ಹಿಂದಿನ ದಿನಗಳಿಗೆ ಹೋಲಿಸಿದರೆ ಸದ್ಯ ಮಹಿಳೆಯರು ಎಲ್ಲ ರಂಗದಲ್ಲೂ ಬೆಳೆದು ನಿಂತಿದ್ದಾರೆ. ಎಲ್ಲ ಕ್ಷೇತ್ರದಲ್ಲು ಸಾಧನೆಯನ್ನು ಮಾಡಿದ್ದಾರೆ. ಪುರುಷ ಸಮಾನವಾಗಿ ನಾವು ಇದ್ದೇವೆ ಎಂದು ಸಾಬೀತು ಮಾಡುತ್ತಿದ್ದಾರೆ.
ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಯುಎನ್ ಥೀಮ್ “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ” ಎಂದು ಘೋಷಿಸಿದೆ.
ಮಹಿಳೆಯರೇ ಸಮಾಜದ ನಿಜವಾದ ವಾಸ್ತುಶಿಲ್ಪಿಗಳು . ಹೆಣ್ಣಿನಿಂದಲೆ ಈ ಸೃಷ್ಟಿ ಬೆಳೆದದ್ದು. ಭೂಮಾತೆಯ ಮಡಿಲಲ್ಲಿ ಹೆಣ್ಣು ಜೀವಸಂಕುಲದಿಂದಲೇ ಒಂದು ಕಳೆ.
ಮಹಿಳಾ ದಿನಾಚರಣೆಯು ನಮ್ಮ ಜೀವನದಲ್ಲಿ ಮತ್ತು ಸಮಾಜದಲ್ಲಿ ಮಹಿಳೆಯರ ಬಗ್ಗೆ ಮೆಚ್ಚುಗೆ, ಗೌರವ, ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿದೆ. ಇಂದು ಮಹಿಳೆಯರು ತಮ್ಮ ಸಾಮರ್ಥ್ಯ ಅರಿತು ಬೆಳೆಯುತ್ತಿದ್ದಾರೆ . ಅಂತರರಾಷ್ಟ್ರೀಯ ಮಹಿಳಾ ದಿನದಂದು, ಮಹಿಳೆಯರು ನಿಸ್ಸಂದೇಹವಾಗಿ ಪ್ರಪಂಚದ ಗಮನವನ್ನು ತಮ್ಮತ್ತ ತಿರುಗಿಸುತ್ತಿದ್ದಾರೆ.
ಖ್ಯಾತ ಮಹಾವಾಕ್ಯವೊಂದು ಹೀಗಿದೆ .
ನಾನು ಹುಟ್ಟಿದಾಗ ನನ್ನ ಕೈ ಹಿಡಿದುಕೊಂಡಳು, ಅವಳೇ ತಾಯಿ.
ನಾನು ಮಗುವಾಗಿ ಆಟವಾಡುತಿದ್ದಾಗ ನನ್ನ ಜೋಪಾನ ಮಾಡಿ ನನ್ನ ಜತೆ ಆಟವಾಡುತಿದ್ದಳು, ಅವಳೇ ಅಕ್ಕ.
ನಾನು ಶಾಲೆಗೆ ಹೋಗುವಾಗ ನನಗೆ ಪಾಠ ಹೇಳಿ ಕೊಡುತ್ತಿದ್ದಳು ಅವಳೇ ಶಿಕ್ಷಕಿ.
ಸದಾ ಸಹಾಯ ಮಾಡುತ್ತಾ ಗಂಡನ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ, ಪ್ರೀತಿ ಮಾಡುತ್ತಾ, ಬಂದವಳು ಅವಳೇ ಹೆಂಡತಿ.
ಅಪ್ಪನಿಗೆ ಕಷ್ಟ ಬಂದಾಗ ಕಣ್ಣೀರು ಹಾಕಿದವಳು ಅವಳೇ ಮಗಳು.
ನಾವು ಸತ್ತಗಾ ಮೂರುಗೇಣ ಜಾಗ ಕೊಟ್ಟಳು ಅವಳೇ ಭೂ ತಾಯಿ ಹೌದಲ್ಲವೇ?
