ಬುಧವಾರ, ಜನವರಿ 4, 2023

ಚಿಗುರಿದ ಕನಸು(ಸಣ್ಣ ಕತೆ) - ಆಶಾ ನೂಜಿ.

ಅರುಣ ಮತ್ತು ಸುಮಾ ಇಬ್ಬರು ಮದುವೆಯ ‌ವಾರ್ಷಿಕೋತ್ಸವಕ್ಕೆ ಆಶ್ರಮವಾಸಿಗಳಿಗೆ ಮತ್ತು ಸಹಪಾಠಿಗಳಿಗೆ ಸಿಹಿತಿಂಡಿ ಕೊಡಬೇಕೆಂದು ನಿರ್ಧರಿಸಿಕೊಟ್ಟು ಬರಲು ಹೊರಡುತ್ತಿದ್ದಾಗ ಒಂದು ಕಾಲ್ ಬಂತು ಹಾಯ್!!ಹಲೋ,
ನಿಮಗಿಬ್ಬರಿಗೂ, ಮದುವೆಯ ವಾರ್ಷಿಕೋತ್ಸವಕ್ಕೆ ಶುಭ ಕಾಮನೆಗಳು ಗೆಳೆಯಾ ಎಂದ ಅನಾಮಿಕ.

ಅರುಣನಿಗೆ ಕಾಲ್ ಮಾಡಿದ ವ್ಯಕ್ತಿ ಯಾರೆಂದು ತಿಳಿಯದೆ ಯೋಚನೆ ಮಾಡುತ್ತಿರಲು. ಕಾಲೇಜಿನ ದೋಸ್ತುಕಣೋ ಎಂದು ಹೇಳಿದ್ದ ಆದರೆ ಹೆಸರು ಮುಖ ಪರಿಚಯ ಇಲ್ಲದೆ...  
ಯಾರೆಂದು ? 
ಪತ್ನಿ ಸುಮಾಳು ಕೇಳಿದಳು ಯಾರ ಕಾಲ್ ಎಂದು ?!!!
ಅನಾಮಿಕ ಕಾಲ್ ಕಣೇ ....ಯಾರೆಂದು ತಿಳಿಯದು 
ಕಾಲೇಜು ಪ್ರೆಂಡ್ ಎಂದು ಕಾಲ್ ಕಟ್ ಮಾಡಿದ ಆದರೆ ನನಗೆ
ನೆನಪಿಲ್ಲದ ಗೆಳೆಯರು ಇಲ್ಲ, ಎಂದು ಸುಮಾಳಲ್ಲಿ ಹೇಳಿದಾಗ 
ಸುಮಾಳಿಗೆ ನೆನಪಾಯಿತು.

ಸುಮಾಳ ಜೀವನ ಅಂದ್ರೆ ಅಷ್ಟು ಕಷ್ಟ ಬಾಲ್ಯದಲ್ಲಿ, ಅಪ್ಪ ಅಮ್ಮ ಮಾಡಿದ ತಪ್ಪಿನಿಂದ ಮಗಳು ಅನಾಥಳಾದಳು. ಪಾಪ !! ಆದರೆ ದೇವರು ಅವಳ ಕೈಬಿಟ್ಟಿರಲಿಲ್ಲ ಎಲ್ಲವೂ ಅವಳಿಗೆ ಸಿಗುತ್ತಾ ಹೋಯಿತು. ಆದರೆ ಒಂದು ಮಾತ್ರ ಅವಳ ಪಾಲಿಗೆ ಇಲ್ಲವಾಯಿತು. ಅದರಿಂದ ಅವಳಿಗೆ ಒಳ್ಳೇದೇ ಆಯಿತು. ಒಂದು ಕಳಕೊಂಡರೆ ಇನ್ನೊಂದು ಅವರಿಗೆ ಸಿಗುತ್ತೆ ಎಂಬುದು ಸುಮಳಿಗೆ ಮನವರಿಕೆ ಆಯಿತು ......
ಅನಾಮಿಕ ಬಂದಿದ್ದ, ಸುಮಾಳನ್ನು 
ಗಾಢವಾಗಿ ಪ್ರೀತಿಸಿ ಕೊನೆಗೆ ಅನಾಥಳನ್ನಾಗಿ ಬಿಟ್ಟು ಹೋಗಿದ್ದ.
ನಿನ್ನ ಮದುವೆ ಆಗಲು ನಾನು ಅಪ್ಪ ಅಮ್ಮನ ಒಪ್ಪಿಸಿ ಬರುವೆ 
ಅಲ್ಲಿ ತನಕ ಇಲ್ಲೇ ಇರು ಎಂದು ಹೇಳಿ ಹೋಗಿದ್ದ,
ಕಾರಣ ಸುಮಾಳಿಗೆ ಮಕ್ಕಳಾಗುವುದಿಲ್ಲ ಎಂದು ಅವಳನ್ನು ಆಶ್ರಮದಲ್ಲಿ ಕೆಲಸ ಮಾಡಲು ಬಿಟ್ಟು ಬಂದಿದ್ದ. ಸುಮಾ ಅಲ್ಲಿ ಕೆಲಸ ಮಾಡುತ್ತಲೇ ಇದ್ದಳು. ವಯಸ್ಸಾದ ಅಜ್ಜಿಯಂದಿರ ಶ್ರುಶ್ರೂಷೆ ಮಾಡಿ ತನ್ನ ಜೀವನದಲ್ಲಿ ನಡೆದ ನೋವನ್ನು ಮರೆತಳು.
ಈವತ್ತು ಬರುವನು, ನಾಳೆ ಬರುವನು ಎಂದು ಹೇಳಿ ಭಕಪಕ್ಷಿಯಂತೆ, ದಾರಿ ಕಾಯುತ್ತಾ ಕುಳಿತ ಸುಮಾಳು.
ಹೀಗೆ ಹಲವು ವರುಷಗಳೇ ಸಂದವು ........

............

.......
......
.......

