ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರಿನ ಸಂಶೋಧಕರಾದ ಡಾ. ರಂಗಸ್ವಾಮಿ ಹೆಚ್ ಇವರು
"‘ಪುತಿನ’ ಎಂಬ ಕಾವ್ಯನಾಮದಿಂದಲೇ ಚಿರಪರಿಚಿತರಾಗಿರುವ ‘ಪುರೋಹಿತ ತಿರುನಾರಾಯಣ ನರಸಿಂಹಾಚಾರ್’ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಇವರು ‘ತಿರುನಾರಾಯಣ ಅಯ್ಯಂಗಾರ್’ ಮತ್ತು ‘ಶ್ರೀರಂಗಮ್ಮ’ ದಂಪತಿಗಳ ಹಿರಿಯ ಮಗನಾಗಿ ೧೯೦೫ರ ಮಾರ್ಚ್ ೧೭ ರಂದು ಜನಿಸಿದರು. ಇವರು ಹುಟ್ಟಿ ಬೆಳೆದದ್ದು ಮೇಲುಕೋಟೆ (ಮಂಡ್ಯ ಜಿಲ್ಲೆ) ಮತ್ತು ಗೊರೂರು (ಈಗ ಹಾಸನ ಜಿಲ್ಲೆಗೆ ಸೇರಿದ) ಪರಿಸರದಲ್ಲಿ. ಅವರ ತಾಯಿಯ ತವರುಮನೆ ಗೊರೂರು. ಪುತಿನ ಅವರು ತಮ್ಮ ಬಾಲ್ಯದ ಶಿಕ್ಷಣವನ್ನು ತಮ್ಮ ತಂದೆಯವರ ಊರಾದ ಮೇಲುಕೋಟೆಯಲ್ಲಿ ಮುಗಿಸಿದರು. ನಂತರ ಮೈಸೂರಿನಲ್ಲಿ ಶಿಕ್ಷಣವನ್ನು ಮುಂದುವರಿಸಿ ೧೯೨೬ರಲ್ಲಿ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದರು.
ಸುಮಾರು ೪೦೦ ವರ್ಷಗಳ ಹಿಂದೆ ಮೇಲುಕೋಟೆಯಲ್ಲಿ ವೇದಕರ್ಮಗಳನ್ನು ಬಲ್ಲ ಯೋಗ್ಯ, ನುರಿತ ಪುರೋಹಿತರಿಗೆ ಅಭಾವವಿದ್ದ ಕಾಲದಲ್ಲಿ ಪುತಿನ ಅವರ ಮನೆತನದ ಹಿರಿಯರು ತಮಿಳುನಾಡಿನ ತಿರುವಳ್ಳೂರಿನಿಂದ ಮೇಲುಕೋಟೆಗೆ ಬಂದು ನೆಲೆಸಿದರು. ವೇದೋಪನಿಷತ್ತು, ಧರ್ಮ ಶಾಸ್ತ್ರಗಳನ್ನು ಆಳವಾಗಿ ಬಲ್ಲ ಶಿಂಗ್ರಯ್ಯಂಗಾರ್ ಪುತಿನ ಅವರ ತಾತ. ಇವರ ತಂದೆಯವರು ಸ್ವತಃ ವಿದ್ವಾಂಸರು. ಇವರು ರಾಮಾಯಣ, ಮಹಾಭಾರತ ಮತ್ತು ಭಾಗವತಗಳಲ್ಲಿ ಆಳವಾದ ಪಾಂಡಿತ್ಯವನ್ನು ಪಡೆದು, ಮೇಲುಕೋಟಿಯ ಸುತ್ತಲಿನ ಪ್ರದೇಶಗಳಲ್ಲಿ ಪ್ರವಚನಗಳನ್ನು ನೀಡುತ್ತಾ ಜನಮನ್ನಣೆಯನ್ನು ಗಳಿಸಿದ್ದರು. ಪಂಡಿತರಿಗೆ ಮಾತ್ರವಲ್ಲದೆ, ಸಾಮಾನ್ಯ ಜನರಿಗೂ ರಾಮಾಯಣಾದಿ ಸಂಸ್ಕೃತ ಮಹಾಕಾವ್ಯಗಳನ್ನು ಬೋಧಿಸುತ್ತಿದ್ದುದರಿಂದ ಅವರ ಪ್ರವಚನಗಳು ಜನಸಾಮಾನ್ಯರಿಂದ ಮಾನ್ಯತೆಯನ್ನು ಪಡೆದಿದ್ದವು. ತಮ್ಮ ತಂದೆಯವರ ಮೇಲೆ ಪುತಿನ ಅವರಿಗೆ ಅಪಾರವಾದ ಗೌರವ ಮತ್ತು ಪೂಜ್ಯ ಭಾವನೆಯಿತ್ತು. ಪುತಿನ ರ ಗೋಕುಲಾಷ್ಠಮಿ ಪ್ರಬಂಧದಲ್ಲಿ ಅವರ ಪತೃಪ್ರೇಮ ಸಮರ್ಪಕವಾಗಿ ಚಿತ್ರಣಗೊಂಡಿರುವುದನ್ನು ಗಮನಿಸಬಹುದು.
ವೃತ್ತಿ ಜೀವನ: ೧೯೨೬ರಲ್ಲಿ ‘ಗೋರಕ್ಷಕ ಸಮಿತಿ’ಯಲ್ಲಿ ಗುಮಾಸ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಪುತಿನು, ನಂತರ, ಮೈಸೂರು ಸೈನ್ಯದ ಬ್ರಿಟೀಷರ ಮಿಲಿಟರಿ ಆಫೀಸ್‌ನಲ್ಲಿ ಕೆಲಸಕ್ಕೆ ಸೇರಿ ೧೯೩೮ರಲ್ಲಿ ಕಚೇರಿಯ ಮ್ಯಾನೇಜರ್ ಆಗಿ, ೧೯೪೫ರಲ್ಲಿ ಸೂಪರಿಡೆಂಟ್ ಆಗಿ ಬಡ್ತಿ ಪಡೆದು ಕೊನೆಗೆ ಅಲ್ಲಿಯೇ ನಿವೃತ್ತರಾದರು. ಪುತಿನ ಅವರು ೧೯೫೨ರಲ್ಲಿ ಶಾಸನಸಭಾ ಕಛೇರಿಯ ಸಂಪಾದಕರೂ, ೧೯೬೩-೬೬ ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರರಾಗಿ, ೧೯೬೬-೭೧ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು ಸಂಪಾದಕರ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಪುತಿನ ತಮ್ಮ ದಕ್ಷತೆ ಪ್ರಾಮಾಣಿಕತೆಗಳಿಂದ ಮೇಲಾಧಿಕಾರಿಗಳಿಗೆ ಬಹುಪ್ರಿಯರಾಗಿದ್ದರು. ಪುತಿನ ಅವರು ಕನ್ನಡ ಸಾಹಿತ್ಯದ ಅಧ್ಯಾಪನ ವೃತ್ತಿಯಿಂದ ದೂರವಿದ್ದರೂ, ಅಧ್ಯಾಪನ ವೃತ್ತಿಯನ್ನು ಮಾಡುತ್ತಿದ್ದಂತಹ ಸ್ನೇಹಿತರಿಗೆ ತುಂಬಾ ಹತ್ತಿರವಾಗಿದ್ದರು.
ಪುತಿನ ಅವರು ೧೯೨೫ರಲ್ಲಿ ಶ್ರೀಮತಿ ಶೇಷಮ್ಮ ಅವರೊಂದಿಗೆ ವಿವಾಹವಾಗುವರು. ಈ ದಂಪತಿಗಳಿಗೆ ಏಳು ಜನ ಹೆಣ್ಣು ಮಕ್ಕಳು (ಯದುಗಿರಿ, ಶಾರದ, ಪದ್ಮ, ರಮಾ, ಶ್ರೀರಂಗ, ಅಲುಮೇಲು, ವಿಜಯ) ಹಾಗೂ ಒಬ್ಬ ಮಗ (ತಿರುನಾರಾಯಣ). ಪುತಿನರು ತಮ್ಮ ನಿವೃತ್ತಿ ಜೀವನವನ್ನು ಮೈಸೂರಿನಲ್ಲಿ ಕಳೆದು, ೧೩.೧೦.೧೯೯೮ ರಲ್ಲಿ ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ವಿಧಿವಶರಾದರು. ಇವರ ಭೌತಿಕ ಶರೀರದ ಅಂತ್ಯ ಸಂಸ್ಕಾರವನ್ನು ಮೇಲುಕೋಟೆಯಲ್ಲಿ ನೆರವೇರಿಸಲಾಗಿದೆ.
ಪುತಿನ ಅವರಿಗೆ ಸಂದಿರುವ ಪ್ರಶಸ್ತಿಗಳು ಮತ್ತು ಗೌರವಗಳು: ಪುತಿನ ಅವರಿಗೆ ೧೯೬೬ರಲ್ಲಿ ‘ಹಂಸ ದಮಯಂತಿ ಮತ್ತು ಇತರ ರೂಪಕಗಳು’ ಎಂಬ ಕೃತಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿದೆ. ಅದೇ ವರ್ಷ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಶ್ರೀಹರಿಚರಿತೆ’ ಮಹಾಕಾವ್ಯಕ್ಕೆ ೧೯೯೧ರಲ್ಲಿ ‘ಪಂಪ ಪ್ರಶಸ್ತಿ’, ೧೯೭೧ರಲ್ಲಿ ಮೈಸೂರು ವಿಶ್ವವಿದ್ಯಾಲಯ ‘ಗೌರವ ಡಾಕ್ಟರೇಟ್’ ಪದವಿ, ೧೯೯೦ರಲ್ಲಿ ಭಾರತ ಸರ್ಕಾರದಿಂದ ‘ಪದ್ಮಶ್ರೀ’ ಗೌರವ ಸೇರಿದಂತೆ ಹಲವು ಪ್ರಶಸ್ತಿ ಸನ್ಮಾನಗಳು ಸಂದಿವೆ. ಅಲ್ಲದೆ, ಪುರಿನ ಅವರು ೧೯೮೧ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ೫೩ನೇ ‘ಕನ್ನಡ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷತೆಯನ್ನು ವಹಿಸಿದರು. ಕರ್ನಾಟಕ ರಾಜ್ಯ ಸರ್ಕಾರ ಪುತಿನ ಅವರ ನೆನಪಿನ ಸ್ಮರಣಾರ್ಥವಾಗಿ ಮೇಲುಕೋಟೆಯಲ್ಲಿ ೧೯೯೫ರಲ್ಲಿ ‘ಪುತಿನ ಟ್ರಸ್ಟ್’ ಸ್ಥಾಪಿಸಿದೆ.
ಪುತಿನ ಅವರ ಸಾಹಿತ್ಯ ಸೃಷ್ಟಿಗೆ ಪ್ರೇರಣೆ ಮತ್ತು ಪ್ರಭಾವ: ಪುತಿನ ಅವರು ತಮ್ಮ ಸಾಹಿತ್ಯ ಕೃಷಿಗೆ ಸ್ಫೂರ್ತಿ ನೀಡಿದಂಥ ಅನುಭವ ಮತ್ತು ನೆನಪುಗಳನ್ನು ಹೀಗೆ ಮೆಲುಕು ಹಾಕುತ್ತಾರೆ- “ನನ್ನ ತಂದೆಯ ಊರಾದ ಮೇಲುಕೋಟೆ, ತಾಯಿಯ ತವರಾದ ಗೊರೂರು, ಅಕ್ಕ-ತಂಗಿ ಹಾಗೂ ಹೆಂಡತಿಯ ಗ್ರಾಮವಾದ ಹೆಮ್ಮಿಗೆ, ಓದಿನ ಊರಾದ ಮೈಸೂರು, ವೃತ್ತಿಯ ನಗರವಾದ ಬೆಂಗಳೂರಿನ ಸೈನ್ಯದ ಪಾಳ್ಯ ಹಾಗೂ ಮಲ್ಲೇಶ್ವರಂಗಳ ಪರಿಸರದಲ್ಲಿ ನನ್ನ ಮನಸ್ಸು ಸುಳಿದಾಡುತ್ತದೆ. ನಾನಿಲ್ಲಿ ನೆನೆಯುವುದು ಹೃದಯಕ್ಕೆ ಬಂದ ಪ್ರಪಂಚ, ಹೃದ್ಯಪ್ರಪಂಚವನ್ನು, ರಸಾರ್ದ್ರವಾಗಿರುವಂಥದನ್ನು. ಅದು ನನ್ನ ಎಳೆತನ ಹಾಗೂ ತಾರುಣ್ಯದಲ್ಲಿ ಸರಾಗವಾಗಿ ನನ್ನೊಳಹೊಕ್ಕು ನನ್ನ ಸಾಹಿತ್ಯ ಶ್ರಮಕ್ಕೆ ನಿರಂತರವಾಗಿ ಸ್ಫೂರ್ತಿಯನ್ನು ಕೊಡುತ್ತಿದೆ” (ಮೆಲುಕು, ಪುಟ-೩) ಎಂದು ಹೇಳುತ್ತಾರೆ.
