ಗುರುವಾರ, ಜನವರಿ 27, 2022

ಸರ್ಕಾರಿ ಶಾಲೆ ಉಳಿಸಿ ಬೆಳಸಿ (ಲೇಖನ) - ಮೊಹಮ್ಮದ್ ಅಜರುದ್ದೀನ್

ಶಿಕ್ಷಣ ಎಂಬುವುದು ಸಾಮಾನ್ಯ ಅರ್ಥದಲ್ಲಿ ಶಿಕ್ಷಣ ಜ್ಞಾನ, ಕೌಶಲ್ಯ ಮತ್ತು  ಒಂದು ಗುಂಪಿನ ಪದ್ಧತಿ ಬೋಧನೆ, ತರಬೇತಿ ಅಥವಾ ಸಂಶೋಧನೆ ಮೂಲಕ ಮುಂದಿನ ಪೀಳಿಗೆಗೆ ಅಭಿವೃದ್ಧಿಯ ಭಾರತ ನಿರ್ಮಾಣ ಮಾಡುವುದು. ಇದರಲ್ಲಿ ಕಲಿಕೆಯು ಒಂದು ರೂಪ. ಶಿಕ್ಷಣ  ಇತರರ ಮಾರ್ಗದರ್ಶನದಲ್ಲಿ ನಡೆಯುತ್ತದೆ.   ಶಿಕ್ಷಣ ಸಾಮಾನ್ಯವಾಗಿ  ಪ್ರಾಥಮಿಕ ಶಾಲೆ, ಸೆಕೆಂಡರಿ ಶಾಲೆ ಮತ್ತು ನಂತರ ಕಾಲೇಜು, ವಿಶ್ವವಿದ್ಯಾಲಯ ಅಥವಾ ಶಿಷ್ಯವೃತ್ತಿಯ ಎಂಬ ಹಲವು ಹಂತಗಳಲ್ಲಿ ವಿಂಗಡಿಸಲಾಗಿದೆ.

ಹಿಂದಿನ ಕಾಲದಲ್ಲಿ  ಹೆಚ್ಚಾಗಿ ಯಾರು ಶಿಕ್ಷಣದ ಕಡೆ ಚಿಂತನೆ ಮಾಡುತ್ತಿರಲಿಲ್ಲ.   ಈಗ ಶಿಕ್ಷಣವೇ ಎಲ್ಲಾರ ಬದುಕಿನ ರೂಪವಾಗಿದೆ. ಈಗಿನ ಯುಗದಲ್ಲಿ ಶಿಕ್ಷಣವೇ ಎಲ್ಲಕ್ಕಿಂತ ಮುಖ್ಯವಾದ ಅಂಶವಾಗಿದೆ.   ಶಿಕ್ಷಣ ಎಂಬುದು ಅನೇಕ ಹಂತದಲ್ಲಿಯೇ  ವಿಂಗಡಗೊಂಡಿದೆ.  ಶಿಕ್ಷಣದ ಮೂಲ ಹಾದಿಯೇ ಸರ್ಕಾರಿ ಶಾಲೆಗಳು.

ಕೆಲವು ವರ್ಷಗಳ ಹಿಂದೆ  ಭಾರತವು ಶಿಕ್ಷಣವಿಲ್ಲದೆ  ಅನಕ್ಷರಸ್ಥರ ದೇಶವಾಗಿತ್ತು.  ಭಾರತ ದೇಶದಲ್ಲಿ ಎಲ್ಲರಿಗೂ ಶಿಕ್ಷಣ ಸಿಗಲಿ   ಹಾಗೂ ಭಾರತ ಅಭಿವೃದ್ಧಿಯಾಗಲಿ ಎಂದು  ಸರ್ಕಾರವು ಪ್ರತಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಆರಂಭಿಸಿ ಅಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಲು  ಆರಂಭ ಮಾಡಿತು. ಹಂತ ಹಂತವಾಗಿ ನಮ್ಮ  ಕರ್ನಾಟಕ ರಾಜ್ಯದಲ್ಲಿ  ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ.   ಖಾಸಗಿ ಶಾಲೆಗಳ ಅಬ್ಬರದಿಂದ ನಮ್ಮ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿ ಬಂದು ನಿಂತಿವೆ.  