ಅಲ್ಲಿಗೆ ಅರುಣಂತ ಶ್ರೀಮಂತ ಯುವಕ ಆಶ್ರಮಕ್ಕೆ ವರುಷಕ್ಕೊಮ್ಮೆ ಭೇಟಿಕೊಟ್ಟು ಅಲ್ಲಿನ ಆಶ್ರಮವಾಸಿಗಳಿಗೆ ಊಟ ಕೊಟ್ಟು ಬಡಿಸಿಯೇ ಬರುತ್ತಿದ್ದ. ಅವನಿಗೆ ಮದುವೆ ಮಾಡಿಸಲು ಮನೆಯವರು ಮುಂದಾಗಿದ್ದರು.
ಎಷ್ಟೇ ಹುಡಿಗಿಯನ್ನು 
ನೋಡಿದಾಗ ಅದು ಬೇಡ ಇದು ಬೇಡಾ ಎಂದು ಯಾವಾಗಲೂ ಹಿಂದೇಟು ಹಾಕಿದಾಗ ಅವನ ವಯಸ್ಸು ೩೦ ದಾಟಿದಾಗ ಇವನನ್ನು ಯಾರು ಮದುವೆ ಆಗಲು ಮುಂದೆ ಬರುತ್ತಿರಲಿಲ್ಲ. ಕೊನೆಗೆ, 
ಸುಮಾಳನ್ನು ನೋಡುವಾಗ ಇವಳನ್ನೇ ಮದುವೆ ಆಗಿ ಬಾಳು ಕೊಡುವೆ ಎಂದು ಹೇಳುತ್ತಿದ್ದ ಅವನ ಅಮ್ಮನಲ್ಲಿ. ಆದರೆ ಅಮ್ಮನಿಗೆ ಮನಸ್ಸು ಬರಲಿಲ್ಲ ಒಬ್ಬನೇ ಹುಡುಗ ವಿದ್ಯಾವಂತ ಒಂದು 
"ಪ್ರತಿಷ್ಠಿತ ಕಂಪೆನಿ MD ಯ ಮಗನಿಗೆ ಅನಾಥ ಹುಡುಗಿಯ ತಂದು ಕೊಂಡರೆ ಲೋಕದ ಜನ ಆಡಿಕ್ಕೋಳ್ಳರೆ?" ಎಂದು ಅರುಣನ ಅಮ್ಮನಿಗೆ, ಯಾರು ಏನು ಅಂದರೂ ನಾನು ಸುಮಾಳನ್ನೆ ಮದುವೆ ಆಗುವೆ" ಅನಾಥಹೆಣ್ಣಿಗೆ ಬಾಳು ಕೊಟ್ಟರೆ ಅದಕ್ಕಿಂತ ಶ್ರೇಷ್ಠ ಯಾವುದು ಅಮ್ಮಾ?ನಮ್ಮ ಮನೆಗೆ ಮಹಾಲಕ್ಷ್ಮಿಯೇ ಬರುವಳು ಅಮ್ಮಾ ಎಂದನು ".. ಎಷ್ಟು ಹೇಳಿದರೂ ಅರುಣ್ ನಿರ್ಧಾರ ಬದಲಿಸಲೇ ಇಲ್ಲ. ಕೊನೇಗೆ ಅಪ್ಪ ಅಮ್ಮ ಒಪ್ಪಿಗೆ ಸೂಚಿಸಿದರು. ನಂತರ ಆಶ್ರಮದ, ಯಜಮಾನನಲ್ಲಿ ಮಾತಾಡಿ ಸುಮಾ ಎಂಬ ಹುಡುಗಿಯನ್ನು ನನ್ನ ಮಗನಿಗೆ ತಂದುಕೊಳ್ಳುವೆವು ಎಂದರಂತೆ. ಅದಕ್ಕೆ ನೀವು ಒಂದು ಕೆಲಸ ಮಾಡಬೇಕು ಒಂದು ಶೀಟ್ ಪೇಪರಿಗೆ ಸಹಿ ಹಾಕಿ ಮತ್ತೆ ನಾವು ಮದುವೆ ಮಾಡಿಸುವೆವು ಎಂದರಂತೆ. "ಏನು ನಮ್ಮ ಮೇಲೆ 
ನಂಬಿಕೆ ಇಲ್ಲವೇ?ಎಂದು ಕೇಳಿದರು", ಇದೆ ಆದರೆ ಹೇಗೆ ಹೇಳೋದು ಈಗೆಲ್ಲಾ ಎಷ್ಟು  ಡೈವೋರ್ಸ್ ಕೇಸುಗಳು ಬರುತ್ತೆ,
ಕೆಟ್ಟ ಕಾಲ ಬಂದರೆ ನಮ್ಮ ಹುಡುಗಿಯ ಬಾಳು 
ಹಾಳಾಗುವುದಲ್ಲವೇ?ಎಂದಾಗ ಹೌದೆಂದು ಸುಮ್ಮನಿದ್ದು ಸಹಿ ಹಾಕಿದರು. ಒಂದು ಒಳ್ಳೆಯ ಮೂಹೂರ್ತ ನೋಡಿ 
ದೇವಸ್ಥಾನದಲ್ಲಿ ಹಾರ ಬದಲಾಯಿಸಿ ಬಂದರು ಯಾಕೆಂದರೆ ಆವಾಗ ಕೊರೋನಾ ಟೈಮ್ ಯಾರಿಗೂ ಹೇಳಲೇ ಇಲ್ಲ. ಸಂಬಂಧಿಕರನ್ನು ಯಾರನ್ನು ಮದುವೆಗೆ ಕರೆಯಲಾಗಿಲ್ಲ.
ಅನಾಮಿಕ ಸುಮಾಳನ್ನು ಪ್ರೀತಿಸಿ ಮದುವೆ ಆಗಿ ಅವಳ ಬಾಳಿಗೆ ಕತ್ತಲಾದರೂ ಸುಮಮಾತ್ರ ಅವನನ್ನು ತುಂಬಾ ಪ್ರೀತಿಸುತ್ತಿದ್ದಳು. ಆದರೂ ಅವನಿಗೆ ಇವಳ ಮೇಲೆ ಪ್ರೀತಿ ಬಂದಿರದೇ ಅವಳನ್ನು ಆಶ್ರಮಕ್ಕೆ ತಳ್ಳಿಬಿಟ್ಟ ... ಅದರಿಂದ ಹೊರಬರಲು ತುಂಬಾ ಸಮಯ ಕಳೆದಿತ್ತು. ಆಗ ಅವಳಿಗೆ ಪರಿಚಯ ಆಗಿದ್ದದ್ದು ಅರುಣ್ ನನ್ನು ..ದೊಡ್ಡ ಜೀವ
 ಸೌಂದರ್ಯದ ರಾಜಕುಮಾರ್ ಎಂಥವರೂ ಸೋಲಬೇಕು ಅಂಥಹ ದೇಹ ಅವನು ಸುಂದರಾಂಗ ಅವನೂ ಸುಮಾಳನ್ನು ನೋಡಿ ಸುಂದರ ಹುಡುಗಿ ಅವನಿಗೆ ಅವಳ ಮೇಲೆ ಪಾಪ ಕಂಡು ನನಗೆ ಪತ್ನಿಯಾಗಿ ಬರುತ್ತಿದ್ದರೆ ಇವಳೇ ನನಗೆ ಜೀವನ ಸಂಗಾತಿ ಎಂದು ದೃಢಸಂಕಲ್ಪ ಮಾಡಿದನು, ಸುಮನಿಗೆ ಅನಾಮಿಕ ಬಂದು ನನ್ನ ಕರೆದುಕೊಂಡು ಹೋಗುವರೆಂದು ದಿನಾ ಬಾಗಿಲ ಬಳಿಗೆ ಬಂದು ಕೂರುತ್ತಿದ್ದಳು ಅವ ಬರಲೇ ಇಲ್ಲ. ಈ ವಿಷಯವನ್ನು ಅರುಣ್ ಆಶ್ರಮದ ಮೆನೇಜರಲ್ಲಿ ಕೇಳಿ ತಿಳಿದುಕೊಂಡ.  ಹಿರಿಯರೊಂದಿಗೆ ಮಾತನಾಡಿ ಹೂವಿನ ಹಾರ ಬದಲಾಯಿಸಿದರು ಯಾರನ್ನೂ ಕರೆಯದೇ ಇದ್ದ ಕಾರಣ ಆಶ್ರಮವಾಸಿಗಳಿಗೆ ಸಿಹಿ ಹಂಚುವ ಎಂದು ಇಬ್ಬರೂ ತೀರ್ಮಾನಿಸಿ ಕೊಟ್ಟು ಬಂದರು.
- ಆಶಾ ನೂಜಿ.


