ಶುಕ್ರವಾರ, ಡಿಸೆಂಬರ್ 9, 2022

ತೆರೆ ಮರೆಯ ಬದುಕು (ಸಣ್ಣ ಕತೆ) - ರಂಜಿತಾ ಹೆಗಡೆ.

"ವಾವ್...! ನೋಡೆ..., ನಿಜವಾಗಿಯೂ ಅದೃಷ್ಟವಂತರು ಅಂದ್ರೆ ಇವರೆ....  ಅವರಿಗೆ ಎಷ್ಟೊಂದು ಅಭಿಮಾನಿಗಳಿರುತ್ತಾರೆ ಅಲ್ಲವಾ? ನಾನು ಹೀಗೆ ನಟಿ ಆಗಬೇಕು ಅಂತ ತುಂಬಾ ಆಸೆ. ಆಗ ನಾನೂ ಆರಾಮಾಗಿ ಇರಬಹುದು. ಎಲ್ಲಾರು ಬಂದು ಮ್ಯಾಮ್ ಒಂದು  ಸೆಲ್ಫಿ ಅಂತ ಹೇಳ್ತಾರೆ. ಇಡೀ ಸಿನಿರಂಗವೇ ನಮ್ಮನ್ನು ಗುರುತಿಸುತ್ತೆ."  ಕನ್ನಡಿ ಎದುರು ಕೂದಲು ಬಾಚಿ ಕೊಳ್ಳುತ್ತಾ ನುಡಿದಳು ಸಂಹಿತಾ.

    "ಇಲ್ಲ ಸಂಹಿತಾ. ನಾವು ನೋಡೋದು ಆನ್ ಸ್ಕ್ರೀನ್ ಲೈಫ್ ಅಷ್ಟೇ.  ತೆರೆಯ ಹಿಂದೆ ಬೇರೆಯದೇ ಕಥೆ ಇರಬಹುದು! ಅವರ ಜೀವನ ಹೇಗಿದೆಯೋ ಯಾರಿಗೆ ಗೊತ್ತು? ಇಲ್ಲಿ ಬಂದು ಬಣ್ಣ ಬಳಿದು ನಟಿಸುತ್ತಾರೆ ಅಷ್ಟೇ." ಎಂದಳು ಸಾಧನಾ. 

      "ನನಗೂ ನಟಿ ಆಗಬೇಕು ಅಂತ ಆಸೆ. ನಾನೇನೂ ದೊಡ್ಡ ನಟಿ ಆಗಬೇಕು ಅಂತ ಹೇಳ್ತಿಲ್ಲ...  ಹೀರೋಯಿನ್ ಆಗಿ ಹೀರೋ ಜೊತೆ ಮಿಂಚಬೇಕು ಅಂತ ಅಲ್ಲ. ಪಾತ್ರ ಯಾವುದಾದರೂ ಅದಕ್ಕೆ ಅದರದೇ ಆದ ಮಹತ್ವವಿದೆ! ಫಸ್ಟ್ ಯಾವುದಾದರೂ ಸೈಡ್ ರೋಲ್ ಸಿಗಲಿ. ಆಮೇಲೆ ಮೈನ್ ರೋಲ್ ನೋಡಿದ್ರೆ ಆಯ್ತು."  ತನ್ನ ಕಾಮನಬಿಲ್ಲಿನಂತಹ ಹುಬ್ಬುಗಳ ನಡುವೆ ಪುಟ್ಟ ಬಿಂದಿ ಇಟ್ಟಳು, ತನ್ನ ಅಲಂಕಾರಕ್ಕೆ ಪೂರ್ಣವಿರಾಮವಿಡುವಂತೆ....!


      "ಸಂಹಿತಾ, ಅದು ಸುಲಭ ಅಲ್ಲ ಕಣೆ.... ಬೇಡ ಅಂದ್ರೆ ನಿಂಗೆ ಬೇಜಾರು ಆಗುತ್ತೆ ಅಂತ ಗೊತ್ತು.ಯಾಕಂದ್ರೆ ಅದು ನಿನ್ನ ಕನಸು! ಕನಸುಗಳನ್ನ ಸಾಯಿಸಿ ಬದುಕುವುದು ಸುಲಭ ಅಲ್ಲ!  ಯಾವುದಕ್ಕೂ ನಿನ್ನ ಹುಷಾರಲ್ಲಿ ನೀನಿರು." ಎಂದಳು ಸಾಧನಾ.