ನಮ್ಮ ದೇಶ ಭಾರತದಲ್ಲಿ ಖಾಸಿಗೆ ಶಾಲೆಗಳ ಅಬ್ಬರಗಳು ಹೆಚ್ಚಾಗುತ್ತಾ ಹೋಗುತ್ತಿದೆ. ಪ್ರತಿ, ಹಳ್ಳಿ, ಗ್ರಾಮ, ನಗರಗಳಲ್ಲಿ ಖಾಸಗಿ ಶಾಲೆಗಳು ಹೆಚ್ಚಾಗುತ್ತಾ ಹೋಗುತ್ತವೆ. ಈ ಖಾಸಗಿ ಶಾಲೆಗಳು ನೀಡುವ  ಆಮಿಷಗಳಿಗೆ  ನಮ್ಮ ಜನರು ಮೊರೆಹೋಗಿ ಲಕ್ಷ ಲಕ್ಷ ಹಣಗಳನ್ನು ಸುರಿದು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಗಳನ್ನು ಕೊಡಿಸುತ್ತಿದ್ದಾರೆ.   ಈ ಖಾಸಿಗೆ ಶಿಕ್ಷಣ ಸಂಸ್ಥೆಗಳು ಪೋಷಕರಿಂದ  ಹಣ ಸುಲಿಗೆ ಮಾಡುತ್ತಾ ಹೋಗುತ್ತಿದ್ದಾರೆ.   ಈಗ  ವಿದ್ಯಾಭ್ಯಾಸ ಎಂಬುವುದು  ಒಂದು ವ್ಯಾಪಾರದ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ.  ಖಾಸಗಿ ಶಾಲೆಗಳು  ವ್ಯಾಪಾರದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ  ಶಿಕ್ಷಣವನ್ನು ನೀಡುತ್ತಾ ಹೋಗುತ್ತಿದ್ದಾರೆ ಈ ಶಿಕ್ಷಣವು ಈಗ ವ್ಯಾಪಾರದ ಸಂತೆಯಾಗಿ ನಿಂತಿದೆ.   

ನಮ್ಮ ಸರ್ಕಾರವು  ಸರ್ಕಾರಿ ಶಾಲೆಗಳನ್ನು ತೆರೆದು ಅನೇಕ ಉಪಯೋಗಗಳನ್ನು ಮಾಡಿಕೊಟ್ಟರು  ನಮ್ಮ ಜನರು ಸರ್ಕಾರಿ ಶಾಲೆಗಳಿಗೆ ಸೇರಿಸದೆ  ಖಾಸಿಗೆ ಶಾಲೆಗಳಿಗೆ ನಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ.   ಈ ಕಾರಣಕ್ಕಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ. ಹಣವಿಲ್ಲದೆ ಉತ್ತಮ ಶಿಕ್ಷಣ ನೀಡುತ್ತಿರುವ ನಮ್ಮ ಸರ್ಕಾರಿ ಶಾಲೆಗಳನ್ನು ಮರೆತು ಪೋಷಕರು ತಮ್ಮ ಮಕ್ಕಳಿಗಾಗಿ ಖಾಸಿಗೆ ಶಾಲೆಗಳತ್ತ ಮೊರೆಹೋಗುತ್ತಿದ್ದಾರೆ.   ವಿದ್ಯಾರ್ಥಿಗಳಿಲ್ಲದೆ ನಮ್ಮ ಕರ್ನಾಟಕದ ಅನೇಕ ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ.