ವನಕೂಟ (ಕವನ) - ಬಿ.ಹೆಚ್.ತಿಮ್ಮಣ್ಣ.

ಸವೆದು ಸೇವಿಸಿ ಆನಂದಿಸಿ ಬಾರೊಮ್ಮೆ ವನಕೂಟಕ್ಕೆ
ಸಿಗುವುದು ಅಲ್ಲೊಂದು ಔಷಧಿಯು ಜೀವನಕ್ಕೆ
ಪ್ರಕೃತಿ ಮಡಿಲಿನ ಬಣ್ಣ ಬಣ್ಣದ ಚಿತ್ತಾರದ ಮಂಚಕ್ಕೆ
ತಲೆಯೊರಗಿ ದಿಂಬಿಗೆ ಕಣ್ಮುಚ್ಚು ಸೋತು ಅದರ ಸೌಂದರ್ಯಕ್ಕೆ

ಕೂಡಿ ಗುಂಪಿನೊಂದಿಗೆ ಸೇರಿ ಹಾಕು ನೀನು ಹೆಜ್ಜೆಯನ್ನ
ಎಳೆವಯದ ಶತಮನಗಳೊಂದಿಗೆ ಸಾಗು ದಾರಿಯನ್ನ 
ಅಲ್ಪ ಪ್ರಮಾಣದ ಸಂತಸ ಬಿಟ್ಟು ಆನಂದಿಸು ಸುಖವನ್ನ
ನರಕಕ್ಕೆ ತಳ್ಳುವ ಚಿಂತೆಯು ಮೈಲು ದೂರಿರುವುದು ಬಿಟ್ಟು ನಿನ್ನ

ಚಿಗುರುವ ಮೊಗ್ಗುಗಳ ಗುಂಪೊಳಗೆ ಅರಳಿದ ಹೂಗಳಂತೆ 
ಮುಂದಾಗಿ ನಡೆದು ಅವುಗಳೊಂದಿಗೆ ಬೆರೆತು ಸೇರುವಂತೆ 
ಸ್ವಾಗತಿಸುತ್ತವೆ ಪುಟ್ಟ ಕಾಲಿನ ಮಕ್ಕಳು ಜೇನ್ನೊಣಗಳಂತೆ
ಗೂಡು ಕಟ್ಟಿ ಸಿಹಿ ತುಪ್ಪವ ನೀಡು ಮನಮುಟ್ಟುವಂತೆ

ತಯಾರಿ ನಡೆಯುವುದು ನಾಳಿನ ಯಾತ್ರೆಗೆ 
ರಾತ್ರಿವಿಡಿ ಸಿದ್ಧವಾಗುವುದು ಮನೆಯಾಗ ಅಡುಗೆ 
ಮಾಡುವ ಭರದಲ್ಲಿ ಕಣ್ಣು ಜಾರೋದಿಲ್ಲ ನಿದ್ದೆಗೆ 
ಆಯ್ತಪ್ಪ ಎಂದು ಹೊರ ನಡೆದು ಬಂದರೆ ಆದಿತ್ತು ಬೆಳಗ್ಗೆ

ರುಚಿಕರದ ಪದಾರ್ಥಕ್ಕೆ ವಾಸನೆ ಬಾರದಂತೆ ತುಂಬಿಡುವರು
ಖೈದಿಯಂತೆ ಕೈಯಲ್ಲಿ ಹಿಡಿದು ಮುಂದೆ ಮುಂದೆ ಸಾಗುವರು
ನಿಸರ್ಗದ ಜೊತೆಗೆ ಸಂಬಂಧವ ಬೆಳೆಸುವರು 
ಸವಿಗಾಳಿಯ ಸೇವಿಸಲು ಸಿದ್ದರಾಗಿ ನಿಲ್ಲುವರು