ಪುತಿನ ಅವರು ತಮ್ಮ ಎಳೆಯತನದ ವಯಸ್ಸನ್ನು ಕಳೆದ ತಾಯಿಯ ತವರು ಮನೆಯಾದ ಗೊರೂರಿನ ಚಿತ್ರಣವನ್ನು ಈ ರೀತಿ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ- “ನನ್ನ ಎಳೆಯತನದ ಗೊರೂರು ಚೆಲುವಾದ ಹಳ್ಳಿ. ಅಲ್ಲಿನ ಶ್ರೀವೈಷ್ಣವರು ಬಹು ರಸಿಕರು. ಅವರ ಅಪ್ಪಟ ಕನ್ನಡದ ಚಾವಡಿ ಹರಟೆಗಳು ಕೇಳುವುದಕ್ಕೆ ಬಹಳ ಇಂಪಾಗಿರುತ್ತದೆ. ಹಿತ್ತಲಿಗೆ ಒತ್ತಿಕೊಂಡು ಊರನ್ನು ಬಳಸಿರುವ ನಾಲೆ, ಹೇಮಾವತಿ ನದಿ, ದಡದ ತೋಪು, ಗುಡಿ, ಜಾಲಾರಿ ಮರಗಳು, ಹಿತ್ತಲಿನ ಚಕ್ಕೋತ, ನೆಲ ಸಂಪಿಗೆ, ಮಲ್ಲಿಗೆ, ನೇರಿಳೆ, ಹುಣಸೆ, ಕಾಲುವೆ ದಂಡೆಯ ಸುರಗಿಮರ, ಶೃಂಗಾರ ತೋಟದ ಸಂಪಿಗೆ, ಬೆಳಗಿನ ಜಾವ ಎಲೆಪಿಂಡಿಗಾಗಿ ನಾನಲೆಯುತ್ತಿದ್ದ ಮುತ್ತುಗದ ಕಾಡು, ಯಗಚಿಯ ಸಂಗಮ, ಜಡಿಮಳೆ, ಮನೆಮನೆಗಳಲ್ಲಿ ಹೆಂಗಸರು ನೆರೆದು ಹಾಡುತ್ತದ್ದ ಚಂದ್ರಾವಳಿ ಕುಚೇಲ ಅಷ್ಟಪದಿ ಮುಂತಾದ ಹಾಡುಗಳು ನನ್ನ ಹೃದ್ಯಲೋಕದ ಒಂದು ಭಾಗವಾಗಿಬಿಟ್ಟಿವೆ.”
ಮುಂದುವರಿದು ಹೆಂಡತಿಯ ತವರು ಮನೆಯಾದ ಹೆಮ್ಮಿಗೆಯನ್ನು ಕುರಿತು- “ಹೆಮ್ಮಿಗೆಯೂ ಇಂಥದೇ ಒಂದು ಶ್ರೀವೈಷ್ಣವ ಅಗ್ರಹಾರ. ಇಲ್ಲಿಯ ಜನರು ಒಂದು ಥರದ ಗ್ರಾಮ್ಯ ತಮಿಳಿನಲ್ಲಿ ಮಾಡುತ್ತಿದ್ದ ಸಂಭಾಷಣೆಗಳನ್ನು ಕೇಳುವುದೇ ಒಂದು ಹಬ್ಬ. ಅಲ್ಲಿ ನನಗೆ ಪಂಡಿತ ಹೆಮ್ಮಿಗೆ ದೇಶಿಕಾಚಾರ್ಯರು ಆಪ್ತ ಮಿತ್ರರಾದರು. ಅವರಿಂದ ನನಗೆ ಹಲವಾರು ಹಳಗನ್ನಡ ನಡುಗನ್ನಡದ ಕೃತಿಗಳ ಪರಿಚಯವಾಯಿತು” ಎಂದು ಹೇಳುತ್ತಾರೆ. ಇನ್ನು, ತಂದೆಯವರ ಊರಾದ ಮೇಲುಕೋಟೆಯನ್ನು ಪುತಿನ ಅವರು ಬಹಳ ವಿಶೇಷವಾಗಿ ನೆನೆಯುತ್ತಾರೆ. “ಮೇಲುಕೋಟೆ ಇವೆರಡಕ್ಕೂ ತೀರ ಬೇರೆಯಾದ ಊರು; ಶ್ರೀವೈಷ್ಣವರು ನಿತ್ಯ ಸ್ಮರಿಸುವ ಪುಣ್ಯಕ್ಷೇತ್ರ; ಸಾಂಸ್ಕೃತಿಕ ರಾಜಧಾನಿ. ಎಲ್ಲ ವರ್ಗದ ಜನ ಅದರ ಅಂದಕ್ಕೆ ಮೆಚ್ಚಿಕೊಂಡು ಆದರಿಸುತ್ತಿರುವ ಯಾತ್ರಾಕ್ಷೇತ್ರವದು. ದೈವವಶಾತ್ ಒಂದು ದೊಡ್ಡ ಉತ್ಸವದ ದಿನ ನಾನಲ್ಲಿ ಜನಿಸಿದೆ. ದೈವದ ಒಂದು ಗಾಢವೂ ಆನಂದ ಸಮೃದ್ಧವೂ ಆದ ಭಾವ ಮೊದಲ ಉಸಿರಿನಲ್ಲಿಯೇ ಆ ದಿನ ನನ್ನನ್ನು ಹೊಕ್ಕು ನನ್ನ ಇಡೀ ಬದುಕನ್ನು ವ್ಯಾಪಿಸಿತು. ಅಲ್ಲಿನ ಪಾಠ ಶಾಲೆಯಲ್ಲಿ ಕಾವ್ಯರಸವನ್ನೂ, ಗುಡಿಯಲ್ಲಿ ಆರ್ಯ ದ್ರಾವಿಡ ದ್ವೈತಭಾವಗಳ ರಸವನ್ನೂ, ಪುರಾಣ ಹಾಗೂ ಕಾಲಕ್ಷೇಪ ಸನ್ನಿವೇಶಗಳಲ್ಲಿ ಕಥಾರಸ ಪ್ರವಚನ ರಸಗಳನ್ನೂ ದೇವೋತ್ಸವಗಳಲ್ಲಿ ಗಾನ ಮತ್ತು ಇತರ ಕಲಾರಸಗಳನ್ನು ಮಾಧ್ಯಮಿಕ ಕನ್ನಡ ಶಾಲೆಯಲ್ಲಿ ಕನ್ನಡದ ಗದ್ಯ ಪದ್ಯಗಳ ರುಚಿಯನ್ನೂ ನಾನು ಪಡೆದುಕೊಂಡೆ. ನನ್ನ ಪ್ರಪಂಚದ ರಸವತ್ತಾದ ಭಾಗ ನನಗೆ ಮೇಲುಕೋಟೆಯ ಕೊಡಿಗೆ”(ಮೆಲುಕು, ಪುಟ-೪) ಎಂದು ಸ್ವತಃ ಪುತಿನ ಅವರೇ ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಪುತಿನ ಅವರ ತಂದೆಯವರು ಸ್ವತಃ ವಿದ್ವಾಂಸರಾಗಿದ್ದು, ಅವರಿಗೆ ದೊಡ್ಡ ವಿದ್ವತ್ ಬಳಗದ ಆಪ್ತ ಸಂಬಂಧವಿತ್ತು. ಮೇಲುಕೋಟೆಗೆ ದೇವರ ದರ್ಶನಕ್ಕೆ ಬರುತ್ತಿದ್ದ ವಿದ್ವನ್ಮಣಿಗಳು ತಿರುನಾರಾಯಣರ ಮನೆಗೂ ಬಂದು ಅವರೊಂದಿಗೆ ವೈಚಾರಿಕ ಜಿಜ್ಞಾಸೆ ನಡೆಸುತ್ತಿದ್ದರು. ಬೆಳ್ಳಾವೆ ನರಹರಿಶಾಸ್ತ್ರಿ, ರಾ.ನರಸಿಂಹಾಚಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದೇವಶಿಖಾಮಣಿ ಅಳಸಿಂಗ್ರಾಚಾರ್, ಇಂತಹ ಕವಿ ವಿದ್ವಾಂಸರೊAದಿಗೆ ತಂದೆಯವರು ಚರ್ಚಿಸುವುದನ್ನು ಬಾಲಕ ಪುತಿನ ಕುತೂಹಲದಿಂದ ಕಣ್ಣರಳಿಸಿ ಗಮನಿಸುತ್ತಿದ್ದರು. ಪ್ರೊ.ಎಂ.ಹಿರಿಯಣ್ಣನವರ ಒಳ್ಳೆಯ ಪರಿಚಯವೂ ಇತ್ತು.
ಬಿ.ಎ. ಪದವಿಯ ವ್ಯಾಸಂಗದಲ್ಲಿ ತತ್ತ್ವವಶಾಸ್ತ್ರ, ವೇದಾಂತ ದರ್ಶನ ಮತ್ತು ಸಂಸ್ಕೃತ ಇವರ ಅಧ್ಯಯನದ ಮುಖ್ಯ ವಿಷಯಗಳಾದರೆ, ಫ್ರೆಂಚ್ ದ್ವಿತೀಯ ಭಾಷೆಯಾಗಿತ್ತು. ತತ್ತ್ವಶಾಸ್ತ್ರವನ್ನು ಬೋಧಿಸುತ್ತಿದ್ದ ಪ್ರೊ. ಎಂ. ಹಿರಿಯಣ್ಣನವರು ಪುತಿನ ಅವರ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ತೀ.ನಂ.ಶ್ರೀಕಂಠಯ್ಯ, ನಂ.ಶಿವರಾಮಶಾಸ್ತ್ರಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕೂಡಲಿ ಚಿದಂಬರ, ಮತ್ತು ರೊ.ಲ.ನರಸಿಂಹಯ್ಯ ಮೊದಲಾದವರು ಆತ್ಮೀಯ ಮಿತ್ರರು. ಒಂದರ್ಥದಲ್ಲಿ ‘ಪುತಿನ ಅವರ ಕವನಗಳ ಸಾಕು ತಾಯಿ ತೀ.ನಂ.ಶ್ರೀ’ ಆಗಿದ್ದರು. ದೇ.ಜವರೇಗೌಡ, ಪ್ರಭುಶಂಕರ ಮತ್ತು ಸುಜನ ಮೊದಲಾದವರು ಕಿರಿಯ ಮಿತ್ರರು. ಇವರ ಮಿತ್ರವಲಯ ತುಂಬಾ ಚಿಕ್ಕದು. ಆದರೆ ತುಂಬಾ ಬೆಲೆಬಾಳುವಂಥದ್ದು. ಪುತಿನ ಅವರ ಮನೆಮಾತು ತಮಿಳು, ವಿದ್ಯಾಭ್ಯಾಸ ಸಂಸ್ಕೃತ ಮತ್ತು ಇಂಗ್ಲಿಷ್ ನಲ್ಲಿ. ಫ್ರೆಂಚ್ ಭಾಷೆಯನ್ನೂ ಇವರು ಅಭ್ಯಾಸ ಮಾಡುತ್ತಾರೆ. ಆದರೆ ಅವರ ಸಾಹಿತ್ಯ ಸೃಷ್ಟಿ ಆದದ್ದೆಲ್ಲ ಕನ್ನಡ ಭಾಷೆಯಲ್ಲೇ. ಫ್ರೆಂಚ್ ಭಾಷೆಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಭಾಷೆಗಳಲ್ಲಿ ಇವರು ಪ್ರಭುತ್ವ ಸಾಧಿಸಿದ್ದರು ಎನ್ನುವುದು ವಿಶೇಷ.