ಸ್ತ್ರೀಯನ್ನು ಮೂರು ದೃಷ್ಟಿಯಿಂದ ನೋಡುವಂತಾಗಿದೆ
೧) ಕತೃತ್ವ ೨)ನೆತೃತ್ವ ೩) ಮಾತೃತ್ವ ಈ ದೃಷ್ಟಿಕೋನದಿಂದಲೇ
ನಾರಿಯನ್ನು ಶಕ್ತಿಸ್ವರೂಪಿಣಿಯೆಂದು ಆರಾಧಿಸುವಂತಹ
ದೇಶ ನಮ್ಮದು.
ಕತೃತ್ವಯೆಂದರೆ ಕ್ರಿಯಾಶಕ್ತಿ.
ನಮ್ಮ ವ್ಯಕ್ತಿತ್ವ ಹೇಗಿರಬೇಕೆಂದರೆ ನಮ್ಮ ದೇಹವನ್ನಾಗಲಿ, ನಮ್ಮ ಮನಸ್ಸನ್ನಾಗಲಿ, ನಮ್ಮ ಬುದ್ಧಿಯನ್ನಾಗಲಿ, ನಮ್ಮ ಪ್ರತಿಭೆಯನ್ನಾಗಲಿ ನಾವು ಎಷ್ಟು ಚೆನ್ನಾಗಿ ಬಳಸ್ತಾ ಹೊಗ್ತಿವೋ
ಅದರ ಶಕ್ತಿ ಸಾಮರ್ಥ್ಯ ವೃದ್ಧಿಸ್ಥಾ ಹೊಗುತ್ತದೆ. ಹಾಗಾಗಿ ಸ್ತ್ರೀ ಸದಾ ಕ್ರಿಯಾಶೀಲಳಾಗಿ, ತನ್ನನ್ನೆ ಮೆಚ್ಚಿಕೊಂಡತಹ ಕುಟುಂಬ, ಪರಿಸರ ಸದಾ ಲವಲವಿಕೆಯಿಂದ ಕೂಡಿಕೊಂಡಿರುವಂತೆ ,ನಿತ್ಯ ಚಟುವಟಿಕೆಯಿಂದ ಇಡುವಂತಹವಳು.
ನೆತೃತ್ವ: ನೆತೃತ್ವ ಅಂದರೆ ಸಾಮಾಜಿಕ ಉತ್ತರದಾಯಿತ್ವದ ಶಕ್ತಿಯನ್ನ ಸ್ವಭಾವವನ್ನ ಬೆಳೆಸಿಕೊಂಡವಳು. ತನ್ನದಲ್ಲದೆ ತನ್ನ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ, ತಾನು ಉದ್ಯೋಗ ಮಾಡುವ ಸ್ಥಳದಲ್ಲಿ ಅಷ್ಟೇ ಅಲ್ಲ ವಿಶೇಷವಾದಂತಹ ಕಾರ್ಯಕ್ರಮಗಳಲ್ಲಿ ತಾನು ಬೆರೆತು ಸಂತಸವನ್ನು ಹಂಚಿಕೊಳ್ಳುತ್ತಾ ಮತ್ತು ಮತ್ತೊಬ್ಬರ ಸಂತಸದಲ್ಲಿ ಭಾಗಿಯಾಗುತ್ತ ತನ್ನ ನೇತೃತ್ವವನ್ನು
ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳುವವಳಾಗಿರುತ್ತಾ ಳೆ. ಎಲ್ಲರಲ್ಲೂ ಒಂದಾಗಿ , ಸೇರಿಕೊಳ್ಳುವ ಸ್ವಭಾವ ಅವಳದ್ದಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಅನುಭವ ಪಡೆದುಕೊಂಡು ಸಾಧಿಸುವ ಛಲಗಾರ್ತಿಯವಳು