ತುಂಬಿಟ್ಟ ಡಬ್ಬಿಗಳು ತೆರೆದರೆ ಘಮ್ಮೆಂದಿತು ವಾಸನೆ
ಕಣ್ಣುಗಳು ಪಿಳಿಪಿಳಿ ನೋಡ್ತಾವ ಅವುಗಳ ಮೇಲೆ ಸುಮ್ಮನೆ 
ಕೈಗೆ ಸಿಗುವುದೇ ತಡ ಸೇರುವುದು ಬಾಯಿಗೆ ಥಟ್ಟನೆ
ಎನ್ನುವ ಆತುರದಲ್ಲಿ ಮೇಲೆತ್ತಬೇಕೆನಿಸುತ್ತದೆ ತಟ್ಟೆಯನ್ನೆ

ಕಣ್ಣೆದುರಿಗೆ ಕಾಣ್ತಿದೆ ಭಕ್ಷ ಭೋಜನ 
ಬೆರಳುಗಳು ಚಡಪಡಿಸುವವು ಮಾಡಲು ಸ್ಪರ್ಶವನ್ನ
ಸಿಕ್ಕಾಗ ಅನುಭವಿಸು ಇಂತಹ ವನ ಮಂದಿರದ ರಸದೌತಣವನ್ನ
ತಿನ್ನಲೇಬೇಕು ವರ್ಷದೊಳಗೆ ಒಮ್ಮೆಯಾದರೂ ಒಂದಿನ

ಹಸಿರು ತಂಗಾಳಿ ಬಾಯೊಳಗೆ ತಂಪಾಗಿ 
ತುತ್ತೊಂದಿಗೆ ಸೇರಿ ಒಳಹೊಕ್ಕುವುದು ತ್ಯಾವಾಗಿ
ನಿಶ್ಚಿಂತಿ ಸಮೃದ್ಧಿ ಸಿಗುವುದು ದೇಹಕ್ಕೆ ಚೆನ್ನಾಗಿ
ಎಲ್ಲರೊಂದಿಗೆ ಬೆರೆಯಬೇಕು ಆಟಿಕೆಯ ಗೊಂಬೆಯಾಗಿ

ನಿನ್ನಲ್ಲಿರುವುದು ಹಂಚಿ ತಿನ್ನುವುದೇ ಸಹಕೂಟ
ಮರೆಯದಿರು ಗೆಳೆಯರೊಂದಿಗೆ ಆಡಿದ ನೆನಪಿನಾಟ
ಮರೆಯಾಗುವುದು ನಿನ್ನೋಳುದುಗಿರುವ ನೂರಾರು ಚಟ 
ಸಿಂಗರಿಸಿಕೊಂಡ ಸೌಗಂಧ ಬೀರುವ ಸೊಬಗಲ್ಲಿ ಮಾಡು ಒಮ್ಮೆ ವನಕೂಟ

  - ಬಿ.ಹೆಚ್.ತಿಮ್ಮಣ್ಣ.

ಪುಸ್ತಕ ಪರಿಚಯ: ಅಪರಾಧಿ ನಾನಲ್ಲ (ಕಿರು ಕಾದಂಬರಿ) – ವರುಣ್‌ರಾಜ್‌ ಜಿ.


ಶ್ರೀಮತಿ ಆಶಾಕಿರಣ್ ಎಂ ಇವರು ಬೇಲೂರಿನವರು. ವೃತ್ತಿಯಲ್ಲಿ ಶಿಕ್ಷಕರು. ಸಾಹಿತ್ಯ ಅಧ್ಯಯನ ಮತ್ತು ಬರವಣಿಗೆ ಇವರ ನೆಚ್ಚಿನ ಹವ್ಯಾಸಗಳು. ಇವರ ಚೊಚ್ಚಲ ಕೃತಿ ʼಸುಮುಖ ಕಲಾʼ ಒಂದು ಕವನ ಸಂಕಲನ. ಇವರ ಎರಡನೇ ಕೃತಿಯೇ ‘’ಅಪರಾಧಿ ನಾನಲ್ಲ’’ ಎಂಬ ಕಿರು ಕಾದಂಬರಿ. ಇದನ್ನು ಒಂದೇ ಓದಿಗೆ ಓದಿ ಮುಗಿಸಬಹುದಾದ ದೀರ್ಘ ಕತೆಯೆಂದರೂ ಒಪ್ಪುತ್ತದೆ. ಹಾಗೆ ಒಂದೇ ಓದಿಗೆ ಓದಿಸಿಕೊಳ್ಳುವ ಸತ್ವವೂ ಇದರಲ್ಲಿದೆ. ಸಾಮಾಜಿಕ ಕಾದಂಬರಿಯಾಗಿ ಪ್ರಾರಂಭವಾಗಿ ʼಅಪರಾಧಿ ನಾನಲ್ಲʼ ಕೊನೆಕೊನೆಗೆ ಪತ್ತೇದಾರಿ ಕಾದಂಬರಿಯಾಗಿ ಬೆಳೆಯುತ್ತದ್ದಾದರೂ, ಈ ಕಾದಂಬರಿಯ ಸಾಮಾಜಿಕ ದೃಷ್ಠಿಕೋನ ನಮ್ಮನ್ನು ಹೆಚ್ಚು ಆಕರ್ಷಿಸುತ್ತದೆ.

ಕಾದಂಬರಿಯ ಪಾತ್ರ, ಸನ್ನಿವೇಷಗಳ ಮೂಲಕ ಆಶಾಕಿರಣ್‌ ರವರು ಆಧುನಿಕತೆಗೆ ತೆರೆದುಕೊಂಡ ಗ್ರಾಮ ಜೀವನಗಳು ವಿಕಾಸದತ್ತ ಮುಂದುವರೆಯುತ್ತಿರುವ ಚಿತ್ರಣವನ್ನು, ನವಯುಗದ ತರುಣ ತರುಣಿಯರ ಪ್ರೀತಿ - ಪ್ರೇಮ, ಸರಸ ವಿರಸಗಳನ್ನು ಹಾಗೂ ಕ್ಷುಲ್ಲಕ ಕಾರಣಗಳಿಗೆ ಪ್ರಾಣಹಾನಿಯಂತಹ ಭೀಕರ ಕೃತ್ಯಗಳಿಗೆ ಮುಂದಾಗುವ ಯುವಕ ಯುವತಿಯರ ಅವಿವೇಕವನ್ನು ಸಮರ್ಥವಾಗಿ ಓದುಗರ ಮುಂದಿಡುವ ಪ್ರಯತ್ನವನ್ನು ಮಾಡಿದ್ದಾರೆ.