        "ಸಾಧನಾ, ಐ ಕ್ಯಾನ್ ಅಂಡರ್ಸ್ಟ್ಯಾಂಡ್ ಯುವರ್ ಪೇಯ್ನ್! ಯಾವುದಕ್ಕೂ ಹಠ ಮಾಡುವ ಹುಡುಗಿ‌ ನೀನಲ್ಲ! ನಿನ್ನ ಕನಸುಗಳಿಗೋಸ್ಕರವಾದರೂ  ಹಠ ಮಾಡಲ್ವ?  ಅದರಲ್ಲಿ ಅಂತಹ ತಪ್ಪೇನೂ ಇಲ್ಲ ಕಣೆ.  ಇದುನಿನ್ನ ಜೀವನ ಕಣೇ..,  ಹಾಗಿದ್ದ ಮೇಲೆ ನೀನು ನಿನ್ನ ಕನಸುಗಳಿಗೋಸ್ಕರ ಹಠ ಮಾಡುವುದು ತಪ್ಪಲ್ಲ" ಎಂದು ನುಡಿದಳು ಸಂಹಿತಾ.

      "ನನ್ನ ಕಥೆ ಬಿಡು. ನಟನೆ ನಿನ್ನ ಕನಸು. ಇವತ್ತು ಆಡೀಷನ್ ಹೋಗ್ತಾ ಇದ್ದೀಯಾ. ನನಗೆ ನಂಬಿಕೆ ಇದೆ ನೀನು ಸೆಲೆಕ್ಟ್ ಆಗ್ತೀಯಾ ಅಂತ. ಆಲ್ ದಿ ಬೆಸ್ಟ್ ಹಿರೋಯಿನ್." ಎಂದ ಸಾಧನಾಳನ್ನು ಅಪ್ಪಿ ಆಡಿಷನ್ ನಡೆಯುವ ಜಾಗಕ್ಕೆ ನಡೆದಳು ಸಂಹಿತಾ. 

     ಸಂಹಿತಾ ಹಾಗು ಸಾಧನಾ ಆತ್ಮೀಯ ಗೆಳತಿಯರು. ನಟನೆ ಸಂಹಿತಾಳ ಕನಸು. ಆದರೆ ಸಾಧನಾಳ ಕನಸು ಮನೆಯವರ ನಿರ್ಧಾರದ ಮೇರೆಗೆ ದೇವರ ಪಿಠದಲ್ಲಿನ ಬಾಡಿದ ಹೂವಿನಂತೆ ದಿನ ದಿನವೂ ಬದಲಾಯಿಸಬೇಕಾಯಿತು. ಸಂಹಿತಾಳನ್ನು ಕಳುಹಿಸಿ ಮಂಚಕ್ಕೆ ಒರಗಿ ಕುಳಿತ ಸಾಧನಾಳಿಗೆ   ಹಳೆಯ ದಿನಗಳು ನೆನಪಾದವು.

      "ನನ್ನನ್ನು ಯಾರೂ ಓದಿಸಲಿಲ್ಲ. ನಿನ್ನ ಯಾಕೆ  ನಾನು ಓದಿಸಬೇಕು?" ಎಂದು ಅಕ್ಕ ಕೇಳಿದ ಪ್ರಶ್ನೆ ಅವಳೆದೆಯಲ್ಲಿ ಇನ್ನೂ ಮಾರ್ದನಿಸುತ್ತಿತ್ತು.  