ಇವರ ಸಾಹಿತ್ಯ ಕೃಷಿಗೆ ಸಂಗೀತದ ಪರಿಸರವೂ ಅಚ್ಚಳಿಯದಂಥ ಕೊಡುಗೆ ನೀಡಿದೆ. ಮೇಲುಕೋಟೆಯ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ನಡೆಯುತ್ತಿದ್ದ ಸಂಗೀತ ವಿದ್ವಾಂಸರ ಸಂಗೀತ ಕಛೇರಿಗಳು, ಅವರು ನಡೆಸುತ್ತಿದ್ದ ಸಂಭಾಷಣೆಗಳು ಇವರ ಸಾಹಿತ್ಯವನ್ನು ಫಲವತ್ತುಗೊಳಿಸಿದೆ. ಮಾಸ್ತಿಯವರ ಮನೆಯಲ್ಲಿ ನಡೆಯುತ್ತಿದ್ದ ಕಾವ್ಯವಾಚನ ಕಾರ್ಯಕ್ರಮಗಳಲ್ಲೂ ಇವರು ಭಾಗವಹಿಸುತ್ತಿದ್ದರು.
ಬಾಲ್ಯದಿಂದ ಕೊನೆಯ ದಿನಗಳವರೆಗೂ ಪುತಿನ ಅವರ ಚೇತನವನ್ನು ಬೆಳೆಸಿರುವ, ಅದಕ್ಕೆ ಮೂಲ ಆಧಾರವಾಗಿರುವ ಮತ್ತೊಂದು ಶಕ್ತಿಯೆಂದರೆ ಅದು ‘ಯದುಗಿರಿ’. ಅಂತೆಯೇ, ಪ್ರಾಚೀನ ಕಾಲದಿಂದ ಋಷಿಸಂತರನ್ನು ಸೃಷ್ಟಿಸಿರುವ, ದೇಶವಿದೇಶಗಳಿಂದ ಭಕ್ತವೃಂದವನ್ನು ನಿರಂತರವಾಗಿ ಆಕರ್ಷಿಸುತ್ತಿರುವ, ಅಲ್ಲಿನ ಅಧಿದೈವವಾದ ಚೆಲುವ ನಾರಾಯಣ. ಅವರಿಗೆ ಯದುಗಿರಿ ಮತ್ತು ಚೆಲುವ ನಾರಾಯಣರು ಬೇರೆಬೇರೆಯಲ್ಲ. ಅಲ್ಲಿಯ ಕೆರೆ-ಕೊಳ-ಬಾವಿಗಳು, ಕಾಡು-ಮೇಡು-ಕಣಿವೆಗಳು, ಗಿಡ-ಮರ-ಬಳ್ಳಿ-ಹೂಗಳು, ಅಲ್ಲಿಯ ಒಂದೊAದು ಮರಳಿನ ಕಣವೂ ಅವರ ದೃಷಿಯಲ್ಲಿ ಚೈತನ್ಯದ ಚಿಲುಮೆಯಾಗಿವೆ. ಗುಡಿಯ ವಿಗ್ರಹವಿರಲಿ, ಅಲ್ಲಿಯ ಶಿಖರ ಪ್ರಾಕಾರಗಳಲ್ಲಿಯೂ ಚೆಲುವನ್ನು ಕಾಣುವ ಸೌಂದಯೋಪಾಸಕರವರು. ಒಂದೊAದು ಹಾಸುಗಲ್ಲೂ ಪವಿತ್ರ. ಅಲ್ಲಿಯ ಸೂರ್ಯೋದಯ-ಸೂರ್ಯಾಸ್ತಗಳಲ್ಲಿ ಅಪೂರ್ವ ಮಾದಕ ಸೌಂದರ್ಯವಿರುವಂತೆ, ಇರುಳಿನಲ್ಲಿಯೂ ಶಾಂತಿಸೌಂದರ್ಯವಿದೆ. ‘ದೇವರು ಇರುವುದು ದಿಟವೊ, ಸಟೆಯೊ ಆದರೆ ಅಚಲಭಕ್ತಿಯು ದಿಟ ಮತ್ತು ಸೋಜಿಗ!’ ಎನ್ನುವುದು ಪುತಿನ ಅವರ ನಿಲುವಾಗಿತ್ತು.
ಕಾವ್ಯ ತತ್ತ್ವ: ಪುತಿನ ಅವರ ಸಾಹಿತ್ಯ ಸಮೀಕ್ಷೆಗೆ ಹೋಗುವ ಮುನ್ನ, ಕನ್ನಡ ಸಾಹಿತ್ಯ ಮೀಮಾಂಸೆಗೆ ಅವರು ನೀಡದ ಕೊಡುಗೆಯನ್ನು ಕುರಿತು ಎರಡು ಮಾತು ಹೇಳುವುದು ಉಚಿತವಾಗಿದೆ. ಅವರು ‘ಭವನಿಮಜ್ಜನ ಚಾತುರ್ಯ’ ಮತ್ತು ‘ಲಘಿಮಾ ಕೌಶಲ’ ಎಂಬ ಪರಿಕಲ್ಪನೆಗಳನ್ನು ತಮ್ಮ ಕಾವ್ಯತತ್ತ÷್ವಗಳನ್ನಾಗಿಸುತ್ತಾರೆ. ಒಂದರ್ಥದಲ್ಲಿ ಇವು ಅವರ ಜೀವನತತ್ವಗಳೂ ಆದವು. “ಕಾವ್ಯದ ಉತ್ಪತ್ತಿಗೆ ಕವಿಗೆ ಹುಟ್ಟಿನಿಂದಲೇ ಪ್ರಾಪ್ತವಾದ ಎರಡು ಗುಣಗಳಿರಬೇಕೆಂದು ತೋರುತ್ತದೆ. ಭವದ ತೀವ್ರ ಸಂವೇದನಾರೂಪವಾದ ಪ್ರಜ್ಞೆ –ಇದನ್ನು ಬೇಕಾದರೆ ‘ಭವನಿಮಜ್ಜನ ಚಾತುರ್ಯ’ ಎಂದು ಕರೆಯಬಹುದು ಮತ್ತು ಆ ನಿಮಗ್ನತೆಯಿಂದ ಪಾರಾಗಿ ನಿಲ್ಲುವ ‘ಲಘಿಮಾ ಕೌಶಲ; ಈ ಎರಡು ಗುಣಗಳು ಕವಿಗಿರದ ಹೊರತು ಕಾವ್ಯ ಸಿದ್ಧಿಸಲಾರದು” ಎಂದು ‘ಕಾವ್ಯಕುತೂಹಲ’ ಲೇಖನದಲ್ಲಿ ಪುತಿನ ಅವರು ಹೇಳುತ್ತಾರೆ. ‘ಭವನಿಮಜ್ಜನ’ಗೊಂಡಾಗ ಮನಸ್ಸಿನಲ್ಲಿ ಮೂಡಿಬರುವ ಭಾವನಾಲಹರಿಗಳಲ್ಲಿ ಮುಳುಗಿ ಹೊಗದೆ, ಆ ನಿಮಗ್ನತೆಯಿಂದ ಪಾರಾಗಿ ಹೊರಗೆ ಬಂದು ಮನಸ್ಸು ನಿಲ್ಲಬೇಕು. ಆಗ ಮೂಡುವ ಆಲೋಚನೆಗಳು ತಮ್ಮ ಅನುಭವಗಳನ್ನು ಕುರಿತು ಒಂದು ಬಗೆಯ ವಿಮರ್ಶಾತ್ಮಕ ದೃಷ್ಟಿಯನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿಯೇ ಪುತಿನ ಅವರ ಕಾವ್ಯದಲ್ಲಿ ಭಾವತೀವ್ರತೆಗಿಂತ ಹೆಚ್ಚಾಗಿ ಚಿಂತನಾಶೀಲ ಪ್ರತಿಭೆ ಎದ್ದು ಕಾಣುತ್ತದೆ. ಪುತಿನ ಅವರನ್ನು ‘ಚಿಂತನಾಶೀಲ ಪ್ರತಿಭೆ’ ಎಂದು ನಾನು ಕರೆಯುವುದು ಈ ಕಾರಣಕ್ಕಾಗಿಯೇ. ಪುತಿನ ಅವರ ಸಾಹಿತ್ಯ ಸೃಷ್ಟಿಯ ಚಿಂತನಾಲಹರಿ ಅವ್ಯಕ್ತದಿಂದ ವ್ಯಕ್ತಕ್ಕೆ, ಅಮೂರ್ತದಿಂದ ಮೂರ್ತಕ್ಕೆ ಹಾಗೆಯೇ ವ್ಯಕ್ತದಿಂದ ಅವ್ಯಕ್ತಕ್ಕೆ, ಮೂರ್ತದಿಂದ ಅಮೂರ್ತಕ್ಕೆ, ನಿರಾಕಾರದಿಂದ ಸಾಕಾರಕ್ಕೆ, ಸಾಕಾರದಿಂದ ನಿರಾಕಾರಕ್ಕೆ ಬದಲಾಗುತ್ತಾ ಪ್ರವಹಿಸುತ್ತದೆ. ಇಂಥಹ ಸಂದರ್ಭದಲ್ಲಿ ಮನಸ್ಸಿನಲ್ಲಿ ಮೂಡಿಬರುವ ವಿಚಿತ್ರಾನುಭೂತಿಗಳನ್ನು ದಾಖಲಿಸಿ, ಹಗುರಾಗಿ, ಮನಸ್ಸನ್ನು ಶುದ್ಧಮಾಡಿಕೊಳ್ಳುವುದು ಅವರ ಸ್ವಭಾವವಾಗಿದೆ.
“ಏಕಧ್ಯಾನದಲ್ಲಿ ನಿಂತು ಬಹಿರ್ಮುಖನಾದಾಗ ಕಂಡ ವಿಷಯವನ್ನು ವರ್ಣಿಸುವುದು, ತಿರುಗಿ ಅಂತರ್ಮುಖನಾಗಿ ಅಂತರಂಗನ್ನೇ ಬಹಿರಂಗಗೊಳಿಸುವುದು, ತಿರುಗಿ ಹೊರಬರುವುದು, ಪುನಃ ಒಳಹೋಗುವುದು” ಈ ನಿರಂತರ ಪ್ರಕ್ರಿಯೆಯಲ್ಲಿ ಪುತಿನ ಅವರ ಸಾಹಿತ್ಯ ಸೃಷ್ಟಿ ಪಾಕಗೊಂಡು ಮೂಡಿಬಂದಿದೆ ಎಂದು ಹೇಳಬಹುದು.
ಸಾಹಿತ್ಯ ಸೃಷ್ಟಿ: ಪುತಿನ ಅವರು ಕನ್ನಡ ಸಾಹಿತ್ಯದಲ್ಲಿ ನಾಟಕ, ಕಾವ್ಯ, ಪ್ರಬಂಧ, ಕಾವ್ಯಮೀಮಾಂಸೆ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿ ಮಾಡಿದ್ದಾರೆ. ಹನ್ನೊಂದು ಕವನಸಂಕಲನಗಳು, ಇಪ್ಪತ್ಮೂರು ಗೀತನಾಟಕಗಳು, ಐದು ಕಥೆ/ಪ್ರಬಂಧ ಸಂಕಲನಗಳು ಹಾಗೂ ಒಂದು ಮಹಾಕಾವ್ಯವನ್ನು ಬರೆದಿರುವ ಪುತಿನ ಅವರು ಸಂಸ್ಕೃತ, ತಮಿಳು ಮತ್ತು ಇಂಗ್ಲಿಷ್‌ನಿಂದ ಹಲವು ಕೃತಿ ಮತ್ತು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಒಟ್ಟು ಸಾಹಿತ್ಯದಲ್ಲಿ ರಾಮಾಯಣ, ಮಹಾಭಾರತ ಮತ್ತು ಭಾಗವತದ ಪ್ರಭಾವವನ್ನು ನಾವು ಗುರುತಿಸಬಹುದು.