ಸರ್ಕಾರಿ ಶಾಲೆಗಳನ್ನು ಮುಚ್ಚಲು ಮೂಲ ಕಾರಣಗಳು:-   ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಖಾಸಗಿ ಶಾಲೆಗಳು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಿಂತಿವೆ.   ಆದರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಕಟ್ಟಡದ ವ್ಯವಸ್ಥೆ ಇಲ್ಲ. ಖಾಸಿಗೆ ಶಾಲೆಗಳಲ್ಲಿ  ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿದ್ಯಾಭ್ಯಾಸ ಗಳನ್ನು ಕಲಿಸುತ್ತಾರೆ.   ನಮ್ಮ ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಶಿಕ್ಷಕರ ವ್ಯವಸ್ಥೆ ಇಲ್ಲ.  ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಕೆಲ ಸರ್ಕಾರಿ ಶಾಲೆಗಳಲ್ಲಿ  ಒಬ್ಬರೇ ಶಿಕ್ಷಕರು ಇರುತ್ತಾರೆ.  ಖಾಸಗಿ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳನ್ನು  ಒದಗಿಸುತ್ತಾರೆ.   ನಮ್ಮ ಸರ್ಕಾರಿ ಶಾಲೆಗಳಲ್ಲಿ ಇರುವ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಹಣಕ್ಕೆ ತಕ್ಕ ಶಿಕ್ಷಣವನ್ನು ನೀಡುತ್ತಾರೆ.  ನಮ್ಮ ಸರ್ಕಾರಿ ಶಾಲೆಗಳಲ್ಲಿ  ಹಣ ತೆಗೆದುಕೊಳ್ಳುವುದಿಲ್ಲ ಆದರೆ ಸರಿಯಾದ ಶಿಕ್ಷಣ ನೀಡಲು ಶಿಕ್ಷಕರ  ಕೊರತೆ ಇರುತ್ತದೆ. ಈ ಮೇಲಿನ ಕಾರಣಗಳಿಗೆ ನಮ್ಮ ಸರ್ಕಾರಿ ಶಾಲೆಗಳನ್ನು ಬಿಟ್ಟು ವಿದ್ಯಾರ್ಥಿಗಳು ಹಾಗೂ ಪೋಷಕರು ಖಾಸಗಿ ಶಾಲೆಗಳ  ಮೊರೆಹೋಗುತ್ತಾರೆ.  

ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳು:-   ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಸವಲತ್ತು ಸೌಲಭ್ಯಗಳನ್ನು ಗಮನಿಸಿದರೆ ಇದೇ ಶಾಲೆಗೆ ದಾಖಲಿಸಬೇಕೆಂಬ ಹಂಬಲ ಉಂಟಾಗುವುದು ಸಹಜ. ಅಷ್ಟರ ಮಟ್ಟಿಗೆ ಸೌಲಭ್ಯಗಳು ಅಲ್ಲಿವೆ. ಒಬ್ಬ ವಿದ್ಯಾರ್ಥಿ ಆ ಶಾಲೆಗೆ ದಾಖಲಾದ ಕೂಡಲೇ ಉಚಿತ ಪಠ್ಯ ಪುಸ್ತಕಗಳು ಸಿಗುತ್ತವೆ. ಉಚಿತ ಬ್ಯಾಗ್, ಉಚಿತ ಶೂ, ಮಧ್ಯಾಹ್ನದ ಬಿಸಿಯೂಟ, ಹಾಲು, ಬಸ್‍ಪಾಸ್, ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ಇತ್ಯಾದಿ ಸೌಲಭ್ಯಗಳು ದೊರಕುತ್ತವೆ.