    "ಅಕ್ಕ, ಅಪ್ಪ ನಿನ್ನನ್ನು ಎಂಜಿನಿಯರಿಂಗ್ ಓದಿಸಿದ್ದಾರೆ.! ನಿನಗೆ ಈಗ ಒಳ್ಳೆಯ ಕೆಲಸವೂ ಸಿಕ್ಕಿದೆ. ಎಂದಾಗ ಅಪ್ಪನೇ ನಿನ್ನ ಓದಿಸುತ್ತಾರೆ" ಎಂದು ಬಿಟ್ಟಳು. ಅಂದು ಅವಳು ಅಕ್ಕ ನನ್ನ ಓದಿಸುತ್ತಾಳೆ ಎಂಬ ನಂಬಿಕೆಗೆ ಕೊಡಲಿಯೇಟು ಬಿತ್ತು. ಇನ್ನು ಎಂಬಿಎ ಮಾಡುವುದು ಅವಳ ಪಾಲಿಗೆ ಸುಲಭದ ಮಾತಾಗಿರಲಿಲ್ಲ. ನನ್ನನ್ನು ಎಂಜಿನಿಯರಿಂಗ್ ಓದಿಸಿದಿರಿ. ಇವಳನ್ನು ಬಿ.ಕಾಮ್ ಓದಿಸಿದಿರಿ. ಇನ್ನು ಅವಳು ಎಂಬಿಎ ಓದಿದರೆ ನನಗೆ ಮೋಸವಾಗುವುದಿಲ್ಲವೇ..? ಎಂದು ಗಲಾಟೆ ಮಾಡಿ ಎಂಬಿಎ ಓದಿಗೂ ಎಳ್ಳುನೀರು ಬಿತ್ತು. ಆದರೂ ಅವಳು ಹೆದರದೆ ಬಿ. ಕಾಮ್  ಒಳ್ಳೆಯ ಅಂಕದೊಂದಿಗೆ ಮುಗಿಸಿದಳು. ಮನೆಯಲ್ಲಿ ಹೇಳಿದರೆ ಒಪ್ಪುವುದಿಲ್ಲವೇನೋ ಎಂದು ಎಂಬಿಎ ಎಂಟ್ರೆನ್ಸ್ ಬರೆದು ಒಳ್ಳೆಯ ರ್ಯಾಂಕ್ ಗಳಿಸಿದ್ದಳು. ಆದರೂ ಪ್ರೋತ್ಸಾಹ ದೂರದ ಮಾತು. ಈಗ ಬೆಂಗಳೂರಿನಲ್ಲಿ ಬಿಗ್ ಫೋರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಎಕ್ಸ್ಟರ್ನಲ್ ಎಂಬಿಎ ಮಾಡುತ್ತಿದ್ದಳು.ಹೀಗೆ ಅವಳ ಎಷ್ಟೋ ಕನಸು ಬಚ್ಚಲು ಮನೆಯ ಒಲೆಯೊಳಗೆ ಹಾಕಿದ ಸೌದೆಯಂತೇ ಹೊತ್ತಿ ಉರಿದಿತ್ತು. ಕಣ್ಣಂಚಿನಲ್ಲಿದ್ದ ಕಂಬನಿಯನ್ನು ತೊಡೆದು ಕೊಂಡು ಡೈರಿಯನ್ನು ತೆಗೆದು ಕೊಂಡು ತಾನು ಅರ್ಧಕ್ಕೆ ನಿಲ್ಲಿಸಿದ ಕಥೆಯನ್ನು ಮುಂದುವರೆಸತೊಡಗಿದಳು.  ಆ ಕಥೆಯ ನಾಯಕಿ ಪ್ರಾರ್ಥನಾ. ಪ್ರಾರ್ಥನಾಳ ಪಾತ್ರ ಸಾಧನಾಳ ಬದುಕಿಗೆ ಹಿಡಿದ ಕನ್ನಡಿಯ ಹಾಗೆ. ತನ್ನ ಕನಸುಗಳನ್ನು ಸಮಾಧಿ ಮಾಡಿ ತನ್ನವರಿಗಾಗಿ ಬದುಕುವ ಪ್ರಾರ್ಥನಾಳ ಕಥೆ ಸಾಧನಾಳ ನೈಜ ಜೀವನದ ಚಿತ್ರಣ...! ಏಕೋ ಸಾಧನಾಳಿಗೆ  ಬರೆಯಲೂ ಆಗಲಿಲ್ಲ. ತನ್ನ ಭವಿಷ್ಯ ತಾನೇ ಹೇಳಿದಂತಾಗಿತ್ತು ಪರಿಸ್ಥಿತಿ. ಗೆಳತಿ ಬಂದು ಎದುರು ನಿಂತಾಗಲೇ ಸಾಧನಾಳಿಗೆ ಇಹದ ಅರಿವಾಯಿತು. 