ಪುತಿನ ಅವರ ಪ್ರಮುಖ ಕೃತಿಗಳ ಹೆಸರುಗಳನ್ನು ನೋಡುವುದಾದರೆ- ‘ಹಣತೆ’, ‘ಮಾಂದಳಿರು’, ‘ಗಣೇಶ ದರ್ಶನ’, ‘ಮಲೆದೇಗುಲ’, ‘ಹೃದಯ ವಿಹಾರಿ’ ಮೊದಲಾದ ೧೧ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇವರ ಮೊದಲ ಕವನ ಸಂಕಲನ ‘ಹಣತೆ’ ೧೯೩೩ರಲ್ಲಿ ಪ್ರಕಟವಾದರೆ, ಕೊನೆಯ ಕವನಸಂಕಲನ ‘ಹಣತೆಯ ಹಾಡು’ ೧೯೮೮ರಲ್ಲಿ ಪ್ರಕಟವಾಗಿದೆ. ಇವರ ಕಾವ್ಯ ಜೀವನ ‘ಹಣತೆ’ಯಿಂದ ಪ್ರಾರಂಭವಾಗಿ ‘ಹಣತೆಯ ಹಾಡಿ’ನಲ್ಲಿ ಮುಕ್ತಾಯವಾಗಿದೆ. ಇನ್ನು, ‘ಅಹಲ್ಯೆ’, ‘ಗೋಕುಲ ನಿರ್ಗಮನ’, ‘ಶಬರಿ’, ‘ವಿಕಟಕವಿ ವಿಜಯ’, ‘ಸತ್ಯಾಯನ ಹರಿಶ್ಚಂದ್ರ’ ‘ಕುಚೇಲ ಕೃಷ್ಣ’ ಮೊದಲಾದ ೨೩ ಗೀತನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ, ‘ಶ್ರೀಹರಿಚರಿತೆ’ ಎಂಬ ಮಹಾಕಾವ್ಯವನ್ನು, ‘ರಾಮಾಚಾರಿಯ ನೆನಪು’, ‘ಧ್ವಜರಕ್ಷಣೆ’, ‘ರಥಸಪ್ತಮಿ ಮತ್ತು ಇತರ ಕಥೆಗಳು’, ‘ಈಚಲು ಮರದ ಕೆಳಗೆ’, ‘ಧೇನುಕ ಪುರಾಣ’, ‘ಯದುಗಿರಿಯಲ್ಲಿ ಗೆಳೆಯರು’ ಎಂಬ ಕಥೆ ಮತ್ತು ಪ್ರಬಂಧ ಸಂಕಲನಗಳನ್ನು, ‘ಕಾವ್ಯಕುತೂಹಲ’, ‘ರಸಪ್ರಜ್ಞೆ’, ‘ದೀಪಲೇಖೆ’, ‘ರಸಪ್ರಕಾಶ’ ಎಂಬ ವಿಮರ್ಶೆ ಮತ್ತು ಕಾವ್ಯಮೀಮಾಂಸಾ ಕೃತಿಗಳನ್ನು, ‘ಸಿರಿಬಾಯಿ ನುಡಿ’, ‘ಕನ್ನಡ ಭಗವದ್ಗೀತೆ’, ‘ಮಹಾಪ್ರಸ್ಥಾನ’, ‘ಫೌಸ್ಟ್’ (ಪ್ರಥಮ ಭಾಗ), ‘ಬದಲಿಸಿದ ತಲೆಗಳು’, ‘ಸಮಕಾಲೀನ ಭಾರತೀಯ ಸಾಹಿತ್ಯ’ ಎಂಬ ಅನುವಾದ ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಆಧುನಿಕ ಕವಿಗಳಲ್ಲಿ ಗೀತರೂಪಕಗಳನ್ನು ಬರೆದವರಲ್ಲಿ ಪುತಿನ ಅವರೇ ಮೊದಲನೆಯವರು ಮತ್ತು ಅವರದ್ದೇ ಎತ್ತಿದಕೈ. ಇನ್ನೂ ಹಲವರು ಗೀತನಾಟಕಗಳನ್ನು ರಚಿಸಿದ್ದಾರಾದರೂ, ಅರ‍್ಯಾರೂ ಸಂಗೀತಕ್ಕೆ ಪುತಿನ ಅವರಷ್ಟು ಪ್ರಾಮುಖ್ಯತೆಯನ್ನು ನೀಡಿಲ್ಲ. ಅಲ್ಲದೆ, ಅವರ ಆರಾಧ್ಯ ದೈವ ಕೃಷ್ಣನಾದರೂ, ರಾಮಾಯಣದ ಪ್ರಸಂಗಗಳನ್ನು ಆಧಾರವಾಗಿ ಹೊಂದಿದ ಗೀತರೂಪಕಗಳೇ ಜಾಸ್ತಿ. ಇನ್ನು, ಪುತಿನ ಅವರ ಗೀತರೂಪಕಗಳಲ್ಲಿ ವಿಶೇಷವೇನೆಂದರೆ, ‘ಮಾತು ಮತ್ತು ಧಾತು’ ಎರಡನ್ನೂ ಅವರೇ ಸೃಷ್ಟಿ ಮಾಡಿರುವುದರಿಂದ ಒಂದು ಸರಿಯಾದ ಹದದಲ್ಲಿ ಅವು ಮಿಶ್ರಣಗೊಂಡಿರುತ್ತವೆ. “ಒಂದು ಹಾಡನ್ನು ಕಟ್ಟುವ ಮೊದಲು ಸಂಗೀತದ ಮಟ್ಟನ್ನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಅನಂತರ ಅದಕ್ಕೆ ಹೊಂದುವ ಸಾಹಿತ್ಯವನ್ನು ಕಲ್ಪಿಸುತ್ತೇನೆ” ಎನ್ನುತ್ತಾರೆ ಪುತಿನ. ಮುಂದುವರಿದು, “ನಾನು ಸಂಗೀತಶಾಸ್ತ್ರದಲ್ಲಿ ಅನಕ್ಷರಸ್ಥ; ಆದರೆ ಸಂಗೀತ ವಿಷಯದಲ್ಲಿ ಪಾಮರನೆಂದು ಹೇಳಿಕೊಳ್ಳಲಾರೆ. ಮನಸ್ಸು ಒಂದು ಲಹರಿಯಲ್ಲಿದ್ದಾಗ ಸಂಗೀತ ಸ್ವರಗಳು ಅದಕ್ಕೆ ಬಂದು ಮುತ್ತಿಕೊಳ್ಳುತ್ತವೆ. ಮನಸ್ಸು ಗೆಲುವಾಗಿರುವಾಗ ಮಾತ್ರ ಹುಟ್ಟುತ್ತವೆ” ಎಂದು ಹೇಳುತ್ತಾರೆ. ಹೀಗೆ ವಿಶಿಷ್ಟವಾದ ಗೀತನಾಟಕಗಳನ್ನು ರಚಿಸುವುದರ ಮೂಲಕ ಪುತಿನ ಅವರು ಗೀತನಾಟಕ ಕ್ಷೇತ್ರಕ್ಕೆ ಹೊಸದೊಂದು ಆಯಾಮವನ್ನೇ ನೀಡಿ, ಕೀರ್ತಿಗೆ ಭಾಜಕರಾಗಿದ್ದಾರೆ. ‘ಗೋಕುಲ ನಿರ್ಗಮನ’ ನಾಟಕದ ರಂಗಪ್ರಯೋಗ ಅದರ ನಿರ್ದೇಶಕರಾದ ಬಿ.ವಿ. ಕಾರಂತರಿಗೆ ಎಷ್ಟು ಕೀರ್ತಿ ತಂದುಕೊಟ್ಟಿದೆಯೋ ಅಷ್ಟೇ ಕೀರ್ತಿಯನ್ನು ಪುತಿನ ಅವರಿಗೂ ಒದಗಿಸಿದೆ.
ಸುಮಾರು ೬ ದಶಕಗಳನ್ನು ಮೀರಿದ ಅವರ ಕಾವ್ಯಸೃಷ್ಟಿಯದಲ್ಲಿ ಕವನಗಳಿಗೆ ವಿಶೇಷ ಸ್ಥಾನವಿದೆ. ಅವುಗಳಲ್ಲಿ ನನಗೆ ವೈಯಕ್ತಿಕವಾಗಿ ಬಹಳ ಇಷ್ಟವಾದ ಎರಡು ಕವನಗಳನ್ನು ಇಟ್ಟುಕೊಂಡು ಅವರು ಕಾವ್ಯಸೃಷ್ಟಿಯನ್ನು ಕುರಿತು ಒಂದಿಷ್ಟು ಮಾತನಾಡಲು ಪ್ರಯತ್ನಿಸುವೆ.
‘ರಂಗವಲ್ಲಿ’ ಕವನವು ಸಮಕಾಲೀನ ಸಂದರ್ಭದಲ್ಲಿ ನೈಜವಾಗಿ ನಡೆದ ಸಂಗತಿಯನ್ನು ಅವಲಂಬಿಸಿ ರಚಿಸಿರುವುದು ಎಂದು ಕವಿಯೇ ಹೇಳಿದ್ದಾರೆ. ರಂಗವಲ್ಲಿ ಕವನದಲ್ಲಿ ಮಾಗಿಕಾಲದ ಒಂದು ದಿನ ಕವಿಯು ಮಗುವಿನೊಂದಿಗೆ ಬೆಟ್ಟವನ್ನು ಹತ್ತಿ ಗುಡಿಗೆ ಹೋಗುತ್ತಾರೆ. ಹೃದಯದಲ್ಲಿ ಉಚ್ಛಭಾವ ಮೂಡಿ ದೇವರ ಗುಡಿಯನ್ನು ಒಂದು ಸುತ್ತು ಸುತ್ತಿ ಗುಡಿಯನ್ನು ಹೊಕ್ಕುತ್ತಾರೆ. ಆ ದಿನ ಗುಡಿಯಲ್ಲಿ ವೇದಮಂತ್ರಗಳ ಘೋಷವಿಲ್ಲ, ತಮಿಳು ಪದ್ಯಗಳ ಪಠಣ ಮಾಡುವವರಿಲ್ಲ. ಮರ್ಯಾದೆ ಸಲ್ಲಲಿಲ್ಲವೆಂಬ ಜನರ ಸದ್ದು ಗದ್ದಲ ಜಗಳಗಳಿಲ್ಲದೆ ನಿಶ್ಶಬ್ಧವಾದ ಮಬ್ಬುಕತ್ತಲಿನಲ್ಲಿ ಇಡೀ ವಾತಾವರಣ ದಿವ್ಯ ಶಾಂತಿಯನ್ನು ಪಸರಿಸುತ್ತಿದೆ. ಗರ್ಭಗುಡಿಯ ಬಾಗಿಲಿನ ಮುಂದೆ ಕವಿ ಶಾಂತಚಿತ್ತರಾಗಿ ಭಕ್ತಿಭಾವದೊಂದಿಗೆ ನಮ್ರನಾಗಿ ನಿಂತಿದ್ದಾರೆ. ಜೊತೆಯಲ್ಲಿದ್ದ ಮಗು ಅವರ ಬಟ್ಟೆಯನ್ನು ಹಿಡಿದು ಎಳೆಯುತ್ತಾ ಬೆರಳ ತೋರಿತು.
“ಮುದುಕಿಯುಟ್ಟ ಬಟ್ಟೆ ಚಿಂದಿ,
ನೆರೆತ ಹೆರಳು, ಸುಕ್ಕು ಮೋರೆ
ಮುಪ್ಪು ತನ್ನ ಮುದ್ರೆಯೊತ್ತಿ-
ದಂಗವವಳದು;
ಆದರವಳ ಕಂಗಳೆರಡು
ಜರೆಯನಣಕಿಸುತ್ತ ಹೊಳೆದು
ಮುಖಕೆ ಕೊಡುತಲಿದ್ದುವೊಂದು
ಬಗೆಯ ಠೀವಿಯ”.
ಕವಿ ತಿರುಗಿ ಆ ಕಡೆ ನೋಡಿದರೆ ಮುಸುಕು ಬೆಳಕಿನೊಳಗೆ ಅಲ್ಲೊಬ್ಬಳು ಚಿಂದಿ ಬಟ್ಟೆಯನ್ನುಟ್ಟ ಹಣ್ಣು-ಹಣ್ಣು ಮುದುಕಿ ಇರುವುದು ತಿಳಿಯುತ್ತದೆ. ಕೂದಲು ನೆರೆತು ಮುಖ ಸುಕ್ಕುಗಟ್ಟಿ ಮುಪ್ಪು ಆವರಿಸಿದೆ. ಆದರೆ ಕಣ್ಣಿನ ಹೊಳಪು ಮಾತ್ರ ವೃದ್ಧಾಪ್ಯಕ್ಕೆ ಸವಾಲನ್ನು ಹಾಕುವಂತಿದೆ. ಇದನ್ನು ನೋಡಿದ ಕವಿಯ ಮನದಲ್ಲಿ- ಈ ಮುದುಕಿ ನಸುಗತ್ತಲಿನಲ್ಲಿ ಬೆಟ್ಟವನ್ನು ಹೇಗೆ ಹತ್ತಿ ಬಂದಳು? ಚಿಂದಿಯುಟ್ಟ ಬಡವಿ ಮಲೆಯ ನಾರಸಿಂಹನಿಗೆ ಯಾವ ಕಾಣಿಕೆಯನ್ನು ಕೊಡಲು ಬಂದಿದ್ದಾಳೆ? ಇದು ಹೊನ್ನಿನ ಒಲವು, ಇದು ಹೆಣ್ಣೊಬ್ಬಳ ಒಲವು ಎನ್ನುವ ವ್ಯತ್ಯಾಸವನ್ನು ದೇವರು ಮಾಡುವುದಿಲ್ಲವೆಂಬ ಅರಿವು ಮುದುಕಿಗೆ ಇತ್ತೇ? ಈ ಪ್ರಶ್ನೆಗಳು ಮೂಡುತ್ತವೆ.
