ಗುರುವಾರ, ಜೂನ್ 8, 2023

ಆದರ್ಶ (ಸಣ್ಣ ಕಥೆ) - ಮಾಲತಿ ಮೇಲ್ಕೋಟೆ.

ವೀಳ್ಯ ಮೆಲ್ಲುತ್ತಾ ಜಗಲಿಯಲ್ಲಿ
ಆರಾಮಕುರ್ಚಿಯಲ್ಲಿ ಕುಳಿತಿದ್ದ 
ಶ್ರೀನಿವಾಸಯ್ಯ ತಿಮ್ಮನ ದಾರಿ
ಕಾಯುತ್ತಿದ್ದರು.ಅಂಗಳದಲ್ಲಿ
ಹರಡಿದ್ದ ಮಟ್ಟೆಕಾಯಿಗಳನ್ನು
ಸುಲಿಯಲು ಬೆಳಿಗ್ಗೆ ೯ಕ್ಕೇ
ಬರುವೆನೆಂದಿದ್ದ ತಿಮ್ಮ ೧೦
ಗಂಟೆಯಾದರೂ ಬಂದಿರಲಿಲ್ಲ.
೧೦-೨೦ರ ವೇಳೆಗೆ ದೂರದಲ್ಲಿ
ತಿಮ್ಮ ಬರುವುದು ಕಂಡಿತು.
     
ಹತ್ತಿರ ಬಂದೊಡನೆ "ಅಡ್ಬಿದ್ದೆ
ಬುದ್ದೋರೆ"ಎಂದ.ಶ್ರೀನಿವಾಸ
"ಯಾಕೋ ಇಷ್ಟು ತಡ"ಎಂದು
ಸಿಡಿಮಿಡಿಯಿಂದ ಕೇಳಿದರು.
"ಬೆಳಿಗ್ಗೆ ವೆಂಕಯ್ಯನವರ
ತೋಟಕ್ಕೆ ಪಾತಿ ಮಾಡೋಕೆ 
ಓಗಿದ್ದೆ.ಬಿಸಿಲಾದ್ಮೇಲೆ ಕಷ್ಟ
ಅಲ್ಲವ್ರಾ,ಅದ್ಕೆ ಮುಗ್ಸೇ ಬಂದೆ"
ಅಂದ.ಇವರ ಮನೆ ಅಂಗಳದಲ್ಲಿ
ಶೀಟ್ ಹೊದಿಸಿದ್ದರಿಂದ ಬಿಸಿಲಿನ ಸಮಸ್ಯೆ ಇರಲಿಲ್ಲ.
ಅವನೊಡನೆ ಬಂದಿದ್ದ ಅವನ
ಹೆಂಡತಿ ಕೆಂಪಿ ಮನೆಗೆಲಸದಲ್ಲಿ
ನೆರವಾಗಲು ಒಳಹೋದಳು.

     ರಾಯರಿಗಿನ್ನೂ ತಿಮ್ಮನ
ಮೇಲಿನ ಕೋಪ ಕರಗಿರಲಿಲ್ಲ.
ಅವನು ಕೆಲಸ ಶುರು ಮಾಡು-
ತ್ತಿದ್ದಂತೆ ಮಾತಿಗೆಳೆದರು.

