ಏನನ್ನು ಬರೆಯುತ್ತಾ ಕುಳಿತಿದ್ದ ಮುಖ್ಯೋಪಾಧ್ಯಾಯರ ತಲೆಯಲ್ಲಿ ಒಂದು ಹೊಸ ವಿಚಾರ ಹೊಳೆಯಿತು ಹಾಗೆಯೇ ಎದ್ದು, ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ವರ್ಗಕೋಣೆಗೆ ಬಂದರು. ಮಕ್ಕಳನ್ನು ಕುರಿತು ಒಂದು ವಿಷಯವನ್ನು ತಿಳಿಸಿದರು. ಮಕ್ಕಳೇ, ನಿಮಗೆಲ್ಲಾ ಒಂದು ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಆ ವಿಶೇಷ ಸ್ಪರ್ಧೆಯಲ್ಲಿ ನಿಮ್ಮ ಪಾಲಕರು ಭಾಗವಹಿಸುವುದು ಕಡ್ಡಾಯ. ನಿಮ್ಮ ಜೊತೆಗೆ ನಿಮ್ಮ ತಾಯಿ ಅಥವಾ ತಂದೆ ಅಥವಾ ಅಜ್ಜ ಅಥವಾ ಅಜ್ಜಿ ಯಾರಾದರೂ ಭಾಗವಹಿಸಬಹುದು. ಸ್ಪರ್ಧೆಯ ನಿಯಮ ವೇದಿಕೆಯ ಮೇಲೆ ನಿಮ್ಮ ಪಾಲಕರು ನಿಮಗೆ ಕಥೆಯನ್ನು ಹೇಳುವಂತಹ ಸ್ಪರ್ಧೆ. ಆ ಕಥೆ ಯಾವುದಾದರೂ ಆಗಿರಬಹುದು. ಪೌರಾಣಿಕ, ಜಾನಪದ, ಸತ್ಯ ಘಟನೆಗಳ ಆಧಾರಿತ ಕಥೆ, ಹೀಗೆ ಯಾವುದಾದರೂ ಒಂದು ಕಥೆಯನ್ನು ಹೇಳಲು ನಿಮ್ಮ ಪಾಲಕರಿಗೆ ತಿಳಿಸಿ ಎಂದು ವರ್ಗ ಕೋಣೆಯಿಂದ ಹೊರನಡೆದರು. ಎಲ್ಲ ಮಕ್ಕಳು ಸಂತೋಷದಿಂದ ಅಯ್ಯೋ... ನಮ್ಮ ತಂದೆ ತಾಯಿಯರನ್ನು ಈ ಒಂದು ಸ್ಪರ್ಧೆಗೆ ಕರೆದುಕೊಂಡು ಬರಬಹುದು, ವೇದಿಕೆಯ ಮೇಲೆ ಅವರ ಜೊತೆ ಕುಳಿತುಕೊಳ್ಳಬಹುದು ಎಂದು ಸಂಭ್ರಮದಿಂದ ಮನೆಯತ್ತ ತೆರಳಿದರು.
ತಂದೆ ತಾಯಿಯರನ್ನು ಬಾಲ್ಯದಲ್ಲೇ ಕಳೆದುಕೊಂಡ ಗಂಗಾ ಎಂಬ ಬಾಲಕಿ ತನ್ನ ಅಜ್ಜ ಅಜ್ಜಿಯರ ಆಶ್ರಯದಲ್ಲಿ ಬೆಳೆದಿದ್ದಳು. ಮನೆಗೆ ಹೋಗಿ ಅಜ್ಜ ಅಜ್ಜಿಯರ ಎದುರು ಶಾಲೆಯಲ್ಲಿ ನಡೆದಂತಹ ವಿಷಯವನ್ನು ತಿಳಿಸಿ ಅಳತೊಡಗಿದಳು. ಆಗ ಅಜ್ಜಿ ಮೊಮ್ಮಗಳ ತಲೆ ನೇವರಿಸುತ್ತಾ ಏಕೆ ಅಳುತ್ತಿರುವೆ? ನಾನಿರುವೆನಲ್ಲ? ನಾನು ಬಂದು ನಿನಗೆ ಕಥೆಯನ್ನು ಹೇಳುವೆ ಎಂದಾಗ ಅಜ್ಜಿ, ನೀನು.... ಕಥೆ ಹೇಳುವೆಯಾ? ನೀನು.... ವೇದಿಕೆಯ ಮೇಲೆ ಕುಳಿತುಕೊಳ್ಳುವೆಯಾ? ಎಂದು ಕೇಳಿದಳು. ಹೂಂ.... ನಾನೇ ನಿನಗೆ ಕಥೆ ಹೇಳುವೆ , ಭಯ ಪಡಬೇಡ. ನೆಮ್ಮದಿಯಿಂದ ನಿದ್ರೆ ಮಾಡು ಎಂದಾಗ ಸಂಭ್ರಮದಿಂದ ಗಂಗಾ ಕುಣಿದಾಡಿದಾಳು.