      "ಅರೇ ಇಷ್ಟು ಬೇಗ ಬಂದು ಬಿಟ್ಯನೇ...?" ಎಂದಳು. 

    "ಇಷ್ಟು ಬೇಗನಾ...? ಟೈಮ್ ನೋಡು. ಮಧ್ಯಾಹ್ನ ಮೂರು ಗಂಟೆ.  ನಿನಗೆ ಟೈಂ ಹೋಗಿದ್ದೇ ಗೊತ್ತಾಗಿಲ್ಲ. ಅಂದ್ರೆ ಊಟವೂ ಮಾಡಿಲ್ಲ ಅಲ್ಲವಾ? ಸರಿ ಸರಿ.  ಬಾ..ಇವತ್ತು ನಂದೇ ಟ್ರೀಟ್." ಎಂದ ಸಂಹಿತಾ ಸಾಧನಾಳನ್ನು ಹೋಟೇಲ್ ಒಂದಕ್ಕೆ ಕರೆದೊಯ್ದಳು. 

         "ಹೇಗಾಯ್ತು ಆಡಿಷನ್?"
ಕೇಳಿದಳು ಸಾಧನಾ.

      "ಚೆನ್ನಾಗೆ ಆಯ್ತು.  ಸೆಲೆಕ್ಟ್ ಆದರೆ ಕಾಲ್ ಮಾಡ್ತಾರಂತೆ..., ನಾನು ಸೆಲೆಕ್ಟ್ ಆಗ್ತೀನಿ ಅಲ್ವಾ?" ಎಂದು ಕೇಳಿದಳು ಸಂಹಿತಾ.

       "ಹೌದು ಸಂಹಿತಾ. ಸೆಲೆಕ್ಟ್ ಆಗಲೇ ಬೇಕು...," ಎಂದು ಅವಳ ಕೈ ಮೇಲೆ ತನ್ನ ಕೈ ಇಟ್ಟು ಹೇಳಿದಳು ಸಾಧನಾ.

      " ಅಲ್ಲ ಕಣೆ, ನೀನು ಎಷ್ಟು ಚೆನ್ನಾಗಿ ಹಾಡ್ತೀಯಾ...., ಬರಿತೀಯಾ, ಟ್ಯಾಲೆಂಟೆಡ್ ನೀನು..., ನೀನು ಸೇರಬಹುದಲ್ಲ...? "

     "ಗೊತ್ತಲ್ಲಾ ನಮ್ಮನೇಲಿ ಒಪ್ಪಲ್ಲ ಅಂತ. ಬಿಟ್ಟು ಹಾಕು ಅದನ್ನ" ಎಂದಳು ಸಾಧನಾ.

