ಶುಕ್ರವಾರ, ಡಿಸೆಂಬರ್ 9, 2022

ಪತನ (ಕವಿತೆ) - ಪರಿಮಳ ರಾವ್ ಕೆ. (ಜೀವಪರಿ)

ಇಂದ್ಯಾಕೋ ಸೂತಕವಾಗಿದೆ ಈ ಮನಕೆ
ನಿನ್ನೆಯ ನೆನಪುಗಳೆಲ್ಲಾ ಸತ್ತು ಕೊಳೆಯುತಿದೆ
ಬಂದವನು ಬಂದೆ ಬೇಡವೆಂದರೂ 
ಇದೀಗ‌ ಹೇಳುವುದೇನೋ ಉಳಿದಿದೆಯಾದರೂ
ನಿನ್ನ ತಿರಸ್ಕಾರ  ನನ್ನನು ಗೋರಿಯೊಳಗೆ ಸೇರಿಸಿದೆ

ಮಾತ ಮಂಟಪ ಕಟ್ಟಲೇ ಬಾರದಿತ್ತು
ಪದ ಪದಗಳ ನಡುವಿನ ವಿವಾಹಕಾಗಿ
ಸಿಂಗರಿಸಿ ದೀಪವನು ಬೆಳಗಿದೆ ಆ ಮಧುರ ಕ್ಷಣಕೆ
ಈಗ ಬತ್ತಿಯಲಿರುವ ಎಣ್ಣೆಯನೇಕೆ ಆರಿಸುತಿರುವೆ
ಏಕಾಂಗಿ ಬದುಕಿಗೆ ಮತ್ತೆ ಅಣಿ ಮಾಡಿಸಿದೆಯೇಕೆ?!!!!

ಇದೀಗ‌ ಜಗಮಗಿಸಿ ಕಾಣುತಿದೆ ದೀಪದ ಸಾಲು
ಒಳಗಡೆ ಹೋಗಿ ನೋಡಿದವರಿಗೇ ಗೊತ್ತು
ಮೌನದಲಿ ಶವ ಸಂಸ್ಕಾರ ನಡೆಯುತಿದೆಯೆಂದು
ಕೊನೆ  ಗಳಿಗೆಯಲಿ ಜೀವ ಎಳೆದೆಳೆದು ಬಿಟ್ಟರೂ
ನೀರ ನೀಡದೇ ದೂರದಿ ನಿಂತಿರುವುದಕೆ‌ ಕಾರಣವಿದೆಯೆ?

ಇರುವೆಯೋ ಹೋಗುವೆಯೋ ಅದು ನಿನ್ನ‌ ಆಸೆ
ಮುತ್ತು ಒಡೆದಾಗಿದೆ ಬೆಲೆ‌ ಕಳೆದು ಕೊಂಡಂತೆ
ಹೆಜ್ಜೆಗಳೂ ಎತ್ತಿಡಲಾರೆ ಕೆಳಗೆ ಆಳದ ಸುಳಿಯು
ಮತ್ತೆ ಮತ್ತೆ ಸೆಳೆಯುತಿರಲು ನಿನ್ನ ನಿನ್ನೆಯೆಡೆಗೆ
ನಗುತ ಆಡುವ‌ ಪ್ರತೀ ಮಾತುಗಳು ನಾನೇ ಉರಿಸಿಕೊಂಡ ಕೊಳ್ಳಿ....

- ಪರಿಮಳ ರಾವ್ ಕೆ.  (ಜೀವಪರಿ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...