ಸ್ಪರ್ಧೆಯ ದಿನ ಬಂದೇ ಬಿಟ್ಟಿತು. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ವೇದಿಕೆಗೆ ಬಂದು ಕಥೆಯನ್ನು ಹೇಳಿ ಹೋಗುತ್ತಿದ್ದರು.ಮಕ್ಕಳು ಕಥೆ ಕೇಳಿದಾಗ ಸಂಭ್ರಮಿಸಿದರು. ಹಾಗೆಯೇ ಗಂಗಾಳ ಅಜ್ಜಿಯನ್ನು ವೇದಿಕೆಗೆ ಕರೆದರು. ಅಜ್ಜಿ ನಿಮಗೆ ಕಥೆ ಹೇಳಲು ಸಮಯಾವಕಾಶ ಕೇವಲ 10 ನಿಮಿಷಗಳು ಮಾತ್ರ. 10 ನಿಮಿಷವಾದ ಕೂಡಲೇ ನಾವು ಬೆಲ್ಲನ್ನು ಬಾರಿಸುತ್ತೇವೆ ಎಂದರು. ಅದಕ್ಕೆ ಅಜ್ಜಿ ಸರಿ ಅಂದಳು. ಗಂಗಾ ತುಂಬಾ ಭಾವುಕಳಾಗಿದ್ದಳು. ಇಷ್ಟು ಇಳಿ ವಯಸ್ಸಿನಲ್ಲಿ ನನ್ನ ಅಜ್ಜಿ ಯಾವ ಕಥೆ ಹೇಳಬಹುದು? ಅಜ್ಜಿ ಕಥೆ ಹೇಳಿದ ಮೇಲೆ ಎಲ್ಲರೂ ನಗುತ್ತಾರೆನೋ? ಎಂದುಕೊಂಡು ಒಮ್ಮೆ ಶಿಕ್ಷಕರನು,ಗೆಳೆಯರ ಗುಂಪನ್ನು ನೋಡುತಾ ಮನದಲ್ಲಿ ಖಿನ್ನಳಾಗಿ, ಭಯದಿಂದ ಅಜ್ಜಿಯ ಎದುರು ಕುಳಿತಳು.
ಅಜ್ಜಿ ಅಲ್ಲಿರುವವರೆಲ್ಲರನ್ನು ನಗು ಮೊಗದಿಂದೊಮ್ಮೆ ನೋಡಿ ಈ ದಿನ ನಾನೊಂದು ಪೌರಾಣಿಕ ಕಥೆಯನ್ನು ತಮ್ಮೆದುರು ಹೇಳುತ್ತೇನೆ. ಅದುವೇ ನಮ್ಮ ಭಾರತ ದೇಶದ ಪವಿತ್ರ ನದಿಯಾದ "ಗಂಗಾನದಿ"ಯ ಬಗ್ಗೆ.ನಿಮಗೆ ತಿಳಿದಿರಬಹುದು, ಕಲುಷಿತಗೊಂಡ, ತ್ಯಾಜ್ಯ ವಸ್ತುಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡು, ಸತ್ತ ಹೆಣಗಳನ್ನು ತೇಲಿಸುತ್ತಾ, ಎಲ್ಲರೂ ಪವಿತ್ರ ನದಿ ಎಂದು ಅಪ್ಪಿಕೊಳ್ಳುತ್ತಿದ್ದ ಗಂಗಾನದಿಯನ್ನು ಇತ್ತೀಚಿಗೆ ನಮ್ಮ ರಾಷ್ಟ್ರದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಯವರು ಅದನ್ನು ಶುಚಿಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದಾಗ, ಭಾರತದ ಪ್ರತಿಯೊಬ್ಬ ಭಾರತೀಯ ಸಂಭ್ರಮ ಪಟ್ಟಂತ ಕ್ಷಣ..... ಏಕೆಂದರೆ ಗಂಗಾನದಿ ಭಾರತೀಯರ ಪವಿತ್ರ ನದಿ ಎಂದಾಗ, ಕೆಲವು ಮಕ್ಕಳು ಅಯ್ಯೋ....! ತನ್ನ ಮೊಮ್ಮಗಳ ಹೆಸರಿನ ಕಥೆಯನ್ನೇ ಹೇಳುತ್ತಾಳಂತೆ ಎಂದು ಮುಸಿಮುಸಿ ನಕ್ಕರು. ಆದರೆ ಗಂಗಾ ಮಾತ್ರ ತದೇಕಚಿತ್ತದಿಂದ ಅಜ್ಜಿ ಹೇಳುವ ಕಥೆಯನ್ನು ಕೇಳಲು ಉತ್ಸುಕಳಾಗಿದ್ದಳು.
ಪವಿತ್ರ ಗಂಗಾನದಿಯನ್ನು ಜಾಹ್ನವಿ, ಭಾಗೀರಥಿ, ತ್ರಿಪಥಗಾಮಿನಿ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಅದಕ್ಕೆ ಕಾರಣವೂ ಇದೆ. ಹಿಂದೆ ಪರ್ವತಗಳ ರಾಜ ಹಿಮವಂತ ಮತ್ತು ಮನೋರಮೆ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರು. ಅವರೇ ಗಂಗೆ ಮತ್ತು ಪಾರ್ವತಿ. ನಿಮಗೆಲ್ಲರಿಗೂ ತಿಳಿದಿರುವಂತೆ ಪಾರ್ವತಿ ಈಶ್ವರನನ್ನ ಕುರಿತು ತಪಸ್ಸನ್ನು ಆಚರಿಸಿ ಶಿವನನ್ನು ವಿವಾಹವಾಗಿ ಷಣ್ಮುಖನಿಗೆ ಜನ್ಮವಿತ್ಳು ಎನ್ನುವ ಕಥೆ ಗೊತ್ತಿದೆಯಲ್ಲವೇ? ಅದೇ ರೀತಿ ಮತ್ತೊಬ್ಬ ಮಗಳು ಗಂಗೆ. ಯಾವ ಮಾರ್ಗದಲ್ಲಾದರೂ ಸಂಚರಿಸುವ ಸಾಮರ್ಥ್ಯವನ್ನು ಪಡೆದವಳಾಗಿದ್ದಳು. ದೇವತೆಗಳು ಇವಳ ಸಾಮರ್ಥ್ಯವನ್ನು ತಿಳಿದು ದೇವಕಾರ್ಯಕ್ಕಾಗಿ ಸಮರ್ಪಿಸಲು ಹಿಮವಂತನಲ್ಲಿ ಬೇಡಿಕೊಂಡರು. ಲೋಕ ಕಲ್ಯಾಣಕ್ಕಾಗಿ ಮಗಳನ್ನು ಹಿಮವಂತರಾಜ ಒಪ್ಪಿಸಿದ. ಗಂಗೆ ನದಿಯಾಗಿ ಮೂರು ಲೋಕದಲ್ಲಿ ಹರಿದಳು. ಹೀಗಾಗಿ "ದೇವನದಿ" ಎಂಬ ಹೆಸರನ್ನು ಪಡೆದುಕೊಂಡಳು. ಹಾಗಾದರೆ ಈ 'ದೇವನದಿ ಗಂಗೆ' ಭೂಲೋಕಕ್ಕೆ ಏಕೆ ಬಂದಳು? ಪವಿತ್ರ ನದಿ ಎಂಬ ಹೆಸರು ಹೇಗೆ ಬಂತು? ಅನ್ನೋದನ್ನ ನಾನು ಹೇಳ್ತೀನಿ. ಇದು ಪೌರಾಣಿಕ ಕಥೆಯಲ್ಲಿ ಇರುವಂತಹ ವಿಷಯ.