ಆ ಮುದುಕಿ ತನ್ನ ಚಿಂದಿ ಬಟ್ಟೆಯ ಸೆರಗಿನಿಂದಲೇ ನೆಲವನ್ನೆಲ್ಲಾ ಗುಡಿಸಿ, ಮಡಿಲೊಳಗೆ ಇಟ್ಟುಕೊಂಡು ಮುಚ್ಚಿ ತಂದಿದ್ದ ರಂಗೋಲಿಯಿಂದ ಹಸೆಯನ್ನು ಬರೆಯುತ್ತಾಳೆ. ನೂರು ದಳಗಳ ಕಮಲ (ಪದ್ಮ), ಅದರ ಸುತ್ತ ಹೆಣೆದಿರುವ ಬಳ್ಳಿಯ ಎಲೆಗಳ ಮೇಲೆ ಆಕರ್ಷಿಸುವ ಹಕ್ಕಿಗಳು. ಹೀಗೆ ತನ್ನನ್ನು ತಾನು ಮರೆತು ಹಸೆಯನ್ನು ಬರೆಯುವಲ್ಲಿ ಮುದುಕಿ ಮಗ್ನಳಾಗಿದ್ದಾಳೆ. ಒಂದು ಡೊಂಕು ಗೆರೆಯನ್ನು ಸಹ ಎಳೆಯದ ಅವಳ ಕಲೆಯ ಕೈಚಳಕಕ್ಕೆ ಕವಿ ಬೆರಗಾಗುತ್ತಾರೆ, ಮಂತ್ರಮುಗ್ಧರಾಗುತ್ತಾರೆ. ತೀರಾ ಬಡವಿಯಾದ ಈ ಹಣ್ಣು ಮುದುಕಿಗೆ ಮಲೆಯ ನಾರಸಿಂಹನನ್ನು ಬಿಟ್ಟರೆ ಬೇರೆ ಯಾರೂ ಇಲ್ಲವೇನೋ ಎನಿಸುತ್ತದೆ. ಅವನು ಮೆಚ್ಚಲೆಂದೇ ತನ್ನ ವಯೋಸಹಜ ಮುಪ್ಪಿನ ಕಷ್ಟ-ಸುಖಗಳನ್ನು ಮೂಲೆಗೊತ್ತಿ ಬೆಟ್ಟವನ್ನೇರಿ ಬಂದು ಹಸೆಯನ್ನು ಬರೆಯುತ್ತಿರುವ ಮುದುಕಿಯ ಭಕ್ತಿ ಎಂಥದ್ದು? ಎಂಬ ಪ್ರಶ್ನೆ ಮೂಡುತ್ತದೆ. ಮುಂದೆ, ವಿಗ್ರಹದ ತೆರೆಯನ್ನು ತೆಗೆಸಿ, ಹಣ್ಣು-ಕಾಯಿಯ ಪೂಜೆಯನ್ನೂ ಮಾಡಿಸುವ ಕವಿ, ಆ ಸೊಡರ ಬೆಳಕಿನಲ್ಲಿ ದೇವರ ದರ್ಶನವನ್ನೂ ಮಾಡುತ್ತಾರೆ. ಆದರೆ, ಆ ಮಗುವಿನ ಗಮನ ಸಂಪೂರ್ಣವಾಗಿ ರಂಗವಲ್ಲಿಯತ್ತಲೇ ಇರುತ್ತದೆ. ದೇವರಿಗೆ ಕೈ ಮುಗಿಯದೆ ರಂಗವಲ್ಲಿಯನ್ನೇ ನೋಡುತ್ತಾ ನಿಂತ ಮಗುವನ್ನು ಈ ಕಡೆ ಸೆಳೆಯಲು ದೇವರ ಹೊನ್ನು, ರನ್ನದ ಒಡವೆಗಳನ್ನು, ಸರಿಗೆ ಪಂಚೆಯನ್ನು, ಪದಕದ ಕೊರಳ ಹಾರವನ್ನು ಕವಿ ತೋರಿಸುತ್ತಾರೆ. ಮಲೆಯ ದೇವರು ಅಷ್ಟು ಚೆಲುವಾಗಿದ್ದರೂ ಸಹ ಮಗುವಿಗೆ ದೇವರಿಗಿಂತ ಮುದುಕಿ ಬರೆಯುತ್ತಿರುವ ಹಸೆಯೇ ಸೋಜಿಗವಾಗಿ ಕಾಣುತ್ತದೆ.
“ಅದರ ನಡತೆ ಹೊಳೆಸಿತಂದು
ಮನಕದಂದು ಹೊಸದು ನಿಜವ;
ದೇವನಲ್ಲ - ಬರಿಯ ಬೊಂಬೆ!
ಹಸೆಯೆ ಸೋಜಿಗ!
ಭಕ್ತಿಮೂರ್ತಿ ಮುದುಕಿಯೊಮ್ಮೆ
ದೇವನೊಮ್ಮೆ ನೋಡಿತೆಂದೆ:
ದೇವ ಬೊಂಬೆ, ಪೂಜೆ ಆಟ
ಭಕ್ತಿ ಸೋಜಿಗ”.
ಆಗ ಕವಿಯ ಮನಸ್ಸಿನಲ್ಲಿ ಹೊಸದೊಂದು ಹೊಳಹು ಮೂಡುತ್ತದೆ. ಮಗುವಿನ ನಡತೆಯನ್ನು, ಹೊಸತನವನ್ನು ನೋಡಿ ದೇವರು ಬರಿಯ ಬೊಂಬೆಯೆಂದೂ, ಪೂಜೆಯು ಆಟವೆಂದೂ, ಭಕ್ತಿಯೇ ನಿಜವಾದ ಸೋಜಿಗವೆಂದೂ ಅನ್ನಿಸುತ್ತದೆ. ದೇವರ ಇರವು ದಿಟವೋ, ಸೆಟವೋ ಆದರೆ ಮನುಷ್ಯರ ಮನಸ್ಸಿನೊಳಗಿರುವ ನೋವನ್ನು, ಮಾಡಿರುವ ಪಾಪದ, ಪುಣ್ಯದ ಗುಟ್ಟುಗಳನ್ನು ತಿಳಿದು ಸಂತೈಸುವ ಆತ್ಮಸಾಕ್ಷಿಯೆಂಬ ದೇವನೊಬ್ಬನಿದ್ದಾನೆ ಎನ್ನುವ ದೃಢಭಕ್ತಿಯೇ ನಿಜ ಸೋಜಿಗ. ಮಲೆಯ ದೇವರು ಮೆಚ್ಚಲೆಂದು ಗಿರಿಯ ಗುಡಿಯೊಳಗೆ ಹಸೆಯನ್ನು ಬರೆಯುವ ಮದುಕಿ ಅವನನ್ನು ಒಲಿಸುವುದೇ ಜೀವನದ ಒಂದು ಗುರಿಯಾಗಿಸಿಕೊಂಡಿದ್ದಾಳೆ. ಆ ದೇವರು ಒಲಿಯುವ ತನಕ ಇಹವನ್ನು ತೊರೆಯಳೇನೋ. ಆದರೆ ಅವಳ ನೆನಪು ಮಾತ್ರ ಮನಸ್ಸಿಗೆ ಸದಾ ತಂಪನ್ನು ನೀಡುವುದು ಎಂದು ಕವಿತೆಯನ್ನು ಮುಕ್ತಾಯಗೊಳಿಸುತ್ತಾರೆ.
ರಂಗವಲ್ಲಿ ಕವನದಲ್ಲಿ ಕವಿ ದೇವರು, ಮಗು ಮತ್ತು ಮುದುಕಿಯನ್ನು ಪ್ರತಿಮೆಗಳನ್ನಾಗಿ ಬಳಸಿದ್ದಾರೆ. ಮಕ್ಕಳ ಮನಸ್ಸು ನಿಷ್ಕಲ್ಮಷವಾಗಿದ್ದು ಲೋಕದ ಬೇಕು-ಬೇಡ, ಒಳಿತು-ಕೆಡುಕುಗಳ ಪರಿವೆಯೇ ಇರುವುದಿಲ್ಲ. ವಯಸ್ಸಾದಂತೆಲ್ಲಾ ವೃದ್ಧರು ಮಕ್ಕಳಂತಾಗುತ್ತಾರೆ. ‘ರಂಗವಲ್ಲಿ’ ಕವನದಲ್ಲಿ ಮೂರು ವಿಭಿನ್ನ ರೀತಿಯಲ್ಲಿ ಭಕ್ತಿಯನ್ನು ಗ್ರಹಿಸಬಹುದಾಗಿದೆ. ಮೊದಲನೆಯದು ಭಕ್ತಿಯ ಮಗುವಿನ ಅಭಿವ್ಯಕ್ತಿಯಾದರೆ, ಎರಡನೆಯದು ಮುದುಕಿಯ ಅಭಿವ್ಯಕ್ತಿಯಾಗಿದೆ. ಇನ್ನು, ಕವಿ ಭಕ್ತಿಯನ್ನು ಅಭಿವ್ಯಕ್ತಿಸುವ ರೀತಿ ಮೂರನೆಯದು. ಮಕ್ಕಳು ಮತ್ತು ವಯಸ್ಸಾದ ವೃದ್ಧರು ದೇವರನ್ನು ನೋಡುವ ರೀತಿಯನ್ನು ಈ ಕವನ ಬಣ್ಣಿಸುತ್ತದೆ. ತಾವು ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿ, ಸೇವೆಗಳಲ್ಲಿ ದೇವರನ್ನು ಕಾಣಬಹುದಾಗಿದೆ. ಪುತಿನ ಅವರು ಭಕ್ತಿಯನ್ನು ಅಭಿವ್ಯಕ್ತಿಗೊಳಸಲು ಯಾಕೆ ಮಗು ಮತ್ತು ಮುದುಕಿಯನ್ನೇ ಬಳಸಿಕೊಂಡಿದ್ದಾರೆ? ಆ ಮುದುಕಿ ಶ್ರದ್ಧೆಯಿಂದ ತಾನು ಮಾಡುವ ಸೇವೆಯಲ್ಲೇ ದೇವರನ್ನು ಕಾಣುತ್ತಾಳೆ. ಶ್ರದ್ಧೆಯೇ ಭಕ್ತಿಯಲ್ಲವೆ? ಮಗುವು ಕೂಡ ಶ್ರದ್ಧೆಯಿಂದ, ಕುತೂಹಲದಿಂದ ಮುದುಕಿ ಬರೆಯುತ್ತಿರುವ ರಂಗವಲ್ಲಿಯನ್ನು ನೋಡುತ್ತಿರುವುದೂ ಭಕ್ತಿಯಲ್ಲವೆ?
ದೇವರ ಇರುವಿಕೆಯನ್ನು ಬಲವಾಗಿ ನಂಬಿದ್ದ ಆ ವೃದ್ಧೆಯು ತನ್ನ ವಯಸ್ಸನ್ನೂ ಲೆಕ್ಕಿಸದೆ, ಶ್ರದ್ಧೆ ಮತ್ತು ಉತ್ಸಾಹಗಳಿಂದ ರಂಗವಲ್ಲಿಯನ್ನು ಬಿಡಿಸುತ್ತಿರುವ ಚಿತ್ರಣವನ್ನು ನೋಡಿದ ಕವಿಮನಸ್ಸು ಭಕ್ತಿಗೆ ಯಾವುದೇ ರೀತಿಯ ಸ್ಥಾನಮಾನಗಳು ಅಡ್ಡಿ ಬರುವುದಿಲ್ಲ, ಮುಖ್ಯವೂ ಅಲ್ಲವೆಂದೂ, ಇಲ್ಲಿ ಸಾಧನೆಯೇ ಮುಖ್ಯವೆಂದೂ ಗ್ರಹಿಸುತ್ತದೆ.
