್ತಾರೆ. ಅದೇ ರೀತಿಯಾಗಿ ತಬಲಾವಾದಕ ಕೃಷ್ಣಮೂರ್ತಿಯವರನ್ನು ಸಂದರ್ಶನ ಮಾಡಿದ ಬಗ್ಗೆ ಸಂದರ್ಶನದ ಮೂಲಕ ಅವರ ಪರಿಚಯವನ್ನು ನಾಡಿಗೆ ತಂದು ಕೊಟ್ಟದ್ದನ್ನು ವಿಮರ್ಶಿಸುತ್ತಾರೆ. 
.     ವಿಮರ್ಶಾ ಲೇಖನ 32. "ಘಟನಾವಳಿಯ ರಂಗ ರೂಪಾಂತರ ಕಂಬಾಲಪಲ್ಲಿ " ಕರ್ನಾಟಕ ನಾಟಕ  ಅಕಾಡೆಮಿ ವತಿಯಿಂದ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ  ಹಾಸನದ  ರಂಗಸಿರಿ ಕಲಾವಿದರು ಅನೀಲ್ ರೇವುರವರ   ಕಂಬಾಲಪಲ್ಲಿ ನಾಟಕವನ್ನು  ಚಂದ್ರು ರವರ ಸಂಗೀತ ಮತ್ತು ನಿರ್ದೇಶಕನದಲ್ಲಿ ನಡೆದ ಬಗ್ಗೆ  ವಿಮರ್ಶೆ ಬರೆದಿದ್ದು ಓದಿ ಕಣ್ಣುಗಳು ತೇವವಾಗುತ್ತವೆ.   21ವರ್ಷಗಳ  ಹಿಂದೆ ಮಾರ್ಚ್ 11, 2000ರಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಸಮೀಪದ ಕಂಬಾಲಪಲ್ಲಿ ಗ್ರಾಮದಲ್ಲಿ ರೆಡ್ಡಿ ಜನಾಂಗ ಹಾಗೂ ದಲಿತರ ನಡುವೆ ನಡೆದ ಸಂಘರ್ಷ ತಾರಕಕ್ಕೇರಿತ್ತು.  ಈ ಸಂದರ್ಭದಲ್ಲಿ ಏಳು ದಲಿತರನ್ನು ಅವರ ಮನೆಯಲ್ಲೇ ಸುಟ್ಟು ಹಾಕಲಾಗಿತ್ತು.ವಿಶ್ವಾನಾಥ ಎಂಬವರು ಮಾತ್ರ ಬದುಕಿ ಉಳಿದಿದ್ದರು.   ಈ ಕ್ರೂರ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.  ರೆಡ್ಡಿ ಜನಾಂಗದವರು ದಲಿತರ ಮೇಲೆ ನಡೆಸಿದ ಅತ್ಯಂತ ಹೇಯ ಕೃತ್ಯವಿದು. ಸಾಕ್ಷ್ಯಾಧಾರಗಳ ಕೊರತೆಯಿಂದ ಹೈಕೋರ್ಟ್ 32 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿತ್ತು. ಇದರ ಬಗ್ಗೆ ವಿವರಣೆಯುಳ್ಳ ನಾಟಕದ ಕೊನೆಯಲ್ಲಿ ವಿಶ್ವನಾಥ ರು ಹೇಳುವ ಮಾತು " ದಲಿತರು ತಾವೇತಾವಾಗಿ ಗುಡಿಸಲು ಒಳಗೆ ಹೋದರಂತೆ. ಕಸಕಡ್ಡಿ ತುಂಬಿಕೊಂಡು ಬೆಂಕಿಹಚ್ಚಿಕೊಂಡರಂತೆ. ಎಲ್ಲಿದೆ ಸ್ವಾಮಿ ನ್ಯಾಯ...? " ಎಂಬ ಪ್ರಶ್ನೆಯೊಂದಿಗೆ ನಾಟಕ ಮುಗಿಯುತ್ತದೆ.  ಹಾಗೆ ನೋಡಿದರೆ ಗೊರೂರು ಅನಂತರಾಜುರವರು ಕನ್ನಡ ನಾಡಿನಲ್ಲಿ ದೀನ ದಲಿತರ ಮೇಲೆ ಜಾತಿ, ಲಿಂಗ ಧರ್ಮದ ಹೆಸರಿನಲ್ಲಿ ನಡೆಯುವ ಅನೇಕ ವಿಷಯಧಾರಿತ ಘಟನೆಗಳನ್ನು ನಾಟಕ ಬರೆದು, ಸ್ವತಃ ತಾವೇ ತಮ್ಮ ನಿರ್ದೇಶನದಲ್ಲಿ ನಾಟಕ ಆಡಿಸಬಹುದು.ಇದರಿಂದಾಗಿ ಸಾಮಾಜಿಕ ನ್ಯಾಯ ಕೊಡಿಸಿದ ಕೀರ್ತಿಗೆ ಅವರು ಪಾತ್ರರಾಗಬಹುದು. ಆ ನಿಟ್ಟಿನಲ್ಲಿ ಅವರು ಮನಸ್ಸು ಮಾಡಲಿ ಎಂದು ಆಶಿಸುತ್ತೇನೆ. 
     ಹೀಗೆ ಗೊರೂರು ಅನಂತರಾಜು ರವರು ಎಲ್ಲಾ ವಿಧದ ನಾಟಕಗಳು ಕಲಾವಿದರೂ, ಇನ್ನಿತರೇ ಕ್ಷೇತ್ರಗಳ ಬಗ್ಗೆ  ಈ ವಿಮರ್ಶಾ ಕೃತಿಯಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಇನ್ನಷ್ಟು ಅಧ್ಯಯನ, ಅನುಭವ ಅವರು ಪಡೆದುಕೊಂಡು ಮತ್ತಷ್ಟು ಹೆಚ್ಚಿನ ಕೃತಿಗಳನ್ನು, ನಾಟಕಗಳನ್ನು, ವಿಮರ್ಶಾ ಕೃತಿಗಳನ್ನು ಬರೆಯುವಂತಾಗಲಿ. ನಾಡು ಅವರಿಗೆ, ಅವರಿಂದ ನಾಡಿಗೆ ಕೀರ್ತಿ ತರುವಂತಾಗಲಿ ಎಂಬುದಾಗಿ ಆಶಿಸುತ್ತಾ ಸಾಧ್ಯವಾದರೆ ಅವರ ಇನ್ನೊಂದು ಕೃತಿಯ ಬಗ್ಗೆ ವಿಮರ್ಶ ಬರೆಯುವ ಹಂಬಲ ವ್ಯೆಕ್ತಿಪಡಿಸುತ್ತ ಸದ್ಯ ಈ ವಿಮರ್ಶಾ ಕೃತಿಗೆ ಬರೆಯುತ್ತಿರುವ ವಿಮರ್ಶೆ ಬರೆವಣಿಗೆಗೆ  ಪೂರ್ಣ ವಿರಾಮ ನೀಡುತ್ತಿದ್ದೇನೆ.             
ವಂದನೆಗಳೊಂದಿಗೆ
                   
    - ಗಣಪತಿ ಗೋ ಚಲವಾದಿ( ಗಗೋಚ)
    ಬಿಎಂಟಿಸಿ ನಿರ್ವಾಹಕರು 
    ಕಸಾಪ ಮಯೂರ ವರ್ಮ ಸಾಹಿತ್ಯ
    ಪ್ರಶಸ್ತಿ ಪುರಸ್ಕೃತರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
                               

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...