ಹಿಂದೆ ಅಯೋಧ್ಯೆಯನ್ನು ಇಕ್ಷಾಕು ವಂಶದ ಸಗರ ಚಕ್ರವರ್ತಿ ಆಳುತ್ತಿದ್ದ. ಕೇಶಿನಿ ಮತ್ತು ಸುಮತಿ ಎಂಬ ಇಬ್ಬರು ಪತ್ನಿಯರು. ಬಹಳ ವರ್ಷಗಳಾದರೂ ಸಂತಾನ ಭಾಗ್ಯ ದೊರೆಯದ ಕಾರಣ ಸಗರ ಚಕ್ರವರ್ತಿ ತಪಸ್ಸನ್ನಾಚರಿಸಿದ. ಅದರ ಪ್ರತಿಫಲವಾಗಿ ಕೇಶಿನಿಗೆ ಪುತ್ರ ಸಂತಾನವಾಯಿತು. ಆತನ ಹೆಸರು ಅಸಮಂಜ. ಕಾಲ ನಂತರ ಸುಮತಿಯು ಸಹ ಹಲವು ಮಕ್ಕಳಿಗೆ ಜನ್ಮ ನೀಡಿದಳು.
ಒಮ್ಮೆ ಸಗರ ಚಕ್ರವರ್ತಿಗೆ 'ಯಾಗ' ಮಾಡಬೇಕೆಂಬ ಸಂಕಲ್ಪವಾಯಿತು. ಹೀಗಾಗಿ ವಿಂದ್ಯ ಮತ್ತು ಹಿಮಾಲಯ ಪರ್ವತಗಳ ನಡುವೆ ಇರುವ 'ಆರ್ಯವರ್ತ' ಪ್ರದೇಶವನ್ನು ಯಾಗದ ಭೂಮಿ ಎಂದು ನಿರ್ಧಾರ ಮಾಡಿ, ಯಾಗಕ್ಕಾಗಿ ಯಜ್ಞಾಶ್ವವನ್ನು ಬಿಟ್ಟನು. ಸಗರನ ಯಾಗ ಸಫಲಗೊಂಡರೆ ದೇವತೆಗಳಿಗಿಂತ ಸಗರ ಬಲಿಷ್ಠನಾಗುತ್ತಿದ್ದ. ಇದರಿಂದ ಹೆದರಿದ ದೇವತೆಗಳು 'ಯಜ್ಞಾಶ್ವ'ವನ್ನು ಪಾತಾಳ ಲೋಕದಲ್ಲಿ ಬಚ್ಚಿಟ್ಟರು. ಯಜ್ಞಾಶ್ವ'ವು ಇಲದೆ ಯಾಗ ನಿಂತು ಹೋಯಿತು. ತನ್ನ ಮಕ್ಕಳನ್ನು ಕರೆದು ಸಗರನು, "ಇಡೀ ಭೂಮಂಡಲವನ್ನು ಸುತ್ತುವರೆದು ಯಜ್ಞಾಶ್ವವನ್ನು ಹುಡುಕಿಕೊಂಡು ಬನ್ನಿ" ಎಂದು ಆದೇಶಿಸಿದ. ಸಗರನ ಪುತ್ರರು ಲೋಕವೆಲ್ಲ ಸಂಚರಿಸಿ, ಕುದುರೆಯನ್ನು ಹುಡುಕಿದರು. ಎಲ್ಲಿಯೂ ಯಜ್ಞಾಶ್ವ ಕಾಣದಾದಾಗ, ಹರಿತವಾದ ಆಯುಧಗಳಿಂದ ಭೂಮಿಯನ್ನು ಭೇದಿಸ ತೊಡಗಿದರು. ಸಹಸ್ರಾರು ಯೋಜನಾ ಭೂಮಿಯನ್ನು ಕೊರೆದರು. ಭೂಮಿಯ ಒಳಗಿನ ನೀರು ಅಗಾಧವಾಗಿ ಸೇರಿ ಸಮುದ್ರ ವೇರ್ ಪಟ್ಟಿತು. ಹೀಗೆ ಸಗರನ ಮಕ್ಕಳು ಭೂಮಿಯನ್ನು ಅಗಿದು ಸಮುದ್ರ ಉಂಟು ಮಾಡಿದ್ದರಿಂದ ಅದಕ್ಕೆ 'ಸಾಗರ' ಎಂಬ ಹೆಸರು ಬಂದಿತು ಎಂಬ ನಂಬಿಕೆ. ಭೂಮಿಯಿಂದ ನೀರು ಬಂದಿತೇ ವಿನಃ ಯಜ್ಞಾಶ್ವ ಸಿಗಲಿಲ್ಲ. ಕೊನೆಗೆ ಪಾತಾಳ ಲೋಕಕ್ಕೆ ಹೋದರು. ಪಾತಾಳದ ಒಂದು ಆಶ್ರಮದಲ್ಲಿ ಕಪಿಲ ಮುನಿ ತಪಸ್ಸು ಮಾಡುತ್ತಿದ್ದ. ಅಲ್ಲಿಯೇ ಯಜ್ಞಾಶ್ವ ಹುಲ್ಲು ಮೇಯುತ್ತಿತ್ತು. ಅದನ್ನು ನೋಡಿದ ಸಗರನ ಪುತ್ರರು, ಕಪಿಲ ಮಹರ್ಷಿಯೇ ಕದ್ದಿರಬೇಕೆಂದು