“ಎಲ್ಲರೆದೆಯ ಹೊಗುವ ದೇವ
ಹೊನ್ನು ಹೆಣ್ಣೊಳೆಳೆಯನೊಲವ”
“ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗುವವರೆಲ್ಲ ಫಲಪುಷ್ಪಗಳನ್ನು ಒಯ್ಯುವುದು ಸಹಜ. ಆದರೆ ಇಲ್ಲಿ ವಯೋವೃದ್ಧೆಯು ಮಣ್ಣಿನ ರಂಗೋಲಿಯನ್ನು ಬಿಟ್ಟರೆ ಬೇರೇನನ್ನು ಕೂಡ ತೆಗೆದುಕೊಂಡು ಹೋಗದೆ ದೇವರನ್ನು ಮೆಚ್ಚಿಸುತ್ತಾಳೆ. ಇದು ದೇವರ ಆರಾಧನೆಗೆ ಬಾಹ್ಯ ವಸ್ತುಗಳಿಗಿಂತ ಅಂತರಂಗದಲ್ಲಿ ಭಕ್ತಿ ಇರಬೇಕು ಎನ್ನುವುದನ್ನು ತೋರಿಸುತ್ತದೆ”.
ಆಸ್ತಿಕರು ಭಕ್ತಿಮಾರ್ಗದಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂದು ನಂಬುತ್ತಾರೆ. ಆದರೆ ನಾಸ್ತಿಕರು ದೇವರ ಇರವನ್ನೇ ಪ್ರಶ್ನಿಸುತ್ತಾರಲ್ಲದೆ ಆಸ್ತಿಕರು ಮಾಡುವ ಭಕ್ತಿ, ಭಜನೆ, ಪೂಜೆ, ಧ್ಯಾನ ಮೊದಲಾದವುಗಳನ್ನು ನಿಷ್ಪ್ರಯೋಜಕ ಎಂದು ವಿರೋಧಿಸುತ್ತಾರೆ. ಎಂ. ಬಸವಣ್ಣ ಎಂಬ ಮನೋವಿಜ್ಞಾನಿಯ ಮಾತನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಅವರು ಹೇಳ್ತಾರೆ- “ಕೆಲವರು ದೇವರು ಇರುವನೆನ್ನುತ್ತಾರೆ; ಉಳಿದವರು ಇಲ್ಲವೆನ್ನುತ್ತಾರೆ. ಇದು ಅನಾದಿ ಕಾಲದಿಂದಲೂ ಉಳಿದುಬಂದಿರುವ ಬಿಡಿಸಲಾಗದ ಜಟಿಲ ಪ್ರಶ್ನೆ. ಆದರೂ ಬಹಳಷ್ಟು ಜನ ದೇವರನ್ನು ನಂಬುತ್ತಾರೆ, ಪೂಜಿಸುತ್ತಾರೆ. ಹಾಗೆ ಮಾಡುವುದರಿಂದ ದೇವರು ಅವರಿಗೆ ವಾಸ್ತವವಾಗಿ ಏನಾದರೂ ಕೊಡುವನೋ ಇಲ್ಲವೋ ಹೇಳುವುದು ಕಷ್ಟ. ಆದರೆ ಇಷ್ಟು ಮಾತ್ರ ನಿಜ. ಭಕ್ತಿಯಿಂದ ಧ್ಯಾನಮಾಡುವಾಗ, ಭಜನೆ ಮಾಡುವಾಗ, ದೇವರ ಪೂಜೆ ಮಾಡುವಾಗ, ಕೆಟ್ಟ ಆಲೋಚನೆ ಮಾಡುವುದು ಕಷ್ಟ. ಅಷ್ಟು ಕಾಲವಾದರೂ ಮನಸ್ಸು ನಿರ್ಮಲವಾಗಿರುತ್ತದೆ, ಅಲ್ಲಿರುವ ಅನವಶ್ಯಕ ವಿಷಯಗಳು ಹೊರದೂಡಲ್ಪಡುತ್ತವೆ. ಕೆಟ್ಟ ಅನಿಸಿಕೆಗಳು ದೂರವಾಗುತ್ತವೆ. ದುಗುಡ ಕಡಮೆಯಾಗಿ ಮನಸ್ಸು ಶಾಂತವಾಗುತ್ತದೆ. ಏಕಾಗ್ರತೆ ಸಾಧ್ಯವಾಗುತ್ತದೆ. ಆಗ ಹೆಚ್ಚಿಗೆ ಮನಃಶಕ್ತಿ ಬಿಡುಗಡೆಯಾಗುತ್ತದೆ, ಮನಸ್ಸಿನ ಸ್ವಾಸ್ಥ್ಯ ಹೆಚ್ಚುತ್ತದೆ. ಇಂಥ ಸಮಯದಲ್ಲಿ ಏನಾದರೂ ಒಳ್ಳೆಯದನ್ನು ಆಲೋಚಿಸಬಹುದು, ರಚನಾತ್ಮಕವಾದುದನ್ನು ಮಾಡಬಹುದು; ಜೀವನದಲ್ಲಿ ಉತ್ಕೃಷ್ಟವಾದುದನ್ನೇನಾದರೂ ಸಾಧಿಸಬಹುದು. ಇದೇನು ಕಡಮೆ ಪ್ರಯೋಜನವೆ?” ಇಲ್ಲಿ ಇವರು ವಿವರಿಸುತ್ತಿರುವುದು ಭಕ್ತಿಯ ಪ್ರಯೋಜನಗಳನ್ನೇ. ಆದರೆ, ಈ ಪ್ರಯೋಜನವು ಯಾರನ್ನು ಕುರಿತು ಸ್ತುತಿಸುತ್ತೇವೆಯೋ ಅಂಥವರಿಂದ ದೊರೆಯುವಂತಹದ್ದಲ್ಲ. ಸ್ತುತಿಯಿಂದಲೇ ದೊರೆಯುವಂತಹದ್ದು. ಹೀಗೆಂದ ಮಾತ್ರಕ್ಕೆ ಸ್ತುತ್ಯವು ಮುಖ್ಯವಲ್ಲ ಎಂದಾಗುವುದಿಲ್ಲ. ಯಾರನ್ನು ಕುರಿತು ಸ್ತುತಿಸುತ್ತೇವೆಯೋ ಅಂಥವರ ಗುಣ-ಲಕ್ಷಣಗಳು ಸ್ತುತಿಯನ್ನೂ, ಅದರ ಪರಿಣಾಮಗಳನ್ನೂ ಪ್ರಭಾವಿಸುತ್ತವೆ. ಇಂತಹ ಸಂಕೀರ್ಣ ಪ್ರಕ್ರಿಯೆಯ ಸ್ವ-ಅನುಭವವೇ ಭಕ್ತಿ.
ಈಗ ‘ಪತಿತಪಾವನ’ ಎಂಬ ಇವರ ಇನ್ನೊಂದು ಕವನವನ್ನು ಅವಲೋಕಿಸೋಣ. ಗುಡಿಯೊಂದರಲ್ಲಿ ವಿಶೇಷ ಉತ್ಸವ ನಡೆಯುತ್ತಿದೆ. ಸ್ವರ್ಗದ ಬಾಗಿಲನ್ನು ತೆರೆದು ಜನ್ಮ ರಹಿತವಾದ ಗತಿಯನ್ನು ದೇವರು ಕೊಡುವನೆಂದು ನಂಬಿ ಜನರೆಲ್ಲಾ ಸೇರಿದ್ದಾರೆ. ಹೆಣ್ಣು ಮಕ್ಕಳು ಒಳ್ಳೆಯ ಉಡುಗೆ-ತೊಡುಗೆ ತೊಟ್ಟು, ಹಣೆಗೆ ಕೆಂಪು ತಿಲಕವಿಟ್ಟು, ನೀರೆರೆದುಕೊಂಡ ಕೂದಲನ್ನು ಇಳಿಯಬಿಟ್ಟು, ಸಡಗರದಿಂದ, ಉಚ್ಛಭಾವದಿಂದ, ಮಂದಹಾಸದೊಂದಿಗೆ ಗುಡಿಗೆ ನಡೆಯುತ್ತಿದ್ದಾರೆ. ಆದರೆ ಒಬ್ಬ ಹೆಣ್ಣು ಮಗಳ ಮೊಗದ ಮೇಲೆ ಮಾತ್ರ ಆ ಐದೆತನದ ಸಿರಿಯಿಲ್ಲ. ಲೋಕದ ಕಣ್ಣಲ್ಲಿ ಆಕೆ ಒಬ್ಬಳು ‘ಪತಿತೆ’. ಎಳೆತನದ ಹೆಣ್ಣುಮಗಳ ಕಣ್ಣೀರು ಹೊನಲಂತೆ ಹರಿದು, ಅವಳ ಚೆಲುವನ್ನೇ ಕೊಚ್ಚಿ, ಕೊರೆದ ಸುಕ್ಕಿನ ಮುಪ್ಪು ತೋರುವಂತೆ ಮಾಡುತ್ತದೆ. ಆಕೆಗೆ ತನ್ನ ಸಂಕಟದ ಹೊರೆಯನ್ನು ತಾಳಲಾಗುತ್ತಿಲ್ಲವೋ, ಅಥವಾ ವಿಷದ ಗಳಿಗೆಯೊಂದರಲ್ಲಿ ಆಕೆ ಪಾಪವನ್ನೇನಾದರು ಮಾಡಿದಳೋ, ಒಟ್ಟಿನಲ್ಲಿ ದೇವರ ಮುಂದೆ ನಿಲ್ಲುವುದಕ್ಕೆ ತನಗೇ ಹೆಚ್ಚು ಹಕ್ಕಿದೆ ಎಂಬಂತೆ ತರುಣಿ ಮುಂದೆ ನಡೆದು ಗುಡಿಗೆ ಬರುತ್ತಾಳೆ. ಅಂದು ದೇವರ ಗುಡಿಯಲ್ಲಿ ವೇದಘೋಷ, ನಾಮಕೀರ್ತನೆ! ಆದರೆ ಇದ್ದಕ್ಕಿದಂತೆ ವೇದ ಘೋಷ ನಿಂತು ಹೋಗುತ್ತದೆ. ಬರಿಯ ನಾಮಗಳಿಂದಲೇ ತನ್ನ ಇಡೀ ಮೈಯನ್ನು ಮುಚ್ಚಿಕೊಂಡು, ಕೈ ಬೆರಳಿಗೆ ಹುಲ್ಲನ್ನು ಇಟ್ಟವನೊಬ್ಬ ಕೋಪದಿಂದ ಕನಲಿ ಕೆಂಡವಾಗಿದ್ದಾನೆ.
“ಪತಿತಳಿರುವ ಗುಡಿಯೊಳಿಂದು
ತೀರ್ಥವನ್ನು ತೆಗೆವರುಂಟೆ?
ಅವಳ ನೆಳಲ ಸೋಂಕಿನಿಂದ
ಅಶುಚಿ ದೇಗುಲ!”
“ಅವಳ ಮೊದಲು ಹೊರಗೆ ದೂಡಿ;
ಮಂತ್ರ ಜಪಿಸಿ ನೀರ ಚೆಲ್ಲಿ,
ಇಲ್ಲದಿರಲು ನಿಲ್ಲೆವಿಲ್ಲಿ!”
ಎಂದು ಕೂಗದು”.