ಇಲ್ಲಿನ ಕತೆಯೆಲ್ಲವೂ ಬೆಂಗಳೂರು ಮತ್ತು ಬನದೂರುಗಳ ನಡುವೆಯೇ ನಡೆಯುವಂತದ್ದು. ನೈಜವಾದ ಕತೆ ಪ್ರಾರಂಭವಾಗುವುದು ಸಹನಳು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಬನದೂರಿನಿಂದ ಬೆಂಗಳೂರಿಗೆ ಬರುವಲ್ಲಿಂದ. ಅವಿನಾಷ್ ಈ ಕತೆಯ ಹೀರೋ ಆಗಿ ಕಂಡರೂ ಸಹನಳದ್ದೇ ಇಲ್ಲಿ ಪ್ರಮುಖ ಪಾತ್ರ. ಇದೊಂದು ಸ್ತ್ರೀ ಪಾತ್ರ ಕೇಂದ್ರಿತ ಕಾದಂಬರಿ ಎಂದರೆ ತಪ್ಪಾಗಲಾರದು. ಇಲ್ಲಿನ ಪ್ರತಿನಾಯಕ ಮತ್ತು ಕಳನಾಯಕ ಪಾತ್ರಗಳು ಮಹಿಳೆಯರದ್ದೇ ಆದರೂ ವಿಭಿನ್ನ ಪಾತ್ರಗಳು ಹಾಗು ವಿಶಿಷ್ಟ ಕಥಾ ಹಂದರ ಈ ಕೃತಿಯಲ್ಲಿದೆ. ಪ್ರಾರಂಭದಲ್ಲಿ ಸಹನಳನ್ನು ಕಾಡುವ ಸೀಮಾ ಮುಂದೆ ಮನಃ ಪರಿವರ್ತನೆಗೊಂಡು ಸಹನಳೊಂದಿಗೆ ಸ್ನೇಹ ಬೆಳೆಸುತ್ತಾಳೆ. ಆದರೆ, ರಂಜನಿಯ ಮೇಲಿನ ದ್ವೇಷದಿಂದ ಆಕೆಯನ್ನು ಕೊಲೆ ಮಾಡಲು ಪ್ರಯತ್ನಿಸುವ ಸುಜಾತ ಕೊನೆಗೆ ತಾನೇ ಕೊಲೆಯಾಗುವುದು ದುರಂತ. ಸೀಮಾ ಮತ್ತು ರಂಜನಿಯ ಪಾತ್ರಗಳನ್ನು ಖಳ ನಾಯಕಿ ಪಾತ್ರಗಳೆಂದು ಗುರುತಿಸುವುದೂ ಸಹ ಕಷ್ಟವೇ.

ತಾಯಿಯಾದ ಕವಿತ, ಮನೆಯ ನಿಸ್ವಾರ್ಥ ಕೆಲಸಗಾರ ತಿಮ್ಮ, ಸಹನಳಿಗೆ ಸದಾ ಆಸರೆಯಾಗಿದ್ದು ಸುಹಾಸನ ಪ್ರೀತಿಗಾಗಿ ಹಂಬಲಿಸುತ್ತಾ ಹಲವು ತೊಂದರೆಗಳನ್ನು ಅನುಭವಿಸುವ ರಂಜನಿ ಇವರೆಲ್ಲರೂ ಅವರವರ ಕತೆಗಳಲ್ಲಿ ಅವರೇ ನಾಯಕ ನಾಯಕಿಯರು. ಅವಿನಾಶನ ತಾಯಿ ಕವಿತಳ ವೃತ್ತಾಂತ ಎಂಥಹ ಓದುಗನನ್ನು ಒಂದು ಕ್ಷಣ ನಿಂತು ಯೋಚಿಸುವಂತೆ, ಕಣ್ಣಾಲಿಗಳು ತೇವವಾಗುವಂತೆ ಮಾಡುತ್ತದೆ. ಅವಿನಾಷನ ತಾಯಿ ಕವಿತ ತಾನು ಎಲ್ಲಾ ಕಳೆದುಕೊಂಡು ಮೋಸಹೋಗಿ, ಅದಕ್ಕೆ ಪ್ರತಿಕಾರವೋ ಎಂಬಂತೆ ಮತ್ತೆ ಪುಟಿದು ನಿಲ್ಲುವುದು ನಮಗೆಲ್ಲ ಮಾದರಿ. ಹಲವು ಭಾಷಣ ಘೋಷಣೆಗಳು ಮಾಡಲಾರದ ಮಾನಸಿಕ ಪರಿವರ್ತನೆಯನ್ನು ತಣ್ಣಗೆ ಮಾಡಬಲ್ಲ ಶಕ್ತಿ ಈ ಪಾತ್ರಕ್ಕಿದೆ.