ಊಹಿಸಿದರು. ಕಪಿಲ ಮಹರ್ಷಿಯ ಮೇಲೆ ದಾಳಿ ಮಾಡಲು ಮುಂದಾದರು. ಆಗ ಕಪಿಲ ಮಹರ್ಷಿ, ಕೋಪದಿಂದ ಅವರನ್ನೆಲ್ಲ ನೋಡಿದ. ಋಷಿಯ ಕೋಪಾಗ್ನಿಗೆ ಸಗರನ ಮಕ್ಕಳೆಲ್ಲ ಸುಟ್ಟು ಬೂದಿಯಾದರು. ಮಕ್ಕಳು ಬರದಿದ್ದರಿಂದ ರಾಜನಿಗೆ ಚಿಂತೆಯಾಯಿತು. ಯಾಗವನ್ನು ಪೂರ್ಣ ಮಾಡಲೇ ಬೇಕೆಂಬ ಸಂಕಲ್ಪದಿಂದ ತನ್ನ ಮೊಮ್ಮಗನಾದ ಅಸಮಂಜನ ಮಗ ಅಂಶಮಂತನನ್ನು ಕರೆದು,'ನಿನ್ನ ಚಿಕ್ಕಪಂದಿರರನ್ನು ಮತ್ತು ಯಜ್ಞದ ಅಶ್ವವನ್ನು ಹುಡುಕಿಕೊಂಡು ಬಾ' ಎಂದು ಆದೇಶಿಸಿದ. ತಾತನ ಆಜ್ಞೆಯಂತೆ ಅಂಶುಮಂತ ಯಜ್ಞಾಶ್ವವನ್ನ ಹುಡುಕಿಕೊಂಡು ಹೊರಟ. ಇಡೀ ಲೋಕ ಸಂಚರಿಸಿ, ಕೊನೆಗೆ ಪಾತಾಳ ಲೋಕಕ್ಕೆ ಹೋದ. ಅಲ್ಲಿ ಯಜ್ಞಾಶ್ವವಿತ್ತು. ಅದರ ಜೊತೆಗೆ ಅಲ್ಲಿಯೇ ಬೂದಿಯ ರಾಶಿಯು ಇತ್ತು.ಆಗ ಸಗರರಾಜನ ಭಾವಮೈದುನ, ಸುಮತಿಯ ಅಣ್ಣನಾದ ಗರುಡ ಬಂದನು. ಈತನು ಅಂಶುಮಂತನಿಗೆ ನಡೆದ ಸಂಗತಿ ತಿಳಿಸಿದ. ಕಪಿಲ ಮಹರ್ಷಿಯ ಶಾಪದಿಂದ ಚಿಕ್ಕಪ್ಪಂದಿರೊಂದಿಗೆ ಒದಗಿದ ದುಸ್ಥಿತಿ ಕಂಡು ದುಃಖಿಸಿದ. ದೇವಲೋಕದ ಗಂಗೆಯನ್ನು ಪಾತಾಳ ಲೋಕಕ್ಕೆ ಕರೆತಂದು, ನಿನ್ನ ಪಿತೃಗಳ ಬೂದಿಯ ಮೇಲೆ ಹರಿಸಿ, ಅವರಿಗೆ ಸದ್ಗತಿ ದೊರಕಿಸಿ ಕೊಡು ಎಂದು ಗರುಡ ಸಲಹೆ ನೀಡಿದ. ಗರುಡನ ಸಲಹೆಯಂತೆ ಅಂಶುಮಂತ ಯಜ್ಞಾಶ್ವವನ್ನು ಹಿಡಿದುಕೊಂಡು ರಾಜಧಾನಿಗೆ ಹಿಂದಿರುಗಿದ. ನಡೆದ ಎಲ್ಲಾ ಸಂಗತಿಯನ್ನು ತಾತ ಸಗರನಿಗೆ ತಿಳಿಸಿದ. ತನ್ನ ಮಕ್ಕಳನ್ನು ಕಳೆದುಕೊಂಡು ದುಃಖದಿಂದ ಭಾವಪರವಶನಾಗಿ, ಯಾಗವನ್ನು ಪೂರ್ಣಗೊಳಿಸಿದ. ಅಂಶುಮಂತ ಗರುಡನ ಸಲಹೆಯಂತೆ ಗಂಗೆಯನ್ನು ಪಾತಾಳ ಲೋಕಕ್ಕೆ ಕರೆ ತರಲು ಪ್ರಯತ್ನಿಸಿದ. ಅದೇ ಸಂದರ್ಭದಲ್ಲಿ ಸಗರ ಚಕ್ರವರ್ತಿ ಸ್ವರ್ಗಸ್ತನಾದ. ಸಗರನ ಮರಣಾ ನಂತರ ಅಂಶುಮಂತ ಪಟ್ಟಕ್ಕೆ ಬಂದ. ಆದರೆ ಈತನಿಗೆ ಗಂಗೆಯನ್ನು ಧರೆಗೆ ತರಲು ಆಗಲಿಲ್ಲ. ಈತನ ಮಗ ದಿಲೀಪ ಗಂಗೆಯನ್ನು ಕರೆತರುವ ಪ್ರಯತ್ನ ಮಾಡಿದ. ದಿಲೀಪನಿಂದಲೂ ಗಂಗೆಯನ್ನು ಧರೆಗಿಳಿಸಲು ಸಾಧ್ಯವಾಗಲಿಲ್ಲ. ದಿಲೀಪನ ಮಗನೇ ಭಗೀರಥ.