   ‌‌.   "ಅಲ್ವೋ,ನೀನು,ನಿನ್
ಹೆಂಡ್ತಿ ಕಷ್ಟಪಟ್ಟು ಕೂಲಿನಾಲಿ
ಮಾಡಿ ಮಗನ್ನ ಓದ್ಸಿದ್ರಿ,ಅವನು
ಕೆಲ್ಸ ಸಿಕ್ಕ ಕೂಡ್ಲೇ ನಿಮ್ಮನ್ನು 
ಬಿಟ್ಟು ಪಟ್ಣಕ್ಕೆ ಹೋಗ್ಬಿಟ್ನಲ್ಲೋ"
ಎಂದು ಕಿಚಾಯಿಸಿದರು.ನೀವೂ
ಅಲ್ಲೇ ಹೋಗಿ ಅವನ್ಜೊತೆ ಇರ್ಬಾರ್ದಾ ಎಂದು ಒಗ್ಗರಣೆ
ಸೇರಿಸಿದ್ರು.ಅವನೆಂದ,"ನಮ್ಗೆ
ಅಳ್ಳೀನೇ ಸರಿ,ಅಲ್ದೆ ನಾವಿಬ್ರೂ
ಇನ್ನೂ ಗಟ್ಯಾಗಿದೀವಿ.ಇಲ್ಲೇ
ಕೆಲ್ಸ ಮಾಡ್ಕೊಂಡು ಸುಕ್ವಾಗಿ
ಇದೀವಿ ಬುಡಿ"ಎಂದ.ಅವನ 
ಶಾಂತಚಿತ್ತತೆಯನ್ನು ಕಂಡು
ಇವರಿಗೆ ಆಶ್ಚರ್ಯ.

ಆದ್ರೂ ಶ್ರೀನಿವಾಸಯ್ಯ
ಸೋಲಲು ತಯಾರಿರ್ಲಿಲ್ಲ.
"ನಿನ್ ಮಗನ್ನ ದುಡ್ಡು ಕಳ್ಸೋಕೆ
ಹೇಳೋ,ನೀವಿಬ್ರೂ ಇನ್ಮೇಲೆ
ಕೂಲಿ ಕೆಲ್ಸ ಬಿಟ್ಟು ಆರಾಮ-
ವಾಗಿ ಇರ್ಬೋದು"ಎಂದರು.

   ‌.   ತಿಮ್ಮ ತಕ್ಷಣ ಉತ್ತರಿಸಿದ,
"ಅಲ್ಲ ಸ್ವಾಮೀ,ನಾವು ಕಷ್ಟಪಟ್
ಓದ್ಸಿದ್ಕೆ ಅವನು ಸಂದಾಗಿ ಓದಿ
ಪಟ್ಣದಲ್ಲಿ ಕೆಲ್ಸ ಸಂಪಾದ್ನೆ 
ಮಾಡ್ಕೊಂಡಿದ್ ಕಂಡು ನಾವು
ಖುಸಿ ಪಡ್ಬೇಕಲ್ಲವ್ರಾ,ಅವನು
ನಪಾಸಾಗಿ ,ಸರ್ಯಾಗಿ ಓದ್ದೇ,
ಕೆಲ್ಸಾನೂ ಇಲ್ದೇ ಇಲ್ಲೇ ಕುಂತಿದ್ರೆ
ನಮ್ ಕಷ್ಟ ಸಾರ್ತ್ಕ ಆಯ್ತಿತ್ತಾ,
ಈಗಂತೂ ನಮ್ಗೆ ಬೋ ಖುಷಿ.
ನಮ್ ಶ್ರಮಾನೂ ಸಾರ್ತ್ಕ ಆಯ್ತು.ಅವನು ಮಗೀ ಆಗಿದ್ದಾಗ ನಮ್ಗೆ ಎಷ್ಟ್ ಖುಷಿ
ಕೊಟ್ಟವ್ನೆ ಗೊತ್ರಾ,ಮರ್ಯಕ್ಕಾ-
ಯ್ತದಾ ಅದ್ನ,ಈಗ್ಲೂ ಅಪ್ಪ,
ಅಮ್ಮ ಅನ್ಕೊಂಡು ನಂ ಜೊತೆ
ಸಂತೋಸ್ವಾಗೇ ಅವ್ನೆ."ಎಂದಾಗ
ಮಾತು ಮುಂದುವರಿಸಲು
ಶ್ರೀನಿವಾಸಯ್ಯನವರಿಗೆ
ತೋಚದಾಯಿತು.

- ಮಾಲತಿ ಮೇಲ್ಕೋಟೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...