ಕಾದಂಬರಿಯಲ್ಲಿ ನಾವು ಗುರುತಿಸಬಹುದಾದ ಮತ್ತೊಂದು ಪ್ರಮುಖ ಅಂಶ ಕಾದಂಬರಿಯ ಪೋಷಕ ಪಾತ್ರಗಳು ತೋರಿಸುವ ಪ್ರಬುದ್ಧತೆ ಮತ್ತು ಮುಕ್ತತೆ. ಅವಿನಾಶನ ಮನೆಗೆ ಬೇಟಿ ನೀಡಿದ ರಂಜನಿ ಮತ್ತು ಸಹನರನ್ನು ಅವಿನಾಶನ ತಾಯಿ ಕವಿತ ಬಹಳ ಪ್ರೀತಿಯಿಂದ ಸ್ವಾಗತಿಸಿ ಆದಿನ ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಅವಕಾಶ ನೀಡುತ್ತಾಳೆ. ಇನ್ನು ಸ್ನೇಹಿತರೊಡನೆ ಬನದೂರಿಗೆ ಹೋಗಬೇಕಾದ ಸಂದರ್ಭದಲ್ಲಿಯೂ ಕವಿತಳ ಈ ಮುಕ್ತತೆ ನಮಗೆ ವಿಶೇಷವೆನಿಸುತ್ತದೆ. ಸೀಮಾಳ ತಂದೆಯೂ ಮಗಳನ್ನು ಸಂತೋಷವಾಗಿ ಬನದೂರಿಗೆ ಕಳುಹಿಸಿ ಕೊಡುತ್ತಾನೆ. ಬನದೂರಿನಲ್ಲಿಯೂ ಇದೇ ರೀತಿಯ ಮುಕ್ತ ವಾತಾವರಣ.

ಗಂಡು ಮಕ್ಕಳು, ಹೆಣ್ಣು ಮಕ್ಕಳೆಂಬ ಬೇಧವಿಲ್ಲ. ಮಕ್ಕಳೆಲ್ಲರೂ ಮಕ್ಕಳೇ. ಶಿವಶಂಕರಪ್ಪನ ಮನೆಯಲ್ಲಿ ಮಕ್ಕಳಾದ ಸಹನ ಮತ್ತು ಸುಹಾಸನಿಗಿರುವಷ್ಠೇ ಸ್ವತಂತ್ರ ಮನೆಯ ಕೆಲಸಗಾರ ತಿಮ್ಮನಿಗೂ ಇದೆ. ಹಾಗೇ ನೋಡಿದರೆ ಎಂದೂ ತಿಮ್ಮನನ್ನು ಅವರು ಕೆಲಸದವನೆಂದು ಭಾವಿಸಿದ್ದೇ ಇಲ್ಲ. ಕಾದಂಬರಿಯ ಕೊನೆಯ ಭಾಗದಲ್ಲಿಯೂ ಮಕ್ಕಳು ತಾವು ಪ್ರೀತಿಸಿದವರನ್ನು ವಿವಾಹವಾಗಲು ಬಯಸಿದಾಗ ಅವರ ಪೂಷಕರು ಬಹಳ ಮುಕ್ತ ಮನಸ್ಸಿನಿಂದ ಅದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಬದಲಾದ ಕಾಲ ದೇಶಗಳಿಗೆ ಅನುಗುಣವಾಗಿ ತಂದೆ ತಾಯಿಗಳು ತೋರಬೇಕಾದ ಪ್ರಬುದ್ಧತೆಗೂ ಇದೊಂದು ಉತ್ತಮ ಮಾದರಿ.  

ಇಂದಿನ ಸಮಾಜದಲ್ಲಿ ಕುಲ, ಜಾತಿ, ಅಂತಸ್ತುಗಳ ಹೆಸರಿನಲ್ಲಿ ಹೊಡೆದಾಡುವ, ಜಾತಿ ಪ್ರತಿಷ್ಠೆಗಾಗಿ ಹೆತ್ತ ಮಕ್ಕಳನ್ನೇ ಹೊಡೆದು ಸಾಯಿಸುವ ಪ್ರವೃತ್ತಿಯ ಪೋಷಕರನ್ನು ನಾವು ನೋಡುತ್ತೇವೆ. ಇಂತಹ ಸತ್ವಹೀನವಾದ ಜಾತಿ ಹಾಗೂ ಅಂತಸ್ತುಗಳ ಪ್ರತಿಷ್ಠೆಗೆ ಕೊಡಲಿ ಪೆಟ್ಟು ನೀಡುವ ಮತ್ತು ಅವುಗಳ ನಿಸ್ಸಾರತೆಯನ್ನು ಹೇಳುವ ಕೆಲಸವನ್ನು ಈ ಕಾದಂಬರಿ ಬಹಳ ತಣ್ಣಗಿನ ದ್ವನಿಯಲ್ಲಿ ಮತ್ತು ಅಷ್ಟೇ ಪ್ರಬಲವಾಗಿ ಮಾಡಿದೆ. ಸ್ನೇಹ, ಪ್ರೀತಿಗಳ ಮುಂದೆ ಜಾತಿ ಹಾಗೂ ಅಂತಸ್ತುಗಳ ಪ್ರಶ್ನೆ ಪುಸ್ತಕದುದ್ದಕ್ಕೂ ಎಲ್ಲಿಯೂ ಅಪ್ಪಿತಪ್ಪಿಯೂ ಸುಳಿಯುವುದಿಲ್ಲ. ಜಾತಿ ಹಾಗೂ ಅಂತಸ್ತುಗಳಿಗೆ ಕಾದಂಬರಿ ಯಾವ ವಿಶೇಷ ಮಾನ್ಯತೆಯನ್ನೂ ನೀಡುವುದಿಲ್ಲ. ನಿಜಕ್ಕೂ ಸಮಾಜಕ್ಕೆ ಇದೊಂದು ಮಾದರಿ ಹಾಗೂ ಉತ್ತಮವಾದ ಸಂದೇಶ.

ಓದುಗನಿಗೆ ಸುಲಭವಾಗಿ ಅರ್ಥವಾಗುವ ಭಾಷಾ ಗುಣ, ಆಪ್ತ ಎನಿಸುವ ಮತ್ತು ಕುತೂಹಲ ಕೆರಳಿಸುತ್ತಾ ಓದಿಸಿಕೊಂಡು ಹೋಗುವ ಕಥಾಹಂದರಗಳು, ಕತೆಯ ನೈಜತೆ ಮತ್ತು ಕಾದಂಬರಿಕಾರನಿಗೆ ಕತೆಯನ್ನು ಹೆಣೆಯುವಲ್ಲಿ ಇರುವ ಸ್ವಾತಂತ್ರ್ಯ ಹಾಗೂ ಕತೆಯು ಓದುಗನಲ್ಲಿ ಉಂಟುಮಾಡುವ ಸಂವೇದನೆ ಇವು ಯಾವುದೇ ರೀತಿಯ ಸಣ್ಣ ಕತೆ ಅಥವಾ ಕಾದಂಬರಿಗಳ ಜನಪ್ರಿಯತೆಯನ್ನು ಅಥವಾ ಕೃತಿಯ ಯಶಸ್ಸನ್ನು ನಿರ್ಧರಿಸುವ ಪ್ರಮುಖ ಅಂಶಗಳು.