ಹಿಂದೆಲ್ಲ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದವು. ಶಾಲೆಗಳಿಗೆ ಹೋಗುವಾಗ ರೊಟ್ಟಿ, ಮುದ್ದೆ ಮಾಡುವ ಮಡಕೆ ತಳದ ಸೀಕು ಇತ್ಯಾದಿ.. ಏನು ಸಿಗುತ್ತದೋ ಅದನ್ನು ತಿಂದು ಸಂಜೆ ವಾಪಸ್ ಮನೆಗೆ ಬಂದಾಗಲೇ ಊಟ ಮಾಡಬೇಕಾಗಿತ್ತು. ನಿಗದಿತ ಸಮಯಕ್ಕೆ ಉಪಹಾರ, ಊಟ ಸಿಗುತ್ತಿರಲಿಲ್ಲ. ಸಮಯ ಆಯಿತೆಂದು ಬಹಳಷ್ಟು ಮಕ್ಕಳು ಊಟೋಪಚಾರವಿಲ್ಲದೇ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಶಾಲೆಯತ್ತ ದೌಡಾಯಿಸುತ್ತಿದ್ದರು. ಇದರಿಂದ ಆಗಿನ ಕಾಲಕ್ಕೆ ಅಪೌಷ್ಟಿಕತೆ ಹೆಚ್ಚಿತ್ತು. ಈಗ ಹಾಲಿನಿಂದ ಹಿಡಿದು ಬಿಸಿಯೂಟದವರೆಗೆ ಶಾಲೆಯಲ್ಲಿಯೇ ಸಿಗುತ್ತಿರುವಾಗ ವಿದ್ಯಾರ್ಥಿಗಳ ಆರೋಗ್ಯವೂ ವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕ ವ್ಯಾಸಂಗಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿದೆ.

ಇದರ ಜೊತೆಗೆ ಉಚಿತ ಬೈಸಿಕಲ್, ಪ್ರವಾಸ, ಪ್ರತಿಭಾ ಕಾರಂಜಿ, ವಿವಿಧ ವಿದ್ಯಾರ್ಥಿ ವೇತನಗಳು, ಹಾಜರಾತಿ ಶಿಷ್ಯ ವೇತನ, ಹೆಚ್ಚು ಅಂಕ ಪಡೆದ ಟಾಪರ್‍ಗಳಿಗೆ ಲ್ಯಾಪ್‍ಟಾಪ್ ವಿತರಣೆ ಇಂತಹ ಅನೇಕ ಯೋಜನೆಗಳು ವಿದ್ಯಾರ್ಥಿಗಳಿಗೆ ಪೂರಕವಾಗಿವೆ. ವಿದ್ಯಾರ್ಥಿ ವೇತನಗಳು ಮಕ್ಕಳ ಇತರೆ ವೆಚ್ಚಗಳನ್ನು ಸರಿದೂಗಿಸಲು ಸಹಕಾರಿಯಾಗುತ್ತಿವೆ. ವಿಶೇಷವಾಗಿ ಇಂತಹ ಸವಲತ್ತುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು ಹೆಚ್ಚು ಅಂಕಗಳಿಸುವತ್ತ ಇವೆಲ್ಲವೂ ಪೂರಕ ವಾತಾವರಣ ಸೃಷ್ಟಿಸಿವೆ.

ಸರ್ಕಾರಿ ಶಾಲೆಯ ಶಿಕ್ಷಕರು:- ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುವ ಶಿಕ್ಷಕರು ನಿಗದಿತ ವಿದ್ಯಾರ್ಹತೆಯೊಂದಿಗೆ ಕಾಲ ಕಾಲದ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಪದವಿ ಮಾಡಿದವರೆಲ್ಲ ಶಿಕ್ಷಕರಾಗಲು ಅರ್ಹರಲ್ಲ. ಪದವಿಯ ಜೊತೆಗೆ ಉತ್ತಮ ಅಂಕ ಗಳಿಸಿರಬೇಕು. ಸರ್ಕಾರ ನಿಗದಿಪಡಿಸಿರುವ ಕೋರ್ಸ್ ಅಧ್ಯಯನ ಮಾಡಬೇಕು. ಟಿಇಟಿಯಲ್ಲಿ ರ್ಯಾಂಕ್ ಪಡೆಯಬೇಕು. ಸಿಇಟಿಯಲ್ಲಿ ಉತ್ತೀರ್ಣರಾಗಬೇಕು. ಇಷ್ಟೆಲ್ಲ ವಿವಿಧ ಹಂತದ ಪರೀಕ್ಷೆಗಳನ್ನು ದಾಟಿ ಬಂದ ನಂತರ ಅವರಿಗೆ ತರಬೇತಿಗಳನ್ನು ನೀಡಲಾಗುತ್ತದೆ. ಇತ್ತೀಚೆಗೆ ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಲ್ಯಾಪ್‍ಟಾಪ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ವಿಷಯವಾರು ತರಬೇತಿ ನೀಡಲು ಮಾಸ್ಟರ್ ಟ್ರೈನರ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ.  