         ಹೀಗೆ ಹಲವು ದಿನಗಳು ಕಳೆದವು. ಸಂಹಿತಾ ಆಡಿಷನ್ ನಲ್ಲಿ ಸೆಲೆಕ್ಟ್ ಆದಳು.ಹೀಗೆ ಒಂದು ವರ್ಷ ಕಳೆಯಿತು.  ಸಂಹಿತಾ ಈಗ ಬಹುಬೇಡಿಕೆಯ ನಟಿ....! ದಿನಗಳು ಉರುಳಿ  ಮತ್ತೆ ಮೂರ್ನಾಲ್ಕು ವರ್ಷಗಳೇ ಉರುಳಿದವು...! ಜೀವನ ಯಾವಾಗಲೂ ಒಂದೇ ರೀತಿ ಇರದು. ಜೀವನ ಚಕ್ರದ ಹಾಗೆ. ಮೇಲಿದ್ದವನು ಕೆಳಗಿಳಿಯಲೇ ಬೇಕಲ್ಲ. ಎಲ್ಲವೂ ಕಾಲವಾಹಾನಿಯ ಕೈಚಳಕ...!  ಹಾಗೆಯೇ ಸಂಹಿತಾಳ ಜೀವನವೂ ಕೂಡ. ಬಣ್ಣದ ಬದುಕಿಗೆ ಸಂಹಿತಾ ಸುಸ್ತಾಗಿ ಹೋದಳು. ಬಣ್ಣ ಹಚ್ಚಿ ಅವಳ ಮೊದಲಿದ್ದ ಸೌಂದರ್ಯವೂ ಹಾಳಾಗಿ ಹೋಗಿತ್ತು. ಅವಳಂದುಕೊಂಡಷ್ಟು ಸುಲಭವಾಗಿರಲಿಲ್ಲ ತೆರೆಯ ಬದುಕು. ಎಷ್ಟೇ ನೋವಿದ್ದರೂ ಮುಖಕ್ಕೆ ಬಣ್ಣ ಬಳಿದು ತೆರೆಯ ಮೇಲೆ ನಟಿಸ ಬೆಕು ಅಷ್ಟೇ. ನೋಡುಗರ ಕಣ್ಣಿಗೆ ಅದೊಂದು ಸುಂದರ ಲೋಕ. ಆದರೆ ತೆರೆಯ ಹಿಂದೆ ಇರುವ  ಸತ್ಯದ ಕರಾಳ ಮುಖ ಸಂಹಿತಾಳಿಗೆ ದರ್ಶನವಾಗಿತ್ತು.  ಅವಳಿಗೆ ಸಿಕ್ಕ ನೋವು ಹೊರ ಪ್ರಪಂಚದಿಂದ ಬಂದಿದ್ದಲ್ಲ.... ಬದಲಾಗಿ ತಾನೆ ಬಯಸಿ ಬಂದ ತೆರೆಯಿಂದ, ನಟನೆಯಿಂದ. ಅವಳೂ ಸ್ವಲ್ಪ ಮೈಮರೆತಳು.  ಹಾಗಾಗಿಯೇ ಏನೋ ಆನ್ ಸ್ಕ್ರೀನ್,ಆಫ್ ಸ್ಕ್ರೀನ್ ಎಂಬ ಎರಡು ಪದಗಳಿರುವುದು. ಆದರೆ ಅವುಗಳಿಗಿರುವ ಗೂಡಾರ್ಥ ತಿಳಿಯುವುದು ಕಷ್ಟ. ಹೇಳುವುದೂ ಕಷ್ಟ.... ಎನಿಸುತ್ತಿತ್ತು! "ನನ್ನದೊಂದು ಬದುಕಾ?" ಎನ್ನಿಸಿಬಿಟ್ಟಿತು ಸಂಹಿತಾಳಿಗೆ. ಮೊದ ಮೊದಲು ಎಲ್ಲವೂ ಚೆನ್ನಾಗಿತ್ತು. ಆದರೆ ಈ ಮೂರು ವರುಷಗಳಲ್ಲಿ ನಡೆದ ತೆರೆಯ ಹಿಂದೆ ನಡೆದ ಘಟನೆಗಳು ಈಗಲೂ ಅವಳನ್ನು ನಡುಗಿಸುತ್ತಿದ್ದವು. ತಾನು ಆಡಿಷನ್ ಗೆ ಹೋಗುವ ಮೊದಲ ದಿನ ಗೆಳತಿ ಹೇಳಿದ ಮಾತು ನೆನಪಾಗಿತ್ತು ಸಂಹಿತಾಳಿಗೆ! ಮರೆಯಬೇಕು ಎಂದು ಎಷ್ಟೇ ಪ್ರಯತ್ನಿಸಿದರೂ ಪರದೆಯ ಹಿಂದಿನ ಕರಾಳ ಮುಖ ಬಿಡಬೇಕಲ್ಲ....?  