ಮಾತೃತ್ವ : ಮಾತೃತ್ವ ಎಂಬುದು ಪ್ರತಿಯೊಬ್ಬ ಸ್ತ್ರೀಯ ತನು ಮನದಲ್ಲಿ ಬೆರೂರಿದ ಸ್ಥಾನ. ಒಂದು ಹೆಣ್ಣು ಬೆಳೆದಂತೆ ಅವಳಲ್ಲಿ ಮಾತೃಪ್ರಜ್ಞೆ ತನ್ನಿಂದ ತಾನೆ ಜಾಗೃತವಾಗುತ್ತ ಹೊಗುತ್ತದೆ. ತನ್ನ ಕುಟುಂಬದ ನಿರ್ವಹಣೆಯಲ್ಲಿ ಪ್ರೀತಿ, ಆತ್ಮಿಯತೆ ಮಮತೆ ಬೆಳೆಸುತ್ತಾ ತನ್ನನ್ನು ತಾ ತೊಡಗಿಸಿಕೊಂಡವಳು. ತನ್ನ ಸುತ್ತಮುತ್ತಲಿನ ನೆರೆಹೊರೆಯವರ ಜೊತೆಗೆ ತನ್ನನ್ನು ತಾ ಬೆರೆಸಿಕೊಳ್ಳುವ ಶಕ್ತಿ ಅವಳಲ್ಲಿರುತ್ತದೆ. ಅವಳ ಮಾತುಕತೆ, ವೇಷಭೂಷಣ, ಹಾವಭಾವ ತುಂಬಾ ಘನತೆಯಿಂದ ಕೂಡಿದ ಅತ್ಯಂತ ಪರಿಶುದ್ಧತೆಯಿಂದ ಕಾಣಿಸಿಕೊಳ್ಳುವಂತಿರುತ್ತದೆ. ಸ್ತ್ರೀ ತನ್ನ ಅರ್ಧ ಸಮಸ್ಯೆಗಳನ್ನು ತಾನೆ ನಿರ್ವಹಿಸಿಕೊಳ್ಳುತ್ತಾಳೆ. ಯಾರು ಕೆವಲ ತಮ್ಮ ಸೌಂದರ್ಯವನ್ನ ತಮ್ಮ ಶೋಕಿಗಾಗಿ ಗುರುತಿಸಿಕೊಳ್ಳಲು ಉಪಯೋಗಿಸುತ್ತಾರೋ ಅಂತ್ತಹ ಸ್ತ್ರೀಯರು ಸಮಾಜದಲ್ಲಿ ಅಪಾಯಕ್ಕೊಳಗಾಗುತ್ತಾರೆ. ಸಮಾಜ ತನಗೆ ಹೇಗೆ ನೋಡಿದರೂ ತನ್ನ ತಾ ಶುದ್ಧವಾಗಿ ಸ್ವಯಂ ಆತ್ಮವಿಶ್ವಾಸ ಬೆಳೆಸಿಕೊಂಡು ಎಲ್ಲರೂ ನೋಡುವ ದೃಷ್ಟಿಕೋನದಲ್ಲಿ ಪರಿಶುದ್ಧವಾಗಿ ಗೌರವಕ್ಕೆ ಪಾತ್ರಳಾಗುವಂತಿರಬೇಕು. ಪರರನ್ನು ಮಾತಾಡಿಸುವಾಗ ಸಹೋದರಿಯ, ತಾಯಿಯ ಭಾವನೆ ತುಂಬುವಂತಹವಳನ್ನು ಒಬ್ಬ ಜವಾಬ್ದಾರಿಯುತ ಮಹಿಳೆಯೆನ್ನಬಹುದು.
ಅಯ್ಯೋ ಹೆಣ್ಣು ಜನ್ಮವೇ ಎಂದು ಅಂದುಕೊಳ್ಳಬಾರದು. ಸ್ತ್ರಿ ಜನ್ಮಕ್ಕೆ ಹೆಮ್ಮೆ ಪಡಬೇಕು. ಈ ಜಗವೆಂಬ ಕನ್ನಡಿಯಲ್ಲಿ ನಾವು ನಮ್ಮ ಅಂತರಂಗವನ್ನು ನೊಡಿ ಕೊಳ್ಳುವಂತಿರಬೇಕು. ಅಂದಾಗ ನಮ್ಮೆಲ್ಲರ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುವ ಮಹಿಳಾ ದಿನಾಚರಣೆ ಆಗಬೇಕು.
- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