ಸರ್ಕಾರಿ ಶಾಲೆಯಲ್ಲಿ ಬೋಧನೆ ಮಾಡಬೇಕೆಂದರೆ ಶಿಕ್ಷಕನಾದವನು ಮೇಲ್ಕಂಡಂತೆ ಈ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು. ಇಂತಹ ಅರ್ಹತೆಗಳು ಖಾಸಗಿ ಶಾಲೆಗಳಲ್ಲಿ ಸಿಗುವುದು ಕಡಿಮೆಯೇ. ಖಾಸಗಿ, ಅನುದಾನರಹಿತ ಶಾಲೆಗಳಲ್ಲಿ ಶೈಕ್ಷಣಿಕ ಅರ್ಹತೆಗಳಿಗಿಂತ ಮೇಲ್ನೋಟದ ಆಕರ್ಷಣೆಯೇ ಹೆಚ್ಚಿರುತ್ತದೆ. ಇಲ್ಲಿ ಬೋಧನೆ ಮಾಡುವವರು ಯಾರು ಬೇಕಾದರೂ ಆಗಿರಬಹುದು.

ಶಾಲೆಗಳಲ್ಲಿ ಶಿಕ್ಷಕರ ಸಂಬಂಧ:- ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಯ ಶಿಕ್ಷಕರು  ಗ್ರಾಮದಲ್ಲಿರುವ ಎಲ್ಲಾ  ಪೋಷಕರ ಪರಿಚಯವಿರಬೇಕು.   ಹೀಗೆ ಎಲ್ಲ ಜನರ ಪರಿಚಯವೂ ಶಿಕ್ಷಕರಿಗೆ ಇದ್ದರೆ  ಶಿಕ್ಷಕರು ಸತತವಾಗಿ ಗೈರು  ಹಾಜರಾದರೆ ಪೋಷಕರು ಪ್ರಶ್ನಿಸುತ್ತಾರೆ.  ಶಾಲೆಯಲ್ಲಿ ಸುಂದರವಾದ ಪರಿಸರವನ್ನು ನಿರ್ಮಾಣ ಮಾಡಿದರೆ  ಪೋಷಕರಿಗೆ ಸುಂದರವಾದ ಶಾಲೆಯು ಆಕರ್ಷಕವಾಗಿ ಕಾಣುತ್ತದೆ.   ಶಾಲೆಯನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಕಾಣುವ ಹಾಗೆ ಶಿಕ್ಷಕರು ಮಾಡಬೇಕು. ಖಾಸಗಿ ಶಾಲೆಗಳು ಕಾಣುವ ಹಾಗೆ ನಮ್ಮ ಸರ್ಕಾರಿ ಶಾಲೆಗಳನ್ನು ಶಿಕ್ಷಕರು ಮತ್ತು ಪೋಷಕರು ಸೇರಿ ಮಾಡಬೇಕು.   ಪ್ರತಿ ಮನೆ ಮನೆಗಳಿಗೂ ಭೇಟಿ ನೀಡಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರುವ ಹಾಗೆ ಮಾಡಬೇಕು ಹಾಗೆ ಪೋಷಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ವಿಶ್ವಾಸ ಮತ್ತು ನಂಬಿಕೆಯನ್ನು ಮೂಡಿಸಬೇಕು.  ಪೋಷಕರ ಸಭೆ ಕರೆದಾಗ ಹಾಜರಾಗಬೇಕು. ಸರ್ಕಾರಿ ಶಾಲೆಗಳಲ್ಲಾದರೆ ಈ ಯಾವ ನಿಬಂಧನೆಗಳು ಇಲ್ಲ. ನಿತ್ಯವೂ ಶಾಲೆಗೆ ಹೋಗಬಹುದು, ಮಕ್ಕಳ ಶೈಕ್ಷಣಿಕ ಚಟುವಟಿಕೆ ವಿಚಾರಿಸಬಹುದು. ಇವೆಲ್ಲವೂ ಮಕ್ಕಳ ವ್ಯಾಸಂಗಕ್ಕೆ ಪೂರಕವಾದ ವಾತಾವರಣ.

