ಬೆಳಗುತಿರಲಿ ದೀಪವು ನಿನ್ನ ಅಂಗಳದಲ್ಲಿ
ಬೆಳಕಿನ ಕಿರಣವು ಸೂಸಲಿ ಜಗದೆಲ್ಲೆಡೆಯಲ್ಲಿ
ಅರಳುತಿಹವು ಹೂವುಗಳು ನಿನ್ನ ತನುವ ಬನದಲ್ಲಿ
ಹಾರುತಿರಲಿ ಹಳದಿ ಕೆಂಪು ಬಾವುಟ ಗಗನದೆತ್ತರದಲ್ಲಿ
ನಿನ್ನ ನೆಲವು ಹರಡಿದೆ ಗೋದಾವರಿಂದ ಕಾವೇರಿವರೆಗೆ
ಈ ಮಣ್ಣನು ಉಳಿಸಲು ಹೋರಾಡಿದರು ಕಡೆವರೆಗೆ
ರಣಕಲಿಗಳಾಗಿ ಮೆರೆದು ಮಡಿದರು ನಿನ್ನ ಮಣ್ಣೊಳಗೆ
ಮುಕ್ತಿ ನೀಡುವೆ ತಾಯಿ ಅಳಿದವರ ಜೀವಗಳಿಗೆ
ಹರಿವರು ಮೈತುಂಬಿ ಕಾಳಿ ಶರಾವತಿ
ಜಾರುವರು ಗಗನಚುಕ್ಕಿ ಗೋಕಾಕ ಶಾಂತಿ
ಮರ ಬೆಳೆದು ನಿಂತಾವೆ ಮುಗಿಲೆತ್ತರಕ್ಕೆ ತಲೆಯೆತ್ತಿ
ಕನ್ನಡಿಗರ ಹೃದಯದೊಳಗೆ ನೀ ನೆಲೆಸಿ ಕುಂತಿ
ರಾಷ್ಟ್ರಕೂಟ ಕದಂಬ ಬಾದಾಮಿ ಹೊಯ್ಸಳರು ಆಳಿದರು
ರನ್ನ ಪೊನ್ನ ಪಂಪ ಷಡಕ್ಷರಿ ಆಶ್ರಯದಲ್ಲಿ ನೆಲೆಸಿದರು
ನಾಡಿನ ಹಿರಿಮೆ ಘನತೆ ಗೌರವ ಎತ್ತಿ ಹಿಡಿದರು
ರಾಯರು ಒಡೆಯರು ವೈಭವದಿ ನಾಡನ್ನು ಬೆಳಗಿದರು
ನಾಡನ್ನು ಕಟ್ಟಲು ಬೇಕು ಬಹುದಿನ
ಕೆಡವಲು ಸಾಕು ಅರೇ ಕ್ಷಣ
ವೀರ ಧೀರ ನಾರಿಯರು ಬದುಕಿದರು ಆ ದಿನ
ಕರುನಾಡನ್ನು ಕಟ್ಟಿ ಕೈಯಲ್ಲಿ ಬಿಟ್ಟು ಮರೆಯಾದರು ಈ ಸುದಿನ
ಘಮಿಸುವ ಪರಿಮಳ ಬೀರುವ ಮಣ್ಣಲಿ ಕಂಪು ಚೆಲ್ಲಿದರು
ತಂಪಲಿ ಇಂಪಿನ ಕಂಪನ ಶ್ರಾವ್ಯಕ್ಕೆ ಹಿತವುಂಟು ಮಾಡಿದರು
ಚಿನ್ನದ ನಾಡಲ್ಲಿ ನನ್ನಯ ತವರಲ್ಲಿ ಸೊಬಗಿನ ಸಿರಿಯು ನೀಡಿದರು
ಗಂಧದ ನಾಡಲ್ಲಿ ವರವ ಬೇಡಿಕೊಂಡಂತೆ ಹುಟ್ಟಿದ ನಾವುಗಳೇ ಭಾಗ್ಯವಂತರು.
- ಬಿ.ಹೆಚ್.ತಿಮ್ಮಣ್ಣ
ಅದ್ಭುತ ಕವನ
ಪ್ರತ್ಯುತ್ತರಅಳಿಸಿಕನ್ನಡಿಗರ ನಾಡು ನುಡಿಯ ವೈಭವವನ್ನು ತಿಳಿಸುವ ಕವಿತೆ👌👌👌