ಅವಳ ಪಾಲಿಗೆ ಸಾಧನಾಳನ್ನು ಬಿಟ್ಟರೆ  ಉಳಿದದ್ದು ಆತ್ಮ ಹತ್ಯೆ ಒಂದೇ...!  ಹಾಗೆಂದು ಆತ್ಮಹತ್ಯೆ ಮಾಡಿಕೊಂಡು ಮತ್ತೆ ಬದುಕಿದರೆ.....? ಆಗ ಮತ್ತಷ್ಟು ಕಠಿಣ ಬದುಕು...!  ಅಷ್ಟು ಅವಳ ಬದುಕು ದುಸ್ತರಗೊಂಡಿತ್ತು. ತಾನಾಗೆ ಬಯಸಿ ಆರಿಸಿಕೊಂಡ ನಟನೆಯಿಂದ ಅವಳ ಜೀವನವೇ ಶೋಕಸಾಗರದಲ್ಲಿ ಮುಳುಗಿತ್ತು. ಮೇಕಪ್ ಮಾಡಿಕೊಳ್ಳಲು ಬಳಸುವ ಕುಂಚಕ್ಕೂ‌ ತಿಳಿದಿತ್ತು ಸಂಹಿತಾ ಬದುಕು ಏನೆಂದು.! ಯಾವಾಗಲೂ ಕನ್ನಡಿಯ ಮುಂದೆ ನಿಲ್ಲುತ್ತಿದ್ದವಳು ಈಗ ಕನ್ನಡಿಯಲ್ಲಿ ಅವಳ ಬಿಂಬ ನೋಡಿಕೊಳ್ಳಲೂ ಅಸಹ್ಯಪಡುತ್ತಿದ್ದಳು! ಕನ್ನಡಿ, ಕನ್ನಡಿಯಲ್ಲಿರುವ ಅವಳದ್ದೇ ಬಿಂಬ. ಮುಖಕ್ಕೆ ವಿಶೇಷ ಮೆರುಗು ಕೊಡುವ, ಭಾವನೆಗಳನ್ನು ಮರೆಮಾಚವ ಬಣ್ಣ. ಅದಕ್ಕೆ ಸಹಕಾರ ಕೊಡುವ ಬಣ್ಣದ ಸಹಚಾರಿಣಿ  ಕುಂಚ ಎಲ್ಲವೂ ಸಂಹಿತಾಳನ್ನು ಅಣಕಿಸುತ್ತಿದ್ದವು! ಈಗ ಅವಳ ಬದುಕೇ ನಟನೆ...! ಎಷ್ಟೇ ನೋವಿದ್ದರೂ ನಗುವೆಂಬ ಬಣ್ಣ ಹಚ್ಚಿ ಖುಷಿಯಾಗಿರುವಂತೇ ನಟಿಸಬೇಕು. ಸಾಧನಾಳೇನೂ ಇದಕ್ಕೆ
ಹೊರತಲ್ಲ. ಅವಳ ಕನಸನ್ನು ಸಮಾಧಿ ಮಾಡಿ ತನ್ನವರಿಗಾಗಿ ನಗುವಿನ ಮುಖವಾಡ ಧರಿಸಿ ನಟಿಸುವುದನ್ನು ಯಾವಾಗಲೋ ಕಲಿತು ಅವಳಿಗದು ಅಭ್ಯಾಸವಾಗಿತ್ತು. ಒಟ್ಟಿನಲ್ಲಿ ಇಬ್ಬರೂ ಕಲಾವಿದರು...! ಇಬ್ಬರಿಗೂ ನಟನೆ ಕರತಲಾಮಲಕ! ತಮ್ಮಲ್ಲಿರುವ ದುಃಖ ಅದುಮಿಟ್ಟುಕೊಂಡು ಜಗವೆಂಬ ವೇದಿಕೆಯಲ್ಲಿ ಜೀವನವೆಂಬ ನಾಟಕದಲ್ಲಿ ಇಬ್ಬರೂ ಪಾತ್ರಧಾರಿಗಳು....!

- ರಂಜಿತಾ ಹೆಗಡೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...