ಈ ದೃಷ್ಠಿಯಲ್ಲಿ ಗಮನಿಸಿದರೆ ಪ್ರಸ್ತುತ ಅಪರಾಧಿ ನಾನಲ್ಲ ಕೃತಿಯ ಭಾಷೆ ಹಾಗೂ ಸಂಭಾಷಣೆಗಳು ಸರಳವಾಗಿವೆ ಮತ್ತು ಬಹುಮಟ್ಟಿಗೆ ಓದುಗರೊಂದಿಗೆ ಆಪ್ತತೆಯನ್ನು ಸಾಧಿಸುವ ಪ್ರಯತ್ನ ಮಾಡಿವೆ. ಒಂದು ಮಟ್ಟದವರೆಗೆ ಓದುಗರ ಆಸಕ್ತಿಯನ್ನು ಕೆರಳಿಸಿ ಓದಿಸಿಕೊಳ್ಳುವ ಗುಣ ಹಾಗೂ ವಾಸ್ತವಿಕತೆಗೆ ಹತ್ತಿರವಾದ ಸನ್ನಿವೇಷಗಳು ಹಾಗೂ ಅಷ್ಟೇ ಮುಖ್ಯವಾಗಿ ಓದುಗನ ಸಂವೇದನೆಯನ್ನು ಜಾಗೃತಗೊಳಿಸುವ “ಅಪರಾಧಿ ನಾನಲ್ಲ” ಕೃತಿ ಒಂದು ಯಶಸ್ವಿ ಕಾದಂಬರಿ ಎನಿಸಿಕೊಳ್ಳುವ ಎಲ್ಲ ಲಕ್ಷಣಗಳನ್ನು ಹೊಂದಿದೆ.

ಕೆಲವು ಕಡೆಗಳಲ್ಲಿ ಲೇಖಕರು ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ಕತೆಗೆ ಇನ್ನು ಹೆಚ್ಚಿನ ನೈಜತೆಯ ಸ್ಪರ್ಶವನ್ನು ಕೊಡಬಹುದಿತ್ತು ಎನಿಸುತ್ತದೆ. ಕಾದಂಬರಿಯ ಕೊನೆ ಕೊನೆಗೆ ಬಂದ ಹಾಗೆ ಕಥೆಯು ಕೊಂಚ ಆತುರವಾಗಿ ಮುಗಿದುಹೋಯಿತು ಎಂದೂ ಎನಿಸುವುದುಂಟು. ಇದರೊಂದಿಗೆ, ಕಾದಂಬರಿಯ ಒಂದೆರಡು ಸನ್ನಿವೇಷಗಳ ಕಥಾ ನಿರೂಪಣೆಯಲ್ಲಿ ತಲೆದೊರಿರುವ ಕೊಂಚ ಮಟ್ಟದ ಕೃತಕತೆ, ಅಚ್ಚಿನ ದೋಷಗಳು, ಮುಖಪುಟ ವಿನ್ಯಾಸ ಇಂತಹ ವಿಚಾರಗಳ ಕುರಿತು ಹೆಚ್ಚಿನ ಗಮನ ಹರಿಸಬೇಕಿತ್ತು ಎನಿಸುತ್ತದೆ. ಜಗತ್ತಿನಲ್ಲಿ ಯಾವುದೂ ಪರಿಪೂರ್ಣವಲ್ಲ. ಒಂದು ಮೌಲ್ಯಯುತವಾದ ಕಲಾಕೃತಿಗೆ ಹಲವು ವಿಶಿಷ್ಟ ಲಕ್ಷಣಗಳಿರುವಂತೆ ಅದರದ್ದೇ ಆದ ಮಿತಿಗಳೂ ಇರುತ್ತವೆ. ಮಿತಿಗಳು ಮಾತ್ರ ಇರುತ್ತವೆ, ವೈಫಲ್ಯವಲ್ಲ. ಇಂತಹ ಮಿತಿಗಳನ್ನು ಗುರುತಿಸಿಕೊಂಡು ಅವುಗಳನ್ನು ಮೀರುತ್ತಾ ನೈಜತೆಯೆಡೆಗೆ ಸಾಗುವುದರಿಂದ ನಮ್ಮ ಬರವಣಿಗೆ ಮತ್ತಷ್ಟು ತೀಕ್ಷ್ಣವಾಗುತ್ತಾ ಪ್ರಖರವಾಗುತ್ತಾ ಸಾಗುತ್ತದೆ. ಆದರೆ, ನಿರಂತರ ಕಲಿಕೆಯ ಹಂಬಲ ನಮಗಿರಬೇಕಷ್ಟೇ.

ಈ ಹಿನ್ನೆಲೆಯಲ್ಲಿ “ಅಪರಾಧಿ ನಾನಲ್ಲ” ಒಂದು ಯಶಸ್ವಿ ಕಾದಂಬರಿ. ಸಣ್ಣ ಪುಟ್ಟ ತಪ್ಪುಗಳಿದ್ದರೂ ಸಹ ಅವು ಕಥಾ ಸಂದರ್ಭಕ್ಕೆ ಮತ್ತು ಸಹೃದಯರ ಆಸ್ವಾದನೆಗೆ ಯಾವುದೇ ಭಂಗ ತರುವುದಿಲ್ಲ. ಸಾಹಿತ್ಯ ಪೋಷಕರು ಮತ್ತು ಸಹೃದಯಿಗಳು ಪುಸ್ತಕವನ್ನು ಕೊಂಡು ಓದಿ ಪ್ರತಿಕ್ರಿಯಿಸಿ, ತಿದ್ದುವ ಮೂಲಕ ಬರಹಗಾರರನ್ನು ಮತ್ತಷ್ಟು ಪ್ರೋತ್ಸಾಹಿಸಬೇಕೆಂದು ವಿನಂತಿ. ನಮಸ್ಕಾರಗಳು.