ಈ ಪತಿತೆಯಿರುವ ಗುಡಿಯಲ್ಲಿ ತೀರ್ಥವನ್ನು ಯಾರಾದರೂ ತೆಗೆದುಕೊಳ್ಳುತ್ತಾರೆಯೇ? ಇವಳ ನೆರಳು ಸೋಕಿದರೂ ಈ ದೇಗುಲ ಅಶುದ್ಧ, ಹೊರತಳ್ಳಿ ಇಲ್ಲದಿದ್ದರೆ ನಾವಿಲ್ಲಿ ಇರುವುದಿಲ್ಲ ಎಂದು ಕಿರುಚುತ್ತಿದ್ದಾನೆ. ಎಲ್ಲಾ ಜನರ ದೃಷ್ಟಿ ಆ ಹೆಣ್ಣುಮಗಳ ಕಡೆಗೆ ತಿರುಗುತ್ತದೆ. ‘ಅಯ್ಯೋ, ಕೂಸನ್ನು ಹಡೆದು ಬಿಸಾಕಿರಬಹುದೇನೋ?’, ‘ಏಕೆ ಪತಿತೆ?’, ‘ಏನೋ ಕಾಣೆ’, ‘ಅಯ್ಯೋ ಪಾಪ’ ಮುಂತಾಗಿ ವಿವಿಧ ಪ್ರತಿಕ್ರಿಯೆಗಳನ್ನು ಅಲ್ಲಿದ್ದವರು ನೀಡುತ್ತಿರುವಾಗ ಆಕೆಯನ್ನು ಹೊರದಬ್ಬಲಾಗುತ್ತದೆ. ಅವಳ ಮನಸ್ಸಿನ ದುಗುಡ ಯಾರಿಗಾದರೂ ತಿಳಿಯಿತೇ? ಎಷ್ಟೋ ತಡೆದು, ಹೆಣಗಿ, ನಿಸರ್ಗಕ್ಕೆ ಸೋತು ಹೋದ ಅವಳ ಸ್ಥಿತಿಯನ್ನು ಯಾರಾದರೂ ಅರ್ಥಮಾಡಿಕೊಂಡರೇ?
“ನಾವು ಶುದ್ಧರೆಂದು ಇಲ್ಲಿ
ಎದೆಯ ಮುಟ್ಟಿ ನುಡಿವರಾರು?
ಬಡವೆಯೆಂದು ಹಳಿವಿರೇನೊ
ನಿಮ್ಮ ತಂಗಿಯ?
ಸಭೆಯೊಳಿಂತು ಹೆಣ್ಣುತನದ
ಮಾನ ಮುರಿಯಲೆಳಸಲುಂಟೆ?
ಬಿಡಿರಿ-” ಎನ್ನುವವನ ನುಡಿಯು
ಗಾಳಿಯೊಯ್ದಿತು”.
ತಮ್ಮ-ತಮ್ಮ ನೂರು ದೋಷಗಳನ್ನು ಸಹಿಸಿ ಮುಕ್ತಿ ಕೊಡುವ ದೇವನ ಎದುರಲ್ಲಿ ತಮ್ಮ ತಂಗಿಯ ಒಂದು ಕುಂದನ್ನು ಸಹಿಸಲಾರದ ಜನ! ‘ತಾವು ಶುದ್ಧವೆಂದು ಎದೆಯನ್ನು ಮುಟ್ಟಿ ಯಾರಾದರೂ ನುಡಿಯಬಲ್ಲವರು ಇಲ್ಲಿದ್ದಾರೆಯೇ?’ ಎಂದು ಕವಿ ಪ್ರಶ್ನಿಸುತ್ತಾರೆ. ಇಲ್ಲಿ ಯಾರು ಶುದ್ಧರು, ಯಾರು ಪವಿತ್ರರು ಎಂದು ಪ್ರಶ್ನಿಸುವ ಮೊದಲು ತಮ್ಮ ತಮ್ಮ ಎದೆಯನ್ನು ಮುಟ್ಟಿ ತಮಗೆ ತಾವು ಈ ಪ್ರಶ್ನೆಗಳನ್ನು ಕೇಳಿಕೊಂಡರೆ ವಾಸ್ತವ ತಿಳಿಯುತ್ತದೆ ಎಂದು ಕವಿ ನುಡಿಯುತ್ತಾರೆ. ವಿಷದ ಗಳಿಗೆಯಲ್ಲಿ ನಡೆದ ಅಹಿತಕರ ಘಟನೆಯ ನೋವನ್ನು, ದುಃಖವನ್ನು ದೇವರ ಮುಂದೆ ತೋಡಿಕೊಳ್ಳಲು ತನಗೆ ಸಂಪೂರ್ಣ ಹಕ್ಕಿದೆ ಎಂದು ತಿಳಿದು ಗುಡಿಗೆ ಬಂದಿರುತ್ತಾಳೆ. ಆದರೆ ಅವಳ ಕಷ್ಟವೇನು? ಯಾಕೆ ಬಂದಿದ್ದಾಳೆ? ಎಂದು ತಿಳಿಯದೆ, ಕೇಳದೆ ಅಧಿಕಾರವನ್ನು ಚಲಾಯಿಸುವ ರೀತಿಯಲ್ಲಿ ಆಕೆಯನ್ನು ದೇವರ ಗುಡಿಯಿಂದ ಹೋರದಬ್ಬುತ್ತಾರೆ.
ಹಾಗಾದರೆ ದುರ್ಬಲ ವರ್ಗದ ಜನರಿಗೆ, ನಿರ್ಗತಿಕ ಜನರಿಗೆ, ಅಸಹಾಯಕರಿಗೆ ದೇವರಗುಡಿಗೆ ಪ್ರವೇಶವಿಲ್ಲವೆ? ದೇವರಗುಡಿಯಿಂದ ದೂರ ಮಾಡುವುದನ್ನು ಏನೆಂದು ಹೇಳಬೇಕು? ಎಲ್ಲರೂ ನಂಬಿರುವ ದೇವರ ಎದುರಿನಲ್ಲೇ ಇಂತಹ ಘಟನೆ ನಡೆದರೂ ಸಹ ಅಲ್ಲಿ ಸೇರಿರುವ ಜನರು ಯಾರೂ ಮಾತನಾಡುವುದಿಲ್ಲ. ನಮ್ಮ ಜನರ ಮನಸ್ಥಿತಿ ಎಲ್ಲಿಗೆ ಬಂದು ನಿಂತಿದೆ? ಮತ್ತೊಬ್ಬರ ಬದುಕಿನಲ್ಲಿ ಹೀಗೆ ಪ್ರವೇಶವನ್ನು ಮಾಡುವ, ನಿಂದಿಸುವ, ಅವಮಾನಿಸುವ, ಹೊರಹಾಕುವ ಹಕ್ಕನ್ನು ಜನರಿಗೆ ಯಾರು ಕೊಟ್ಟರು? ದೇವರು, ದೇವರಗುಡಿ ಯಾರೋ ಕೆಲವರ ಸ್ವತ್ತಾಗಿವೆಯೇ? ಹೀಗೆ ಹಲವಾರು ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
“ಜಾತಿಭೇದವನ್ನು ಒಂದು ವಿಧದಿಂದ ತೆಗೆದುಹಾಕಿಬಿಡಬಹುದು. ಆ ಮಾರ್ಗವೇ ಭಕ್ತಿ. ಭಕ್ತರಿಗೆ ಜಾತಿ ಎಂಬುದೇ ಇಲ್ಲ. ಭಕ್ತಿದೊರೆಯಿತು ಎಂದರೆ, ದೇಹ, ಮನಸ್ಸು, ಆತ್ಮ, ಎಲ್ಲಾ ಶುದ್ಧವಾಗಿಬಿಡುತ್ತದೆ. ಗೌರಾಂಗ ಮತ್ತು ನಿತಾಯಿ ಆಚಂಡಾಲಾದಿಯಾಗಿ ಎಲ್ಲರೂ ಭಗವನ್ನಾಮವನ್ನು ಕೊಡಲಾರಂಭಿಸಿದರು. ಹೃದಯದಲ್ಲಿ ಭಕ್ತಿ ಇಲ್ಲ ಎಂದರೆ ಬ್ರಾಹ್ಮಣ ಬ್ರಾಹ್ಮಣನಲ್ಲ. ಹೃದಯದಲ್ಲಿ ಅದು ಇತ್ತು ಎಂದರೆ, ಚಂಡಾಲ ಚಂಡಾಲನಲ್ಲ. ಭಕ್ತಿಯೊಂದಿತ್ತು ಎಂದರೆ ಅಸ್ಪೃಶ್ಯ ಜಾತಿಯೂ ಶುದ್ಧ ಪವಿತ್ರ ಆಗಿ ಬಿಡುತ್ತದೆ”. ಭಕ್ತನ ಭಕ್ತಿಗೆ ಯಾವುದೇ ರೀತಿಯ ಜಾತಿಭೇದವಿಲ್ಲ. ಯಾರು ಬೇಕಾದರೂ ಶುದ್ಧರಾಗಬಹುದು, ಪವಿತ್ರರಾಗಬಹುದು ಎಂಬ ಮಾತನ್ನು ರಾಮಕೃಷ್ಣ ಪರಮಹಂಸರು ಹೇಳುತ್ತಾರೆ. ಸಮಾಜದಲ್ಲಿ ಜ್ವಲಂತವಾಗಿರುವಂತಹ ಜಾತಿ ಭೇದವನ್ನು ನಿರ್ಮೂಲನೆ ಮಾಡಲು ಇರುವುದು ಒಂದೇ ಒಂದು ಮಾರ್ಗ, ಅದು ಕೇವಲ ‘ಭಕ್ತಿ ಮಾರ್ಗ’. ಯಾವುದೇ ರೀತಿಯ ಜಾತಿ ಎಂಬುದು ಭಕ್ತರಿಗೆ ಇಲ್ಲ. ಭಕ್ತನ ಹೃದಯದಲ್ಲಿ ಭಕ್ತಿ ಚಿಗುರೊಡೆದರೆ ಕೆಳಜಾತಿಯವರು ಶುದ್ಧರಾಗಿಬಿಡಬಹುದು.
ರಾಮಕೃಷ್ಣ ಪರಮಹಂಸರ ಮೇಲಿನ ನಿರೂಪಣೆಯಲ್ಲಿ ಒಂದು ಸಮಸ್ಯೆ ಇದೆ. ಜಾತಿ ಎನ್ನುವ ಸಾಮಾಜಿಕ ವಾಸ್ತವವನ್ನು ಅವರು ಭಕ್ತಿ ಎನ್ನುವ ಆಧ್ಯಾತ್ಮಿಕ ಅಸ್ತ್ರದಿಂದ ನಿರ್ಮೂಲನೆಗೊಳಿಸಲು ಬಯಸುತ್ತಾರೆ. ಹೀಗೆ ಬಯಸುವುದು ‘ಎತ್ತಿಗೆ ಜ್ವರ ಬಂದರೆ ಕೋಣನಿಗೆ ಬರೆಯೆಳಬೇಕೆಂದು’ ಬಯಸಿದಂತೆಯೇ. ಭಕ್ತಿ ಇರಲಿ ಇಲ್ಲದಿರಲಿ, ಅಸ್ಪೃಶ್ಯತೆಯ ಆಚರಣೆ ಹಾಗೂ ಜಾತಿ ತಾರತಮ್ಯ ನಿಲ್ಲಬೇಕಾದದ್ದು ಸಾಮಾಜಿಕ ಸಮಾನತೆ ಎಂಬ ತತ್ವದ ಆಶಯವಾಗಿದೆ. ಪರಮಹಂಸರ ನಿರೂಪಣೆಯಲ್ಲಿರುವ ಸಮಸ್ಯೆ ಅವರಿಗೇ ನಿರ್ದಿಷ್ಟವಾಗಿರುವುದಲ್ಲ. ಭಾರತೀಯ ಭಕ್ತಿ ಪರಂಪರೆಯಲ್ಲಿ ಸಮಾನತೆಯು ನಿರೂಪಿತಗೊಂಡಿದ್ದೇ ಭಕ್ತಿ ಎನ್ನುವ ಅಳೆತಗೋಲಿನ ಆಧಾರದಲ್ಲಿ. ಈ ಪರಂಪರೆಯಲ್ಲಿ ಭಕ್ತಿಯಿಂದಷ್ಟೇ ಸಮಾನತೆಯ ನೆಲೆಗಟ್ಟು ಸಾಧ್ಯ. ಹಾಗಾಗಿ, ಭಕ್ತರಲ್ಲಿ ಜಾತಿಭೇದವಿಲ್ಲ, ಶರಣರಲ್ಲಿ ಜಾತಿಭೇದವಿಲ್ಲ ಮುಂತಾದ ಮಾತುಗಳು ಸಾಮಾಜಿಕ ಸಮಾನತೆಯ ತತ್ವವನ್ನು ಭಕ್ತಿಗೆ ಗಂಟುಹಾಕಿ, ಆ ತತ್ತ್ವದ ಅನೇಕಾನೇಕ ಸಾಧ್ಯತೆಗಳನ್ನು ಕತ್ತರಿಸಿಬಿಡುತ್ತದೆ. ಶರಣರಭಕ್ತಿ ಮೀಮಾಂಸೆಯಲ್ಲೋ, ದಾಸರಭಕ್ತಿ ನಿರ್ವಚನದಲ್ಲೋ ಆಧುನಿಕತೆಯ ಮೌಲ್ಯವಾಗಿರುವ ‘ಸಾಮಾಜಿಕ ಸಮಾನತೆ’ಯನ್ನು ಕಾಣುವುದಕ್ಕೆ ಮುನ್ನ ನಾವು ಕೊಂಚ ಆಲೋಚಿಸಬೇಕಾಗುತ್ತದೆ. ಈ ಚರ್ಚೆ ಏನೇ ಇರಲಿ, ಪರಮಹಂಸರು ಭಗವಂತ ಮತ್ತು ಭಕ್ತನ ಸಂಬಂಧವನ್ನು ವಿವರಿಸಲು ನೀಡುವ ಈ ಮುಂದಿನ ದೃಷ್ಟಾಂತ ಚಿಂತನಾರ್ಹವಾಗಿದೆ- “ಹಸು ತನ್ನ ಕರುವಿನ ಕಡೆಗೆ ಓಡಿ ಓಡಿ ಹೋಗುವ ಹಾಗೆ ಭಗವಂತ ಭಕ್ತರ ಕಡೆಗೆ ಓಡಿ ಓಡಿ ಹೋಗುತ್ತಾನೆ” ದೀನರ ಭಕ್ತಿಯನ್ನು ಭಗವಂತ ಬಹಳವಾಗಿ ಪ್ರೀತಿಸುತ್ತಾನೆ ಎನ್ನುತ್ತಾರೆ.