ಸರ್ಕಾರಿ ಶಾಲೆಗಳನ್ನು ಕುರಿತು ಜಾಗೃತಿ:-   ನಮ್ಮ ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸಲು  ಸರ್ಕಾರಿ ಶಾಲೆಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಜಾಗೃತಿ ಮೂಡಿಸಬೇಕು.   ಗ್ರಾಮೀಣ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ತಯಾರಾಗಲು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರನ್ನು ನೇಮಕ ಮಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಪ್ರಗತಿ ಕಾಣಲು ಅವಕಾಶ ಮಾಡಿಕೊಡಬೇಕು.   ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣವನ್ನು ನೀಡಬೇಕು ಹಾಗೂ ಇದರ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು.  ವಿದ್ಯಾರ್ಥಿಗಳು ಉದ್ಯೋಗ ಪಡೆಯಬೇಕು ಎಂಬ ಹಂಬಲವೂ ಅವರ ಮನಸ್ಸಿನಲ್ಲಿ ಮೂಡಿಸಬೇಕು ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಹುದ್ದೆಗಳಿಗೆ ಹೋಗಿ ಅಲಂಕರಿಸಬಹುದು ಎಂಬ  ಆಲೋಚನೆಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಸಿನಲ್ಲಿ ಮೂಡಿಸಬೇಕು.  ಸರ್ಕಾರಿ ಶಾಲೆಗಳು ನಮ್ಮೂರಿನ ಹೆಮ್ಮೆಯ ಶಾಲೆಗಳು ಎಂಬ ಹಾಗೆ ಎಲ್ಲರ ಮನಸ್ಸಿನಲ್ಲಿ  ಶಾಲೆಗಳನ್ನು ಕುರಿತು ಜಾಗೃತಿ ಮೂಡಿಸಬೇಕು.