ಪುಸ್ತಕಗಳಿಗಾಗಿ ಸಂಪರ್ಕಿಸಿ: ಸ್ಪಂದನ ಸಿರಿ ಪ್ರಕಾಶನ, ಹಾಸನ.  9972125656.

-    ಶ್ರೀ ವರುಣ್ ರಾಜ್ ಜಿ.

ವಿಚಾರ ಮಂಟಪ ಸಾಹಿತ್ಯ ಬಳಗ.

# 9448241450


ಲೇಖಕರ ಪರಿಚಯ: 


ಹುಟ್ಟಿದ್ದು ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಚೌಡೇನಹಳ್ಳಿ ಎಂಬ ಒಂದು ಪುಟ್ಟ ಹಳ್ಳಿಯಲ್ಲಿ. ತಂದೆ ಪಿ.ಎ. ಮಂಜುನಾಥ್, ತಾಯಿ ಬಿ.ಎನ್. ಲಲಿತಮ್ಮ. ಅಣ್ಣ ನಟೇಶ್.  ಲೇಖಕರ ಚೊಚ್ಚಲ ಕವನ ಸಂಕಲನ ಸುಮುಖ ಕಲಾ. ವಿದ್ಯಾಭ್ಯಾಸ ಒಂದರಿಂದ ನಾಲ್ಕನೇ ತರಗತಿ ಕಲ್ಕೆರೆ ಚೌಡೇನಹಳ್ಳಿ ಐದು ಮತ್ತು ಆರನೇ ತರಗತಿ ಹೊಳೆನರಸೀಪುರದ ತಾಲೂಕಿನ ಬೀಚೇನಹಳ್ಳಿ. ಏಳನೇ ತರಗತಿ ಹೊಳೆನರಸೀಪುರ ತಾಲೂಕಿನ ಹೂವಿನಹಳ್ಳಿ,ಪ್ರೌಢ ಶಿಕ್ಷಣ ಮಂಗಳೂರಿನ ಜ್ಯೋತಿ ಸರ್ಕಲ್ ನಲ್ಲಿ ಇರುವ ಬಲ್ಮಠ ಪ್ರೌಢಶಾಲೆಯಲ್ಲಿ. ಪದವಿ ಅಂಚೆ ಮತ್ತು ತೆರಪಿನ ಶಿಕ್ಷಣ ಮೈಸೂರು ವಿಶ್ವವಿದ್ಯಾನಿಲಯದಿಂದ. ಬೇಲೂರಿನ ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿ ಶಾಲೆಯ ಶಿಕ್ಷಕಿಯಾಗಿ ವೃತ್ತಿ ಜೀವನ ಪ್ರಾರಂಭ. ಹಾಲಿ ಕೆಲಸ ನಿರ್ವಹಿಸುತ್ತಿರುವ ಜಾಗ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಎನ್. ನಿಡಗೋಡು ಬೇಲೂರು ತಾಲೂಕು.1996 ರಲ್ಲಿ ಬೇಲೂರಿನ ಕೇಶವ ಕಿರಣ್ ಇವರೊಂದಿಗೆ ವಿವಾಹ ಜೀವನಕ್ಕೆ ಪಾದಾರ್ಪಣೆ ಮಾಡಿದರು.  ಶಿಲ್ಪಾ, ಶ್ರೇಯಸ್,ಎಂಬ ಇಬ್ಬರು ಮಕ್ಕಳು. ಮಗಳು ಶಿಲ್ಪಾ ಸುಮುಖ್  ಶಾಸ್ತ್ರೀಯ ನೃತ್ಯಪಟು, ಮಗ ಇನ್ನೂ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾನೆ. ಓದು - ಬರವಣಿಗೆ, ಅಧ್ಯಾಪನ, ಸಮಾಜ ಸೇವೆ ಸಾಹಿತ್ಯ ಸಂಘಟನೆ ಇವರ ಪ್ರಮುಖ ಹವ್ಯಾಸಗಳು. ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಕರ್ನಾಟಕ ರಾಜ್ಯ  ಸ್ಪಂದನ ಸಿರಿ ಸಾಹಿತ್ಯ ವೇದಿಕೆಯ ಹಾಸನ ಜಿಲ್ಲಾಧ್ಯಕ್ಷರಾಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.  



ಮಂಗಳವಾರ, ಜನವರಿ 3, 2023

ತರ ತಮ(ಕವಿತೆ) - ಮಾಲತಿ ಮೇಲ್ಕೋಟೆ.

ನೂತನ ಸಾಹಿತಿಯೋರ್ವರು
ಬರೆದಿಹರು ಹಲವಾರು
ದೊಡ್ಡಸಮಾರಂಭವೊಂದಕೆ 
ಆಗಿಹರು ಆಹ್ವಾನಿತರು

ಬಾಗಿಲ ಬಳಿ ಚೌಕಿದಾರ
ಆಹ್ವಾನವಿದೆಯೇ ಪ್ರಶ್ನಿಸಿದ
ಹೌದೆಂದು ಗೋಣಾಡಿಸಿದರು
ಪ್ರವೇಶ ದೊರೆಯಿತು ಒಳಗೆ

ಸುತ್ತೆಲ್ಲ ಕಣ್ಣಾಡಿಸಿದರು
ತುಂಬಿದ ಸಭಾಸದರು
ಕಾಣಲಿಲ್ಲ ಆತಿಥೇಯರು
ಗೊಂದಲದಲಿ ನಿಂತರು

ಒಮ್ಮೆಗೇ ಜನರೆದ್ದು ನಿಂತರು
ಜನಪ್ರಿಯ ನಟ ಬಂದನೆಂದು
ಬಾಗಿಲತ್ತ ದೌಡಾಯಿಸಿದರು
ಸಾಹಿತಿ ಆಸನಸ್ಥರಾಗಿ ನಿಟ್ಟುಸಿರಿಟ್ಟರು.


- ಮಾಲತಿ ಮೇಲ್ಕೋಟೆ.


ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...