ಗಂಗೆಯನ್ನು ಧರೆಗೆ ತರಲೇಬೇಕೆಂಬ ಸಂಕಲ್ಪ ಮಾಡಿಕೊಂಡು, ತನ್ನ ಮುತ್ತಾ ತಂದಿರರಿಗೆ ಸದ್ಗತಿ ದೊರಕಿಸುವ ನಿರ್ಧಾರ ಮಾಡಿದ. ಅದಕ್ಕಾಗಿ ರಾಜ್ಯವನ್ನು ಮಂತ್ರಿಗಳ ಮೇಲ್ವಿಚಾರಣೆಗೆ ಒಪ್ಪಿಸಿ, ಗೋಕರ್ಣ ಕ್ಷೇತ್ರಕ್ಕೆ ಬಂದು ಕಠೋರವಾದ ತಪಸ್ಸನ್ನು ಆಚರಿಸಿದ.
ಕಥೆಯನ್ನು ಹೇಳುತ್ತಿದ್ದ ಅಜ್ಜಿ ಒಂದು ಕ್ಷಣ ಅಲ್ಲಿ ಕುಳಿತದ್ದಂತಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕಡೆಗೆ ನೋಡಿದಳು. ಎಲ್ಲರೂ ಮೌನ. ಸ್ತಬ್ಧ, ತದೆ ಕಚಿತ್ತದಿಂದ ಕಥೆಯನ್ನು ಕೇಳುತ್ತಿದ್ದಾರೆ. ಮೊಮ್ಮಗಳಂತೂ ಕಣ್ಣು ಮಿಟುಕಿಸದೆ ಕಥೆಯನ್ನು ಆಲಿಸುತ್ತಿದ್ದಾಳೆ. ಅಜ್ಜಿ ಒಂದು ಕ್ಷಣ ಕೆಮ್ಮತೊಡಗಿದಳು, ಅಷ್ಟರಲ್ಲಿ ಯಾವುದೋ ಒಂದು ಮಗು ಓಡಿಹೋಗಿ ಅಜ್ಜಿಗೆ ನೀರನ್ನು ತಂದು ವೇದಿಕೆ ಮೇಲೆ ಕೊಟ್ಟಿತು. ಮತ್ತೆ ನೀರವ ಮೌನ. ಎಲ್ಲರ ಗಮನ ಅಜ್ಜಿಯ ಕಥೆಯ ಕಡೆಗೆ.... ಅಜ್ಜಿ ಕಥೆಯನ್ನು ಮುಂದುವರೆಸಿದಳು......
ಬ್ರಹ್ಮದೇವ ಭಗೀರಥನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷವಾಗಿ, ವರವನ್ನು ಬೇಡಲು ಹೇಳಿದ. ಅದಕ್ಕೆ ಭಗೀರಥ ಗಂಗೆಯನ್ನು ಪಾತಾಳ ಲೋಕಕ್ಕೆ ಕಳುಹಿಸಬೇಕು ಎಂದು ವರ ಬೇಡಿದನು. ಅದಕ್ಕೆ ತಥಾಸ್ತು ಅಂದ ಬ್ರಹ್ಮದೇವ. ಆದರೆ ಗಂಗೆಯು ಪಾತಾಳ ಲೋಕಕ್ಕೆ ಹರಿಯಬೇಕೆಂದರೆ ಸ್ವರ್ಗ ಲೋಕದಿಂದ ನೇರವಾಗಿ ದುಮುಕಿದರೆ, ಭೂಲೋಕ ಕೊಚ್ಚಿ ಹೋಗುತ್ತದೆ. ಆದ್ದರಿಂದ ನಿಧಾನವಾಗಿ ಗಂಗೆಯನ್ನು ಭೂಲೋಕದಲ್ಲಿ ಇಳಿಸಿಕೊಳ್ಳಬೇಕು. ಅಂತಹ ಶಕ್ತಿ ಕೇವಲ ಶಿವನಿಗೆ ಮಾತ್ರ ಇದೆ. ಆದ್ದರಿಂದ ಶಿವನನ್ನು ಮೆಚ್ಚಿಸಲು ಸಲಹೆ ನೀಡಿದ.ನಂತರ ಭಗೀರಥ ಶಿವನನ್ನು ಕುರಿತು ತಪಸ್ಸನ್ನಾಚರಿಸಿದ. ಶಿವ ಗಂಗೆಯನ್ನು ಧರೆಗಿಳಿಸಿಕೊಳ್ಳಲು ಒಪ್ಪಿದ. ನಂತರ ಗಂಗೆಯ ಬಳಿ ಬಂದು ಸ್ವರ್ಗ ಲೋಕದಿಂದ, ಭೂಲೋಕಕ್ಕೆ, ಪಾತಾಳಕ್ಕೆ ಬಂದು ನನ್ನ ಮುತ್ತಾತಂದಿರರಿಗೆ ಸದ್ಗತಿಯನ್ನು ಕರುಣಿಸುವಂತೆ ಪ್ರಾರ್ಥಿಸಿದ. ಭಗೀರಥನ ಪ್ರಾರ್ಥನೆಗೆ ಗಂಗೆ ಬರಲು ಒಪ್ಪಿದಳು. ಶಿವ ಹಿಮಪರ್ವತದಲ್ಲಿ ನಿಂತ. ದೇವತೆಗಳೆಲ್ಲಾ ಗಂಗೆಯನ್ನು ಶಿವ ಧರೆಗಿಳಿಸುವ ದೃಶ್ಯ ನೋಡಲು ಆಕಾಶದ ತುಂಬಾ ನಿಂತರು. ಇದನ್ನು ನೋಡಿದ ಗಂಗೆಗೆ ಜಂಬ ಉಂಟಾಯಿತು. ತನ್ನ ಹಿರಿಮೆಯ ಬಗ್ಗೆ ಹೆಮ್ಮೆ ಹೆಚ್ಚಿತು. ನನ್ನ ರಭಸ ಶಿವ ತಡೆಯಬಲ್ಲನೆ? ಎಂದು ಗರ್ವಪಟ್ಟಳು. ಇದನ್ನು ಗಮನಿಸಿದ ಶಿವ ಗಂಗೆಯ ಗರ್ವ ಇಳಿಸಬೇಕೆಂದು ತನ್ನ ಜಡೆಯನ್ನು ಬಿಚ್ಚಿ, ವಿಶಾಲವಾಗಿ ಹರಡಿದ. ಗಂಗೆ ಶಿವನ ಶಿರದ ಮೇಲೆ ರಭಸವಾಗಿ ಧುಮುಕಿದಳು. ಶಿವನ ಜಡೆಯು ಹಿಮಾಲಯದ ಗರ್ಭದಲ್ಲಿರುವ ವಿಶಾಲವಾದ ಗುಹೆಗಳಂತೆ ಹರವಾಗಿತ್ತು. ಗಂಗೆ ಜಡೆಯಲಿ ಸಿಕ್ಕಿಕೊಂಡಳು. ಅವಳಿಗೆ ಅಲ್ಲಿಂದ ಮಿಸುಕಾಡಲಾಗಲಿಲ್ಲ. ಗಂಗೆಗೆ ತನ್ನ ತಪ್ಪಿನ ಅರಿವಾಯಿತು. ಶಿವನ ಕ್ಷಮೆಯಾಚಿಸಿದಳು. ಶಿವ ತಲೆಯಲ್ಲಿ ಗಂಗೆಯನ್ನು ಧರಿಸಿದ್ದರಿಂದ 'ಗಂಗಾಧರ'ನೆಂಬ ಹೆಸರನ್ನು ಪಡೆದುಕೊಂಡ.