ಬದ್ಧತೆಯ ಶಿಕ್ಷಣ:-  ಸರ್ಕಾರದ ಮಾರ್ಗಸೂಚಿಗಳು, ಕಟ್ಟುನಿಟ್ಟಿನ ಆದೇಶಗಳು ಏನೆಲ್ಲಾ ಇರಬಹುದು. ಆದರೆ ಶಿಕ್ಷಕ ವರ್ಗದಲ್ಲಿ ಒಂದು ಬದ್ಧತೆಯಂತೂ ಇದ್ದೇ ಇದೆ. ನಾನು ಸರ್ಕಾರದ ಋಣದಲ್ಲಿದ್ದೇನೆ. ಸರ್ಕಾರದ ಅನ್ನ ತಿನ್ನುತ್ತಿದ್ದೇನೆ ಎನ್ನುವ ಅರಿವು ಆ ವರ್ಗಕ್ಕೆ ಇದೆ. ದಿನನಿತ್ಯ ರೈತಾಪಿ ವರ್ಗ ಪಡುತ್ತಿರುವ ಕಷ್ಟಗಳನ್ನು ಹತ್ತಿರದಿಂದ ನೋಡುತ್ತಾರೆ. ಅವರ ಮಕ್ಕಳ ಸ್ಥಿತಿಗತಿಗಳೇನು ಎಂಬುದು ಚೆನ್ನಾಗಿ ಗೊತ್ತು. ನಾವಿಂದು ಇದ್ದುದರಲ್ಲಿ ಇವರಿಗಿಂತ ಉತ್ತಮ ಸ್ಥಿತಿಯಲ್ಲಿದ್ದೇವೆ. ಇರುವಷ್ಟು ಅವಧಿಯಲ್ಲಿ ಪ್ರಾಮಾಣಿಕ ಕರ್ತವ್ಯ ನಿಭಾಯಿಸಬೇಕೆಂಬ ಎಚ್ಚರಿಕೆ ಮೂಡುವುದರಿಂದಲೇ ಹೆಚ್ಚು ಜಾಗೃತನಾಗುತ್ತಿದ್ದಾನೆ.

      ಖಾಸಗಿ ಶಾಲೆಗಳತ್ತ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಆಕರ್ಷಿತರಾಗುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಪ್ರಮಾಣ ಕುಸಿತವಾಗುತ್ತಿದೆ. ಇದು ಶಿಕ್ಷಕ ವರ್ಗದಲ್ಲಿ ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಹೀಗೆಯೇ ಮುಂದುವರೆದರೆ ಖಾಸಗಿ ಶಾಲೆಗಳ ಪ್ರಭಾವದಿಂದಾಗಿ ಸರ್ಕಾರಿ ಶಾಲೆಗಳಿಗೆ ಧಕ್ಕೆಯಾಗಬಹುದು, ಆ ಮೂಲಕ ನಮ್ಮ ಭವಿಷ್ಯಕ್ಕೂ ಕುತ್ತು ಬೀಳಬಹುದು ಎಂಬ ಆತಂಕ ಸರ್ಕಾರಿ ವಲಯದ ಶಿಕ್ಷಕ ಸಮೂಹದಲ್ಲಿ ಮನೆಮಾಡಿದೆ. ಈ ಪ್ರಜ್ಞೆಯೂ ಶಿಕ್ಷಕರೂ ಹೆಚ್ಚು ಜಾಗೃತರಾದರು ಒಂದು ಕಾರಣ ಎನ್ನಬಹುದು.

ಸರ್ಕಾರಿ ಶಾಲೆಗಳ ಪರೀಕ್ಷೆ ಕ್ರಮ:- ನಮ್ಮ ಸರ್ಕಾರಿ ಶಾಲೆಗಳು ಪರೀಕ್ಷೆ ಕ್ರಮಗಳನ್ನು ಬದಲಾಯಿಸಿಕೊಂಡು ಖಾಸಗಿ ಶಾಲೆಗಳು ಮಾಡುವಹಾಗೆ ಪರೀಕ್ಷೆ ಕ್ರಮಗಳನ್ನು ನಡೆಸಬೇಕು.   ಪ್ರತಿ ತಿಂಗಳು ಮತ್ತು ವಾರದಲ್ಲಿ  ಕಿರು ಪರೀಕ್ಷೆಗಳನ್ನು ನಡೆಸಿ  ಆ ಅಂಕಗಳನ್ನು ಅವರ ಪೋಷಕರಿಗೆ ತಲುಪುವ ಪ್ರಯತ್ನ ಮಾಡಬೇಕು.   ಖಾಸಗಿ ಶಾಲೆಗಳು ಪಾಲಿಸುವ  ಎಲ್ಲಾ ಪರೀಕ್ಷಾ ಕ್ರಮಗಳನ್ನು ನಮ್ಮ ಸರ್ಕಾರಿ ಶಾಲೆಗಳನ್ನು ಪಾಲಿಸಬೇಕು.  ಕಿರು ಪರೀಕ್ಷೆಗಳಲ್ಲಿ ಕಡಿಮೆ ಅಂಕ ತೆಗೆದ ವಿದ್ಯಾರ್ಥಿಗಳ  ಬಗೆಹರಿಸಬೇಕು.  ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತಷ್ಟು ಅಂಕ ಪಡೆಯುವ ಹಾಗೆ ಉನ್ನತ ಶಿಕ್ಷಣವನ್ನು ನೀಡಬೇಕು.   ಈ ಮೇಲಿನ ಕ್ರಮಗಳನ್ನು ನಮ್ಮ ಸರ್ಕಾರಿ ಶಾಲೆಗಳು ಪಾಲಿಸಬೇಕು.

ವಲಸೆ ತಡೆಯಬೇಕು:- ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳು ಉತ್ತಮ ಫಲಿತಾಂಶ ಬಂದಷ್ಟೂ ಆ ಶಾಲೆಗಳತ್ತ ಪೋಷಕರ ಗಮನ ಹರಿಯಲು ಸಾಧ್ಯವಾಗುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ನಗರೀಕರಣದಿಂದಾಗಿ ಪಟ್ಟಣ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳು ಗಲ್ಲಿಗಲ್ಲಿಗಳಲ್ಲಿ ಆರಂಭವಾಗುತ್ತಿವೆ. ಶಿಕ್ಷಣ ನಗರ ಕೇಂದ್ರೀತವಾಗುತ್ತಿದೆ. ಮಕ್ಕಳು ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವುದರಿಂದ ಶಿಕ್ಷಣವು ದುಬಾರಿಯಾಗುತ್ತಿದೆ. ಅತ್ತ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಶ್ರಮಿಸಿದರೂ ಪ್ರಯೋಜನಕ್ಕೆ ಬಾರದಂತಾಗುತ್ತಿದೆ. ನಮ್ಮ ಮುಂದೆ ಇರುವ ಈಗಿನ ದೊಡ್ಡ ಸವಾಲೆಂದರೆ ಗ್ರಾಮೀಣ ಮಕ್ಕಳು ಅಲ್ಲಿನ ಶಾಲೆಗಳಲ್ಲಿಯೇ ಕಲಿಯುವಂತಾಗುವುದು. ಆ ಮೂಲಕ ನಗರ ಪ್ರದೇಶಕ್ಕೆ ವಲಸೆ ಬರುವುದನ್ನು ತಡೆಯುವುದು.

ಈ ಮೇಲಿನ ಕ್ರಮಗಳನ್ನು ನಮ್ಮ ಸರ್ಕಾರವು ಹೆಚ್ಚಿನ ರೀತಿಯಲ್ಲಿ ನಿಗಾವಹಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಭಿವೃದ್ದಿಯ ಪಥವನ್ನು ಸಾಯಿಸಬೇಕು.   ಸರ್ಕಾರಿ ಶಾಲೆಗಳನ್ನು ಮುಚ್ಚುವ ಬದಲು  ಇನ್ನಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಬರುವ ಹಾಗೆ ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡು ಶಾಲೆಗಳ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು.  ನಮ್ಮ ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು.   ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಹೆಚ್ಚಿನ ಶಿಕ್ಷಕರನ್ನು ನೀಡಿ ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಹಾಗೆ ಸರ್ಕಾರ ಮತ್ತು ಪೋಷಕರು ಗಮನ ಹರಿಸಬೇಕು.   ಅಳಿಯುವ ಅಂಚಿನಲ್ಲಿರುವ ನಮ್ಮ ಸರ್ಕಾರಿ ಶಾಲೆಗಳನ್ನು ಎಲ್ಲರೂ ಉಳಿಸಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಲೇಖನದ ಮೂಲಕ ಆಶಿಸುತ್ತೇನೆ.

- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...