ಪುತಿನ ಅವರ ಕಾವ್ಯಗಳಲ್ಲಿ ದೇವರು, ಗುಡಿ, ಭಕ್ತಿ ಮುಂತಾದ ಪರಿಕಲ್ಪನೆಗಳು ಮತ್ತೆ-ಮತ್ತೆ ಕಾಣಿಸಿಕೊಳ್ಳುವುದರಿಂದ, ದೇವರನ್ನು ಕುರಿತು ಅವರ ನಿಲುವೇನಾಗಿತ್ತು ಎನ್ನುವುದು ಮುಖ್ಯವಾಗುತ್ತದೆ. ಅವರ ಪ್ರಕಾರ ದೇವರು ‘ನಿತ್ಯ ಸೃಷ್ಟ’. ಎಂದರೆ ಪ್ರತಿಕ್ಷಣದಲ್ಲಿಯೂ ಹೊಸದಾಗಿ ಸೃಷ್ಟಿಯಾಗುತ್ತಿರುವವನು. ದೇವರು ಎಂಬ ಭಾವವೂ ಅಷ್ಟೇ; ಮನಸ್ಸಿಗೆ ತಂದುಕೊಂಡರೆ ಉಂಟು, ಇಲ್ಲದಿದ್ದರೆ ಇಲ್ಲ. ಪುತಿನ ಅವರ ಪ್ರಕಾರ, ಈ ಜಗತ್ತಿನ ವಿಷಯದಲ್ಲಿ ಯಾವುದು ಹೃದಯಕ್ಕೆ ಮುಟ್ಟಿ ಅರಿವಿಗೆ ಎಟುಕದೊ ಆ ವಿಸ್ಮಯ ಭಾವವೇ ದೇವರು. ಬುದ್ಧಿಯ ಬೆಳಕಿನ ಅಂಚಿನಲ್ಲಿರುವ ಮೋಹಕವೂ ಅಜೇಯವೂ ಆದ ಕತ್ತಲು ಮತ್ತು ದಿವ್ಯ ವ್ಯಾಕುಲತೆಯೇನಿದೆ ಅದೇ ‘ದೇವರು’. ಹಾಗಾಗಿಯೇ ಅವರಿಗೆ ಬಾಬರಿ ಮಸೀದಿಯೂ ರಾಮಮಂದಿರದಷ್ಟೇ ಪವಿತ್ರವಾದದ್ದಾಗಿತ್ತು. ಅದರ ಧ್ವಂಸ ಅವರನ್ನು ಆಳವಾಗಿ ಕಲಕಿತ್ತು. ಅದರ ವಿರುದ್ಧ ಮೌನ ಪ್ರತಿಭಟನೆಗೂ ನಿಂತರು.
ಸಮಾರೋಪ: ಕನ್ನಡ ಸಾಹಿತ್ಯದ ಒಂದೂವರೆ ಸಾವಿರ ವರ್ಷಗಳ ಸುದೀರ್ಘವಾದ ಇತಿಹಾಸವನ್ನು ಅವಲೋಕಿಸಿದರೆ ಪುತಿನ ಅವರಂತಹ ಪ್ರತಿಭಾಶಾಲಿ ದಾರ್ಶನಿಕ ಕವಿಗಳು ಕಾಣಸಿಗುವುದು ಅಪರೂಪವೇ ಆಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ನಡೆಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಧೀಮಂತರಾಗಿದ್ದಾರೆ. ನೂರಾರು ವರ್ಷಗಳಿಂದ ಹರಿದು ಬಂದಿರುವ ಕಾವ್ಯ ಮೀಮಾಂಸೆಯ ಧಾರೆಗೆ ‘ಭವನಿಮಜ್ಜನ ಚಾತುರ್ಯ’ ಮತ್ತು ‘ಲಘಿಮಾ ಕೌಶಲ’ಗಳೆಂಬ ಹೊಸ ಕಾವ್ಯಮೀಮಾಂಸೆಯ ಪರಿಕಲ್ಪನೆಗಳನ್ನು ಸೇರಿಸಿ, ಕನ್ನಡ ಸಾಹಿತ್ಯ ವಾಹಿನಿಯನ್ನು ಶ್ರೀಮಂತಗೊಳಿಸಿದರು.
ನವೋದಯ ಸಾಹಿತ್ಯದ ಕಾಲಘಟ್ಟದ ಬೇರೆ ಬೇರೆ ಕವಿಗಳ ಕೃತಿಗಳಿಗೆ ಹೋಲಿಸಿದರೆ, ಪುತಿನ ಅವರ ಕೃತಿಗಳ ಕೀರ್ತಿ ಕನ್ನಡ ನಾಡಿನಿಂದಾಚೆಗೆ ಹರಡದಿರಲು ಪ್ರಮುಖ ಕಾರಣವೆಂದರೆ ಅವುಗಳು ಭಾರತೀಯ ಬೇರೆಬೇರೆ ಭಾಷೆಗೆ ಭಾಷಾಂತರಗೊಂಡಿಲ್ಲದಿರುವುದು. ಯಾಕೆಂದರೆ, ಭಾಷಾಂತರಕ್ಕೆ ಅಳವಡದೇ ಇರುವಂತಹ ಕ್ಲಿಷ್ಟತೆಯನ್ನು ಅವರ ಬರಹಗಳು ಒಳಗೊಂಡಿವೆ. ಮುಂದಿನ ದಿನಗಳಲ್ಲಿ ಸಮರ್ಥ ಭಾಷಾಂತರಕಾರರು ಇವರ ಸಾಹಿತ್ಯವನ್ನು ಬೇರೆಬೇರೆ ಭಾರತೀಯ ಭಾಷೆಗಳಿಗೆ ಭಾಷಾಂತರಿಸಿ ಸಾಹಿತ್ಯಾಸಕ್ತರಿಗೆ ದೊರಕುವಂತಾದರೆ ನಮ್ಮ ನಡುವೆ ಪುತಿನ ಅವರು ಸದಾ ಜೀವಂತರಾಗಿರುವಂತೆ ಆಗುತ್ತದೆ.
ಪುತಿನ ಅವರನ್ನು ಕುರಿತು ಪ್ರಭುಶಂಕರ್ ಅವರು ಹೀಗೆ ಹೇಳುತ್ತಾರೆ- “ಇವರು ವೇಷಭೂಷಣಗಳಲ್ಲಿ ಪುರಾತನರು, ಆಲೋಚನೆಯಲ್ಲಿ ಆಧುನಿಕರು. ಭಾರತೀಯವಾದದ್ದರ ಬಗ್ಗೆ ತುಂಬ ಅಭಿಮಾನ, ಆದರೆ ಅವುಗಳಲ್ಲಿ ಇಂಥಿಂಥ ದೋಷಗಳಿವೆಲ್ಲಾ ಎಂದರೆ ಹೌದು ಎಂದು ಒಪ್ಪಿಕೊಳ್ಳುತ್ತಾರೆ. ಇಂಗ್ಲಿಷ್ ಕಂಡರೆ ಆಗದು; ಆದರೆ ಓದಿರುವುದು, ಬರೆಯುವುದು ಹೆಚ್ಚಾಗಿ ಇಂಗ್ಲಿಷ್‌ನಲ್ಲಿ. ಸೊಗಸಾದ ಇಂಗ್ಲಿಷ್ ಬರೆಯುತ್ತಾರೆ. ಜೀವನದಲ್ಲಿ ಇಂಥ ಅನೇಕ ವಿರೋಧಗಳು ಉಂಟು, ಎಲ್ಲರ ಜೀವನದಲ್ಲೂ ಇರುವಂತೆ. ಅವೇ ಇವರನ್ನು ಸಂಕೀರ್ಣರನ್ನಾಗಿ ಮಾಡಿರುವುದು. ಆ ಸಂಕೀರ್ಣತೆಯೇ ಇವರ ಬದುಕನ್ನು ಆಕರ್ಷಕಗೊಳಿಸುತ್ತದೆ.” ಇನ್ನು, ದೇ. ಜವರೇಗೌಡ ಅವರ ಈ ಮುಂದಿನ ಮಾತನ್ನು ಉಲ್ಲೇಖಿಸುತ್ತ ನನ್ನ ಈ ಉಪನ್ಯಾಸವನ್ನು ಕೊನೆಗೊಳಿಸುತ್ತೇನೆ-
“ಪುತಿನ ಅವರನ್ನು ಶಬ್ದಬ್ರಹ್ಮರೆಂದು, ತತ್ತ್ವಜ್ಞರೆಂದು, ಶೃಂಗಾರಕವಿಯೆಂದು, ವಿನೋದಗಾರರೆಂದು, ನಿಸರ್ಗಪ್ರಿಯರೆಂದು, ಕಾವ್ಯಸಿದ್ಧಾಂತಿಯೆಂದು, ಚಿಂತನಾಶೀಲರೆಂದು, ರಸಿಕಚಕ್ರಿಯೆಂದು ನಾನಾ ವಿಧವಾಗಿ ಬಣ್ಣಿಸುವುದುಂಟು. ಆ ಬಣ್ಣನೆಗಳಲ್ಲಿ ತಥ್ಯವಿಲ್ಲದಿಲ್ಲ. ಇಂಥ ಸಂತಕವಿಯನ್ನು ಅಂತೆಯೇ ವಾಗ್ಗೇಯಕಾರರನ್ನು ಪಡೆದ ನಾಡುನುಡಿಗಳು ಧನ್ಯ!”" ಎಂದು ಹೇಳಿದರು. ಉಪನ್ಯಾಸ ದ ನಂತರ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರು ಹಾಗೂ ಸಂಶೋಧಕರಿಂದ ಅರ್ಥಪೂರ್ಣ ಸಂವಾದವೂ ನಡೆಯಿತು. ಕಾರ್ಯಕ್ರಮದಲ್ಲಿ ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷರಾದ ರಾಜು ಸೂಲೇನಹಳ್ಳಿ, ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧಕರಾದ ಪ್ರಭುಕುಮಾರ ಪಿ, ಅರವಿಂದ ಈ, ಅಮರ್ ಬಿ., ಗಾದಿಲಿಂಗಪ್ಪ, ಗಂಗಾಧರ ಬಿ.ಎಂ., ಧನುಷ್ ಎಚ್ ಶೇಖರ್ ಹಾಗೂ ಉದಯ್ ಕಿರಣ್, ಗೌತಮ್ ಗೌಡ, ಮುಂತಾದವರು ಹಾಜರಿದ್ದರು.
- ಡಾ. ರಂಗಸ್ವಾಮಿ ಹೆಚ್.
ಸಂಶೋಧಕರು, ತುಮಕೂರು.
(ಉಪನ್ಯಾಸಕ್ಕಾಗಿ ತಯಾರಿಸಿದ ಲೇಖನವನ್ನು ಈ ವರದಿಯಲ್ಲಿ ಸೇರಿಸಿ ಪ್ರಕಟಿಸಲಾಗಿದೆ.)
( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9113036287 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