ಭಗೀರಥನಿಗೆ ಮತ್ತೆ ಚಿಂತೆಯಾಯಿತು ಏಕೆಂದರೆ ಶಿವ ಗಂಗೆಯನ್ನು ಶಿರದಲ್ಲಿ ಧರಿಸಿದ. ಭೂಮಿಗೆ ಬಿಡಲಿಲ್ಲ. ಪುನಃ ಶಿವನನ್ನು ಕುರಿತು ಮತ್ತೆ ಪ್ರಾರ್ಥನೆ ಮಾಡಿದ. ಆಗ ಶಿವನು ಪ್ರಸನ್ನನಾಗಿ ಗಂಗೆಯನ್ನು ಭೂಮಿಗೆ ಬಿಟ್ಟ. ಗಂಗೆ ಏಳು ಕವಲುಗಳಾಗಿ ಒಡೆದು ಹರಿದಳು. ಅಹಲ್ಲಾದನೀ, ಪಾವನೀ, ನಲಿನೀ ಎಂಬ ಮೂರು ಪ್ರವಾಹ ಪೂರ್ವ ದಿಕ್ಕಿನಲ್ಲಿ ಹರಿದವು. ಸುಚ್ಛಕ್ಷು, ಸೀತಾ, ಸಿಂಧು ಈ ಮೂರು ನದಿಗಳು ಪಶ್ಚಿಮಕ್ಕೆ ಹರಿದವು. 7 ನೇ ಪ್ರವಾಹ ಅಲಕನಂದಾ ಭಗೀರಥನ ಹಿಂದೆ ಹಿಂದೆ ಹೊರಟಿತು.
ಭಗೀರಥ ರಥವೇರಿ ಮುಂದೆ ಮುಂದೆ ಹೊದಂತೆ, ರಬಸವಾಗಿ ಗಂಗಾ ಅಲಕನಂದಾ ಪ್ರವಾಹ ರೂಪದಲ್ಲಿ ಹಿಂದೆ ಹರಿದು ಬಂದಳು. ಗಂಗಾನದಿಯ ಪ್ರವಾಹದಲ್ಲಿ ಮೀನು, ಮೊಸಳೆ,ಆಮೆ, ಜಲಚರಪ್ರಾಣಿ, ಜಲಚರ ಪಕ್ಷಿಗಳು ಭೂಮಿಗೆ ಬಂದವು. ಕೆಲವು ಕಡೆ ವೇಗವಾಗಿ, ಇನ್ನೂ ಕೆಲವು ಕಡೆ ನಿಧಾನವಾಗಿ ಗಂಗಾ ಹರಿಯತೊಡಗಿದಳು. ಹೀಗೆ ಮುಂದೆ ಹರಿಯುತ್ತಾ ಹೋದಾಗ, ದಾರಿಯಲ್ಲಿ ಒಂದು ಆಶ್ರಮವಿತ್ತು .ಅಲ್ಲಿ 'ಜವ್ನುಋಷಿ 'ಯಾಗವನ್ನು ಮಾಡುತ್ತಿದ್ದನು. ಗಂಗೆಯು ರಭಸವಾಗಿ ಹರಿಯುವಾಗ, ಯಜ್ಞಶಾಲೆ ಮುಳುಗಿತು. ಇದನ್ನು ಕಂಡು ಕೋಪಗೊಂಡ ಜವ್ನುಋಷಿ, ನದಿಯನ್ನು ಆಪೋಷಣಾ ತೆಗೆದುಕೊಂಡು ಕುಡಿದುಬಿಟ್ಟನು. ಭಗೀರಥನಿಗೆ ಚಿಂತೆಯಾಯಿತು. ತನ್ನ ಒಂದು ಒಳ್ಳೆಯ ಕಾರ್ಯಕ್ಕೆ ಎಷ್ಟೆಲ್ಲಾ ತೊಂದರೆಗಳು ಬರುತ್ತಿವೆ ಎಂದು ಮನದಲ್ಲೇ ದುಃಖಿತನಾದ. ಕೊನೆಗೆ ತನ್ನ ತಾತಂದಿರರಿಗಾದಂತಹ ಎಲ್ಲಾ ಸ್ಥಿತಿಯನ್ನು ಜವ್ನುಋಷಿಗೆ ತಿಳಿಸಿದ. ಭೂಲೋಕಕ್ಕೆ ಗಂಗೆಯನು ತರಿಸಿದ ಉದ್ದೇಶವನ್ನು ತಿಳಿಸಿದ. ನೀನು ಗಂಗೆಯನ್ನು ಬಿಡದಿದ್ದರೆ ನನ್ನ ಮುತ್ತಾತಂದಿರರಿಗೆ ಸದ್ಗತಿ ದೊರೆಯುವುದಿಲ್ಲ ಎಂದು ಪ್ರಾರ್ಥಿಸಿದ. ಆಗ ಜವ್ನುಋಷಿ ಗಂಗೆಯನ್ನು ಕಿವಿಯ ಮೂಲಕ ಹೊರಗೆ ಬಿಟ್ಟ.ಜವ್ನುಋಷಿಯ ಹೊಟ್ಟೆಯೊಳಗೆ ಹೋಗಿ ಬಂದಿದ್ದರಿಂದ ಗಂಗೆ ಅವನ ಮಗಳಾದಂತಾಯಿತು. ಆದ್ದರಿಂದ ಜಾಹ್ನವಿ ಎಂಬ ಹೆಸರು ಬಂತು. ಅನಂತರ ಗಂಗೆ ಭಗೀರಥನ ಹಿಂದೆ ಹಿಂದೆ ಹರಿದಳು. ಭಗೀರಥ ಪಾತಾಳ ಲೋಕಕ್ಕೆ ಹೋದ. ಪಾತಾಳ ಲೋಕದಲ್ಲಿ ಹರಿದಳು. ಸಗರನ ಮಕ್ಕಳು ಬೂದಿಯಾದ ಬೂದಿಯ ರಾಶಿಯ ಮೇಲೆ ಗಂಗೆ ಹರಿದಾಗ ಶಾಪ ವಿಮುಕ್ತರಾಗಿ ಸಗರನ ಮಕ್ಕಳು ಸದ್ಗತಿ ಪಡೆದರು.ಆಗ ಬ್ರಹ್ಮದೇವನು ಪ್ರತ್ಯಕ್ಷನಾಗಿ, ಭಗೀರಥ ನಿನ್ನ ಪ್ರಯತ್ನದಿಂದಾಗಿ ಸ್ವರ್ಗಲೋಕ, ಭೂಲೋಕ ಮತ್ತು ಪಾತಾಳ ಲೋಕದಲ್ಲಿ ಹರಿದಿದ್ದರಿಂದ "ತ್ರಿಪಥಗಾಮಿನಿ" ಎಂಬ ಹೆಸರನ್ನು ಪಡೆದಳು. ನಿನ್ನ ಕಾರಣದಿಂದಾಗಿಯೇ ಗಂಗೆಯು ಭೂಲೋಕಕ್ಕೆ ಬಂದಿದ್ದರಿಂದ ಗಂಗೆಯು ನಿನ್ನ ಮಗಳಾದಂತಾಯಿತು. ಆದ್ದರಿಂದ ಪ್ರಪಂಚವು ಅವಳನ್ನು "ಭಾಗೀರಥಿ" ಎಂದು ಕರೆಯಲಿ.
ಈ ಗಂಗೆ ಪವಿತ್ರವಾದ ನದಿ. ಪುಣ್ಯ ನದಿ. ಭಕ್ತಿಯಿಂದ ಈ ನದಿಯಲ್ಲಿ ಸ್ನಾನ ಮಾಡಿದವರಿಗೆ, ರೋಗರುಜಿನಗಳ ಭಯ ಇರುವುದಿಲ್ಲ. ಪುಣ್ಯ ಲಭಿಸುತ್ತದೆ. ಗಂಗಾವತರಣವನ್ನು ಮಾಡಿಸಿದ ನೀನೆ ಧನ್ಯ. ನಿನಗೆ ಮಂಗಳವಾಗಲಿ ಎಂದು ಶುಭ ಹಾರೈಸಿ ಬ್ರಹ್ಮದೇವ ಅದೃಶ್ಯನಾದ. ಆದ್ದರಿಂದಲೇ ಸಹಜವಾಗಿ ಯಾವುದಾದರೂ ಒಂದು ಕೆಲಸವನ್ನು ಮಾಡಬೇಕಾದರೆ ಭಗೀರಥನ ಪ್ರಯತ್ನ ಇರಬೇಕು. ಅಂದಾಗ ಮಾತ್ರ ನಾವು ಆ ಕೆಲಸದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಅಂದ್ರೆ ಮನುಷ್ಯನಿಗೆ ಅಸಾಧ್ಯವಾದ ಕಾರ್ಯ ಯಾವುದು ಇಲ್ಲ. ನಿರಂತರ ಪ್ರಯತ್ನ ಒಂದಿಲ್ಲೊಂದು ದಿನ ಫಲ ಕೊಡುತ್ತದೆ ಎನ್ನುವುದು ಇದರ ತಾತ್ಪರ್ಯ. ಇಂತಹ ಪ್ರಯತ್ನ ಇಂದು ನಾವು ಗಂಗಾ ನದಿಯ ಶುದ್ಧೀಕರಣದಲ್ಲಿ ಕಾಣುತ್ತಿದ್ದೇವೆ. ಸಾಕಷ್ಟು ಮನುಷ್ಯನ ಕಲುಷಿತ ಚಟುವಟಿಕೆಗಳಿಂದ ಮಲಿನಾಳಾಗಿದ್ದ ಗಂಗೆ ಈಗ ಪರಿಶುದ್ಧಳಾಗುತ್ತಿದ್ದಾಳೆ. ಇಂತಹ ಪವಿತ್ರ ನದಿಗಳು ದೇಶದಾದ್ಯಂತ ಸಾಕಷ್ಟು ಹರಿದಿವೆ. ಅಂತಹ ನದಿಗಳನ್ನು ರಕ್ಷಿಸುವ ಕಾರ್ಯ ನಮ್ಮೆಲ್ಲರದಾಗಬೇಕು ಏಕೆಂದರೆ ಸಾಗರ ಎಷ್ಟೇ ವಿಶಾಲವಾಗಿದ್ದರೂ ಅದರ ನೀರನ್ನು ಕುಡಿಯಲು ಸಾಧ್ಯವಿಲ್ಲ. ಬಾಯಾರಿಕೆಯಾದಾಗ ನಮಗೆ ನದಿ ನೀರೇ ಕುಡಿಯಲು ಉಪಯುಕ್ತ. ಅಂತಹ ನೀರಿನ ಸದ್ಬಳಕೆ ಮಾಡಿಕೊಂಡು ನದಿಗಳ ರಕ್ಷಣೆಯನ್ನು ಮಾಡೋಣ. ಈ ದಿನ ನಿಮ್ಮೆಲ್ಲರೆದುರಿಗೆ ಈ ಒಂದು ಪೌರಾಣಿಕ ಕಥೆಯನ್ನು ಹೇಳುವುದಕ್ಕೆ ಅವಕಾಶ ಮಾಡಿಕೊಟ್ಟಂತಹ ನನ್ನ ಮುದ್ದು ಮೊಮ್ಮಗಳ ಶಾಲೆಯ ಎಲ್ಲಾ ಶಿಕ್ಷಕ ವೃಂದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳುತ್ತಾ, ತನ್ನ ಕಥೆಗೆ ಪೂರ್ಣ ವಿರಾಮ ಹೇಳಿದಳು. ಅಜ್ಜಿ ಕಥೆಯನ್ನು ಪೂರ್ಣಗೊಳಿಸಿದ ನಂತರ ಎಲ್ಲ ಮಕ್ಕಳು ಜೋರಾಗಿ ಚಪ್ಪಾಳೆಯನ್ನು ತಟ್ಟುತ್ತಾ ಭಾವ ಪರವಶರಾದರು. ಕಥೆಯನ್ನು ಹೇಳಲು ತೆಗೆದುಕೊಂಡ ಸಮಯ 20 ನಿಮಿಷಗಳು ಕಳೆದುಹೋಗಿತ್ತು. ಯಾರು ಬೆಲ್ ಬಾರಿಸಿರಲಿಲ್ಲ. ಇಷ್ಟು ವಯಸ್ಸಾದರೂ ಸ್ವಲ್ಪವೂ ವಿಶ್ರಮಿಸದೆ ಗಂಗಾನದಿಯ ಬಗ್ಗೆ ತಿಳಿಸಿಕೊಟ್ಟ ಅಜ್ಜಿಯ ಸವಿ ಮಾತುಗಳಿಗೆ ಎಲ್ಲರೂ ಅಭಿನಂದಿಸಿದರು. ದೂರದಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯೊಬ್ಬಳು, ಅಜ್ಜಿ ನಿನಗೆ ಯಾರು ಈ ಕತೆ ಹೇಳಿದರು? ಎಂದು ಜೋರಾಗಿ ಕೇಳಿದಳು. ಅದಕ್ಕೆ ಅಜ್ಜಿ ನನಗೆ ಇದನ್ನು ಯಾರು ಹೇಳಿಲ್ಲಮ್ಮ. ನನಗೆ ಬಿಡುವಿದ್ದಾಗ ರಾಮಾಯಣ, ಮಹಾಭಾರತದ ಕಥೆಗಳನ್ನ ಓದುತ್ತಿರುತ್ತೇನೆ. ರಾಮಾಯಣದಲ್ಲಿ ವಿಶ್ವಾಮಿತ್ರ ಶ್ರೀರಾಮ ಮತ್ತು ಲಕ್ಷ್ಮಣನನ್ನು 'ತಾಟಕಿ'ಎಂಬ ರಾಕ್ಷಸಿಯ ಸಂಹಾರ ಮಾಡಲು, ದಟ್ಟವಾದ ಅರಣ್ಯದಲ್ಲಿ ಕರೆದುಕೊಂಡು ಹೋಗಬೇಕಾದಾಗ ಮಾರ್ಗ ಮಧ್ಯದಲ್ಲಿ ಗಂಗಾನದಿ ಹರಿಯುತ್ತಿರುತ್ತದೆ. ಆಗ ರಾಮ ಮತ್ತು ಲಕ್ಷ್ಮಣರಿಗೆ ಈ ಗಂಗಾನದಿ ಭೂಮಿಗೆ ಅವತರಿಸಿದ ಕಥೆಯನ್ನು ಹೇಳುತ್ತಾರೆ. ಅದನ್ನು ಓದಿದ ನೆನಪಿತ್ತು. ಅದಕ್ಕಾಗಿ ನನ್ನ ಮೊಮ್ಮಗಳು ಕೇಳಿದಾಗ, ಇದೇ ಕತೆಯನ್ನು ಹೇಳಬೇಕು ಎಂದುಕೊಂಡು ಈ ದಿನ ತಮಗೆಲ್ಲ ತಿಳಿಸಿದೆ ಎಂದಳು . ಮೊಮ್ಮಗಳು ಗಂಗಾ ವೇದಿಕೆಯ ಮೇಲೆ ಅಜ್ಜಿಗೆ ಲೋಚಲೋಚನೆ ಮುತ್ತು ಕೊಟ್ಟಳು. ಅಯ್ಯೋ... ಅಜ್ಜಿ.... ಅಮ್ಮ ಇದ್ದಿದ್ರು ಇಷ್ಟು ಚೆನ್ನಾಗಿ ಕಥೆ ಹೇಳ್ತಾ ಇರ್ಲಿಲ್ಲ. ನನಗೆ ತುಂಬಾ ಸಂತೋಷವಾಯಿತು ಎಂದು ಅಜ್ಜಿಯನ್ನು ತಬ್ಬಿಕೊಂಡಳು. ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಎಲ್ಲ ಮಕ್ಕಳು ಆ ಒಂದು ಸಂತಸದ ಕ್ಷಣವನ್ನು ಕಣ್ತುಂಬಿ ಕೊಂಡರು.
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಲ್ಕಲ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